Tag: Article 370

  • ಭಾರತದೊಂದಿಗೆ ಪಾಕ್ ವ್ಯಾಪಾರ ಸ್ಥಗಿತ, ವಾಯುಸೀಮೆ ಬಂದ್

    ಭಾರತದೊಂದಿಗೆ ಪಾಕ್ ವ್ಯಾಪಾರ ಸ್ಥಗಿತ, ವಾಯುಸೀಮೆ ಬಂದ್

    ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ ಬೆನ್ನಲ್ಲೇ ಪಾಕಿಸ್ತಾನವು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಆರ್ಥಿಕತೆ ಕುಸಿದಿದ್ದು ವಿದೇಶಗಳಿಂದ ನೆರವು ಬೇಡುತ್ತಿದೆ. ಈಗ ಭಾರತದ ಜೊತೆ ವ್ಯಾಪಾರವನ್ನು ಸ್ಥಗಿತಗೊಳಿಸುವ ಮೂಲಕ ಪಾಕ್ ತನ್ನ ಆತ್ಮಹತ್ಯೆಗೆ ತಾನೇ ಶರಣಾಗುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ಇದನ್ನು ಓದಿ: ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಪಾಕಿಸ್ತಾನ ಈಗ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಹೇಳಿಕೊಂಡಿದೆ. ಈ ನಿಟ್ಟಿನ ಪಾಕ್ ತನ್ನ ರಾಯಭಾರಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದಾಗಿ ಮತ್ತು ಪಾಕಿಸ್ತಾನದ ಭಾರತೀಯ ರಾಯಭಾರಿಯನ್ನು ಹೊರಹಾಕುವುದಾಗಿ ಘೋಷಿಸಿದೆ. ಈ ಸುದ್ದಿಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಸ್ಥಳೀಯ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

    ಇಸ್ಲಾಮಾಬಾದ್‍ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅನೇಕ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಸಮಿತಿಯು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಇದನ್ನು ಓದಿ: ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ

    ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕೆಳಕ್ಕೆ ಇಳಿಸುವುದು, ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು ಹಾಗೂ ದ್ವಿಪಕ್ಷೀಯ ವ್ಯವಸ್ಥೆಗಳ ಪರಿಶೀಲನೆ ಮಾಡುವ ನಿರ್ಧಾರವನ್ನು ಪಾಕ್ ಕೈಗೊಂಡಿದೆ. ಜೊತೆಗೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೂರು ನೀಡಲು ಮುಂದಾಗಿದೆ.

    ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು (ಆಗಸ್ಟ್ 14) ಕೆಚ್ಚೆದೆಯ ಕಾಶ್ಮೀರಿಗಳಿಗೆ ಒಗ್ಗಟ್ಟಿಗೆ ಹಾಗೂ ಅವರ ಸ್ವ-ನಿರ್ಣಯದ ಹಕ್ಕಿಗಾಗಿ ಹೋರಾಟ ಮಾಡುವುದಾಗಿ ಪಾಕ್ ಘೋಷಿಸಿದೆ. ಅಷ್ಟೇ ಅಲ್ಲದೆ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು (ಆಗಸ್ಟ್ 15) ಕಪ್ಪು ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಂಡಿದೆ.

    ಎನ್‍ಎಸ್‍ಸಿ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ಆಂತರಿಕ ಸಚಿವರು (ಗೃಹ ಸಚಿವ), ಶಿಕ್ಷಣ ಸಚಿವರು, ಮಾನವ ಹಕ್ಕುಗಳ ಸಚಿವರು, ಕಾನೂನು ಸಚಿವರು, ಐಎಸ್‍ಐ ಮತ್ತು ಸೇನಾ ಸಿಬ್ಬಂದಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಈ ನಿರ್ಧಾರದ ಜೊತೆಗೆ ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆ ಬಳಸಲು ನಿರ್ಬಂಧ ಹೇರಿದೆ.

    ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ ಉಗ್ರ, ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಫೀಜ್ ಸಯೀದ್ ತಪ್ಪಿತಸ್ಥನೆಂದು ಪಾಕಿಸ್ತಾನದ ಗುಜ್ರನ್‍ವಾಲಾ ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ಈ ಪ್ರಕರಣವನ್ನು ಪಾಕಿಸ್ತಾನದ ಗುಜರಾತ್‍ಗೆ ವರ್ಗಾಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಹಫೀಜ್ ಸಯೀದ್‍ನನ್ನು ಪಾಕಿಸ್ತಾನದ ಅಧಿಕಾರಿಗಳು ಜುಲೈ 17ರಂದು ಬಂಧಿಸಿದ್ದರು. ನಂತರ 7 ದಿನಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಲಾಗಿತ್ತು ಎಂದು ವರದಿಯಾಗಿದೆ.

  • 370 ವಿಧಿ ರದ್ದು, ಮುಂಬೈ ದಾಳಿಗೆ ಉಗ್ರರ ಸಂಚು

    370 ವಿಧಿ ರದ್ದು, ಮುಂಬೈ ದಾಳಿಗೆ ಉಗ್ರರ ಸಂಚು

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರ ಉಗ್ರ ಸಂಘಟನೆಗಳು ತಮ್ಮ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಆರ್ಥಿಕ ಚಟುವಟಿಕೆ ಹೆಚ್ಚು ನಡೆಯುವ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿವೆ.

    ಪಾಕಿಸ್ತಾನ ಮೂಲಕ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ. ಮಾತ್ರವಲ್ಲದೆ, ಭಾರತದ ಆರ್ಥಿಕತೆಯನ್ನು ಕುಗ್ಗಿಸುವ ಪ್ರಯತ್ನವನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಮುಂಬೈನಂತಹ ವಾಣಿಜ್ಯ ನಗರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ.

    ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದುಕೊಂಡಿರುವ ಭಾರತದ ನಿರ್ಧಾರ ‘ಪುಲ್ವಾಮಾದಂತಹ ಘಟನೆ’ಗಳಿಗೆ ಕಾರಣವಾಗಬಹುದು. ಅಲ್ಲದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಂಪ್ರದಾಯಿಕ ಯುದ್ಧವನ್ನು ಪ್ರಚೋದಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಬೆನ್ನಲ್ಲೇ ಈ ಮಾಹಿತಿ ಹೊರ ಬಿದ್ದಿದೆ.

    ಈ ಮೂಲಕ ಪಾಕಿಸ್ತಾನ ಭಯೋತ್ಪಾದಕ ಗುಂಪುಗಳಿಗೆ ಬೆಂಬಲವನ್ನು ಹೆಚ್ಚಿಸುತ್ತಿದೆ. ಅಲ್ಲದೆ ಪಾಕಿಸ್ತಾನದ ಬಳಿ ಇರುವ ಭಯೋತ್ಪಾದಕ ಗುಂಪುಗಳನ್ನು ಭಾರತದತ್ತ ಕಳುಹಿಸುತ್ತಿದೆ ಎಂಬ ಸೂಚನೆಯಾಗಿ ಈ ಮಾಹಿತಿ ಗೋಚರಿಸುತ್ತಿದೆ.

    ಇಮ್ರಾನ್ ಖಾನ್ ಹೇಳಿಕೆ ನೀಡುವ ವೇಳೆ ಜೈಶ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಕಿರಿಯ ಸಹೋದರ ರೌಫ್ ಅಝರ್ ನಿನ್ನೆ ರಾವಲ್ಪಿಂಡಿಯಲ್ಲಿ ನಡೆದ ಸಭೆ ನಡೆಸಿದ್ದಾನೆ. ಸಭೆ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದಾನೆ ಎಂಬ ಸುದ್ದಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ದಾಳಿ ಕುರಿತು ಚರ್ಚಿಸಲಾಗಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.

  • ಇನ್ಮೇಲೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದ್ವೆ ಆಗಬಹುದು: ಬಿಜೆಪಿ ಶಾಸಕ

    ಇನ್ಮೇಲೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದ್ವೆ ಆಗಬಹುದು: ಬಿಜೆಪಿ ಶಾಸಕ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ್ದರಿಂದ ಆಗುವ ಪ್ರಯೋಜನವೇನು ಅಂತ ತಿಳಿಸಲು ಹೋಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಜಾಫರ್ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ್ ಸೈನಿ ಅವರು, ಇನ್ನುಮುಂದೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದುವೆ ಆಗಬಹುದು ಎಂದು ಹೇಳಿದ್ದಾರೆ. ಶಾಸಕರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರವಾಗಿ ತೆಗೆದುಕೊಂಡ ನಿರ್ಧಾರದಿಂದ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಜಮೀನು, ಆಸ್ತಿ ಖರೀದಿಸಬಹುದು. ಅಲ್ಲಿಯವರನ್ನು ಮದುವೆ ಕೂಡ ಆಗಬಹುದು. ಇನ್ನುಮುಂದೆ ಕಾಶ್ಮೀರದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಅಲ್ಲಿನ ಯುವತಿಯರ ಮೇಲೆ ತುಂಬಾ ದಬ್ಬಾಳಿಕೆ ನಡೆಯುತಿತ್ತು. ಕಾಶ್ಮೀರ ಯುವತಿ ಉತ್ತರ ಪ್ರದೇಶದ ಯುವಕನನ್ನು ಮದುವೆ ಆಗುವಂತಿರಲಿಲ್ಲ. ಒಂದು ವೇಳೆ ಮದುವೆಯಾದರೆ ಆಕೆಯ ಪೌರತ್ವ ರದ್ದು ಮಾಡುತ್ತಿದ್ದರು. ಭಾರತಕ್ಕೆ ಹಾಗೂ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪೌರತ್ವವಿತ್ತು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು. ಏಕೆಂದರೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆ ಆಗಬಹುದು. ಹಿಂದೂ-ಮುಸ್ಲಿಂ ಸೇರಿದಂತೆ ದೇಶದ ಎಲ್ಲರೂ ಕೇಂದ್ರದ ನಿರ್ಧಾರವನ್ನು ಸಂಭ್ರಮಿಸಬೇಕು ಎಂದು ಶಾಸಕ ವಿಕ್ರಮ್ ಸೈನಿ ಹೇಳಿಕೆ ನೀಡಿದ್ದಾರೆ.

    ಈ ವಿವಾದಾತ್ಮಕ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ವಿಕ್ರಮ್ ಸೈನಿ ಅವರು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಯಾರು ಬೇಕಾದರೂ ಕಾಶ್ಮೀರ ಯುವತಿಯರನ್ನು ಮದುವೆ ಆಗಬಹುದು ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಮೋದಿ ಜೀ ನಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಕ್ರಮ್ ಸೈನಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. 2019 ಜನವರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಭಾರತದಲ್ಲಿ ಆತಂಕವಿದೆ ಎಂದು ಹೇಳಿವವರು ದೇಶದ್ರೋಹಿಗಳು. ಭಾರತದಲ್ಲಿ ವಾಸಿಸಲು ಆತಂಕವಿದೆ ಅಂತ ಹೇಳಿದವರಿಗೆ ಬಾಂಬ್ ಹಾಕಿ ಕೊಲ್ಲಬೇಕು, ಯಾರೊಬ್ಬರನ್ನೂ ಬಿಡುವುದಿಲ್ಲ. ಭದ್ರತೆ ಎಂಬುದು ನನ್ನ ಅಂತರ್ಗತ ಭಾವನೆ. ನನಗೆ ಖಾತೆ ಕೊಡಿ ಇಂತಹವರನ್ನು ನಾನು ಬಾಂಬ್ ಇಟ್ಟು ಉಡಾಯಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

  • ಜಮ್ಮು ಕಾಶ್ಮೀರ ಪುನರ್‌ರಚನಾ ವಿಧೇಯಕ ಪಾಸ್ – ಮೋದಿ ಮುಕಟಕ್ಕೆ ಗರಿ

    ಜಮ್ಮು ಕಾಶ್ಮೀರ ಪುನರ್‌ರಚನಾ ವಿಧೇಯಕ ಪಾಸ್ – ಮೋದಿ ಮುಕಟಕ್ಕೆ ಗರಿ

    ನವದೆಹಲಿ: ಕಾಶ್ಮೀರ ಪುನರ್ ವಿಭಜನೆಯ ಐತಿಹಾಸಿಕ ಕ್ಷಣದ ಕೀರ್ತಿ ಮೋದಿ ಸರ್ಕಾರದ ಮುಕುಟಕ್ಕೆ ಸಂದಿದೆ. ರಾಜ್ಯಸಭೆಯಲ್ಲಿ ಸೋಮವಾರ ಪಾಸ್ ಆಗಿದ್ದ ಕಾಶ್ಮೀರ ಪುನರ್ ವಿಭಜನಾ ವಿಧೇಯಕಕ್ಕೆ ಇಂದು ಲೋಕಸಭೆಯಲ್ಲೂ ಭಾರೀ ಮತಗಳ ಅಂತರದಲ್ಲಿ ಅಂಗೀಕಾರವಾಗಿದೆ.

    ಜಮ್ಮು ಮತ್ತು ಕಾಶ್ಮೀರವನ್ನು ವಿಧಾನಸಭೆ ಸಹಿತ ಹಾಗೂ ಲಡಾಖ್ ಪ್ರದೇಶವನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ `ಜಮ್ಮು ಕಾಶ್ಮೀರ ಪುನರ್ ರಚನಾ ವಿಧೇಯಕ’ದ ಪರವಾಗಿ 370 ಹಾಗೂ ವಿರುದ್ಧವಾಗಿ 70 ವೋಟ್‍ಗಳು ಬಿದ್ದಿವೆ.

    ಗಮನಾರ್ಹ ಸಂಗತಿ ಎಂದರೆ ಕಾಶ್ಮೀರಕ್ಕಿದ್ದ 370 ವಿಶೇಷ ವಿಧಿಯನ್ನು ಲೋಕಸಭೆಯಲ್ಲಿ ಇಂದು 370 ಮತಗಳಲ್ಲಿ ರದ್ದುಗೊಳಿಸಲಾಗಿದೆ. ಪ್ರಧಾನಿ ಮೋದಿ 2.0 ಅವಧಿಯ 17ನೇ ಲೋಕಸಭೆಯ ಆರಂಭದಲ್ಲೇ ಭರ್ತಿ 26 ಬಿಲ್‍ಗಳು ಪಾಸ್ ಆಗಿದ್ದು ಅತ್ಯಂತ ಉತ್ಪಾದಕ ಅಧಿವೇಶನ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಮಧ್ಯೆ, ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿ ರದ್ದುಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಗೌರವ ಸಲ್ಲಿಸಿದರು.

    ಇದಕ್ಕೂ ಮುನ್ನ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು. ಲೋಕಸಭೆಯಲ್ಲಿ 370ನೇ ವಿಧಿ ರದ್ದು ಹಾಗೂ ಕಾಶ್ಮೀರದ ಪುನಾರಚನೆ ವಿಧೇಯಕ 2019 ಅನ್ನು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿದ ಅವರು, ‘ಆರ್ಟಿಕಲ್ 370ಯೂ ಭಾರತ ಮತ್ತು ಕಾಶ್ಮೀರದ ಮಧ್ಯೆ ಗೋಡೆ ಸೃಷ್ಟಿಸಿತ್ತು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುವಾಗ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿಸಿಯೇ ಮಾತನಾಡುತ್ತೇನೆ. ಅದಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ’ ಅಂತ ಸ್ಪಷ್ಪಪಡಿಸಿದರು.

    ಸಂಜೆ ವಿಧೇಯಕದ ಮೇಲೆ ಉತ್ತರ ನೀಡಿದ್ದ ಅಮಿತ್ ಶಾ, ಈ ಹಿಂದೆ ಆಂಧ್ರಪ್ರದೇಶ ವಿಭಜನೆ ವೇಳೆ ಕಾಂಗ್ರೆಸ್ ಯಾರನ್ನಾದರೂ ಸಂಪರ್ಕಿಸಿತ್ತಾ? ನಮಗೆ ಅವರ ನೀತಿ ಪಾಠ ಬೇಕಿಲ್ಲ ಅಂತ ತಿರುಗೇಟು ನೀಡಿದರು. ಹುರಿಯತ್ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಅಲ್ಲದೆ, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಿಲ್ಲ ಎಂದರು. ಆದರೆ, ಸದನದಲ್ಲೇ ಅಮಿತ್ ಶಾ ಸುಳ್ಳು ಹೇಳುತ್ತಾರೆ. ಇಂಥಾ ಹಿಂದೂ ಸ್ಥಾನವನ್ನು ನಾನೆಂದು ನೋಡಿಯೇ ಇಲ್ಲ ಅಂತ ಫಾರೂಕ್ ಅಬ್ದುಲ್ಲಾ ಆಕ್ರೋಶ ಹೊರಹಾಕಿದ್ದಾರೆ.

    ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಭಾರತದ ನಿರ್ಧಾರದಿಂದ ಪುಲ್ವಾಮಾದಂತಹ ಘಟನೆಗಳು ಮರಕಳಿಸುತ್ತವೆ ಎಂದಿದ್ದಾರೆ. ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತ್ತಿದ್ದು, ಜನಾಂಗೀಯ ನಿಂದನೆ ಆಗುತ್ತಿದೆ ಅಂತ ದೂರಿದ್ದಾರೆ. ಮೋದಿ ಸರ್ಕಾರ ಆರ್ ಎಸ್‍ಎಸ್ ತತ್ವ ಸಿದ್ಧಾಂತಗಳನ್ನು ಜಾರಿಗೆ ತರಲು ಮುಂದಾಗಿದ್ದು, ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೆಜ್ಜೆ ಇಟ್ಟಂತೆ ಕಾಣುತ್ತಿದೆ ಅಂತ ಆರೋಪಿಸಿದ್ದಾರೆ. ವಿಶ್ವಸಂಸ್ಥೆಗೆ ದೂರು ಕೊಡ್ತೇವೆ. ಅವಕಾಶ ಸಿಗುವ ಎಲ್ಲಾ ವೇದಿಕೆಗಳಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸ್ತೇವೆ ಅಂತಲೂ ಇಮ್ರಾನ್ ಖಾನ್ ಗುಡುಗಿದ್ದಾರೆ.

  • ವಾಜಪೇಯಿ ಮಾಡದ ಕೆಲಸವನ್ನು ಮೋದಿ ಮಾಡಿದ್ದಾರೆ- ಕೆ.ಎಸ್.ಭಗವಾನ್

    ವಾಜಪೇಯಿ ಮಾಡದ ಕೆಲಸವನ್ನು ಮೋದಿ ಮಾಡಿದ್ದಾರೆ- ಕೆ.ಎಸ್.ಭಗವಾನ್

    – ಮೋದಿ ಹಾಡಿ ಹೊಗಳಿದ ಭಗವಾನ್

    ಮೈಸೂರು: ಯಾವಾಗಲೂ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ 370ನೇ ವಿಧಿ ರದ್ದು ಪಡಿಸಿದ ಕೇಂದ್ರದ ನಿರ್ಧಾರ ಹಾಗೂ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ.

    ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಒಳ್ಳೆ ಕೆಲಸ ಮಾಡಿದರೆ ಅದನ್ನು ಮೆಚ್ಚಬೇಕು. ನಮ್ಮ ಪ್ರಧಾನಿ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ವಾಜಪೇಯಿ ಮಾಡದಂತ ಕೆಲಸವನ್ನು ಮೋದಿ ಮಾಡಿದ್ದಾರೆ. ಇದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದು ಸ್ವಾಗತಾರ್ಹ ಕೆಲಸ. ಇದರಿಂದ ದೇಶದಲ್ಲಿ ಸಮಾನತೆ ಉಂಟಾಗಿದೆ, ಖರ್ಚುವೆಚ್ಚಗಳು ಕಡಿಮೆಯಾಗಿದೆ. ಆದರೆ, ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ನನ್ನ ವಿರೋಧವಿದೆ ಎಂದು ಇದೇ ವೇಳೆ ಸ್ಪಷ್ಟ ಪಡಿಸಿದರು.

    ಒಳ್ಳೆ ಕೆಲಸಗಳನ್ನು ನಮ್ಮ ಪ್ರಧಾನಿ ಮಾಡಲಿ, ಬಡವರ ಪರವಾಗಿ, ಉದ್ಯೋಗ ಸೃಷ್ಟಿಯ ಬಗ್ಗೆ ಮೋದಿ ಗಮನಹರಿಸಿಬೇಕು ಎಂದು ಪ್ರೋ.ಕೆ.ಎಸ್.ಭಗವಾನ್ ಆಶಯ ವ್ಯಕ್ತಪಡಿಸಿದ್ದಾರೆ.

  • ಮಿಷನ್ ಕಾಶ್ಮೀರ ಅಷ್ಟು ಸುಲಭವಾಗಿದ್ದು ಹೇಗೆ? ವಿರೋಧಿಗಳು ಹೇಳುವುದು ಏನು? ಸಂವಿಧಾನ ಏನು ಹೇಳುತ್ತೆ?

    ಮಿಷನ್ ಕಾಶ್ಮೀರ ಅಷ್ಟು ಸುಲಭವಾಗಿದ್ದು ಹೇಗೆ? ವಿರೋಧಿಗಳು ಹೇಳುವುದು ಏನು? ಸಂವಿಧಾನ ಏನು ಹೇಳುತ್ತೆ?

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಗಾದೆ ಮಾತಿನಂತೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನೇ ಬಳಸಿಕೊಂಡು ಯಾರು ಊಹೆ ಮಾಡದ ರೀತಿಯಲ್ಲಿ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಬೇಕಾದರೆ ಜಮ್ಮು ಕಾಶ್ಮೀರ ಶಾಸನಸಭೆಯ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಇದ್ಯಾವ ಪ್ರಕ್ರಿಯೆಗಳಿಗೆ ಆಸ್ಪದ ನೀಡದೇ ಕೇಂದ್ರ ಸರ್ಕಾರ ‘ಬೈಪಾಸ್ ಸರ್ಜರಿ’ ಮಾಡುವ ಮೂಲಕ ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಶಾಕ್ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಯಾವ ತಂತ್ರ ಬಳಸಿ ಸಂವಿಧಾನದ 370 ಮತ್ತು 35 ವಿಧಿಯನ್ನು ರದ್ದು ಮಾಡಿದೆ? ಈ ರೀತಿ ತಂತ್ರದ ಮೂಲಕ ರದ್ದು ಮಾಡಬಹುದೇ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಅಷ್ಟೊಂದು ಜಟಿಲವಾಗಿದ್ದು ಯಾಕೆ?
    ನಿಮಗೆ ಈಗಾಗಲೇ ತಿಳಿದಿರುವುಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಅದು ಜಮ್ಮು ಕಾಶ್ಮೀರದ ಶಾಸನ ಸಭೆಯಲ್ಲಿ ಪಾಸ್ ಆಗಬೇಕು. ಆದರೆ ಸದ್ಯ ಅಲ್ಲಿನ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ಹೀಗಾಗಿ ವಿಧಾನಸಭೆ ಇಲ್ಲದೇ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಸಾಧ್ಯವಿರಲಿಲ್ಲ. ಇದರ ಜೊತೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ರಾಜ್ಯಸಭೆಯಲ್ಲಿ ಎನ್‍ಡಿಎಗೆ ಬಹುಮತ ಇಲ್ಲ. ಹೀಗಾಗಿ ಲೋಕಸಭೆಯಲ್ಲಿ ಮಸೂದೆ ಮಂಡಿಸಿದರೂ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆಗಲಾರದು ಎನ್ನುವ ಮಾತು ಕೇಳಿ ಬಂದಿತ್ತು.

    ಪ್ರತ್ಯೇಕವಾದಿಗಳ ವಾದ ಏನಿತ್ತು?
    ವಿಶೇಷ ಸ್ಥಾನಮಾನ ರದ್ದು ಮಾಡಬೇಕಾದರೆ ಜಮ್ಮು ಕಾಶ್ಮೀರ ಸಂವಿಧಾನದ ರಚನಾ ಸಮಿತಿ ಶಿಫಾರಸು ಅಗತ್ಯ ಎನ್ನುವ ಮಹತ್ವದ ಉಲ್ಲೇಖ ಭಾರತದ ಸಂವಿಧಾನದಲ್ಲಿದೆ. ಈ ಸಮಿತಿ 1957ರಲ್ಲೇ ವಿಸರ್ಜನೆ ಆಗಿದೆ. ಅಷ್ಟೇ ಅಲ್ಲದೇ ಅಲ್ಲದೇ ಕಾಶ್ಮೀರದ ಒಂದು ಭಾಗ ಪಾಕಿಸ್ತಾನದಲ್ಲಿದೆ. ಈ ಕಾರಣಕ್ಕಾಗಿ ಮತ್ತೆ ಸಂವಿಧಾನ ರಚನಾ ಸಮಿತಿ ರಚಿಸಲು ಸಾಧ್ಯವಿರಲಿಲ್ಲ. ಸಂವಿಧಾನ ರಚನಾ ಸಮಿತಿ ಅಸ್ವಿತ್ವದಲ್ಲಿ ಇಲ್ಲದೇ ಇರುವಾಗ ಪ್ರತ್ಯೇಕ ಸ್ಥಾನಮಾನವನ್ನು ಹೇಗೆ ತೆಗೆಯಲಾಗುತ್ತದೆ? ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯವಾದ ವಿಚಾರ. ಬೇರೆ ಯಾವುದೇ ರೀತಿ ಮಾಡಿದರೂ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎನ್ನುವ ವಾದವನ್ನು ಇಲ್ಲಿಯವರೆಗೆ ಮುಂದಿಟ್ಟುಕೊಂಡು ಬಂದಿದ್ದರು.

    ಜಟಿಲ ಸಮಸ್ಯೆಯನ್ನು ಪರಿಹರಿಸಿದ್ದು ಹೇಗೆ?
    ಕಾಶ್ಮೀರ ಸಮಸ್ಯೆ ಇಲ್ಲಿಯವರೆಗೆ ಜಟಿಲವಾಗಿ ಕಂಡರೂ ಸರ್ಕಾರ 370ನೇ ಕಲಂನಲ್ಲೇ ಇದ್ದ ಅಂಶವೊಂದನ್ನು ಬಳಸಿಕೊಂಡು ಆ ವಿಧಿಯನ್ನೇ ಈಗ ರದ್ದುಮಾಡಿರುವುದು ವಿಶೇಷ. ಸೆಕ್ಷನ್ 3ರ ಪ್ರಕಾರ ಈ ಕಲಂನಲ್ಲಿ ಯಾವುದೇ ಅಂಶಗಳಿದ್ದರೂ ರಾಷ್ಟ್ರಪತಿಗಳು ಒಂದು ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ಈ ಕಲಂ ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಕೆಲ ಬದಲಾವಣೆಗಳನ್ನು ಮಾಡಬಹುದು ಎನ್ನುವ ಪ್ರಸ್ತಾಪವಿದೆ. ಕೇಂದ್ರ ಸರ್ಕಾರ ಈ ಅಂಶವನ್ನೇ ಮುಂದಿಟ್ಟುಕೊಂಡು ಈಗ 370ನೇ ವಿಧಿಯನ್ನು ರದ್ದುಗೊಳಿಸಿದೆ.

    ತಿದ್ದುಪಡಿ ಮಾಡಿದ್ದು ಹೇಗೆ?
    ಈ ಮೊದಲೇ ತಿಳಿಸಿದಂತೆ ಸಂವಿಧಾನ ರಚನಾ ಸಮಿತಿ ಶಿಫಾರಸು ಮಾಡಿದರೆ ಮಾತ್ರ ವಿಶೇಷ ಸ್ಥಾನಮಾನವನ್ನು ತೆಗೆಯಬಹುದು. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲದ ಕಾರಣ ಸರ್ಕಾರ 370ನೇ ವಿಧಿಯನ್ನು ತಿದ್ದುಪಡಿ ಮಾಡಲೇಬೇಕಿತ್ತು. ಈ ತಿದ್ದುಪಡಿಗಾಗಿ ಸರ್ಕಾರ ಆಯ್ಕೆ ಮಾಡಿದ್ದು 367ನೇ ವಿಧಿಯನ್ನು. ರಾಷ್ಟ್ರಪತಿಗಳು ಆದೇಶದ ಮೂಲಕ ತಿದ್ದುಪಡಿ ಮಾಡಬಹುದಾದ ವಿಧಿ ಇದಾಗಿದೆ. ಈ ವಿಧಿಯನ್ನು ಬಳಸಿಕೊಂಡು ಸರ್ಕಾರ ‘ಸಂವಿಧಾನ ರಚನಾ ಸಮಿತಿ’ಯನ್ನು ‘ರಾಜ್ಯ ವಿಧಾನಸಭೆ’ ಎಂಬುದಾಗಿ ಪರಿಗಣಿಸಬೇಕು ಎನ್ನುವ ಅಂಶವನ್ನು ಸೇರಿಸಿ ತಿದ್ದುಪಡಿ ಮಾಡಲಾಯಿತು. ಸದ್ಯ ಈಗ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ಅಸ್ವಿತ್ವದಲ್ಲಿ ಇಲ್ಲ. ಪ್ರಸ್ತುತ ರಾಜ್ಯಪಾಲರಿಂದ ಶಿಫಾರಸು ಮಾಡಿಸುವ ಮೂಲಕ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಯಿತು.

    ಕೇಂದ್ರದ ಈ ನಿರ್ಧಾರ ಸಾಧುವೇ?
    ಯಾರೂ ಊಹಿಸದ ರೀತಿಯಲ್ಲಿ ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈಗ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಸರಿಸಿದ ನಡೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಯಾವುದೇ ರಾಜ್ಯವನ್ನು ಒಡೆಯಬೇಕಾದರೆ ಶಾಸನ ಸಭೆಯಲ್ಲಿ ಚರ್ಚೆ ನಡೆಯುವುದು ಉತ್ತಮ ಪ್ರಜಾಪ್ರಭುತ್ವದ ಲಕ್ಷಣ. ಆದರೆ ಇಲ್ಲಿ ಯಾವುದೇ ಚರ್ಚೆ ನಡೆಸದೇ ನಾಯಕರನ್ನು ಗೃಹ ಬಂಧನದಲ್ಲಿರಿಸಿ ದಿನಬೆಳಗಾಗುವುದರ ಒಳಗಡೆ ಎರಡು ಭಾಗ ಮಾಡಿದ್ದು ಎಷ್ಟು ಸರಿ? ಇನ್ನು ಮುಂದೆ ಯಾವುದೇ ಸರ್ಕಾರಗಳು ಬೇರೆ ರಾಜ್ಯವನ್ನು ಒಡೆದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬಹುದಲ್ಲವೇ ಎನ್ನುವ ಪ್ರಶ್ನೆಯೂ ಎದ್ದಿದೆ.

    ಕಾನೂನು ತಜ್ಞರು ಏನು ಹೇಳುತ್ತಾರೆ?
    ಕೇಂದ್ರದ ನಡೆಯ ಬಗ್ಗೆ ಕಾನೂನು ಪಂಡಿತರಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರದ ನಿರ್ಧಾರ ಅಸಂವಿಧಾನಿಕವಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಹಲವು ಚರ್ಚೆಗಳು ಆಗಬಹುದು ಎಂದು ಹೇಳಿದ್ದಾರೆ.

    ಕೆಲವರು ಸಂವಿಧಾನದಲ್ಲಿ ಇರುವ ಅಂಶಗಳನ್ನೇ ಬಳಸಿಕೊಂಡು ಕಿತ್ತು ಹಾಕಿದ ಪರಿಣಾಮ ನ್ಯಾಯಾಲಯಕ್ಕೆ ಹೋಗುವ ಪ್ರಮೇಯವೇ ಉದ್ಭವಿಸುವುದಿಲ್ಲ. ನ್ಯಾಯಾಲಯದಲ್ಲೂ ಕೇಂದ್ರದ ವಾದಕ್ಕೆ ಅಂತಿಮವಾಗಿ ಜಯ ಸಿಗುತ್ತದೆ ಎಂದು ಹೇಳಿದ್ದರೆ ಇನ್ನು ಕೆಲವರೂ ಸೂಪರ್ ಸೀಡ್ ಮಾಡಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ರಾಜ್ಯಪಾಲರು ಯಾವಾಗಲೂ ಕೇಂದ್ರದ ಪ್ರತಿನಿಧಿ ಆಗುತ್ತಾರೆಯೇ ಹೊರತು ರಾಜ್ಯದ ಪ್ರತಿನಿಧಿಯಾಗಲು ಸಾಧ್ಯವಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ಅಂಗೀಕಾರವಾಗದ ಹೊರತು ವಿಶೇಷ ಸ್ಥಾನಮಾನವನ್ನು ಹೇಗೆ ರದ್ದು ಪಡಿಸುತ್ತಾರೆ? ಕೇಂದ್ರ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ವಾದಿಸುತ್ತಿದ್ದಾರೆ.

    ಇತ್ತೀಚೆಗೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಮಯದಲ್ಲಿ ಹಣಕಾಸು ಮಸೂದೆಯನ್ನು ಜುಲೈ 31ರ ಒಳಗಡೆ ಪಾಸ್ ಮಾಡಬೇಕಿತ್ತು. ಸರ್ಕಾರವೇ ಇಲ್ಲದೇ ಇರುವಾಗ ಈ ಮಸೂದೆಯನ್ನು ಹೇಗೆ ಪಾಸ್ ಮಾಡಲಾಗುತ್ತದೆ ಎನ್ನುವ ಪ್ರಶ್ನೆ ಬಂದಾಗ ಕಾನೂನು ಪಂಡಿತರು, ಸ್ಪೀಕರ್ ಕೈ ತೋರಿಸಿದ್ದು ಕೇಂದ್ರ ಸರ್ಕಾರವನ್ನು. ರಾಜ್ಯ ಸರ್ಕಾರ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಹೀಗಾಗಿ ಸದ್ಯ ಕಣಿವೆ ರಾಜ್ಯದಲ್ಲಿ ಸರ್ಕಾರ ಇಲ್ಲದ ಕಾರಣ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದು. ಸಂವಿಧಾನವೇ ಈ ಅವಕಾಶ ನೀಡಿದ್ದಾಗ ಇದರಲ್ಲಿ ತಪ್ಪು ಏನು ಇಲ್ಲ. ಒಂದು ವೇಳೆ ಬಹುಮತ ಇರುವ ಸರ್ಕಾರವನ್ನು ಉದ್ದೇಶಪೂರ್ವಕವಾಗಿ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೇರಿ ಈ ನಿರ್ಧಾರ ಕೈಗೊಂಡಿದ್ದರೆ ಮಾತ್ರ ತಪ್ಪಾಗುತಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಎಲ್ಲ ಸಂವಿಧಾನ ಬದ್ಧವಾಗಿಯೇ ನಡೆದಿದೆ ಎಂದು ಎಂದು ಕೆಲವರು ವಾದಿಸುತ್ತಿದ್ದಾರೆ.

  • ನಾವು ಹಿಂದುಳಿಯಲು ಕಾಂಗ್ರೆಸ್, 370 ವಿಧಿ ಕಾರಣ – ವೈರಲ್ ಆಗ್ತಿದೆ ಲಡಾಖ್ ಯುವ ಸಂಸದನ ಭಾಷಣ

    ನಾವು ಹಿಂದುಳಿಯಲು ಕಾಂಗ್ರೆಸ್, 370 ವಿಧಿ ಕಾರಣ – ವೈರಲ್ ಆಗ್ತಿದೆ ಲಡಾಖ್ ಯುವ ಸಂಸದನ ಭಾಷಣ

    ನವದೆಹಲಿ: ನಮ್ಮ ಪ್ರದೇಶ ಭಾರತದಲ್ಲಿ ಹಿಂದುಳಿಯಲು ಕಾಂಗ್ರೆಸ್ ಮತ್ತು ಸಂವಿಧಾನದ 370ನೇ ವಿಧಿ ಕಾರಣ ಎಂದು ಲಡಾಖ್ ಬಿಜೆಪಿ ತ್ಸೆರಿಂಗ್ ನಮ್‍ಗ್ಯಾಲ್ ಅಭಿಪ್ರಾಯ ಪಟ್ಟಿದ್ದಾರೆ.

    370ನೇ ವಿಧಿಯ ರದ್ದು ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಸರ್ಕಾರಿ ಕೆಲಸಗಳನ್ನು ನೀಡುವ ವಿಚಾರದಲ್ಲಿಯೂ ಸಹ ಲಡಾಕ್ ಜನರಿಗೆ ತಾರತಮ್ಯ ಮಾಡಿವೆ. ಇಷ್ಟು ವರ್ಷ ಕಳೆದರೂ ಲಡಾಖ್‍ನಲ್ಲಿ ಯಾವುದೊಂದೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಿಲ್ಲ. ಇದು ಸಮಾನತೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಡಿ ಒಂದು ವಿಶ್ವವಿದ್ಯಾಲಯವನ್ನು ಲಡಾಖ್ ಪಡೆದುಕೊಂಡಿದೆ ಎಂದು ತಿಳಿಸಿದರು.

    ಕಾಶ್ಮೀರ ರಾಜಕೀಯ ಪಕ್ಷಗಳ ನಿಲುವು ತುಂಬಾ ವಿಪರ್ಯಾಸವಾಗಿದ್ದು, ಒಂದೆಡೆ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ. ಇನ್ನೊಂದೆಡೆ ಅವರಿಗೆ ಅನುಕೂಲವಾಗುವ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಕಾಶ್ಮೀರ ಕೇಂದ್ರಿತ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ತ್ಸೆರಿಂಗ್ ನಮ್‍ಗ್ಯಾಲ್, ಎರಡು ಕುಟುಂಬದ ಸದಸ್ಯರು ಇನ್ನೂ ಮಾದಕ ವ್ಯಸನಿಗಳಾಗಿದ್ದಾರೆ. ಅಲ್ಲದೆ, ಕಾಶ್ಮೀರ ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದರು.

    ಇಲ್ಲಿರುವ ಮುಫ್ತಿ ಮತ್ತು ಅಬ್ದುಲ್ಲಾ ಈ ಎರಡು ಕುಟುಂಬಗಳ ಸದಸ್ಯರು ಮಾತ್ರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ನಂತರ ಈಗ ಸಮಾನತೆಯ ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಹಣ ಸಂಗ್ರಹಿಸಿದಾಗ, ಲಡಾಖ್ ಅಭಿವೃದ್ಧಿಗೆಂದು ಮೀಸಲಿರಿಸಿದ್ದ ಹಣವನ್ನು ಕಾಶ್ಮೀರಕ್ಕೆ ವರ್ಗಾಯಿಸಿಕೊಂಡಿರಿ. ಇದು ನಿಮ್ಮ ಸಮಾನತೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಲೇಹ್, ಲಡಾಖ್ ಮತ್ತು ಕಾರ್ಗಿಲ್ ಜನರು ಕೇಂದ್ರಾಡಳಿತ ಪ್ರದೇಶಕ್ಕಾಗಿಯೇ ಮತ ಹಾಕಿದ್ದರು. ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಹೆಚ್ಚಿನ ಜನರು ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದರು ಎಂದು ತ್ಸೆರಿಂಗ್ ನಮ್‍ಗ್ಯಾಲ್ ಇದೇ ವೇಳೆ ತಿಳಿಸಿದರು.

    ನಿನ್ನೆ ರಾಜ್ಯಸಭೆಯ ಕಾಂಗ್ರೆಸ್ ಮುಖಂಡರು ಲಡಾಕ್‍ಗೆ ಏನಾಗಬಹುದು ಎಂದು ಬೊಬ್ಬೆ ಹೊಡೆಯುತ್ತಿದ್ದರು. 2008ರಲ್ಲಿ ಕಾಂಗ್ರೆಸ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 8 ಹೊಸ ಜಿಲ್ಲೆಗಳನ್ನು ರಚಿಸಿತು. ಆಗ ನಾಲ್ಕು ಜಮ್ಮುವಿಗೆ ಉಳಿದ ನಾಲ್ಕು ಕಾಶ್ಮೀರಕ್ಕೆ ನೀಡಿ ಎಂದು ಜಮ್ಮುವಿನ ಜನರು ಹೋರಾಡಿದರು. ಆದರೆ, ಲಡಾಖ್‍ಗೆ ಏನೂ ಸಿಗಲಿಲ್ಲ. ಇದು ನಿಮ್ಮ ಸಮಾನತೆಯೇ ಎಂದು ನಮ್‍ಗ್ಯಾಲ್ ಪ್ರಶ್ನಿಸಿದರು.

    ನಿಮ್ಮಂತೆ ಜಮ್ಮು ಮತ್ತು ಕಾಶ್ಮೀರದ ಕುರಿತು ಪುಸ್ತಕದಲ್ಲಿ ಓದಿ ನಾನು ಇಲ್ಲಿಗೆ ಬಂದಿಲ್ಲ. ಲಡಾಖ್ ನೆಲದ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನೀವು ಕಾಶ್ಮೀರಿ ಮತ್ತು ಡೋಗ್ರಿಗಳನ್ನು ನಿಗದಿತ ಭಾಷೆ ಎಂದು ಗುರುತಿಸುತ್ತೀರಿ. ಆದರೆ, ಲಡಾಖಿ ಜನರ ಭಾಷೆಯ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಲೋಕಸಭೆಯಲ್ಲಿ ತ್ಸೆರಿಂಗ್ ನಮ್‍ಗ್ಯಾಲ್ ಒಂದೊಂದೆ ಅಂಶವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಮಿತ್ ಶಾ ಸೇರಿದಂತೆ ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸುತ್ತಿದ್ದರು. ಅಮಿತ್ ಶಾ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ.

    ನಮ್‍ಗ್ಯಾಲ್ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾಷಣದ ಕೊನೆಯಲ್ಲಿ ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಸಹ ನಮ್‍ಗ್ಯಾಲ್ ಅವರ ಭಾಷಣ ಮತ್ತು ಉತ್ಸಾಹವನ್ನು ಶ್ಲಾಘಿಸಿದರು. ಸದನವು ನಮ್‍ಗ್ಯಾಲ್ ಅವರಂತಹ ಯುವ ಸದಸ್ಯರನ್ನು ಪ್ರೋತ್ಸಾಹಿಸಬೇಕು ಮೆಚ್ಚುಗೆ ವ್ಯಕ್ತಪಡಿಸಿದರು.

  • ಕಾಂಗ್ರೆಸ್ಸಿನಲ್ಲೇ ಒಡಕು – ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

    ಕಾಂಗ್ರೆಸ್ಸಿನಲ್ಲೇ ಒಡಕು – ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದ್ದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಆದರೆ ಕಾಂಗ್ರೆಸ್‍ನ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಂಸದರು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದಕ್ಕೆ ಬೆಂಬಲ ನೀಡುತ್ತೇನೆ. ಈ ಮೂಲಕ ಭಾರತವು ಸಂಪೂರ್ಣ ಏಕೀಕರಣವಾಗಲಿದೆ. ಆದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತಾಸಕ್ತಿ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://twitter.com/JM_Scindia/status/1158729410507182080

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಕೇಳಿ ಬಂದಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಅದನ್ನು ಅಲ್ಲಗಳೆದಿದ್ದರು. ಕಾಂಗ್ರೆಸ್ ಹಿರಿಯ ನಾಯಕರು, ಸಂಸದರು 370 ವಿಧಿ ರದ್ದುಗೊಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡುವ ನಿರ್ಧಾರ ಕೈಗೊಳ್ಳುವುದು, ಜನಪ್ರತಿನಿಧಿಗಳನ್ನು ಬಂಧಿಸುವುದು ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಏಕೀಕರಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಜನರಿಂದ ದೇಶ ನಿರ್ಮಾಣವಾಗಿದೆ. ಇದು ಕೇವಲ ತುಂಡು ಭೂಮಿಯಲ್ಲ. ಆಡಳಿತಾತ್ಮಕ ಅಧಿಕಾರದ ದುರುಪಯೋಗ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದರು.

    ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಹಾಗೂ ನಾಯಕರೊಂದಿಗೆ ನಡೆದ ಸಭೆ ಬಳಿಕ ಟ್ವೀಟ್ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಘೋಷಣೆ ಮಾಡಿದರು. ಈ ವೇಳೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುವಲ್ಲಿ ಎಡವಿದ್ದರಿಂದ ರಾಹುಲ್ ಗಾಂಧಿ ಚಕಾರ ಎತ್ತಿರಲಿಲ್ಲ.

    ಅಮಿತ್ ಶಾ 370ನೇ ವಿಧಿ ಹಾಗೂ 35ಎ ರದ್ದು ಪಡಿಸುವ ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕರು ಈ ನಿರ್ಧಾರವನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸಂಸತ್ ಹೊರಗಡೆ ಘೋಷಣೆ ಕೂಗಿದ್ದರು. ಇದಕ್ಕೆ ಜನಾರ್ಧನ್ ದ್ವಿವೇದಿ ಹಾಗೂ ದೀಪೇಂದರ್ ಹೂಡಾರಂತಹ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

    ಈ ಮಹತ್ವದ ಬೆಳವಣಿಗೆ ಹಿನ್ನೆಲೆ ತುರ್ತು ಸಭೆ ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲದ ಕಾರಣ ಯಾವುದೇ ಸಭೆ ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿ ಅವರು ಮೇನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಇಂದು ಬೆಳಗ್ಗೆ ಕಾಂಗ್ರೆಸ್ ವರಿಷ್ಠೆ, ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕೇ ಅಥವಾ ಬೆಂಬಲಿಸಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಆದರೆ, ನಮ್ಮ ವಿರೋಧವು ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ರಾಜ್ಯದ ವಿಧಾನಸಭೆಯನ್ನು ಸಂಪರ್ಕಿಸದಿರುವುದನ್ನು ಆಧರಿಸಿದೆ ಎಂದು ಕಾಂಗ್ರೆಸ್ ಸಂಸದರು ಹಾಗೂ ನಾಯಕರಿಗೆ ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

  • ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಬೆಂಬಲಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

    ಸಂವಿಧಾನದಲ್ಲಿ ರೂಪಿಸಲಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೇಶಾದ್ಯಂತ ವಿಸ್ತರಿಸಬೇಕು. 370ನೇ ವಿಧಿ ಮತ್ತು 35ಎ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಉತ್ತಮ ಲಾಭ ಪಡೆಯಲಿದ್ದಾರೆ ಎಂದು ಬಿಎಸ್‍ಪಿ ನಂಬಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಅಲ್ಲದೆ, ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ್ದ ನಿರ್ಧಾರವನ್ನು ಸಹ ಮಾಯಾವತಿ ಅವರು ಸ್ವಾಗತಿಸಿದ್ದಾರೆ. ಇದರಿಂದ ಬೌದ್ಧ ಜನರ ಹಳೆಯ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧ ಅನುಯಾಯಿಗಳು ದೇಶಾದ್ಯಂತ ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಚಯಿಸಿದ 370ನೇ ವಿಧಿ ಹಾಗೂ 35ಎ ರದ್ದತಿ ಕುರಿತ ನಿರ್ಧಾರಕ್ಕೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಕೇಂದ್ರ ಸರ್ಕಾರದ ನಿಲುವಿಗೆ ಬಿಎಸ್‍ಪಿ ಬೆಂಬಲ ವ್ಯಕ್ತಪಡಿಸಿತ್ತು.

  • 370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ‘ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ಸ್ಪಷ್ಟ ದಾಳಿ’ ಎಂದು ಕಿಡಿಕಾರಿದ್ದಾರೆ.

    ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ಸ್ಪಷ್ಟ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅತ್ಯಂತ ಆಘಾತಕಾರಿ ಹಾಗೂ ನಿರಂಕುಶಾಧಿಕಾರತ್ವ. 370ನೇ ವಿಧಿ ಮತ್ತು 35ಎ ತನ್ನದೇ ಆದ ಮೂಲ ಹೊಂದಿವೆ. ಹೀಗಾಗಿ ಈ ಕುರಿತು ಯಾವುದೇ ಬದಲಾವಣೆ ತರಬೇಕಾದಲ್ಲಿ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕಳೆದ ವರ್ಷ ಮಕ್ಕಳ್ ನಿಧಿ ಮೈಯಂ ಪಕ್ಷ (ಎಂಎನ್‍ಎಂ) ಸ್ಥಾಪಿಸಿದ್ದ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

    ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತಕ್ಕೆ ಹಾಕುವ ಮುನ್ನ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಈ ಮೂಲಕ ಬಿಲ್ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಬಲವಂತವಾಗಿ ವಿರೋಧ ಪಕ್ಷಗಳ ಬಾಯನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಿಕ ಸವಲತ್ತುನ್ನು ಹಿಂಪಡೆದಿದ್ದು, ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ರದ್ದುಗೊಳಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಆದೇಶ ಹೊರಡಿಸಿದೆ.

    ಜಮ್ಮು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಒಟ್ಟು ಗೂಡಿಸುವುದು ಹಾಗೂ ಭಯೋತ್ಪಾದನೆಯನ್ನು ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ನಿರ್ಧಾರ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ, ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಸೈನಿಕರನ್ನು ಸ್ಥಳಾಂತರಿಸಿ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು. ಇದೇ ಧೈರ್ಯದಿಂದಲೇ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ಘೋಷಿಸಿದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ನಂತರ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂಪೂರ್ಣ ಸಂವಿಧಾನ’ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು.