Tag: Article 370

  • ಜಮ್ಮು ಕಾಶ್ಮೀರ ನಮಗೆ ರಾಷ್ಟ್ರೀಯತೆಯ ಪ್ರಶ್ನೆ: ಅಮಿತ್ ಶಾ

    ಜಮ್ಮು ಕಾಶ್ಮೀರ ನಮಗೆ ರಾಷ್ಟ್ರೀಯತೆಯ ಪ್ರಶ್ನೆ: ಅಮಿತ್ ಶಾ

    ಮುಂಬೈ: ಜಮ್ಮು ಕಾಶ್ಮೀರದ ವಿಚಾರ ಕಾಂಗ್ರೆಸ್‍ಗೆ ರಾಜಕೀಯದ ವಿಷಯವಾಗಿರಬಹುದು. ಆದರೆ ನಮಗದು ರಾಷ್ಟ್ರೀಯತೆಯ ಪ್ರಶ್ನೆ ಎಂದು ಅಮಿತ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಕುರಿತ ವಿಚಾರಸಂಕಿರ್ಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಒಂದು ದೇಶ, ಒಬ್ಬರೇ ಪ್ರಧಾನಿ, ಒಂದೇ ಸಂವಿಧಾನ’ ಎಂಬ ವಿಚಾರದ ಕುರಿತು ಹೋರಾಡುತ್ತಿದೆ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

    ಕಾಂಗ್ರೆಸ್ ಇದರಲ್ಲಿ ರಾಜಕೀಯವನ್ನು ನೋಡುತ್ತಿದೆ. ಆದರೆ ನಾವು ರಾಷ್ಟ್ರೀಯತೆಯನ್ನು ನೋಡುತ್ತಿದ್ದೇವೆ. ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ಅವರು 1947ರಲ್ಲಿ ‘ಅಕಾಲಿಕ ಕದನ ವಿರಾಮ’ ಘೋಷಿಸಿದ್ದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ) ಸೃಷ್ಟಿಗೆ ಕಾರಣವಾಯಿತು ಎಂದು ನೆಹರು ನಿರ್ಧಾರದ ಕುರಿತು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯ ಹಾಗೂ ಇಚ್ಛಾಶಕ್ತಿಯನ್ನು ನಾನು ಅಭಿನಂದಿಸುತ್ತೇನೆ. ಎರಡನೇ ಬಾರಿಗೆ ಸರ್ಕಾರ ರಚಿಸಿದ ತಕ್ಷಣ ಸಂಸತ್ತಿನ ಮೊದಲ ಅಧಿವೇಶನದಲ್ಲಿ 370ನೇ ಹಾಗೂ 35ಎ ವಿಧಿಗಳನ್ನು ತೆಗೆದು ಹಾಕಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಲು 3 ತಲೆಮಾರುಗಳು ಹೋರಾಡಿದ್ದವು ಎಂದು ರಾಹುಲ್ ಗಾಂಧಿ ಅವರಿಗೆ ಹೇಳಲು ಬಯಸುತ್ತೇನೆ. ಇದು ನೀವು ಅಂದುಕೊಂಡ ಹಾಗೆ ರಾಜಕೀಯ ವಿಷಯವಲ್ಲ ಎಂದು ತಿಳಿಸಿದರು.

    ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಸಕ್ರಿಯವಾಗಿಡುವುದು ಇಂದಿಗೂ ಕಾಂಗ್ರೆಸ್‍ಗೆ ರಾಜಕೀಯ ವಿಷಯವಾಗಿದೆ. ಆದರೆ ನಮ್ಮ ಮಟ್ಟಿಗೆ ಇದು ರಾಷ್ಟ್ರವನ್ನು ಒಗ್ಗೂಡಿಸುವ ವಿಷಯವಾಗಿತ್ತು. ಈ ಕನಸನ್ನು ನರೇಂದ್ರ ಮೋದಿ ನನಸು ಮಾಡಿದ್ದಾರೆ. ಸೈನ್ಯವು ಪಾಕಿಸ್ತಾನದ ಒಳನುಸುಳುವವರ ವಿರುದ್ಧ ಹೋರಾಡುವಾಗ 1947ರಲ್ಲಿ ಜವಾಹರಲಾಲ್ ನೆಹರು ಅವರು ಅಕಾಲಿಕ ಕದನ ವಿರಾಮ ಘೋಷಿಸದಿದ್ದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ) ಸೃಷ್ಟಿಯಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

    ಈಗಾಗಲೇ ಚುನಾವಣಾ ಆಯೋಗ ಎರಡು ರಾಜ್ಯಗಳ ಚುನಾವಣೆ ದಿನಾಂಕ ಘೋಷಿಸಿದ್ದು, ಅಕ್ಟೋಬರ್ 21ರಂದು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ಇದನ್ನು ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಬಳಿಸಿಕೊಳ್ಳುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಈಗಾಗಲೇ ಪ್ರಚಾರ ಭಾಷಣ ಮಾಡಿದ್ದು, ಮಹಾರಾಷ್ಟ್ರದ ನಾಸಿಕ್ ಮತ್ತು ಹರಿಯಾಣದ ರೋಹ್ಟಕ್‍ನಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಈ ಕುರಿತು ಪ್ರಸ್ತಾಪಿಸಿ ಭಾಷಣ ಮಾಡಿದ್ದಾರೆ.

  • ಪಾಕಿಗೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ – ‘ಉಗ್ರರು ಚಂದ್ರಲೋಕದಿಂದ ಬರಲ್ಲ, ಪಾಕಿಸ್ತಾನದಿಂದ ಇಳಿಯುತ್ತಾರೆ’

    ಪಾಕಿಗೆ ವಿಶ್ವಸಂಸ್ಥೆಯಲ್ಲಿ ಮತ್ತೆ ಮುಖಭಂಗ – ‘ಉಗ್ರರು ಚಂದ್ರಲೋಕದಿಂದ ಬರಲ್ಲ, ಪಾಕಿಸ್ತಾನದಿಂದ ಇಳಿಯುತ್ತಾರೆ’

    – ಭಾರತದ ನಿರ್ಧಾರ ಸರಿ ಎಂದ ಯುರೋಪಿಯನ್ ಸಂಸತ್
    – ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ

    ನವದೆಹಲಿ: ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ವಿಶ್ವಸಂಸ್ಥೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

    ಬುಧವಾರ ಪಾಕಿಸ್ತಾನಿ ಮಾಧ್ಯಮವೊಂದು ಜಮ್ಮು ಕಾಶ್ಮೀರದ ಬಿಕ್ಕಟ್ಟಿನ ಕುರಿತು ಪ್ರಶ್ನಿಸಿದ್ದು, ಇದಕ್ಕೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಉತ್ತರಿಸಿ, ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು. ಅಲ್ಲದೆ, ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಪಾಕಿಸ್ತಾನ ಸುಳ್ಳು ಹಾಗೂ ಉನ್ಮಾದದ ಹೇಳಿಕೆಗಳೊಂದಿಗೆ ಈ ವೇದಿಕೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿತ್ತು.

    ನಮ್ಮ ಸಾಮರ್ಥ್ಯವು ಉತ್ತಮ ಆಡಳಿತಕ್ಕೆ ಸಂಬಂಧಿಸಿದೆ. ಉತ್ತಮ ಸಲಹೆಗಳನ್ನು ಸ್ವೀಕರಿಸಿದಾಗ ಮಾತ್ರ ಉತ್ತಮ ಆಡಳಿತವನ್ನು ಕಾರ್ಯಗತಗೊಳಿಸಬಹುದು. ಮತ್ತೊಂದೆಡೆ ವಕಾಲತ್ತು ವಹಿಸುವುದು ಹಾಗೂ ಅದನ್ನು ಕಾಪಾಡಿಕೊಳ್ಳುವುದು ಸಹ ಪ್ರಮುಖ ಅಂಶವಾಗಿದೆ ಎಂದು ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.

    ಭೂಪ್ರದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ ವಾರ, ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲು ಪಾಕಿಸ್ತಾನ ನಡೆಸಿದ ಮತ್ತೊಂದು ಪ್ರಯತ್ನದ ಕುರಿತು ಪ್ರಸ್ತಾಪಿಸಲಾಗಿತ್ತು. ಆಗ ಭಾರತ ಪ್ರತಿಕ್ರಿಯಿಸಿ, ಮಾನವ ಹಕ್ಕುಗಳ ಹೆಸರಿನಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದನ್ನು ನಾವು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿ ಭಾರತ ತಿರುಗೇಟು ನೀಡಿತ್ತು.

    ಇತ್ತೀಚೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಭವಿಷ್ಯದಲ್ಲಿ ‘ನರಮೇಧ’ ಸಂಭವಿಸುವ ಕುರಿತು ಅಭಿಪ್ರಾಯಪಟ್ಟಿದ್ದರು.

    ಖುರೇಷಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ಪಾಕಿಸ್ತಾನಿ ನಾಯಕರು ಜಿಹಾದಿಗಳ ಮೊರೆ ಹೋಗಿದ್ದಾರೆ. ‘ನರಮೇಧ’ವನ್ನು ಸೃಷ್ಟಿಸುವ ಸಲುವಾಗಿ ವಾಸ್ತವದಿಂದ ದೂರ ಉಳಿದಿದ್ದಾರೆ ಎಂದು ತಕ್ಕ ಉತ್ತರ ನೀಡಿತ್ತು.

    ಆಗಸ್ಟ್ ನಲ್ಲಿ ಭಾರತದ ಜಮ್ಮು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ತೀವ್ರ ಆತಂಕಕ್ಕೊಳಗಾಗಿದೆ. ಈ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗುತ್ತಿದ್ದು ವಿವಿಧ ದೇಶಗಳ ನೆರವು ಕೇಳುತ್ತಿದೆ.

    ಮಂಗಳವಾರ ಯುರೋಪಿಯನ್ ಸಂಸತ್ತಿನ ವಿಶೇಷ ಚರ್ಚೆ ಸಂದರ್ಭದಲ್ಲಿಯೂ ಸಹ ಜಮ್ಮು ಕಾಶ್ಮೀರದ ವಿಚಾರ ಪ್ರಸ್ತಾಪವಾಗಿದ್ದು, ಸಂಸತ್ ಸದಸ್ಯರಾದ ರಿಸ್ಜಾರ್ಡ್ ಜಾರ್ನೆಕಿ ಹಾಗೂ ಫುಲ್ವಿಯೊ ಮಾರ್ಟುಸ್ಸಿಯೆಲ್ಲೊ ಅವರು ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯುವ ಮೂಲಕ ಭಾರತದ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅಲ್ಲದೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪೋಲೆಂಡ್‍ನ ಯುರೋಪಿಯನ್ ಕನ್ಸರ್ವೇಟಿವ್ ಮತ್ತು ರಿಫಾರ್ಮಿಸ್ಟ್ಸ್ ಗ್ರೂಪ್‍ನ ಸದಸ್ಯ ಜಾರ್ನೆಕಿ ಭಾರತವನ್ನು ‘ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ’ ಎಂದು ಕರೆದಿದ್ದಾರೆ. ಅಲ್ಲದೆ ಭಾರತದ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ನಾವು ನೋಡಬೇಕಿದೆ. ಈ ಭಯೋತ್ಪಾದಕರು ಚಂದ್ರ ಲೋಕದಿಂದ ಇಳಿದಿದ್ದಲ್ಲ. ಬದಲಿಗೆ ನೆರೆಯ ದೇಶ ಪಾಕಿಸ್ತಾನದಿಂದ ಬರುತ್ತಿರುವುದು. ಹೀಗಾಗಿ ನಾವು ಭಾರತವನ್ನು ಬೆಂಬಲಿಸಬೇಕು ಎಂದು ಹೇಳಿ ಜಾರ್ನೆಕಿ ಗಮನಸೆಳೆದಿದ್ದಾರೆ.

  • ಭಾರತಕ್ಕೆ ನುಸುಳಲು ತುದಿಗಾಲಲ್ಲಿ ನಿಂತಿದ್ದಾರೆ 50ಕ್ಕೂ ಹೆಚ್ಚು ಉಗ್ರರು

    ಭಾರತಕ್ಕೆ ನುಸುಳಲು ತುದಿಗಾಲಲ್ಲಿ ನಿಂತಿದ್ದಾರೆ 50ಕ್ಕೂ ಹೆಚ್ಚು ಉಗ್ರರು

    – ಇಬ್ಬರು ಉಗ್ರರಿಂದ ಭಯಾನಕ ಮಾಹಿತಿ ಬಹಿರಂಗ

    ನವದೆಹಲಿ: ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಪಾಕಿಸ್ತಾನ ಭಾರೀ ಸಂಚು ರೂಪಿಸಿದ್ದು, ಪಾಕಿಸ್ತಾನಿ ಸೈನಿಕರ ಸಹಾಯದಿಂದ 50ಕ್ಕೂ ಹೆಚ್ಚು ಲಷ್ಕರ್-ಇ-ತೋಯ್ಬಾ(ಎಲ್‍ಇಟಿ) ಉಗ್ರರು ದೇಶ ಪ್ರವೇಶಿಸಲು ಕಾಯುತ್ತಿದ್ದಾರೆ ಎಂಬ ಭಯಾನಕ ಮಾಹಿತಿ ಪ್ರಕಟವಾಗಿದೆ.

    ಎಲ್‍ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಪಾಕ್ ನಾಗರಿಕರು ಕಾಶ್ಮೀರದ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇವರ ವಿಚಾರಣೆ ವೇಳೆ 50 ಉಗ್ರರು ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಪಾಕಿಸ್ತಾನಿ ಸೈನಿಕರು ಹಾಗೂ ಆಂತರಿಕ ಗುಪ್ತಚರ ದಳದ ಸಹಾಯದಿಂದ ಭಾರತ ಪ್ರವೇಶಿಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಈ ಇಬ್ಬರು ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನದ ಪ್ರಜೆಗಳಾದ ಖಲೀಲ್ ಅಹ್ಮದ್ ಮತ್ತು ಮೊಜಾಮ್ ಖೋಕರ್ ಇಬ್ಬರೂ ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸೈನಿಕರು ಕಚಾರ್ಬನ್ ಪೋಸ್ಟ್ ಮೂಲಕ ಭಯೋತ್ಪಾದಕರನ್ನು ಭಾರತಕ್ಕೆ ನುಸುಳಲು ಸಹಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಪಾಕಿಸ್ತಾನ ಸೇನೆ ಮತ್ತು ಐಎಸ್‍ಐ ಗಡಿ ನಿಯಂತ್ರಣ ರೇಖೆಯಾದ್ಯಂತ(ಎಲ್‍ಓಸಿ) ಒಂದು ಡಜನ್‍ಗೂ ಹೆಚ್ಚು ಲಾಂಚಿಂಗ್ ಪ್ಯಾಡ್(ಉಗ್ರರಿಗೆ ಎಲ್ಲ ರೀತಿಯ ತರಬೇತಿ ನೀಡಿ ಅವರನ್ನು ಸಂಪೂರ್ಣವಾಗಿ ಸಿದ್ಧಗೊಳಿಸಿ ಶಸ್ತ್ರಾಸ್ತ್ರಗಳನ್ನು ನೀಡಿ ದೇಶದ ಒಳಗಡೆ ಕಳುಹಿಸಲು ಸ್ಥಾಪಿಸಲಾದ ಕೇಂದ್ರ) ಗಳನ್ನು ಸಕ್ರಿಯಗೊಳಿಸಿವೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ದ ಮೂರು ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರಿದ್ದು, ಪಾಕ್ ಸೇನೆ ಪಿಓಕೆಯ ಮೂರು ಲಾಂಚ್ ಪ್ಯಾಡ್‍ಗಳಲ್ಲಿ ಐಎಸ್‍ಐ ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಿಓಕೆಯ ಲಿಪಾ ಕಣಿವೆಯ ಲಾಂಚ್ ಪ್ಯಾಡ್‍ನಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ತಂಗಿದ್ದಾರೆ ಎಂದು ಶಂಕಿಸಲಾಗಿದೆ.

    ಲಾಂಚ್ ಪ್ಯಾಡ್‍ಗಳಲ್ಲಿನ ಭಯೋತ್ಪಾದಕರು ಜೈಷ್-ಎ-ಮೊಹಮ್ಮದ್ ಹಾಗೂ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಲಿಪಾ ಲಾಂಚ್ ಪ್ಯಾಡ್ ಜಮ್ಮು ಕಾಶ್ಮೀರದ ತಂಗ್‍ಧಾರ್ ಹಾಗೂ ಉರಿ ವಲಯದಲ್ಲಿದೆ. ಪಿಓಕೆಯ ಲ್ಯಾಂಜೋಟೆ ಮತ್ತು ಕಲು ಲಾಂಚ್‍ಪ್ಯಾಡ್‍ಗಳಲ್ಲಿ 60ರಿಂದ 70 ಭಯೋತ್ಪಾದಕರಿದ್ದಾರೆ. ಈ ಕಲು ಲಾಂಚ್ ಪ್ಯಾಡ್ ಮೂಲಕ ಸಹ ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಬ್ಬರು ಪಾಕಿಸ್ತಾನಿ ಪ್ರಜೆಗಳು ಕಾಶ್ಮೀರವನ್ನು ಪ್ರವೇಶಿಸಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಉನ್ನತ ಭದ್ರತಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಕಣಿವೆಯಲ್ಲಿ ಶಾಂತಿ ಭಂಗಗೊಳಿಸಲು ಭಯೋತ್ಪಾದಕರನ್ನು ಒಳನುಸುಳಿಸುವಲ್ಲಿ ವಿಫಲವಾದ್ದರಿಂದ ಪಾಕಿಸ್ತಾನ ಹತಾಶವಾಗಿದೆ ಎಂದು ಸೇನೆಯ 15 ಕಾಪ್ರ್ಸ್‍ನ ಜನರಲ್ ಆಫೀಸರ್ ಕಮಾಂಡಿಂಗ್(ಜಿಓಸಿ) ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ಅವರು ಕಾಶ್ಮೀರದ ಎಡಿಜಿಪಿ ಮುನಿರ್ ಖಾನ್ ಅವರಿಂದೊಗೆ ನಡೆದ ಜಂಟಿ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.

    ಎಲ್‍ಇಟಿಗೆ ಸಂಬಂಧಿಸಿದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಆಗಸ್ಟ್ 21ರಂದು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಬಂಧಿತ ಪಾಕಿಸ್ತಾನಿಗಳು ಒಳನುಸುಳುವಿಕೆಯನ್ನು ಒಪ್ಪಿಕೊಂಡಿರುವ ವಿಡಿಯೋವನ್ನು ಸಹ ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ.

    ಈ ಎರಡು ವಿಡಿಯೋಗಳು ಪಾಕಿಸ್ತಾನಿ ಸೇನೆ ನಾಗರಿಕರನ್ನು ಕಾಶ್ಮೀರಕ್ಕೆ ಹೇಗೆ ತಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿಶೇಷವಾಗಿ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿಯನ್ನು ಭಂಗಗೊಳಿಸಲು ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ ಎಂದು ಧಿಲ್ಲಾನ್ ತಿಳಿಸಿದ್ದಾರೆ.

    ಒಳನುಸುಳುವಿಕೆ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಭಾರತೀಯ ಸೇನೆ ಈ ವರೆಗೆ ಇಂತಹ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ಮುನೀರ್ ಖಾನ್ ತಿಳಿಸಿದ್ದಾರೆ.

  • ಕಾಶ್ಮೀರದಲ್ಲಿ ಸಂತ್ರಸ್ತನಾದ ಪೋರ್ನ್ ಸ್ಟಾರ್ – ಪಾಕ್ ರಾಯಭಾರಿಗೆ ಭಾರತೀಯರಿಂದ ಛೀಮಾರಿ

    ಕಾಶ್ಮೀರದಲ್ಲಿ ಸಂತ್ರಸ್ತನಾದ ಪೋರ್ನ್ ಸ್ಟಾರ್ – ಪಾಕ್ ರಾಯಭಾರಿಗೆ ಭಾರತೀಯರಿಂದ ಛೀಮಾರಿ

    ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬುದ್ದಿ ಕಲಿಯದ ಪಾಕಿಸ್ತಾನ ಈಗ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಆರಂಭಿಸಿದೆ. ಎಷ್ಟು ಸುಳ್ಳು ಸುದ್ದಿ ಎಂದರೆ ಪೋರ್ನ್ ಸ್ಟಾರ್ ಫೋಟೋ ಪ್ರಕಟಿಸಿ ಕಾಶ್ಮೀರದಲ್ಲಿ ಸಂತ್ರಸ್ತನಾಗಿದ್ದಾನೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಟ್ವೀಟ್ ಮಾಡಿ ಮುಖಭಂಗ ಅನುಭವಿಸಿದ್ದಾರೆ.

    ಕಾಶ್ಮೀರದಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋರ್ನ್ ನಟನ ಫೋಟೋವನ್ನು ರೀಟ್ವೀಟ್ ಮಾಡುವ ಮೂಲಕ ಭಾರತದಲ್ಲಿದ್ದ ಮಾಜಿ ಹೈ ಕಮಿಷನರ್ ಅಬ್ದುಲ್ ಬಸಿತ್ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

    ಪಾಕಿಸ್ತಾನ ಮೂಲದ ಪತ್ರಕರ್ತೆ ನೈಲಾ ಇನಾಯತ್, ಅಬ್ದುಲ್ ರೀಟ್ವೀಟ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಪಾಕಿಸ್ತಾನದ ಮಾಜಿ ಹೈ ಕಮಿಷನರ್ ಅಬ್ದುಲ್ ಬಸಿತ್ ಎಡವಟ್ಟು ಮಾಡಿದ್ದು, ಕಾಶ್ಮೀರದಲ್ಲಿ ಪೆಲೆಟ್ ಗನ್‍ನಿಂದ ದಾಳಿಗೊಳಗಾದ ವ್ಯಕ್ತಿ ಎಂದು ಜಾನಿ ಸಿನ್ಸ್ ಫೋಟೋವನ್ನು ತಪ್ಪಾಗಿ ರೀಟ್ವೀಟ್ ಮಾಡಿದ್ದಾರೆ ಎಂದು ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಂಡಿದ್ದಾರೆ.

    ನೈಲಾ ಇನಾಯತ್ ಅವರ ಟ್ವಿಟ್ಟರ್ ಸ್ಕ್ರೀನ್ ಶಾಟ್‍ಗಳಲ್ಲಿ, ಅಬ್ದುಲ್ ಬಸಿತ್ ಚಿತ್ರ ಹಾಗೂ ಸಂದೇಶದೊಂದಿಗೆ ರೀಟ್ವೀಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆ, ಈ ಟ್ವೀಟ್‍ನಲ್ಲಿ ಅನಂತ್‍ನಾಗ್‍ನ ಯೂಸುಫ್ ಪೆಲೆಟ್ ಗನ್ ದಾಳಿಯಿಂದ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ. ಈ ಕುರಿತು ದಯವಿಟ್ಟು ಧ್ವನಿ ಎತ್ತಿ ಎಂದು ಟ್ವಿಟ್ಟರ್ ಸಂದೇಶದಲ್ಲಿ ಬರೆಯಲಾಗಿದೆ.

    ತನ್ನ ಎಡವಟ್ಟು ತಿಳಿಯುತ್ತಿದ್ದಂತೆ ಅಬ್ದುಲ್ ಬಸಿತ್ ಈ ಟ್ವೀಟ್‍ನ್ನು ಡಿಲೀಟ್ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಬಸೀತ್‍ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡು ಛೀಮಾರಿ ಹಾಕುತ್ತಿದ್ದಾರೆ.

  • ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆ 5 ಮಂದಿ ನ್ಯಾಯಾಧೀಶರ ಸಂವಿಧಾನಿಕ ಪೀಠದಲ್ಲಿ ನಡೆಯಲಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಎ ಬೊಬ್ಡೆ, ಎಸ್ ಅಬ್ದುಲ್ ನಜೀರ್ ಅವರಿದ್ದ ಪೀಠದಲ್ಲಿ ಇಂದು ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇದು ಬಹಳ ಸೂಕ್ಷ್ಮ ವಿಚಾರ ಎಂದು ಕೋರ್ಟ್ ಗಮನಕ್ಕೆ ತಂದರು.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಇಂದು ನಾವು ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಎಲ್ಲ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು. ಅಕ್ಟೋಬರ್ ಮೊದಲ ವಾರದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

    ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧ ಬಸ್ಸಿನ್ ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿರ್ಬಂಧವನ್ನು ಕೂಡಲೇ ತೆಗೆದು ಹಾಕಬೇಕು. ನಿರ್ಬಂಧ ಹೇರಿದ್ದರಿಂದ ಮಾಧ್ಯಮಗಳು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಮನವಿ ಮಾಡಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ನಂತರ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಡೆ ಉತ್ತರಿಸಬೇಕು ಎಂದು ಸೂಚಿಸಿತು.

    ಕೇಂದ್ರ ಸರ್ಕಾರ ಭದ್ರತೆಗಾಗಿ  50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿದೆ. ಕಾಶ್ಮೀರದ  400ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.  ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಗೃಹ ಬಂಧನದಲ್ಲಿದ್ದಾರೆ.

  • ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ – ಪಾಕಿಸ್ತಾನ ಅಧ್ಯಕ್ಷರಿಗೆ ಟ್ವಿಟ್ಟರ್ ನೋಟಿಸ್

    ಇಸ್ಲಾಮಾಬಾದ್: ಬಾಯಿಗೆ ಬಂದಂತೆ ಪೋಸ್ಟ್ ಹಾಕಬೇಡಿ, ಯೋಚಿಸಿ ಪೋಸ್ಟ್ ಹಾಕಿ ಎಂದು ಜಮ್ಮು ಕಾಶ್ಮೀರದ ಕುರಿತು ಪೋಸ್ಟ್ ಮಾಡಿದ್ದ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಆಲ್ವಿ ಅವರಿಗೆ ಟ್ವಿಟ್ಟರ್ ಕಂಪನಿ ನೋಟಿಸ್ ನೀಡಿದೆ.

    ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ, ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಅವರಿಗೆ ಬಂದ ನೋಟಿಸಿನ ಈಮೇಲ್ ಸ್ಕ್ರೀನ್ ಶಾಟ್‍ನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಖಂಡನೆ ವ್ಯಕ್ತಪಡಿಸಿ, ಟ್ವಿಟ್ಟರ್ ಮೋದಿ ಸರ್ಕಾರದ ಮುಖವಾಣಿಯಾಗಲು ಹೊರಟಿದ್ದು, ನಮ್ಮ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಿದೆ. ಇದು ಕೆಟ್ಟ ಅಭಿರುಚಿಯಾಗಿದೆ, ಅಲ್ಲದೆ, ಹಾಸ್ಯಾಸ್ಪದವಾಗಿದೆ ಎಂದು ಟ್ವಿಟ್ಟರ್ ನ ನೀಡಿದ ನೋಟಿಸ್ ಕುರಿತು ಟೀಕಿಸಿದ್ದಾರೆ.

    ಸೋಮವಾರ ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಕಾಶ್ಮೀರದ ವಿಚಾರದ ಕುರಿತು ನಡೆಸಿದ ಪ್ರತಿಭಟನಾ ರ್ಯಾಲಿಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನೋಟಿಸ್ ಜಾರಿ ಮಾಡಿದೆ.

    ಭಾನುವಾರ ಪಾಕಿಸ್ತಾನದ ಸಂವಹನ ಸಚಿವ ಮುರಾದ್ ಸಯೀದ್ ಸಹ, ಟ್ವಿಟ್ಟರ್‍ನ ನಿಮ್ಮ ಒಂದು ಪೋಸ್ಟ್ ಭಾರತದ ಕಾನೂನನ್ನು ಉಲ್ಲಂಘಿಸಿದೆ ಎಂದು ಮೈಕ್ರೋ ಬ್ಲಾಗಿಂಗ್‍ನಿಂದ ನನಗೂ ನೋಟಿಸ್ ಬಂದಿದೆ ಎಂದು ತಿಳಿಸಿದ್ದಾರೆ. ಈ ನೋಟೀಸ್‍ನಲ್ಲಿ ಪಾರದರ್ಶಕತೆಯ ದೃಷ್ಟಿಯಿಂದ ನಿಮಗೆ ನಾವು ಸೂಚಿಸಲು ಬಯಸುತ್ತೇವೆ. ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಷಯವು ಭಾರತದ ಕಾನೂನಿಗೆ ಉಲ್ಲಂಘಿಸಿರುವ ಕುರಿತು ಭಾರತ ಟ್ವಿಟ್ಟರ್‍ಗೆ ತಿಳಿಸಿದೆ. ಇದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಟ್ವಿಟ್ಟರ್ ಸಚಿವರಿಗೆ ಕಳುಹಿಸಿದ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

    ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಅಮಾನುತುಗೊಳಿಸಿವೆ ಎಂದು ಕಳೆದ ವಾರ ಡೈರೆಕ್ಟರ್ ಜನರಲ್(ಡಿಜಿ) ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್(ಐಎಸ್‍ಪಿಆರ್) ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದರು. ಕಾಶ್ಮೀರವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಖಾತೆಗಳನ್ನು ಅಮಾನತುಗೊಳಿಸಿರುವುದರ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳು ಟ್ವಿಟ್ಟರ್ ಹಾಗೂ ಫೇಸ್‍ಬುಕ್ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಾದೇಶಿಕ ಪ್ರಧಾನ ಕಚೇರಿಯಲ್ಲಿರುವ ಭಾರತೀಯ ಸಿಬ್ಬಂದಿಯೇ ಇದಕ್ಕೆ ಕಾರಣ ಎಂದು ಟ್ವೀಟ್ ಮಾಡಿ ಗಫೂರ್ ಆರೋಪಿಸಿದ್ದಾರೆ.

    ಕೇಂದ್ರ ಸರ್ಕಾರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಎರಡು ಕೇಂದ್ರಾಡಳಿತವನ್ನಾಗಿ ಘೋಷಿಸಿದೆ. ಇದಕ್ಕೆ ಪಾಕಿಸ್ತಾನದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಬಲವಾದ ಪ್ರತಿಕ್ರಿಯೆ ನೀಡುತ್ತಿದೆ. ಜಮ್ಮು ಕಾಶ್ಮೀರದ ವಿಚಾರವು ಆಂತರಿಕ ಸಮಸ್ಯೆಯಾಗಿದೆ ಎಂದು ಭಾರತ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

  • ಜಮ್ಮು ಕಾಶ್ಮೀರ ಚೇತರಿಸಿಕೊಳ್ಳಲು ಸಮಯ ಬೇಡವೇ – ರಾಹುಲ್ ವಿರುದ್ಧ ಮಾಯಾವತಿ ಗುಡುಗು

    ಜಮ್ಮು ಕಾಶ್ಮೀರ ಚೇತರಿಸಿಕೊಳ್ಳಲು ಸಮಯ ಬೇಡವೇ – ರಾಹುಲ್ ವಿರುದ್ಧ ಮಾಯಾವತಿ ಗುಡುಗು

    ನವದೆಹಲಿ: ಜಮ್ಮು ಕಾಶ್ಮೀರ ಈಗ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ರಾಜ್ಯಪಾಲರ ಅನುಮತಿ ಪಡೆಯದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಸರಿಯೇ? ಇದರಿಂದ ಅವರಿಗೆ ರಾಜಕೀಯ ಮಾಡಲು ಅವಕಾಶ ನೀಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ನಾಯಕರ ವಿರುದ್ಧ ಬಿಎಸ್‍ಪಿ ನಾಯಕಿ ಮಾಯಾವತಿ ಹರಿಹಾಯ್ದಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷಗಳ ನಾಯಕರ ಕ್ರಮವನ್ನು ಖಂಡಿಸಿರುವ ಅವರು, ಜಮ್ಮು ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ವಿರೋಧ ಪಕ್ಷಗಳ ಗುಂಪು ಯೋಚಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಪರವಾಗಿ ಮತ್ತೊಮ್ಮೆ ಬ್ಯಾಟ್ ಮಾಡಿದ್ದಾರೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ವಿರೋಧ ಪಕ್ಷಗಳ ನಾಯಕರು ಶನಿವಾರ ಜಮ್ಮು ಕಾಶ್ಮೀರದ ಸ್ಥಿತಿಗತಿ ಅರಿಯಲು ಶ್ರೀನಗರಕ್ಕೆ ತೆರಳಿದ್ದರು. ಇದಕ್ಕೆ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿವೆ. ಇದೀಗ ಮಾಯಾವತಿ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಈ ವಿಷಯದ ಬಗ್ಗೆ ರಾಜಕೀಯ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅನುಮತಿ ಪಡೆಯದೇ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರಿಗೆ ರಾಜಕೀಯ ಮಾಡಲು ಅವಕಾಶ ಸಿಗಲಿಲ್ಲವೇ? ಅಲ್ಲಿಗೆ ಹೋಗುವ ಮುನ್ನ ಸ್ವಲ್ಪ ಯೋಚಿಸಿದ್ದರೆ ಸೂಕ್ತವಾಗಿತ್ತು ಎಂದು ಹರಿಹಾಯ್ದಿದ್ದಾರೆ.

    ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಮಾನತೆ, ಐಕ್ಯತೆ ಮತ್ತು ಸಮಗ್ರತೆಯ ಪ್ರತಿಪಾದಕರಾಗಿದ್ದರು. ಹೀಗಾಗಿಯೇ ನಾನು ಜಮ್ಮು ಕಾಶ್ಮೀರದ 370ನೇ ವಿಧಿಯ ಪರವಾಗಿದ್ದೇನೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ತಿಳಿಸಿದ್ದರು.

    ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 69 ವರ್ಷಗಳ ನಂತರ 370ನೇ ವಿಧಿ ರದ್ದುಪಡಿಸಲಾಗಿದೆ. ಅಲ್ಲಿನ ಪರಿಸ್ಥಿತಿ ಸಾಮಾನ್ಯವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನ್ಯಾಯಾಲಯವೂ ಸಹ ಇದನ್ನು ಒಪ್ಪಿಕೊಂಡಿದೆ. ಹೀಗಾಗಿ ಸ್ವಲ್ಪ ಕಾಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ತಂಡ ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಅರಿಯಲು ಶನಿವಾರ ಶ್ರೀನಗರಕ್ಕೆ ತೆರಳಿತ್ತು. ಆಗ ಶ್ರೀನಗರ ವಿಮಾನನಿಲ್ದಾಣದಿಂದ ಹೊರಗೆ ಕಾಲಿಡಲು ಭದ್ರತಾ ಸಿಬ್ಬಂದಿ ಬಿಟ್ಟಿಲ್ಲ. ಹೀಗಾಗಿ ಒಂದು ಗಂಟೆಯೊಳಗೇ ವಿರೋಧ ಪಕ್ಷಗಳ ನಾಯಕರ ತಂಡ ದೆಹಲಿಗೆ ಮರಳಿತ್ತು.

    370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಬಿಎಸ್‍ಪಿಯ ಮಾಯಾವತಿ, ಬಿಜು ಜನತಾದಳ, ಎಐಎಡಿಎಂಕೆ, ಜಗನ್ ಮೋಹನ್ ರೆಡ್ಡಿಯವರ ವೈಎಸ್‍ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿ, ಸಂಸತ್‍ನಲ್ಲಿ ಬಹುಮತ ಸಾಬೀತಿಗೆ ನೆರವಾಗಿದ್ದವು. ಆದರೆ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಜಮ್ಮು ಕಾಶ್ಮೀರದಲ್ಲಿ ಭಾರೀ ನಿರ್ಬಂಧಗಳನ್ನು ಹೇರಲಾಗಿದೆ ಎಂದು ವಿರೋಧಿಸಿದ್ದವು.

  • ಜಮ್ಮು ಕಾಶ್ಮೀರದ ಸೆಕ್ರೆಟರಿಯೇಟ್ ಕಟ್ಟಡದಲ್ಲಿ ತ್ರಿವರ್ಣ ಧ್ವಜ ಹಾರಾಟ

    ಜಮ್ಮು ಕಾಶ್ಮೀರದ ಸೆಕ್ರೆಟರಿಯೇಟ್ ಕಟ್ಟಡದಲ್ಲಿ ತ್ರಿವರ್ಣ ಧ್ವಜ ಹಾರಾಟ

    – ರಾಜ್ಯ ಧ್ವಜವನ್ನು ತೆಗೆದ ಸರ್ಕಾರ

    ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ನಂತರ ಇದೀಗ ಬಾರೀ ಬೆಳವಣಿಗೆಯಾಗಿದೆ. ಜಮ್ಮು ಕಾಶ್ಮೀರದ ರಾಜ್ಯದ ಬಾವುಟವನ್ನು ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದಿಂದ ತೆಗೆದು ಹಾಕಲಾಗಿದ್ದು, ಇದೀಗ ತ್ರಿವರ್ಣ ಧ್ವಜ ಮಾತ್ರ ಕಂಗೊಳಿಸುತ್ತಿದೆ.

    ಸಂವಿಧಾನದ 370ನೇ ವಿಧಿ ರದ್ದು ಪಡಿಸಿದ ಮಹತ್ವದ ನಿರ್ಧಾರದ ನಂತರ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದ ಮೇಲೆ ಇದೀಗ ರಾಷ್ಟ್ರಧ್ವಜ ಮಾತ್ರ ಉಳಿದಿದೆ. ಈ ಮೂಲಕ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ಸೂಚನೆಯನ್ನು ನೀಡಲಾಗಿದೆ.

    ಜಮ್ಮು ಕಾಶ್ಮೀರ ಸರ್ಕಾರದ ಮೂಲಗಳು ಈ ಕುರಿತು ಖಚಿತಪಡಿಸಿದ್ದು, ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ರಾಷ್ಟ್ರಧ್ವಜ ಮಾತ್ರ ಹಾರಾಡಲಿದೆ ಎಂದು ತಿಳಿಸಿದೆ.

    ಆದರೆ, ಎಲ್ಲ ಸರ್ಕಾರಿ ಕಚೇರಿಗಳು ಇನ್ನೂ ಜಮ್ಮು ಕಾಶ್ಮೀರದ ರಾಜ್ಯ ಧ್ವಜವನ್ನು ತೆಗೆದಿಲ್ಲ. ಕಳೆದ ವಾರದವರೆಗೆ ಸಿವಿಲ್ ಸೆಕ್ರಟರಿಯೇಟ್ ಕಟ್ಟಡದಲ್ಲಿ ಎರಡೂ ಧ್ವಜಗಳಿದ್ದವು. ಇದೀಗ ರಾಜ್ಯ ಧ್ವಜವನ್ನು ತೆಗೆದು ಹಾಕಲಾಗಿದೆ. ಧ್ವಜವನ್ನು ತೆಗೆಯುವುದು 370ನೇ ವಿಧಿ ರದ್ದುಗೊಳಿಸಿರುವುದರ ಮುಂದುವರಿದ ಭಾಗವಾಗಿದೆ. ಅಲ್ಲದೆ, ಅಕ್ಟೋಬರ್ 31ರ ವರೆಗೆ ಅಧಿಕೃತ ವಿಭಜನೆ ಮೇಲೆ ಅವಲಂಬಿತವಾಗಿಲ್ಲ ಎಂದು ಜಮ್ಮು ಕಾಶ್ಮೀರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

    ಆಗಸ್ಟ್ 5 ರಂದು ಗೃಹ ಸಚಿವ ಅಮಿತ್ ಶಾ ಅವರು ಐತಿಹಾಸಿಕ ಘೋಷಣೆಯನ್ನು ಮಾಡಿದ್ದು, ರಾಜ್ಯ ಸಭೆಯಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ ಎಂದು ತಿಳಿಸಿದ್ದರು.

  • ರಾಷ್ಟ್ರೀಯತೆಯ ಹೆಸರಿನಲ್ಲಿ ಕಾಶ್ಮೀರಿಗಳ ಹಕ್ಕು ಕಸಿಯಲಾಗುತ್ತಿದೆ- ಪ್ರಿಯಾಂಕಾ ಗಾಂಧಿ

    ರಾಷ್ಟ್ರೀಯತೆಯ ಹೆಸರಿನಲ್ಲಿ ಕಾಶ್ಮೀರಿಗಳ ಹಕ್ಕು ಕಸಿಯಲಾಗುತ್ತಿದೆ- ಪ್ರಿಯಾಂಕಾ ಗಾಂಧಿ

    ನವದೆಹಲಿ: ಕಾಶ್ಮೀರಿಗಳಿಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ನಿರಾಕರಿಸುವುದಕ್ಕಿಂತ ‘ರಾಜಕೀಯ ಹಾಗೂ ರಾಷ್ಟ್ರ ವಿರೋಧಿ’ ಇನ್ನೊಂದಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ ಕಾರಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿ, ಕಾಶ್ಮೀರಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಹಿಳೆಯೊಬ್ಬರು ಹೇಳಿಕೊಳ್ಳುತ್ತಿರುವ ಕ್ಲಿಪ್‍ನ್ನು ಹಾಕಿದ್ದಾರೆ. ಇದು ಇನ್ನೂ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ? ರಾಷ್ಟ್ರೀಯತೆಯ ಹೆಸರಿನಲ್ಲಿ ಕಾಶ್ಮೀರಿಗಳ ಮೌನ ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಮೂಲೆಗುಂಪು ಮಾಡಿರುವ ಲಕ್ಷಾಂತರ ಜನರ ಪೈಕಿ ಇದು ಒಂದು ಉದಾಹರಣೆ ಎಂದು ವಿಡಿಯೋ ಹಾಕಿದ್ದಾರೆ.

    ಇತ್ತೀಚೆಗೆ ರಾಹುಲ್ ಗಾಂಧಿ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಯತ್ನಿಸಿದ್ದರು. ಆದರೆ, ಶ್ರೀನಗರ ವಿಮಾನ ನಿಲ್ದಾಣದಲ್ಲೇ ಅವರನ್ನು ತಡೆದು ಮರಳಿ ದೆಹಲಿಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.

    ರಾಹುಲ್ ಗಾಂಧಿ ಹಾಗೂ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ಈ ಮಧ್ಯೆ ರಾಹುಲ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ನೈಜ ಪರಿಸ್ಥಿತಿಯನ್ನು ಅರಿಯಲು ಯೋಜನೆ ರೂಪಿಸಿದ್ದರು. ಆದರೆ, ರಾಹುಲ್ ಗಾಂಧಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರನ್ನು ಅಲ್ಲಿನ ಆಡಳಿತ ಮಂಡಳಿ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರ ಕಳುಹಿಸಿತ್ತು.

    ಅಧಿಕಾರಿಗಳು ತಿಳಿಸಿದ ಪ್ರಕಾರ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥತಿ ಸಹಜವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದರು. ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅವರ ಆಹ್ವಾನವನ್ನು ಸ್ವೀಕರಿಸಿ ಇಲ್ಲಿಗೆ ಆಗಮಿಸಲು ನಿರ್ಧರಿಸಿದೆ. ರಾಜ್ಯಕ್ಕೆ ಭೇಟಿ ನೀಡಲು ವಿಮಾನದ ವ್ಯವಸ್ಥೆ ಮಾಡುವುದಾಗಿ ಸಹ ರಾಜ್ಯಪಾಲರು ತಿಳಿಸಿದ್ದರು. ನಾನು ವಿಮಾನದ ಅಗತ್ಯವಿಲ್ಲ, ನಿಮ್ಮ ಆಹ್ವಾನವನ್ನು ಸ್ವೀಕರಿಸಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದೆ ಎಂದು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸದ ನಂತರ ರಾಹುಲ್ ಕಿಡಿ ಕಾರಿದ್ದರು.

    ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ನಾಯಕರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ಟ್ವೀಟ್ ಮಾಡಿ, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಇತರ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಜೀವನ ಕ್ರಮೇಣ ಪುನಃಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು. ಒಂದು ವೇಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಲ್ಲಿ ಅದು ನಿರ್ಬಂಧಗಳನ್ನು ಉಲ್ಲಂಘಿಸಿದಂತೆ. ಅಲ್ಲದೆ, ಜನರನ್ನು ಅನಾನುಕೂಲತೆಗೆ ತಳ್ಳಿದಂತೆ ಎಂದು ಎಚ್ಚರಿಸಿತ್ತು.

  • 370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

    370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

    ಶ್ರೀನಗರ: ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಓ) ಹುತಾತ್ಮರಾಗಿ, ಮತ್ತೊರ್ವ ಸಬ್ ಇನ್ಸ್‍ಪೆಕ್ಟರ್ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಪೊಲೀಸರು ಸಹ ಓರ್ವ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹುತಾತ್ಮರಾದ ಎಸ್‍ಪಿಓ ಅವರನ್ನು ಬಿಲ್ಲಾಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಬ್ ಇನ್ಸ್ ಪೆಕ್ಟರ್ ಅಮರ್ ದೀಪ್ ಪರಿಹಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ಮಧ್ಯೆ ಮಂಗಳವಾರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿ, ರಾತ್ರಿಯವರೆಗೂ ನಡೆದಿದ್ದು, ಇಂದು ಬೆಳಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡುವ ಮೂಲಕ ಎನ್‍ಕೌಂಟರ್ ಅಂತ್ಯವಾಗಿರುವುದನ್ನು ಖಚಿತಪಡಿಸಿದ್ದಾರೆ.

    ಗುಂಡಿನ ಚಕಮಕಿ ಪೂರ್ಣಗೊಂಡಿದ್ದು, ಒಬ್ಬ ಉಗ್ರ ಹತನಾಗಿದ್ದಾನೆ. ಈತನ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ನಮ್ಮ ಸಹೋದ್ಯೋಗಿ ಎಸ್‍ಪಿಓ ಬಿಲ್ಲಾಲ್ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಎಸ್‍ಐ ಅಮರ್ ದೀಪ್ ಪರಿಹಾರ್ ಅವರು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿ ಖಚಿತಪಡಿಸಿದೆ.

    ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಮೊದಲ ಗುಂಡಿನ ಚಕಮಕಿ ಇದಾಗಿದೆ. ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿತ್ತು.