Tag: Arunachal Pradesh

  • ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ನದಿಗೆ ಉರುಳಿದ 18 ಯೋಧರಿದ್ದ ಸೇನಾ ಜೀಪ್ – ವಿಜಯಪುರ ಯೋಧ ಸೇರಿ ಮೂವರು ಹುತಾತ್ಮ

    ವಿಜಯಪುರ: ಅಸ್ಸಾಂನ ಗುವಾಹಾಟಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇನಾ ಜೀಪ್ ನದಿಗೆ ಬಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಅರುಣಾಚಲ ಪ್ರದೇಶ ಹಾಗೂ ಆಸ್ಸಾಂ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ಎಂಬ ಚಾಪಕೋವ ಮೂಲದ ಮದ್ರಾಸ್ ರೆಜಿಮೆಂಟ್ ಟೆರಿಟೋರಿಯಲ್ ಸೈನ್ಯದಿಂದ 18 ಮಂದಿ ಯೋಧರು ಜೀಪ್ ನಲ್ಲಿದ್ದರು. ಆದರೆ ರಾತ್ರಿ ಇಡುಲಿ ಮತ್ತು ಕಾಬಾಂಗ್ ಗ್ರಾಮಗಳ ನಡುವೆ ಇದ್ದ ನದಿಯೊಳಗೆ ಇದ್ದಕ್ಕಿದ್ದಂತೆ ವಾಹನವು ಬಿದ್ದಿದೆ.

    ನದಿಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಒಬ್ಬ ಯೋಧ ಕೂಡ ಸೇರಿದ್ದಾರೆ. ನಂತರ ಕೂಡಲೇ ಪೊಲೀಸ್ ಮತ್ತು ಸೇನೆಯವರು ರಕ್ಷಣಾ ಕಾರ್ಯಚರಣೆ ಮಾಡಿ 15 ಮಂದಿ ಯೋಧರನ್ನು ರಕ್ಷಿಸಿದ್ದಾರೆ. ಮೃತ ಮೂವರು ಯೋಧರಲ್ಲಿ ಒಬ್ಬರು ಇನ್ನು ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಇನ್ನು ಈ ಅವಘಡದಿಂದ ಗಾಯಗೊಂಡ ಸೈನಿಕರಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಚಾಪಕೋವಾ ಫಸ್ಟ್ ರೆಫರಲ್ ಘಟಕಕ್ಕೆ ರವಾನಿಸಲಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಸುರಾಮ ಖ್ಯಾತನ್ನವರ(32) ಮೃತ ಯೋಧ. ಇವರು 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರುವರಿ 9 ರಂದು ಕೋಲ್ಹಾರ ಪಟ್ಟಣದಲ್ಲಿ ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಫೆ. 11 ರಂದು ಸೇವೆಗಾಗಿ ತೆರಳಿದ್ದರು.

    ಮೃತರ ಕುಟುಂಬಕ್ಕೆ ಸೇನೆಯ ಮೇಜರ್ ಕರಿಯಪ್ಪ ಅವರಿಂದ ಮಾಹಿತಿ ರವಾನೆ ಆಗಿದೆ. ಇತ್ತ ಯೋಧನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಅರುಣಾಚಲ ಪ್ರದೇಶದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ!

    ಇಟಾನಗರ: ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ. ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.

    ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

    31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

    ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು.

  • ವಾಯುಸೇನೆ ವಿಮಾನ ಪತನ- ಐವರ ಸಾವು

    ವಾಯುಸೇನೆ ವಿಮಾನ ಪತನ- ಐವರ ಸಾವು

    ಗುವಾಹಾಟಿ: ಭಾರತೀಯ ವಾಯು ಸೇನೆಯ ವಿಮಾನವೊಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಪತನಗೊಂಡಿದ್ದು 5 ಸೈನಿಕರು ಸಾವನ್ನಪ್ಪಿದ್ದಾರೆ

    ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಎಂಐ 17ವಿ5 ವಿಮಾನ ಪತನಗೊಂಡಿದ್ದು ಅವಘಡದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿವೆ. ವಿಮಾನದಲ್ಲಿ ಒಟ್ಟು 7 ಮಂದಿ ಇದ್ದರು ಎಂದು ವರದಿಯಾಗಿದೆ.

    ಚೀನಾ ಹಾಗೂ ಭಾರತದ ಗಡಿಯ 12 ಕಿ.ಮೀ ವ್ಯಾಪ್ತಿ ಭೂ ಪ್ರದೇಶದಲ್ಲಿ ಘಟನೆ ನಡೆದಿದೆ. ವಿಮಾನವು ಏರ್ ಮೇಂಟೆನೆನ್ಸ್ ಮಿಷನ್‍ನಲ್ಲಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ಪತನವಾಗಲು ಸ್ಪಷ್ಟ ಕಾರಣ ತಿಳಿಯಲು ಭಾರತೀಯ ವಾಯು ಸೇನೆ ತನಿಖೆಗೆ ಅದೇಶವನ್ನು ನೀಡಿದೆ.

    ಎಂಐ 17ವಿ5 ವಿಮಾನವು ರಷ್ಯಾ ನಿರ್ಮಿತ ಮಿಲಿಟರಿ ರಕ್ಷಣಾ ವಿಮಾನವಾಗಿದ್ದು, ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಚರಣೆಗಳನ್ನು ಕೈಗೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಶ್ರೇಣಿಯ ವಿಮಾನಗಳನ್ನು ಇತ್ತೀಚೆಗೆ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿತ್ತು.