Tag: artist

  • ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

    ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

    ಬೆಂಗಳೂರು: ಇತ್ತೀಚೆಗಷ್ಟೆ ಮೇಘನಾ ರಾಜ್ ಸೀಮಂತ ಕಾರ್ಯಕ್ರಮ ಸಾಂಪ್ರದಾಯಕವಾಗಿ ನಡೆದಿದೆ. ಚಿರಂಜೀವಿ ಅಗಲಿಕೆಯ ನೋವಿನಲ್ಲಿದ್ದ ಸರ್ಜಾ ಕುಟುಂಬ ಮೇಘನಾ ಸೀಮಂತ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

    ಸೀಮಂತದಲ್ಲಿ ಚಿರು ಇಲ್ಲ ಎಂಬ ನೋವು ಎಲ್ಲರಿಗೂ ಕಾಡಿತ್ತು. ಆದರೂ ಮೇಘನಾ ಸೀಮಂತ ಕಾರ್ಯಕ್ರಮದಲ್ಲಿ ಚಿರುವಿನ ದೊಡ್ಡ ಪೋಸ್ಟರ್‌ವೊಂದನ್ನು ಇಡಲಾಗಿತ್ತು. ಚಿರು ಫೋಟೋ ಮುಂದೆಯೇ ಮೇಘನಾ ಚೇರ್ ಮೇಲೆ ಕುಳಿತುಕೊಂಡಿದ್ದು, ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಇದೇ ವೇಳೆ ಮೇಘನಾ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.

    ಇದೀಗ ಮೇಘನಾ ಸೀಮಂತ್ ಫೋಟೋಗಳ ಪೈಕಿ ಅರಳಿದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘನಾ ಅವರು ಒಬ್ಬರೇ ನಿಂತುಕೊಂಡು ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋಗೆ ಕಲಾವಿದ ಕರಣ್ ಆಚಾರ್ಯ ಜೀವ ನೀಡಿದ್ದಾರೆ. ಅಂದರೆ ಆ ಫೋಟೋವನ್ನು ಎಡಿಟ್ ಮಾಡಲಾಗಿದೆ.

    ಸಾಮಾನ್ಯವಾಗಿ ಸೀಮಂತ ಸಮಯದಲ್ಲಿ ಪತಿ ಜೊತೆಯಲ್ಲಿರಬೇಕು ಎಂದು ಪ್ರತಿಯೊಬ್ಬ ಪತ್ನಿಯೂ ಇಷ್ಟಪಡುತ್ತಾಳೆ. ಆದರೆ ಮೇಘನಾ ವಿಚಾರದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಕಲಾವಿದ ಕರಣ್ ಆಚಾರ್ಯ ಫೋಟೋ ಮೂಲಕ ಆ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯೊಬ್ಬರು ಮೇಘನಾರ ಒಂಟಿ ಫೋಟೋವನ್ನು ಪೋಸ್ಟ್ ಮಾಡಿ ಈ ಫೋಟೋಗೆ ಜೀವ ತುಂಬಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

    ಕಲಾವಿದ ಕರಣ್ ಅದರಂತೆಯೇ ಮೇಘನಾ ಕೈ ಹಿಡಿದು ಚಿರು ಹೆಜ್ಜೆ ಹಾಕುತ್ತಿರುವ ರೀತಿ ಎಡಿಟ್ ಮಾಡಿದ್ದಾರೆ. ಚಿರುವಿನ ಮದುವೆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವನ್ನು ಮೇಘನಾ ಫೋಟೋ ಜೊತೆ ಎಡಿಟ್ ಮಾಡಿದ್ದಾರೆ. ಕಲಾವಿದ ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    https://www.instagram.com/p/CF-DrP7HJbU/?igshid=b1htolkc11th

    ಇದೇ ರೀತಿ ಇನ್ನೂ ಕೆಲ ಫೋಟೋಗಳನ್ನ ಎಡಿಟ್ ಮಾಡಲಾಗಿದೆ. ಅದರಲ್ಲೂ ಮೇಘನಾ ಜೊತೆ ಚಿರು ನಿಂತಿರುವ ರೀತಿ ಕಾಣಬಹುದಾಗಿದೆ. ಮೊದಲಿಗೆ ಭಾನುವಾರ ಮನೆಯಲ್ಲಿಯೇ ಸರಳವಾಗಿ ಮೇಘನಾ ರಾಜ್ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ಮತ್ತೆ ಸೋಮವಾರ ರಾತ್ರಿ ಅದ್ಧೂರಿಯಾಗಿ ಮೇಘನಾ ರಾಜ್ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದರು.

  • ಕಷ್ಟದಲ್ಲಿದ್ದ ಕಲಾವಿದನ ಸಹಾಯಕ್ಕೆ ಬಂದ ಎಸ್‍ಪಿ ಬಾಲಸುಬ್ರಹ್ಮಣ್ಯಂ

    ಕಷ್ಟದಲ್ಲಿದ್ದ ಕಲಾವಿದನ ಸಹಾಯಕ್ಕೆ ಬಂದ ಎಸ್‍ಪಿ ಬಾಲಸುಬ್ರಹ್ಮಣ್ಯಂ

    ರಾಯಚೂರು: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕಷ್ಟದಲ್ಲಿದ್ದ ರಾಯಚೂರಿನ ಸಂಗೀತ ಕಲಾವಿದನಿಗೆ ಸಹಾಯ ಮಾಡಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಯಚೂರಿನ ತತ್ವಪದ ಗಾಯಕ ದಾದಪೀರ್ ಮಂಜರ್ಲಾಗೆ ಅಗತ್ಯ ವಸ್ತುಗಳ ಕಿಟ್ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಈ ಹಿಂದೆ ಕಲಾವಿನೊಂದಿಗೆ ಸಂಪರ್ಕದಲ್ಲಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಕಲಾವಿದ ದಾದಪೀರ್ ಕಷ್ಟದಲ್ಲಿದ್ದಾರೆ ಎಂದು ತಿಳಿದು ತಾವೇ ಕಿಟ್ ಕಳುಹಿಸಿಕೊಟ್ಟಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಾದಾಪೀರ್ ಮಂಜರ್ಲಾಗೆ ಸ್ಥಳೀಯ ಕಲಾವಿದರು, ಅಭಿಮಾನಿಗಳು ಧನಸಹಾಯ ಮಾಡಿ ಚಿಕಿತ್ಸೆಗೆ ಸಹಕಾರಿಯಾಗಿದ್ದಾರೆ. ಈಗ ಸಂಪೂರ್ಣ ಗುಣಮುಖರಾಗಿರುವ ದಾದಾಪೀರ್ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.

  • ಕಲಾವಿದನಿಂದ ಸ್ಕೂಟಿ ಮೂಲಕ ಕೊರೊನಾ ಜಾಗೃತಿ

    ಕಲಾವಿದನಿಂದ ಸ್ಕೂಟಿ ಮೂಲಕ ಕೊರೊನಾ ಜಾಗೃತಿ

    ಧಾರವಾಡ: ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಕಲಾವಿದನೋರ್ವ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಈತನ ಕಾರ್ಯಕ್ಕೆ ಈಗ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

    ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ವಿನೂತನ ಜಾಗೃತಿ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಇವರು ತಮ್ಮ ಸ್ಕೂಟಿಯನ್ನು ಥರ್ಮಾಕೋಲ್ ಮೂಲಕ ಕೊರೊನಾ ಜಾಗೃತಿ ವಾಹಿನಿಯನ್ನಾಗಿ ಪರಿವರ್ತಿಸಿದ್ದಾರೆ.

    ಕೈ ಕುಲುವುದು ಬೇಡ, ಕೈ ಮುಗಿಯೋಣ, ಸ್ವಚ್ಛತೆಯಿಂದ ಇರೋಣ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೋಣ ಎನ್ನುವುದನ್ನು ಜನರಿಗೆ ತಿಳಿಸಲು ಆಯಾ ಕಲಾಕೃತಿಯ ಮಾದರಿಯನ್ನೇ ಇವರು ಸ್ಕೂಟಿಗೆ ಅಳವಡಿಸಿದ್ದಾರೆ. ಮುಖ್ಯವಾಗಿ ತಲೆಗೆ ಕೊರೊನಾ ವೈರಸ್ ಆಕೃತಿಯ ಮಾದರಿಯ ಹೆಲ್ಮೆಟ್ ಹಾಕಿಕೊಂಡಿದ್ದಾರೆ. ಈ ಮೂಲಕ ಧಾರವಾಡ ನಗರದಲ್ಲಿ ಸುತ್ತಾಡುತ್ತಿರುವ ಇವರು. ಅಲ್ಲಲ್ಲಿ ಜನರಿಗೆ ಕೊರೊನಾ ಮುಂಜಾಗ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

  • ಕಲಾವಿದ ನಾಗರಾಜ ಜಕ್ಕಮ್ಮನವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

    ಕಲಾವಿದ ನಾಗರಾಜ ಜಕ್ಕಮ್ಮನವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

    ಗದಗ: ಬಡತನವನ್ನೇ ಬದುಕಾಗಿಸಿಕೊಂಡು ಕಲೆಗಾಗಿ ನಾಲ್ಕೈದು ದಶಕಗಳಿಂದ ಶ್ರಮಿಸಿದ ಜಿಲ್ಲೆಯ ನೀಲಗುಂದ ಗ್ರಾಮದ ಜಾನಪದ ಕಲಾವಿದ ನಾಗರಾಜ ಜಕ್ಕಮ್ಮನವರಿಗೆ(59) ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಪ್ರಶಸ್ತಿ ಒಲಿದಿದೆ.

    ಬದುಕಿನೂದ್ದಕ್ಕೂ ಸಂಗೀತ ಸಾಧನೆಗೆ ಹೋರಾಟ ನಡೆಸಿದ ಬಡ ಕಲಾವಿದ ನಾಗರಾಜ ಜಕ್ಕಮ್ಮನವರ ಜೀವನ ಕತೆಯೇ ಒಂದು ಸಿನಿಮಾದಂತಿದೆ. ಕಲಿತಿದ್ದು 3ನೇ ತರಗತಿ, ಮೂರು ವರ್ಷ ಚಿಕ್ಕವನಿದ್ದಾಗ ತಾಯಿಯನ್ನು ಕಳೆದುಕೊಂಡು ಕೊರಗುತ್ತಿದ್ದಾಗ ಮತ್ತೊಮ್ಮೆ ತಾಯಿಯ ರೂಪದಲ್ಲಿ ನಾಗರಾಜ ಅವರನ್ನ ಅಪ್ಪಿಕೊಂಡವಳು ಸಂಗೀತ ಸರಸ್ವತಿ. ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಾಗರಾಜ ಅವರಿಗೆ ಮೊದಲ ಸಂಗೀತ ಸಾಧನವಾಗಿದ್ದು ಅವರ ಎದೆ. ಹೌದು. ಅವರು ಹಾಡುವಾಗ ತಮ್ಮ ಎದೆಯನ್ನು ಡಗ್ಗವನ್ನಾಗಿ(ಒಂದು ಸಂಗೀತ ಸಾಧನ) ಬಳಸುತ್ತಾ ಹಾಡುತ್ತಿದ್ದರು. 12 ವಯಸ್ಸಿನಲ್ಲಿ ಸಂಗೀತ ಕಲೆಯಲು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿದಾಗ ಅಲ್ಲಿ ಅವರಿಗೆ ಅವಕಾಶ ನಿರಾಕರಿಸಲಾಯಿತು.

    ಅಂದಿನ ದಿನಗಳಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಬರಿ ಅಂಧರಿಗೆ ಮಾತ್ರ ಸಂಗೀತ ಶಿಕ್ಷಣ ನೀಡಲಾಗುತ್ತಿತ್ತು. ನಂತರ ನೀಲಗುಂದ ಗ್ರಾಮದ ದುರ್ಗಾದೇವಿ ಗುಡಿಯಲ್ಲಿ ಹಾರ್ಮೋನಿಯಂ ಕಲಿಯಲು, ಶ್ರಾವಣ ಮಾಸದಲ್ಲಿ ಊರಿನಲ್ಲಿ ಮೆರವಣಿಗೆ ಪ್ರಾರಂಭಿಸಲು ಬೆಳಗಿನ ಜಾವಾ 1 ಗಂಟೆಗೆ ಎದ್ದು ದೇವಸ್ಥಾನದ ಆವರಣವನ್ನು ಕಸಗೂಡಿಸಿ, ನೀರಿನಿಂದ ಸ್ವಚ್ಛಗೊಳಿಸಿ ತಾವೊಬ್ಬರೇ ಹಾರ್ಮೋನಿಯಂ ಹಿಡಿದು ಸಂಗೀತಾಭ್ಯಾಸ ಮಾಡುತ್ತಿದ್ದರು. ಸಂಗಡಿಗರು ಬಂದ ನಂತರ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಪಾಲ್ಗೊಳ್ಳುತ್ತಿದ್ದರು ಅಲ್ಲದೇ ಮತ್ತೆ ಸಂಜೆ 5ರಿಂದ ರಾತ್ರಿ 11ಗಂಟೆವರೆಗೆ ಹಾರ್ಮೋನಿಯಂ ಬಾರಿಸುತ್ತಾ ಹಾಡುಗಳನ್ನು ಹಾಡುತ್ತಿದ್ದರು.

    ಹೀಗೆ ಸಾಧನೆ ಶಿಖರವನ್ನು ಏರುತ್ತಾ ಕಷ್ಟದಲ್ಲಿ ಕಲೆಯನ್ನು ಗುರುತಿಸಿದ ಬಸವರಾಜ ಜಕ್ಕಮ್ಮನವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ಜೈಭೀಮ ಗೀಗೀ ಜನಪದ ಕಲಾತಂಡವನ್ನು ಕಟ್ಟಿಕೊಂಡು ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಯಾದಗಿರಿ, ಬಾಗಲಕೋಟೆ, ವಿಜಯಪುರ, ಮಂಡ್ಯ, ಬೀದರ್, ದಾವಣಗೆರೆ, ಹಾವೇರಿ, ಧಾರವಾಡ ಅಷ್ಟೇ ಅಲ್ಲಾ ಗಡಿ ಜಿಲ್ಲೆಗಳಲ್ಲೂ ಸುಮಾರು 4 ಸಾವಿರ ಕಾರ್ಯಕ್ರಮಗಳನ್ನು ನಾಜರಾಜ ಅವರು ನೀಡಿದ್ದಾರೆ.

    ಅಲ್ಲದೇ ಈವರೆಗೆ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ಮೂರು ಭಾರಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ನಾಗರಾಜ ಅವರು ಬರೀ ಸಂಗೀತಗಾರನಾಗಿ ಗುರುತಿಸಿಕೊಳ್ಳದೇ ಸುಮಾರು 30 ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ತವರು ಮನೆ ಕುಂಕುಮ, ಹುಡಿ ಎಬ್ಬಿಸಿದ ಹುಲಿ, ಭಾರತೀಯ ಬ್ರಿಟಿಷರು, ಪ್ರಾಣ ಹೋದರು ಮಾನಬೇಕು, ಹಳ್ಳಿ ಸುಟ್ಟ ಕೊಳ್ಳಿ, ರೊಚ್ಚಿಗೆದ್ದ ಹುಲಿ, ಹುಲಿ ಹೆಬ್ಬುಲಿ, ಸತ್ಯ ಎಲ್ಲಿದೇ ಕೈ ಎತ್ತಿ ಹೇಳಿ ಎಂಬ ನಾಟಕಗಳು ಜನಮೆಚ್ಚುಗೆ ಪಡೆದಿವೆ.

  • ಬಾಟಲ್ ಒಳಗೆ ಅರಳಿದ ಮೋದಿ, ಟ್ರಂಪ್ ಚಿತ್ರ – ಬೆಂಗ್ಳೂರು ಕಲಾವಿದನಿಂದ ಸ್ವಾಗತ

    ಬಾಟಲ್ ಒಳಗೆ ಅರಳಿದ ಮೋದಿ, ಟ್ರಂಪ್ ಚಿತ್ರ – ಬೆಂಗ್ಳೂರು ಕಲಾವಿದನಿಂದ ಸ್ವಾಗತ

    ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಇಡೀ ವಿಶ್ವದ ಗಮನ ಸೆಳೆದಿದೆ. ಈ ಹಿನ್ನೆಲೆ ಬೆಂಗಳೂರಿನ ಕಲಾವಿದ ಬಾಟಲ್ ಬಸವರಾಜ್ ಅವರು ಬೃಹತ್ ಗಾತ್ರದ ಬಾಟಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ.

    ಈ ಬಾಟಲಿ ಆರ್ಟ್ ಅತ್ಯಂತ ಕಠಿಣವಾಗಿದ್ದು, ಜಾಗರುಕತೆಯಿಂದ ಭಾವಚಿತ್ರವನ್ನು ಚಿತ್ರಿಸಬೇಕಾಗುತ್ತದೆ. ನಗರದ ಮಹಾಲಕ್ಷ್ಮಿ ಲೇಔಟ್‍ನ ಬಸವರಾಜ್ ಇದುವರೆಗೂ ಈ ರೀತಿಯ ಸುಮಾರು 150 ಭಾವಚಿತ್ರವನ್ನು ತಯಾರಿಸಿರಿದ್ದಾರೆ. ಇನ್ನು ಇದಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಸಿಎಂ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಭಾವಚಿತ್ರವನ್ನು ಸಹ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಬಸವರಾಜ್ ಅವರು ಗಾಂಧೀ ಜಯಂತಿ ಅಂಗವಾಗಿ ಸ್ವಚ್ಛ ಭಾರತ, ಗಾಂಧೀಜಿ ಫೋಟೋವನ್ನು ಬಾಟಲಿಯಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

    2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು. ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು.

  • ‘ಮೋದಿ ಬಂದ್ರೂ ನನ್ನೇನು ಮಾಡಲ್ಲ, ನೀನ್ ಯಾವ್ ಲೆಕ್ಕ’ – ನಗರಸಭೆ  ಕಮಿಷನರ್‌ಗೆ ಕುಂಚ ಕಲಾವಿದನಿಂದ ಅವಾಜ್

    ‘ಮೋದಿ ಬಂದ್ರೂ ನನ್ನೇನು ಮಾಡಲ್ಲ, ನೀನ್ ಯಾವ್ ಲೆಕ್ಕ’ – ನಗರಸಭೆ ಕಮಿಷನರ್‌ಗೆ ಕುಂಚ ಕಲಾವಿದನಿಂದ ಅವಾಜ್

    ಯಾದಗಿರಿ: ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಬಂದರೂ ನನ್ನನ್ನು ಏನು ಮಾಡಲ್ಲ, ನೀನು ಯಾವ ಲೆಕ್ಕ ಅಂತ ನಗರಸಭೆ ಕಮಿಷನರ್‌ಗೆ ಯಾದಗಿರಿ ಕುಂಚ ಕಲಾವಿದನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ.

    ಕೆಲಸ ಕೊಡದಕ್ಕೆ ಕೋಪಗೊಂಡ ಕುಂಚ ಕಲಾವಿದ, ಯಾದಗಿರಿ ನಗರಸಭೆ ಕಮಿಷನರ್ ರಮೇಶ್‍ಗೆ ನಗರದ ಡಿಸಿ ಸರ್ಕಾರಿ ಮನೆ ಎದುರು ನಡು ರಸ್ತೆಯಲ್ಲಿ ಮಲ್ಲು ಆರ್ಟ್ಸ್ ಮಾಲೀಕ ಮಲ್ಲಿಕಾರ್ಜುನ ಅವಾಜ್ ಹಾಕಿದ್ದಾನೆ.

    ನಗರ ಸುಂದರವಾಗಿ ಕಾಣಲು ಪ್ರವಾಸೋದ್ಯಮ, ನಗರಸಭೆ ಮತ್ತು ಜಿಲ್ಲಾಡಳಿತದಿಂದ ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಕಲಾಕೃತಿಗಳನ್ನು ಬಿಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಖಾಸಗಿ ಕುಂಚ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತೆ ಎನ್ನುವುದು ಕಲಾವಿದನ ಆರೋಪವಾಗಿದೆ. ಹೀಗಾಗಿ ನಡು ರಸ್ತೆಯಲ್ಲಿ ನಗರದ ಸಭೆ ಕಮಿಷನರ್ ರಮೇಶ್‍ಗೆ ಬೈದು ಕುಂಚ ಕಲಾವಿದ ತನ್ನ ಆಕ್ರೋಶ ಹೊರಹಾಕಿದ್ದಾನೆ.

  • ಸಕ್ಕರೆ ನಾಡಲ್ಲಿ ಕಲಾವಿದನ ಕುಂಚದಲ್ಲಿ ಅರಳುತ್ತಿರುವ ಸ್ವಚ್ಛತೆಯ ಅರಿವು

    ಸಕ್ಕರೆ ನಾಡಲ್ಲಿ ಕಲಾವಿದನ ಕುಂಚದಲ್ಲಿ ಅರಳುತ್ತಿರುವ ಸ್ವಚ್ಛತೆಯ ಅರಿವು

    ಮಂಡ್ಯ: ಕಸ ಮುಕ್ತ ನಗರವನ್ನಾಗಿ ಮಾಡಲು ಇದೀಗ ಕಲಾವಿದನ ಕುಂಚದ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಂಡ್ಯದಲ್ಲಿ ಮಾಡಲಾಗುತ್ತಿದೆ.

    ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಬರುವ ಗೋಡೆಗಳ ಮೇಲೆ ಸ್ವಚ್ಚತೆಯ ಕುರಿತ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಹೊಸ ವರ್ಷದ ಅಂಗವಾಗಿ ಕರ್ನಾಟಕ ರಾಜ್ಯ ಕುಂಚ ಕಲಾವಿದರ ಸಂಘ ಹಾಗೂ ಮಂಡ್ಯ ನಗರ ಸಭೆಯ ವತಿಯಿಂದ ಜನರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಈ ಹೊಸ ಉಪಾಯ ಮಾಡಲಾಗಿದೆ.

    ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿಯನ್ನು ಉಳಿಸಿ, ಸ್ವಚ್ಛತೆ ಕಾಪಡಿ ಆರೋಗ್ಯಕರವಾಗಿರಿ ಎಂಬ ಘೋಷವಾಕ್ಯದ ಮೂಲಕ ಚಿತ್ರಗಳನ್ನು ಬಿಡಿಸಲಾಗಿದೆ. ಈ ಮೂಲಕ ಮಂಡ್ಯ ನಗರವನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ಇದೀಗ ಮಂಡ್ಯ ನಗರ ಸಭೆ ಮುಂದಾಗಿದೆ. ಈ ನಡುವೆ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ಜನರಿಗೆ ಪರಿಸರದ ಕುರಿತು ಅರಿವು ಮೂಡಿಸಲಾಯಿತು.

  • ಪೇಜಾವರ ಶ್ರೀಗಳಿಗೆ ‘ಅಂತಿಮ ಚಿತ್ರನಮನ’

    ಪೇಜಾವರ ಶ್ರೀಗಳಿಗೆ ‘ಅಂತಿಮ ಚಿತ್ರನಮನ’

    ಬೆಂಗಳೂರು: ನಮ್ಮನ್ನು ಅಗಲಿದ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಫಿಡಿಲಿಟಸ್ ಗ್ಯಾಲರಿಯ ಕಲಾವಿದರು ಅಂತಿಮ ಚಿತ್ರನಮನ ಸಲ್ಲಿಸಿದರು.

    ತಮ್ಮ ಧಾರ್ಮಿಕ ಹಾಗೂ ರಾಜಕೀಯ ನಿಲುವುಗಳಿಂದ, ಸಾಮಾಜಿಕ ಸುಧಾರಣೆಗಳ ಬಗ್ಗೆ ಒಲವಿದ್ದ ಹಾಗೂ ತಮ್ಮ ಸರಳ ಧಾರ್ಮಿಕ ಜೀವನದಿಂದ ಗಮನ ಸೆಳೆದಿದ್ದ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ವೈಕುಂಠವಾಸಿಯಾದುದು ಅವರ ಶಿಷ್ಯರಿಗೆ ಹಾಗೂ ಅಭಿಮಾನಿಗಳಿಗೆ ಅತ್ಯಂತ ದುಃಖದ ವಿಚಾರವಾಗಿದೆ.

    ಹೀಗಾಗಿ ಬೆಂಗಳೂರಿನ ಪ್ರಸಿದ್ಧ ಕಲಾ ಗ್ಯಾಲರಿಯಾದ ಫಿಡಿಲಿಟಸ್ ಗ್ಯಾಲರಿಯ ಕಲಾವಿದ ಕೋಟೆ ಗದ್ದೆ ಎಸ್ ರವಿಯವರು ಶ್ರೀಗಳ ಶೀಘ್ರ ಚಿತ್ರಣವನ್ನು ರಚಿಸಿ ಫಿಡಿಲಿಟಸ್ ಗ್ಯಾಲರಿ ಹಾಗೂ ಕಲಾ ಸಮೂಹದ ಪರವಾಗಿ ಶ್ರೀಗಳಿಗೆ ಅಂತಿಮ ಚಿತ್ರ ನಮನವನ್ನು ಸಲ್ಲಿಸಿದ್ದಾರೆ.

  • ಬಡ ಕಲಾವಿದರ ಪ್ರೋತ್ಸಾಹ ಧನಕ್ಕೆ ಕನ್ನ – ಹಣ ಬಿಡುಗಡೆ ಆಗಬೇಕಂದ್ರೆ ಕೊಡಬೇಕು ಲಂಚ

    ಬಡ ಕಲಾವಿದರ ಪ್ರೋತ್ಸಾಹ ಧನಕ್ಕೆ ಕನ್ನ – ಹಣ ಬಿಡುಗಡೆ ಆಗಬೇಕಂದ್ರೆ ಕೊಡಬೇಕು ಲಂಚ

    ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಜನರಿಗೆ ನಾಗರಿಕತೆಯತ್ತ ಕೊಂಡೊಯ್ಯುವ ಇಲಾಖೆ ಎನ್ನುವ ಮಾತಿದೆ. ಆದರೆ ಯಾದಗಿರಿ ಈ ಇಲಾಖೆಯ ಮುಖ್ಯಾಧಿಕಾರಿ ನಾಗಕರಿಕತೆ ಇರಲಿ, ಕನಿಷ್ಠ ಮಾನವೀಯತೆ ಸಹ ಇಲ್ಲ.

    ದತ್ತಪ್ಪ ಸಾಗನೂರ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಾಧಿಕಾರಿ. ದತ್ತಪ್ಪಗೆ ಬಡ ಕಲಾವಿದರಂದರೆ ಕಿಂಚಿತ್ತೂ ಮರ್ಯಾದೆ ಇಲ್ಲ. ಇಲಾಖೆ ಜಿಲ್ಲೆಯ ಬಡ ಕಲಾವಿದರನ್ನು ಉತ್ತೇಜಿಸುವ ಮತ್ತು ಅವರ ಕಲೆಯನ್ನು ಗುರುತಿಸುವ ಸಲುವಾಗಿ, ಕಲಾವಿದರಿಗೆ ಅವರ ಕಲೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಅವರಿಗೆ ಗೌರವ ಧನ ನೀಡುತ್ತದೆ.

    ಒಂದು ಕಾರ್ಯಕ್ರಮ ಕೊಟ್ಟರೆ ಒಬ್ಬ ಕಲಾವಿದನಿಗೆ 15 ಸಾವಿರ ರೂ. ಗೌರವಧನ ಸಿಗುತ್ತದೆ. ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿ ಇಲಾಖೆ ಮುಖ್ಯಾಧಿಕಾರಿ ದತ್ತಪ್ಪ ಸಾಗನೂರ ಮೇಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದತ್ತಪ್ಪ, ಪ್ರತಿ ಕಲಾವಿದನ ಬಳಿ 5 ಸಾವಿರ ಲಂಚ ಪಡೆಯುವುವದು ಈ ಅಧಿಕಾರಿಗೆ ಆಭ್ಯಾಸವಾಗಿದೆ. ಒಂದು ವೇಳೆ ಲಂಚಾವತಾರದ ಬಗ್ಗೆ ಯಾರಾದರೂ ಕಲಾವಿದ ಬಾಯಿ ಬಿಟ್ಟರೆ ಕೋಪಗೊಂಡು ಅವರನ್ನು ಅವಮಾನಿಸೋದು ಅಧಿಕಾರಿಯ ಕೆಲಸ.

    ಲಂಚಬಾಕ ಅಧಿಕಾರಿ ಜಿಲ್ಲೆಯ ಹಗಲುವೇಶ ಕಲಾವಿದ ಶಂಕರಪ್ಪ ಶಾಸ್ತ್ರಿ ಎಂಬವರ ಮೇಲೆ ಅವಾಜ್ ಹಾಕಿದ್ದಾರೆ. ಕಿತ್ತು ತಿನ್ನುವ ಬಡತನಕ್ಕೆ ಶಂಕರಪ್ಪ ಶಾಸ್ತ್ರಿಗೆ, ಹಗಲುವೇಷ ಕಲೆ ಜೀವನಾಧಾರ. ಇದಕ್ಕಾಗಿ ಶಂಕರಪ್ಪ ಶಾಸ್ತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಹತ್ತಿರ ಕಾರ್ಯಕ್ರಮ ನೀಡಲು ಅವಕಾಶ ಕೇಳಿದ್ದಾರೆ. ಇದಕ್ಕೆ ದತ್ತಪ್ಪ 5 ಸಾವಿರ ರೂ. ಲಂಚ ಕೇಳಿದ್ದಾನೆ. ಈ ವಿಷಯವನ್ನು ಶಂಕರಪ್ಪ ತಮ್ಮ ಕಲಾವಿದ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅಧಿಕಾರಿ ದತ್ತಪ್ಪ ಬಡ ಕಲಾವಿದನಿಗೆ ಕಾಲು ಕೈ ಕತ್ತರಿಸುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

  • ಉಸಿರಾಟದ ತಂತ್ರಗಾರಿಕೆ ಕಲಿಸ್ತೀನಿ ಎಂದು ರೇಪ್‍ಗೈದ ಖ್ಯಾತ ಕಲಾವಿದ

    ಉಸಿರಾಟದ ತಂತ್ರಗಾರಿಕೆ ಕಲಿಸ್ತೀನಿ ಎಂದು ರೇಪ್‍ಗೈದ ಖ್ಯಾತ ಕಲಾವಿದ

    ಕೋಲ್ಕತ್ತಾ: ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆಯನ್ನು ಕಲಿಸುತ್ತೇನೆ ಎಂದು ಕಲಾವಿದೆಯನ್ನು ಅತ್ಯಾಚಾರಗೈದ ಪಶ್ಚಿಮ ಬಂಗಾಳದ ಖ್ಯಾತ ಚಲನಚಿತ್ರಕಾರ, ರಂಗಭೂಮಿ ಕಲಾವಿದ ಸುದೀಪ್ತೊ ಚಟರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಬಳಿಕ ಚಟರ್ಜಿ ಹಲವು ಬಾರಿ ಸಂತ್ರಸ್ತೆಯನ್ನು ಅತ್ಯಾಚಾರ ನಡೆಸಿದ್ದಾನೆ. ಬಂಧನದ ಬಳಿಕ ಚಟರ್ಜಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

    ಈ ವರ್ಷ ಮಾರ್ಚ್ ನಲ್ಲಿ ಘಟನೆ ನಡೆದಿದ್ದು, ಅಕ್ಟೋಬರ್ 17ರಂದು ಸಂತ್ರಸ್ತೆ ತನಗಾದ ಅನ್ಯಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಸಂತ್ರಸ್ತೆ ಫೂಲ್‍ಭಾಗ್ ಪೊಲೀಸ್ ಠಾಣೆಗೆ ತೆರಳಿ ಚಟರ್ಜಿ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಇತ್ತ ಭಲೆಗಟ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ. ಶನಿವಾರ ಫೂಲ್‍ಭಾಗ್ ಠಾಣೆಯ ಪೊಲೀಸರು ಚಟರ್ಜಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

    ಚಟರ್ಜಿ ನನಗೆ ನಟನಾ ತರಬೇತಿ ನೀಡುತ್ತಿದ್ದರು. ಒಂದು ದಿನ ತರಬೇತಿಗಾಗಿ ಮನೆಗೆ ಕರೆಸಿಕೊಂಡಿದ್ದರು. ಅಂದು ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆ ಹೇಳಿ ಕೊಡುತ್ತೇನೆಂದು ಅತ್ಯಾಚಾರ ಮಾಡಿದರು. ಇದೇ ರೀತಿ ಚಟರ್ಜಿ ಹಲವು ವಿದ್ಯಾರ್ಥಿನಿಯರನ್ನು ಅತ್ಯಾಚಾರ ಗೈದಿದ್ದಾನೆ. ತರಬೇತಿ ವೇಳೆಯೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.