Tag: Arvind Kejriwal

  • ಕೇಜ್ರಿವಾಲ್‌, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

    ಕೇಜ್ರಿವಾಲ್‌, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿ ಬಗ್ಗೆ ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ.

    ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೂರು ಸಲ್ಲಿಸಿದ್ದಾರೆ. ಇವರ ಹೇಳಿಕೆಯು ಸಮುದಾಯಗಳು/ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಆಹ್ವಾನ ನೀಡಿಲ್ಲ ಎಂದು ಎಂಬ ಕಾರಣಕ್ಕೆ ರಾಷ್ಟ್ರಪತಿಗಳ ಜಾತಿ ಉಲ್ಲೇಖಿಸಿ ಖರ್ಗೆ ಮತ್ತು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ನಾಯಕರ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳು ಆದಿವಾಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯವನ್ನು ಪ್ರಚೋದಿಸುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವ ಮಟ್ಟಕ್ಕೆ ಇಳಿಯಲು ಬಿಡಬಾರದು. ಇದು ಗುರುತಿಸಬಹುದಾದ ಅಪರಾಧಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

    ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

    ನವದೆಹಲಿ: ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಹೊರತುಪಡಿಸಿ ಭಾರತೀಯ ಆಡಳಿತಾತ್ಮಕ ಸೇವೆಗಳು ಮತ್ತು ರಾಜಧಾನಿಯಲ್ಲಿನ ಎಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರ ತನ್ನ ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

    ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವೆ ನಡೆಯುತ್ತಿದ್ದ ಆಡಳಿತಾತ್ಮಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಆಮ್ ಅದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಇಂದು ಪೂರ್ಣ ಪ್ರಮಾಣ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ನೀಡಲು ನಿರಾಕರಿಸಿದೆ.

    ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳನ್ನು ನಿಯಂತ್ರಿಸಲು ಅನುಮತಿಸದಿದ್ದರೆ ಶಾಸಕಾಂಗ ಮತ್ತು ಸಾರ್ವಜನಿಕರ ಕಡೆಗೆ ಅದರ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

    ಆದರೆ ದೆಹಲಿ ಇತರೆ ಕೇಂದ್ರಾಡಳಿತ ಪ್ರದೇಶಗಳಂತಲ್ಲ, ಇಲ್ಲಿ ರಾಜಕೀಯ ದ್ವಂದ್ವಗಳಿದೆ. ಭಾರತದ ಒಕ್ಕೂಟ ವ್ಯವಸ್ಥೆ ವೈವಿಧ್ಯಮಯ ಹಿತಾಸಕ್ತಿಗಳ ಉಳಿವು ಮತ್ತು ವೈವಿಧ್ಯಮಯ ಅಗತ್ಯಗಳಿಗೆ ಅವಕಾಶ ಕಲ್ಪಿಸುತ್ತದೆ. ಒಂದು ರಾಷ್ಟ್ರೀಯ ಸರ್ಕಾರ ಮತ್ತೊಂದು ಪ್ರಾದೇಶಿಕ ಸರ್ಕಾರ ದೆಹಲಿಯಲ್ಲಿದೆ. ಉಭಯ ಸರ್ಕಾರಗಳು ಸಾರ್ವಜನಿಕ ಅಭಿವ್ಯಕ್ತಿಯಿಂದ ಬಂದಿದೆ ಎಂದು ಸುಪ್ರೀಂ ಹೇಳಿದೆ.

    ದೆಹಲಿ ಪೂರ್ಣ ಪ್ರಮಾಣದ ರಾಜ್ಯವಲ್ಲದಿದ್ದರೂ ಶಾಸನ ಮಾಡಲು ಅಧಿಕಾರವನ್ನು ಹೊಂದಿದೆ. 239AA ಸಂವಿಧಾನದೊಂದಿಗೆ ಒಕ್ಕೂಟ ಸರ್ಕಾರವನ್ನು ರಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶ ಅದರ ಒಂದು ಘಟಕವಾಗಿದೆ. ಕೇಂದ್ರಾಡಳಿತ ಶಾಸನ ಸಭೆಗೂ ಅಧಿಕಾರವಿದೆ. ಆದರೆ ರಾಜ್ಯದ ಕಾರ್ಯಕಾರಿ ಅಧಿಕಾರವು ಒಕ್ಕೂಟದ ಅಸ್ತಿತ್ವದಲ್ಲಿರುವ ಕಾನೂನಿಗೆ ಒಳಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ವಿಧಿ 41 ಅಡಿಯಲ್ಲಿ ಸಾರ್ವಜನಿಕ ಸೇವೆಗಳ ಮೇಲೆ ಶಾಸಕಾಂಗ ನಿಯಂತ್ರಣವನ್ನು ಹೊಂದಿದೆ. ಅದಾಗ್ಯೂ ಅದು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವಿಚಾರಗಳಲ್ಲ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಆಮ್ ಅದ್ಮಿ ಪಕ್ಷಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದ್ದು, ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪಕ್ಕೆ ಬ್ರೇಕ್ ಬಿದ್ದಿದೆ.

  • ಬಿಜೆಪಿ ಸೂಚನೆ ನೀಡಿದರೆ ಸಿಬಿಐ ನನ್ನನ್ನು ಬಂಧಿಸಬಹುದು: ಅರವಿಂದ್ ಕೇಜ್ರಿವಾಲ್

    ಬಿಜೆಪಿ ಸೂಚನೆ ನೀಡಿದರೆ ಸಿಬಿಐ ನನ್ನನ್ನು ಬಂಧಿಸಬಹುದು: ಅರವಿಂದ್ ಕೇಜ್ರಿವಾಲ್

    ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ (CBI) ವಿಚಾರಣೆಗೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ತಮ್ಮನ್ನು ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

    ಭಾರತೀಯ ಜನತಾ ಪಕ್ಷ (BJP) ಸೂಚನೆ ನೀಡಿದರೆ ಸಿಬಿಐ ನನ್ನನ್ನು ಬಂಧಿಸುವ ಸಾಧ್ಯತೆಯಿದೆ. ಕೆಲವು ಬಿಜೆಪಿ ನಾಯಕರು ನನ್ನನ್ನು ಬಂಧಿಸುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆಪ್ (AAP) ನಾಯಕ ಹೇಳಿದ್ದಾರೆ.

    ಬಿಜೆಪಿಗರು ಅತ್ಯಂತ ಶಕ್ತಿಶಾಲಿಗಳು. ಅವರು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು. ಅವರು ಅಮಾಯಕರು ಎಂಬುವುದನ್ನು ಕೂಡಾ ನೋಡುವುದಿಲ್ಲ ಎಂದು ಕೇಜ್ರಿವಾಲ್ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಳೆ ಬೀದರ್‌ಗೆ ರಾಹುಲ್ ಗಾಂಧಿ ಎಂಟ್ರಿ

    ಶುಕ್ರವಾರವೂ ಬಿಜೆಪಿಯನ್ನು ಟೀಕಿಸಿರುವ ಕೇಜ್ರಿವಾಲ್, ಮದ್ಯ ನೀತಿ ಹಗರಣ ನಡೆದಿಲ್ಲ. ಬಿಜೆಪಿಯವರು ದುರಹಂಕಾರಿಗಳು. ಅವರು ಯಾರನ್ನೂ ಅರ್ಥಮಾಡಿಕೊಳ್ಳುವುದಿಲ್ಲ. ಯಾರಿಗೆ ಬೇಕಾದರೂ ಬೆದರಿಕೆ ಹಾಕಬಲ್ಲರು. ಅವರು ನ್ಯಾಯಾಧೀಶರು, ಮಾಧ್ಯಮಗಳು ಮತ್ತು ಕೈಗಾರಿಕೋದ್ಯಮಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದು ಹೇಳಿದ್ದಾರೆ.

    ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿಂತೆ ವಿಚಾರಣೆಗೆ ಕೇಜ್ರಿವಾಲ್ ಅವರು ಭಾನುವಾರ ಸಿಬಿಐ ಕಚೇರಿಗೆ ತೆರಳಿದ್ದಾರೆ. ಫೆಬ್ರವರಿ 26ರಂದು ಸಿಬಿಐ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದನ್ನೂ ಓದಿ: ಅತಿಕ್, ಅಶ್ರಫ್ ಹತ್ಯೆ – ಮೂವರು ಹಂತಕರ ಬಂಧನ, ಯುಪಿಯಲ್ಲಿ ಹೈ ಅಲರ್ಟ್

  • ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಸಮನ್ಸ್‌

    ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಸಮನ್ಸ್‌

    ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ (Delhi Excise Case) ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಸಿಬಿಐ ಸಮನ್ಸ್‌ (CBI summons) ಜಾರಿ ಮಾಡಿದೆ.

    ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಇದೇ ಪ್ರಕರದಲ್ಲಿ ಅರೆಸ್ಟ್‌ ಆಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಏಪ್ರಿಲ್‌ 16 ಭಾನುವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ ಅವರಿಗೆ ಸೂಚಿಸಲಾಗಿದೆ.

    ಈಗಾಗಲೇ ಆಪ್‌ನ ಹಲವು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನಕ್ಕೆ ಕಾರಣವೇನು?

    ಈ ಪ್ರಕರಣದ ಜೊತೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾ ಪೊಲೀಸರು ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದು ಏಪ್ರಿಲ್‌ 27ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಹೊಸ ಮದ್ಯ ನೀತಿಯಡಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಲು ದೆಹಲಿ ಸರ್ಕಾರ ಲಂಚವನ್ನು ಪಡೆದಿದೆ ಎಂದು ಆರೋಪಿಸಲಾಗಿದ್ದು, ಖಜಾನೆಗೆ ನಷ್ಟ, ರಾಜ್ಯಕ್ಕೆ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್‌ ಆರೋಪ – ಕೆಸಿಆರ್ ಪುತ್ರಿ ಕವಿತಾಗೆ 10ಕ್ಕೂ ಹೆಚ್ಚು ಬಾರಿ ಕರೆ

    ಕೇಜ್ರಿವಾಲ್‌ ದೆಹಲಿ ಸಿಎಂ ಆಗಿದ್ದರೂ ಯಾವುದೇ ಖಾತೆಗಳನ್ನು ಹೊಂದಿಲ್ಲ. ಮನೀಶ್ ಸಿಸೋಡಿಯಾ ಗೃಹ, ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ, ಗುಪ್ತಚರ, ಸೇವೆಗಳು, ಪ್ರವಾಸೋದ್ಯಮ, ಕಲೆ, ಸಂಸ್ಕೃತಿ ಮತ್ತು ಭಾಷೆ, ಕಾರ್ಮಿಕ, ಉದ್ಯೋಗ, ಲೋಕೋಪಯೋಗಿ ಇಲಾಖೆ, ಆರೋಗ್ಯ, ಕೈಗಾರಿಕೆ, ಇಂಧನ, ನಗರಾಭಿವೃದ್ಧಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸೇರಿ 18 ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದರು.

  • ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದ ಚುನಾವಣಾ ಆಯೋಗ

    ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದ ಚುನಾವಣಾ ಆಯೋಗ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗವು (Election Commission) ಆಮ್ ಆದ್ಮಿ ಪಕ್ಷಕ್ಕೆ (AAP) ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ.

    ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (TMC), ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್ (NCP) ಹಾಗೂ ಸಿಪಿಐ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿವೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು, ಕನಿಷ್ಠ 4 ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡಿರಬೇಕು. ಆ ರಾಜ್ಯಗಳ ವಿಧಾನಸಭೆಯಲ್ಲಿ ಕನಿಷ್ಠ ಇಬ್ಬರು ಸದಸ್ಯರನ್ನ ಹೊಂದಿರಬೇಕು. ಅಥವಾ ಲೋಕಸಭೆಯಲ್ಲಿ ಕನಿಷ್ಠ ಶೇ.2 ರಷ್ಟು ಸದಸ್ಯ ಬಲವನ್ನ ಹೊಂದಿರಬೇಕು. ಇದನ್ನೂ ಓದಿ: ಖಲಿಸ್ತಾನಿ ಕೃತ್ಯ ಖಂಡಿಸದ ಯುಕೆ – ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ

    ಎಎಪಿ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಇಬ್ಬರಿಗಿಂತ ಹೆಚ್ಚಿನ ಶಾಸಕರನ್ನ ಹೊಂದಿದೆ. ಈ ಕಾರಣಕ್ಕಾಗಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗಿದೆ. ಮುಖ್ಯವಾಗಿ ಎಎಪಿ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಪ್ರತಿನಿಧಿಸುತ್ತಿದೆ.

  • ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿ: ಮನೀಶ್ ಸಿಸೋಡಿಯಾ

    ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿ: ಮನೀಶ್ ಸಿಸೋಡಿಯಾ

    – ದೇಶದ ಪ್ರಗತಿಗೆ ವಿದ್ಯಾವಂತ ಪ್ರಧಾನಿ ಅಗತ್ಯ
    – ಜೈಲಿನಿಂದಲೇ ಸಿಸೋಡಿಯಾ ಪತ್ರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ದೇಶದ ಜನರನ್ನುದ್ದೇಶಿಸಿ ಪತ್ರ ಬರೆದಿದ್ದಾರೆ.

    ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸಿಸೋಡಿಯಾ ತಿಹಾರ್ ಜೈಲಿನಿಂದಲೇ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಸವಾಲೆಸೆದಿರುವ ಸಿಸೋಡಿಯಾ ದೇಶದ ಪ್ರಗತಿಗೆ ವಿದ್ಯಾವಂತ ಪ್ರಧಾನಿ ಅಗತ್ಯ ಎಂದು ಹೇಳಿದ್ದಾರೆ.

    ಈ ಪತ್ರವನ್ನು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ತಿಳಿಸಿರುವ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ದೇಶದ ಜನತೆಗೆ ಜೈಲಿನಿಂದ ಪತ್ರ ಬರೆದಿದ್ದಾರೆ. ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ತುಂಬಾ ಅಪಾಯಕಾರಿ. ಮೋದಿ ಅವರಿಗೆ ವಿಜ್ಞಾನ ಅರ್ಥವಾಗಲ್ಲ. ಅವರಿಗೆ ಶಿಕ್ಷಣದ ಮಹತ್ವವೇ ಅರ್ಥವಾಗಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60,000 ಶಾಲೆಗಳು ಮುಚ್ಚಲ್ಪಟ್ಟಿವೆ. ಭಾರತದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಗೋಕಾಕ್ ಸಾಹುಕಾರ್‌ಗೆ ಸೈಲೆಂಟಾಗಿ ಪಂಚ್ ಕೊಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಇದೀಗ ರದ್ದಾಗಿರುವ ದೆಹಲಿಯ ಅಬಕಾರಿ ನೀತಿ 2021-22ರ ರಚನೆ ಹಾಗೂ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಫೆಬ್ರವರಿ 16ರಂದು ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ

  • ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

    ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

    ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ (Delhi CM Arvind Kejriwal) ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ (Gujarat High Court) ಮಹತ್ವದ ತೀರ್ಪು ನೀಡಿ ಕೇಜ್ರಿವಾಲ್‍ಗೆ 25 ಸಾವಿರ ರೂ. ದಂಡವನ್ನೂ (Fine) ವಿಧಿಸಿದೆ.

    ಮೋದಿ ಅವರ ಪದವಿ ಮಾಹಿತಿಯನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (CIC) ಏಳು ವರ್ಷಗಳ ಹಿಂದಿನ ಆದೇಶವನ್ನು ಕೋರ್ಟ್‌ ರದ್ದುಗೊಳಿಸಿದೆ.

    ಸಿಐಸಿ ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿ 4 ವಾರಗಳಲ್ಲಿ ಮೊತ್ತವನ್ನು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಜಿಎಸ್ಎಲ್ಎಸ್ಎ) ಪಾವತಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

    ಏನಿದು ಪ್ರಕರಣ?
    2016ರ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರು ಸಿಐಸಿಯ ಎಂ ಶ್ರೀಧರ್ ಆಚಾರ್ಯುಲು ಅವರಿಗೆ ಪತ್ರ ಬರೆದು ಆಯೋಗವು ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಮಾಹಿತಿಯನ್ನು ಮರೆಮಾಚಲು ಏಕೆ ಬಯಸಿದೆ ಎಂದು ಪ್ರಶ್ನಿಸಿದ್ದರು. ಈ ಪತ್ರದ ಆಧಾರ ಹಿನ್ನೆಲೆಯಲ್ಲಿ ಆಚಾರ್ಯುಲು ಅವರು ಮೋದಿ ಅವರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.

    ಮೂರು ತಿಂಗಳ ನಂತರ ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿದ ಬಳಿಕ ಗುಜರಾತ್ ಹೈಕೋರ್ಟ್ ಸಿಐಸಿಯ ಆದೇಶವನ್ನು ತಡೆಹಿಡಿದಿತ್ತು.

    ಫೆಬ್ರವರಿಯಲ್ಲಿ ನಡೆದ ಕೊನೆ ವಿಚಾರಣೆಗೆ ವಿಶ್ವವಿದ್ಯಾಲಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಿ ಅವರ ಪದವಿಗಳ ಬಗ್ಗೆ ಮಾಹಿತಿಯು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಈ ವಿಚಾರದಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ವಾದಿಸಿದ್ದರು.

  • ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ

    ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದಡಿ ಗುಜರಾತ್‍ನ 8 ಮಂದಿಯನ್ನು ಬಂಧಿಸಲಾಗಿದೆ. ಇದುವರೆಗೆ 185 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಎಪಿ (AAP), ಪ್ರಧಾನಿ ವಿರುದ್ಧ ದೇಶಾದ್ಯಂತ ಪೋಸ್ಟರ್ ಅಭಿಯಾನ ಆರಂಭಿಸಿ `ಮೋದಿ ಹಟಾವೋ, ದೇಶ್ ಬಚಾವೋ’ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಸರ್ಕಾರಿ ಆಸ್ತಿಗೆ ಹಾನಿ ಮಾಡಲು ಪ್ರಯತ್ನಿಸಿದ್ದರು ಎಂದು ಗುಜರಾತ್ (Gujarat) ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಎಎಪಿ ಮುಖ್ಯಸ್ಥ ಇಸುದನ್ ಗಧ್ವಿ, ಬಂಧಿತರೆಲ್ಲ ತಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡಿದ್ದಾರೆ. ಕಾರ್ಯಕರ್ತರ ಬಂಧನದಿಂದ ಬಿಜೆಪಿ (BJP) ಭಯಗೊಂಡಿದೆ ಎಂಬುದು ಅರ್ಥವಾಗುತ್ತದೆ. ಬಂಧನ ಬಿಜೆಪಿಯ ಸರ್ವಾಧಿಕಾರಿ (Dictatorship) ಧೋರಣೆಯನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ. ಪೊಸ್ಟರ್ ಅಂಟಿಸಿರುವ ಕಾರ್ಯಕರ್ತರನ್ನು ಬಂಧಿಸಿ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಷ್ಟೇ ಕಷ್ಟ ಕೊಟ್ಟರೂ ನಮ್ಮ ಪಕ್ಷದ ಕಾರ್ಯಕರ್ತರು ಹೋರಾಡುತ್ತಾರೆ ಎಂದು ಗಧ್ವಿ ಟ್ವೀಟ್ ಮಾಡಿದ್ದಾರೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಕಾರ್ಯಕರ್ತರ ಬಂಧನದ ಕುರಿತು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಬ್ರಿಟಿಷರ ವಿರುದ್ಧ ಪೋಸ್ಟರ್ ಹಾಕುವವರನ್ನು ಬಂಧಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.

    ಕಳೆದ ವಾರ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಸಾವಿರಾರು ಪೋಸ್ಟರ್ ದೆಹಲಿಯ ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದವು. ಪೊಲೀಸರು 49 ಎಫ್‍ಐಆರ್ ದಾಖಲಿಸಿಕೊಂಡು ಆರು ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಹೊಂದಿದ್ದರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

  • ಮೋದಿಗೆ ನಿದ್ರಾಹೀನತೆಯ ಕಾಯಿಲೆಯಿದೆ: ಕೇಜ್ರಿವಾಲ್

    ಮೋದಿಗೆ ನಿದ್ರಾಹೀನತೆಯ ಕಾಯಿಲೆಯಿದೆ: ಕೇಜ್ರಿವಾಲ್

    ನವದೆಹಲಿ: ಪ್ರಧಾನಿ ಮೋದಿಗೆ (Narendra Modi) ನಿದ್ರಾಹೀನತೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.

    ಆಮ್ ಆದ್ಮಿ ಪಕ್ಷದ (AAP) ಮೋದಿ ಹಟಾವೋ-ದೇಶ್ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ್ದೆ. ಆ ವೇಳೆ ಬಿಜೆಪಿ (BJP) ಕಾರ್ಯಕರ್ತ, ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ, ಕೇವಲ ಮೂರು ಗಂಟೆ ಮಲಗುತ್ತಾರೆ ಎಂದು ಹೇಳಿದ್ದರು. 3 ಗಂಟೆಗಳ ನಿದ್ದೆಯಿಂದ ಕೆಲಸ ಹೇಗೆ ಎಂದು ಕೇಳಿದಾಗ, ಆತ, ಮೋದಿಗೆ ದೈವಿಕ ಶಕ್ತಿ ಇದೆ ಎಂದು ಉತ್ತರಿಸಿದ್ದ. ಅದು ದೈವಿಕ ಶಕ್ತಿಯಲ್ಲ, ಇದು ನಿದ್ರಾಹೀನತೆ ಎಂದು ನಾನು ಹೇಳಿದೆ. ಏಕೆಂದರೆ ಪ್ರಧಾನಿ ದಿನವಿಡೀ ಕೋಪಗೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ದೆಹಲಿಯಲ್ಲಿ (Delhi) ಮೋದಿ ಹಠಾವೋ-ದೇಶ್ ಬಚಾವೋ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ರಿಟಿಷ್ ಆಳ್ವಿಕೆಯಲ್ಲೂ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ 138 ಎಫ್‍ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಜನರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧಿಸಿ, ಸೋಲಬೇಕು ಎಂಬುದೇ ನನ್ನ ಆಸೆ: ಕೆ.ಎಸ್ ಈಶ್ವರಪ್ಪ

    ಕರ್ನಾಟಕ (Karnataka) ಸರ್ಕಾರವನ್ನು 40% ಸರ್ಕಾರ ಎಂದು ಕರೆಯಲಾಗುತ್ತದೆ. ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರ ಬರೆದು ಸಹಾಯ ಕೋರಿದರು. ಆದರೆ ಮೋದಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ: ಬಾಬುರಾವ್ ಚಿಂಚನಸೂರ್

  • ದೆಹಲಿ ಬಜೆಟ್ ಅನ್ನು ತಡೆಯಬೇಡಿ : ಮೋದಿಗೆ ಕೇಜ್ರಿವಾಲ್ ಪತ್ರ

    ದೆಹಲಿ ಬಜೆಟ್ ಅನ್ನು ತಡೆಯಬೇಡಿ : ಮೋದಿಗೆ ಕೇಜ್ರಿವಾಲ್ ಪತ್ರ

    ನವದೆಹಲಿ: ದೆಹಲಿ ಬಜೆಟ್ (Delhi Budget) ಅನ್ನು ತಡೆಯಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ.

    ಮಂಗಳವಾರ ನಿಗದಿಯಾಗಿದ್ದ ದೆಹಲಿ ಸರ್ಕಾರದ 2023-24ನೇ ಸಾಲಿನ ಬಜೆಟ್‍ನ ಮಂಡನೆಯನ್ನು ಕೇಂದ್ರ ಸರ್ಕಾರವು ವಿವಿಧ ಕಾರಣಗಳನ್ನು ನೀಡಿ ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಮೋದಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?: ದೇಶದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಬಜೆಟ್ ಅನ್ನು ನಿಲ್ಲಿಸಲಾಗಿದೆ. ನೀವು ದೆಹಲಿ ಜನರ ಮೇಲೆ ಏಕೆ ಕೋಪಗೊಂಡಿದ್ದೀರಿ. ದೆಹಲಿಯ ಜನರು ತಮ್ಮ ಬಜೆಟ್ ಅನ್ನು ಅಂಗೀಕರಿಸಲು ಕೈಜೋಡಿಸಿ ಎಂದು ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.

    ದೆಹಲಿಯಲ್ಲಿ ತಲಾ ಆದಾಯ ಹೆಚ್ಚಾಗಿದೆ. ಪ್ರತಿನಿತ್ಯದ ಎಲ್ಲ ಅಡೆತಡೆಗಳನ್ನು ಮೀರಿ ದೆಹಲಿಯ ಆಡಳಿತ ಉತ್ತಮವಾಗಿದೆ. ಯಾವುದೇ ಅಡತಡೆಗಳಿಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಒಟ್ಟಾಗಿ ಕೆಲಸ ಮಾಡಿದ್ದರೆ ದೆಹಲಿಯ ಅಭಿವೃದ್ಧಿಯನ್ನು ಊಹಿಸಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ

    ಕೇಂದ್ರವು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಬಜೆಟ್ ಅನ್ನು ಮರುಪರಿಶೀಲಿಸುವಂತೆ ಕೇಳಿದೆ. ಆಪ್ ಸರ್ಕಾರವನ್ನು ಜಾಹೀರಾತುಗಳಿಗೆ ಹೆಚ್ಚಿನ ಹಂಚಿಕೆ, ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಉಪಕ್ರಮಗಳಿಗೆ ನಿಗದಿಪಡಿಸಿ, ಕಡಿಮೆ ಹಣದ ಬಜೆಟ್ ಬಗ್ಗೆ ವಿವರಿಸಲು ಕೇಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್