ಧಾರವಾಡ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ಪ್ರಧಾನಿ ತೀರ್ಮಾನಿಸಿದಾಗ ವಿಸ್ತರಣೆಯಾಗುತ್ತದೆ. ರಾಜ್ಯ ಸರ್ಕಾರದ ಶ್ವಾಸಕೋಶ ಸರಿಯಾಗಿದೆ. ಸಹಜವಾಗಿ ಉಸಿರಾಡುತ್ತಿದೆ. ತುಂಬಾನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟ ಪ್ರಧಾನಿ ತೀರ್ಮಾನದ ಮೇಲೆ ವಿಸ್ತರಣೆ, ಪುನರ್ ರಚನೆ ಆಗುತ್ತದೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಅದರ ಬಗ್ಗೆ ಮೊದಲೇ ನಮ್ಮ ಸರ್ಕಾರದಲ್ಲಿ ಗೊತ್ತಾಗುವುದಿಲ್ಲ. ಹೀಗಾಗಿ ನಾನು ಉತ್ತರಿಸಲು ಅರ್ಹನಲ್ಲ ಎಂದರು.
ರಾಜ್ಯ ಸರ್ಕಾರಕ್ಕೆ ಉಸಿರಾಟದ ಸಮಸ್ಯೆ ಇದೆಯಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಸರ್ಕಾರದ ಶ್ವಾಸಕೋಶ ಈಗ ಸರಿಯಾಗಿವೆ, ಸಹಜವಾಗಿ ಉಸಿರಾಡುತ್ತಿದೆ, ಶ್ವಾಸಕೋಶಗಳು ತುಂಬಾನೇ ಗಟ್ಟಿಯಾಗಿವೆ ಹಾಗಾಗಿ ಸರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಾ.ಸುಧಾಕರ್
ಸುತ್ತೂರು ಮಠಕ್ಕೆ ರಾಜಕಾರಣಿಗಳ ಭೇಟಿ ವಿಚಾರವಾಗಿ ಮಾತನಾಡಿ, ಶ್ರೀಗಳ ಮಾತೋಶ್ರೀ ನಿಧನರಾಗಿದ್ದರು. ಅವರನ್ನು ಭೇಟಿಯಾಗಲು ಕೆಲವರು ಹೋಗುತ್ತಿದ್ದಾರೆ, ಎಲ್ಲವನ್ನೂ ರಾಜಕೀಯ ಅಂದರೆ ಹೇಗೆ, ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎನ್ನುವ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯೋಗೇಶ್ವರ್ ಯಾವ ವಿ.ವಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅಲ್ಲೇ ಫಲಿತಾಂಶ ಬರುತ್ತೆ. ಅವರು ಪರೀಕ್ಷೆ ಬರೆದ ವಿವಿಯ ಕುಲಪತಿ ಅರುಣ್ ಸಿಂಗ್ ಅವರು ಈಗಾಗಲೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಇದೀಗ ಸಚಿವ ಸಿ.ಪಿ ಯೋಗೇಶ್ವರ್ ಅವರು ರಾತ್ರೋರಾತ್ರಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಹೋಗಿ ಬಂದಿದ್ದರು. ಇದೀಗ ನಿನ್ನೆ ಸಿಪಿ ಯೋಗೇಶ್ವರ್ ಅವರು ದಿಢೀರ್ ದೆಹಲಿಗೆ ಹಾರಿದ್ದಾರೆ. ಪರೀಕ್ಷೆ ಬರೆದು ರಿಸಲ್ಟ್‍ಗೆ ಕಾಯ್ತಿದ್ದೇವೆ ಎಂದಿದ್ದ ಯೋಗೇಶ್ವರ್, ಇಂದು ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆಗಳಿವೆ. ವರದಿ ಸಲ್ಲಿಕೆ ಬಳಿಕ ನಾಯಕತ್ವ ಬದಲಾವಣೆ ಸೆಕೆಂಡ್ ಇನ್ನಿಂಗ್ಸ್ ಶುರುನಾ ಎಂಬ ಪ್ರಶ್ನೆ ಎದ್ದಿದೆ.
ಅರುಣ್ ಸಿಂಗ್ ಅವರು ಬಿಎಸ್‍ವೈ ಪರವಾಗಿದ್ದಾರೆ ಅಂತ ಕೆಲವು ಶಾಸಕರು ದೂರಿದ್ದರು. ಕೆಲ ಶಾಸಕರು, ಸಚಿವರು ತಮ್ಮ ಆಪ್ತರಲ್ಲಿ ಅತೃಪ್ತಿ ಹೊರ ಹಾಕಿದ್ದರು. ಇತ್ತೀಚೆಗೆ ಬಿಎಸ್‍ವೈ ಪರವಾಗಿಯೇ ವರದಿ ನೀಡಿದ್ದ ಅರುಣ್ ಸಿಂಗ್, ಯೋಗೇಶ್ವರ್ ಸೇರಿ ಹಲವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಅರುಣ್ ಸಿಂಗ್ ವರದಿ ಬೆನ್ನಲ್ಲೇ ವರಿಷ್ಠರಿಗೆ ದೂರು ನೀಡುವ ಪ್ರಯತ್ನ ಸಾಧ್ಯತೆ ಇದೆ. ಹೀಗಾಗಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಸಿಪಿಸಿ ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಡಿ.ರೂಪ ಮತ್ತೆ ಅಸಮಧಾನ
ಲಕ್ನೋ: ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ ಅಥವಾ ಅಪರಾಧಿ ಕುಲದೀಪ್ ಸೆನ್‍ಗರ್ ಜೊತೆಗಿದೆಯಾ ಎಂದು ಉನ್ನಾವೋ ಪ್ರಕರಣದ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ.
ಉನ್ನಾವೋ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಚುನಾವಣೆಗೆ ಅರುಣ್ ಸಿಂಗ್ ಬಿಜೆಪಿ ಅಭ್ಯರ್ಥಿ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಕುಲದೀಪ್ ಸೆನ್‍ಗರ್ ಆಪ್ತ. ಹೀಗಾಗಿ ಅರುಣ್ ಸಿಂಗ್‍ಗೆ ಟಿಕೆಟ್ ನೀಡಿರುವುದನ್ನ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿರೋಧಿಸಿದ್ದಾರೆ. ಈ ಸಂಬಂಧ ವೀಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ವೀಡಿಯೋ ಹೇಳಿಕೆ: ಮಾನ್ಯ ರಾಷ್ಟ್ರಪತಿಗಳೇ, ಪ್ರಧಾನಿಗಳು ಮತ್ತು ಸಿಎಂ ಯೋಗಿ ಆದಿತ್ಯನಾಥ್ ನೀವು ನನ್ನ ಪಶ್ನೆಗೆ ಉತ್ತರ ನೀಡಬೇಕು. ಒಂದು ವೇಳೆ ಅರುಣ್ ಸಿಂಗ್ ಚುನಾವಣೆಯಲ್ಲಿ ಗೆದ್ದರೆ, ನನ್ನ ಜೀವಕ್ಕಿರುವ ಅಪಾಯ ಹೆಚ್ಚಾಗಲಿದೆ. ಕೂಡಲೇ ಸರ್ಕಾರ ಮತ್ತು ಪಕ್ಷ ಅರುಣ್ ಸಿಂಗ್‍ಗೆ ನೀಡಿರುವ ಟಿಕೆಟ್ ಹಿಂಪಡೆದುಕೊಳ್ಳಬೇಕು. ಕಳಂಕರಹಿತರಿಗೆ ಟಿಕೆಟ್ ನೀಡಬೇಕು. ನನ್ನ ಚಿಕಪ್ಪ ಪೊಲೀಸ್ ಬಂಧನದಲ್ಲಿದ್ದು, ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಕುಲ್‍ದೀಪ್ ಪ್ರಭಾವದಿಂದ ಪೆರೋಲ್ ಸಿಗುತ್ತಿಲ್ಲ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.
ಸಂತ್ರಸ್ತೆ ಹೇಳಿಕೆ ಬಳಿಕ ಬಿಜೆಪಿ ನೀಡಿದ ಟಿಕೆಟ್ ಹಿಂಪಡೆದುಕೊಂಡಿದೆ. ಅರುಣ್ ಸಿಂಗ್ ನಮ್ಮ ಅಭ್ಯರ್ಥಿ ಅಲ್ಲ, ಶಕುನ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜ್ ಕಿಶೋರ್ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಉನ್ನಾವೋ ಕೇಸ್ – ಅತ್ಯಾಚಾರಿ ಶಾಸಕ ಸೆಂಗಾರ್‌ಗೆ ಜೀವಾವಧಿ ಜೈಲು ಶಿಕ್ಷೆ
ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಎಂಬುವುದು ಹಾಗೂ ಅರುಣ್ ಸಿಂಗ್ ವರದಿ ನೀಡಿದರು ಎನ್ನುವುದು ಎರಡೂ ಸುಳ್ಳು ಸುದ್ದಿ. ಅವರು ಯಾರೆಂದು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ. ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್ ಎಂದು ಸಿ.ಟಿ.ರವಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದಾರೆ.
ತಾಲೂಕಿನ ಭದ್ರಾ ನದಿ ಬಳಿ ಕೊರೊನಾದಿಂದ ಸತ್ತವರು ಅಸ್ಥಿ ವಿಸರ್ಜನೆ ಬಳಿಕ ಮಾತನಾಡಿದ ಅವರು, ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಕಳ್ಳನ ಹೆಂಡತಿ ಡ್ಯಾಶ್ ಅಂತೇಳಿ. ಅವರನ್ನು ಪತ್ತೆ ಹಚ್ಚುವುದು ಕಷ್ಟದ್ದೇನಲ್ಲ. ಎಷ್ಟು ದಿನ ಈ ರೀತಿ ಮುಚ್ಚಿಟ್ಟು ಸುಳ್ಳು ಸುದ್ದಿ ಹಬ್ಬಿಸಲು ಆಗುತ್ತೆ. ಒಂದು ದಿನ ಪತ್ತೆ ಆಗೇ ಆಗುತ್ತೆ. ಪಾರ್ಟಿ ಎಲ್ಲವನ್ನೂ ಗಮನಿಸುತ್ತಿರುತ್ತೆ, ಯಾವಾಗ ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತದೆ ಎಂದರು.
ಉದ್ದೇಶ ಪೂರ್ವಕವಾಗೋ, ದುರುದ್ದೇಶ ಪೂರ್ವಕವಾಗೋ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಒಂದು ಸುಳ್ಳು ಸುದ್ದಿ. ಅರುಣ್ ಸಿಂಗ್ ವರದಿ ನೀಡಿದರು ಎಂಬುವುದು ಕೂಡ ಸುಳ್ಳು ಸುದ್ದಿ ಎಂದರು. ಅರುಣ್ ಸಿಂಗ್ ನಾನು ಕಳೆದ 30 ವರ್ಷಗಳ ಒಡನಾಡಿಗಳು. ಅವರಿಗೆ ಫೋನ್ ಮಾಡಿ ಮಾತನಾಡಿದೆ. ಅವರು ಮೂರು ದಿನ ಕೇಂದ್ರದಲ್ಲೇ ಇಲ್ಲ. ಆದರೆ, ಕೆಲವು ಪ್ರಮುಖ ಪತ್ರಿಕೆಗಳು, ಸುದ್ದಿ ವಾಹಿನಿಗಳು ವರದಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನ ಹಬ್ಬಿಸಿದರು. ಇದರ ಹಿಂದೆ ಯಾರದ್ದೋ ಷಡ್ಯಂತ್ರದ ಕೈವಾಡವಿರುವಂತೆ ಕಾಣುತ್ತಿದೆ ಎಂದು ನುಡಿದರು.
ಅಪಪ್ರಚಾರ ಮಾಡಬೇಕೆಂಬ ಷಡ್ಯಂತ್ರ ಹಾಗೂ ಒಂದಲ್ಲ ಒಂದು ರೀತಿ ಸುದ್ದಿಯನ್ನ ಜೀವಂತವಾಗಿಡಬೇಕೆಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ, ಇದರ ಹಿಂದೆ ಒಂದು ಷಡ್ಯಂತ್ರ ಇದೆ. ಷಡ್ಯಂತ್ರದ ಕಾರಣದಿಂದಾಗಿಯೇ ಸುಳ್ಳು ಸುದ್ದಿಗಳನ್ನು ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮುಖ್ಯಮಂತ್ರಿ ಕುರ್ಚಿಗೆ ಡಿಕೆಶಿ ಬಹಳ ದಿನದಿಂದ ಕಾಯ್ತಿದ್ದಾರೆ: ಸಂಗಣ್ಣ
ಸುದ್ದಿ ಬಿಟ್ಟು ಚರ್ಚೆ ಹುಟ್ಟು ಹಾಕುತ್ತಾರೆ. ಚರ್ಚೆಗೆ ಬಿಟ್ಟು ಕ್ರಿಯೆ-ಪ್ರತಿಕ್ರಿಯೆ ಕೇಳುತ್ತಾರೆ. ಕ್ರಿಯೆ-ಪ್ರತಿಕ್ರಿಯ ಮೂಲಕ ಅದೇ ಜೀವಂತವಾಗಿರುತ್ತದೆ ಎಂದು ಹೇಳಿದರು. ನಾನು ಮೂರು ದಿನ ದೆಹಲಿಯಲ್ಲಿ ಇಲ್ಲ. ಯಾವ ಪತ್ರಿಕೆಯಲ್ಲಿ ಬಂದಿದೆ, ನನಗೆ ಗೊತ್ತಿಲ್ಲ. ಡಿಟೇಲ್ಸ್ ಕೊಡು ಎಂದು ಅರುಣ್ ಸಿಂಗ್ ಅವರೇ ನನಗೆ ಹೇಳಿದ್ದಾರೆ. ಸುದ್ದಿ ಹುಟ್ಟುಹಾಕಿದವರು ಯಾರು. ಸುದ್ದಿಯ ಸೃಷ್ಠಿಕರ್ತರು ಯಾರೆಂದು ಪ್ರಶ್ನಿಸಿದರು.
ಸುಳ್ಳು ಸುದ್ದಿಯ ಸೃಷ್ಟಿಕರ್ತರು ಹಿಂಗೇಲ್ಲಾ ಸೃಷ್ಟಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಕೆಲಸ ಇಲ್ಲದವರು ಅದನ್ನು ಮಾಡುತ್ತಾರೆ. ನಾವು ಜನರ ಮಧ್ಯೆ ಇದ್ದು, ಕೆಲಸ ಮಾಡುವವರು. ಕ್ಷೇತ್ರಕ್ಕೆ ಬಂದರೆ ಜನರ ಜೊತೆ ಇರುತ್ತೇವೆ. ಇಲ್ಲವಾದರೆ ಸಂಘಟನೆ ಕೆಲಸದಲ್ಲಿ ಇರುತ್ತೇವೆ. ನಮಗೆ ಯೋಚನೆ ಮಾಡಲು ಪರುಸೊತ್ತು ಇರಲ್ಲ. ಒಂದಲ್ಲ ಒಂದು ಊರಲ್ಲಿ ಯಾವುದಾದರೂ ಚಟುವಟಿಕೆಯಲ್ಲಿ ಇರುತ್ತೇವೆ. ಕೆಲಸ ಇಲ್ಲದವರಿಗೆ ಈ ರೀತಿ ಸೃಷ್ಟಿ ಮಾಡುವುದೇ ಕೆಲಸವಾಗಿರುತ್ತೆ ಎಂದರು.
ನವದೆಹಲಿ: ಸಿಎಂ ಚೇಂಜ್ ಫೈಟ್‍ನ ಚೆಂಡು ಹೈಕಮಾಂಡ್ ಅಂಗಳ ತಲುಪಿದೆ. ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿದ ಅರುಣ್ ಸಿಂಗ್, ರಾಜ್ಯ ಬಿಜೆಪಿಯಲ್ಲಿನ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ.
ನಾಯಕತ್ವ ಬದಲಾವಣೆ ಸಂಬಂಧ ಶಾಸಕರ ಅಭಿಪ್ರಾಯ ಏನು..? ಸಚಿವರ ಒಲವು ಯಾರ ಕಡೆಗಿದೆ. ಬಿಎಸ್‍ವೈ ಪರ, ವಿರೋಧಿ ಬಣಗಳ ಬಲಾಬಲ ಏನು..? ಯಡಿಯೂರಪ್ಪರನ್ನು ಈಗ ಬದಲಿಸಿದ್ರೇ ಏನಾಗಬಹುದು..? ಬದಲಿಸದಿದ್ರೆ ಏನಾಗಬಹುದು..? ಕೋರ್ ಕಮಿಟಿ ಪ್ರಕಾರ ಏನೆಲ್ಲಾ ಬದಲಾಗಬೇಕು..? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಅನ್ನು ಹೈಕಮಾಂಡ್‍ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಅರುಣ್ ಸಿಂಗ್ ವರದಿ ಆಧರಿಸಿ ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಹೈಕಮಾಂಡ್ ರಾಜ್ಯದ ನಾಯಕತ್ವ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರುವ ಸಂಭವ ಇದೆ. ಅರುಣ್ ಸಿಂಗ್ ವರದಿ ಯಾರ ಬುಡಕ್ಕೆ ನೀರು ತರಲಿದೆ, ಯಾರ ಬಲ ಹೆಚ್ಚಿಸಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಒಂದು ವೇಳೆ ಇನ್ನು ಒಂದೆರಡು ದಿನಗಳಲ್ಲಿ ಭಿನ್ನರ ವಿರುದ್ಧ ಹೈಕಮಾಂಡ್ ಯಾವುದೇ ಕ್ರಮ ತೆಗೆದುಕೊಳ್ಳದಿದ್ರೆ ಅದು ಯಡಿಯೂರಪ್ಪಗೆ ಪರೋಕ್ಷ ಸಂದೇಶ ರವಾನಿಸಿದಂತೆ ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಜಮೀರ್ ಮೊದಲು ಬಿಎಸ್‍ವೈ ಮನೆ ವಾಚ್‍ಮೆನ್ ಆಗಿ: ರೇಣುಕಾಚಾರ್ಯ
ಬಳ್ಳಾರಿಯಲ್ಲಿ ಮಾತಾಡಿದ ಈಶ್ವರಪ್ಪ, ಇನ್ನೆರಡು ವರ್ಷ ಬಿಎಸ್‍ವೈ ಅವರೇ ಸಿಎಂ ಎಂದು ಅರುಣ್ ಸಿಂಗ್ ಅವರೇ ಖುದ್ದು ತಿಳಿಸಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತಾ ಈಶ್ವರಪ್ಪ ಒತ್ತಾಯಿಸಿದ್ರು. ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಿಎಂ ರೇಸ್‍ನಲ್ಲಿ ನಮ್ಮ ಮೂರು ಹುಲಿಗಳು ಓಡುತ್ತಿವೆ ಅಂತಾ ಹೇಳಿದ್ರು.
ಬೆಂಗಳೂರು: ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು. ಪಕ್ಷಕ್ಕೆ ನಷ್ಟ ಉಂಟಾಗುವ ರೀತಿಯಲ್ಲಿ ಎರಡರಿಂದ ಮೂರು ಜನರು ಕೆಲಸ ಮಾಡುತ್ತಿದ್ದಾರೆ. ಅಂಥ ಕೆಲವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಪಕ್ಷದ ವಿರುದ್ಧ ಮಾತನಾಡುವವರಿಗೆ ಹಾಗೆ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದ ಮುಖಂಡರು ಮುಂದಾಗಬೇಕು ಎಂದು ಅವರು ಸೂಚಿಸಿದರು.
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಗೆ ಕಚ್ಚಾಟ ನಡೆಸುತ್ತಿರುವುದು ಕೇವಲ ಅಧಿಕಾರಕ್ಕಾಗಿ, ಇದು ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕೋವಿಡ್ ಭಯದಿಂದ ದಿನ ಕಳೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಜನರ ನೋವು, ಕಷ್ಟದ ಬಗ್ಗೆ ಕರುಣೆ ಇಲ್ಲ, ಅಧಿಕಾರ ಕಚ್ಚಾಟಕ್ಕೆ ಸಭೆ ಸೇರಿದರೆ ಇವರಿಗೆ ಕೋವಿಡ್ ನಿಯಮ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಈ ಕಚ್ಚಾಟದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೌರವ, ಘನತೆಗೆ ಧಕ್ಕೆಯಾಗಿದೆ. ರಾಜಕೀಯ ಜಂಜಾಟವನ್ನು ಒಂದು ತಿಂಗಳು ಮುಂದೆ ಹಾಕಲಿ. ಈಗ ಕೊರೊನಾ ಸಮಯ, ಜನರ ಪ್ರಾಣ ಉಳಿಸುವತ್ತ ಚಿತ್ತ ಹರಿಸಲಿ ಎಂದರು.
– ಇಬ್ಬರು, ಮೂವರಿಂದ ನಾಯಕತ್ವ ಬದಲಾವಣೆ ಮಾತು
– ಹೊಸಬರಿಗೆ ಪಕ್ಷದ ರೀತಿ, ನೀತಿ ಗೊತ್ತಿಲ್ಲ
ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಕೇವಲ ಇಬ್ಬರು, ಮೂವರು ಈ ಬಗ್ಗೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ಮನವೊಲಿಕೆ ಕೆಲಸ ಸಹ ನಡೆಯುತ್ತಿದೆ. ಒಂದು ವೇಳೆ ಸುಮ್ಮನಾಗದಿದ್ದರೆ ಸೂಕ್ತ ಕ್ರಮವನ್ನು ಸಹ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.
ಬಿಜೆಪಿ ಕಚೇರಿಯಲ್ಲಿ 15 ಶಾಸಕರು ಸೇರಿ ಹಲವು ನಾಯಕರೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಯಾವ ಶಾಸಕರ ಬಳಿಯೂ ನಾನು ಚರ್ಚಿಸಿಲ್ಲ. ಈ ಕುರಿತು ಚರ್ಚಿಸುವುದಾದರೆ ಎಲ್ಲ ನಾಯಕರೊಂದಿಗೆ ಸಭೆ ನಡೆಸುತ್ತಿದ್ದೆ. ಪಕ್ಷದಲ್ಲಿ ಒಬ್ಬಬ್ಬಿರು ಇಂತಹ ನಾಯಕರು ಇದ್ದಾರೆ, ಇದರಿಂದಾಗಿ ಪಕ್ಷಕ್ಕೆ ಮುಜುಗರವಾಗುತ್ತಿರುವುದು ಸತ್ಯ. ಪಕ್ಷದ ಸಂಘಟನೆ, ನಾಯಕರ ಹೇಳಿಕೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪರಿಶೀಲಿಸುತ್ತಿದ್ದಾರೆ. ಆದರೆ ಯಾರೂ ಸಹ ಮಾಧ್ಯಮದ ಮುಂದೆ ಮಾತನಾಡಿ, ಪಕ್ಷಕ್ಕೆ ಮುಜುಗರವನ್ನುಂಟು ಮಾಡಬೇಡಿ ಎಂದು ಎಚ್ಚರಿಸಿದರು.
ಕೇವಲ ಇಬ್ಬರು, ಮೂವರು ಹೇಳಿಕೆ ನೀಡುವ ಮೂಲಕ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡುತ್ತಿದ್ದಾರೆ. ಈ ಕುರಿತು ನಾವು ಖಂಡಿತವಾಗಿಯೂ ಲಕ್ಷ್ಯ ವಹಿಸುತ್ತೇವೆ. ಇದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿದಿದೆ, ನಮಗೂ ಈ ಕುರಿತು ಗೊತ್ತಿದೆ. ಅವರ ಮನವೊಲಿಸುವ ಪ್ರಕ್ರಿಯೆ ಸಹ ನಡೆಯುತ್ತಿದೆ. ಮಾತು ಕೇಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಲ ಹೊಸಬರು ನಾಯಕತ್ವದ ಬಗ್ಗೆ ಮಾತನಾಡುತ್ತಿರುವುದನ್ನು ಪಕ್ಷದ ನಾಯಕರು ತಿಳಿಸಿದರು. ಅವರಿಗೆ ಪಕ್ಷದ ರೀತಿ, ನೀತಿ, ಸಿದ್ಧಾಂತ ತಿಳಿದಿಲ್ಲ, ಹೀಗಾಗಿ ಮಾತನಾಡುತ್ತಿದ್ದಾರೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ತಮ್ಮ ಜೀವನನ್ನು ಪಣಕ್ಕಿಟ್ಟು ಪಕ್ಷವನ್ನು ಸಂಘಟಿಸಿ, ಉನ್ನತ ಸ್ಥಾನದಲ್ಲಿರಿಸಿದ್ದಾರೆ. ಆದರೆ ಕೆಲ ಹೊಸಬರಿಗೆ ಪಕ್ಷದ ಸಂಸ್ಕøತಿ, ರೀತಿ, ನೀತಿ ಗೊತ್ತಿಲ್ಲ. ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಪಕ್ಷಕ್ಕೆ ನಷ್ಟವನ್ನುಂಟುಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಎಚ್ಚರಿಕೆ ನೀಡಿದರು.
ನಾವು ಯಾರನ್ನೂ ಕರೆದಿರಲಿಲ್ಲ, ಬಿಡುವು ಇದ್ದಿದ್ದಕ್ಕಾಗಿ ಕೆಲ ನಾಯಕರು ಹಾಗೂ ಶಾಸಕರು ಅವರೇ ಬಂದು ಭೇಟಿಯಾಗಿದ್ದಾರೆ. ಈ ವೇಳೆ ಕೊರೊನಾ ಸಂಕಷ್ಟದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದೀರಿ, ಕ್ಷೇತ್ರದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಲಾಯಿತು. ತುಂಬಾ ಚೆನ್ನಾಗಿ ಕೆಲಸ ಮಾಡಿರುವುದಾಗಿ ಶಾಸಕರು ಉತ್ತರಿಸಿದರು. ಅಂಬುಲೆನ್ಸ್, ಕೋವಿಡ್ ಆಸ್ಪತ್ರೆ, ರೇಷನ್ ಕಿಟ್ ನೀಡುವುದು ಸೇರಿದಂತೆ ಇತರೆ ಸೇವೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಹಗಲು ರಾತ್ರಿ ಎನ್ನದೆ ಶಾಸಕರು ದುಡಿದಿದ್ದಾರೆ.
ಇದೀಗ ಪಕ್ಷದಲ್ಲಿನ ಕೆಲಸ, ಸಂಘಟನೆ ಸೇರಿದಂತೆ ವಿವಿಧ ಕೆಲಸಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಪಕ್ಷ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಅಂತರಾಷ್ಟ್ರೀಯ ಯೋಗ ದಿನ, ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ, ಸಸಿ ನೆಡುವುದು ಹಾಗೂ ಲಸಿಕೆ ಕೇಂದ್ರಗಳಲ್ಲಿ ಸಹಾಯ ಮಾಡುವುದು ಹಾಗೂ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಯೋಜನೆಗಳ ಕುರಿತು ಯಾವ ರೀತಿ ಪ್ರಚಾರ ಮಾಡಿದ್ದೀರಿ ಎಂದು ವಿವರಣೆ ಕೇಳಲಾಗಿದೆ. ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಕುರಿತು ಜಾಗೃತಿ, ಪ್ರಚಾರ ಮಾಡಬೇಕಿದೆ ಎಂದರು.
ಎಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಬಲವರ್ಧನೆ ಮಾಡಬೇಕು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಮಟ್ಟಕ್ಕೂ ಕೊಂಡೊಯ್ಯಬೇಕು. ಸಚಿವರು ಕಾರ್ಯಕರ್ತರಿಗೆ ಸಮಯ ನೀಡಲು ತಿಳಿಸಲಾಗಿದೆ. ಅಲ್ಲದೆ ಪಕ್ಷದ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಶಾಸಕರು, ಕಾರ್ಯಕರ್ತರು ಅದ್ಭುತವಾಗಿ ಕೆಲಸ ಮಾಡಿದ್ದಾರೆ.
ಬೆಂಗಳೂರು: ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ ಎಂಬ ವಿಶ್ವನಾಥ್ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದರು. ಇದು ಬಿಜೆಪಿ ಪಾರ್ಟಿ ವಿಚಾರ. ನಮಗೂ ಈ ಪಾರ್ಟಿ ವಿಚಾರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಬಿಎಸ್ ವೈ ನಾದ್ರೂ ಇಟ್ಕೊಳ್ಳಲಿ, ವಿಶ್ವನಾಥ್ ರನ್ನಾದ್ರೂ ಮಾಡಲಿ, ಈಶ್ವರಪ್ಪನವರಾನ್ನಾದ್ರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಅಷ್ಟೆ ಎಂದರು.
ಕೇಂದ್ರ ಸರ್ಕಾರ ಕೊರೊನಾದಿಂದ ಸತ್ತವರಿಗೆ ಪರಿಹಾರ ಕೊಡುವ ವಿಚಾರ ಮಾಡ್ತಿಲ್ಲ. ರಾಜ್ಯದಲ್ಲಿ ಅನೌನ್ಸ್ ಮಾಡಿದವರಿಗೆ ಪರಿಹಾರ ಸರಿಯಾಗಿ ತಲುಪಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಟ್ಯಾಕ್ಸ್ ಮನ್ನಾ ಮಾಡಿದ್ದಾರೆ. ಇಲ್ಲಿ ಜನರಿಗೆ ಅನುಕೂಲವಾಗೋ ಯಾವ ಕೆಲಸನೂ ಮಾಡಿಲ್ಲ. ಚೆಕ್ ನಮಗೆ ಕೊಡಿ ಒಂದು ರೂಪಾಯಿನೂ ನಾವು ವೇಸ್ಟ್ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್
ವಿಶ್ವನಾಥ್ ಒಬ್ಬರೇ ಈ ಮಾತನ್ನು ಆಡಿಲ್ಲ. ಯತ್ನಾಳ್ ಈಶ್ವರಪ್ಪ ಬೇರೆ ಬೇರೆ ಮಿನಿಸ್ಟರ್ ಮಾತಾನಾಡಿದ್ದಾರಲ್ಲ, ನಾವು ಪಾರ್ಟಿ ಇನ್ ಸೈಡ್ ವಿಚಾರಕ್ಕೆ ಹೆಚ್ಚು ಮಾತಾನಾಡಲ್ಲ. ಅರುಣ್ ಸಿಂಗ್ ಅವರೇ ಬಿಎಸ್ ವೈ ಸರ್ಕಾರ ಕೊರೊನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದೆ ಅಂತೀರಲ್ಲ. 36 ಜನ ಮರ್ಡರ್ ಮಾಡಿದ್ದಾರೆ. ಇಲ್ಲಿ ಒಬ್ಬರ ಮೇಲೂ ಎಫ್ ಐ ಆರ್ ಹಾಕಿಲ್ಲ. ಇದು ಉತ್ತಮ ಕೆಲಸವೇ ಎಂದು ಪ್ರಶ್ನಿಸಿದರು.
ಆಕ್ಸಿಜನ್ ಐಸಿಯು ಇಲ್ಲದೇ ಜನ ಸತ್ತಿದ್ದಾರೆ. ಇದು ಉತ್ತಮ ಕೊರೊನಾ ನಿರ್ವಹಣೆಯೇ..? ಎಲ್ಲದಕ್ಕೂ ಕೋರ್ಟ್ ಮಧ್ಯಪ್ರವೇಶಿಸಿ ನಿಮಗೆ ತರಾಟೆಗೆ ತೆಗೆದುಕೊಂಡಿರೋದು ಎಂದು ಡಿಕೆಶಿ ಅವರು ಅರುಣ್ ಸಿಂಗ್ ವಿರುದ್ಧ ವಾಗ್ಧಾಳಿ ನಡೆಸಿದರು.
ಬೆಂಗಳೂರು: ಇವತ್ತು ಸಿಎಂ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿಗೆ ಬಿಗ್ ಡೇ ಆಗಿದ್ದು 30ಕ್ಕೂ ಹೆಚ್ಚು ಶಾಸಕರ ಬಳಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ, ಯಡಿಯೂರಪ್ಪ ವಿರೋಧಿ ಮತ್ತು ತಟಸ್ಥ ಬಣಗಳಿವೆ. ಈ ಪೈಕಿ ಯಡಿಯೂರಪ್ಪ ಪರ ಶಾಸಕರ ಸಂಖ್ಯೆ ಹೆಚ್ಚಿದೆ. 30ಕ್ಕೂ ಶಾಸಕರು ಅಭಿಪ್ರಾಯ ಸಂಗ್ರಹಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ಮಾಡಿ ತಮ್ಮ ಹೆಸರನ್ನು ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್