Tag: Arvind Kejriwal

  • ದೆಹಲಿಯಲ್ಲಿ ಕೊರೊನಾ – ಮಾಸ್ಕ್ ದಂಡ 500 ರಿಂದ 2 ಸಾವಿರಕ್ಕೆ ಏರಿಕೆ

    ದೆಹಲಿಯಲ್ಲಿ ಕೊರೊನಾ – ಮಾಸ್ಕ್ ದಂಡ 500 ರಿಂದ 2 ಸಾವಿರಕ್ಕೆ ಏರಿಕೆ

    ನವದೆಹಲಿ: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ದೆಹಲಿ ಸರ್ಕಾರ ಮಾಸ್ಕ್ ದಂಡವನ್ನು 500 ರೂಪಾಯಿಯಿಂದ 2 ಸಾವಿರಕ್ಕೆ ಏರಿಕೆ ಮಾಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ.

    ಘಠ ಪೂಜೆಯನ್ನ ದೆಹಲಿಯಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತದೆ. ಆದ್ರೆ ಈ ವರ್ಷ ಕೊರೊನಾದಿಂದಾಗಿ ಜನರು ಮನೆಯಲ್ಲಿ ಘಠ ಪರ್ವವನ್ನ ಆಚರಿಸಿ. ಇದೊಂದು ಪವಿತ್ರ ಹಬ್ಬವಾಗಿದ್ದರೂ, ಮಹಾಮಾರಿ ಹಿನ್ನೆಲೆ ಎಲ್ಲರೂ ಅತ್ಯಂತ ಎಚ್ಚರಿಕೆಯಿಂದಿರಬೇಕು. ಸರ್ಕಾರದ ಆದೇಶದಲ್ಲಿ ಯಾರೂ ರಾಜಕೀಯ ಮಾಡಬಾರದು. ಹಬ್ಬದ ಆಚರಣೆಗೆ ಸರ್ಕಾರದಿಂದ ಯಾವುದೇ ತಡೆ ಇರಲ್ಲ. ಆದ್ರೆ ನದಿ ಅಥವಾ ಕೆರೆಗೆ ಇಳಿಯಲು ಅನುಮತಿ ಇರಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ನವೆಂಬರ್ ನಲ್ಲಿಯೇ 1.16 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದೆ. 18 ದಿನದಲ್ಲಿ ಕೊರೊನಾದಿಂದ 1,318 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 7,486 ಹೊಸ ಪ್ರಕರಣಗಳು ಬಂದಿದ್ದು, 131 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,03,084ಕ್ಕೆ ಏರಿಕೆಯಾಗಿದೆ.

  • ಅಮಿತ್ ಶಾ ಬೇಗ ಗುಣಮುಖರಾಗಲಿ- ರಾಹುಲ್ ಗಾಂಧಿ ಸೇರಿ ಗಣ್ಯರ ಹಾರೈಕೆ

    ಅಮಿತ್ ಶಾ ಬೇಗ ಗುಣಮುಖರಾಗಲಿ- ರಾಹುಲ್ ಗಾಂಧಿ ಸೇರಿ ಗಣ್ಯರ ಹಾರೈಕೆ

    ನವದೆಹಲಿ: ಕೊರೊನಾ ಸೋಂಕು ತಗುಲಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡುತ್ತಿದ್ದಂತೆ ಹಲವು ನಾಯಕರು ಶುಭ ಹಾರೈಸುತ್ತಿದ್ದು, ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡಿ ಆರೈಸಿದ್ದಾರೆ. ಈ ಮೂಲಕ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಅವರು ಸಹ ಅಮಿತ್ ಶಾ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿಯಿತು. ಅವರು ಬೇಗ ಗುಣಮುಖರಾಗಲಿ ಎಂದು ಈಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ತಮಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ ಟ್ವೀಟ್ ಮಾಡಿ ತಿಳಿಸಿದ್ದರು. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನಲೆ ಟೆಸ್ಟ್ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ತಮ್ಮ ಸಂಪರ್ಕ ಬಂದವರು ಐಸೂಲೇಷನ್ ಆಗುವಂತೆ ಅಮಿತ್ ಶಾ ಮನವಿ ಮಾಡಿದ್ದರು.

  • ಕೊರೊನಾ ಕಂಟ್ರೋಲ್‍ಗೆ ಕೇಜ್ರಿವಾಲ್ ಸರ್ಕಾರದ ಸಪ್ತ ಸೂತ್ರಗಳು

    ಕೊರೊನಾ ಕಂಟ್ರೋಲ್‍ಗೆ ಕೇಜ್ರಿವಾಲ್ ಸರ್ಕಾರದ ಸಪ್ತ ಸೂತ್ರಗಳು

    ನವದೆಹಲಿ: ಕೊರೊನಾ ವಿಚಾರದಲ್ಲಿ ದೇಶದಲ್ಲಿ ಮುಂಬೈ ಬಿಟ್ಟರೆ ಅತಿ ಹೆಚ್ಚು ಆತಂಕ ಹುಟ್ಟಿಸಿದ್ದ ನಗರ ರಾಷ್ಟ್ರ ರಾಜಧಾನಿ ದೆಹಲಿ. ಪ್ರತಿ ದಿನಕ್ಕೆ 4 ರಿಂದ 5 ಸಾವಿರ ಪ್ರಕರಣಗಳು ಕಂಡು ರಾಜಧಾನಿ ಜನರು ಬೆಸ್ತು ಬಿದ್ದಿದ್ದರು. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಪ್ತ ಸೂತ್ರಕ್ಕೆ ಕೊರೊನಾ ಸೈಲೆಂಟ್ ಆಗಿದ್ದು, ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ ಗುಣಮುಖ ಆಗುತ್ತಿರುವವರ ಪ್ರಮಾಣ ಕೂಡಾ ಸಾಕಷ್ಟು ಹೆಚ್ಚಾಗಿದೆ.

    ರಾಷ್ಟ್ರ ರಾಜಧಾನಿ ದೆಹಲಿ, ಕೊರೊನಾ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. 1.13 ಲಕ್ಷ ಸೋಂಕಿತರಿರುವ ದೆಹಲಿಯಲ್ಲಿ ಕಳೆದೊಂದು ವಾರದ ಹಿಂದೆ ಪ್ರತಿ ದಿನಕ್ಕೆ 4 ರಿಂದ 5 ಸಾವಿರ ಕೇಸುಗಳು ಪತ್ತೆಯಾಗುತ್ತಿದ್ದವು. ಪುಟ್ಟ ರಾಜ್ಯದ ಗಲ್ಲಿ, ಬೀದಿ, ಮೊಹಲ್ಲಾಗಳಲ್ಲಿ ಕೊರೊನಾ ಆರ್ಭಟಿಸುತ್ತಿತ್ತು. ಸಮುದಾಯಕ್ಕೆ ಸೋಂಕು ಹಬ್ಬಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯಂದ್ರ ಜೈನ್ ಒಪ್ಪಿಕೊಂಡಿದ್ದರು. ಆದರೆ ಈ ಸೋಂಕನ್ನು ನಿಯಂತ್ರಕ್ಕೆ ತರುವಲ್ಲಿ ಕೇಜ್ರಿವಾಲ್ ಸರ್ಕಾರ ಯಶಸ್ವಿಯಾಗಿದೆ. ಏಳು ಸೂತ್ರಗಳನ್ನು ನಿರಂತರವಾಗಿ ಅನುಷ್ಠಾನಕ್ಕೆ ತರುವ ಮೂಲಕ ಸೊಂಕು ಹರಡುವಿಕೆಯನ್ನು 1000-1200ಕ್ಕೆ ಇಳಿಸಿದ್ದಾರೆ.

    ಕೇಜ್ರಿ ಸರ್ಕಾರದ ಸಪ್ತ ಸೂತ್ರಗಳು:
    1. ಸೋಂಕಿತರ ಮನೆ ಪ್ರತ್ಯೇಕತೆ: ಕೊರೊನಾ ಸೋಂಕು ವ್ಯಕ್ತಿಯಲ್ಲಿ ಕಾಣಿಸಿಕೊಂಡ ಬೆನ್ನಲೆ ಅವರ ಮನೆಯನ್ನು ಪ್ರತ್ಯೇಲಿಸಲಾಗುತ್ತಿತ್ತು. ಅಲ್ಲದೇ ಆ ಮನೆಯ ಇತರೆ ಮಳಿಗೆಯಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗುತ್ತಿತ್ತು. ಮತ್ತು ಸೋಂಕಿತ ವ್ಯಕ್ತಿ, ಆತನ ಮನೆಯವರಿಂದ ಸಂಪರ್ಕ ತಡೆ ಮಾಡಲಾಗುತ್ತಿತ್ತು.

    2. ಆಕ್ರಮಣಕಾರಿ ಪರೀಕ್ಷೆ: ದೆಹಲಿಯಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದ ಅನುಮಾನ ಬಂದ ಬೆನ್ನಲೆ ಕೇಜ್ರಿವಾಲ್ ಸರ್ಕಾರ ಕೇಂದ್ರ ಸರ್ಕಾರದ ನೆರವು ಪಡೆದು ಪ್ರತಿ ನಿತ್ಯ 20-24 ಸಾವಿರ ಟೆಸ್ಟ್ ಗಳನ್ನು ನಡೆಸಿತು. ದೆಹಲಿಯಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 10,500 ಮಂದಿಯನ್ನು ಪರೀಕ್ಷಿಸಲಾಗಿದೆ. ಮುಖ್ಯವಾಗಿ ಹಾಟ್ ಸ್ಪಾಟ್ ಹಾಗೂ ಕಂಟೈನ್ಮೆಂಟ್ ಝೋನ್ ಗಳನ್ನು ಟಾರ್ಗೆಟ್ ಮಾಡಲಾಗಿತ್ತು.

    3. ಹಾಸಿಗೆಗಳ ಹೆಚ್ಚಳ: ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರೆತೆ ನೀಗಿಸುವ ಕೆಲಸಕ್ಕೆ ಮುಂದಾಯಿತು. ದೆಹಲಿಯ ಸರ್ಕಾರ ಆಸ್ಪತ್ರೆಗಳಲ್ಲಿ 700 ಬೆಡ್ ಗಳು ಮಾತ್ರ ಇದ್ದವು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.40 ಬೆಡ್ ಗಳನ್ನು ಪಡೆದುಕೊಂಡು ಈ ಸಂಖ್ಯೆಯನ್ನು 5 ಸಾವಿರಕ್ಕೆ ಹೆಚ್ಚಿಸಿದರು. ಈಗ 10,100 ಬೆಡ್ ಕೋವಿಡ್ ಕೇರ್ ನಿರ್ಮಾಣ ಮಾಡಿದ್ದು, ಬೆಡ್‍ಗಳ ಮಾಹಿತಿಗಾಗಿ ಮೊಬೈಲ್ ಆ್ಯಪ್ ತಯಾರಿಸಲಾಗಿದೆ. ಜನರು ಬೆಡ್ ಖಾಲಿ ಇರುವ ಆಸ್ಪತ್ರೆಗೆ ನೇರವಾಗಿ ತೆರಳಿ ದಾಖಲಾಗಬಹುದು.

    4. ಸೋಂಕಿತರಿಗೆ ವೈದ್ಯರಿಂದ ಸಮಾಲೋಚನೆ: ದೆಹಲಿಯಲ್ಲಿ 1.13 ಲಕ್ಷ ಸೋಂಕಿತರ ಪೈಕಿ 80% ಮಂದಿ ರೋಗದ ಲಕ್ಷಣಗಳಿಲ್ಲ ರೋಗಿಗಳಾಗಿದ್ದರು. ಇವರಿಗೆ ದೇಶದಲ್ಲಿ ಮೊದಲು ಮನೆಯಲ್ಲಿ ಚಿಕಿತ್ಸೆ ನೀಡುವ ನಿರ್ಧಾರ ದೆಹಲಿ ಸರ್ಕಾರ ತೆಗೆದುಕೊಂಡಿತು. ದಿನಕ್ಕೆ ಎರಡು ಬಾರಿ ವೈದ್ಯಕೀಯ ಸಿಬ್ಬಂದಿ ಕರೆ ಮಾಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ತುರ್ತು ಸಮಯಕ್ಕೆ ಅವರನ್ನು ಆಸ್ಪತ್ರೆ ಸೇರಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.

    5. ರೋಗಿಗಳಿಗೆ ಆಕ್ಸಿ ಮೀಟರ್: ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಸರ್ಕಾರ ಉಚಿತವಾಗಿ ಆಕ್ಸಿ ಮೀಟರ್ ಅನ್ನು ನೀಡಿದೆ. ಪ್ರತಿದಿನ ಎರಡು ಗಂಟೆಗೊಮ್ಮೆ ತಮ್ಮ ಆಕ್ಸಿಜನ್ ಮಟ್ಟವನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸೂಚನೆ ನೀಡಲಾಗಿತ್ತು. ಆರೋಗ್ಯದಲ್ಲಿ ಏರುಪೇರಾದ್ರೆ ವೈದ್ಯರ ಸಂಪರ್ಕಿಸಲು ಸೂಚಿಸಿತ್ತು. ದೆಹಲಿ ಸರ್ಕಾರ ಇದಕ್ಕಾಗಿ 59,600 ಆಕ್ಸಿ ಮೀಟರ್ ಗಳನ್ನು ಖರೀದಿಸಿದ್ದು, ಅದರಲ್ಲಿ 58,974 ಅನ್ನು ಪ್ರತಿದಿನ ಬಳಸಲಾಗುತ್ತಿದೆ. ಇದಲ್ಲದೆ ಸರ್ಕಾರವು 2,750 ಆಮ್ಲಜನಕ ಸಾಂದ್ರಕಗಳನ್ನು ಸಹ ಖರೀದಿಸಿದೆ.

    6. ಆಂಬುಲೆನ್ಸ್ ಗಳ ಹೆಚ್ಚಳ: ಕೊರೊನಾ ಮುಂಚೆ ಸರ್ಕಾರದ ಬಳಿ 134 ಆಂಬುಲೆನ್ಸ್ ಗಳಿದ್ದವು ಇದನ್ನು ನಿಭಾಯಿಸಲು ವಾರ್ ರೂಂ ನಿರ್ಮಿಸಲಾಗಿದೆ. ಇಲ್ಲಿ ಅವಶ್ಯಕತೆ ಅನುಸಾರ ಆಂಬುಲೆನ್ಸ್ ಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈಗ ಆಂಬುಲೆನ್ಸ್ ಗಳ ಸಂಖ್ಯೆ 602ಕ್ಕೇರಿದೆ. ಇಲ್ಲಿ ಖಾಸಗಿ ಆಂಬುಲೆನ್ಸ್ ಗಳು, ಕ್ಯಾಬ್ ಗಳು ಹಾಗೂ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗಿದೆ.

    7. ಪ್ಲಾಸ್ಲಾ ಚಿಕಿತ್ಸೆ: ದೆಹಲಿ ಮಟ್ಟದಲ್ಲಿ ಪ್ಲಾಸ್ಮಾ ಚಿಕಿತ್ಸೆ ವರದಾನವಾಗಿದೆ. ದೆಹಲಿಯಲ್ಲಿ ನಡೆದ ಬಹುತೇಕ ಪ್ಲಾಸ್ಮ ಪ್ರಯೋಗಗಳು ಯಶಸ್ವಿಯಾಗಿದೆ. ಇದಕ್ಕಾಗಿ ದೆಹಲಿ ಸರ್ಕಾರ ದೇಶದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ. ಈವರೆಗೂ 29 ಮಂದಿ ಪ್ಲಾಸ್ಮಾದಿಂದ ಸಾವಿನ ಅಂಚಿನಿಂದ ಹೊರ ಬಂದಿದ್ದಾರೆ.

    ದೆಹಲಿ ಸರ್ಕಾರ ವ್ಯವಸ್ಥೆ ಕಾರ್ಯ ನಿರ್ವಹಣೆಯಿಂದ ದೆಹಲಿಯಲ್ಲಿ ಗುಣಮುಖ ಗೊಳ್ಳುವವರ ಪ್ರಮಾಣ 77.26% ಕ್ಕೆ ಏರಿದೆ. ದೆಹಲಿಯಲ್ಲಿ ಸದ್ಯ 1,13,740 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 91,312 ಮಂದಿ ಗುಣಮುಖವಾಗಿದ್ದಾರೆ. ದೆಹಲಿಯಲ್ಲಿ ಸದ್ಯ 19 ಸಾವಿರ ಆಕ್ಟಿವ್ ಕೇಸ್ ಗಳಿದೆ. ಪ್ರತಿನಿತ್ಯ ಕಾಣಿಸಿಕೊಳ್ಳುತ್ತದ್ದ ಸೋಂಕಿತರ ಪ್ರಮಾಣ 1000-1200 ಕ್ಕೆ ಇಳಿದಿದ್ದು ಸಾವುಗಳ ಮೇಲೆಯೂ ದೆಹಲಿ ಸರ್ಕಾರ ಹಿಡಿತ ಸಾಧಿಸುತ್ತಾ ಬರುತ್ತಿದೆ.

  • ದೆಹಲಿ ಜನತೆ ಹೆದರಬೇಡಿ, ಪ್ಲಾಸ್ಮಾ ಬ್ಯಾಂಕ್ ಆರಂಭ: ಸಿಎಂ ಕೇಜ್ರಿವಾಲ್

    ದೆಹಲಿ ಜನತೆ ಹೆದರಬೇಡಿ, ಪ್ಲಾಸ್ಮಾ ಬ್ಯಾಂಕ್ ಆರಂಭ: ಸಿಎಂ ಕೇಜ್ರಿವಾಲ್

    ನವದೆಹಲಿ: ಕೊರೊನಾಗೆ ಹೆದರುವ ಅಗತ್ಯವಿಲ್ಲ ಎಂದು ದೆಹಲಿಯ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

    ದೇಶದ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದೆ. ಆದ್ರೆ ಜನರು ಆತಂಕಕ್ಕೊಳಗಾಗೋದು ಬೇಡ. ಈಗಾಗಲೇ 1 ಲಕ್ಷ ಜನರಲ್ಲಿ ಅಂದಾಜು 72 ಸಾವಿರ ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸಹ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಪ್ಲಾಸ್ಮಾ ದಾನ ಮಾಡಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

    25 ಸಾವಿರ ಪ್ರಕರಣಗಳಲ್ಲಿ 15 ಸಾವಿರ ಜನರಿಗೆ ಮನೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯಲ್ಲಿ ಕೊರೊನಾದಿಂದ ಸಾವನ್ನಪ್ಪತ್ತಿರೋ ಸಂಖ್ಯೆಯಲ್ಲಿ ಇಳಿಕೆ ಆಗುತ್ತಿದೆ. ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ನಾವು ಆರಂಭಿಸಿದ್ದೇವೆ. ಪ್ಲಾಸ್ಮಾ ಥೆರಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

  • ದೆಹಲಿ ಲೆಫ್ಟಿನೆಂಟ್ ಗವರ್ನರ್ ಜೊತೆ ಸಿಎಂ ಕೇಜ್ರಿವಾಲ್ ಮತ್ತೆ ಜಟಾಪಟಿ

    ದೆಹಲಿ ಲೆಫ್ಟಿನೆಂಟ್ ಗವರ್ನರ್ ಜೊತೆ ಸಿಎಂ ಕೇಜ್ರಿವಾಲ್ ಮತ್ತೆ ಜಟಾಪಟಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೇ ಮತ್ತೊಂದು ಕಡೆ ಕ್ವಾರಂಟೈನ್ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ನಡುವೆ ಮತ್ತೆ ಜಟಾಪಟಿ ಶುರುವಾಗಿದೆ

    ದೆಹಲಿಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ದೆಹಲಿ ಆಗಮಿಸುವವರಿಗೆ ಐದು ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಆದೇಶ ಹೊರಡಿಸಿದ್ದಾರೆ. ಈ ಹೊಸ ಆದೇಶ ವಿವಾದಕ್ಕೆ ಕಾರಣವಾಗಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಐದು ದಿನ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಅವಶ್ಯಕತೆ ಇಲ್ಲ ಎಂದು ಆಗ್ರಹಿಸಿದ್ದಾರೆ.

    ಹೊಸ ಆದೇಶ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಅನಿಲ್ ಬೈಜಾಲ್ ಆದೇಶದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಸಣ್ಣ ಪ್ರಮಾಣ ಗುಣಲಕ್ಷಣಗಳು ಇದ್ದರೇ ಮನೆಯಲ್ಲಿ ಕ್ವಾರಂಟೈನ್ ಮಾಡಲು ಐಸಿಎಂಆರ್ ಸೂಚನೆ ನೀಡಿದೆ. ಈ ಹಂತದಲ್ಲಿ ದೆಹಲಿಗೆ ಆಗಮಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಅವಶ್ಯಕ ಇರಲಿಲ್ಲ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಂತದಲ್ಲೇ ಆಸ್ಪತ್ರೆ ಮತ್ತು ಆರೋಗ್ಯ ಸಿಬ್ಬಂದಿ ಕೊರತೆ ಸೃಷ್ಟಿಯಾಗಿದೆ. ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದರೆ ಅವರಿಗೆ ಚಿಕಿತ್ಸೆ ನೀಡುವುದು ಹೇಗೆ ಆರೋಗ್ಯ ಸಿಬ್ಬಂದಿಯನ್ನು ಹೇಗೆ ನಿಯೋಜಿಸುವುದು ಎಂದು ಪ್ರಶ್ನಿಸಿದ್ದಾರೆ.

    ಕೇಂದ್ರ ಸರ್ಕಾರ 500 ರೈಲ್ವೆ ಕೋಚ್ ಗಳನ್ನು ನೀಡಿದೆ. ಆದರೆ ದೆಹಲಿಯಲ್ಲಿರುವ ಹವಾಮಾನ ಬಿಸಿಲಿನ ತಾಪಮಾನಕ್ಕೆ ಕೋಚ್ ಗಳಲ್ಲಿ ಕ್ವಾರಂಟೈನ್ ಮಾಡುವುದು ಕಷ್ಟ. ಹೊಸ ಆದೇಶಗಳಿಂದ ತೊಂದರೆಗಳು ಹೆಚ್ಚು ಹೀಗಾಗಿ ಆದೇಶ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಈ ಹಿಂದೆ ದೆಹಲಿ ಆಸ್ಪತ್ರೆಗಳಲ್ಲಿ ದೆಹಲಿ ನಾಗರಿಕರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಬಹಿರಂಗವಾಗಿ ವಿರೋಧಿಸಿದ್ದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸರ್ಕಾರದ ಆದೇಶ ರದ್ದು ಮಾಡಿದ್ದರು. ಈ ವೇಳೆಯೂ ಗವರ್ನರ್ ಮತ್ತು ಸಿಎಂ ನಡುವೆ ಮಾತಿನ ಸಮರ ನಡೆದಿತ್ತು.

  • ದೆಹಲಿಯಲ್ಲಿ ಕೊರೊನಾ ಸ್ಫೋಟ- ಕೇಜ್ರಿ ಸರ್ಕಾರಕ್ಕೆ ಕೇಂದ್ರದ ನೆರವು

    ದೆಹಲಿಯಲ್ಲಿ ಕೊರೊನಾ ಸ್ಫೋಟ- ಕೇಜ್ರಿ ಸರ್ಕಾರಕ್ಕೆ ಕೇಂದ್ರದ ನೆರವು

    – ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೂರು ಪಟ್ಟು ಪರೀಕ್ಷೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ದೆಹಲಿಯಲ್ಲಿ ರಾಕೆಟ್ ವೇಗದಲ್ಲಿ ಸೋಂಕು ಹಬ್ಬುತ್ತಿರುವ ಹಿನ್ನೆಲೆ ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಏರ್ಪಡಿಸಾಗಿತ್ತು. ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್, ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯಂದ್ರ ಜೈನ್, ಡಿಸಿಎಂ ಮನೀಷ್ ಸಿಸೊಡಿಯಾ ಹಾಗೂ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಏಮ್ಸ್ ಹಿರಿಯ ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು.

    ಸುಧೀರ್ಘ ಸಭೆ ಬಳಿಕ ದೆಹಲಿಯಲ್ಲಿ ಕೊರೊನಾ ತಡೆಗೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಪತ್ತೆಗಾಗಿ ಪರೀಕ್ಷೆಗಳನ್ನು ಹೆಚ್ಚಿಸುವ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಒದಗಿಸಿಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ನೀಡಿದೆ.

    ಮುಂದಿನ ಎರಡು ದಿನಗಳಲ್ಲಿ ದೆಹಲಿಯಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವುದು ಮತ್ತು ಮುಂದಿನ ಆರು ದಿನಗಳಲ್ಲಿ ಮೂರು ಪಟ್ಟು ಟೆಸ್ಟಿಂಗ್ ನಡೆಯಲು ನಿರ್ಧರಿಸಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಮಾಡಿದ್ದು, ಪ್ರತಿ ಮನೆಗೆ ತೆರಳಿ ಪರೀಕ್ಷೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ದೆಹಲಿಯಲ್ಲಿ ಆಸ್ಪತ್ರೆ ಮತ್ತು ಬೆಡ್ ಗಳ ಕೊರತೆ ನೀಗಿಸಲು 500 ಕೊರೊನಾ ಬೆಡ್ ಗಳಾಗಿ ಮಾರ್ಪಾಡಿಸಿದ ರೈಲ್ವೆ ಬೋಗಿಗಳನ್ನು ನೀಡಲು ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ ಸೂಚಿಸಿದೆ. ಅಲ್ಲದೆ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಶೇ.60ರಷ್ಟು ಬೆಡ್ ಗಳನ್ನು ಕೊರೊನಾಗೆ ಮೀಸಲಿಡಲಿದ್ದು, ದರ ಪಟ್ಟಿಗೆ ಸಮಿತಿ ರಚನೆ ಮಾಡಿದೆ.

    ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಕೇಂದ್ರ ಇನ್ನೂ ಐದು ಹಿರಿಯ ಅಧಿಕಾರಿಗಳನ್ನು ದೆಹಲಿ ಸರ್ಕಾರಕ್ಕೆ ನಿಯೋಜಿಸಿದೆ. ಅಗತ್ಯ ಸಂಪನ್ಮೂಲಗಳಾದ ಆಮ್ಲಜನಕ ಸಿಲಿಂಡರ್‍ಗಳು, ವೆಂಟಿಲೇಟರ್‍ಗಳು, ಪಲ್ಸ್ ಆಕ್ಸಿಮೀಟರ್‍ಗಳು ಸೇರಿದಂತೆ ಎಲ್ಲ ಅಗತ್ಯಗಳನ್ನು ಪೂರೈಸುವುದಾಗಿ ಕೇಂದ್ರ ದೆಹಲಿ ಸರ್ಕಾರಕ್ಕೆ ಭರವಸೆ ನೀಡಿದ್ದು, ಅಂತ್ಯಕ್ರಿಯೆಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಹ ನಿರ್ಧರಿಸಿದೆ.

    ಸಭೆ ಬಳಿಕ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಇದೊಂದು ಉತ್ತಮ ಸಭೆ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಲಾಕ್‍ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

  • ಸಿಎಂ ಕೇಜ್ರಿವಾಲ್ ಕೊರೊನಾ ವರದಿ ನೆಗೆಟಿವ್

    ಸಿಎಂ ಕೇಜ್ರಿವಾಲ್ ಕೊರೊನಾ ವರದಿ ನೆಗೆಟಿವ್

    ನವ ದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇಂದು ಬೆಳಗ್ಗೆ ಅರವಿಂದ್ ಕೇಜ್ರಿವಾಲ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಸಂಜೆ ಬಂದ ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ಖಿಚಿತಪಡಿಸಿದ್ದಾರೆ.

    ಗಂಟಲು ಇನ್ಫೆಕ್ಷನ್ ಮತ್ತು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಭಾನುವಾರ ಮಧ್ಯಾಹ್ನದ ನಂತರ ಮುಖ್ಯಮಂತ್ರಿಗಳು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಐಸೋಲೇಟೆಡ್ ಆಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಡಿಸಿಎಂ ಮನೀಷ್ ಸಿಸೋಡಿಯಾ, ಮುಖ್ಯಮಂತ್ರಿಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಐಸೋಲೇಷನ್ ನಲ್ಲಿದ್ದಾರೆ ಎಂದು ಹೇಳಿದ್ದರು.

    ಇಂದು ಬೆಳಗ್ಗೆ ಸಿಎಂ ಅನುಪಸ್ಥಿತಿಯಲ್ಲಿ ನಡೆದ ರಾಜ್ಯದ ಹಿರಿಯ ಅಧಿಕಾರಿಗಳು ಮತ್ತು ತಜ್ಷರು ಸಭೆ ಸಿಸೋಡಿಯಾ ಅವರ ನೇತೃತ್ವದಲ್ಲಿ ನಡೆಯಿತು. ದೆಹಲಿಯಲ್ಲಿ ಕೊರೊನಾ ಸಮುದಾಯದ ಮಟ್ಟದಲ್ಲಿ ಹಬ್ಬಿಲ್ಲ. ಇದೇ ರೀತಿ ಮುಂದುವರಿದ್ರೆ ಜುಲೈ 31ರಷ್ಟರಲ್ಲಿ ಸೋಂಕಿತರ ಸಂಖ್ಯೆ 5.5 ಲಕ್ಷದಷ್ಟು ಹೆಚ್ಚಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

    ಇಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿ ಮಾಧವಿ ರಾಜೇ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಸಿಂಧಿಯಾರ ಪತ್ನಿ, ಮಗ ಮತ್ತು ಮಗಳ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಸಿಂಧಿಯಾ ತಮ್ಮ ತಾಯಿಯ ಜೊತೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಐದು ದಿನಗಳ ಹಿಂದೆ ಗ್ವಾಲಿಯರ್ ನಲ್ಲಿ ಸಿಂಧಿಯಾ, ತಾಯಿ ಮಾಧವಿ ರಾಜೇ, ಪತ್ನಿ ಪ್ರಿಯದರ್ಶಿನಿ, ಮಗಳು ಅನನ್ಯಾ ರಾಜೇ, ಪುತ್ರ ಮಾಹಾಆರ್ಯಮನ್ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವರದಿ ಬಂದಿದ್ದು, ಇಬ್ಬರಿಗೆ ಸೋಂಕು ತಗುಲಿರೋದು ಖಚಿತವಾಗಿದೆ. ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರೋ ಜ್ಯೋತಿರಾದಿತ್ಯ ಸಿಂಧಿಯಾ ಭೋಪಾಲ್ ನಲ್ಲಿ ನಾಮಪತ್ರ ಸಲ್ಲಿಕೆಯ ಬಳಿಕ ದೆಹಲಿಗೆ ತೆರಳಿದ್ದರು. ಲಾಕ್‍ಡೌನ್ ಸಮಯದಲ್ಲಿಯೂ ಸಿಂಧಿಯಾ ದೆಹಲಿಯಲ್ಲಿದ್ದರು.

  • ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಆಪ್ ಸರ್ಕಾರ

    ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಆಪ್ ಸರ್ಕಾರ

    ನವದೆಹಲಿ: ಮದ್ಯ ಮಾರಾಟದ ಮೇಲೆ ಹೇರಿದ್ದ ಶೇಕಡಾ 70 ಕೊರೊನಾ ವಿಶೇಷ ಶುಲ್ಕವನ್ನು ದೆಹಲಿ ಸರ್ಕಾರ ಹಿಂಪಡೆದುಕೊಂಡಿದ್ದು, ಬುಧವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.

    ಕೊರೊನಾ ವಿಶೇಷ ಶುಲ್ಕ ಹಿಂಪಡೆದುಕೊಂಡಿರುವ ಸರ್ಕಾರ ಶೇ.20ರಿಂದ 25ರಷ್ಟು ವ್ಯಾಟ್ ಟ್ಯಾಕ್ಸ್ ಹೇರಲು ನಿರ್ಧಾರ ತೆಗೆದುಕೊಂಡಿದೆ. ದೆಹಲಿಯಲ್ಲಿ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಎರಡು ಮಹತ್ವ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

    ಲಾಕ್‍ಡೌನ್ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಸರ್ಕಾರ ಮೂಲ ಬೆಲೆಯ ಮೇಲೆ ಶೇ.70 ನಷ್ಟು ಕೊರೊನಾ ವಿಶೇಷ ಶುಲ್ಕ ವಿಧಿಸಿ ಬೆಲೆ ಏರಿಕೆ ಮಾಡಿತ್ತು. ಲಾಕ್‍ಡೌನ್‍ನಿಂದ ಆರ್ಥಿಕ ನಷ್ಟದಲ್ಲಿ ಸರ್ಕಾರ ಆದಾಯ ಕ್ರೋಢೀಕರಿಸಲು ಹಾಗೂ ಮದ್ಯಕ್ಕಾಗಿ ಏರ್ಪಟ್ಟಿದ್ದ ದೊಡ್ಡ ಜನ ಸಮುದಾಯವನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು.

    ಸೋಮವಾರದಿಂದ ದೆಹಲಿಯಲ್ಲಿ ಅನ್‍ಲಾಕ್ ಆಗಲಿದ್ದು, ಸಾರ್ವಜನಿಕ ಪ್ರದೇಶಗಳು, ಅಂಗಡಿ ಮುಂಗಟ್ಟು, ಮಾಲ್, ಮಾರುಕಟ್ಟೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಆರಂಭವಾಗಲಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಮೂವತ್ತು ಸಾವಿರದ ಗಡಿಯಲ್ಲಿದ್ದು ದೆಹಲಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಬೆಡ್‍ಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಡಲಾಗಿದೆ.

  • ನಿಮ್ಮನ್ನ ಬಿಡಲ್ಲ: ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಕೇಜ್ರಿವಾಲ್ ಖಡಕ್ ವಾರ್ನಿಂಗ್

    ನಿಮ್ಮನ್ನ ಬಿಡಲ್ಲ: ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಕೇಜ್ರಿವಾಲ್ ಖಡಕ್ ವಾರ್ನಿಂಗ್

    ನವದೆಹಲಿ: ನಿಮ್ಮನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊರೊನಾ ಸಂಕಷ್ಟದಲ್ಲೂ ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ದೇಶಾದ್ಯಂತ ಕೊರೊನಾ ಸೋಂಕಿತರ ಹೆಚ್ಚಾದಂತೆ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣವನ್ನು ಪಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇಂತಹದ್ದೇ ಪರಿಸ್ಥಿತಿ ದೆಹಲಿಯಲ್ಲೂ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಿಮ್ಮ ಆಸ್ಪತ್ರೆಗಳನ್ನು ತೆರೆಯಲು ನಾವು ಅವಕಾಶ ಕೊಟ್ಟಿದ್ದು ಹಣ ಸಂಪಾದಿಸುವುದಕ್ಕಾಗಿ ಅಲ್ಲ. ದೆಹಲಿಯ ಜನರಿಗೆ ಸೇವೆ ಸಲ್ಲಿಸಲು. ಕೊರೊನಾ ಅಟ್ಟಹಾಸದ ಸಮಯದಲ್ಲಿ ಹೆಚ್ಚಿನ ಆಸ್ಪತ್ರೆಗಳು ರೋಗಿಗಳಿಗೆ ಸಕಾರಾತ್ಮಕ ಮನೋಭಾವದಿಂದ ಚಿಕಿತ್ಸೆ ನೀಡುತ್ತಿವೆ. ಆದರೆ 3-4 ಆಸ್ಪತ್ರೆಗಳು ಇತರ ಪಕ್ಷಗಳ ಖಾತೆಗಳಿಗೆ ಅನುಕೂಲಕರವಾಗಿವೆ. ಕೆಲವು ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ. ಇತರ ಪಕ್ಷಗಳಿಂದ ಪ್ರಭಾವವನ್ನು ಬಳಸಿಕೊಂಡು ಹಣ ಗಳಿಸುವ ಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಅಂತಹ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಗುಡುಗಿದ್ದಾರೆ.

    “ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಕೊರೊನಾ ರೋಗಿಗಳ ಚಿಕಿತ್ಸೆಗೆ ಒಟ್ಟು 8,645 ಬೆಡ್‍ಗಳು ಲಭ್ಯವಿದ್ದು, ಅದರಲ್ಲಿ 4,038 ಮಾತ್ರ ಭರ್ತಿಯಾಗಿವೆ. ಉಳಿದಂತೆ 4,607 ಬೆಡ್‍ಗಳು ಖಾಲಿ ಇವೆ. ಇದು ಕೇವಲ ಅಂಕಿಗಳಲ್ಲ, ಸ್ಪಷ್ಟ ಮಾಹಿತಿ. ನಗರದಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ. ಆದರೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

    ಆಸ್ಪತ್ರೆಗಳ ಹಣ ಗಳಿಕೆಯ ಪ್ರವೃತ್ತಿಯನ್ನು ನಿಗ್ರಹಿಸಲು ಪ್ರತಿ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರದ ವೈದ್ಯರನ್ನು ನಿಯೋಜಿಸುತ್ತಿದ್ದೇವೆ. ಅವರು ಅಗತ್ಯಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಆ್ಯಪ್‍ನಲ್ಲಿ ಬಿಡುಗಡೆ ಮಾಡಿ ದೆಹಲಿ ಕೊರೊನಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ಸರಿಯಾದ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

  • ವಲಸೆ ಕಾರ್ಮಿಕರ ಸಂಚಾರಕ್ಕೆ 100 ಶ್ರಮಿಕ್ ರೈಲು ಕೊಡಿ – ಮೋದಿಗೆ ಕೇಜ್ರಿವಾಲ್ ಒತ್ತಾಯ

    ವಲಸೆ ಕಾರ್ಮಿಕರ ಸಂಚಾರಕ್ಕೆ 100 ಶ್ರಮಿಕ್ ರೈಲು ಕೊಡಿ – ಮೋದಿಗೆ ಕೇಜ್ರಿವಾಲ್ ಒತ್ತಾಯ

    ನವದೆಹಲಿ: ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಮರಳಿ ಕಳುಹಿಸಲು ನೂರು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ ಎಂದು ದೆಹಲಿ ಸಿಎಂ ಕಚೇರಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ವಲಸೆ ಕಾರ್ಮಿಕರ ಸಂರಕ್ಷಣೆ ವಿಚಾರದಲ್ಲಿ ಆಮ್ ಅದ್ಮಿ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ನಡುವೆ ಈ ಮನವಿ ಮಹತ್ವ ಪಡೆದುಕೊಂಡಿದೆ.

    ಮುಖ್ಯಮಂತ್ರಿ ಕಚೇರಿ ಸುಮಾರು 4,00,000 ವಲಸೆ ಕಾರ್ಮಿಕರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಕಳೆದ ಒಂದು ವಾರದಲ್ಲಿ ಇದುವರೆಗೆ 59 ವಿಶೇಷ ರೈಲುಗಳು ಮತ್ತು 200ಕ್ಕೂ ಹೆಚ್ಚು ಬಸ್ಸುಗಳ ಮೂಲಕ ದೆಹಲಿಯಿಂದ ವಲಸೆ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಆದರೆ ಮತ್ತಷ್ಟು ರೈಲುಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂಬಂಧ ಅಧಿಕೃತವಾಗಿ ಮಾತನಾಡಿರುವ ಡಿಸಿಎಂ ಮನೀಶ್ ಸಿಸೊಡಿಯಾ, ಈವರೆಗೂ ದೆಹಲಿಯಿಂದ 65,000 ಕಾರ್ಮಿಕರ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಿಗೆ ತೆರಳಲು ಬಯಸುತ್ತಿದ್ದಾರೆ. ಅವರನ್ನು ಕಳುಹಿಸಲು ಕೇಂದ್ರ ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕು ಎಂದರು.