Tag: Arvind Bellad

  • ಯಡಿಯೂರಪ್ಪನವರಿಗೆ ಆತ್ಮವಂಚನೆಯಾಗಿದೆ: ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್

    ಯಡಿಯೂರಪ್ಪನವರಿಗೆ ಆತ್ಮವಂಚನೆಯಾಗಿದೆ: ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್

    ಧಾರವಾಡ: ಯಡಿಯೂರಪ್ಪನವರು ಹೈಕಮಾಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ನೀಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪಕ್ಷ ಇಷ್ಟು ದಿನ ಅವಕಾಶ ಮಾಡಿ ಕೊಟ್ಟಿದೆ. ಅದನ್ನು ಅವರು ತಿಳಿದುಕೊಂಡು ನ್ಯಾಯವಾಗಿ ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಆತ್ಮವಂಚನೆಯಾಗಿದೆ ಎಂಬಂತೆ ನನಗೆ ಅನಿಸುತ್ತಿದೆ ಎಂದು ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಹೇಳಿಕೆ ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಕಾಂತ್ ಬೆಲ್ಲದ್, ರಾಜೀನಾಮೆ ಕೊಡುವುದು, ಬಿಡುವುದು ಅದು ಅವರಿಗೆ ಬಿಟ್ಟ ವಿಚಾರ, ನ್ಯಾಯಯುತವಾಗಿ ನಡೆದುಕೊಳ್ಳುವುದು ಅವರ ಧರ್ಮ. ನನಗೆ ಆತ್ಮವಂಚನೆಯಾದರೆ ನಾನು ನಿರ್ಣಯ ತೆಗೆದುಕೊಳ್ಳಬೇಕು. ಯಡಿಯೂರಪ್ಪನವರಿಗೆ ಆತ್ಮವಂಚನೆಯಾಗಿದೆ ಎಂದು ನನಗೆ ಅನಿಸುತ್ತಿದೆ ಹಾಗಾಗಿ ಅವರು ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ನಾನು ಸಚಿವನಾಗಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ, ಆದರೆ ನನ್ನನ್ನು ಸಚಿವನಾಗಿ ಮಾಡಬೇಕಾಗಿದ್ದು ಯಡಿಯೂರಪ್ಪನವರ ಕರ್ತವ್ಯವಾಗಿತ್ತು. ಅದನ್ನು ಅವರು ಮಾಡಲಿಲ್ಲ, ಸದ್ಯ ನಾನು ರಾಜಕೀಯ ಬಿಟ್ಟಿದ್ದೇನೆ. ಈಗ ನನ್ನ ಮಗ ರಾಜಕೀಯ ಪ್ರವೇಶ ಮಾಡಿದ್ದಾನೆ. ಜನ ಅವನನ್ನು ಆಯ್ಕೆ ಮಾಡಿ ಕರೆತಂದಿದ್ದಾರೆ. ರಾಜ್ಯದ ಜನರಿಗೆ ಅವನ ಬಗ್ಗೆ ಸಾಕಷ್ಟು ಗೊತ್ತಿದೆ, ರಾಷ್ಟ್ರದಲ್ಲೂ ಗೊತ್ತಿದೆ. ಅರವಿಂದ ಬೆಲ್ಲದ್ ನನಗೆ ಒಬ್ಬ ಒಳ್ಳೆಯ ಮಗ ಎಂದು ಅಭಿಪ್ರಾಯಪಟ್ಟರು.

  • ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ಬೆಂಗಳೂರು: ಸಿಎಂ ಬಿಎಸ್‍ವೈ ವಿರುದ್ಧ 4 ಶಾಸಕರು ತಿರುಗಿ ಬಿದ್ದಿದ್ದಾರೆ. ಈ ಶಾಸಕರು ಇಂದು ಉಸ್ತುವಾರಿ ಅರುಣ್ ಸಿಂಗ್‍ಗೆ ದೂರು ನೀಡುವ ಸಾಧ್ಯತೆಯಿದೆ.

    ರಾಮನಗರದ ಸಿ.ಪಿ.ಯೋಗೇಶ್ವರ್, ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲದ್, ಮೈಸೂರಿನ ವಿಶ್ವನಾಥ್, ವಿಜಯಪುರದ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

    ಯೋಗೇಶ್ವರ್ ಚಾರ್ಜ್‍ಶೀಟ್ ಏನು?
    ಸರ್ಕಾರ ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರ ದೊಡ್ಡದಾಗಿದ್ದರೂ ಬಹಳ ಸತಾಯಿಸಿ ಎಂಎಲ್‍ಸಿ ಮತ್ತು ಸಚಿವ ಸ್ಥಾನ ನೀಡಿದ್ದಾರೆ. ಆದರೆ ಈವರೆಗೂ ರಾಮನಗರ ಜಿಲ್ಲಾ ಉಸ್ತುವಾರಿ ಕೊಟ್ಟಿಲ್ಲ. ರಾಮನಗರದಲ್ಲಿ ಡಿಕೆಶಿ, ಚನ್ನಪಟ್ಟಣದಲ್ಲಿ ಎಚ್ಡಿಕೆಗೆ ಬಿಎಸ್‍ವೈ ಹೊಂದಾಣಿಕೆಯಿದೆ. ಡಿಕೆಶಿ, ಎಚ್‍ಡಿಕೆ ಕೇಳುವ ಅಧಿಕಾರಿಗಳನ್ನು ಸಿಎಂ ವರ್ಗ ಮಾಡ್ತಾರೆ. ನಾನು ಹೆಸರಿಗೆ ಮಾತ್ರ ಮಿನಿಸ್ಟರ್. ಜಿಲ್ಲೆಯಲ್ಲಿ ಡಿಕೆಶಿ, ಎಚ್ಡಿಕೆಯದ್ದೇ ಹವಾ. ಡಿಕೆಶಿ, ಎಚ್‍ಡಿಕೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಅಡ್ಡಿಯಾಗಿದ್ದಾರೆ. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗಿದ್ದು ಪ್ರತಿಯೊಂದಕ್ಕೂ ಯಡಿಯೂರಪ್ಪ ಬದಲು ವಿಜಯೇಂದ್ರ ಬಳಿ ಹೋಗುವ ಪರಿಸ್ಥಿತಿ ಇದೆ.

    ಯತ್ನಾಳ್ ಚಾರ್ಜ್‍ಶೀಟ್ ಏನು?
    ಬಿಎಸ್‍ವೈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಸರ್ಕಾರ, ಸಚಿವರ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಜಾಸ್ತಿಯಿದೆ. ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಗಳು ಪಕ್ಷದ ಇಮೇಜ್‍ಗೆ ಧಕ್ಕೆಯಾಗಿದ್ದು, ಬಿಎಸ್‍ವೈಗೆ ಆರೋಗ್ಯ, ವಯಸ್ಸು ಸಪೋರ್ಟ್ ಮಾಡ್ತಿಲ್ಲ. ಯಡಿಯೂರಪ್ಪ ಬದಲಿಗೆ ಸಿಎಂ ಸ್ಥಾನ ಬೇರೆಯವರಿಗೆ ಕೊಡಿ.

    ಅರವಿಂದ ಬೆಲ್ಲದ್ ಚಾರ್ಜ್‍ಶೀಟ್ ಏನು?
    ಯಡಿಯೂರಪ್ಪ ನಾಯಕತ್ವ ಮೊದಲಿನಂತಿಲ್ಲ. ಎಲ್ಲಕ್ಕೂ ಮಗನ ಮೇಲೆ ಅವಲಂಬಿತರಾಗಿದ್ದಾರೆ. ಪಕ್ಷ ನಿಷ್ಟರನ್ನು ದೂರ ಇಟ್ಟು, ವಲಸಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕೋವಿಡ್‍ನಿಂದಾಗಿ ಸಿಎಂ ಜನಪ್ರಿಯತೆ ಕಮ್ಮಿಯಾಗಿದ್ದು ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಅಧಿಕಾರ ಕೈತಪ್ಪುತ್ತೆ, ಸ್ಥಾನಗಳೂ ಕಡಿಮೆ ಬರಬಹುದು. ಪಕ್ಷದ ಹಿತಕ್ಕಾಗಿ ಈಗಲೇ ಪರ್ಯಾಯ ಪರಿಹಾರ ಕಂಡುಕೊಳ್ಳಬೇಕು. ನಾನು ಸಿಎಂ ಸ್ಥಾನಕ್ಕೆ ಯೋಗ್ಯನಾಗಿದ್ದು ನನಗೂ ಸಮುದಾಯದ ಬಲ, ಶಾಸಕರ ಬೆಂಬಲವೂ ಇದೆ.

    ವಿಶ್ವನಾಥ್ ಚಾರ್ಜ್‍ಶೀಟ್ ಏನು?
    ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು ಬದಲಾವಣೆ ಮಾಡಬೇಕು. ಅವರ ಕೆಲಸಗಳಿಗೆ ವಯಸ್ಸು ಅಡ್ಡಿ ಆಗುತ್ತಿದೆ. ಹೀಗಾಗಿ ಬದಲಾವಣೆ ಮಾಡಿ ಬೇರೆಯವರಿಗೆ ಸಿಎಂ ಸ್ಥಾನ ನೀಡಬೇಕು. ಇದನ್ನೂ ಓದಿ: ಬಿಜೆಪಿಯಲ್ಲಿ ಬಿಕ್ಕಟ್ಟು – ಬಿಎಸ್‍ವೈ ಪರ, ವಿರೋಧ ಯಾರು? ತಟಸ್ಥ ಬಣದಲ್ಲಿ ಯಾರಿದ್ದಾರೆ?

  • ದೆಹಲಿಗೆ ಯಾರೂ ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ?: ಆರ್.ಶಂಕರ್

    ದೆಹಲಿಗೆ ಯಾರೂ ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ?: ಆರ್.ಶಂಕರ್

    – ಬೆಲ್ಲದ್ ಅವರನ್ನ ಸಮರ್ಥಿಸಿಕೊಂಡ ಸಚಿವರು

    ಯಾದಗಿರಿ: ಮೂಗು ಇರುವ ತನಕ ನೆಗಡಿ ತಪ್ಪಲ್ಲ, ದೆಹಲಿಗೆ ಯಾರು ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ? ನಮ್ಮ ಪಕ್ಷದ ಕೇಂದ್ರ ಸ್ಥಾನ ದೆಹಲಿ. ಹೀಗಾಗಿ ಒಬ್ಬ ರಾಜಕಾರಣಿಯಾಗಿ ಕೇಂದ್ರ ಸ್ಥಾನಕ್ಕೆ ಹೋಗಬಾರದಾ ಎಂದು ಶಾಸಕ ಅರವಿಂದ್ ಬೆಲ್ಲದ್ ಅವರ ನಡೆಯನ್ನು ಸಚಿವ ಆರ್.ಶಂಕರ್ ಸಮರ್ಥಿಸಿಕೊಂಡಿದ್ದಾರೆ.

    ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೆಹಲಿಗೆ ಹೋಗವರೆಲ್ಲಾ ಮುಖ್ಯಮಂತ್ರಿ ಬದಲಾವಣೆಗೆ ಹೋಗುತ್ತಾರೆತೇ? ಒಬ್ಬ ರಾಜಕಾರಣಿ ದೆಹಲಿಗೆ ಹೋಗ ಬಂದಾಗಲೂ ಒಬ್ಬ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ದೆಹಲಿಗೆ ಹೋಗೋದು ಅವರ ವೈಯಕ್ತಿ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಬೇಕಾಗಿಲ್ಲ ಎಂದರು.

    ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಮುಂದಿನ ಚುನಾವಣೆಗೂ ಸಹ ಅವರ ನಾಯಕತ್ವದಲ್ಲಿ ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು.

    ಶುಕ್ರವಾರ ತಡರಾತ್ರಿಯೇ ಶಾಸಕ ಅರವಿಂದ್ ಬೆಲ್ಲದ್ ಅವರು ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿದ್ದು, ದೆಹಲಿಯ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದಾರೆ. ಆದರೆ `ನಾನೇ ಸಿಎಂ’ ಎಂಬ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಬೆಲ್ಲದ್ ದೆಹಲಿಗೆ ತೆರಳಿರುವುದು ಭಾರೀ ಕುತೂಹಲ ಮೂಡಿಸಿತ್ತು. ಕಳೆದ ಮೇ 24 ರಂದು ಸಚಿವ ಸಿ.ಪಿ ಯೋಗೇಶ್ವರ್ ಜೊತೆ ಬೆಲ್ಲದ್ ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ. ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬೆನ್ನಲ್ಲೇ ದೆಹಲಿಗೆ ಬೆಲ್ಲದ್ ದೌಡಾಯಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ನಾಯಕತ್ವ ಬದಲಾವಣೆ ವಿಚಾರ ಕೋವಿಡ್ ಗಿಂತಲೂ ಅಪಾಯಕಾರಿ: ಮುರುಘಾ ರಾಜೇಂದ್ರಸ್ವಾಮೀಜಿ

    ಅರವಿಂದ್ ಬೆಲ್ಲದ್ ಸ್ಪಷ್ಟನೆ: ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಷ್ಟ್ರೀಯ ನಾಯಕರ ಭೇಟಿಗಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅರವಿಂದ್ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆ – ಮತ್ತೆ ದೆಹಲಿಗೆ ತೆರಳಿದ ಶಾಸಕ ಬೆಲ್ಲದ್

  • ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ಧಾರವಾಡ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ, ಸದ್ಯ ನಮ್ಮ ಆದ್ಯತೆ ಕೋವಿಡ್ ನಿಯಂತ್ರಣ ಮಾಡುವದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಈಗ ಯಾವುದೇ ಸಿಎಂ ಮತ್ತು ನಾಯಕತ್ವ ಬದಲಾವಣೆ ಇಲ್ಲ, ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಚರ್ಚೆಯೂ ನಡೆದಿಲ್ಲ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ವದಂತಿ ಮಾತ್ರ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯಂತಹ ಶ್ರೇಷ್ಠ ನಾಯಕರ ಅಡಿಯಲ್ಲಿ ಕೆಲಸ ಮಾಡುತ್ತಿರುವೆ, ಬಹಳ ಸಂತೋಷ ಮತ್ತು ಅಭಿಮಾನದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

    ಇಲ್ಲಿ ಯಡಿಯೂರಪ್ಪವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇದೆಲ್ಲವೂ ಉಹಾಪೋಹಗಳು. ಸಿಎಂ ಹೇಳಿಕೆ ವಿಚಾರ ನಿನ್ನೆಯೇ ಮುಗಿದ ಅಧ್ಯಾಯ, ಪ್ರತಿ ವಾರದಂತೆ ಇವತ್ತು ನಾನು ದೆಹಲಿಗೆ ಹೊರಟಿರುವೆ. ನನ್ನ ಕೇಂದ್ರ ಸ್ಥಾನ ಇರುವ ಕಾರಣಕ್ಕೆ ದೆಹಲಿಗೆ ಹೊರಟಿರುವೆ. ಯಡಿಯೂರಪ್ಪ ಯಾವ ಹಿನ್ನೆಲೆಯಲ್ಲಿ ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ ಗೊತ್ತಿಲ್ಲ. ಆದರೂ ಅವರ ಹೇಳಿಕೆಯಲ್ಲಿ ಬೇರೆ ಅರ್ಥ ಏನಿಲ್ಲ ಎಂದು ಹೇಳಿದರು.

    ಸಿಎಂ ರೇಸ್‍ನಲ್ಲಿ ಬೆಲ್ಲದ್ ಹೆಸರು:
    ಸಿಎಂ ರೇಸ್‍ನಲ್ಲಿ ಅರವಿಂದ್ ಬೆಲ್ಲದ ಇದ್ದಾರೆ, ಸಹಿ ಸಂಗ್ರಹ ಮಾಡಿದ್ದಾರೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲಾರೆ. ಅದರ ಬಗ್ಗೆ ನಾನು ಏನೂ ಹೇಳಲಾರೆ ಎಂದರು. ಯಾವುದೇ ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ. ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಯಾವುದೇ ಸಹಿ ಸಂಗ್ರಹ ಆಗಿಯೇ ಇಲ್ಲ. ಒಂದೇ ಸಹಿ ಸಂಗ್ರಹ ನಡೆದಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ಸದನ ನಡೆದಾಗ ಸಹಿ ಮಾಡಿದ್ದೇವೆ. ಅದೊಂದೆ ಸಹಿ ಸಂಗ್ರಹ ನಡೆದಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ಪಕ್ಷದ ಶಾಸಕಾಂಗ ಸಭೆಯಲ್ಲೇ ಏನೇ ಇದ್ದರೂ ಚರ್ಚೆ ನಡೆಯುತ್ತದೆ. ಗ್ರಾಮೀಣದ ರಸ್ತೆ, ಗ್ರಾಮಿಣ ಭಾಗಕ್ಕೆ ಸಂಬಂಧಿಸಿದ ಶಾಸಕರ ಸಹಿ ಅದು. ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕು ನಾನು ಮಾಡುತ್ತಿರುವೆ ಎಂದು ಉತ್ತರಿಸಿದರು. ಇದನ್ನೂ ಓದಿ: ಸಿಎಂ ರೇಸ್ ಬಗ್ಗೆ ನಾನು ಹೇಳಿಕೆ ನೀಡಲ್ಲ, 1 ಸಹಿ ಸಂಗ್ರಹ ನಡೆದಿತ್ತು: ಬೆಲ್ಲದ

    ಸಿಎಂ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು.

  • ಬಿಜೆಪಿಗೆ ಬಂದ ಶಾಸಕರು ಸೊಸೆಯಂದಿರಿದ್ದಂತೆ, ಅವರು ಚೆನ್ನಾಗಿದ್ರೆ ಪಕ್ಷ ಚೆನ್ನಾಗಿರುತ್ತೆ: ಬೆಲ್ಲದ್

    ಬಿಜೆಪಿಗೆ ಬಂದ ಶಾಸಕರು ಸೊಸೆಯಂದಿರಿದ್ದಂತೆ, ಅವರು ಚೆನ್ನಾಗಿದ್ರೆ ಪಕ್ಷ ಚೆನ್ನಾಗಿರುತ್ತೆ: ಬೆಲ್ಲದ್

    ಹುಬ್ಬಳ್ಳಿ: ಬಿಜೆಪಿಯ 105 ಶಾಸಕರು ಹಾಗೂ ಬೇರೆ ಪಕ್ಷದ 17 ಶಾಸಕರಿಂದಲೇ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಗೆ ಬಂದ ಶಾಸಕರು ಹೊಸದಾಗಿ ಬಂದ ಸೊಸೆಯಂದಿರು ಇದ್ದಂತೆ. ಅವರು ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಅಹ ಧರ್ಮವಾಗಿದೆ ಎಂದು ಹೇಳುವ ಮೂಲಕ ವಲಸಿಗ ಶಾಸಕರಿಗೆ ಸೂಕ್ತ ಸ್ಥಾನಮಾನ ಕೊಡುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರಾದವರಿಗೆ ಸಚಿವರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ಸಚಿವ ಸ್ಥಾನಕ್ಕಾಗಿ ಪೈಪೋಟಿ ಮಾಡುವರೇ. ಸಚಿವ ಸಂಪುಟ ವಿಸ್ತರಣೆ ವಿಚಾರ ಬಂದಾಗ ಈ ರೀತಿ ಆಗುವುದು ಸಹಜ. ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತಿಕ್ಕಾಟ ಇಲ್ಲ, ಮೂಲ ಬಿಜೆಪಿ ಮತ್ತು ವಲಸಿಗರ ನಡುವೆ ಭಿನ್ನಾಭಿಪ್ರಾಯವಿಲ್ಲ. ಸಚಿವ ಸ್ಥಾನಕ್ಕಾಗಿ ಬೇರೆ ಬೇರೆ ರೀತಿಯ ಸ್ವರ ಬರುವುದು ಸಹಜ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

    ಸಚಿವ ಸ್ಥಾನಕ್ಕಾಗಿ ಎಲ್ಲ ಶಾಸಕರಲ್ಲೂ ಆಸೆ ಇರುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಲಾಬಿ ಮಾಡಬೇಕು ಎನ್ನುವ ಪರಿಸ್ಥಿತಿ ಇಲ್ಲ. ಪಕ್ಷದ ಹಿರಿಯರು ರಾಜ್ಯದ ಹಿತ ಕಾಪಾಡುವಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

    ಕನ್ನಡ ಪರ ಸಂಘಟನೆ ಕಾರ್ಯಕರ್ತರು ವಸೂಲಿಗೆ ಇಳಿದಿದ್ದಾರೆ ಎಂಬ ಹೇಳಿಗೆ ನಾನು ಈಗಲೂ ಬದ್ಧ. ಅದನ್ನು ನಾನು ಸಾಬೀತು ಮಾಡುವ ಅವಶ್ಯಕತೆ ಇಲ್ಲ. ಅಂತವರು ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದರು.