Tag: artist

  • ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂನಿಂದ 14 ಲಕ್ಷ ರೂ. ಕಳ್ಳತನ- ದುಬೈನಲ್ಲಿ ಆರೋಪಿ ಅರೆಸ್ಟ್

    ಕಲಬುರಗಿ: ಸಿಸಿಟಿವಿಗೆ ಛತ್ರಿ ಹಿಡಿದು ಎಟಿಎಂಗೆ ಕನ್ನ ಹಾಕಿ 14 ಲಕ್ಷ ರೂ. ಹಣ ದೋಚಿ ದುಬೈಗೆ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಕುಮಾರ್ (25) ಬಂಧಿತ ಆರೋಪಿ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿಯಿರುವ ಇಂಡಿಯಾ ಒನ್ ಎಟಿಎಂ ನಲ್ಲಿ ಜೂನ್ 06 ರಂದು ಶಿವಕುಮಾರ್, ಜಗದೇವಪ್ಪ (23) ಹಾಗೂ ಜಗನ್ನಾಥ್ (26) ಸೇರಿ ಎಟಿಎಂ ಪಾಸ್ ವರ್ಡ್ ಬಳಸಿ ಕಳ್ಳತನ ಮಾಡಿದ್ದರು. ಬಳಿಕ ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದ.

    ಎಟಿಎಂ ಕಳ್ಳತನ ಕುರಿತು ಮಾಹಿತಿ ಪಡೆದ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಎಟಿಎಂ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ದೃಶ್ಯಗಳಲ್ಲಿ ಎಟಿಎಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಸಿಸಿಟಿವಿಗೆ ಛತ್ರಿ ಅಡ್ಡ ಹಿಡಿದು ಕೃತ್ಯ ಎಸಗಿದ್ದರು.

    ಆರೋಪಿಗಳು ಸಿಕ್ಕಿ ಬಿದಿದ್ದು ಹೇಗೆ:
    ಎಟಿಎಂ ನಲ್ಲಿ ಕಳ್ಳತನ ನಡೆದ ಬಳಿಕ ಎಟಿಎಂ ಗನ್‍ಮ್ಯಾನ್ ಆಗಿದ್ದ ಬಂಧಿತ ಜಗದೇವಪ್ಪ 10 ದಿನಗಳ ಕಾಲ ನಾಪತ್ತೆಯಾಗಿದ್ದ. ಅಲ್ಲದೇ ಕಳ್ಳತನ ಎಸಗಿದ್ದ ಆರೋಪಿಗಳು ಎಟಿಎಂ ಪಿನ್ ಕೋಡ್ ಬಳಸಿ ಕಳ್ಳತನ ಮಾಡಿದ್ದರು. ಈ ಮಾಹಿತಿಯನ್ನ ಪಡೆದ ಪೊಲೀಸರು ಜಗದೇವಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಜಗನ್ನಾಥನನ್ನು ಬಂಧಿಸಿದ್ದು, ಬಂಧಿತರಿಂದ 10.20 ಲಕ್ಷ ರೂ. ನಗದು, ಬೈಕ್, ಮೊಬೈಲ್, 12 ಎಟಿಎಂ ಪಾಸ್ ವರ್ಡ್ ವಶಕ್ಕೆ ಪಡೆದಿದ್ದರು.

    ಅಲ್ಲದೇ ಬಂಧಿತರನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿಗಳು ಶಿವಕುಮಾರ್ ದುಬೈಗೆ ಎಸ್ಕೇಪ್ ಆಗಿದ್ದರ ಕುರಿತು ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳಿಂದ ಪಡೆದ ಮಾಹಿತಿ ಅನ್ವಯ ಪೊಲೀಸರು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಇಂದು ಮುಂಜಾನೆ ವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ ದುಬೈನಿಂದ ವಾಪಸ್ ಕರೆತಂದಿದ್ದಾರೆ.

  • ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಕಾರವಾರ: ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುವ ಇವರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡು ಕಲಾ ಆರಾಧನೆ ಮಾಡುತ್ತಾರೆ.

    ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಮಂಜುನಾಥ್ ಭಂಡಾರಿ ಮೂರು ತಲೆಮಾರುಗಳಿಂದ ಯಕ್ಷಗಾನದ ಹಿಮ್ಮೇಳಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ರೆ ಮಂಜುನಾಥ್ ಅವರ ಬಾಳಲ್ಲಿ ಬರ ಸಿಡಿಲಿನಂತೆ ಅನಾರೋಗ್ಯ ಆವರಿಸಿದೆ. ಒಂಬತ್ತು ವರ್ಷಗಳು ಕಳೆದರೂ ಈ ಕೂಪದಿಂದ ಹೊರಬರಲಾಗದೇ ಇಡೀ ಕುಟುಂಬ ಬಡತನ ಬದುಕು ಸಾಗಿಸುತ್ತಿದ್ದು ಬೆಳಕಿಗಾಗಿ ಹಂಬಲಿಸುತ್ತಿದೆ.

    ಮೃದಂಗ, ಚಂಡೆ ವಾದಕರಾಗಿ ಇದರ ತಯಾರಿಕೆಯನ್ನು ಸಹ ಮಾಡುತ್ತಿರುವ ಈ ಕಲೆ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿದೆ. ಮಂಜುನಾಥರ ತಂದೆ ಪ್ರಭಾಕರ್ ಪಾಂಡುರಂಗ ಭಂಡಾರಿ ಕೂಡ ಕರಾವಳಿ ಭಾಗದಲ್ಲಿ ಪ್ರಸಿದ್ಧ ಮೃದಂಗ ವಾದಕರಾಗಿದ್ದು, 2002ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸನ್ಮಾನಿಸಿತ್ತು.

    ಮಂಜುನಾಥ್ ಭಂಡಾರಿಯವರು ಮೃದಂಗ, ಚಂಡೆ ವಾದನದ ಜೊತೆಗೆ ಮಣ್ಣಿನ ಕಲಾಕೃತಿ ರಚನೆಯಲ್ಲಿಯೂ ಸಿದ್ಧಹಸ್ತರು. ಹೀಗಾಗಿ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇನ್ನು ತನ್ನ ಮಡದಿ ಶಾರದಾ, ತಂದೆ ಪಾಂಡುರಂಗ ಭಂಡಾರಿ, ಇಬ್ಬರು ಹೆಣ್ಣುಮಕ್ಕಳಾದ ಮಧುರ, ಮಾನಸಾ ಎಂಬವರೊಂದಿಗೆ ಕಲಾರಾಧನೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಇವರಿಗೆ ವಾತ ಹಾಗೂ ಮೂಳೆ ಸಮಸ್ಯೆ ಎದುರಾಗಿ ತನ್ನ ದೇಹದ ಶಕ್ತಿ ಕಳೆದುಕೊಳ್ಳುವ ಜೊತೆಗೆ ಕೈಗಳ ಮೂಳೆ ಬೆಳೆದು ಸ್ವಾಧೀನ ಇಲ್ಲದಂತಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಇವರು ದಿನದ ತುತ್ತಿಗೂ ಕಷ್ಟಪಡುವಂತಾಗಿದೆ.

    ಚಿಕಿತ್ಸೆಗಾಗಿ ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಲಗೈಗೆ ರಾಡ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ ಗುಣಮುಖವಾಗುವ ಬದಲು ಕೈಯಲ್ಲಿದ್ದ ಹಣ ಖಾಲಿಯಾಗಿ ಇತ್ತ ಮೃದಂಗ, ಚಂಡೆಯ ಬಾರ್ ಕಟ್ಟಲೂ ಶಕ್ತನಾಗದೇ ಈ ಕೆಲಸವನ್ನೇ ಬಿಡುವಂತಾಯ್ತು. ಮಂಜುನಾಥ್ ಅವರ ಕಷ್ಟಕ್ಕೆ ಯಕ್ಷಾಭಿಮಾನಿಗಳು ಧನ ಸಹಾಯ ಮಾಡಿ ಮತ್ತಷ್ಟು ಚಿಕಿತ್ಸೆಗೆ ಸಹಕರಿಸಿದ್ರು. ಇದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯ ಸುಧಾರಿಸಿದೆ. ಆದರೆ ಬೆಳದು ನಿಂತ ಹಿರಿಯ ಮಗಳು ಮಧುರಾ ಅವರಿವರ ಸಹಾಯದಿಂದ ಬಿಎಡ್ ಮಾಡಿ ಎಂಎ ಮಾಡುತ್ತಿದ್ದಾರೆ. ಎರಡನೇ ಮಗಳು ಮಾನಸ ಅಂತಿಮ ಬಿಕಾಂ ಓದುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದು ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬೇಡಿದ್ದಾರೆ.

    ಮಂಜುನಾಥ್ ಭಂಡಾರಿ ಕಳೆದ ಒಂಬತ್ತು ವರ್ಷಗಳಿಂದ ಅಕಾಲಿಕ ರೋಗದಿಂದಾಗಿ ಮೃದಂಗ, ಚಂಡೆ ತೆಯಾರಿಕೆಯನ್ನು ಮಾಡಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಸುಬನ್ನು ಬಿಟ್ಟು ಪಾಶ್ರ್ವ ವಾಯು ಪೀಡಿತ ತಂದೆ, ಇಬ್ಬರ ಮಕ್ಕಳ ಶಿಕ್ಷಣ ನೋಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಅವರ ಚಿಕಿತ್ಸೆ ಜೊತೆಯಲ್ಲಿ ಮಕ್ಕಳ ಓದಿಗೆ ಸಹಾಯ ಮಾಡಿದ್ದಲ್ಲಿ ಅವರ ಉದ್ಯೋಗದಿಂದ ಜೀವನ ನಡೆಸಬಹುದಾಗಿದ್ದು ಕಷ್ಟಗಳು ದೂರವಾಗುತ್ತವೆ ಎಂಬವುದು ಅಭಿಮಾನಿಗಳ ಹಂಬಲ.

    ಮೂರು ತಲೆಮಾರುಗಳಿಂದ ಯಕ್ಷಗಾನ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಈ ಕುಟುಂಬ ನೀಡುತ್ತಾ ಬಂದಿದೆ. ಇವರ ಈ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ನೀಡಿದೆ. ಒಂಬತ್ತು ವರ್ಷದ ವನವಾಸದಲ್ಲಿ ಅಭಿಮಾನಿಗಳ ಹೊರತಾಗಿ ಸರ್ಕಾರ ಮಾತ್ರ ಈ ಕುಟುಂಬದ ಸಹಾಯಕ್ಕೆ ಬರಲಿಲ್ಲ. ತಮ್ಮ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಂಜುನಾಥ್ ಭಂಡಾರಿ ಇದ್ದಾರೆ.

     

    https://youtu.be/0MfO9F_5xyg

  • ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

    ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

    ತಿರುವನಂತಪುರ: ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ಪಾತ್ರ ನಿರ್ವಹಿಸುತ್ತಿದ್ದಾಗ ವೇದಿಕೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದು, ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

    ಖ್ಯಾತ ಓಟ್ಟಮ್‍ತುಳ್ಳಲ್ ಕಲಾವಿದರಾದ ಕಲಾಮಂಡಲಂ ಗೀತಾನಾಥನ್(58) ಅವರು ಪ್ರದರ್ಶನ ನೀಡುತ್ತಿರುವಾಗಲೇ ಹೃದಾಯಘಾತವಾಗಿ ಕುಸಿದು ಬಿದ್ದು ರಂಗಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

    ತ್ರಿಶೂರ್ ಜಿಲ್ಲೆಯ ಇರಿಂಙಲಕ್ಕುಡದಲ್ಲಿರುವ ಅವಿಟ್ಟತ್ತೂರ್ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ನೃತ್ಯ ಮಾಡುತ್ತಿರುವಾಗಲೇ ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅದಾಗಲೇ ಅವರು ಮೃತ ಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಪ್ರೇಕ್ಷಕರು ಗೀತಾ ಅವರ ನೃತ್ಯ ನೋಡುತ್ತಿರುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರು ಕೇರಳದ ಅತ್ಯಂತ ಹಿರಿಯ ಕಲಾವಿದರಾಗಿದ್ದಾರೆ. ಗೀತಾನಂದಮ್ ಅವರಿಗೆ 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಕಲಾಮಂದಲ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅಲ್ಲದೇ ಸುಮಾರು 30ಕ್ಕೂ ಹೆಚ್ಚು ಮಲೆಯಾಲಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಗೀತಾನಂದನ್ ಅವರ ಮರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

    2017ರ ಮಾರ್ಚ್ ನಲ್ಲಿ ಕಟೀಲು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದರು.

    https://www.youtube.com/watch?v=wO4QaCYdVyM

    https://www.youtube.com/watch?v=CJyPZsfLWFY

  • ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

    ಚಿತ್ರದುರ್ಗ: ತಮ್ಮ ಕಲಾಕುಂಚದಿಂದ ಕೋಟೆನಾಡಿನ ಇತಿಹಾಸವನ್ನು ದೇಶಾದ್ಯಂತ ಬರೆದು ಸಾರಿದ್ದ ಕಲಾವಿದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಗ ಮಾತ್ರ ಯಾರೊಬ್ಬರು ಆತನ ಕೈ ಹಿಡಿದಿರಲಿಲ್ಲ. ಕಲಾ ಪ್ರಾವೀಣ್ಯತೆ ಗುರುತಿಸಿದ್ದ ಪಬ್ಲಿಕ್ ಟಿವಿ ಕಲಾವಿದನ ಚಿಕಿತ್ಸೆಗೆ ನೆರವಾಗಿದ್ರಿಂದ ಮತ್ತೆ ಮರುಜನ್ಮ ಪಡೆದು ಈಗ ತನ್ನ ಕಲಾ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ಕೋಟೆನಾಡಿನ ಕಲಾವಿದ ನಾಗರಾಜ್ ಮರುಜೀವ ಪಡೆದ ಚಿತ್ರಗಾರ. ತೆರೆದ ಹೃದಯ ಸರ್ಜರಿಗೆ ಹಣವಿಲ್ಲದೇ ಜೀವ ಉಳಿದರೆ ಸಾಕು, ಚಿಕಿತ್ಸೆಗಾಗಿ ನೆರವು ನೀಡಿ ಎನ್ನುವಷ್ಟು ಕುಗ್ಗಿಹೋಗಿದ್ದ ಕಲಾವಿದ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಚಿಕಿತ್ಸೆಯನ್ನ ನೀಡಿ ನನ್ನ ಕನಸು ನನಸು ಮಾಡುವಂತೆ ಕೇಳಿ ಕೊಂಡಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ನೆರವಿನಿಂದಾಗಿ ಮತ್ತೆ ಮರುಜನ್ಮ ಪಡೆದು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.

    ಕೋಟೆನಾಡಿನ ಜನರಿಗೆ ಕಾಣಲಾಗದ ಅಪರೂಪದ ಸೌಂದರ್ಯದ ಸೊಬಗು ಹಾಗು ಕೋಟೆ ಕೊತ್ತಲಗಳನ್ನ ತಮ್ಮ ಚಿತ್ರಪಟಗಳ ಮೂಲಕ ದರ್ಶನ ಮಾಡಿಸಿ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಗರಾಜ್ ಅವರ ಚಿತ್ರಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಚಿತ್ರಪಟಗಳು, ಕಲಾಕೃತಿಗಳು ಹಾಗು ವಿಭಿನ್ನ ಅವೇಶಷಗಳನ್ನು ಕಂಡು ಪುಳಕಿತರಾದ ಕೋಟೆನಾಡಿನ ಜನರು ಕಲಾವಿದನ ಕೈಚಳಕ ಹಾಗೂ ಅಪರೂಪದ ದೃಶ್ಯಗಳ ಬಗ್ಗೆ ಸಂತಸ ವ್ಯಕ್ತಪಡಸಿದ್ದಾರೆ. ಅಲ್ಲದೇ ಈ ಅಪ್ರತಿಮ ಕಲಾವಿದನ ಜೀವ ಉಳಿಸಲು, ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿದ ಪಬ್ಲಿಕ್ ಟಿವಿಗೆ ಅಭಿನಂದಿಸಿದ್ದಾರೆ. ಚಿಕಿತ್ಸೆಯಿಂದಾಗಿ ಮರುಜನ್ಮ ಪಡೆದ ನಾಗರಾಜ್ ಮತ್ತೆ ಹವ್ಯಾಸ ಮುಂದುವರೆಸಿರೋದು ಚಿತ್ರ ವೀಕ್ಷರಿಗೆ ಸ್ಥಳೀಯರಿಗೆ ಎಲ್ಲರಲ್ಲೂ ಸಂತಸ ಮೂಡಿಸಿದೆ.

  • ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ಬೆಳಕು ಇಂಪ್ಯಾಕ್ಟ್: ಸಂಗೀತ ಪ್ರತಿಭೆ ಅಂಧ ನವೀನ್ ಬಾಳಲ್ಲಿ ಮೂಡಿತು ಬೆಳಕು

    ರಾಯಚೂರು: ರಾಯಚೂರಿನ ನಾಗಲಾಪುರ ಗ್ರಾಮದ ರೈತ ಗುಂಡಪ್ಪ ಎಂಬವರಿಗೆ ಮೂವರು ಮಕ್ಕಳು ಅಂಧರಾಗಿ ಹುಟ್ಟಿದ್ದಾರೆ. ಈ ಮೂವರಲ್ಲಿ ನವೀನ್ ಕೂಡ ಒಬ್ಬರಾಗಿದ್ದಾರೆ. ನವೀನ್ ಗೆ ಓದಿನಲ್ಲಿ ವಿಪರೀತ ಆಸಕ್ತಿ, ಕೀಬೋರ್ಡ್ ನುಡಿಸಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು. ವಿದ್ಯಾಭ್ಯಾಸ ಮತ್ತು ಕೀಬೋರ್ಡ್ ಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಯಾಚಿಸಿ ಬಂದಿದ್ದ ನವೀನ್‍ನ ಕನಸು ಇಂದು ನನಸಾಗಿದೆ.

    ಓದಿನಲ್ಲಿ ಎಂದೂ ಹಿಂದೆ ಬೀಳದೆ ಹಿಂದುಸ್ತಾನಿ ಸಂಗೀತದಲ್ಲೂ ಫಸ್ಟ್ ಕ್ಲಾಸ್‍ನಲ್ಲಿ ಜೂನಿಯರ್ ಮುಗಿಸಿದ್ದಾರೆ. ಬಿಸಿಎಂ ವಸತಿ ನಿಲಯದಲ್ಲಿ ವಾಸವಾಗಿ ಇನ್ ಫ್ಯಾಂಟ್ ಜೀಸಸ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿರುವ ನವೀನ್ ಈಗ ಎಲ್ಲಾ ಚಿಂತೆ ಮರೆತು ಓದು ಹಾಗೂ ಸಂಗೀತದಲ್ಲಿ ಸಾಧನೆ ಮಾಡುತ್ತಿದ್ದಾರೆ.

    ನವೀನ್‍ಗೆ ಅವಶ್ಯವಿದ್ದ ಕೀಬೋರ್ಡ್ ನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ವೀಕ್ಷಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಶಂಕರ್, ರಾಕೇಶ್ ಹಾಗೂ ಅಶೋಕ್ ಜೈನ್ ಒಟ್ಟಾಗಿ ಖರೀದಿಸಿ ಕೊಟ್ಟಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಂದಿಸಿದ ಇನ್ ಫ್ಯಾಂಟ್ ಜೀಸಸ್ ಕಾಲೇಜು ನವೀನ್‍ನಿಂದ ಅತ್ಯಲ್ಪ ಶುಲ್ಕ ಮಾತ್ರ ಪಡೆದು ಸಾಧನೆಗೆ ಸಹಾಯ ಮಾಡುತ್ತಿದೆ.

    ಸಾಧನೆಗೆ ದೈಹಿಕ ಅಂಗವಿಕಲತೆ ಮುಖ್ಯವಲ್ಲ ಅನ್ನೋದನ್ನ ಸಮಾಜಕ್ಕೆ ತೋರಿಸಬೇಕು ಅಂತ ಹಠಕ್ಕೆ ಬಿದ್ದಿರುವ ನವೀನ್ ಗೆ ಸಹಾಯಹಸ್ತ ಸಿಕ್ಕಿದೆ. ಎಲೆಮರೆ ಕಾಯಿಯಂತಿರುವ ಸಂಗೀತ ಪ್ರತಿಭೆ ನವೀನ್ ತನ್ನ ಸಾಧನೆ ಮೂಲಕ ಎತ್ತರಕ್ಕೆ ಬೆಳೆಯಲಿ ಅನ್ನೋದಷ್ಟೆ ನಮ್ಮ ಆಶಯ.

    https://www.youtube.com/watch?v=QxiIUnZZEP0

  • 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ

    82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ

    ಕಲಬುರಗಿ: ಜಿಲ್ಲೆಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ ಶ್ರೀ ಶರಣಬಸಪ್ಪ ಅಪ್ಪಾ ಅವರು ತಮ್ಮ 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಶ್ರೀ ಶರಣಬಸಪ್ಪ ಅವರ ಪತ್ನಿ 40 ವರ್ಷದ ದಾಕ್ಷಾಯಿಣಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶ್ರೀಗಳು ತಮ್ಮ 82ನೇ ವಯಸ್ಸಿಯಲ್ಲಿ ತಂದೆಯಾಗಿದ್ದಕ್ಕೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಕ್ತರು ಸಡಗರದಿಂದ ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ವ್ಯಕ್ತ ಪಡಿಸಿದ್ದಾರೆ.

    ಡಾ. ಶರಣಬಸವಪ್ಪ ಅಪ್ಪಾ ಅವರು 1935ರ ನವೆಂಬರ್ 14 ರಂದು ಜನಿಸಿದ್ದರು. ಶ್ರೀಗಳಿಗೆ ಎರಡು ಮದುವೆಯಾಗಿದ್ದು, ಮೊದಲನೆ ಪತ್ನಿ ಕೋಮಲಾತಾಯಿ ಐದು ಮಂದಿ ಪುತ್ರಿಯರಿಗೆ ಜನನ ನೀಡಿದ್ದರು. ಮೊದಲ ಪತ್ನಿಯ ಐದು ಪುತ್ರಿಯರಿಗೂ ಮದುವೆಯಾಗಿದೆ. ಆದರೆ ಮೊದಲ ಪತ್ನಿ ಕೋಮಲಾತಾಯಿ ಹಲವು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮೊದಲ ಪತ್ನಿಯ ಮೃತಪಟ್ಟ ಬಳಿಕ ದಾಕ್ಷಾಯಿಣಿ ಅವರನ್ನು ಶರಣಬಸಪ್ಪ ಅಪ್ಪಾ ಅವರು ಮದುವೆಯಾಗಿದ್ದರು. ಎರಡನೇ ಪತ್ನಿ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಇದೀಗ ಗಂಡು ಮಗುವಿಗೆ ಜನನ ನೀಡಿದ್ದಾರೆ.

  • ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ, ಒಬ್ಬ ಚಿತ್ರಕಾರ: ಎಂ.ಎಲ್ ಸಾಮಗ

    ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ, ಒಬ್ಬ ಚಿತ್ರಕಾರ: ಎಂ.ಎಲ್ ಸಾಮಗ

    ಉಡುಪಿ: ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ. ಅವರೊಬ್ಬರ ಒಬ್ಬ ಚಿತ್ರಕಾರ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ ಎಂ.ಎಲ್ ಸಾಮಗ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಭಿಮಾನಿಯೂ ಹೌದು ಅವರ ಜೊತೆ ರಂಗಸ್ಥಳದಲ್ಲಿ ಸಹ ಕಲಾವಿದನಾಗಿ ಕೆಲಸವನ್ನು ಕೂಡ ಮಾಡಿದ್ದೇನೆ. ಬರೀ ಯಕ್ಷರಂಗದಲ್ಲಿ ಮಾತ್ರವಲ್ಲದೇ ಆ ನಂತರ ಕೂಡ ನನ್ನದು ಮತ್ತು ಚಿಟ್ಟಾಣಿ ಅವರದ್ದು ಅವಿನಾಭಾವ ಸಂಬಂಧ ಎಂದರು.

    ಪದ್ಮಶ್ರೀ ಚಿಟ್ಟಾಣಿ ಯಕ್ಷಗಾನಕ್ಕೆ ಕೊಟ್ಟಂತಹ ಕೊಡುಗೆ ಈ ಹಿಂದೆ ಮತ್ತು ಮುಂದೆ ಯಾರೂ ಕೊಡುವುದು ಕಷ್ಟಸಾಧ್ಯ. ನಲವತ್ತು ವರ್ಷಗಳ ಹಿಂದೆ ಅವರು ಮಾಡಿದ ಕೀಚಕ, ಭಸ್ಮಾಸುರನ ಪಾತ್ರ ಕರಾವಳಿ ಕರ್ನಾಟಕದ ಯಕ್ಷ ಪ್ರೇಮಿಗಳಲ್ಲಿ ಹೊಸದೊಂದು ಅನುಭವವನ್ನು ಸೃಷ್ಟಿ ಮಾಡಿತ್ತು. ರಾತ್ರಿಯಿಂದ ಬೆಳಗಿನ ಜಾವದ ತನಕ ಕೂಡ ವೇಷ ಮಾಡಿದರೂ ಎಲ್ಲೂ ಕೂಡ ಆಯಾಸವಾಗದೇ ಚಿಟ್ಟಾಣಿ ಪಾತ್ರಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

    ಜೀವನದಲ್ಲಿ ಎಷ್ಟೇ ನೋವು ಸಂಕಟ ಇದ್ದರೂ ಕೂಡ ರಂಗ ಪ್ರವೇಶದ ನಂತರ ಅದು ಯಾವುದನ್ನು ಕೂಡ ತೋರ್ಪಡಿಸದ ದೊಡ್ಡ ಕಲಾವಿದ ಚಿಟ್ಟಾಣಿ. ಪರಂಪರೆಯ ಪಾತ್ರಗಳಿಗೆ ಅದೂ ಕೂಡ ಗದಾಯುದ್ಧದ ಕೌರವ ಪಾತ್ರಕ್ಕೆ ವಿಶಿಷ್ಟವಾದ ಒಂದು ಆಯಾಮವನ್ನು ಕೊಟ್ಟಂತಹ ಕಲಾವಿದ. ಚಿಟ್ಟಾಣಿ ಅವರು ರಂಗದ ಮೇಲೆ ವೇಷ ಮತ್ತು ಪಾತ್ರವನ್ನು ಮಾಡುತ್ತಿದ್ದು ದಲ್ಲ ಅವರು ರಂಗ ಸ್ಥಳದಲ್ಲಿ ಒಂದು ಪಾತ್ರವನ್ನು ಚಿತ್ರಿಸುತ್ತಿದ್ದರು. ಆ ಚಿತ್ರವನ್ನು ಮತ್ತ್ಯಾರಿಗೂ ಮಾಡಲು ಸಾಧ್ಯವಿಲ್ಲ. ಪ್ರಬುದ್ಧ ಯಕ್ಷ ಪ್ರೇಕ್ಷಕರ ಮೇಲೆ ಚಿಟ್ಟಾಣಿ ಬೀರಿದಷ್ಟು ಪ್ರಭಾವ ಈ ಹಿಂದೆ ಯಾರೂ ಮೀರಿದ್ದಲ್ಲಿ ಮುಂದೆ ಬೀರುವಂತಹ ಲಕ್ಷಣಗಳು ಕೂಡ ಈಗಿನ ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು.

    ಅವರಂತಹ ಮತ್ತೊಬ್ಬ ಕಲಾವಿದ ಯಕ್ಷರಂಗದಲ್ಲಿ ಹುಟ್ಟಿ ಬರುತ್ತಾನೆ ಅನ್ನುವಂತದ್ದು ನಮ್ಮ ಕಲ್ಪನೆಗೂ ಮೀರಿದ್ದು. ಚಿಟ್ಟಾಣಿ ಅವರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ಎಂದೂ ತುಂಬಲಾರದ ನಷ್ಟ ಅಂತ ಹೇಳಿ ನಾನು ಪರಿಭಾವಿಸುತ್ತೇನೆ ಎಂದು ದುಃಖ ವ್ಯಕ್ತಪಡಿಸಿದರು.

    ಅಂತಿಮ ದರ್ಶನ: ಮಂಗಳವಾರ ರಾತ್ರಿ ನಿಧನರಾದ ಹಿರಿಯ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರ ಅಂತಿಮ ದರ್ಶನ ಕಾರ್ಯಕ್ರಮ ಉಡುಪಿಯ ಮಣಿಪಾಲದಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯಿಂದ ಹೊನ್ನಾವರಕ್ಕೆ ಮೃತದೇಹವನ್ನು ರವಾನೆ ಮಾಡಲಾಯಿತು. ಇದಕ್ಕೂ ಮುನ್ನ ಮಣಿಪಾಲದಲ್ಲಿ ಚಿಟ್ಟಾಣಿ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದನಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಹೂವಿನ ಹಾರ ಹಾಕಿ ಯಕ್ಷ ಕ್ಷೇತ್ರದಲ್ಲಿ ಚಿಟ್ಟಾಣಿ ಮಾಡಿದ ಸಾಧನೆಗಳ ಬಗ್ಗೆ ಗುಣಗಾನವನ್ನು ಮಾಡಿದರು. ನೂರಾರು ಮಂದಿ ಚಿಟ್ಟಾಣಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

    ಮಣಿಪಾಲ ಯುನಿವರ್ಸಿಟಿ ಆವರಣದಲ್ಲಿ ಈ ಅಂತಿಮ ಸಂಸ್ಕಾರ ವಿಧಿ ವಿಧಾನ ನಡೆಯಿತು. ನಂತರ ತೆರೆದ ವಾಹನದಲ್ಲಿ ಚಿಟ್ಟಾಣಿಯವರ ಮೃತದೇಹವನ್ನು ಶವಯಾತ್ರೆ ಮಾಡಲಾಯಿತು. ಉಡುಪಿಯ ಬ್ರಹ್ಮಾವರ, ಕೋಟ, ಸಾಲಿಗ್ರಾಮ ಕುಂದಾಪುರ, ಬೈಂದೂರು ಶಿರೂರು ಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

    ಹೊನ್ನಾವರದ ಸ್ವಗ್ರಹದಲ್ಲಿ ಚಿಟ್ಟಾಣಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲೂ ಅಭಿಮಾನಿಗಳಿಗೆ- ಕುಟುಂಬಸ್ಥರಿಗೆ ಅಂತಿಮ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.

    ರಾಜ್ ನಂಟು: ಚಿಟ್ಟಾಣಿ ರಾಮಚಂದ್ರರಿಗೂ ವರನಟ ಡಾ. ರಾಜ್ ಕುಮಾರ್ ಅವರಿಗೂ ಬಹಳ ನಂಟಿತ್ತು. ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ನೀವು ಯಕ್ಷಗಾನದ ನಟ ಅಂತ ರಾಜ್ ಕುಮಾರ್ ಹಾಡಿ ಹೊಗಳುತ್ತಿದ್ದರು. ಹಾಡು ಮತ್ತು ನಾಟ್ಯದ ಮೇಲಾಟದ ನಡುವೆ ನಟನೆ ತಂದು ಚಿಟ್ಟಾಣಿ ತಮ್ಮದೇ ಶೈಲಿಯನ್ನು ಯಕ್ಷರಂಗದಲ್ಲಿ ಬೆಳೆಸಿದ್ದರು. ಕೌರವ, ಕೀಚಕ- ದುಷ್ಟಬುದ್ಧಿ ಪಾತ್ರಗಳಲ್ಲಿ ಚಿಟ್ಟಾಣಿ ಎತ್ತಿದ ಕೈ. ನಿರಂತರ ಯಕ್ಷಗಾನಕ್ಕೆ ಜೀವನ ಮುಡಿಪಾಗಿಟ್ಟಿದ್ದಕ್ಕೆ ಚಿಟ್ಟಾಣಿಗೆ ಪದ್ಮಶ್ರೀ ಗೌರವ ದಕ್ಕಿತ್ತು.

    ವಯೋಸಹಜ ಮತ್ತು ನಿಮೋನಿಯಾ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ 84 ವರ್ಷದ ಚಿಟ್ಟಾಣಿ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದರು.

    ಚಿಟ್ಟಾಣಿಯವರು ನ್ಯೂಮೋನಿಯಾ ಹಾಗೂ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆಪ್ಟೆಂಬರ್ 25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

    ಸೆ.25 ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಮೂಲತಃ ಉತ್ತರ ಕನ್ನಡದವರಾದರೂ ಚಿಟ್ಟಾಣಿ ಅವರಿಗೆ ಉಡುಪಿಯಲ್ಲೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರತೀ ವರ್ಷ ಚಿಟ್ಟಾಣಿ ಸಪ್ತಾಹ ಉಡುಪಿಯಲ್ಲಿ ನಡೆಯುತ್ತಾ ಬಂದಿದೆ.

    ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ತಮ್ಮ 14ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿದ್ದರು. ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಪತ್ನಿ, ಮಕ್ಕಳು ಮತ್ತು ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಅಗಲಿದ್ದಾರೆ.

  • ಅಂಧ ಕಲಾವಿದೆಗೆ ಸ್ಥಳದಲ್ಲೇ ಸಿಎಂ ಧನಸಹಾಯ

    ಅಂಧ ಕಲಾವಿದೆಗೆ ಸ್ಥಳದಲ್ಲೇ ಸಿಎಂ ಧನಸಹಾಯ

    ಮೈಸೂರು: ಇಂದು ನಗರದಲ್ಲಿ ನಡೆದ ಸಿಎಂ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಧ ಕಲಾವಿದೆಯೊಬ್ಬರಿಗೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಆರ್ಕೆಸ್ಟ್ರಾದಲ್ಲಿ ಗಾಯಕಿಯಗಿರುವ ಶೃಂಗೇರಿಯ ಪೂರ್ಣಿಮಾ ಹಾಗೂ ಅವರ ಪತಿ ಕೃಷ್ಣ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೂರ್ಣಿಮಾ ಅವರು ಆಕೇಸ್ಟ್ರಾದಲ್ಲಿ ಹಾಡಲು ವಾದ್ಯಗಳ ಕೊಳ್ಳಬೇಕಾಗಿದ್ದು ಆರ್ಥಿಕ ಸಹಾಯ ಬೇಕಾಗಿದೆ ಎಂದು ಸಿಎಂಗೆ ಮನವಿ ಮಾಡಿದ್ರು.

    ಮನವಿ ಪತ್ರ ಸ್ವೀಕರಿಸಿದ ಸಿಎಂ ಅವರಿಗೆ 6 ಸಾವಿರ ರೂ. ನಗದು ನೀಡಿ ವಾದ್ಯಗಳನ್ನ ಕೊಳ್ಳುವಂತೆ ತಿಳಿಸಿದ್ರು. ಸಿಎಂರಿಂದ ಹಣ ಪಡೆದ ಅಂಧ ದಂಪತಿ ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನ ಸ್ವೀಕರಿಸಿದ ಸಿದ್ದರಾಮಯ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರ ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಉಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

     

  • ಕಲ್ಯಾಣ ಕಲಾಶಿಬಿರದ ಮೂಲಕ ಯುವತಿಯ ಕೈ ಹಿಡಿದ ಚಿತ್ರಕಲಾವಿದ!

    ಕಲ್ಯಾಣ ಕಲಾಶಿಬಿರದ ಮೂಲಕ ಯುವತಿಯ ಕೈ ಹಿಡಿದ ಚಿತ್ರಕಲಾವಿದ!

    ರಾಯಚೂರು: ಮಂತ್ರಪಠಣ, ವಾಲಗಗಳ ಅಬ್ಬರವಿಲ್ಲದೇ ರಾಯಚೂರಿನಲ್ಲೊಂದು ಸಿಂಪಲ್ ಮದ್ವೆ ನಡೀತು. ಜಹಿರಬಾದ್‍ನ ಚಿತ್ರಕಲಾವಿದ ಮಲ್ಲಿಕಾರ್ಜುನ್ ಕಲ್ಯಾಣ ಕಲಾಶಿಬಿರ ನಡೆಸೋ ಮೂಲಕ ಅನಕ್ಷರಸ್ಥ ಯುವತಿ ಮಹಾಲಕ್ಷ್ಮಿಯೊಂದಿಗೆ ಸಪ್ತಪದಿ ತುಳಿದ್ರು.

    ನಗರದ ಕನ್ನಡ ಭವನದಲ್ಲಿ ನಡೆದ ಕಲಾಶಿಬಿರದಲ್ಲಿ ಕ್ಯಾನ್‍ವಾಸ್ ಮೇಲೆ ಶಿವಲಿಂಗ ಬಿಡಿಸಿ ಅದಕ್ಕೆ ಹಳದಿ ,ಕೆಂಪು ಬಣ್ಣ ಹಚ್ಚುವ ಮೂಲಕ ಹಾರಬದಲಿಸಿಕೊಂಡು ಸರಳ ಹಾಗೂ ವಿಶೇಷವಾಗಿ ಮದ್ವೆಯಾದ್ರು.

     

    ರಾಜ್ಯದ ವಿವಿಧೆಡೆಯಿಂದ ಬಂದ 20 ಕಲಾವಿದರು ಬಿಡಿಸಿದ ಕಲಾಕೃತಿಗಳನ್ನೇ ಪ್ರದರ್ಶನಕ್ಕಿಡಲಾಗಿತ್ತು. ಎರಡು ದಿನಗಳ ಕಾಲ ನಡೆದ ಕಲ್ಯಾಣ ಕಲಾ ಶಿಬಿರದಲ್ಲಿ ಒಟ್ಟು 150 ಜನ ಕಲಾವಿದರು ಭಾಗವಹಿಸಿ ವಧುವರರಿಗೆ ಹಾರೈಸಿದರು. ದುಬಾರಿ ಮದುವೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲಿ ಸರಳ ವಿವಾಹ ನಡೆದಿರೋದು ವಿಶೇಷ.