Tag: Arvind Kejriwal

  • ಗುಣಮುಖರಾದವರು ಧರ್ಮ ಮರೆತು ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ: ಕೇಜ್ರಿವಾಲ್

    ಗುಣಮುಖರಾದವರು ಧರ್ಮ ಮರೆತು ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿ: ಕೇಜ್ರಿವಾಲ್

    ನವದೆಹಲಿ: ಕೊರೊನಾ ವೈರಸ್‍ನಿಂದ ಚೇತರಿಸಿಕೊಂಡ ವ್ಯಕ್ತಿಗಳು, ಸೋಂಕಿತ ರೋಗಿಗಳಿಗೆ ಧರ್ಮ ಮೀರಿ ಪ್ಲಾಸ್ಮಾ ದಾನ ಮಾಡಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿರುವ ಅವರು, ಕೊರೊನಾ ವಿರುದ್ಧ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಹೊಸ ಆಯುಧ, ರಕ್ತಕ್ಕೆ ಯಾವುದೇ ಧರ್ಮ ಬೇಧವಿಲ್ಲ, ಹಿಂದೂ ರಕ್ತ ಮುಸ್ಲಿಂರನ್ನು, ಮುಸ್ಲಿಂ ರಕ್ತ ಹಿಂದೂಗಳನ್ನು ಉಳಿಸವುದು, ಪೂರ್ವಾಗ್ರಹ ಪೀಡಿತರಾಗದೆ ಪ್ಲಾಸ್ಮಾ ದಾನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

    ನಾವೇಲ್ಲರೂ ಕೊರೊನಾ ಸಂಕಷ್ಟದಿಂದ ಹೊರ ಬಂದು ಬದುಕಲು ಪ್ರಯತ್ನಿಸುತ್ತೇವೆ. ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಬೇಕು. ನೀವು ನೀಡುವ ಪ್ಲಾಸ್ಮಾ ಹಿಂದೂ, ಮುಸ್ಲಿಂ ಯಾರ ಜೀವ ಉಳಿಸಬಹುದು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ನಾವು ಜೀವ ಉಳಿಸುವ ಕೆಲಸ ಮಾಡಬೇಕು ಎಂದರು.

    ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ಪ್ಲಾಸ್ಮಾ ಥೆರಪಿ ಬಳಿಕ ಚೇತರಿಕೆ ಕಂಡು ಬಂದಿದ್ದು, ದೆಹಲಿಯಲ್ಲಿ ಹಲವು ರೋಗಿಗಳು ಗುಣ ಮುಖರಾಗಿದ್ದಾರೆ. ಈ ಹಿನ್ನಲೆ ಕೊರೊನಾದಿಂದ ಗುಣಮುಖರಾದ ಜನರಿಗೆ ಪ್ಲಾಸ್ಮಾ ದಾನ ಮಾಡಲು ಕೋರಿದ್ದಾರೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಕುಟುಂಬದ 26 ಮಂದಿಗೆ ಕೊರೊನಾ ಸೋಂಕು

    ಕುಟುಂಬದ 26 ಮಂದಿಗೆ ಕೊರೊನಾ ಸೋಂಕು

    – ರೆಡ್ ಝೋನ್‍ನಲ್ಲಿ ನಿಯಮ ಪಾಲಿಸದ ಜನರು

    ನವದೆಹಲಿ: ಇಡೀ ದೇಶ ಲಾಕ್‍ಡೌನ್ ಆಗಿದೆ. ಕೆಲವು ಕಡೆ ಸೀಲ್‍ಡೌನ್ ಕೂಡ ಮಾಡಿದೆ. ಸರ್ಕಾರ ಮನೆಯಿಂದ ಆಚೆ ಬರಬೇಡಿ ಅಂತ ಸಾರಿ ಸಾರಿ ಹೇಳುತ್ತಿದೆ. ಆದರೆ ಜನರು ಮಾತ್ರ ಸರ್ಕಾರದ ಮಾತು ಕೇಳುತ್ತಿಲ್ಲ. ಇದೀಗ ರೆಡ್ ಝೋನ್‍ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿದ ಇಡೀ ಕುಟುಂಬವೊಂದಕ್ಕೆ ಕೊರೊನಾ ಸಂಕಷ್ಟ ಎದುರಾಗಿದೆ.

    ದೆಹಲಿಯ ರೆಡ್ ಝೊನ್ ಪ್ರದೇಶವಾಗಿರುವ ಜಹಾಂಗೀರ್ ಪುರಿಯಲ್ಲಿ ಒಂದೇ ಕುಟುಂಬದ 26 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರೆಡ್ ಝೋನ್ ಅಂತ ಘೋಷಿಸಿ ನಿಯಮಗಳನ್ನು ಬಿಗಿ ಮಾಡಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಅದೇ ಪ್ರದೇಶದಲ್ಲಿದ್ದ ಇತರೆ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಹೀಗೆ ಪರಸ್ಪರ ಎಲ್ಲ ಕುಟುಂಬಗಳು ಒಂದೊಂದು ದಿನ ಒಬ್ಬರ ಮನೆಯಲ್ಲಿ ಸೇರಿಕೊಂಡಿದ್ದಾರೆ.

    ಹೀಗೆ ಓಡಾಡಿದ ಕುಟುಂಬ ಸದಸ್ಯನಲ್ಲಿ ಓರ್ವನಿಗೆ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಕುಟುಂಬಕ್ಕೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಕುಟುಂಬದ 26 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಆ ಕುಟುಂಬದವರು ಸಂಪರ್ಕ ಹೊಂದಿದ್ದ ಅಕ್ಕಪಕ್ಕದವರನ್ನು ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಜನರು ಮನೆಯಿಂದ ಹೊರಬರಬೇಡಿ. ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.

  • ದೆಹಲಿಯಲ್ಲಿ ಕೊರೊನಾ ವಿರುದ್ಧ OPERATION SHIELD

    ದೆಹಲಿಯಲ್ಲಿ ಕೊರೊನಾ ವಿರುದ್ಧ OPERATION SHIELD

    -ಕೊರೊನಾಗೆ ಬ್ರೇಕ್ ಹಾಕಲು ಕೇಜ್ರಿ ಸರ್ಕಾರದಿಂದ 6 ಸೂತ್ರ

    ನವದೆಹಲಿ: ಕೊರೊನಾ ರುದ್ರ ಕುಣಿತಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಬೆದರಿ ಹೋಗಿದೆ. ನಿಜಾಮುದ್ದಿನ್ ಮರ್ಕಜ್ ಪ್ರಕರಣ ಬಳಿಕ ನೋಡ ನೋಡುತ್ತಿದ್ದಂತೆ ಅಂಕಿ ಆಕಾಶಕ್ಕೆ ಏರುತ್ತಿದೆ. ಈ ಮಿಂಚಿನ ಓಟಕ್ಕೊಂದು ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ.

    ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಡಿತದಲ್ಲಿದ್ದ ಕೊರೊನಾ ಸೋಂಕು ನಿಜಾಮುದ್ದೀನ್ ಮರ್ಕಜ್ ಪ್ರಕರಣ ಬಳಿಕ ನೋಡ ನೋಡುತ್ತಿದ್ದಂತೆ ಹೆಚ್ಚಾಗ ತೊಡಗಿದೆ. ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಗಂಭೀರ ಅಂಶ. ಕೊರೋನಾ ಸಾವು ನೋವಿನ ಅಂಕಿ ಅಂಶ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯುತ್ತಿದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ.

    ದೆಹಲಿಯಲ್ಲಿ 25 ಪ್ರದೇಶಗಳನ್ನು ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು. ಈ ಪ್ರದೇಶದಲ್ಲಿ ಆಪರೇಷನ್ ಶೀಲ್ಡ್ ಘೋಷಣೆ ಮಾಡಿದ್ದಾರೆ. ಕೊರೊನಾ ವಿರುದ್ಧ ಆಪರೇಷನ್ ಶೀಲ್ಡ್ ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರು ಸೂತ್ರಗಳನ್ನು ಜಾರಿಗೆ ತರಲು ಸಿದ್ಧವಾಗಿದ್ದಾರೆ.

    1. ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು.
    2. ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ
    3. ಈ ತಂತ್ರದಲ್ಲಿ ಸೋಂಕಿತ ವ್ಯಕ್ತಿಯ ಮೊದಲ ಮತ್ತು ಎರಡನೇ ಹಂತದ ಸಂಪರ್ಕಗಳನ್ನು ಗುರುತಿಸಿ ಐಸೊಲೇಷನ್ ಮಾಡುವುದು.
    4. ತುರ್ತು ಅಗತ್ಯ ವಸ್ತುಗಳನ್ನು ಸೀಲ್ಡ್ ಪ್ರದೇಶದಲ್ಲಿ ಹೋಂ ಕ್ವಾರಂಟೇನ್‍ನಲ್ಲಿರುವ ಮಂದಿಗೆ ಸರ್ಕಾರದಿಂದಲೇ ಪೂರೈಕೆ.
    5. ಸ್ಥಳೀಯ ಆಡಳಿತದಿಂದ ಇಡೀ ಪ್ರದೇಶ ಮತ್ತು ಪ್ರತಿ ಮನೆಯನ್ನು ಸ್ಯಾಜಿಟೈಜ್ ಮಾಡುವುದು.
    6. ಇನ್ನು ಸೀಲ್ ಆಗಿರುವ ಪ್ರದೇಶದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯನ್ನು ಬಿಡದೇ ಪ್ರತಿ ಮನೆಗೂ ಹೋಗಿ ಅವರ ಆರೋಗ್ಯ ತಪಾಸಣೆ ನಡೆಸುವುದು. ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಐಸೊಲೇಷನ್ ಮಾಡುವುದು.

    ಹೀಗೆ ಸಾಮಾನ್ಯ ಜನರು ಮಾತ್ರವಲ್ಲದೇ ವೈದ್ಯರನ್ನು ಕೂಡ ಕಾಡುತ್ತಿರುವ ಕೊರೊನಾ ವಿರುದ್ಧ ಆಪರೇಷನ್ 100% ಸೀಲ್ ಜಾರಿಗೆ ತಂದಿರುವ ದೆಹಲಿ ಸರ್ಕಾರ ರಣ ಕಹಳೆ ಮೊಳಗಿಸಿದೆ. ಆರು ಸೂತ್ರಗಳ ಮೂಲಕ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿದೆ.

  • ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಆಟೋ, ರಿಕ್ಷಾ, ಇ ರಿಕ್ಷಾ, ಕ್ಯಾಬ್ ಚಾಲಕರ ನೆರವಿಗೆ ನಿಂತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

    ರಿಕ್ಷಾ, ಆಟೋ, ಇ ರಿಕ್ಷಾ ಚಾಲಕರು, ಕ್ಯಾಬ್ ಚಾಲಕರಿಗೆ 5,000 ರೂಪಾಯಿಗಳ ನೆರವು ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಲಾಕ್‍ಡೌನ್ ಹಿನ್ನೆಲೆ ಆಟೋ ರಿಕ್ಷಾ ಚಾಲಕರಿಗೆ ಸಂಕಷ್ಟ ಎದುರಾಗಿದ್ದು, ಇವರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದರು.

    ಪ್ರತಿ ಚಾಲಕನಿಗೆ 5,000 ನೀಡಲು ಸರ್ಕಾರ ನಿರ್ಧರಿಸಿದ್ದು, ಮುಂದಿನ 7ರಿಂದ 10 ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ಚಾಲಕರ ಬ್ಯಾಂಕ್ ಖಾತೆಗಳ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗಾಗಿ ಚಾಲಕರ ಮಾಹಿತಿ ಪಡೆದು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿ ನಿತ್ಯ 6 ಲಕ್ಷಕ್ಕೂ ಅಧಿಕ ಜನರಿಗೆ ಊಟ ಮತ್ತು ರಾತ್ರಿ ಭೋಜನ ನೀಡಲಾಗುತ್ತಿದೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

    ದೆಹಲಿಯಲ್ಲಿ ಈವರೆಗೂ 209 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 108 ಮಂದಿ ನಿಜಾಮುದ್ದೀನ್ ಮರ್ಕಜ್‍ನಿಂದ ಬಂದವರಾಗಿದ್ದಾರೆ. ನಿಜಾಮುದ್ದೀನ್ ಮರ್ಕಜ್‍ನಲ್ಲಿದ್ದ 2,346 ಮಂದಿ ಪೈಕಿ 1,810 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, 536 ಮಂದಿಯನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈವರೆಗೆ 4 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಇಬ್ಬರು ಮರ್ಕಜ್‍ನೊಂದಿಗೆ ಸಂಪರ್ಕ ಇದ್ದವರು ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  • ಮನೆಯಿಂದ ಹೊರ ಬಂದ್ರೆ ಸೀಜ್ ಆಗುತ್ತೆ ಬೈಕ್, ಕಾರ್ ಎಚ್ಚರ

    ಮನೆಯಿಂದ ಹೊರ ಬಂದ್ರೆ ಸೀಜ್ ಆಗುತ್ತೆ ಬೈಕ್, ಕಾರ್ ಎಚ್ಚರ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಸಂಪೂರ್ಣ ಸ್ತಬ್ಧವಾಗಿದ್ದು ಗಡಿ ಪ್ರದೇಶಗಳನ್ನು ಬಂದ್ ಮಾಡಿ ನಿಷೇಧಾಜ್ಞೆ ಹೇರಲಾಗಿದೆ. ಯಾರೊಬ್ಬರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

    ನಿಷೇಧಾಜ್ಞೆ ನಡುವೆ ಮನೆಯಿಂದ ಹೊರ ಬರುವ ಜನರ ವಿರುದ್ಧ ಪೋಲಿಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ರಸ್ತೆಗಿಳಿದ ಚಾಲಕರ ಕಾರ್ ಮತ್ತು ಬೈಕ್ ಗಳನ್ನು ದೆಹಲಿ ಪೋಲಿಸರು ಸೀಜ್ ಮಾಡುತ್ತಿದ್ದಾರೆ. ಅಗತ್ಯ ಕೆಲಸಗಳಿಗೆ ಮಾತ್ರ ಹೊರ ಬರಲು ಸೂಚಿಸಿದ್ದು ಸರ್ಕಾರಿ ಸೇವೆ, ಮಾಧ್ಯಮದವರು, ವೈದ್ಯಕೀಯ ಕಾರಣಗಳನ್ನು ಹೊರತು ಪಡೆಸಿ ಸುಖಾ ಸುಮ್ಮನೆ ಹೊರ ಬರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ಜೊತೆ ವಾಗ್ದಾದ ನಡೆಸುವ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ಕರೆದ್ಯೊಲಾಗುತ್ತಿದೆ.

    ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೇ ಹೊರ ಕೊರೊನಾ ಸೋಂಕುಗಳು ಪತ್ತೆಯಾಗಿಲ್ಲ. ಇದೇ ಪರಿಸ್ಥಿತಿಯನ್ನು ಮುಂದುವರೆಸಬೇಕಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಮೂರನೇ ಹಂತ ತಲುಪಿದರೆ ಏನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುತ್ತಿದೆ. ಐದು ಮಂದಿ ತಜ್ಞ ವೈದ್ಯರ ತಂಡವನ್ನು ರಚನೆ ಮಾಡಿದ್ದು, 24 ಗಂಟೆಯಲ್ಲಿ ವರದಿ ನೀಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ಇನ್ನು ನಿಷೇಧಾಜ್ಞೆಯಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು 5,000 ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೇ ನಿರಾಶ್ರಿತರ ಊಟಕ್ಕಾಗಿ ಕೇಂದ್ರಗಳನ್ನು ಆರಂಭಿಸಿದ್ದು ಮಧ್ಯಾಹ್ನ ಮತ್ತು ರಾತ್ರಿಯ ಊಟ ಉಚಿತವಾಗಿ ವಿತರಿಸಲಾಗುತ್ತಿದೆ.

  • ವ್ಯಾಪಕ ಹಿಂಸಾಚಾರ – ದೆಹಲಿ ಗಡಿ ಬಂದ್, ಶಾಂತಿ ಪಾಲನೆ ಮನವಿಗೆ ಮುಂದಾದ ಸರ್ಕಾರ

    ವ್ಯಾಪಕ ಹಿಂಸಾಚಾರ – ದೆಹಲಿ ಗಡಿ ಬಂದ್, ಶಾಂತಿ ಪಾಲನೆ ಮನವಿಗೆ ಮುಂದಾದ ಸರ್ಕಾರ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ – ವಿರೋಧ ಪ್ರತಿಭಟನೆ ವೇಳೆ ನಡೆಯುತ್ತಿರುವ ಹಿಂಸಾಚಾರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಭೆ ನಡೆಸಿದ್ದು, ಘರ್ಷಣೆ ವ್ಯಾಪಕವಾದ ಬೆನ್ನಲ್ಲೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಗೃಹ ಇಲಾಖೆ ನಿರ್ಧರಿಸಿದೆ.

    ಸಭೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ ಕುಮಾರ್, ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್, ಕಾಂಗ್ರೆಸ್ ಮುಖಂಡ ಸುಭಾಷ್ ಮಲ್ಹೋತ್ರಾ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸಭೆಯಲ್ಲಿ ಭಾಗಿಯಾಗಿದ್ದರು.

    ಸೋಮವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ಮುಖ್ಯಪೇದೆ ಸೇರಿದಂತೆ 7 ಮಂದಿ ಬಲಿಯಾಗಿದ್ದಾರೆ. ಹಲವು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆ ಅಮಿತ್ ಶಾ ಅವರು ಸಭೆ ನಡೆಸಿ ಚರ್ಚೆ ನಡೆಸಿದರು. ಗೃಹ ಸಚಿವರ ಭೇಟಿ ಬಳಿಕ ಸಿಎಂ ಅರವಿಂದ್ ಕೇಜ್ರಿವಾಲ್, ಅಧಿಕಾರಿಗಳ ಸಭೆ ನಡೆಸಿದರು.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್, ಇತರೆ ರಾಜ್ಯಗಳಿಂದ ದೆಹಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದರಿಂದ ಹಿಂಸಾಚಾರ ಇನ್ನಷ್ಟು ಹೆಚ್ಚಾಗಬಹುದು. ಹೀಗಾಗಿ ದೆಹಲಿಯ ಗಡಿಗಳನ್ನು ಮುಚ್ಚಲು ಸೂಚನೆ ನೀಡಿದರು. ಗಲಭೆಗಳಲ್ಲಿ ಭಾಗಿಯಾಗುವ ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

    ಅಷ್ಟೇ ಅಲ್ಲದೇ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಕುರಿತು ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿ ನೀಡಿದೆ. ಬುಧವಾರ ಈ ಬಗ್ಗೆ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್, ದೆಹಲಿಯ ಹೊರ ಭಾಗದ ಅಧಿಕಾರಿಗಳಿಂದ ಎಸ್‍ಐಟಿ ತನಿಖೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಿದೆ. ಈ ಅರ್ಜಿಯಲ್ಲಿ ಸೇನೆಯಿಂದ ದೆಹಲಿಯಲ್ಲಿ ಭದ್ರತೆ ಒದಗಿಸಲು ಮನವಿ ಮಾಡಲಾಗಿದೆ.

    ದೇಗುಲಗಳು ಮತ್ತು ಮಸೀದಿಗಳ ಮೈಕ್‍ಗಳಿಂದ ಶಾಂತಿಪಾಲನೆಗೆ ಸಂದೇಶ ಬಿತ್ತರಿಸಲಾಗುವುದು. ಹಿಂಸಾಚಾರ ಪೀಡಿತ ಬೀದಿಗಳಲ್ಲಿ ಸ್ಥಳೀಯ ಶಾಸಕರು ಮತ್ತು ಪೊಲೀಸರು ಸಂಚರಿಸಿ ಶಾಂತಿ ಕಾಪಾಡಲು ಜನರಲ್ಲಿ ಮನವಿ ಮಾಡಲಿದ್ದಾರೆ. ಬೆಂಕಿ ಅನಾಹುತ ಸಂಭವಿಸಿದ ಕಡೆಗೆ ಅಗ್ನಿಶಾಮಕ ವಾಹನಗಳನ್ನು ತುರ್ತಾಗಿ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

  • ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ – ದೆಹಲಿಯಲ್ಲಿ ಆಪ್ ಕೀ ಸರ್ಕಾರ್

    ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ – ದೆಹಲಿಯಲ್ಲಿ ಆಪ್ ಕೀ ಸರ್ಕಾರ್

    ನವದೆಹಲಿ: ಭಾರಿ ಬಹುಮತದೊಂದಿಗೆ ಗೆಲವು ಸಾಧಿಸಿದ್ದ ಆಮ್ ಅದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್ ಪ್ರಮಾಣ ವಚನ ಬೋಧಿಸಿದರು. ಅರವಿಂದ ಕೇಜ್ರಿವಾಲ್ ಜೊತೆಗೆ ಮನೀಷ್ ಸಿಸೊಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್, ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಶಿಕ್ಷಕರು, ಬಸ್ ಮಾರ್ಷಲ್‍ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‍ಗಳು ಸೇರಿ ವಿವಿಧ ವಲಯದಲ್ಲಿ ಕೆಲಸ ಮಾಡುವ 60 ಹೆಚ್ಚು ಮಂದಿಯನ್ನು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಚೋಟಾ ಮಫ್ಲರ್ ಮಾನ್ಯ ಖ್ಯಾತಿಯ ಅವ್ಯಾನ್ ಯಥಾವತ್ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು ಕೇಜ್ರಿವಾಲ್ ಪರ ಘೋಷಣೆ ಕೂಗಿದರು.

    ಪ್ರಮಾಣ ವಚನ ಕಾರ್ಯಕ್ರಮ ಬಳಿಕ ಮಾತನಾಡಿದ ಕೇಜ್ರಿವಾಲ್, ಚುನಾವಣೆ ಮುಗಿದಿದೆ ಯಾರು ಯಾರಿಗೆ ವೋಟ್ ನೀಡಿದರು ಎಂಬುದು ಮುಖ್ಯವಲ್ಲ. ಎಲ್ಲರ ಮುಖ್ಯಮಂತ್ರಿಯಾಗಿ ಮುಂದಿನ ಐದು ವರ್ಷಗಳ ಕಾಲ ಅಭಿವೃದ್ಧಿ ಕಡೆ ಗಮನ ಹರಿಸುತ್ತೇವೆ ಎಂದರು. ಅಭಿವೃದ್ಧಿ ಹೊಸ ಚರ್ಚೆಯನ್ನು ದೆಹಲಿ ಚುನಾವಣೆ ಹುಟ್ಟುಹಾಕಿದ್ದು, ಆಸ್ಪತ್ರೆ ಶಾಲೆ ರಸ್ತೆಗಳ ಅಭಿವೃದ್ಧಿ ಮಾದರಿಯನ್ನು ಇತರೆ ರಾಜ್ಯಗಳು ಹಿಂಬಾಲಿಸುತ್ತಿವೆ ಎಂದರು. ಕಡೆಯಲ್ಲಿ ಹಮ್ ಹೋಂಗೆ ಕಾಮ್‍ಯಾಬ್ ಹಮ್ ಹೋಂಗೆ ಕಾಮ್‍ಯಾಬ್ ಎಂಬ ಹಾಡನ್ನು ಹಾಡಿದರು. ಇದಕ್ಕೆ ಅಲ್ಲಿ ಸೇರಿದ್ದ ಜನ ಸಮೂಹ ದನಿಗೂಡಿಸಿದರು.

  • ಕೇಜ್ರಿವಾಲ್ 3.0  – ಪ್ರಮಾಣ ವಚನಕ್ಕೆ 50 ಮಂದಿ ವಿಶೇಷ ಅತಿಥಿಗಳು

    ಕೇಜ್ರಿವಾಲ್ 3.0 – ಪ್ರಮಾಣ ವಚನಕ್ಕೆ 50 ಮಂದಿ ವಿಶೇಷ ಅತಿಥಿಗಳು

    ನವದೆಹಲಿ: ಭಾರೀ ಬಹುಮತದೊಂದಿಗೆ ಮೂರನೇ ಬಾರಿ ದೆಹಲಿ ಜನರ ದಿಲ್ ಕದ್ದಿರುವ ಅರವಿಂದ ಕೇಜ್ರಿವಾಲ್ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸರಳ ಕಾರ್ಯಕ್ರಮ ನಡೆಯಲಿದೆ.

    ಕೇಜ್ರಿವಾಲ್ ಜೊತೆಯ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಇತರೆ ರಾಜ್ಯದ ರಾಜಕೀಯ ಗಣ್ಯರನ್ನ ಆಹ್ವಾನಿಸಲಾಗುತ್ತೆ ಎನ್ನಲಾಗಿತ್ತು. ಆದರೆ ಯಾವುದೇ ರಾಜಕೀಯ ಗಣ್ಯರನ್ನ ಆಹ್ವಾನಿಸದಿರಲು ಆಪ್ ನಿರ್ಧರಿಸಿದೆ. ಪ್ರೊಟೊಕಾಲ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಬಿಜೆಪಿಯ ಏಳು ಸಂಸದರಿಗೂ ಆಹ್ವಾನ ನೀಡಿದೆ.

    50 ಮಂದಿ ವಿಶೇಷ ಅತಿಥಿಗಳು ಸಾಕ್ಷಿ:
    ರಾಜಕೀಯ ನಾಯಕರ ನೆರಳು ಬೀಳದಂತೆ ನೋಡಿಕೊಂಡಿರುವ ಅರವಿಂದ ಕೇಜ್ರಿವಾಲ್ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನು ಆಹ್ವಾನಿಸಿದ್ದಾರೆ. ದಿಲ್ಲಿ ನಿರ್ಮಾಣಕ್ಕೆ ಕಾರಣವಾದ 50 ಮಂದಿ ಪ್ರಮುಖರ ಜೊತೆಗೆ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ದಿಲ್ಲಿಯ ಪ್ರಸಿದ್ಧ ಸಿಗ್ನೇಚರ್ ಬ್ರಿಡ್ಜ್ ನ ವಿನ್ಯಾಸಕಾರರು, ಶಿಕ್ಷಕರು, ಬಸ್ ಮಾರ್ಷಲ್‍ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಸೇರಿದಂತೆ ಒಟ್ಟಾರೆ 50 ಮಂದಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲಿ ಕೇಜ್ರಿವಾಲ್ ಜತೆಗೆ ಇರಲಿದ್ದಾರೆ.

    ವೇದಿಕೆಯ ಕೇಂದ್ರ ಬಿಂದು ಚೋಚಾ ಮಫ್ಲರ್ ಮ್ಯಾನ್:
    ದೆಲ್ಲಿ ಚುನಾವಣೆ ಫಲಿತಾಂಶ ದಿನ ಆಪ್ ಕೇಂದ್ರ ಕಚೇರಿ ಬಳಿ ಎಲ್ಲರ ಗಮನ ಸೆಳೆದಿದ್ದ ಚೋಟಾ ಮಫ್ಲರ್‌ಮ್ಯಾನ್ ಅಂತಲೇ ಫೇಮಸ್ ಆಗಿದ್ದ ಒಂದು ವರ್ಷದ ಅವ್ಯಾನ್ ಯಥಾವತ್ ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದುವಾಗಲಿದ್ದಾನೆ. ಅರವಿಂದ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವ್ಯಾನ್ ಯಥಾವತ್ ಪೋಷಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅದ್ಧೂರಿಯಲ್ಲದ ತೀರ ಸರಳ ಎನಿಸಿದ ಅರ್ಥಬದ್ದ ಕಾರ್ಯಕ್ರಮಕ್ಕೆ ಆಪ್ ಪ್ಲಾನ್ ಮಾಡಿದ್ದು. ಇಂದಿನಿಂದ ಆಪ್‍ನ ಮತ್ತೊಂದು ಶೆಕೆ ದೆಹಲಿಯಲ್ಲಿ ಆರಂಭವಾಗಲಿದೆ.

  • ಕೇಜ್ರಿವಾಲ್ ಪದಗ್ರಹಣಕ್ಕೆ ವಿಶೇಷ ಅತಿಥಿಯಾದ ಬೇಬಿ ಮಫ್ಲರ್ ಮ್ಯಾನ್

    ಕೇಜ್ರಿವಾಲ್ ಪದಗ್ರಹಣಕ್ಕೆ ವಿಶೇಷ ಅತಿಥಿಯಾದ ಬೇಬಿ ಮಫ್ಲರ್ ಮ್ಯಾನ್

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮೂರನೇ ಭಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಸಮಾರಂಭಕ್ಕೆ ವಿಶೇಷ ಅತಿಥಿಯೊಬ್ಬರಿಗೆ ಆಪ್ ಪಕ್ಷ ಆಹ್ವಾನ ನೀಡಿದೆ.

    ವಿಧಾನಸಭಾ ಫಲಿತಾಂಶದ ವೇಳೆ ದೇಶದ ಗಮನ ಸೆಳೆದಿದ್ದ ಬೇಬಿ ಮಫ್ಲರ್ ಮ್ಯಾನ್‍ಗೆ ಕೇಜ್ರಿವಾಲ್ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಲಿದ್ದು, ಭಾರೀ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಬೇಬಿ ಮಫ್ಲರ್ ಮ್ಯಾನ್ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆಂದು ಆಮ್ ಆದ್ಮಿ ಪಕ್ಷ ಘೊಷಿಸಿದೆ.

    62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಭಾನುವಾರ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ರಾಮಲೀಲಾ ಮೈದಾನದಲ್ಲಿ ಅದ್ಧೂರಿ ತಯಾರಿ ಮಾಡಿಕೊಳ್ಳುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲು ಚಿಂತನೆ ನಡೆದಿದೆ.

    ಮೂರನೇ ಬಾರಿಗೆ ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಕೇಜ್ರಿವಾಲ್ ಬುಧವಾರ ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಚರ್ಚೆ ನಡೆಸಿ ಫೆಬ್ರವರಿ 16 ರಂದು ಕಾರ್ಯಕ್ರಮ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದರು. ಬಳಿಕ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಕೇಜ್ರಿವಾಲ್ ತಮ್ಮ ನಿವಾಸಕ್ಕೆ ಆಹ್ವಾನ ನೀಡಿ ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಹಿಂದೆ ಎರಡು ಬಾರಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದರು.

  • ಕೇಜ್ರಿವಾಲ್ 3.O – ಫೆಬ್ರವರಿ 16ಕ್ಕೆ ಪ್ರಮಾಣ ವಚನ

    ಕೇಜ್ರಿವಾಲ್ 3.O – ಫೆಬ್ರವರಿ 16ಕ್ಕೆ ಪ್ರಮಾಣ ವಚನ

    ನವದೆಹಲಿ: 62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆಮ್ ಅದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 16 ರಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ರಾಮಲೀಲಾ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲು ಚಿಂತನೆ ನಡೆದಿದೆ.

    ಮೂರನೇ ಬಾರಿಗೆ ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಕೇಜ್ರಿವಾಲ್ ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಫೆಬ್ರವರಿ 16 ರಂದು ಕಾರ್ಯಕ್ರಮ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ಬಳಿಕ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಕೇಜ್ರಿವಾಲ್ ತಮ್ಮ ನಿವಾಸಕ್ಕೆ ಆಹ್ವಾನ ನೀಡಿದ್ದು ಹೊಸ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದರು.