Tag: Arvind Kejriwal

  • ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಮತ್ತು ಸಚಿವ ಅತಿಶಿ (Atishi) ಇಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅತಿಶಿ, ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೂ ಅವರು ರಾಷ್ಟ್ರದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಬಂಧನಗೊಂಡ ದಿನದಿಂದ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶವೇ ಅಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

    ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

  • ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ಬಿಜೆಪಿ ಸೇರಿ ಇಲ್ಲವೇ ಬಂಧನಕ್ಕೆ ಸಿದ್ಧರಾಗಿ – ಆಪ್ ಸಚಿವೆ ಅತಿಶಿ ಗಂಭೀರ ಆರೋಪ

    ನವದೆಹಲಿ: ತಮ್ಮ ಆಪ್ತ ಸಹಾಯಕರೊಬ್ಬರ ಮೂಲಕ ಪಕ್ಷ ಸೇರುವಂತೆ ನನ್ನನ್ನು ಬಿಜೆಪಿ ಸಂಪರ್ಕಿಸಿದೆ. ಬಿಜೆಪಿ (BJP) ಸೇರದಿದ್ದರೆ ಮುಂಬರುವ ಒಂದು ತಿಂಗಳಲ್ಲಿ ಇಡಿ (Enforcement Directorate) ನಿಮ್ಮನ್ನು ಬಂಧಿಸಲಿದೆ ಎಂದು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ  (Atishi) ಗಂಭೀರ ಆರೋಪ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಜೈಲು ಸೇರಿದರೂ, ಆಮ್ ಆದ್ಮಿ ಪಕ್ಷವು (Aam Aadmi Party) ಇನ್ನೂ ಒಗ್ಗಟ್ಟಿನಿಂದ ಪ್ರಬಲವಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ಅದರ ಮುಂದಿನ ಎಲ್ಲಾ ನಾಯಕರನ್ನು ಹತ್ತಿಕ್ಕಲು ಮತ್ತು ಅವರನ್ನು ತೊಡೆದುಹಾಕಲು ಬಿಜೆಪಿ ಬಯಸಿದೆ. ಲೋಕಸಭಾ ಚುನಾವಣೆಗೂ ಮುನ್ನ ನನ್ನನ್ನೂ ಸೇರಿದಂತೆ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾರ ಬಂಧನವಾಗಲಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ

    ಒಂದೂವರೆ ವರ್ಷಗಳಿಂದ ಇಡಿ ಮತ್ತು ಸಿಬಿಐ ಬಳಿ ಇರುವ ಹೇಳಿಕೆಯ ಆಧಾರದ ಮೇಲೆ ಇಡಿ ಅಧಿಕಾರಿಗಳ ಸೋಮವಾರ ಸೌರಭ್ ಭಾರದ್ವಾಜ್ ಮತ್ತು ನನ್ನ ಹೆಸರನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಅವರು ಆಮ್ ಆದ್ಮಿ ಪಕ್ಷದ ಮುಂದಿನ ನಾಯಕತ್ವವನ್ನು ಜೈಲಿಗೆ ಹಾಕಲು ಯೋಜಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ (Arvind Kejriwal) ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಎರಡು ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳಿವೆ. ಪ್ರಜಾಪ್ರತಿನಿಧಿ ಕಾಯಿದೆಯು ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಸಾರ್ವಜನಿಕ ಪ್ರತಿನಿಧಿಯಾಗಿ ಉಳಿಯಲು ಸಾಧ್ಯವಿಲ್ಲ ಎನ್ನುತ್ತದೆ. ಅರವಿಂದ್ ಕೇಜ್ರಿವಾಲ್ ದೋಷಿ ಎಂದು ಸಾಬೀತಾಗಿಲ್ಲ. ಕೇಜ್ರಿವಾಲ್‍ಗೆ ದೆಹಲಿ ವಿಧಾನಸಭೆಯ ಅಗಾಧ ಬಹುಮತವನ್ನು ಹೊಂದಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಲು ಯಾವುದೇ ಕಾರಣವಿಲ್ಲ. ಅವರೇನಾದ್ರೂ ರಾಜೀನಾಮೆ ನೀಡಿದರೆ ಅದು ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿಗೆ ಅತ್ಯಂತ ಸರಳ ಮಾರ್ಗವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಮಧ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ – ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಸುಪ್ರೀಂ ಜಾಮೀನು

  • ಬಹುಶ:  ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

    ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್‌ (Sunita Kejriwal) ಹೇಳಿದ್ದಾರೆ.

    ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದನ್ನು ಖಂಡಿಸಿ ದೆಹಲಿಯಲ್ಲಿ INDIA ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

    ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ (BJP) ಹೇಳುತ್ತಿದೆ. ಕೇಜ್ರಿವಾಲ್ ರಾಜೀನಾಮೆ ನೀಡಬೇಕಾ? ದೇಶಕ್ಕಾಗಿ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಅನಿಸುತ್ತದೆ. ಹೋರಾಟದಲ್ಲಿ ಹುತಾತ್ಮರಾಗಿದ್ದ ಅವರು ಈಗಲೂ ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಎಲ್‌ಕೆ ಅಡ್ವಾಣಿ ನಿವಾಸದಲ್ಲೇ ಭಾರತ ರತ್ನ ಪ್ರದಾನ

    ಅರವಿಂದ್ ಕೇಜ್ರಿವಾಲ್ ಬರೆದ ಪತ್ರ ಓದಿದ ಅವರು, ನಾನು ಮತ ಕೇಳುವುದಿಲ್ಲ. ಭಾರತ ಒಂದು ಮಹಾನ್ ದೇಶವಾಗಿದ್ದು ತನ್ನದೇಯಾದ ಸಂಸ್ಕೃತಿ ಇದೆ. ಆದರೂ ಭಾರತದಲ್ಲಿ (India) ಬಡತನ ಯಾಕಿದೆ? ನಾನು ಜೈಲಿನಲ್ಲಿ ಭಾರತ ಮಾತೆಗಾಗಿ ಯೋಚನೆ ಮಾಡುತ್ತೇನೆ. ಭಾರತ ಮಾತೆ ದು:ಖದಲ್ಲಿದ್ದಾಳೆ, ನೋವಿನಲ್ಲಿದ್ದಾಳೆ. ನಾವು ಸೇರಿ 140 ಕೋಟಿ ಜನರ ಹೊಸ ಭಾರತ ಕಟ್ಟೋಣ. ಬಡತನ, ನಿರುದ್ಯೋಗ ಇಲ್ಲದ ದೇಶ ಕಟ್ಟೋಣ. ಒಳ್ಳೆಯ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಿಗುವ ದೇಶ ನಿರ್ಮಿಸೋಣ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗುವ ದೇಶ ನಿರ್ಮಾಣ ಮಾಡೋಣ. ಆ ದೇಶದಲ್ಲಿ ದ್ವೇಷ ವೈರತ್ವ ಮುಕ್ತವಾಗಿರಲಿದೆ. INDIA ಒಕ್ಕೂಟ ಹೃದಯದಲ್ಲಿದೆ ಎಂದು ಹೇಳಿದರು.

    ಬಂದನದಲ್ಲಿರುವ ಕೇಜ್ರಿವಾಲ್ 6 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಪೂರ್ತಿ ದೇಶದಲ್ಲಿ 24 ಗಂಟೆ ವಿದ್ಯುತ್, ಬಡವರಿಗೆ ವಿದ್ಯುತ್ ಉಚಿತ, ಪ್ರತಿ ಊರಿನಲ್ಲಿ ಒಳ್ಳೆಯ ಶಾಲೆ, ಪ್ರತಿ ನಗರದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಉಚಿತ ಚಿಕಿತ್ಸೆ, ರೈತರಿಗೆ ಸ್ವಾಮಿನಾಥನ್ ವರದಿ ಅನುಷ್ಠಾನ, ದೆಹಲಿ ಪೂರ್ಣ ರಾಜ್ಯದ ಅಸ್ತಿತ್ವ ನೀಡುವ ಘೋಷಣೆ ಮಾಡಿದ್ದಾರೆ ಎಂದು ಸುನಿತಾ ಕೇಜ್ರಿವಾಲ್‌ ತಿಳಿಸಿದರು.

     

  • ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು INDIA ಒಕ್ಕೂಟದ ಒಗ್ಗಟ್ಟು ಪ್ರದರ್ಶನ

    ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು INDIA ಒಕ್ಕೂಟದ ಒಗ್ಗಟ್ಟು ಪ್ರದರ್ಶನ

    ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆ ಒಂದು ಕಡೆ ಪ್ರಧಾನಿ ಮೋದಿ (Narendra Modi) ಅಬ್ಬರದ ಪ್ರಚಾರ ಶುರುಮಾಡಿದ್ದರೆ ಮತ್ತೊಂದೆಡೆ ರಾಷ್ಟ್ರರಾಜಧಾನಿಯಲ್ಲಿ ವಿಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಬಂಧನ ಖಂಡಿಸಿ ‘ಲೋಕತಂತ್ರ ಬಚಾವೋ’ ಹೆಸರಿನಲ್ಲಿ ಇಂಡಿಯಾ ಒಕ್ಕೂಟ ಬೃಹತ್ ಸಮಾವೇಶ ಹಾಗೂ ರ‍್ಯಾಲಿ ನಡೆಸಲಿದೆ. ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಸೇರಿ 28 ವಿಪಕ್ಷಗಳ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

    ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ನಾಯಕರು ಕೇಂದ್ರ ಸರ್ಕಾರ, ಇಡಿ, ಐಟಿ, ಸಿಬಿಐ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಅಲ್ಲದೇ ಪ್ರತಿಭಟನೆ ಮೂಲಕ ಮೋದಿ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರೆ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ

    ಬೃಹತ್ ಸಮಾವೇಶದ ಹಿನ್ನೆಲೆ ಮೈದಾನದ ಪ್ರತಿ ಗೇಟ್‌ನಲ್ಲಿ ತಪಾಸಣೆ ನಡೆಸಲಾಗಿದೆ ಮತ್ತು ಸುತ್ತಮುತ್ತ ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಕೆಲವು ಷರತ್ತುಗಳೊಂದಿಗೆ ರ‍್ಯಾಲಿಯನ್ನು ನಡೆಸಲು ಪೊಲೀಸರು ಅನುಮತಿಸಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್ ಕರೆ ಮಾಡಿದ್ರು; ಟಿಕೆಟ್ ಆಫರ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಈಶ್ವರಪ್ಪ

    ಹೆಚ್ಚುವರಿಯಾಗಿ ರಾಜಕೀಯ ಪಕ್ಷಗಳ ಕಚೇರಿಗಳು ಇರುವ ಡಿಡಿಯು ಮಾರ್ಗದಲ್ಲಿ ಸೆಕ್ಷನ್ 144 ವಿಧಿಸಲಾಗುವುದು. ರಾಮಲೀಲಾ ಮೈದಾನದಿಂದ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ, ಯಾವುದೇ ಉಲ್ಲಂಘನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಿ.ವಿ ನರಸಿಂಹ ರಾವ್ ಸೇರಿ ಐವರಿಗೆ `ಭಾರತ ರತ್ನ’

  • ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ

    ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ

    ನವದೆಹಲಿ: ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ (Hemant Soren) ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren) ಅವರು ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿದ್ದಾರೆ.

    ಸುನಿತಾ ಅವರು, ಕಲ್ಪನಾ ಸೊರೆನ್ ಭೇಟಿಯ ನಂತರ, ದೆಹಲಿಯ ಸಚಿವೆ ಅತಿಶಿ ಅವರು ಎಕ್ಸ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸುನಿತಾ ಅವರು, ಕಲ್ಪನಾ ಸೊರೆನ್ ಅವರನ್ನು ನೋಡಿದ ನಂತರ ಬಿಜೆಪಿಯು ಹೆದರುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ನೇತೃತ್ವ ವಹಿಸುತ್ತಿರುವ ಸೊರೆನ್ ಮತ್ತು ಕೇಜ್ರಿವಾಲ್ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಕ್ರೂರ ನಡೆಗೆ ಬೆದರದ ಇಬ್ಬರು ಬಲಿಷ್ಠ ಮಹಿಳೆಯರ ಈ ವೀಡಿಯೊವನ್ನು ನೋಡಿದರೆ ಬಿಜೆಪಿ ಭಯಪಡಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮದ ನಂತರ ಕಲ್ಪನಾ ಸೊರೆನ್, ಸುನೀತಾ ಕೇಜ್ರಿವಾಲ್ ಅವರೊಂದಿಗೆ ಚರ್ಚಿಸಿದ್ದಾರೆ. ಬಳಿಕ ಅವರು ಎಕ್ಸ್‍ನಲ್ಲಿ ಸುನೀತಾ ಕೇಜ್ರಿವಾಲ್ ಅವರ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದೆ. ಸ್ನೇಹಿತೆಯಾಗಿ ಅವರ ಸಮಸ್ಯೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾದಾಗ ಅಕ್ರಮ ಬಂಧನದ ಈ ಘಟನೆ ಪ್ರಜಾಸತ್ತಾತ್ಮಕ ದೇಶಕ್ಕೆ ಸಾಮಾನ್ಯ ಘಟನೆಯಲ್ಲ. ಬಿಕ್ಕಟ್ಟಿನ ಈ ಸಮಯದಲ್ಲಿ, ಹೇಮಂತ್ ಸೊರೆನ್ ನೇತೃತ್ವದಲ್ಲಿ ಇಡೀ ಜಾರ್ಖಂಡ್ ಕೇಜ್ರಿವಾಲ್ ಅವರೊಂದಿಗೆ ನಿಂತಿದೆ ಎಂದು ಕಲ್ಪನಾ ಸೊರೆನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿ 4 ದಿನ ವಿಸ್ತರಣೆ

    ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿ 4 ದಿನ ವಿಸ್ತರಣೆ

    – ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದ ಇಡಿ
    – ಪ್ರಕರಣದಲ್ಲಿ ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದ ಕೇಜ್ರಿವಾಲ್

    ನವದೆಹಲಿ: ಹೊಸ ಅಬಕಾರಿ ನೀತಿ ಹಗರಣದಲ್ಲಿ (Delhi Liquor Scam) ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಇಡಿ (ED) ಕಸ್ಟಡಿಯನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ. ಕೇಜ್ರಿವಾಲ್ ವಿಚಾರಣೆಗೆ ಸಹಕರಿಸುತ್ತಿಲ್ಲ, ಪ್ರಕರಣದ ನಾಲ್ಕು ಮಂದಿ ಇತರೆ ಆರೋಪಿಗಳೊಂದಿಗೆ ಕೇಜ್ರಿವಾಲ್ ಅವರ ತನಿಖೆ ನಡೆಸಲು ಸಮಯ ಕೋರಿದ ಇಡಿ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

    ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ (Court) ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಪ್ರವೇಶ ಮಾಡುವ ವೇಳೆ “ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಜನರು ಇದಕ್ಕೆ ಉತ್ತರಿಸಲಿದ್ದಾರೆ” ಎಂದು ಅಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದರು. ಇದನ್ನೂ ಓದಿ: ಡಿಕೆ ಸುರೇಶ್‌ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

    ಕೆಲವು ಆರೋಪಿಗಳು ತಮ್ಮನ್ನು ಬಂಧಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣವನ್ನು ದೇಣಿಗೆ ನೀಡಿದ್ದಾರೆ. ನಂತರ ಅವರು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಓರ್ವ ಆರೋಪಿ ಶರತ್ ಚಂದ್ರ ರೆಡ್ಡಿ ಬಿಜೆಪಿಗೆ 55 ಕೋಟಿ ದೇಣಿಗೆ ನೀಡಿದ್ದಾರೆ. ದಂಧೆ ನಡೆಯುತ್ತಿದೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯವಿದೆ. ಹಣದ ಜಾಡು ಪತ್ತೆಯಾಗಿದೆ. ಬಂಧನದ ನಂತರ ಬಿಜೆಪಿಗೆ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕೋರ್ಟ್ ಗಮನ ಸೆಳೆದರು.

    ಪ್ರಕರಣದಲ್ಲಿ ನಾಲ್ಕು ಬಾರಿ ಹೆಸರು ಕಾಣಿಸಿಕೊಂಡಿದೆ. ಸಾಕ್ಷಿಯೊಬ್ಬರು ಅಂದಿನ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಸಮ್ಮುಖದಲ್ಲಿ ನನಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರು ಪ್ರತಿದಿನ ನನ್ನ ಮನೆಗೆ ಬರುತ್ತಾರೆ. ನನ್ನನ್ನು ಆರೋಪಿಸಲು ಇಂತಹ ಹೇಳಿಕೆ ಸಾಕೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಏಳು ಸಾಕ್ಷಿಗಳ ಪೈಕಿ ಆರು ಸಾಕ್ಷಿಗಳು ನನ್ನ ಹೆಸರು ಉಲ್ಲೇಖಿಸಿಲ್ಲ, ಏಳನೇ ಸಾಕ್ಷಿ ನನ್ನ ಹೆಸರು ಉಲ್ಲೇಖಿಸಿದ ತಕ್ಷಣ ಬಾಕಿ ಆರು ಸಾಕ್ಷಿಗಳ ಹೇಳಿಕೆಯನ್ನು ಬದಿಗೆ ಸರಿಸಿದೆ. ಅಲ್ಲದೇ ನನ್ನ ಹೆಸರು ಉಲ್ಲೇಖಿಸಿದ ಸಾಕ್ಷಿಗೆ ಜಾಮೀನು ಮಂಜೂರಾಗಿದೆ ಎಂದು ಹೇಳಿದರು.

    ಕೇಜ್ರಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಇನ್ನೂ ಕೆಲವು ವ್ಯಕ್ತಿಗಳ ಹೇಳಿಕೆಗಳೊಂದಿಗೆ ಸಂಸ್ಥೆಯು ಸಿಎಂ ಅವರನ್ನು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಇನ್ನೂ ಏಳು ದಿನ ಹೆಚ್ಚುವರಿ ಕಸ್ಟಡಿಗೆ ನೀಡಬೇಕಾಗುತ್ತದೆ ಎಂದರು. ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆದರೆ ಅವರು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು. ನಾವು ಅವರನ್ನು ಇತರ ಕೆಲವು ಜನರೊಂದಿಗೆ ಎದುರಿಸಬೇಕಾಗಿದೆ. ಎಎಪಿ ಗೋವಾ ಅಭ್ಯರ್ಥಿಗಳ ಇನ್ನೂ ನಾಲ್ಕು ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ನಾವು ಅವರೊಂದಿಗೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಎಎಸ್‌ಜಿ ವಾದಿಸಿದರು.

    ಕೇಜ್ರಿವಾಲ್ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಏಜೆನ್ಸಿಯೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿದ್ದಾರೆ ಇದರಿಂದ ನಮಗೆ ಡಿಜಿಟಲ್ ಡೇಟಾಗೆ ಪ್ರವೇಶ ಸಿಕ್ಕಿಲ್ಲ, ಅವರು ಉದ್ದೇಶಪೂರ್ವಕವಾಗಿ ಸಹಕರಿಸುತ್ತಿಲ್ಲ ಮತ್ತು ನಮಗೆ ಐಟಿಆರ್‌ಗಳನ್ನು ನೀಡುತ್ತಿಲ್ಲ‌ ಎಂದರು. ಇನ್ನು ಕೇಜ್ರಿವಾಲ್ ಆರೋಪಗಳಿಗೆ ಪ್ರತಿಕ್ರಿಯಿಸಿ ರಿಮಾಂಡ್ ಹಂತದಲ್ಲಿ ಅವು ಪ್ರಸ್ತುತವಲ್ಲ, ಮಾಹಿತಿಯೂ ಉತ್ಪಾದನೆಯ ಹಂತದಲ್ಲಿದೆ, ಈ ಎಲ್ಲಾ ವಿಷಯಗಳು ಹೇಗೆ ಸಂಬಂಧಿತವಾಗಿವೆ? ಯಾರಾದರೂ ಹೇಳಿಕೆ ನೀಡಲು ಒತ್ತಾಯಿಸಲಾಗಿದೆಯೇ ಎಂಬುದು ವಿಚಾರಣೆಯ ವಿಷಯವಾಗಿದೆ ಎಂದರು.

    ಗೋವಾ ಚುನಾವಣೆಯಲ್ಲಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಹವಾಲಾ ಮೂಲಕ ಹಣ ಬಂದಿದೆ ಇದನ್ನು ಗೋವಾ ಪ್ರಚಾರಕ್ಕೆ ಹಣವನ್ನು ಬಳಸಲಾಗಿದೆ ಎಂದು ತೋರಿಸಲು ನಮ್ಮ ಬಳಿ ಹೇಳಿಕೆಗಳು ಮತ್ತು ದಾಖಲೆಗಳಿವೆ. ಕೇಜ್ರಿವಾಲ್ 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ತೋರಿಸಲು ಇಡಿ ಬಳಿಯೂ ಸಾಕ್ಷಿಗಳಿದೆ ಎಂದು ಎಎಸ್‌ಜಿ ವಾದಿಸಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ನಾಲ್ಕು ದಿನಗಳ‌ ಕಸ್ಟಡಿಯನ್ನು ಕೋರ್ಟ್ ವಿಸ್ತರಿಸಿತು‌.

  • ಅರವಿಂದ್ ಕೇಜ್ರಿವಾಲ್‌ಗೆ ರಿಲೀಫ್ – ಸಿಎಂ ಸ್ಥಾನದಿಂದ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಅರವಿಂದ್ ಕೇಜ್ರಿವಾಲ್‌ಗೆ ರಿಲೀಫ್ – ಸಿಎಂ ಸ್ಥಾನದಿಂದ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ನವದೆಹಲಿ: ಹೊಸ ಅಬಕಾರಿ ನೀತಿ ಹಗರಣದಲ್ಲಿ ಇ.ಡಿಯಿಂದ ಬಂಧನಕ್ಕೊಳಪಟ್ಟಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಪ್ರಕರಣದ ವಿಚಾರಣೆ ವೇಳೆ ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿದೆಯೇ ಎಂದು ಪ್ರಶ್ನಿಸಲಾಯಿತು‌. ನಾವು ಇಂದಿನ ಪತ್ರಿಕೆಯನ್ನು ಓದಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ರಾಷ್ಟ್ರಪತಿಗಳು ಪರಿಗಣಿಸಬೇಕು. ನಾವು ಯಾಕೆ ಈ ಅರ್ಜಿಯನ್ನು ವಿಚಾರಣೆ ನಡೆಸಬೇಕು. ಇದನ್ನು ಅವರು ಪರಿಗಣಿಸುತ್ತಾರೆ. ನಾವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಿಲ್ಲ. ಯಾವುದೇ ಹೈಕೋರ್ಟ್ ಅದನ್ನು ಮಾಡುವುದಿಲ್ಲ ಎಂದು ಎಸಿಜೆ ಹೇಳಿದರು. ಇದನ್ನೂ ಓದಿ: ಕೆಲ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ – ಸಿಜೆಐಗೆ ವಕೀಲರ ಪತ್ರ

    ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದೆಹಲಿ ನಿವಾಸಿ ಸುರ್ಜಿತ್ ಸಿಂಗ್ ಯಾದವ್ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಣಕಾಸು ಅವ್ಯವಹಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಯಾದವ್ ತಮ್ಮ ಮನವಿಯಲ್ಲಿ ತಿಳಿಸಿದ್ದರು.

    ಮುಂದುವರಿದು ಕೇಜ್ರಿವಾಲ್ ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸುವುದರಿಂದ ಕಾನೂನು ಪ್ರಕ್ರಿಯೆಗೆ ಅಡ್ಡಿಯುಂಟಾಗುವುದು ಮತ್ತು ನ್ಯಾಯಾಂಗದ ಹಾದಿಗೆ ಅಡ್ಡಿಯಾಗಲಿದೆ. ಕಾರಾಗೃಹದಲ್ಲಿರುವ ಮುಖ್ಯಮಂತ್ರಿಗಳು ಕಾನೂನು ವಿಧಿಸುವ ಯಾವುದೇ ವ್ಯವಹಾರವನ್ನು ನಡೆಸಲು ಅಸಮರ್ಥರಾಗಿರುತ್ತಾರೆ. ಒಂದು ವೇಳೆ ಅದಕ್ಕೆ ಅನುಮತಿಸಿದರೆ ಸರ್ಕಾರದ ರಹಸ್ಯ ದಾಖಲೆಗಳನ್ನು ಜೈಲು ಅಧಿಕಾರಿಗಳು ಸಂಪೂರ್ಣವಾಗಿ ಸ್ಕ್ಯಾನ್ ಮಾಡಬೇಕಾಗುತ್ತದೆ. ಇದನ್ನೂ ಓದಿ: ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

    ಇಂತಹ ಕೃತ್ಯವು ಸಂವಿಧಾನದ ಮೂರನೇ ಶೆಡ್ಯೂಲ್ ಅಡಿಯಲ್ಲಿ ಮುಖ್ಯಮಂತ್ರಿಗೆ ಬೋಧಿಸಲಾದ ಗೌಪ್ಯತೆಯ ಪ್ರಮಾಣ ವಚನವನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು. ಆದರೆ ಈ ವಾದ ಪುರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿತು.

  • ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

    ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನ ವಿಚಾರವಾಗಿ ಟೀಕೆಗಳನ್ನು ವ್ಯಕ್ತಪಡಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿ ಸಮನ್ಸ್‌ ಪಡೆದಿದ್ದ ಅಮೆರಿಕ (US) ಮತ್ತೆ ಪ್ರತಿಕ್ರಿಯೆ ನೀಡಿದೆ.

    ದೆಹಲಿ ಸಿಎಂ ಕೇಜ್ರಿವಾಲ್‌ ಬಂಧನ ಪ್ರಕರಣವನ್ನು ನಾವು ಗಮನಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳ ಅಗತ್ಯವಿದೆ ಎಂದು ಯುಎಸ್‌ ಪುನರುಚ್ಚರಿಸಿದೆ. ತೆರಿಗೆ ಅಧಿಕಾರಿಗಳು ತಮ್ಮ ಕೆಲವು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಗಳ ಬಗ್ಗೆಯೂ ನಮಗೆ ತಿಳಿದಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ನಿಧನ

    ಮುಂಬರುವ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸವಾಲಾಗುವ ರೀತಿಯಲ್ಲಿ ತೆರಿಗೆ ಅಧಿಕಾರಿಗಳು ತಮ್ಮ ಕೆಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಗಳ ಬಗ್ಗೆ ನಮಗೆ ತಿಳಿದಿದೆ. ಈ ಪ್ರತಿಯೊಂದು ಸಮಸ್ಯೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಮಿಲ್ಲರ್‌ ತಿಳಿಸಿದ್ದಾರೆ.

    ಭಾರತವು ದೆಹಲಿಯಲ್ಲಿ ಮಿಷನ್‌ನ ಹಂಗಾಮಿ ಡೆಪ್ಯುಟಿ ಚೀಫ್ ಗ್ಲೋರಿಯಾ ಬರ್ಬೆನಾ ಅವರನ್ನು ಕರೆಸಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾವುದೇ ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ ನಾವು ಸಾರ್ವಜನಿಕವಾಗಿ ಹೇಳಿರುವುದನ್ನು ನಾನು ಇಲ್ಲಿ ಹೇಳಿದ್ದೇನೆ. ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಇದಕ್ಕೆ ಯಾರೂ ವಿರೋಧಿಸಬಾರದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

    ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ತನ್ನ ಕಚೇರಿಗೆ ಕರೆಸಿತ್ತು. ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಭೆ ನಡೆಯಿತು. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಎಂಇಎ, ಭಾರತದಲ್ಲಿ ಕೆಲವು ಕಾನೂನು ಪ್ರಕ್ರಿಯೆಗಳ ಬಗ್ಗೆ US ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವಕ್ತಾರರ ಟೀಕೆಗಳಿಗೆ ನಾವು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿತ್ತು.

    “ರಾಜತಾಂತ್ರಿಕತೆಯಲ್ಲಿ, ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಜವಾಬ್ದಾರಿಯು ಸಹ ಪ್ರಜಾಪ್ರಭುತ್ವಗಳ ವಿಷಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇದು ಅನಾರೋಗ್ಯಕರ ಪೂರ್ವನಿದರ್ಶನಗಳನ್ನು ಸ್ಥಾಪಿಸಲು ಕೊನೆಗೊಳ್ಳಬಹುದು,” ಎಂದು ಹೇಳಿಕೆ ತಿಳಿಸಿದೆ.

  • ಕೇಜ್ರಿವಾಲ್ ಬಂಧನದ ಅಡಿಪಾಯವೇ ದೋಷ ಪೂರಿತ, ಕೂಡಲೇ ಬಿಡುಗಡೆ ಮಾಡಿ – ಹೈಕೋರ್ಟ್ ಮುಂದೆ ಸಿಂಘ್ವಿ ವಾದ

    ಕೇಜ್ರಿವಾಲ್ ಬಂಧನದ ಅಡಿಪಾಯವೇ ದೋಷ ಪೂರಿತ, ಕೂಡಲೇ ಬಿಡುಗಡೆ ಮಾಡಿ – ಹೈಕೋರ್ಟ್ ಮುಂದೆ ಸಿಂಘ್ವಿ ವಾದ

    ನವದೆಹಲಿ: ಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಬಂಧಿಸಲಾಗಿದೆ. ಬಂಧನದ ಈ ಸಮಯ ನ್ಯಾಯ ಸಮ್ಮತ ಚುನಾವಣೆಯನ್ನು ಸೃಷ್ಟಿಸುವುದಿಲ್ಲ. ಈ ಬಂಧನದ ಅಡಿಪಾಯವೇ ದೋಷ ಪೂರಿತ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi) ವಾದಿಸಿದ್ದಾರೆ.

    ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಸಿಂಘ್ವಿ, ನನ್ನ ಕಕ್ಷಿದಾರರ ಬಂಧನದ ಬುನಾದಿ ದೋಷಪೂರಿತವಾಗಿರುವ ಕಾರಣ ಅವರನ್ನು ಬಿಡುಗಡೆ ಮಾಡಬೇಕು. ಇದು ನನ್ನ ಪ್ರಾರ್ಥನೆ. ಇದು ಕ್ರಿಮಿನಲ್ ವಿಷಯವಾಗಿದ್ದರೂ ಕಾನೂನು ಮತ್ತು ಮೂಲಭೂತ ರಚನೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ

    ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಒಬ್ಬ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಯಾವುದೇ ವಸ್ತು ವಿಷಯವಿಲ್ಲ. ಬಂಧನದ ಉದ್ದೇಶವು ನಾನ್-ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅನ್ನು ರಚಿಸುವುದಾಗಿದೆ. ಈ ಮೂಲಕ ಸಂವಿಧಾನದ ಮೂಲಭೂತ ರಚನೆಯನ್ನು ಹೊಡೆಯುತ್ತಿದ್ದಾರೆ. ಸೆಕ್ಷನ್ 19ರ ಅಡಿಯಲ್ಲಿ ಬಂಧನದ ಮಿತಿಯನ್ನು ಇರಿಸಲಾಗಿದೆ. ಇದಕ್ಕೆ ಕಾರಣ ಸೆಕ್ಷನ್ 45ರ ಅಡಿಯಲ್ಲಿ ಜಾಮೀನು ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಸಿಂಘ್ವಿ ಹೇಳಿದರು. ಇದನ್ನೂ ಓದಿ: ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಗಂಡಾಂತರ ಆಹ್ವಾನಿಸಿದಂತೆ: ಆಪ್‌ಗೆ ದೆಹಲಿ ಹೈಕೋರ್ಟ್ ಎಚ್ಚರಿಕೆ

    ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೊರ್ವ ಹಿರಿಯ ವಕೀಲ ಅಮಿತ್ ದೇಸಾಯಿ, ಪ್ರಕರಣದಲ್ಲಿ ಸೆಕ್ಷನ್ 19 ಅನ್ನು ಸರಿಯಾಗಿ ಪಾಲಿಸಿಲ್ಲ. ಇದು ಪ್ರಾಥಮಿಕ ಅಂಶವಾಗಿದೆ. ಬಂಧನದ ಸಮಯದಲ್ಲಿ ಅರ್ಜಿದಾರರು ಸೆಕ್ಷನ್ 3ರ ಅಡಿಯಲ್ಲಿ ಸೂಚಿಸಲಾದ ಚಟುವಟಿಕೆಗಳನ್ನು ಮಾಡುವಲ್ಲಿ ತಪ್ಪಿತಸ್ಥರು ಎಂದು ಸ್ಥಾಪಿಸಲು ಡಿಒಇ (Department Of Expenditure) ವಿಫಲವಾಗಿದೆ. ಯಾವುದೇ ವಿಚಾರಣೆಯಿಲ್ಲದೆ ಅರ್ಜಿದಾರರನ್ನು ಬಂಧಿಸಲಾಗಿದೆ. ಇದು ರಾಜಕೀಯ ಸೇಡನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿ ಚರ್ಚಿಸಿದ ನಟಿ ಕಂಗನಾ

    ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಇ.ಡಿ ಹೈಕೋರ್ಟ್‌ಗೆ ಮನವಿ ಮಾಡಿತು. ಏಜೆನ್ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅರ್ಜಿ ಮಂಗಳವಾರವಷ್ಟೇ ಲಭ್ಯವಾಗಿದೆ. ಇ.ಡಿ ನಿಲುವನ್ನು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಹೇಳಿದರು. ಮಧ್ಯಂತರ ಪರಿಹಾರಕ್ಕೂ ಸ್ಪಂದಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:  ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

  • ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

    ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? – ಕೇಜ್ರಿವಾಲ್ ಬಹಿರಂಗಪಡಿಸ್ತಾರೆ – ಸುನೀತಾ ಕೇಜ್ರಿವಾಲ್

    – ದೆಹಲಿಯನ್ನ ನಾಶ ಮಾಡಲು ಬಯಸಿದ್ದಾರೆ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಪತ್ನಿ ಕೆಂಡ

    ನವದೆಹಲಿ: ಹೊಸ ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ? ಎಂದು ಮಾರ್ಚ್ 28ರಂದು ಕೋರ್ಟ್‌‌ಗೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಬಹಿರಂಗ ಪಡಿಸಲಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಮೇತ ದೇಶದ ಜನರ ಮುಂದೆ ತಿಳಿಸುತ್ತೇನೆ ಎಂದು ನನಗೆ ಹೇಳಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ತಿಳಿಸಿದ್ದಾರೆ.

    ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅವರನ್ನು ಭೇಟಿಯಾದ ವೇಳೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ನಮ್ಮ‌ ನಿವಾಸದ ಮೇಲೆ ದಾಳಿ ನಡೆಸಿದಾಗ ಇಡಿ ಅಧಿಕಾರಿಗಳಿಗೆ ಕೇವಲ 75,000 ರೂ. ಲಭಿಸಿದೆ. ಇಡಿ (ED Raid) ಈವರೆಗೆ 250ಕ್ಕೂ ಹೆಚ್ಚು ದಾಳಿಗಳನ್ನ ನಡೆಸಿದೆ ಹಣಕ್ಕಾಗಿ ಹುಡುಕುತ್ತಿದ್ದಾರೆ ಅವರಿಗೆ ಈವರೆಗೂ ಏನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

    ಎರಡು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲಸಚಿವ ಅತಿಶಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸಿದೆ. ಒಟ್ಟಿನಲ್ಲಿ ಅವರು ದೆಹಲಿಯನ್ನ ನಾಶಮಾಡಲು ಬಯಸುತ್ತಾರೆ? ಜನರು ನರಳುತ್ತಲೇ ಇರಬೇಕೆಂದು ಅವರು ಬಯಸುತ್ತಾರೆಯೇ? ಅರವಿಂದ್ ಕೇಜ್ರಿವಾಲ್‌ಗೆ ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ.

    ನನ್ನ ಪತಿ ನಿಜವಾದ ದೇಶಭಕ್ತ, ನಿರ್ಭೀತ ಮತ್ತು ಧೈರ್ಯಶಾಲಿ ವ್ಯಕ್ತಿ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಜನ ಬಯಸುತ್ತಾರೆ. ಅವರು ದೈಹಿಕವಾಗಿ ಜೈಲಿನಲ್ಲಿದ್ದರೂ, ಅವರ ಆತ್ಮವು ಜನರ ನಡುವೆ ಇದೆ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ. ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿರುವ ಇಡಿ ಮಾರ್ಚ್ 28 ವರೆಗೂ ಕಸ್ಟಡಿಗೆ ಪಡೆದುಕೊಂಡಿದೆ.