Tag: Arun Dhumal

  • ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    ಮುಂಬೈ: ಐಪಿಎಲ್‌ ಟೂರ್ನಿಯಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ ನಿಮಯಕ್ಕೆ (Impact Player Rule) ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ವಿರೋಧ ವ್ಯಕ್ತಪಡಿಸಿದ್ದರ ಕುರಿತು ಬಿಸಿಸಿಐ ಹಾಗೂ ಐಪಿಎಲ್‌ ಮಂಡಳಿ ಪ್ರತಿಕ್ರಿಯೆ ನೀಡಿದೆ.

    ಇತ್ತೀಚೆಗಷ್ಟೇ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ರೋಹಿತ್‌ ಶರ್ಮಾ, ಐಪಿಎಲ್‌ನಲ್ಲಿ (IPL 2024) ಬಳಸಲಾಗುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಅಂದ್ರೆ ಸಬ್‌ಸ್ಟಿಟ್ಯೂಷನ್‌ ಆಟಗಾರರನ್ನು ಕಣಕ್ಕಿಳಿಸುವ ನಿಯಮವು ಆಲ್‌ರೌಂಡರ್‌ಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕ್ರಿಕೆಟ್‌ 11 ಆಟಗಾರರ ಕ್ರೀಡೆ, ಹಾಗಾಗಿ ಈ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ (Arun Dhumal), ರೋಹಿತ್‌ ಶರ್ಮಾ ಈ ಹಿಂದೆಯೂ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ನ್ಯೂನತೆಗಳನ್ನ ತೋರಿಸಿದ್ದಾರೆ. ಪ್ರತಿಯೊಂದು ನಿಯಮಕ್ಕೂ ಅದರ ಸಾಧಕ ಬಾಧಕಗಳಿವೆ. ಪ್ರಸ್ತುತ ಐಪಿಎಲ್‌ ಸೀಸನ್‌ ಮುಗಿದ ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಈ ನಿಯಮದ ಕುರಿತು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
    ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಒಬ್ಬ ಬ್ಯಾಟ್ಸ್​ಮನ್ ಬದಲಿಗೆ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇದರಿಂದ ಉಭಯ ತಂಡಗಳಿಗೆ ಒಬ್ಬ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ ಹೆಚ್ಚುವರಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಒಟ್ಟು ನಾಲ್ಕು ಜನ ಮೀಸಲು ಆಟಗಾರರು ಇರುವುದರಿಂದ ಪ್ಲೇಯಿಂಗ್‌-11 ನಲ್ಲಿರುವ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಮತ್ತೊಬ್ಬರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳುವ ಅವಕಾಶವೂ ಇದೆ.

    ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಬಂದಿದ್ದು ಯಾವಾಗ?
    ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೊದಲು ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಪರಿಚಯಿಸಲಾಗಿತ್ತು. ಇದರಿಂದ ಸ್ಫೋರ್ತಿ ಪಡೆದ ಬಿಸಿಸಿಐ ಐಪಿಎಲ್‌ ಟೂರ್ನಿಯಲ್ಲಿ ಅಳವಡಿಸಲು ನಿರ್ಧರಿಸಿತು. ಆದ್ರೆ ಐಪಿಎಲ್‌ಗೂ ಮುನ್ನ 2022-23ರ ಸೈಯದ್‌ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಬಾರಿ ಈ ನಿಯಮವನ್ನು ಅಳವಡಿಸಿಕೊಂಡು ಪ್ರಯೋಗ ನಡೆಸಿತ್ತು. ಅದು ಸಕ್ಸಸ್‌ ಆದ ನಂತರ ಕಳೆದ ಎರಡು ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಅನುಷ್ಠಾನಕ್ಕೆ ತರಲಾಯಿತು. ಇದನ್ನೂ ಓದಿ: ಏನಿದು ಕ್ರಿಕೆಟ್‌ನಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಅಸ್ತ್ರ?

    ರೋಹಿತ್‌ ಶರ್ಮಾ ಹೇಳಿದ್ದೇನು?
    ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ನಾನು ಅಭಿಮಾನಿಯಲ್ಲ. ಜನರಿಗೆ ಸ್ವಲ್ಪ ಮನರಂಜನೆ ನೀಡುವ ಸಲುವಾಗಿ ಪಂದ್ಯದ ದೊಡ್ಡ ಭಾಗವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ. ಆದರೆ, ನೀವು ಕ್ರಿಕೆಟ್‌ನ ನಿಜವಾದ ಅಂಶವನ್ನು ನೋಡುವುದಾದರೆ, ನಾನು ಕೆಲವೊಂದು ಉದಾಹರಣೆಯನ್ನು ನೀಡುವುದಾದರೆ, ಭಾರತ ತಂಡಕ್ಕೆ ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಅವರಂಥ ಆಟಗಾರರು ಬೌಲ್‌ ಮಾಡುವುದೇ ಇಲ್ಲ. ಹಾಗಾಗಿ ಇದು ಒಳ್ಳೆಯ ಸಂಗತಿಯಲ್ಲ. ಈ ನಿಯಮದಿಂದ ನೀವು ಏನು ಸಾಧಿಸುತ್ತೀರೋ ನನಗೆ ಗೊತ್ತಿಲ್ಲ ಎಂದು ರೋಹಿತ್‌ ಶರ್ಮಾ ತಿಳಿಸಿದ್ದರು. ಇದನ್ನೂ ಓದಿ: IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

  • IPL 2024; ಐಪಿಎಲ್‌ ಆರಂಭದ ದಿನಾಂಕ ಘೋಷಣೆ

    IPL 2024; ಐಪಿಎಲ್‌ ಆರಂಭದ ದಿನಾಂಕ ಘೋಷಣೆ

    – ಲೋಕಸಭಾ ಚುನಾವಣೆ ನಡುವೆಯೂ ಭಾರತದಲ್ಲೇ ನಡೆಯುತ್ತೆ – ಐಪಿಎಲ್‌ ಅಧ್ಯಕ್ಷ ಸುಳಿವು

    ಮುಂಬೈ: ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದ, ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ.

    ಈ ಕುರಿತು ಮಾಹಿತಿ ಹಂಚಿಕೊಂಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal), ಮಾ.22 ರಂದು ಐಪಿಎಲ್‌ಗೆ ಚಾಲನೆ ನೀಡಲು ಎದುರು ನೋಡುತ್ತಿದ್ದೇವೆ. 15 ದಿನಗಳ ವೇಳಾಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮನೆಗೆ ಜ್ಯೂನಿಯರ್ ವಿರಾಟ್ ಆಗಮನ

    ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್‌ 17ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಗೊಂಡಿಲ್ಲ.

    ಲೋಕಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ ಆರಂಭದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಚುನಾವಣೆಯ ಕಾರಣದಿಂದಾಗಿ ಐಪಿಎಲ್‌ ಪಂದ್ಯಗಳನ್ನು ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಧುಮಾರ್‌, ಇದು ವಿದೇಶದಲ್ಲಿ ನಡೆಯುವುದಿಲ್ಲ. ಅದಕ್ಕಾಗಿಯೇ ನಾವು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗಾಗಿ ಕಾಯುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ನಾವು ಸ್ಥಳ ನಿಯೋಜನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಿಂಗ್ ಕೊಹ್ಲಿಯ ಅಪರೂಪದ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ!

    ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಲೀಗ್ ಅನ್ನು ನಡೆಸುತ್ತಿರುವುದು ಇದೇ ಮೊದಲಲ್ಲ. 2009 ರಲ್ಲಿ ಐಪಿಎಲ್‌ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014 ರಲ್ಲಿ ಮೊದಲ 20 ಪಂದ್ಯಗಳನ್ನು ಯುಎಇಯಲ್ಲಿ ಮತ್ತು ಉಳಿದ ಪಂದ್ಯಗಳು ಭಾರತದಲ್ಲಿ ನಡೆದಿತ್ತು. ಆದರೆ 2019 ರಲ್ಲಿ ಲೋಕಸಭಾ ಚುನಾವಣೆ ಇದ್ದರೂ ಭಾರತದಲ್ಲೇ ಐಪಿಎಲ್‌ ನಡೆದಿತ್ತು.

    ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಮೇ ಅಂತ್ಯದ ವೇಳೆಗೆ ಐಪಿಎಲ್ ಕೊನೆಗೊಳ್ಳುವ ನಿರೀಕ್ಷೆಯಿದೆ. ಸಂಪ್ರದಾಯದಂತೆ ಲೀಗ್‌ನ ಮೊದಲ ಪಂದ್ಯ ಹಿಂದಿನ ವರ್ಷದ ಫೈನಲ್‌ನಲ್ಲಿ ಸೆಣಸಾಡಿದ ತಂಡಗಳ ನಡುವೆ ನಡೆಯಲಿದೆ. ಕಳೆದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ಸೆಣಸಿದ್ದವು. ಧೋನಿ ತಂಡ ಗೆದ್ದು ಬೀಗಿತ್ತು.

  • ವಿದೇಶದಲ್ಲಿ ಅಲ್ಲ, ಈ ಬಾರಿಯೂ ಭಾರತದಲ್ಲೇ IPL – ಯಾವಾಗಿನಿಂದ ಶುರು?

    ವಿದೇಶದಲ್ಲಿ ಅಲ್ಲ, ಈ ಬಾರಿಯೂ ಭಾರತದಲ್ಲೇ IPL – ಯಾವಾಗಿನಿಂದ ಶುರು?

    ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 17ನೇ ಆವೃತ್ತಿ IPLನ ಕೆಲ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಊಹಾಪೋಹಗಳಿಗೆ ಐಪಿಎಲ್ ಮುಖ್ಯಸ್ಥ ಅರುಣ್‌ ಧುಮಾಲ್ (Arun Dhumal) ತೆರೆ ಎಳೆದಿದ್ದಾರೆ. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಬಾರಿ ಐಪಿಎಲ್‌ ಭಾರತದಲ್ಲೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಲೋಕಸಭೆ ಚುನಾವಣೆಗೆ (Lok Sabha Elections) ವೇಳಾಪಟ್ಟಿ ಪ್ರಕಟಗೊಳ್ಳಲು ಕಾಯುತ್ತಿದೇವೆ. ಆ ಬಳಿಕ ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಬಹುದು. ಹೀಗಾಗಿ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಜೊತೆಗೆ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

    ಐಪಿಎಲ್‌ ಯಾವಾಗಿನಿಂದ ಶುರು?
    17ನೇ ಆವೃತ್ತಿಯ ಐಪಿಎಲ್‌ ಮಾರ್ಚ್‌ 22 ರಿಂದ ಆರಂಭವಾಗಿ ಮೇ 26ರ ವರೆಗೆ ನಡೆಯುವ ಸಾಧ್ಯತೆಗಳಿವೆ. ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ ನಂತರ ಐಪಿಎಲ್‌ ದಿನಾಂಕ ಘೋಷಣೆ ಮಾಡುವ ಸಾಧ್ಯತೆಗಳಿವೆ. ಐಪಿಎಲ್‌ಗೂ ಮುನ್ನ ಮಹಿಳಾ ಪ್ರೀಮಿಯರ್‌ ಲೀಗ್‌ ಸಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 8 ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 3 ವಿಶ್ವಕಪ್‌ ಟ್ರೋಫಿ ಕಳೆದುಕೊಂಡ ಭಾರತ!

    ಲೋಕಸಭೆ ಚುನಾವಣೆ ವರ್ಷದಲ್ಲಿ ಭಾರತದ ಐಪಿಎಲ್‌ ಟೂರ್ನಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆಯೂ 2009, 2014 ಮತ್ತು 2019 ರಲ್ಲಿಯೂ ಲೋಕಸಭಾ ಚುನಾವಣಾ ವರ್ಷದಲ್ಲೇ ಐಪಿಎಲ್‌ ನಡೆದಿತ್ತು. ಅಲ್ಲದೇ 2009 ಮತ್ತು 2014ರಲ್ಲಿ ದೇಶದ ಹೊರಗೆ ಐಪಿಎಲ್ ಅನ್ನು ಸ್ಥಳಾಂತರಿಸಲಾಗಿತ್ತು. ಆದ್ರೆ 2019ರಲ್ಲಿ ಭಾರತದಲ್ಲಿಯೇ ನಡೆದಿತ್ತು.

  • ಜೋಕಾವಿಕ್‌ರಿಂದಾಗಿ ರದ್ದಾಗುತ್ತಿದ್ದ ಐಪಿಎಲ್‌ – ಜೇ ಶಾ ವಿಶ್ವಾಸದಿಂದಾಗಿ ನಡೆಯಿತು ಟೂರ್ನಿ

    ಜೋಕಾವಿಕ್‌ರಿಂದಾಗಿ ರದ್ದಾಗುತ್ತಿದ್ದ ಐಪಿಎಲ್‌ – ಜೇ ಶಾ ವಿಶ್ವಾಸದಿಂದಾಗಿ ನಡೆಯಿತು ಟೂರ್ನಿ

    ಮುಂಬೈ: 13ನೇ ಆವೃತ್ತಿಯ ಐಪಿಎಲ್‌ ಈಗಾಗಲೇ ಪೂರ್ಣಗೊಂಡಿದ್ದು ಮುಂಬೈ ಇಂಡಿಯನ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದರೆ ನೊವಾಕ್‌ ಜೋಕಾವಿಕ್‌ ಅವರಿಂದಾಗಿ ಈ ಬಾರಿಯ ಐಪಿಎಲ್‌ ನಡೆಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬಿಸಿಸಿಐ ಸಿಲುಕಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಈ ವರ್ಷದ ಐಪಿಎಲ್‌ ಭಾರತದಲ್ಲಿ ಮಾರ್ಚ್‌ 29 ರಿಂದ ನಡೆಯಬೇಕಿತ್ತು. ಈ ಅವಧಿಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಬಳಿಕ ಎಲ್ಲಿ ನಡೆಸಬೇಕು ಬಿಸಿಸಿಐ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿತ್ತು.

    ಯುಎಇಯಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಸರ್ಬಿಯಾದ ಟೆನ್ನಿಸ್‌ ಆಟಗಾರ ನೊವಾಕ್‌ ಜೋಕಾವಿಕ್‌ ತಾನು ಕೋವಿಡ್‌ 19 ತುತ್ತಾಗಿದ್ದೇನೆ ಎಂದು ಜೂನ್‌ 23 ರಂದು ಪ್ರಕಟಿಸಿದರು. ಹೀಗಾಗಿ ಈ ಬಾರಿ ಐಪಿಎಲ್‌ ನಡೆಸಬೇಕೋ ಬೇಡವೋ? ಆಟಗಾರರಿಗೆ ಕೊರೊನಾ ಬಂದರೆ ಏನು ಮಾಡುವುದು ಎಂಬ ಚಿಂತೆ ಬಿಸಿಸಿಐಯನ್ನು ಕಾಡಿತ್ತು. ಆದರೆ ಕೊನೆಗೆ ಸಭೆ ನಡೆಸಿ ಬಿಸಿಸಿಐ ಕಾರ್ಯದರ್ಶಿ ಆಗಿರುವ ಗೃಹ ಸಚಿವ ಅಮಿತ್‌ ಶಾ ಪುತ್ರ ಜೇ ಶಾ ವಿಶ್ವಾಸದ ಮಾತುಗಳ ಬಳಿಕ ಟೂರ್ನಿ ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂಬ ವಿಚಾರವನ್ನು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

    ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ನೊವಾಕ್‌ ಜೋಕಾವಿಕ್‌ ಅವರು ಕೊರೊನಾ ಪಾಸಿಟವ್‌ ಎಂದು ವರದಿಯಾದ ಬಳಿಕ ನಮ್ಮ ತಲೆಯಲ್ಲಿ ಎರಡು ವಿಚಾರಗಳು ಓಡುತ್ತಿತ್ತು. ಬಹಳಷ್ಟು ಮಂದಿ ಈ ಬಾರಿ ಐಪಿಎಲ್‌ ಆಯೋಜಿಸುವುದೇ ಬೇಡ ಎಂದು ಹೇಳಿದ್ದರು. ಐಪಿಎಲ್‌ ಮೂರು ತಿಂಗಳು ಇರುತ್ತದೆ. ಒಂದು ವೇಳೆ ಆಟಗಾರರಿಗೆ ಏನಾದರೂ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದರು. ಆದರೆ ಜೇ ಶಾ ಯಾವುದೇ ಕಾರಣಕ್ಕೆ ರದ್ದು ಮಾಡುವುದು ಬೇಡ. ಆಟ ಆಡಿಸೋಣ. ಈ ವಿಚಾರದಲ್ಲಿ ಮುಂದುವರಿಯೋಣ ಎಂದಿದ್ದರು. ನಮ್ಮೆಲ್ಲರಿಗಿಂತ ಹೆಚ್ಚಿನ ವಿಶ್ವಾಸ ಜೇ ಶಾ ಅವರಿಗಿತ್ತು ಎಂದು ಧುಮಾಲ್‌ ತಿಳಿಸಿದರು.

    17 ಗ್ರಾಂಡ್‌ ಸ್ಲಾಮ್‌ ವಿಜೇತ ನೊವಾಕ್‌ ಜೋಕಾವಿಕ್‌ ಸೇರಿದಂತೆ ಟೂರ್ನಿಯಲ್ಲಿದ್ದ 3 ಮಂದಿಗೆ ಕೊರೊನಾ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಜೋಕಾವಿಕ್‌ ಈ ವಿಷಯ ತಿಳಿಸಿ ಟೂರ್ನಿಯಲ್ಲಿ ಆಡಿದ್ದಕ್ಕೆ ಕ್ಷಮೆ ಕೇಳಿದ್ದರು. ಈ ಕಾರಣಕ್ಕೆ ಬಿಸಿಸಿಐ ಐಪಿಎಲ್‌ ಆಡಿಸಬೇಕೋ? ಬೇಡವೋ ಎಂಬ ಗೊಂದಲಕ್ಕೆ ಸಿಲುಕಿತ್ತು.

    ಈ ನಡುವೆ ಕೇಂದ್ರ ಸರ್ಕಾರ ವಿದೇಶದಲ್ಲಿ ಐಪಿಎಲ್‌ ಆಡಿಸಲು ಅನುಮತಿ ನೀಡಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಗಸ್ಟ್‌ನಲ್ಲಿ ಅಧಿಕೃತವಾಗಿ ಯುಎಇಯಲ್ಲಿ ಟೂರ್ನಿ ಆಡಿಸುವುದಾಗಿ ಪ್ರಕಟಿಸಿದರು. ಕೋವಿಡ್‌ 19 ಬಿಗಿ ನಿಯಮ, ಕ್ವಾರಂಟೈನ್‌, ಸಾಮಾಜಿಕ ಅಂತರ ಪಾಲಿಸಿಕೊಂಡು ಅಬುಧಾಬಿ, ದುಬೈ, ಶಾರ್ಜಾದಲ್ಲಿ ಪಂದ್ಯ ಆಡಿಸುವ ಮೂಲಕ ಈ ಬಾರಿಯ ಐಪಿಎಲ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

  • ‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

    ‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

    – ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಆಟಗಾರರ ಮೇಲೆ ಬೀಳುತ್ತದೆ

    ಮುಂಬೈ: ಬಿಸಿಸಿಐ ಹಣಕ್ಕಾಗಿ ಆಟಗಾರರ ಜೀವವನ್ನೇ ಪಣಕ್ಕಿಟ್ಟು ಐಪಿಎಲ್ ಆಡಿಸಲು ಮುಂದಾಗಿದೆ ಎಂಬ ಟೀಕಾಕಾರರ ಪ್ರಶ್ನೆಗೆ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಆರ್ಥಿಕ ಪಾಠ ಮಾಡಿದ್ದಾರೆ.

    ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸುತ್ತೇವೆ ಎಂದು ಬಿಸಿಸಿಐ ಹೇಳಿದ ತಕ್ಷಣ ಕೆಲ ಟೀಕಾಕಾರರು, ಬಿಸಿಸಿಐ ಸ್ವಾರ್ಥಿಯಾಗಿ ಯೋಚನೆ ಮಾಡುತ್ತಿದೆ. ಆಟಗಾರರ ಜೀವವನ್ನು ಪಣಕ್ಕಿಟ್ಟು, ಅವರ ಆರೋಗ್ಯವನ್ನು ಲೆಕ್ಕಿಸದೆ, ಕೇವಲ ಹಣಕ್ಕಾಗಿ ಐಪಿಎಲ್ ಮಾಡಲು ಮುಂದಾಗಿದೆ ಎಂದು ದೂರಿದ್ದರು. ಇದಕ್ಕೆ ಅರುಣ್ ಧುಮಾಲ್ ಅವರು ಉತ್ತರ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಧುಮಾಲ್, ಹೌದು ಕೆಲವರು ಬಿಸಿಸಿಐ ಹಣದ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಟೀಕೆ ಮಾಡುತ್ತಾರೆ. ಆದರೆ ಟೀಕೆ ಮಾಡುವ ಯಾರೂ ಕೂಡ ಐಪಿಎಲ್‍ನಿಂದ ಆರ್ಥಿಕ ಲಾಭ ಎಷ್ಟಿದೆ ಎಂಬುದರ ಬಗ್ಗೆ ಒಂದು ನಿಮಿಷವೂ ಯೋಚನೆ ಮಾಡುವುದಿಲ್ಲ. ಐಪಿಎಲ್ ಕೇವಲ ಮನರಂಜನೆಯಲ್ಲ ಅದು ಕೂಡ ಒಂದು ವ್ಯವಹಾರ. ಜೊತೆಗೆ ಹಲವಾರು ವಿಭಾಗದಲ್ಲಿ ಸಾವಿರಾರು ಜನರಿಗೆ ಐಪಿಎಲ್‍ನಿಂದ ಕೆಲಸ ಸಿಗುತ್ತದೆ. ಆರ್ಥಿಕ ಮುಗ್ಗಟ್ಟು ಸರಿಹೋಗಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

    ಒಂದು ವೇಳೆ ಐಪಿಎಲ್ ಆಡಿಸದ್ದಿದ್ದರೆ ಮುಂದೆ ಭಾರತದಲ್ಲಿ ಕ್ರಿಕೆಟಿಂಗ್ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಬಿಸಿಸಿಐಗೆ ಐಪಿಎಲ್ ಟೂರ್ನಿ ಹೆಚ್ಚು ಹಣವನ್ನು ತಂದು ಕೊಡುತ್ತದೆ. ಈ ಹಣದಿಂದಲೇ ಬಿಸಿಸಿಐ ವರ್ಷಕ್ಕೆ ಸುಮಾರು 2000 ದೇಶಿಯ ಪಂದ್ಯಗಳನ್ನು ಆಡಿಸುತ್ತದೆ. ಆದ್ದರಿಂದ ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಯುವ ಆಟಗಾರರ ಮೇಲೆ ಬೀಳುತ್ತದೆ. ಅದರ ಜೊತೆಗೆ ನಾವು ಐಪಿಎಲ್ ಆಡಿಸುವ ವೇಳೆ ಆಟಗಾರರ ಸುರಕ್ಷತೆ ಬಗ್ಗೆಯೂ ಗಮನ ನೀಡುತ್ತೇವೆ ಎಂದು ಧುಮಾಲ್ ತಿಳಿಸಿದ್ದಾರೆ.

    ಈ ವರ್ಷ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆಯನ್ನು ಆಸ್ಟ್ರೇಲಿಯಾ ಮಾಡಬೇಕಿದೆ. ಅವರು ಟೂರ್ನಿಯನ್ನು ನಡೆಸುತ್ತೇವೆ ಎಂದರೆ ನಮಗೇನೂ ಅಭ್ಯಂತರವಿಲ್ಲ. ನಾವು ಆಡುತ್ತೇವೆ. ಆದರೆ ಒಂದು ವೇಳೆ ಅವರು ಟೂರ್ನಿಯನ್ನು ಆಯೋಜನೆ ಮಾಡಲು ಆಗಲ್ಲ ಎಂದರೆ ನಮಗೆ ತಿಳಿಸಬೇಕು. ಆಗ ನಾವು ಬೇರೆ ಏನಾದರೂ ಪ್ಲಾನ್‍ಗಳನ್ನು ರೂಪಿಸಿಕೊಳ್ಳುತ್ತೇವೆ ಎಂದು ಅರುಣ್ ಧುಮಾಲ್ ಟಿ-20 ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ.

    ಈ ವಿಚಾರವಾಗಿ ಗುರುವಾರ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿಯವರು ಎಲ್ಲ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದಿದ್ದು, ಐಪಿಎಲ್ ಅನ್ನು ಖಾಲಿ ಸ್ಟೇಡಿಯಂನಲ್ಲಿ ಆಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ ಎಂದು ಕೇಳಿದ್ದರು. ಜೊತೆಗೆ ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

  • ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಎರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಅನೇಕ ಕ್ರಿಕೆಟ್ ಮಂಡಳಿಗಳು ಆಟಗಾರರ ವೇತನವನ್ನು ಕಡಿತಗೊಳಿಸಿವೆ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವೇತನವನ್ನು ಕಡಿತಗೊಳಿಸದಿರಲು ನಿರ್ಧರಿಸಿದೆ.

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಇತರ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು. ಯಾವುದೇ ಕಾರಣಕ್ಕೂ ಆಟಗಾರರ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    “ಆಟಗಾರರ ವೇತನವನ್ನು ಕಡಿತಗೊಳಿಸುವ ಬಗ್ಗೆ ನಾವು ಇನ್ನೂ ಯೋಚಿಸಿಲ್ಲ. ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಈ ಬಾರಿಯ ಐಪಿಎಲ್ ರದ್ದಾದರೆ ಬಿಸಿಸಿಐ ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಪರಿಸ್ಥಿತಿ ಸಂಭವಿಸಿದಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಆದರೆ ಆಟಗಾರರ ವೇತನ ಕಡಿತಗೊಳಿಸುವುದು ಕೊನೆಯ ಮಾರ್ಗವಾಗಿದೆ” ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಐಪಿಎಲ್ ರದ್ದುಗೊಂಡರೆ ಮಂಡಳಿಗೆ ಸುಮಾರು 4 ಸಾವಿರ ಕೋಟಿ ರೂ.ಗಳ ಆದಾಯ ನಷ್ಟವಾಗಲಿದೆ ಎಂದು ಅರುಣ್ ಧುಮಾಲ್ ಇತ್ತೀಚೆಗೆ ಹೇಳಿದ್ದರು.

    “ಇಲ್ಲಿಯವರೆಗೆ ಆಟಗಾರರ ವೇತನ ಕಡಿತದ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಯಾಣ, ವಸತಿ ಅಥವಾ ಸಿಬ್ಬಂದಿ ಸೇರಿದಂತೆ ಎಲ್ಲೆಲ್ಲಿ ವೆಚ್ಚ ಕಡಿತಕ್ಕೆ ಅವಕಾಶವಿದೆ ಎಂಬುದನ್ನು ಗಮನಿಸಲಾಗುತ್ತಿದೆ” ಎಂದು ತಿಳಿಸಿದರು.

    ಲಾಕ್‍ಡೌನ್ ನಂತರ ಆಟಗಾರರು ಅಭ್ಯಾಸಕ್ಕೆ ಮುಂದಾಗುವಂತೆ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಲಾಕ್‍ಡೌನ್ ದೃಷ್ಟಿಯಿಂದ ಮನೆಯಲ್ಲಿರು ಆಟಗಾರರಿಗೆ ಕೋಚಿಂಗ್ ನೀಡಲಾಗುತ್ತಿದೆ. ಜೊತೆಗೆ ಸಹಾಯಕ ಸಿಬ್ಬಂದಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

    ಕ್ರಿಕೆಟ್ ತಜ್ಞರ ಪ್ರಕಾರ, ಈ ವರ್ಷ ಭಾರತ-ಆಸ್ಟ್ರೇಲಿಯಾ ಸರಣಿಗಳು ಮಾತ್ರ ನಡೆಯುವ ಸಾಧ್ಯವೆಂದು ತೋರುತ್ತದೆ. ಅದು ನವೆಂಬರ್-ಡಿಸೆಂಬರ್‍ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಮತ್ತು 3 ಏಕದಿನ ಸರಣಿಗಳನ್ನು ಆಡಬೇಕಾಗಿದೆ. ಪಾಕಿಸ್ತಾನವು ಈ ವರ್ಷದ ಏಷ್ಯಾಕಪ್ ಅನ್ನು ಸೆಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆಸಲು ನಿರ್ಧರಿಸಿದೆ. ಇತ್ತ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಎರಡೂ ಟೂರ್ನಿಗಳನ್ನು ನಡೆಸಲು ಸಾಧ್ಯವಿಲ್ಲ.