Tag: Arun Kumar

  • ಕನ್ನಡಿಗ ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಕೋಚ್

    ಕನ್ನಡಿಗ ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಕೋಚ್

    ಬೆಂಗಳೂರು: ಕರ್ನಾಟಕ ತಂಡದ ಮಾಜಿ ಆಟಗಾರ, ತಂಡದ ಮಾಜಿ ಯಶಸ್ವಿ ಕೋಚ್ ಜೆ ಅರುಣ್ ಕುಮಾರ್ ಅವರು ಅಮೆರಿಕ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದಾರೆ.

    ಯುಎಸ್‍ಎ ಕ್ರಿಕೆಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಯಾನ್ ಹಿಗ್ಗಿನ್ಸ್ ತಂಡದ ಅಧಿಕೃತ ವೆಬ್‍ಸೈಟ್‍ನಲ್ಲಿ ಅರುಣ್ ಕುಮಾರ್ ಆಯ್ಕೆಯಾದ ವಿಚಾರವನ್ನು ತಿಳಿಸಿದ್ದಾರೆ. ಕೆಲ ದಿನಗಳಿಂದ ಕೋಚ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಐಪಿಎಲ್ ಮಾಜಿ ಆಟಗಾರ, ಕೋಚ್ ಅರುಣ್ ಕುಮಾರ್ ಸೂಕ್ತ ವ್ಯಕ್ತಿ ಎಂದು ಭಾವಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಕೋವಿಡ್-19 ನಿಂದಾಗಿ ಸ್ವಲ್ಪ ತಡವಾದರೂ ಮುಂದೆ ಹ್ಯೂಸ್ಟನ್ ನಲ್ಲಿ ಕ್ಯಾಂಪ್ ನಲ್ಲಿ ಆಟಗಾರರಿಗೆ ತರಬೇತಿ ನೀಡಲಿದ್ದಾರೆ ಎಂದು ಐಯಾನ್ ಹಿಗ್ಗಿನ್ಸ್ ಹೇಳಿದ್ದಾರೆ.

     

     

    ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್, ಅಮೆರಿಕದಲ್ಲಿ ಕೊರೊನಾ ವೈರಸ್ ಕಡಿಮೆಯಾಗಿ ವೀಸಾ ಸಿಕ್ಕಿದ ನಂತರ ಅಲ್ಲಿಗೆ ತೆರಳುತ್ತೇನೆ. ಟೆಸ್ಟ್ ಗೆ ಅಮೆರಿಕ ತಂಡವನ್ನು ತಯಾರಿ ಮಾಡುವುದು ನನ್ನ ಮೊದಲ ಗುರಿ. ಸಿಕ್ಕಿರುವ ಕಡಿಮೆ ಅವಧಿಯಲ್ಲಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಗೆಲ್ಲುವಂತೆ ಮಾಡಬೇಕಿದೆ. ತಂಡದ ಗುಣಮಟ್ಟವನ್ನು ಹೆಚ್ಚಿಸಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

    ಕರ್ನಾಟಕ ರಣಜಿ ತಂಡದಲ್ಲಿ ‘ಜಾಕ್’ ಎಂದೇ ಪ್ರಸಿದ್ಧಿ ಪಡೆದಿದ್ದ 45 ವರ್ಷದ ಅರುಣ್ ಕುಮಾರ್ 1993 ರಲ್ಲಿ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 2008ರಲ್ಲಿ ಕೊನೆಯ ಬಾರಿಗೆ ಟಿ20 ಕ್ರಿಕೆಟ್ ಆಡಿದ್ದರು. ಅರುಣ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‍ನಲ್ಲಿ 7,208 ರನ್, ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲೂ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅರುಣ್ ಕುಮಾರ್, ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ನೀಡಿದ ಬಳಿಕ ರಾಜ್ಯ ತಂಡದ ಪರ ಕೋಚ್ ಆಗಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಹಲವು ಫ್ರಾಂಚೈಸಿಗಳಿಗೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

    2013-14 ಮತ್ತು 2014-15ರ ಅವಧಿಯಲ್ಲಿ ಸತತ ಎರಡು ಬಾರಿ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆಗಿತ್ತು. ಈ ವೇಳೆ ಕರ್ನಾಟಕದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ವಿಜಯ್ ಹಜಾರೆ, ಇರಾನಿ ಕಪ್ ಗೆಲ್ಲುವಂತೆ ಮಾಡಿದ್ದರು.

    2019-20ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‍ನಲ್ಲಿ ಪಾಂಡಿಚೇರಿ ತಂಡದ ಕೋಚ್ ಆಗಿಯೂ ಅರುಣ್ ಕುಮಾರ್ ಕೆಲಸ ಮಾಡಿದರು. ಪ್ಲೇಟ್ ಗ್ರೂಪ್‍ನಲ್ಲಿ ಪಾಂಡಿಚೇರಿ 2ನೇ ಸ್ಥಾನ ಗಳಿಸುವಂತೆ ಮಾಡಿದ್ದರು. ಆದರೆ ಕೇವಲ 2 ಅಂಕಗಳ ಅಂತರದಲ್ಲಿ ಪಾಂಡಿಚೇರಿ ತಂಡ ನಾಕ್‍ಔಟ್ ಪ್ರವೇಶ ತಪ್ಪಿ ಹೋಗಿತ್ತು.

     

  • ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದು, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಅಚ್ಚರಿಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಐದು ದಶಕದ ರಾಜಕೀಯ ಧುರೀಣ ಕೆ.ಬಿ ಕೋಳಿವಾಡ ಪರಾಜಿತಗೊಂಡಿದ್ದು, ಮುಖಭಂಗವಾಗಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಆದರೆ, ಮತದಾರ ಪ್ರಭುಗಳು ಅಂತಿಮವಾಗಿ ಬಿಜೆಪಿಯ ಅರುಣ್ ಅವರ ಭವಿಷ್ಯ ಬರೆದಿದ್ದಾರೆ. ಕೋಳಿವಾಡ ಇನ್ನೇನು ಗೆದ್ದೇ ಬಿಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಅಖಾಡಕ್ಕೆ ದುಮುಕಿ ಇಡೀ ಚಿತ್ರಣವನ್ನೇ ಬದಲಾಯಿಸಿದ್ದರು.

    ರಾಣೇಬೆನ್ನೂರು ಅಂದರೆ ಕೋಳಿವಾಡ, ಕೋಳಿವಾಡ ಅದರೆ ರಾಣೇಬೆನ್ನೂರು ಅಂತ ಇದ್ದ ವಾತಾವರಣವನ್ನ ಬೊಮ್ಮಾಯಿ ಅವರು ಅಚ್ಚುಕಟ್ಟಾಗಿ ಬಿಜೆಪಿ ತೆಕ್ಕೆಗೆ ತಂದುಕೊಂಡರು. ಅರುಣ್ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಮತ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕವಾಗಿದ್ದು, ಯಡಿಯೂರಪ್ಪ ಅವುಗಳನ್ನ ಯಶಸ್ವಿಯಾಗಿ ಬಳಸಿಕೊಂಡರು. ಇನ್ನು ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಅನ್ನೋ ಲೆಕ್ಕಾಚಾರ ರಾಜಕೀಯ ವಲಯದಲ್ಲಿದ್ದರೂ ಬೊಮ್ಮಾಯಿ ಆಂಡ್ ಟೀಂ ಕುರುಬ ಮತಬೇಟೆಗೆ ಸಖತ್ ಪ್ಲಾನ್ ಮಾಡಿದ್ದರು. ಹೇಗಿದ್ದರು ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ, ಒಂದು ವೇಳೆ ಬಂದರೂ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ, ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇರೋದಿಲ್ಲ. ಅದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಕುರುಬ ಸಮುದಾಯದ ನಾಲ್ವರು ಸಚಿವರಾಗ್ತಾರೆ ಅನ್ನೋ ಬ್ರಹ್ಮಾಸ್ತ್ರ ಬಿಜೆಪಿಗೆ ವರವಾಗಿದೆ.

    ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೋಳಿವಾಡ ಸೋತ ತಕ್ಷಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್‍ಗೆ ಟಿಕೆಟ್ ತಪ್ಪಿಸಿದ್ದು ಮುಸ್ಲಿಂ ಸಮುದಾಯಕ್ಕೆ ಬೇಸರ ಉಂಟುಮಾಡಿತ್ತು. ಅದೇ ಕಾರಣಕ್ಕೆ ಕುರುಬ ಸಮುದಾಯದ ಹೆಚ್ಚು ಮತಗಳಿರುವ ಮೆಡ್ಲೇರಿ ಮತ್ತು ತುಮ್ಮಿನಕಟ್ಟೆ ಕಾಂಗ್ರೆಸ್‍ಗೆ ಕೈಎತ್ತಿ ಕಮಲ ಹಿಡಿದಿದೆ.

    ಕೋಳಿವಾಡರ 4 ದಶಕದ ರಾಜಕೀಯ ನೋಡಿದ್ದ ಕ್ಷೇತ್ರದ ಜನ ಯುವ ನಾಯಕ ಅರುಣ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಅಂತ ಕಮಲದ ಕೈ ಹಿಡಿದಿದ್ದಾರೆ. ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಗೋವಿಂದ ಕಾರಜೋಳ ಆದಿಯಾಗಿ ಹಾಲಿ, ಮಾಜಿ ಸಚಿವರು, ಶಾಸಕರು, ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಟೀಂ ವರ್ಕ್ ಮಾಡಿದ್ದರ ಪರಿಣಾಮ ಬಿಜೆಪಿ ನಿರೀಕ್ಷೆಗೂ ಮೀರಿದ ಮತ ಗಳಿಕೆ ಮಾಡಿದೆ.

    ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಅಚ್ಚರಿಯ ಅಭ್ಯರ್ಥಿಯಾಗಿ ಅಚ್ಚರಿಯ ಫಲಿತಾಂಶವನ್ನು ಕಂಡಿದ್ದಾರೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಸಿಎಂ ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.