Tag: Arunkumar Pujar

  • ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಅಂಬ್ಯುಲೆನ್ಸ್ ದಾನ ನೀಡಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ

    ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.

    ಏಳೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ವೆಂಟಿಲೇಟರ್ ಸಹಿತ ಅಂಬ್ಯುಲೆನ್ಸ್‌ನ್ನು ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ್ ಪೂಜಾರ್ ಸಮ್ಮುಖದಲ್ಲಿ ಅಂಬ್ಯುಲೆನ್ಸ್‍ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸುವದಕ್ಕೆ ನೀಡಿದ್ದಾರೆ.

    ರಾಣೇಬೆನ್ನೂರು ತಾಲೂಕು ಪಂಚಾಯತಿಯ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಶಾಸಕ ಅರುಣ್‍ಕುಮಾರ್ ಪೂಜಾರ್‌ಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್‍ರು ಒದಗಿಸಿರುವ ಅಂಬ್ಯುಲೆನ್ಸ್‌ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸಕ್ಕೆ ಶಾಸಕ ಪೂಜಾರ್ ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಸೋಂಕಿತರಾಗೋ ಜನರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯತಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡುತ್ತದೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಹಾವೇರಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ ಪೂಜಾರ್ ಅವರು 16 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಶಾಸಕ ಅರುಣ್‍ಕುಮಾರ್ ಅವರು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 16.47 ಲಕ್ಷ ರೂ. ಚೆಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.

    ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದರು.

    ಮಠಗಳಿಂದ ದೇಣಿಗೆ:
    ಹುಬ್ಬಳ್ಳಿಯ ಪ್ರಖ್ಯಾತ ಮೂರುಸಾವಿರ ಮಠದಿಂದ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು 10 ಲಕ್ಷ ರೂ. ಚೆಕ್ ಅನ್ನು ಸಚಿವ ಜಗದೀಶ್ ಶೆಟ್ಟರ್ ಅವರ ಮೂಲಕ ಸರ್ಕಾರಕ್ಕೆ ಏಪ್ರಿಲ್ 15ರಂದು ಹಸ್ತಾಂತರಿಸಿದ್ದರು.

    ಇದಕ್ಕೂ ಮುನ್ನ ಸಿದ್ದಗಂಗಾ ಮಠ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆ ವತಿಯಿಂದ 50 ಲಕ್ಷ ರೂ.ವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಲಾಗಿತ್ತು. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಏಪ್ರಿಲ್ 4ರಂದು ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದ್ದರು.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠವು ಏಪ್ರಿಲ್ 1ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದ್ದರು.