Tag: Arvind Kejriwal

  • ದೆಹಲಿಯಲ್ಲಿ ‘ಆಪ್ ಕಾ ಹ್ಯಾಟ್ರಿಕ್ ಸರ್ಕಾರ್’- ಬಿಜೆಪಿಗೆ 8 ಸ್ಥಾನ, ಖಾತೆ ತೆರೆಯದ ಕಾಂಗ್ರೆಸ್

    ದೆಹಲಿಯಲ್ಲಿ ‘ಆಪ್ ಕಾ ಹ್ಯಾಟ್ರಿಕ್ ಸರ್ಕಾರ್’- ಬಿಜೆಪಿಗೆ 8 ಸ್ಥಾನ, ಖಾತೆ ತೆರೆಯದ ಕಾಂಗ್ರೆಸ್

    – ವಿವಿಧ ನಾಯಕರಿಂದ ಕೇಜ್ರಿವಾಲ್‍ಗೆ ಪಕ್ಷಾತೀತವಾಗಿ ಶುಭಾಶಯ
    – ಆಮ್ ಆದ್ಮಿ ಸುನಾಮಿಗೆ ಬಿಜೆಪಿ, ಕಾಂಗ್ರೆಸ್ ಧೂಳೀಪಟ
    – ಫೆ.14ಕ್ಕೆ ಕಾಮನ್‍ಮ್ಯಾನ್ ಕೇಜ್ರಿವಾಲ್ ಪ್ರಮಾಣವಚನ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ ಮತ್ತೆ ಭರ್ಜರಿಯಾಗಿ ಗೆದ್ದು ಬೀಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ಎಎಪಿ ಗುಡಿಸಿ ಹಾಕಿದೆ. ಕಾಮನ್‍ಮ್ಯಾನ್ ಎಂದೇ ಕರೆಸಿಕೊಂಡ ಅರವಿಂದ್ ಕೇಜ್ರಿವಾಲ್ ಎದುರು ಚಾಣಕ್ಯ ಜೋಡಿಯೆಂದೇ ಹೆಸರಾದ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಕೂಟ ಹೇಳ ಹೆಸರಿಲ್ಲದಂತೆ ಹೋಗಿದೆ.

    ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ಜಾರ್ಖಂಡ್, ಹರಿಯಾಣ ಬಳಿಕ 6ನೇ ರಾಜ್ಯ ದೆಹಲಿಯಲಿಯಲ್ಲಿಯೂ ಬಿಜೆಪಿ ಹೀನಾಯ ಸೋಲು ಕಂಡಿದೆ. ಪ್ರಧಾನಿ ಮೋದಿ, ಅಮಿತ್ ಶಾ ಭರ್ಜರಿ ಪ್ರಚಾರ ಮಾಡಿದ್ರೂ ಬಿಜೆಪಿ ಒಂದಂಕಿಗೆ ಸೀಮಿತವಾಗಿದೆ. ಎಎಪಿ ಮುಂದೆ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಅಳಸಿ ಹೋಗಿದೆ. ಬೆಳಗ್ಗೆ ಮತ ಎಣಿಕೆ ಶುರುವಾದ ಕ್ಷಣದಿಂದಲೂ ಆಪ್ ಭಾರೀ ಮುನ್ನಡೆ ಕಾಯ್ದುಕೊಳ್ತು. ಕೊನೆಯವರೆಗೂ ಅದನ್ನು ಕಾಪಾಡಿಕೊಂಡಿತು. ಯಾವುದೇ ಹಂತದಲ್ಲಿ ಮೋದಿಯನ್ನು ನಂಬಿಕೊಂಡು ಎಲೆಕ್ಷನ್‍ಗೆ ಹೋದ ಬಿಜೆಪಿಯಾಗ್ಲಿ, ರಾಹುಲ್ ನಂಬಿಕೊಂಡಿದ್ದ ಕಾಂಗ್ರೆಸ್ ಆಗಲಿ ಸರಿಸಾಟಿ ಆಗಲೇ ಇಲ್ಲ.

    ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದು, ಕೇಜ್ರಿವಾಲ್ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಈ ಮೂಲಕ ಕೇಜ್ರಿವಾಲ್ ಶೀಲಾ ದೀಕ್ಷಿತ್ ಮಾಡಿದ್ದ ಸಾಧನೆಯನ್ನು ಸರಿಗಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದ್ರೆ, ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳು ಬಿಕೋ ಎನ್ನುತ್ತಿದ್ದವು. ವಿಶೇಷ ಅಂದ್ರೆ, ಎಲ್ಲೂ ಪಟಾಕಿ ಸದ್ದು ಕೇಳಿಬರಲಿಲ್ಲ. ನೀಲಿ ಮತ್ತು ಶ್ವೇತವರ್ಣದ ಬಲೂನ್ ಕಂಡುಬಂದವು.

    ದೆಹಲಿ ಫಲಿತಾಂಶ:
    ಒಟ್ಟು 70 ವಿಧಾನಸಭಾ ಕ್ಷೇತ್ರಗಳ
    > ಎಎಪಿ: 62 (-5 ), 2015ರಲ್ಲಿ 67 ಸ್ಥಾನ
    > ಬಿಜೆಪಿ: 8 (+5 ), 2015ರಲ್ಲಿ 03 ಸ್ಥಾನ
    > ಕಾಂಗ್ರೆಸ್ – 00 (00)
    ಕೇವಲ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದಂತೆ 63 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.

    ಗೆದ್ದ ಪ್ರಮುಖರು?
    > ಅರವಿಂದ್ ಕೇಜ್ರಿವಾಲ್- ಎಎಪಿ – ನವದೆಹಲಿ (ಸಿಎಂ) (21,697 ಮತಗಳ ಅಂತರದ ಗೆಲುವು)
    > ಮನೀಶ್ ಸಿಸೋಡಿಯಾ- ಎಎಪಿ – ಪತ್‍ಪರ್‍ಗಂಜ್ (ಡಿಸಿಎಂ) (3,207 ಮತಗಳ ಅಂತರದ ಗೆಲುವು)
    > ವಿಜೇಂದರ್ ಗುಪ್ತಾ- ಬಿಜೆಪಿ – ರೋಹಿಣಿ (ವಿಪಕ್ಷ ನಾಯಕ) (12,648 ಮತಗಳ ಅಂತರದ ಗೆಲುವು
    > ಅತಿಶಿ- ಎಎಪಿ – ಕಲ್ಕಾಜಿ (10,393 ಮತಗಳ ಅಂತರದ ಗೆಲುವು)
    > ಅಮಾನತುಲ್ಹಾ ಖಾನ್- ಎಎಪಿ – ಓಖ್ಲಾ – (88,497 ಮತಗಳ ಅಂತರದ ದೊಡ್ಡ ಗೆಲುವು) ಇಲ್ಲಿಯೇ ಶಾಹೀನ್‍ಬಾಗ್ ಇರುವುದು

    ಸೋತ ಪ್ರಮುಖರು?
    > ತೇಜಿಂದರ್ ಪಾಲ್ ಬಗ್ಗಾ- ಬಿಜೆಪಿ – ಹರಿನಗರ್ (21,131 ಮತಗಳ ಅಂತರದ ಸೋಲು)
    > ಅಲ್ಕಾ ಲಂಬಾ- ಕಾಂಗ್ರೆಸ್ – ಚಾಂದನಿ ಚೌಕ್ (47,010 ಮತಗಳ ಅಂತರದ ಸೋಲು, ಲಂಬಾ ಪಡೆದ ಮತ 3881)
    > ಕಪಿಲ್ ಮಿಶ್ರಾ- ಬಿಜೆಪಿ – ಮಾಡೆಲ್ ಟೌನ್ (11,133 ಮತಗಳ ಅಂತರದ ಸೋಲು)

    ಗಣ್ಯರಿಂದ ಕೇಜ್ರಿವಾಲ್‍ಗೆ ಶುಭಾಶಯ:
    ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಜೆಸಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್‍ಸಿಪಿ ನಾಯಕ ಶರದ್ ಪವಾರ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಅನೇಕ ನಾಯಕರುಪಕ್ಷಾತೀತವಾಗಿ ಶುಭಕೋರಿದ್ದಾರೆ. ಶುಭಕೋರಿದ ಎಲ್ಲ ನಾಯಕರಿಗೂ ಕೇಜ್ರಿವಾಲ್ ಧನ್ಯವಾದ ತಿಳಿಸಿದ್ದಾರೆ.

  • ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್

    -ಡಬಲ್ ಸಂಭ್ರಮದಲ್ಲಿ ಕೇಜ್ರಿವಾಲ್
    -ನನ್ನೊಂದಿಗೆ ನೀವೆಲ್ಲರೂ ಇರಬೇಕು

    ನವದೆಹಲಿ: ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಮತ್ತು ದೆಹಲಿಯ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

    ದೆಹಲಿ ಜನತೆ ತಮ್ಮ ಮಗನಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ. ದೆಹಲಿಯಲ್ಲಿ 24 ಗಂಟೆ ವಿದ್ಯುತ್, ಪ್ರತಿ ಮಗುವಿನ ಶಿಕ್ಷಣ, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕುಟುಂಬಗಳ ಗೆಲವು ಇದಾಗಿದೆ. ಇಂದು ದೆಹಲಿಯ ಜನತೆ ಹೊಸ ರಾಜಕೀಯ ಜನ್ಮ ನೀಡಿದ್ದು, ಕೆಲಸ ಮಾಡಿದವರಿಗೆ ತಮ್ಮ ಮತ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿ ಧನ್ಯವಾದ ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

    ಇದು ನಮ್ಮ ಗೆಲುವಲ್ಲ, ದೆಹಲಿಯ ಪ್ರತಿಯೊಂದು ಕುಟುಂಬ, ಭಾರತ ಮಾತೆಯ ಗೆಲುವು. ಇಂದು ಮಂಗಳವಾರ, ಆಂಜನೇಯನವಾರ. ಇಂದು ಆಂಜನೇಯ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾನೆ. ಮುಂದಿನ ಐದು ವರ್ಷಗಳಲ್ಲಿಯೂ ನಮ್ಮ ಸರ್ಕಾರ ಜನತೆಯ ಆಶಯದಂತೆ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಮತ್ತಷ್ಟು ಸುಂದರವಾಗಿಸೋಣ. ಇದೇ ವೇಳೆ ತಮ್ಮ ಪತ್ನಿಯ ಹುಟ್ಟುಹಬ್ಬವಿದೆ ಎಂಬ ವಿಚಾರವನ್ನು ತಿಳಿಸಿ ಡಬಲ್ ಖುಷಿಯಲ್ಲಿದ್ದೇನೆ ಎಂದರು.

    ದೆಹಲಿಯ ಜನತೆ ಬಹಳ ಆಸೆಗಳಿಂದ ನಮಗೆ ಮತ ನೀಡಿದ್ದು, ಆ ನಿಟ್ಟಿನಲ್ಲಿ ನಮ್ಮ ಕೆಲಸ ಇರಲಿದೆ. ಕೇವಲ ನನ್ನಿಂದ ಮಾತ್ರ ಇದು ಸಾಧ್ಯವಲ್ಲ. ಪ್ರತಿಯೊಬ್ಬರು ನನ್ನ ಕೆಲಸದೊಂದಿಗೆ ಕೈ ಜೋಡಿಸಿದ್ರೆ ದೆಹಲಿಯನ್ನು ಇನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.

     

  • ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಪಾಕ್ ಸಚಿವನಿಗೆ ಕೇಜ್ರಿವಾಲ್ ಕ್ಲಾಸ್

    ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಪಾಕ್ ಸಚಿವನಿಗೆ ಕೇಜ್ರಿವಾಲ್ ಕ್ಲಾಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಸಚಿವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸದಾ ತನ್ನ ನಾಲಿಗೆಯನ್ನು ಹರಿಬಿಟ್ಟು ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಫೆಡರಲ್ ಮಂತ್ರಿ ಫವಾದ್ ಚೌಧರಿ, ಭಾರತೀಯರು ಮೋದಿಯನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಜ್ರಿವಾಲ್, ಮೋದಿ ಪರ ಬ್ಯಾಟ್ ಮಾಡಿ ಭಯೋತ್ಪಾದನೆಗೆ ನೆರವು ನೀಡುವ ದೇಶ ಭಾರತದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಭಾರತೀಯ ಜನರು ಮೋದಿಯನ್ನು ಸೋಲಿಸಬೇಕು. ಫೆಬ್ರವರಿ 8 ರಂದು ನಡೆಯುವ ದೆಹಲಿ ಚುನಾವಣೆಯಲ್ಲಿ ಸೋಲುವ ಭಯದಿಂದ ಮೋದಿ ದೇಶಕ್ಕೆ ಅಪಾಯವನ್ನು ಉಂಟು ಮಾಡುವ ಹಕ್ಕು ಮತ್ತು ಬೆದರಿಕೆಯನ್ನು ಹಾಕುತ್ತಿದ್ದಾರೆ. ಕಾಶ್ಮೀರ, ಪೌರತ್ವ ಕಾನೂನುಗಳು ಮತ್ತು ಆರ್ಥಿಕ ಹಿಂಜರಿತದ ವಿರುದ್ಧ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆಗಳಿಂದ ಮೋದಿ ಅವರು ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ರೀಟ್ವೀಟ್ ಮಾಡುವ ಮೂಲಕ ಚೌಧರಿಗೆ ಟಾಂಗ್ ನೀಡಿರುವ ಕೇಜ್ರಿವಾಲ್, ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಮತ್ತು ನನಗೂ ಅವರು ಪ್ರಧಾನ ಮಂತ್ರಿ. ದೆಹಲಿಯ ಚುನಾವಣೆ ಭಾರತದ ಆಂತರಿಕ ವಿಚಾರ. ಹಾಗಾಗಿ ಪಾಕಿಸ್ತಾನ ಎಷ್ಟೇ ಪ್ರಯತ್ನ ಮಾಡಿದರೂ ಭಾರತ ದೇಶದ ಏಕತೆಯನ್ನು ಹಾಳು ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

    ದೆಹಲಿಯ ವಿಧಾನಸಭೆ ಚುನಾವಣೆ ಫೆಬ್ರವರಿ 8 ರಂದು ನಡೆಯಲಿದ್ದು, ಸದ್ಯ ಆಡಳಿತ ಪಕ್ಷವಾದ ಆಮ್ ಆದ್ಮಿ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತೀವೆ.

  • ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಯುವ ಸಂಘಟನಾ ಚತುರ ಕಣಕ್ಕೆ

    ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಯುವ ಸಂಘಟನಾ ಚತುರ ಕಣಕ್ಕೆ

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ರಾಜ್ಯ ಯುವ ಮೊರ್ಚಾ ಅಧ್ಯಕ್ಷ ಸುನಿಲ್ ಯಾದವ್ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಯುವ ಮುಖಂಡ ಮತ್ತು ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮುಂದಾಗಿದೆ.

    ನವದೆಹಲಿ ಕ್ರೇತ್ರದಿಂದ ಸ್ಪರ್ಧಿಸಿರುವ ಟೋಪಿವಾಲ್‍ನ ಹ್ಯಾಟ್ರಿಕ್ ಗೆಲುವಿಗೆ ತಡೆ ಹಾಕಲು ಮುಂದಾಗಿರುವ ಬಿಜೆಪಿ, ಅಳೆದು ತೂಗಿ ಟಿಕೆಟ್ ಫೈನಲ್ ಮಾಡಿದೆ. 2013 ಹಾಗೂ 2015ರಲ್ಲೇ ಸುನಿಲ್ ಯಾದವ್‍ಗೆ ಟಿಕೆಟ್ ಸಿಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ನೂಪುರ್ ಶರ್ಮಾ ಗೆ ಟಿಕೆಟ್ ನೀಡಿದ್ದರಿಂದ ಯಾದವ್ ಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸುನಿಲ್ ಯಾದವ್ ಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ವಕೀಲ ವೃತ್ತಿಯಲ್ಲಿರುವ 44 ವರ್ಷದ ಸುನಿಲ್ ಯಾದವ್, ಬಿಜೆಪಿ ಯುವ ಮೋರ್ಚಾ ಘಟಕದ ಮಂಡಲ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದವರು. ಪಕ್ಷ ಸಂಘಟನೆಯಲ್ಲಿ ಅವರ ಪರಿಶ್ರಮವನ್ನು ಗುರುತಿಸಿದ ನಾಯಕರು, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದರು. ಬಳಿಕ ದೆಹಲಿ ವಲಯದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

    ಸಾಮಾಜಿಕ ಜಾಲತಾಣಗಳಲ್ಲೂ ಸುನಿಲ್ ಯಾದವ್ ಕ್ರಿಯಾಶೀಲರಾಗಿದ್ದಾರೆ. ಅವರ ಟ್ವಿಟ್ಟರ್ ಖಾತೆಯನ್ನು 16 ಸಾವಿರಕ್ಕೂ ಹೆಚ್ಚು ಮಂದಿ ಹಿಂಬಾಲಿಸುತ್ತಿದ್ದಾರೆ. ಅವರ ಫೇಸ್‍ಬುಕ್ ಖಾತೆಯಲ್ಲಿ ಸುಮಾರು ಒಂದು ಲಕ್ಷ ‘ಲೈಕ್’ಗಳಿರುವುದು ವಿಶೇಷವಾಗಿದೆ. ಸಾಮಾಜಿಕ ಜಾಲತಾಣಗಳನ್ನೂ ಇವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ. ಸುನಿಲ್ ಯಾದವ್ ಉತ್ತರ ಪ್ರದೇಶದ ಪ್ರತಾಪಗಡ ಮೂಲದವರು.

  • ಐದು ವರ್ಷದಲ್ಲಿ ಕೇಜ್ರಿವಾಲ್ ಆಸ್ತಿಯಲ್ಲಿ 1.3 ಕೋಟಿ ರೂ. ಹೆಚ್ಚಳ

    ಐದು ವರ್ಷದಲ್ಲಿ ಕೇಜ್ರಿವಾಲ್ ಆಸ್ತಿಯಲ್ಲಿ 1.3 ಕೋಟಿ ರೂ. ಹೆಚ್ಚಳ

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ಸಿಎಂ ಅರವಿಂದ ಕೇಜ್ರಿವಾಲ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ 1.3 ಕೋಟಿ ರೂ. ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.

    ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ಘೋಷಿಸಿ ಪ್ರಮಾಣ ಪತ್ರ ಸಲ್ಲಿಸಿದ ಅವರು, ತಮ್ಮ ಒಟ್ಟು ಆಸ್ತಿ ಮೌಲ್ಯ 3.4 ಕೋಟಿ ರೂ. ಎಂದು ಹೇಳಿದ್ದಾರೆ. 2015ರ ಚುನಾವಣೆ ವೇಳೆ ಕೇಜ್ರಿವಾಲ್ ಬಳಿ ಆಸ್ತಿ 2.1 ಕೋಟಿ ರೂ. ಇತ್ತು. ಕಳೆದ ಐದು ವರ್ಷದಲ್ಲಿ 1.3 ಕೋಟಿ ರೂ. ಹೆಚ್ಚಾಗಿದೆ.

    ಪತ್ನಿ ಸುನೀತಾ ಕೇಜ್ರಿವಾಲ್ ಅವರ ಹಣ ಹಾಗೂ ಸ್ಥಿರ ಠೇವಣಿ ಐದು ವರ್ಷಗಳಲ್ಲಿ 15 ಲಕ್ಷದಿಂದ 57 ಲಕ್ಷ ರೂ.ಗೆ ಏರಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 2016 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಆಗ 32 ಲಕ್ಷ ಮೌಲ್ಯದಷ್ಟು ಪಿಂಚಣಿ ಹಣ ದೊರೆತಿದೆ. ಬಾಕಿಯ ಹಣ ಉಳಿತಾಯದ್ದಾಗಿ ಎಂದು ತಿಳಿಸಲಾಗಿದೆ.

    ಕೇಜ್ರಿವಾಲ್ ಅವರ ಹಣ ಮತ್ತು ಸ್ಥಿರ ಠೇವಣಿ 2015ರಲ್ಲಿ 2.26 ಲಕ್ಷ ರೂ. ಇದ್ದು, ಈಗ 9.65 ಲಕ್ಷ ರೂ.ಗೆ ಏರಿಕೆಯಾಗಿದೆ. ಸ್ಥಿರ ಆಸ್ತಿ 92 ಲಕ್ಷದಿಂದ 1.77 ಕೋಟಿಗೆ ಹೆಚ್ಚಾಗಿದೆ. ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ. ಪತ್ನಿ ಸುನೀತಾ ಅವರ ಸ್ಥಿರ ಆಸ್ತಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

  • ಜೇಬಲ್ಲಿರೋದು 9 ರೂಪಾಯಿ – ಕೇಜ್ರಿವಾಲ್ ವಿರುದ್ಧ ಕನ್ನಡಿಗನ ಸ್ಪರ್ಧೆ

    ಜೇಬಲ್ಲಿರೋದು 9 ರೂಪಾಯಿ – ಕೇಜ್ರಿವಾಲ್ ವಿರುದ್ಧ ಕನ್ನಡಿಗನ ಸ್ಪರ್ಧೆ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಸೋಮವಾರ ಭರ್ಜರಿ ರೋಡ್ ಶೋ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅತ್ತ ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಕೇಜ್ರಿವಾಲ್ ವಿರುದ್ಧ ಅಭ್ಯರ್ಥಿ ಇಲ್ಲದೆ ಪರದಾಡುತ್ತಿದ್ದರೆ, ಇತ್ತ ಕೇಜ್ರಿವಾಲ್ ವಿರುದ್ಧ ಕನ್ನಡಿಗರೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

    ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನಾಮಪತ್ರ ಸಲ್ಲಿಸಿರುವ ಕನ್ನಡಿಗ. ಬಿಜಾಪುರ ಜಿಲ್ಲೆಯ ಚಡಚಣ ತಾಲೂಕು ಬರಡೊಲಾ ಗ್ರಾಮದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ದೀಪಕ್. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಇವರು ದೆಹಲಿ ಟೋಪಿವಾಲ್‍ನ ವಿರುದ್ಧ ತೊಡೆ ತಟ್ಟಿದ್ದಾರೆ.

    ಸ್ವಾಮೀಜಿ ಅವರು ಜನವರಿ 14ರಂದೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್‍ನಲ್ಲಿ ನನ್ನ ಬಳಿ ಇರೋದು ಒಂಭತ್ತು ರೂಪಾಯಿ, 99,999 ರೂಪಾಯಿ ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.

    ಸಮಾಜದಲ್ಲಿರುವ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಬೇಕು, ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು, ಖಾದಿ ಹಾಕಿರುವ ರಾಜಕಾರಾಣಿಗಳು ಸಾಮಾಜಿಕ ಕಾರ್ಯ ಮಾಡದ ಹಿನ್ನೆಲೆ ಕಾವಿ ತೊಟ್ಟು ಚುನಾವಣೆಗೆ ಸ್ಪರ್ಧಿಸಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುವುದು ಇವರ ಉದ್ದೇಶವಾಗಿದೆ. ಕಾಂಗ್ರೆಸ್, ಬಿಜೆಪಿ, ಎನ್‍ಸಿಪಿಯಿಂದ ಬಿ ಫಾರಂ ಕೇಳಿದ್ದರು. ಆದರೆ ಇವರಿಗೆ ಬಿ ಫಾರಂ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಹದಿನೆಂಟು ಚುನಾವಣೆಗಳಲ್ಲಿ ಸ್ಪರ್ಧೆ:
    ವೆಂಕಟೇಶ್ವರ್ ಮಹಾ ಸ್ವಾಮೀಜಿ ಅವರು ತಂಗಿರುವ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭಾ, ರಾಜ್ಯಸಭಾ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದಾರೆ. ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾದಲ್ಲಿ ಇದುವರೆಗೂ ಹದಿನೆಂಟು ಚುನಾವಣೆಗಳಲ್ಲಿ ಇವರು ಸ್ಪರ್ಧೆ ಮಾಡಿದ್ದಾರೆ.

    ಒಂದಲ್ಲ ಒಂದು ದಿನ ನನ್ನ ಉದ್ದೇಶ ಜನರಿಗೆ ಅರ್ಥವಾಗಲಿದೆ, ಚುನಾವಣೆ ಗೆಲ್ಲಲಿದ್ದೇನೆ ಅನ್ನೊದು ಇವರ ವಿಶ್ವಾಸ. ಏನೇ ಆದರೂ ಕರ್ನಾಟಕ ಬಿಟ್ಟು ದೆಹಲಿಗೆ ಬಂದು ಸಿಎಂ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಇವರ ಧೈರ್ಯವನ್ನ ನಿಜಕ್ಕೂ ಮೆಚ್ಚಬೇಕು.

  • ಕೇಜ್ರಿವಾಲ್‍ಗೆ ಟಕ್ಕರ್ ನೀಡಲು ಕಾಂಗ್ರೆಸ್, ಬಿಜೆಪಿಯಲ್ಲಿಲ್ಲ ಕಲಿಗಳು

    ಕೇಜ್ರಿವಾಲ್‍ಗೆ ಟಕ್ಕರ್ ನೀಡಲು ಕಾಂಗ್ರೆಸ್, ಬಿಜೆಪಿಯಲ್ಲಿಲ್ಲ ಕಲಿಗಳು

    – ಕೇಜ್ರಿವಾಲ್ ವಿರುದ್ಧ ಸ್ಪರ್ಧೆಗೆ ಅಭ್ಯರ್ಥಿಗಳ ಹುಡುಕಾಟ

    ನವದೆಹಲಿ: ದೆಹಲಿಯ ವಿಧಾನಸಭೆಗೆ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಆಮ್ ಆದ್ಮಿ 70, ಕಾಂಗ್ರೆಸ್ 54, ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಆದರೆ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಯನ್ನೇ ಕಾಂಗ್ರೆಸ್, ಬಿಜೆಪಿ ಇನ್ನೂ ಅಂತಿಮಗೊಳಿಸಿಲ್ಲ.

    ನವದೆಹಲಿ ಕ್ಷೇತ್ರದಿಂದ ಸಿಎಂ ಅರವಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಿದ್ದು, ಅವರಿಗೆ ಪೈಪೋಟಿ ನೀಡುವ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್, ಬಿಜೆಪಿ ಮಗ್ನವಾಗಿವೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ವಿರುದ್ಧ 2013ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅರವಿಂದ ಕೇಜ್ರಿವಾಲ್ ಐತಿಹಾಸಿಕ ಗೆಲವು ಸಾಧಿಸಿದ್ದರು. 2015 ರಲ್ಲಿ ಬಿಜೆಪಿಯ ನೂಪುರ್ ಶರ್ಮಾ, ಕಾಂಗ್ರೆಸ್ ನ ಮಾಜಿ ಸಿಎಂ ಕಿರಣ್ ವಾಲಿಯಾ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ ಸೋಲನ್ನಪಿದ್ದರು.

    ಸಿಎಂಗಿಲ್ಲ ಎದುರಾಳಿ:
    ಈ ಬಾರಿ ಕೇಜ್ರಿವಾಲ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಲೆಕ್ಕಚಾರದಲ್ಲಿರುವ ಬಿಜೆಪಿ, ದೆಹಲಿ ಘಟಕದ ಅಧ್ಯಕ್ಷ, ಮನೋಜ್ ತಿವಾರಿ ಅಥವಾ ಮಾಜಿ ಸಿಎಂ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‍ಗೆ ಟಿಕೆಟ್ ನೀಡಬಹುದು ಎನ್ನಲಾಗಿದೆ. ಇತ್ತ ಕಾಂಗ್ರೆಸ್ ಜಾತಿ ಲೆಕ್ಕಾಚಾರದಲ್ಲಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿದೆ. ಅಲ್ಲದೆ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರಿ ಲತಿಕಾ ದೀಕ್ಷಿತ್ ಗೆ ಟಿಕೆಟ್ ನೀಡಲು ಯೋಚಿಸಿದೆ.

    ಕಾಂಗ್ರೆಸ್, ಬಿಜೆಪಿಗಿಲ್ಲ ಸಿಎಂ ಅಭ್ಯರ್ಥಿ
    ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುತ್ತಿದ್ದು, ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಿಕೊಂಡಿದೆ. ಇತ್ತ ಬಿಜೆಪಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಚಹರೆ ಮೇಲೆ ಚುನಾವಣಾ ಕಣಕ್ಕೆ ಇಳಿಯಲಿದ್ದು, ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದಿದೆ. ಕಾಂಗ್ರೆಸ್ ಕೂಡಾ ನಾಯಕರಿಲ್ಲದೆ ಸೊರಗಿದಂತೆ ಕಾಣುತ್ತಿದೆ. ಕಳೆದ ಬಾರಿ ಖಾತೆಯನ್ನೇ ತೆರೆಯದ ಕಾಂಗ್ರೆಸ್, ಈ ಬಾರಿ ಅಕೌಂಟ್ ಒಪನ್ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು, ಸಿಎಂ ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೆ ಅಜೇಯ ಮಕೇನ್, ಸುಭಾಷ್ ಚೋಪ್ರಾರಂತಹ ಹಿರಿಯ ನಾಯಕರು ಚುನಾವಣಾ ಕಣಕ್ಕಿಳಿಯದಿರುವುದು ಕಾಂಗ್ರೆಸ್‍ಗೆ ಸಂಕಷ್ಟಕ್ಕೀಡು ಮಾಡಿದೆ.

  • ಟಿಕೆಟ್‍ಗಾಗಿ 10 ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

    ಟಿಕೆಟ್‍ಗಾಗಿ 10 ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ

    ನವದೆಹಲಿ: ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣಾ ಟಿಕೆಟ್ ಗಾಗಿ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ದ್ವಾರಕ ಕ್ಷೇತ್ರದ ಆಪ್ ಶಾಸಕ ಆದರ್ಶ ಶಾಸ್ತ್ರಿ ಆರೋಪ ಮಾಡಿದ್ದಾರೆ.

    ಪ್ರಸುತ್ತ ಚುನಾವಣೆಯಲ್ಲಿ ಆದರ್ಶ ಶಾಸ್ತ್ರಿಗೆ ಆಪ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬಂಡಾಯಗೊಂಡು ಶನಿವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅವರು ಈ ಆರೋಪ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ಗಾಗಿ 10-20 ಕೋಟಿ ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಬಾರಿ ಆದರ್ಶ ಮಿಶ್ರಾ ಪ್ರತಿನಿಧಿಸಿದ್ದ ದ್ವಾರಕ ಕ್ಷೇತ್ರಕ್ಕೆ ಈ ಬಾರಿ ಆಮ್ ಆದ್ಮಿ ವಿನಯ್ ಮಿಶ್ರಾ ಎಂಬವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿದ್ದ ಆದರ್ಶ ಶಾಸ್ತ್ರಿ ನಿನ್ನೆ ಡಿಸಿಸಿ ಅಧ್ಯಕ್ಷ ಸುಭಾಶ್ ಚೋಪ್ರಾ ಸಮ್ಮುಖದಲ್ಲಿ ಕಾಂಗ್ರೆಸ್ ಸೆರ್ಪಡೆಗೊಂಡರು. ಆದರ್ಶ ಶಾಸ್ತ್ರಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮನಾಗಿದ್ದು ಆಮ್ ಅದ್ಮಿ ರಾಷ್ಟ್ರೀಯ ವಕ್ತಾರರೂ ಆಗಿದ್ದರು.

    ಅರವಿಂದ ಕೇಜ್ರಿವಾಲ್ ವಿರುದ್ಧ ಇದೇ ಮೊದಲಲ್ಲ, 2019ರ ಲೋಕಸಭಾ ಚುನಾವಣೆ ವೇಳೆ ಟಿಕೆಟ್ ಗಾಗಿ ಆರು ಕೋಟಿ ಡಿಮ್ಯಾಂಡ್ ಮಾಡಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತು.

  • ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧವಾಗಿರುವ ಆಮ್ ಆದ್ಮಿ ಪ್ರಣಾಳಿಕೆ ಬದಲು ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿದೆ. ಅಧಿಕಾರಕ್ಕೆ ಬಂದಲ್ಲಿ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಹತ್ತು ಅಂಶಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ಭರವಸೆ ನೀಡಿದೆ.

    ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ರಚನೆಯಾಗಿ ಹತ್ತು ದಿನಗಳಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ.

    ಹತ್ತು ಅಂಶಗಳ ಗ್ಯಾರೆಂಟಿ ಕಾರ್ಡ್ ನಲ್ಲಿ ಶಾಲಾ ಮಕ್ಕಳಿಗೆ ಭಾನುವಾರ ಉಚಿತ ಬಸ್ ಪ್ರಯಾಣ ಅವಕಾಶ ನೀಡುವ ಭರವಸೆ ನೀಡಿದೆ. ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಬಸ್ ಗಳಲ್ಲಿ ‘ಮೊಹಲ್ಲಾ ಮಾರ್ಷಲ್’ಗಳನ್ನ ನೇಮಕ ಮಾಡಲಿದೆ. 200 ಯೂನಿಟ್ ವಿದ್ಯುತ್ ಮತ್ತು 2000 ಲೀಟರ್ ನೀರಿನ ಉಚಿತ ಬಳಕೆಯನ್ನ ಮುಂದುವರಿಸುವ ಆಶ್ವಾಸನೆ ಗ್ಯಾರೆಂಟಿ ಕಾರ್ಡ್ ನಲ್ಲಿ ನೀಡಿದೆ.

    ದೆಹಲಿಯ ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ, ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‍ಸಿಆರ್ ಭಾಗದಲ್ಲಿ ಎರಡು ಕೋಟಿ ಸಸಿಗಳನ್ನು ನೆಡುವುದು, ಸಾರಿಗೆ ಉನ್ನತಿಕರಿಸುವ ನಿಟ್ಟಿನಲ್ಲಿ 11,000 ಹೆಚ್ಚುವರಿ ಬಸ್ ಗಳ ರಸ್ತೆಗಿಳಿಸುವುದು 500 ಕಿಮೀ ಮೆಟ್ರೊ ಲೈನ್ ಅಭಿವೃದ್ಧಿ ಪಡಿಸುವ ವಾಗ್ದಾನ ಆಮ್ ಆದ್ಮಿ ನೀಡಿದೆ.

    ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಅನಧಿಕೃತ ಕಾಲೋನಿಗಳಿಗೆ ರಸ್ತೆ ನೀರು, ಬೆಳಕಿನ ಸೌಲಭ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅವಳವಡಿಕೆ, ನಿವಾಸ ರಹಿತರಿಗೆ ಸೂರು ಕಲ್ಪಿಸುವುದು, ಪಾರ್ಕ್ ಮತ್ತು ರೋಡ್ ಗಳನ್ನು ಸುಂದರಗೊಳಿಸುವುದು, ಯಮುನಾ ನದಿಯನ್ನ ಸ್ವಚ್ಛಗೊಳಿಸುವ ಆಶ್ವಾಸನೆ ನೀಡಲಾಗಿದೆ.

  • ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ: ಕೇಜ್ರಿವಾಲ್

    ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ: ಕೇಜ್ರಿವಾಲ್

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಏಕಾಂಗಿಯಾಗಿ ಸ್ವರ್ಧೆ ಮಾಡಲಿದ್ದು, ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಿ ಯಾವ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆಪ್ ಏಕಾಂಗಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು. ಈ ಮೂಲಕ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹ ಸುದ್ದಿಗಳಿಗೆ ತೆರೆ ಎಳೆದರು.

    2012ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ರಚನೆಗೊಂಡ ಆಮ್ ಆದ್ಮಿ ಪಕ್ಷವು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್‍ ಸರ್ಕಾರವನ್ನು 2013ರಲ್ಲಿ ಉರುಳಿಸಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 24.55 ರಷ್ಟು, ಬಿಜೆಪಿ ಶೇ. 33.07 ರಷ್ಟು, ಎಎಪಿ ಶೇ. 29.49 ರಷ್ಟು ಮತಗಳನ್ನು ಗಳಿಸಿತ್ತು.

    2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಆದರೆ ಸೀಟು ಹೊಂದಾಣಿಕೆಯಲ್ಲಿ ಮಾತುಕತೆ ಅಂತಿಮವಾಗದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಮೈತ್ರಿ ರದ್ದಾಗಿತ್ತು.