Tag: Arvind Kejriwal

  • ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ನವದೆಹಲಿ: ಬಿಜೆಪಿಯ ‘ಶೀಷ್‌ ಮಹಲ್‌’ (Sheesh Mahal) ಆರೋಪ, ಹೊಸ ಅಬಕಾರಿ ನೀತಿ (Liquor Policy) ಹಗರಣದಲ್ಲಿ ಘಟಾನುಘಟಿ ನಾಯಕರೇ ಜೈಲುಪಾಲು.. ಹೀಗೆ ಆಡಳಿತಾವಧಿಯಲ್ಲಿ ಕೊನೇ ಘಳಿಗೆಯಲ್ಲಿ ಎದುರಾದ ಆರೋಪಗಳೇ ದೆಹಲಿಯಲ್ಲಿ ಆಪ್‌ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗಿದೆ.

    ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆಡಳಿತಾರೂಢ ಎಎಪಿ ಸೋಲಿಗೆ ಕಾರಣಗಳೇನು? ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ

    ಆಡಳಿತ ವಿರೋಧಿ
    2015 ಮತ್ತು 2020 ರ ಚುನಾವಣೆಗಳಲ್ಲಿ ದೆಹಲಿಯಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಿತು. ಎರಡು ಅವಧಿಗಳಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೆಲಸಗಳು ಆದವು. ವಿದ್ಯುತ್ ಮತ್ತು ನೀರಿನ ಸಬ್ಸಿಡಿಗಳು ಮತದಾರರನ್ನು ಸಂತೋಷಪಡಿಸಿದವು. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರೂ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೆಲ ಕಂಡುಕೊಳ್ಳಲು ಹೆಣಗಾಡಿತು.

    ಕಾಲಾನಂತರದಲ್ಲಿ, ದೆಹಲಿಯ ವಾಯುಮಾಲಿನ್ಯ ಸೇರಿದಂತೆ ಈಡೇರದ ಭರವಸೆಗಳು ದೆಹಲಿ ನಿವಾಸಿಗಳನ್ನು ಕಾಡಲು ಪ್ರಾರಂಭಿಸಿದವು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯನಿರ್ವಹಣೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆಡಳಿತಾರೂಢ ಎಎಪಿ ಆರೋಪಿಸಿತು. ಆದರೆ, 10 ವರ್ಷ ಆಡಳಿತ ನಡೆಸಿದ ಎಎಪಿ ನೆಪವಾಗಿ ಹೀಗೆ ಆರೋಪ ಮಾಡುತ್ತಿದೆ ಎಂದೇ ಜನರು ಭಾವಿಸಿದರು. ಕೇಂದ್ರದೊಂದಿಗೆ ಎಎಪಿಯ ನಿರಂತರ ಜಟಾಪಟಿ ಹೊತ್ತಿನಲ್ಲೇ ಬಿಜೆಪಿಯ ‘ಡಬಲ್ ಎಂಜಿನ್’ ಭರವಸೆ ಜನಸಾಮಾನ್ಯರಿಗೆ ಇಷ್ಟವಾಯಿತು. ಅದೀಗ, ಫಲಿತಾಂಶದಲ್ಲಿ ಕಂಡುಬಂದಿದೆ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಶೀಷ್‌ ಮಹಲ್‌
    ಚುನಾವಣೆ ಸಮೀಪದ ಹೊತ್ತಲ್ಲೇ, ಕೇಜ್ರಿವಾಲ್‌ ಮತ್ತು ದೆಹಲಿ ಸಿಎಂ ಅತಿಶಿ ಅವರಿಗೆ ನೀಡಿದ್ದ ಬಂಗ್ಲೆ (ಶೀಷ್‌ ಮಹಲ್)‌ ವಿಚಾರವಾಗಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯಿತು. ಈ ಶೀಷ್‌ ಮಹಲ್‌ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಯಿತು. ಚುನಾವಣೆ ಹೊತ್ತಲ್ಲೇ ಬಿಜೆಪಿಯ ಗಂಭೀರ ಆರೋಪವು ಎಎಪಿಗೆ ನುಂಗಲಾರದ ತುತ್ತಾಗಿತ್ತು.

    ದೆಹಲಿ ಮುಖ್ಯಮಂತ್ರಿ ಕಚೇರಿ ನಿರ್ಮಾಣಕ್ಕೆ 33 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಮೂರು ಬಾರಿ ದುಬಾರಿ ವಸ್ತುಗಳನ್ನು ಬಳಸಿಯೇ ಈ ಮನೆ ನವೀಕರಣ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದು ಕೂಡ ದೆಹಲಿ ಚುನಾವಣಾ ಫಲಿತಾಂಶದಲ್ಲಿ ಪರಿಣಾಮ ಬೀರಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ: ಅಮಿತ್ ಶಾ

    ಬಿಜೆಪಿಯ ‘ಶೀಷ್‌ ಮಹಲ್’ ಆರೋಪಕ್ಕೆ ‘ರಾಜಮಹಲ್’ ಎಂಬ ಪ್ರತ್ಯಾರೋಪವನ್ನು ಎಎಪಿ ಆಗ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತ ಜೀವನಶೈಲಿ ನಡೆಸುತ್ತಿದ್ದಾರೆಂದು ಪ್ರತಿದಾಳಿ ನಡೆಸಿತ್ತು. ಆದರೆ, ಬಿಜೆಪಿಯ ನಿರಂತರ ಪ್ರಚಾರವು ಮತದಾರರ ಮೇಲೆ ಪ್ರಭಾವ ಬೀರಿದೆ.

    ಹೊಸ ಅಬಕಾರಿ ನೀತಿ ಹಗರಣ
    ದೆಹಲಿ ಆಡಳಿತಾವಧಿಯಲ್ಲಿ ಎಎಪಿ ವಿರುದ್ಧ ಕೇಳಿಬಂದ ಆರೋಪ ಅಬಕಾರಿ ನೀತಿ ಹಗರಣ. ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಮದ್ಯ ನೀತಿಯ ಸುತ್ತಲಿನ ಭ್ರಷ್ಟಾಚಾರ ಆರೋಪಗಳು ಎಎಪಿಯಲ್ಲಿ ಕೋಲಾಹಲ ಸೃಷ್ಟಿಸಿತು. ಹೊಸ ನೀತಿಯು ಮದ್ಯದ ಬಾಟಲಿಗಳ ಮೇಲೆ ‘ಒಂದನ್ನು ಖರೀದಿಸಿದರೆ, ಮತ್ತೊಂದು ಉಚಿತ’ ಎಂದು ಬರೆದು ನೀಡುತ್ತಿದೆ. ಕೇಜ್ರಿವಾಲ್ ಸರ್ಕಾರವು ‘ದೆಹಲಿಯನ್ನು ಕುಡುಕರ ನಗರವನ್ನಾಗಿ ಪರಿವರ್ತಿಸುತ್ತಿದೆ’ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ, ಮದ್ಯ ನೀತಿ ಹಗರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ದೂರಿತ್ತು. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಕೇಂದ್ರ ಸಂಸ್ಥೆಗಳ ತನಿಖೆಗಳು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಉನ್ನತ ನಾಯಕರನ್ನು ಬಂಧಿಸಲು ಕಾರಣವಾಯಿತು. ಸಿಸೋಡಿಯಾ ಬಂಧನದ ಬಳಿಕ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಎಎಪಿ ತನ್ನ ಸಂಪುಟವನ್ನು ಪುನರ್ರಚಿಸಬೇಕಾಯಿತು. ನಂತರ ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಐದು ತಿಂಗಳು ಜೈಲಿನಲ್ಲಿಯೇ ಇದ್ದರು. ಪ್ರಮುಖ ನಾಯಕರ ಬಂಧನವು ಎಎಪಿ ಪ್ರಬಲ್ಯ ಕಳೆದುಕೊಳ್ಳಲು ಕಾರಣವಾಯಿತು.

    ಈ ಎಲ್ಲಾ ಕಾರಣಗಳು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕುರ್ಚಿ ಕಳೆದುಕೊಳ್ಳಲು ಕಾರಣವಾಯಿತು. ಆಪ್‌ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಚುನಾವಣೆ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಬಿಜೆಪಿ ನೀಡಿದ ಭರವಸೆಗಳು ಕೆಲಸ ಮಾಡಿವೆ. ದೇಶದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿ ಮಧ್ಯಮ ವರ್ಗದ ಜನರಿದ್ದಾರೆ. ಬಜೆಟ್‌ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಿದ್ದು, ಬಿಜೆಪಿಗೆ ವರದಾನವಾಗಿದೆ. ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

  • ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

    ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

    – ವೈರಲ್‌ ಆಯ್ತು ‘ದ್ರೌಪದಿ ವಸ್ತ್ರಾಪಹರಣ’ ಪೋಸ್ಟ್‌

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಹೀನಾಯ ಸೋಲನುಭವಿಸಿದ ಎಎಪಿಯನ್ನು ಕೌರವರಿಗೆ ಹೋಲಿಸಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Maliwal) ಟಾಂಗ್‌ ಕೊಟ್ಟಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ತನ್ನ ದಶಕದ ಆಳ್ವಿಕೆಯ ಅಂತ್ಯವನ್ನು ಎಎಪಿ ಕಂಡಿದೆ. ಆಪ್‌ ಸೋಲಿಗೆ ಟಕ್ಕರ್‌ ಕೊಡಲು ಸ್ವಾತಿ ಮಲಿವಾಲ್ ಹಾಕಿರುವ ‘ದ್ರೌಪದಿ’ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಮಹಾಕಾವ್ಯ ಮಹಾಭಾರತದ ದ್ರೌಪದಿಯ ‘ಚೀರ್‌ಹರನ್’ (ವಸ್ತ್ರಾಪಹರಣ) ಚಿತ್ರಿಸುವ ವರ್ಣಚಿತ್ರವನ್ನು ಒಳಗೊಂಡ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಲಿವಾಲ್‌ ಹಂಚಿಕೊಂಡಿದ್ದಾರೆ.

    ಎಎಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋತಿದ್ದಾರೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.

    ಒಂದು ಕಾಲದಲ್ಲಿ ಕೇಜ್ರಿವಾಲ್ ಅವರ ನಿಕಟವರ್ತಿಯಾಗಿದ್ದ ಮಲಿವಾಲ್ ಇತ್ತೀಚಿನ ದಿನಗಳಲ್ಲಿ ಅವರ ಅತ್ಯಂತ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕೇಜ್ರಿವಾಲ್ ಅವರ ನಾಯಕತ್ವ ಮತ್ತು ಅವರ ಪಕ್ಷದ ನಡೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ಹ್ಯಾಟ್ರಿಕ್‌ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್‌ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ

    2024ರ ಮೇ ತಿಂಗಳಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭಾವ್‌ ಕುಮಾರ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಲಿವಾಲ್ ಆರೋಪಿಸಿದ್ದರು. ತುರ್ತು ಸಮಸ್ಯೆಗಳನ್ನು ಚರ್ಚಿಸಲು ಭೇಟಿ ನೀಡಿದ್ದರು. ಆಗ ಕೇಜ್ರಿವಾಲ್‌ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ಬಿಭಾವ್‌ ನನ್ನ ಮೇಲೆ ದೌರ್ಜನ್ಯ ಎಸಗಿದ್ದರೆಂದು ಮಲಿವಾಲ್‌ ಬೇಸರ ಹೊರಹಾಕಿದ್ದರು. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು.

  • ದೆಹಲಿ ಚುನಾವಣಾ ಫಲಿತಾಂಶದಿಂದ ಕೇಜ್ರಿವಾಲ್ ಮುಖವಾಡ ಕಳಚಿಬಿದ್ದಿದೆ: ವಿಜಯೇಂದ್ರ

    ದೆಹಲಿ ಚುನಾವಣಾ ಫಲಿತಾಂಶದಿಂದ ಕೇಜ್ರಿವಾಲ್ ಮುಖವಾಡ ಕಳಚಿಬಿದ್ದಿದೆ: ವಿಜಯೇಂದ್ರ

    ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ (AAP) ಅರವಿಂದ ಕೇಜ್ರಿವಾಲ್ (Arvind Kejriwal ) ಅವರ ಮುಖವಾಡ ಚುನಾವಣಾ ಫಲಿತಾಂಶದಿಂದ ಕಳಚಿಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಹೇಳಿದ್ದಾರೆ.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷದ ಪರ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ದೆಹಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಪ್ರಬುದ್ಧ ಮತದಾರರು ದೆಹಲಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತದಾರರು ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಹ್ಯಾಟ್ರಿಕ್‌ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್‌ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ

    ಮನೀಷ್ ಸಿಸೋಡಿಯಾ ಅವರೂ ಸೋಲುತ್ತಿದ್ದಾರೆ. ಲಿಕ್ಕರ್, ಶೀಶ್ ಮಹಲ್ ಹಗರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಪ್ ಬಣ್ಣ ಬಯಲಾಗಿದೆ. ಇನ್ನೂ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲೂ ಅದು ಶೂನ್ಯ ಸಂಪಾದನೆ ಮಾಡಿತ್ತು. ಹರಿಯಾಣ, ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ಸಿಗೆ ಮುಖಭಂಗ ಆಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

    ಗ್ಯಾರೆಂಟಿಗಳೆಲ್ಲ ತಾತ್ಕಾಲಿಕ, ಆ ತಾತ್ಕಾಲಿಕ ಗ್ಯಾರೆಂಟಿಗಿಂತ ದೃಢ ನಾಯಕತ್ವ ಕೊಡುವ ನರೇಂದ್ರ ಮೋದಿಜೀ ನೇತೃತ್ವದ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ದೆಹಲಿ ಮತದಾರರಿಂದ ಮತ್ತೊಮ್ಮೆ ರುಜುವಾತಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಗೆಲುವು

  • ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

    ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

    ನವದೆಹಲಿ: ಬಿಜೆಪಿಗೆ (BJP) ನೀಡಿದ ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ಪ್ರೀತಿಯ ಸಹೋದರ ಸಹೋದರಿಯರಿಗೆ ನಾನು ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೊಂಡಿದ್ದಾರೆ.

    ದೆಹಲಿ ಚುನಾವಣೆಯಲ್ಲಿ ( Delhi Election) ಪಕ್ಷ ಬಹುಮತ ಪಡೆದ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ ದೆಹಲಿಯನ್ನು ಅಭಿವೃದ್ಧಿಗೆ, ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಣೆಗೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿಯು ಪ್ರಮುಖ ಪಾತ್ರವಹಿಸುತ್ತದೆ. ಜನಶಕ್ತಿಯೇ ಸರ್ವಶ್ರೇಷ್ಠವಾದದ್ದು, ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

    ಪಕ್ಷದ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ಈ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ನಾವು ಇನ್ನೂ ಹೆಚ್ಚು ಹುರುಪಿನಿಂದ ಕೆಲಸ ಮಾಡುತ್ತೇವೆ ಮತ್ತು ದೆಹಲಿಯ ಜನರಿಗೆ ಸೇವೆ ಸಲ್ಲಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    ದೆಹಲಿಯಲ್ಲಿ ಕಳೆದ 2 ಅವಧಿಯಲ್ಲಿ ಆಡಳಿತ ನಡೆಸಿದ್ದ ಎಎಪಿ (AAP) ಅಧಿಕಾರ ಕಳೆದುಕೊಂಡಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ (Congress) ಸತತ ಮೂರನೇ ಭಾರಿಗೆ ಯಾವುದೇ ಕ್ಷೇತ್ರಗಳನ್ನೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ.

  • ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

    ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

    ನವದೆಹಲಿ: ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ಸೋಲು ಕಂಡಿದ್ದಾರೆ. ಆದಾಗ್ಯೂ ತನ್ನ ತಾಯಿಯನ್ನು ಸೋಲಿಸಿದ ಕೇಜ್ರಿವಾಲ್‌ (Arvind Kejriwal) ವಿರುದ್ಧ ಸೇಡು ತೀರಿಕೊಳ್ಳುವಲ್ಲಿ ಸಂದೀಪ್‌ ದೀಕ್ಷಿತ್‌ (Sandeep Dikshit) ಯಶಸ್ವಿಯಾಗಿದ್ದಾರೆ.

    ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಜ್ರಿವಾಲ್‌, ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇತ್ತ 3ನೇ ಸ್ಥಾನದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ 4,568 ಮತಗಳನ್ನ ಪಡೆದುಕೊಂಡಿದ್ದಾರೆ. ಆಪ್‌ ಪಾಲಿನ ಮತಗಳನ್ನು ತಿಂದುಹಾಕಿರುವ ಸಂದೀಪ್‌ ದೀಕ್ಷಿತ್‌, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ಸತತ 3ನೇ ಬಾರಿಗೆ ನವದೆಹಲಿ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಜ್ರಿವಾಲ್‌ ಒಟ್ಟು 25,999 ಮತಗಳನ್ನು ಪಡೆದಿದ್ದರೆ, ಸಂದೀಪ್‌ ದೀಕ್ಷಿತ್‌ 4,568 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಒಟ್ಟು 30,088 ಮತಗಳನ್ನು ಪಡೆದುಕೊಂಡಿದ್ದು 4,089 ಮತಗಳಿಂದ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    1993ರಿಂದ ಸತತವಾಗಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಶೀಲಾ ದೀಕ್ಷಿತ್‌ ಅವರನ್ನ ಅರವಿಂದ್‌ ಕೇಜ್ರಿವಾಲ್‌ 2013ರಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲಿಸಿದ್ದರು. 25,864 ಮತಗಳ ಅಂತರದಿಂದ ಕೇಜ್ರಿವಾಲ್‌ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ

    ಲೋಕಸಭಾ ಚುನಾವಣೆ ವೇಳೆ INDIA ಒಕ್ಕೂಟದ ಭಾಗವಾಗಿದ್ದ ಕಾಂಗ್ರೆಸ್‌ ಮತ್ತು ಆಪ್‌ ದೆಹಲಿಯಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡಿತ್ತು. ಸದ್ಯದ ಚುನಾವಣಾ ಫಲಿತಾಂಶ ಗಮನಿಸಿದರೆ ಆಪ್‌ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಮತಗಳನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಾಲಾಗಿವೆ. ಹೀಗಾಗಿ ಇಂಡಿಯಾ ಮೈತ್ರಿ ಕಡಿದುಕೊಂಡು ಆಪ್‌ ತಪ್ಪು ಮಾಡಿತೆ ಎಂಬ ಪ್ರಶ್ನೆಯೂ ಎದ್ದಿದೆ.

  • ದೆಹಲಿ ಗದ್ದುಗೆ ಏರಲು ಬಿಜೆಪಿ ಸಜ್ಜು – ಗೆಲುವಿಗೆ ಇಲ್ಲಿವೆ 5 ಕಾರಣಗಳು

    ದೆಹಲಿ ಗದ್ದುಗೆ ಏರಲು ಬಿಜೆಪಿ ಸಜ್ಜು – ಗೆಲುವಿಗೆ ಇಲ್ಲಿವೆ 5 ಕಾರಣಗಳು

    ನವದೆಹಲಿ: ಬಿಜೆಪಿಯ (BJP) ʻಡಬಲ್ ಎಂಜಿನ್ʼ ದೆಹಲಿಗೆ (Delhi) ಪ್ರವೇಶಿಸಲಿದೆ. ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕೇಂದ್ರಿಕರಿಸಿದ್ದು, ಸ್ಪಷ್ಟವಾದ ಬೆಂಬಲ ಬಿಜೆಪಿಗೆ ಸಿಕ್ಕಿದ್ದು, ಎಎಪಿಗೆ (AAP) ಭಾರೀ ಹೊಡೆತ ನೀಡಿದೆ.

    ಎಎಪಿಯ ಎಲ್ಲಾ ಹಿರಿಯ ನಾಯಕರು ಜೈಲಿಗೆ ಹೋಗಿ ಬಂದಿದ್ದು ಆಡಳಿತ ವಿರೋಧಿ ಅಲೆ ಮತ್ತು ಆಂತರಿಕ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರದ ಚುಕ್ಕಾಣೆ ನೀಡಲು ಮುಂದಾದ ಮತದಾರರ ಮನಸ್ಸಿನ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

    ಮಧ್ಯಮ ವರ್ಗಕ್ಕೆ ಟ್ಯಾಕ್ಸ್‌ ಫ್ರೀ ಗಿಫ್ಟ್‌!
    ಎಎಪಿ ರಾಜಕೀಯ ಸ್ಥಿತಿಯ ಬಗ್ಗೆ ಮಧ್ಯಮ ವರ್ಗದವರಿಗೆ ಹತಾಶೆ ಉಂಟಾದಂತೆ ತೋರುತ್ತದೆ. 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಕಲ್ಯಾಣ ಯೋಜನೆಗಳು ಬಡವರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷವಾಗಿದೆ ಎಂಬ ಅಸಮಾಧಾನ ಮಧ್ಯಮ ವರ್ಗದ ಜನರಲ್ಲಿ ಬಂದಂತಿದೆ.

    ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ತಮ್ಮ ಭಾಷಣಗಳಲ್ಲಿ ಮಧ್ಯಮ ವರ್ಗದ ಜನರಿಗೆ ಯೋಜನೆಗಳನ್ನು ಘೋಷಿಸಿದರು. ಆದರೆ ಅದು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ.

    ಬಿಜೆಪಿ ಆರ್‌ಡಬ್ಲ್ಯೂಎ ಸಭೆಗಳು ಸೇರಿದಂತೆ ಹಲವಾರು ಸಂಪರ್ಕ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಆಕರ್ಷಿಸಿತು. ಅಲ್ಲದೇ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ತೆರಿಗೆ ಕಡಿತದ ಘೋಷಣೆ ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಧ್ಯಮ ವರ್ಗದ ಜನಸಂಖ್ಯೆ 45%ರಷ್ಟಿದೆ. ಬಿಜೆಪಿ ಈ ಮತಗಳನ್ನು ಸೆಳೆಯಲು ಯಶಸ್ವಿಯಾಗಿದೆ.

    ಯಾವುದೇ ಆಪ್‌ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂಬ ಘೋಷಣೆ
    ಬಿಜೆಪಿ ಈ ಹಿಂದೆ ಕಲ್ಯಾಣ ಯೋಜನೆಗಳನ್ನು ಉಚಿತ ಎಂದು ಅಪಹಾಸ್ಯ ಮಾಡಿದ್ದರೂ ಸಹ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಘೋಷಿಸಿತ್ತು. ಪ್ರಧಾನಿ ಮೋದಿಯವರೇ ಈ ಘೋಷಣೆ ಮಾಡಿದ್ದರು. ಇದು ಬಿಜೆಪಿಗೆ ಮತ ಚಲಾಯಿಸಿದರೆ ಬಡವರು ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಎಎಪಿಯ ಹೇಳಿಕೆಗೆ ಯಾವುದೇ ಮಹತ್ವ ಕೊಡದಂತೆ ಮಾಡಿತು.

    ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ
    ಎಎಪಿಯ ಜನಪ್ರಿಯತೆ ಕಡಿಮೆಯಾಗಲು ದೊಡ್ಡ ಕಾರಣವೆಂದರೆ ರಾಜಧಾನಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ. ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ರಾಷ್ಟ್ರ ರಾಜಧಾನಿಯಾದ್ಯಂತ ಮತದಾರರನ್ನು ಕೆರಳಿಸಿತ್ತು.

    ಎಡೆಬಿಡದ ಎಲ್‌ಜಿ-ಎಎಪಿ ಜಗಳ
    ಕಳಪೆ ರಸ್ತೆಗಾಗಿ ಎಲ್‌ಜಿ ಯೋಜನೆಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ಎಎಪಿ ಆರೋಪಿಸುತ್ತಿತ್ತು. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ದೆಹಲಿ ಸರ್ಕಾರ ಮತ್ತು ಗಮನಾರ್ಹ ಅಧಿಕಾರ ಹೊಂದಿರುವ ಎಲ್‌ಜಿ ನಡುವಿನ ಹೆಚ್ಚಿದ ದ್ವೇಷದಿಂದ ಜನ ರೋಸಿಹೋಗಿದ್ದರು.

    ಆಡಳಿತ ವಿರೋಧಿ ಅಲೆ
    2012 ರಲ್ಲಿ ರಚನೆಯಾದ ಎಎಪಿ ಸರ್ಕಾರ 2015 ರಿಂದ ನಿರಂತರವಾಗಿ ಅಧಿಕಾರದಲ್ಲಿದೆ. ಇನ್ನೂ ಆಡಳಿತ ವಿರೋಧಿ ಅಲೆಯ ಬಗ್ಗೆ ಎಎಪಿಗೆ ಅರಿವಿತ್ತು ಎಂಬುದು ಅದರ ಅಭ್ಯರ್ಥಿಗಳ ಪಟ್ಟಿಯಿಂದ ಸ್ಪಷ್ಟವಾಗಿದೆ. ಆದಾಗ್ಯೂ, ಕೊನೆಯ ಕ್ಷಣದ ಬದಲಾವಣೆಗಳು ಕೆಲವು ಅಭ್ಯರ್ಥಿಗಳ ಪ್ರಚಾರಕ್ಕೆ ಸಮಯ ಸಾಕಾಗಲಿಲ್ಲ.

  • ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ನವದೆಹಲಿ: ದೆಹಲಿಯಲ್ಲಿ (Delhi Election) ಎಎಪಿಗೆ (AAP) ಭಾರೀ ಹಿನ್ನಡೆಯಾದ ಬೆನ್ನಲ್ಲೇ ಈ ಜೀವಮಾನದಲ್ಲಿ ಬಿಜೆಪಿಗೆ (BJP) ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ.

    2023 ರಲ್ಲಿ ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, ಬಿಜೆಪಿ ಜೀವಮಾನದಲ್ಲಿ ಎಎಪಿಯನ್ನು ಎಂದಿಗೂ ಸೋಲಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಬಿಜೆಪಿ ಉದ್ದೇಶ ಎಎಪಿ ಸರ್ಕಾರವನ್ನು ಉರುಳಿಸುವುದಾಗಿದೆ. ನರೇಂದ್ರ ಮೋದಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸುತ್ತಿದ್ದಾರೆ. ಚುನಾವಣೆಗಳ ಮೂಲಕ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ನಾನು ನರೇಂದ್ರ ಮೋದಿ ಜಿ ಅವರಿಗೆ ಹೇಳಲು ಬಯಸುತ್ತೇನೆ, ಈ ಜನ್ಮದಲ್ಲಿ ನೀವು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಮ್ಮನ್ನು ಸೋಲಿಸಲು ನಿಮಗೆ ಇನ್ನೊಂದು ಜನ್ಮ ಬೇಕು ಎಂದಿದ್ದರು.

    ಹ್ಯಾಟ್ರಿಕ್‌ ಗೆಲುವಿನ ಕನಸುಕಂಡಿದ್ದ ಎಎಪಿಯ ಕನಸು ಭಗ್ನವಾಗಿದೆ. ಇದರಿಂದ ಎಎಪಿ ಕಚೇರಿಯಲ್ಲಿ ಮೌನ ಕವಿದಿದ್ದು, ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ. 27 ವರ್ಷದ ನಂತರ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್‌ ಕೇಜ್ರಿವಾಲ್‌ ಸೋತಿದ್ದಾರೆ. ಕೇಜ್ರಿವಾಲ್‌ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ 1800 ಮತಗಳಿಂದ ಗೆಲುವು ಸಾಧಿಸಿದ್ದಾರೆ.

  • Delhi Election 2025 Results | ಅರವಿಂದ್‌ ಕೇಜ್ರಿವಾಲ್‌ಗೆ ಸೋಲು

    Delhi Election 2025 Results | ಅರವಿಂದ್‌ ಕೇಜ್ರಿವಾಲ್‌ಗೆ ಸೋಲು

    ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ಸತತ 3ನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.

    ಕಳೆದ 2 ಚುನಾವಣೆಗಳಲ್ಲೂ ನವದೆಹಲಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಕೇಜ್ರಿವಾಲ್‌ ಸತತ 2 ಬಾರಿ ಸಿಎಂ ಆಗಿದ್ದರು. 3ನೇ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪರ್ವೇಶ್‌ ವಿರುದ್ಧ 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ಸತತ 3ನೇ ಬಾರಿಗೆ ನವದೆಹಲಿ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಜ್ರಿವಾಲ್‌ ಒಟ್ಟು 25,999 ಮತಗಳನ್ನು ಪಡೆದಿದ್ದರೆ, ಸಂದೀಪ್‌ ದೀಕ್ಷಿತ್‌ 4,568 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಒಟ್ಟು 30,088 ಮತಗಳನ್ನು ಪಡೆದುಕೊಂಡಿದ್ದು 4,089 ಮತಗಳಿಂದ ಗೆದ್ದು ಬೀಗಿದ್ದಾರೆ. ಕೇಜ್ರಿವಾಲ್‌, ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

    ಮದ್ಯ ನೀತಿ ಹಗರಣದಲ್ಲಿ ಭ್ರಷ್ಟಾಚಾರಾ ಆರೋಪದ ಮೇಲೆ ಜೈಲು ಸೇರಿದ ಕೇಜ್ರಿವಾಲ್‌ ರಾಜೀನಾಮೆ ಕೊಡಲು ಹಿಂದೇಟು ಹಾಕಿದರು. ಈ ವೇಳೆ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ಜೈಲುಪಾಲಾದರು. ಇನ್ನೇನು ಆಪ್‌ ಬಹುತೇಕ ನಾಮಾವಶೇಷವಾಯ್ತು ಅನ್ನೋ ಹೊತ್ತಿಗೆ ಜೈಲಿನಿಂದ ಕೇಜ್ರಿವಾಲ್‌ ಬಿಡುಗಡೆಯಾದರು. ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜನಾದೇಶ ಪಡೆದು ಆಯ್ಕೆಯಾದ ಬಳಿಕವೇ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವುದಾಗಿ ಶಪಥಗೈದಿದ್ದರು.

    ಈ ನಡುವೆ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ದೌರ್ಜನ್ಯ ಪ್ರಕರಣ ಸಹ ಸಂಕಷ್ಟ ತಂದೊಡ್ಡಿತು. ಪ್ರತಿ ಹಂತದಲ್ಲೂ ಲೆಪ್ಟಿನೆಂಟ್ ಗರ್ವನರ್ ಜೊತೆಗೆ ಸಂಘರ್ಷ ನಡೆಯುತ್ತಲೇ ಇತ್ತು. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಶೀಷ್ ಮಹಲ್ ಆರೋಪ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಖುದ್ದು ಪ್ರಧಾನಿ ಮೋದಿ ಅವರೇ ಶೀಷ್‌ಮಹಲ್‌ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಅಕ್ರಮ ಮಾಡಿರುವುದಾಗಿ ಆರೋಪಿಸಿದ್ದರು. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    ಹೀಗೆ ಆಪ್ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಲು ಸಾಲು ಸವಾಲು ಎದುರಿಸಬೇಕಾಯ್ತು. ಕೊನೆಗೆ ಜನರಿಂದ ಮಾನ್ಯತೆ ಪಡೆಯದೇ ಮತ್ತೆ ಸಿಎಂ ಕುರ್ಚಿ ಮೇಲೆ ಕೂರಲ್ಲ ಎಂದು ಶಪಥ ಮಾಡಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದೀಗ ಈ ಹೋರಾಟದಲ್ಲಿ ಕೇಜ್ರಿವಾಲ್‌ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಆರ್‌. ಅಶೋಕ್‌

  • ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ: ಜಗದೀಶ್ ಶೆಟ್ಟರ್

    ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ: ಜಗದೀಶ್ ಶೆಟ್ಟರ್

    – ದಿಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ
    – ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ

    ಹುಬ್ಬಳ್ಳಿ: ದಿಲ್ಲಿ (Delhi) ಜನರ ಆರ್ಶೀವಾದ ಬಿಜೆಪಿಗೆ (BJP) ಸಿಕ್ಕಿದೆ. ಕೇಜ್ರಿವಾಲ್ (Arvind Kejriwal) ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.

    ದೆಹಲಿ ಚುನಾವಣಾ ಫಲಿತಾಂಶದ (Delhi Election Results) ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಣ್ಣಾ ಹಜಾರೆ ಹೋರಾಟವನ್ನು ಬಳಸಿಕೊಂಡು ಕೇಜ್ರಿವಾಲ್ ಅಧಿಕಾರದ ಗದ್ದುಗೆ ಏರಿದ್ದರು. ಅವರ ಆಡಳಿತದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಜನರಿಗೆ ನಿರಾಸೆಯಾಗಿದೆ. ಹೀಗಾಗಿ ದಿಲ್ಲಿಯ ಜನ ಬಿಜೆಪಿ ಕೈ ಹಿಡಿದಿದ್ದಾರೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್‌ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಆರ್‌. ಅಶೋಕ್‌

    ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಅದು ನಮ್ಮ ತಪ್ಪಿನಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: 2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ

    ತೆಲಂಗಾಣ, ಕರ್ನಾಟಕ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ ಅಲ್ಲಿ ಮಾತ್ರ ಒಳ್ಳೆ ಕೆಲಸಗಳು ಆಗಿದೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ತಂದಿದ್ದಾರೆ. ದೆಹಲಿ ಜನ ಮೋದಿ ನಾಯಕತ್ವ ಒಪ್ಪಿದ್ದಾರೆ. ದೆಹಲಿಯನ್ನು ಅಭಿವೃದ್ಧಿ ಮಾಡೋದಾಗಿ ಮೋದಿ ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನ ಕೊಟ್ಟಿದ್ರು: ಅಣ್ಣ ಹಜಾರೆ

    ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಭಿನ್ನಮತಕ್ಕೆ ನಾಯಕರು ಇತಿಶ್ರೀ ಹಾಡುತ್ತಾರೆ. ಅಧ್ಯಕ್ಷರ ಚುನಾವಣೆ ಬಂದಿದೆ. ಸರ್ವಾನುಮತದಿಂದ ಅಧ್ಯಕ್ಷರ ಆಯ್ಕೆ ಆಗಬೇಕು. ಚುನಾವಣೆ ಅನ್ನೋದು ಒಂದು ಪ್ರೊಸೆಸ್ ಎಂದರು. ಇದನ್ನೂ ಓದಿ: Delhi Election Results | ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್‌ – `ಕೈʼ ನಾಯಕರಿಗೆ ಮುಖಭಂಗ

  • ಕೇಜ್ರಿವಾಲ್‌ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಆರ್‌. ಅಶೋಕ್‌

    ಕೇಜ್ರಿವಾಲ್‌ ಯಮುನಾ ನದಿಗೆ ಕಳಂಕ ತಂದಿದ್ದೇ ಆಪ್‌ ಸೋಲಿಗೆ ಕಾರಣ: ಆರ್‌. ಅಶೋಕ್‌

    – ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದ ವಿಪಕ್ಷ ನಾಯಕ

    ಬೆಂಗಳೂರು: ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ ಕಳಂಕ ಹಾಕಿಬಿಟ್ರು. ಅಲ್ಲದೇ ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ರು. ಇದರ ಶಾಪ ತಟ್ಟಿದೆ. ಹಾಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ (R Ashoka ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್‌, ಕಾರು, ಮಫ್ಲರ್‌, ನಿಮಿಷ ನಿಮಿಷಕ್ಕೂ ಕೆಮ್ಮೋದು, 2 ಬೆಡ್‌ರೂಮ್‌ ಫ್ಲ್ಯಾಟ್‌, ಈಗ ಶೀಷ್‌ ಮಹಲ್‌ ಅದರಲ್ಲಿ 25 ರೂಮ್‌ಗಳಿವೆ. ಕಾರು, ಎಸ್ಕಾರ್ಟ್‌ ಹೀಗೆ ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Delhi Election Results | ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್‌ – `ಕೈʼ ನಾಯಕರಿಗೆ ಮುಖಭಂಗ

    ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ (Yamuna River) ಮೇಲೆ ಕೇಜ್ರಿವಾಲ್ ಕಳಂಕ ಹಾಕಿಬಿಟ್ರು. ಯಮುನಾ ನದಿ ಒಂದು ದಿನಕ್ಕೆ ಮಲಿನ ಆಗಿಲ್ಲ. ದೆಹಲಿ ಜನ ಪ್ರತಿದಿನ ಕುಡಿಯುತ್ತಿದ್ದ, ಗಂಗೆ ಅಂತ ಪೂಜೆ ಮಾಡ್ತಿದ್ದ ನೀರಿನ ಮೇಲೆಯೇ ಕಳಂಕ ತಂದರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ. ಕೇಜ್ರಿವಾಲ್‌ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿಬಿಟ್ಟರು. ಇದೇ ಅವರ ಸೋಲಿಗೆ ಕಾರಣ ಎಂದು ನುಡಿದಿದ್ದಾರೆ.

    ಯಾರೇ ಸಿಎಂ ಜೈಲಿಗೆ ಹೋದಾಗ ರಾಜೀನಾಮೆ ಕೊಟ್ಟು ಅವರದ್ದೇ ಪಕ್ಷದ ಮತ್ತೊಬ್ಬರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ ಇವರು 2 ತಿಂಗಳು ಜೈಲಿನಲ್ಲಿದ್ದುಕೊಂಡು ಆಡಳಿತ ಸ್ಥಗಿತಗೊಳಿಸಿದ್ರು, ಅದರ ಶಾಪ ತಟ್ಟಿದೆ. ಜೊತೆಗೆ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟವೇ ಕೇಜ್ರಿವಾಲ್‌ ದೊಡ್ಡ ಕಳ್ಳ, ಭ್ರಷ್ಟಾಚಾರಿ ಎಂದು ಹೇಳಿದಾಗ ಜನರಿಗೆ ಅರ್ಥವಾಯ್ತು. ಮಳ್ಳಿತರ ಬಂದು ಕಳ್ಳತನ ತರ ಆಗಿದ್ದಾನೆ ಎಂದು ಕಾಂಗ್ರೆಸ್‌ ಆಪಾದನೆ ಮಾಡಿತು. ಜೊತೆಗೆ ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿ ಗೆಲುವಿಗೆ ಕಾರಣ ಎಂದು ಅಶೋಕ್‌ ಹೇಳಿದ್ದಾರೆ.  ಇದನ್ನೂ ಓದಿ: ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ಇಂಡಿಯಾ ಒಕ್ಕೂಟ ಒಡೆದು ಛಿದ್ರವಾಗಿದೆ. ಅಖಿಲೇಶ್‌ ಯಾದವ್‌, ಒಮರ್‌ ಅಬ್ದುಲ್ಲಾ ಎಲ್ಲರೂ ಕಾಂಗ್ರೆಸ್ಸನ್ನ ಟೀಕೆ ಮಾಡ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಸಹ ಈಗ ಪಾರ್ಟಿಮೆಂಟ್‌ ಪ್ರವೇಶಿಸಿದ್ದು, ವಂಶಪಾರಂಪರ್ಯ ರಾಜಕಾರಣ ಮುಂದುವರಿಸಿದ್ದಾರೆ. ಮೋದಿ ಜನಕ್ಕೋಸ್ಕರ ಕೆಲಸ ಮಾಡಿದ್ರೆ ಸೋನಿಯಾ, ರಾಹುಲ್‌, ಪ್ರಿಯಾಂಕ ತಮ್ಮ ಕುಟುಂಬಕ್ಕಾಗಿ ಮಾಡ್ತಿದ್ದಾರೆ ಎನ್ನೋದು ಜಗಜ್ಜಾಹೀರಾಗಿದೆ. ಆದ್ದರಿಂದ ಜನ ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಅಧಿಕಾರ ಕೊಟ್ಟಿದ್ದಾರೆ. ದೆಹಲಿ ಜನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: 2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ