Tag: Article 370

  • ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

    ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಚಾರ ಅಂತ ಒಪ್ಕೊಂಡ ಪಾಕ್

    ಇಸ್ಲಾಮಾಬಾದ್: ಆರ್ಟಿಕಲ್ 370 ರದ್ದುಗೊಳಿಸಿದ್ದು ಭಾರತದ ಆಂತರಿಕ ವಿಚಾರ ಎಂದು 21 ತಿಂಗಳ ಬಳಿಕ ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನದ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಒಪ್ಪಿಕೊಂಡಿದ್ದಾರೆ.

    ಈ ಕುರಿತು ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಖುರೇಷಿ, ಭಾರತದ ಕೇಂದ್ರ ಸರ್ಕಾರ ಜಮ್ಮು ಮತ್ತ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ. ಈ ಪ್ರಕಾರ ಆರ್ಟಿಕಲ್ 370 ಮತ್ತು 35(ಎ) ಕೂಡ ರದ್ದು ಮಾಡಲಾಗಿದೆ. ಇದು ಭಾರತ ಆಂತರಿಕ ವಿಚಾರವಾಗಿದೆ. ಆದರೆ ಈ ವಿಷಯವಾಗಿ ಸುಪ್ರೀಂ ಕೋರ್ಟ್ ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

    370 ರದ್ದತಿಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಲ್ಲ. 35 ಎ ರದ್ದುಗೊಂಡಿರುವ ಬಗ್ಗೆ ಚಿಂತಿತರಾಗಿದ್ದೇವೆ. ಕಾಶ್ಮೀರದ ಭೌಗೋಳಿಕ ಮತ್ತು ಜನಸಂಖ್ಯೆಯ ಸಮತೋಲನವನ್ನ ಬದಲಿಸುವ ಪ್ರಯತ್ನಗಳು ನಡೆದಿವೆ. 35ಎ ರದ್ದುಗೊಳಿಸಿದ್ದರಿಂದ ಭಾರತ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು ಅಂತ ಸಂದರ್ಶನದಲ್ಲಿ ಹೇಳಿದ್ದಾರೆ.

    ಆರ್ಟಿಕಲ್ 370 ರದ್ದುಗೊಂಡ ನಂತರ ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಟಿದ್ದು. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿದೆ. ಈ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರಾದ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿ 6 ರಾಜಕೀಯ ಪಕ್ಷಗಳು ಕೈಜೋಡಿಸಿ ಆರ್ಟಿಕಲ್ 370ಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.

    ಪರಿಚ್ಛೇಧ 370, 35ಎ ಎಂದರೇನು?
    35(ಎ) ಪ್ರಕಾರ, 1956ರಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿದ್ದು, ಇದು ರಾಜ್ಯದ ಶಾಶ್ವತ ನಿವಾಸಿಗಳನ್ನು ನಿರ್ಧರಿಸುತ್ತದೆ. ಈ ವಿಧಿಯ ಪ್ರಕಾರ 1954 ಮೇ 14ಕ್ಕೂ ಮುನ್ನ ರಾಜ್ಯದಲ್ಲಿ ನೆಲೆಸಿದವರು ಅಥವಾ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದ್ದು, ಕಾನೂನು ಬದ್ಧವಾಗಿ ಸ್ಥಿರಾಸ್ತಿ ಹೊಂದಿರುವವರಿಗಷ್ಟೇ ರಾಜ್ಯದ ಶಾಶ್ವತ ನಿವಾಸಿ ಹಕ್ಕು ದೊರೆಯುತ್ತದೆ.

    ಈ ವಿಧಿಯ ಪ್ರಕಾರ ಹೊರ ರಾಜ್ಯದವರು ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅಥವಾ ಸರ್ಕಾರಿ ಉದ್ಯೋಗ ಹೊಂದಲು ಅವಕಾಶವಿಲ್ಲ. 35 (ಎ) ವಿಧಿಯ ಮೂಲ ನಿಯಮವು ಮಹಿಳೆಯರ ವಿಚಾರದಲ್ಲಿ ತಾರತಮ್ಯ ಹೊಂದಿದ್ದು, ಅದರ ಪ್ರಕಾರ ಹೊರ ರಾಜ್ಯದ ವ್ಯಕ್ತಿಯನ್ನು ವಿವಾಹವಾಗುವ ಜಮ್ಮು-ಕಾಶ್ಮೀರ ಮಹಿಳೆ ಶಾಶ್ವತ ನಿವಾಸಿ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಆದರೆ ಪರುಷರು ಬೇರೆ ರಾಜ್ಯದ ಮಹಿಳೆಯನ್ನು ವಿವಾಹವಾದರೆ ಆ ಪುರಷನ ಹಕ್ಕಿಗೆ ಯಾವುದೇ ಧಕ್ಕೆ ಆಗುವುದಿಲ್ಲ. 2002 ರಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಇಂತಹ ಹಕ್ಕನ್ನು ಮಹಿಳೆ ಕಳೆದುಕೊಳ್ಳುವುದಿಲ್ಲ. ಆದರೆ ಈ ದಂಪತಿಗೆ ಜನಿಸುವ ಮಕ್ಕಳಿಗೆ ಶಾಶ್ವತ ನಿವಾಸಿ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿತ್ತು.

  • 14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ

    14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ

    – ಕೇಂದ್ರದ ನಿರ್ಧಾರ ಕ್ರೂರ ಎಂದು ಕಿಡಿ

    ಶ್ರೀನಗರ: ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿಯರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.

    ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. ಪೂರ್ತಿ ಕಪ್ಪು ಬಣ್ಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಆಡಿಯೋ ಮೆಸೇಜ್ ಮೂಲಕ ಕಿಡಿಕಾರಿದ್ದಾರೆ. ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ 14 ತಿಂಗಳ ಬಳಿಕ ಬಿಡುಗಡೆ ಹೊಂದಿದ್ದೇನೆ. 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರೂರ ನಿರ್ಧಾರದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೇನೆ. ಸರ್ಕಾರ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಹಾಗೂ ದೇಶದ ಹಲವು ಭಾಗಗಳಲ್ಲಿ ಜೈಲಿನಲ್ಲಿ ಬಳಲುತ್ತಿರುವವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಆದರೆ ನಾವೆಲ್ಲರೂ ಹೋರಾಡಬೇಕಿದೆ ಎಂದು ಗುಡುಗಿದ್ದಾರೆ.

    ಇತ್ತೀಚೆಗೆ ಅವರು ಮಗಳು ಇಲ್ತಿಝಾ ಮುಫ್ತಿ ಸಹ ಮೆಹಬೂಬಾ ಮುಫ್ತಿ ಟ್ವಿಟ್ಟರ್ ಖಾತೆ ಮೂಲಕ ಅವರು ಬಿಡುಗಡೆಯಾಗುವುದನ್ನು ಖಚಿತಪಡಿಸಿದ್ದರು. ಕೊನೆಗೂ ಮುಫ್ತಿಯವರ ಕಾನೂನು ಬಾಹಿರ ಬಂಧನ ಮುಗಿಯುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮಗೆ ಋಣಿಯಾಗಿದ್ದೇನೆ. ಇದು ಇಲ್ತಿಜಾ ಸೈನಿಂಗ್ ಆಫ್. ಅಲ್ಲಾ ನಿಮ್ಮನ್ನು ರಕ್ಷಿಸಲಿ ಎಂದು ಬರೆದುಕೊಂಡಿದ್ದರು.

    ಪಿಡಿಪಿ ಮುಖ್ಯಸ್ಥೆ ಮುಫ್ತಿಯವರು ಬಿಡುಗಡೆಯಾಗಿರುವ ಕುರಿತು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ. 370ನೇ ವಿಧಿ ರದ್ದು ಪಡಿಸಿದ ಬಳಿಕ ಮೆಹಮೂಬೂಬಾ ಮುಫ್ತಿಯವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಅವರ ಮನೆಯಲ್ಲಿಯೇ ಅವರನ್ನು ಬಂಧಿಸಲಾಗಿತ್ತು.

  • ಚೀನಾ ಸಹಾಯದಿಂದ ಮತ್ತೆ 370ನೇ ವಿಧಿ ಜಾರಿ – ಫಾರೂಕ್ ಅಬ್ದುಲ್ಲಾ

    ಚೀನಾ ಸಹಾಯದಿಂದ ಮತ್ತೆ 370ನೇ ವಿಧಿ ಜಾರಿ – ಫಾರೂಕ್ ಅಬ್ದುಲ್ಲಾ

    ನವದೆಹಲಿ: ಚೀನಾದ ಬೆಂಬಲ ಪಡೆದು ಜಮ್ಮು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೆ ತರುವ ಆಶಯವನ್ನು ಹೊಂದಿದ್ದೇನೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

    ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾದಿಂದಲೇ ಲಡಾಖ್‍ನ ವಾಸ್ತವ ಗಡಿ ರೇಖೆ(ಎಲ್‍ಎಸಿ)ಯ ಬಳಿ ಚೀನಾ ಆಕ್ರಮಣ ಮಾಡುತ್ತಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ 370ನೇ ವಿಧಿ ರದ್ದತಿಯನ್ನು ಚೀನಾ ಒಪ್ಪಿಕೊಂಡಿಲ್ಲ. ಹೀಗಾಗಿ ಚೀನಾದ ಬೆಂಬಲದಿಂದಾಗಿ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.

    ಲಡಾಖ್‍ನ ಎಲ್‍ಎಸಿ ಬಳಿ ಚೀನಾ ಏನೇನು ಮಾಡುತ್ತಿದೆಯೋ ಅದಕ್ಕೆಲ್ಲ 370ನೇ ವಿಧಿಯೇ ಕಾರಣ. ಇದನ್ನು ಅವರು ಎಂದೂ ಒಪ್ಪುವುದಿಲ್ಲ. ಅವರ ಬೆಂಬಲದಿಂದಲೇ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಆಶಯ ಹೊಂದಿದ್ದೇನೆ. 2019ರ ಆಗಸ್ಟ್ 5ರಂದು ಸರ್ಕಾರ ಮಾಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಗಳ ಬಗ್ಗೆ ಮಾತನಾಡಲು ಸಂಸತ್‍ನಲ್ಲಿ ನನಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಅವರು ತಿಳಿಸಿದರು.

    ಜಮ್ಮು ಕಾಶ್ಮೀರಕ್ಕೆ 370 ಹಾಗೂ 35ಎ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜಮ್ಮುಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಡಿಸಲಾಗಿದೆ. ಕಳೆದ ವರ್ಷ ಆಗಸ್ಟ್ 5ರಂದು ಗೃಹ ಸಚಿವ ಅಮಿತ್ ಶಾ ಸಂಸತ್‍ನಲ್ಲಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿದರು. ಬಳಿಕ 2ನೇ ನಿರ್ಣಯ ಕೈಗೊಳ್ಳುವ ಮೂಲಕ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಡಿಸಲಾಯಿತು. ಇದಾದ ಬಳಿಕ 2019ರ ಅಕ್ಟೋಬರ್ 31ರಿಂದ ಹೊಸ ಆಡಳಿತ ಜಾರಿಗೆ ಬಂದಿದೆ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದುಪಡಿಸಿದ ಬಳಿಕ ಅಲ್ಲಿನ ಹಲವು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಈ ಪೈಕಿ ಫಾರೂಕ್ ಅಬ್ದುಲ್ಲಾ, ಅವರ ಮಗ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.

  • 370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶೇ.54ರಷ್ಟು ಉಗ್ರ ಚಟುವಟಿಕೆ ಇಳಿಕೆ

    370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶೇ.54ರಷ್ಟು ಉಗ್ರ ಚಟುವಟಿಕೆ ಇಳಿಕೆ

    – ಭಾರೀ ಪ್ರಮಾಣದಲ್ಲಿ ತಗ್ಗಿದ ಉಗ್ರರ ಉಪಟಳ
    – ನಿಟ್ಟುಸಿರು ಬಿಟ್ಟ ಜಮ್ಮು ಕಾಶ್ಮೀರದ ಜನತೆ
    – ಕರ್ನಾಟಕ, ಕೇರಳ ಸೇರಿ ದಕ್ಷಿಣ ರಾಜ್ಯಗಳಲ್ಲೂ ಉಗ್ರರು ಸಕ್ರಿಯ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಉಗ್ರ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಶೇ.54ರಷ್ಟು ಭಯೋತ್ಪಾದಕ ಚಟುವಟಿಕೆ ತಗ್ಗಿವೆ.

    ಈ ಕುರಿತು ಸ್ವತಃ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಆಗಸ್ಟ್ 5, 2019ರಿಂದ 2020ರ ಸೆಪ್ಟೆಂಬರ್ 9 ವರೆಗೆ 211 ಭಯೋತ್ಪಾದಕ ಸಂಬಂಧಿ ಘಟನೆಗಳು ಸಂಭವಿಸಿವೆ. 2018 ಹಾಗೂ 2019ರಲ್ಲಿ ಇದೇ ಅವಧಿಯಲ್ಲಿ 455 ಪ್ರಕರಣಗಳು ನಡೆದಿದ್ದವು. ಕಳೆದ ಬಾರಿ ಹಾಗೂ ಈ ಬಾರಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹೋಲಿಸಿದರೆ ಶೇ.54ರಷ್ಟು ಕಡಿಮೆಯಾಗಿವೆ ಎಂದು ಮಾಹಿತಿ ನೀಡಿದರು.

    ಆಗಸ್ಟ್ 5, 2019 ರಿಂದ ಸೆಪ್ಟೆಂಬರ್ 9,2020ರ ವರೆಗೆ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ ನಡೆದಿಲ್ಲ. ಭಯೋತ್ಪಾದನೆ ವಿರುದ್ಧ ಸರ್ಕಾರ ಝೀರೋ ಟಾಲರೆನ್ಸ್ ಪಾಲಿಸಿಯನ್ನು ಅಳವಡಿಸಿಕೊಂಡಿದ್ದು, ಇದರ ಭಾಗವಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ಭದ್ರತಾ ಉಪಕರಣಗಳನ್ನು ಹೆಚ್ಚಿಸುವುದು, ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಕಟ್ಟು ನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವುದು. ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಭಯೋತ್ಪಾದಕರನ್ನ ಶೋಧ ಕಾರ್ಯ, ಸಂಶಯಾಸ್ಪದ ಪ್ರದೇಶಗಳನ್ನು ಸುತ್ತುವರಿದು ಉಗ್ರರು ಪತ್ತೆಹಚ್ಚುವುದು ಸೇರಿದಂತೆ ವಿವಿಧ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಜಮ್ಮು ಕಾಶ್ಮೀರದಾದ್ಯಂತ ಕೈಗೊಳ್ಳಲಾಗಿದೆ ಎಂದರು.

    ಭದ್ರತಾ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಯೋತ್ಪಾದಕರಿಗೆ ಬೆಂಬಲ ನೀಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ಒಳನುಸುಳಿರುವ ಕುರಿತ ವಿವರಗಳನ್ನೂ ರೆಡ್ಡಿ ನೀಡಿದ್ದಾರೆ.

    ಜುಲೈ 2020ರ ವರೆಗೆ 47 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಇದೇ ಸಂದರ್ಭದಲ್ಲಿ ಈ ಪ್ರಕರಣಗಳು 219 ಆಗಿದ್ದವು. 2018ರಲ್ಲಿ 328 ಒಳ ನುಸುಳುವಿಕೆ ಪ್ರಕರಣಗಳು ಪತ್ತೆಯಾಗಿದ್ದವು. ಜುಲೈ 2020ರ ವರೆಗೆ ಅಂದಾಜು 28 ಒಳನುಸುಳುವಿಕೆ ಪ್ರಕರಣಗಳು ನಡೆದಿವೆ. 2019ರಲ್ಲಿ ಇದರ ಪ್ರಮಾಣ 141 ಇತ್ತು. ಅಲ್ಲದೆ 2018ರಲ್ಲಿ 143 ಪ್ರಕಣಗಳು ಸಂಭವಿಸಿದ್ದವು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳಲ್ಲಿ 45 ಸಾರ್ವಜನಿಕರು ಸಾವಿಗೀಡಾಗಿದ್ದು, 49 ಭದ್ರತಾ ಸಿಬ್ಬಂದಿ ಸಹ ಹುತಾತ್ಮರಾಗಿದ್ದಾರೆ ಎಂದು ವಿವರಿಸಿದರು.

    ಇಷ್ಟು ಮಾತ್ರವಲ್ಲದೆ ಜಮ್ಮು ಕಾಶ್ಮೀರದ ಅಭಿವೃದ್ಧಿ ಕಡೆಗೂ ಒತ್ತು ನಿಡಿದ್ದು, ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015ರ ಅಡಿ ಪ್ರಧಾನಿ ನರೇಂದ್ರ ಮೋದಿ 80,068 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಈ ಹಣದಲ್ಲಿ 63 ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ, ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು, ಆರೋಗ್ಯ ವಲಯದ ಮೂಲಭೂತ ಸೌಲಭ್ಯಗಳು, 2 ಏಮ್ಸ್, ಐಐಟಿ, ಐಐಎಂ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸಭೆಗೆ ಸಚಿವ ರೆಡ್ಡಿ ತಿಳಿಸಿದರು.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿರುವ ಕುರಿತು ಸಂಸತ್‍ನಲ್ಲಿ ಘೋಷಿಸಿದ್ದರು. ನಂತರ ಜಮ್ಮು ಹಾಗೂ ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ್ದರು.

    ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ತುಂಬಾ ಸಕ್ರಿಯವಾಗಿದ್ದು, ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಐಎಸ್ ಉಗ್ರರ ಕೃತ್ಯದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) 17 ಪ್ರಕರಣಗಳನ್ನು ದಾಖಲಿಸಿದೆ. ಮಾತ್ರವಲ್ಲದೆ 122 ಆರೋಪಿಗಳನ್ನು ಸಹ ಬಂಧಿಸಿದೆ ಎಂದು ಅವರು ತಿಳಿಸಿದರು.

    ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳು ನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಜಮ್ಮು ಕಾಶ್ಮೀರ ಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಎಂಬುದು ತನಿಖೆಯಿಂದ ತಿಳಿದಿದೆ ಎಂದರು.

  • 370ನೇ ವಿಧಿ ರದ್ದು ಭಾರತದ ಆರ್ಥಿಕ ಅಭಿವೃದ್ಧಿಗೆ ನಾಂದಿ: ಅಮೆರಿಕ ಸಂಸದ

    370ನೇ ವಿಧಿ ರದ್ದು ಭಾರತದ ಆರ್ಥಿಕ ಅಭಿವೃದ್ಧಿಗೆ ನಾಂದಿ: ಅಮೆರಿಕ ಸಂಸದ

    – ಭ್ರಷ್ಟಾಚಾರ, ಜಾತಿ, ಧರ್ಮಗಳ ತಾರತಮ್ಯ ತಗ್ಗಲಿದೆ
    – ಸ್ವಾತಂತ್ರ್ಯ ದಿನಾಚರಣೆಯ ಮೋದಿ ಭಾಷಣ ಸ್ಪೂರ್ತಿದಾಯಕ

    ವಾಷಿಂಗ್ಟನ್: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಮೆರಿಕ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಮೆರಿಕದ ಕಾಂಗ್ರೆಸ್ ನಾಯಕ ಜೋ. ವಿಲ್ಸನ್ ಅವರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮಾತನಾಡುವಾಗ ಈ ಕುರಿತು ಹೇಳಿದ್ದು, ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಈ ವಿಡಿಯೋ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ವಿಡಿಯೋದಲ್ಲಿ ಹೇಳಿರುವ ಅಮೆರಿಕದ ಸಂಸದ, 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಸಾಮಾಜಿಕ ಆರ್ಥಿಕ ನ್ಯಾಯದ ಹೊಸ ಮಾದರಿಯನ್ನು ಭಾರತ ಸರ್ಕಾರ ಪರಿಚಯಿಸಿದೆ ಎಂದು ಹಾಡಿ ಹೊಗಳಿಸಿದ್ದಾರೆ.

    ಭಾರತದ ಸಂಸತ್ತು ವಿವಿಧ ಪಕ್ಷಗಳ ಬೆಂಬಲದೊಂದಿಗೆ ಈ ನಿರ್ಧಾರ ಕೈಗೊಂಡಿದ್ದು, ಭಾರತದ ಆರ್ಥಿಕತೆಗೆ ಶಕ್ತಿ ತುಂಬುವಲ್ಲಿ ಈ ನಿರ್ಧಾರ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು, ಲಿಂಗ, ಜಾತಿ ಹಾಗೂ ಧರ್ಮದ ತಾರತಮ್ಯವನ್ನು ಹೋಗಲಾಡಿಸಲು ಸಹಕಾರಿಯಾಗಿದೆ ಎಂದು ದಕ್ಷಿಣ ಕೆರೊಲಿನಾದ ರಿಪಬ್ಲಿಕನ್ ಸಂಸದ ವಿಲ್ಸನ್ ವ್ಯಾಖ್ಯಾನಿಸಿದ್ದಾರೆ.

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತವು ಯಶಸ್ವಿಯಾಗುವುದನ್ನು ನೋಡಲು ಕಾಯುತ್ತಿದ್ದೇವೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವಕ್ಕಾಗಿ ಅಮೆರಿಕ ಕೃತಜ್ಞರಾಗಿರುತ್ತದೆ. ಭಾರತದೊಂದಿಗೆ ಒಡನಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

    ಆಗಸ್ಟ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 26/11 ಮುಂಬೈ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣ ಸ್ಪೂರ್ತಿದಾಯಕವಾಗಿತ್ತು ಎಂದು ವಿಲ್ಸನ್ ಹೊಗಳಿದ್ದಾರೆ.

    ಅಲ್ಲದೆ ಸೆಪ್ಟೆಂಬರ್ ನಲ್ಲಿ ಹ್ಯೂಸ್ಟನ್‍ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸ್ವತಃ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ್ದರು. ಈ ಕಾರ್ಯಕ್ರಮದಲ್ಲಿ 52 ಸಾವಿರ ಜನ ಭಾಗವಹಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಸ್ವಾಗತ ಸಮಾರಂಭವಾಗಿದೆ ಎಂದು ತಿಳಿದ್ದಾರೆ.

  • ಕಾಶ್ಮೀರದಲ್ಲಿ ಸಹಜ ಸ್ಥಿತಿ, ಕಾಂಗ್ರೆಸ್ ಬಗ್ಗೆ ಗೊತ್ತಿಲ್ಲ- ಅಮಿತ್ ಶಾ

    ಕಾಶ್ಮೀರದಲ್ಲಿ ಸಹಜ ಸ್ಥಿತಿ, ಕಾಂಗ್ರೆಸ್ ಬಗ್ಗೆ ಗೊತ್ತಿಲ್ಲ- ಅಮಿತ್ ಶಾ

    ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದರೆ ಕಾಂಗ್ರೆಸ್ ಸ್ಥಿತಿ ಸಹಜವಾಗಿದೆ ಎಂದು ನಾನು ಹೇಳುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ.

    ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಕಾಶ್ಮೀರದ ಪರಿಸ್ಥಿತಿ ಕುರಿತು ಕೇಳಿದ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದರು. ಕಾಶ್ಮೀರದ ಕಣಿವೆಯಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದರೆ ಕಾಂಗ್ರೆಸ್ ಸ್ಥಿತಿ ಸಹಜವಾಗಿದೆ ಎಂದು ನಾನು ಹೇಳುವುದಿಲ್ಲ. ಏಕೆಂದರೆ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ರಕ್ತಪಾತ ನಡೆಯುತ್ತಿದೆ ಎಂದು ಅವರು ಬಿಂಬಿಸಿದ್ದರು. ಆದರೆ ಆ ರೀತಿ ನಡೆದಿರಲಿಲ್ಲ, ಒಂದೇ ಒಂದು ಬುಲೆಟ್ ಸಹ ಹಾರಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

    ನಿರ್ಬಂಧಗಳನ್ನು ಹಿಂಪಡೆದ ನಂತರ ಅಲ್ಲಿನ ಜನರ ಪರಿಸ್ಥಿತಿ ಹಾಗೂ ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಬಗ್ಗೆ ಉತ್ತರಿಸಿ, ಕಾಶ್ಮೀರದ ಕಣಿವೆಯ ಎಲ್ಲ ಕಡೆ ಸಹಜ ಸ್ಥಿತಿ ಇದೆ. ಆದರೆ ಕಾಂಗ್ರೆಸ್ ಬಗ್ಗೆ ಗೊತ್ತಿಲ್ಲ ಹೇಳಿದ್ದಾರೆ.

    ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಧ್ಯ ಪ್ರವೇಶಿಸಿ, ರಾಮ ರಾಜ್ಯದ ರೀತಿ ಬಿಂಬಿಸಿದರು. ಆದರೆ ಪರಿಸ್ಥತಿ ಆ ರೀತಿ ಇಲ್ಲ, ಇದೇ ಅವರ ಆದರ್ಶ ಆಡಳಿತ. ಕಾಶ್ಮೀರದಲ್ಲಿ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿಲ್ಲ. ಜೈಲಿನಲ್ಲಿಯೇ ಇಡಲಾಗಿದೆ ಇದು ಅಲ್ಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಚೌಧರಿ ಅವರ ಆರೋಪವನ್ನು ಅಲ್ಲಗಳೆದ ಅಮಿತ್ ಶಾ, ಶೇ.99.5ರಷ್ಟು ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆದಿದ್ದಾರೆ. 7 ಲಕ್ಷ ರೋಗಿಗಳನ್ನು ಹೊರ ರೋಗಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇದು ಸಹಜ ಸ್ಥಿತಿಯಲ್ಲವೇ? ರಾಜಕೀಯ ಚಟುವಟಿಕೆಗಳು ಪ್ರಾರಂಭವಾವಗುವುದೇ ಇವರ ನಿಜವಾದ ಸಹಜ ಸ್ಥಿತಿಯ ವ್ಯಾಖ್ಯಾನವಾಗಿದೆ. ಜನತೆಯ ಬಗ್ಗೆ ಕಾಂಗ್ರೆಸ್ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಅಮಿತ್ ಶಾ ತಿರುಗೆಟು ನೀಡಿದರು.

    370ನೇ ವಿಧಿ ರದ್ದತಿ ನಂತರ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಹುತೇಕ ಕಡೆ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ಕೆಲವು ಪ್ರದೇಶಗಳಲ್ಲಿ ನಿರ್ಬಂಧನೆಯನ್ನು ಸಡಿಲಗೊಳಿಸಲಾಗಿದೆ.

    ಆಗಸ್ಟ್ 5ರಂದು ಹೇರಿದ್ದ ನಿಷಾಧಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿಯಲ್ಲಿಯೂ ಸಹ ಹೆಚ್ಚಾಗಿದೆ.

  • ಜಮ್ಮು ಕಾಶ್ಮೀರದಲ್ಲಿ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಕಾರ್ಯಾರಂಭ

    ಜಮ್ಮು ಕಾಶ್ಮೀರದಲ್ಲಿ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಕಾರ್ಯಾರಂಭ

    ಶ್ರೀನಗರ: ಜಮ್ಮು ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿದ್ದು, ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಪೋಸ್ಟ್ ಪೇಯ್ಡ್ ಫೋನ್‍ಗಳು ಸೋಮವಾರ ಮಧ್ಯಾಹ್ನ 12ರಿಂದ ಜಮ್ಮು ಕಾಶ್ಮೀರದ ಉಳಿದ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಜಮ್ಮು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೊನ್ ಸೇವೆಗಳನ್ನು ಪುನಃ ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಎಲ್ಲ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಃ ಸ್ಥಾಪನೆಯಾಗುತ್ತವೆ. ಅಕ್ಟೋಬರ್ 14ರ ಮಧ್ಯಾಹ್ನ 12ರಿಂದ ಕಾರ್ಯನಿರ್ವಹಿಸುತ್ತವೆ. ಇದು ಕಾಶ್ಮೀರ ಪ್ರಾಂತ್ಯದ ಎಲ್ಲ 10 ಜಿಲ್ಲೆಗಳನ್ನು ಒಳಗೊಳ್ಳಲಿದೆ ಎಂದು ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದರು.

    ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗ ನಿರ್ಬಂಧ ವಿಧಿಸಲಾಗಿತ್ತು. ವರದಿಗಳ ಪ್ರಕಾರ ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ. ಇದರಲ್ಲಿ 26 ಲಕ್ಷ ಪ್ರೀಪೇಯ್ಡ್ ಮೊಬೈಲ್ ಚಂದಾದಾರರಿದ್ದಾರೆ. ಇವರು ಮೊಬೈಲ್ ಬಳಸಲು ಸೋಮವಾರ ಸರ್ಕಾರ ಆದೇಶ ಹೊರಡಿಸುವ ವರೆಗೆ ಕಾಯಬೇಕಾಗುತ್ತದೆ ಎಂದರು

    ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ದೇಶದಲ್ಲಿ ದುಷ್ಕೃತ್ಯ ನಡೆಸಲು ಭಯೋತ್ಪಾದಕರು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಈ ಹಿಂದೆ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದರು.

    ಮೊಬೈಲ್ ಹಾಗೂ ದೂರವಾಣಿ ಸೌಲಭ್ಯ ಕಡಿತದಿಂದಾಗಿ ಜಮ್ಮು ಕಾಶ್ಮೀರದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಜನರು ಇನ್ನೂ 10 ದಿನಗಳವರೆಗೆ ಕಾಯಬೇಕು. ನಮಗೆ ಪ್ರತಿಯೊಬ್ಬರ ಜೀವವು ಮುಖ್ಯ. ದಯವಿಟ್ಟು ಈ ನಿರ್ಬಂಧಗಳ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಫೋನ್ ಮತ್ತು ಇಂಟರ್ನೆಟ್‍ನ್ನು ಯಾರು ಬಳಸುತ್ತಾರೆ? ಇದರಿಂದ ನಮಗೆ ಹೆಚ್ಚು ಉಪಯೋಗವಿಲ್ಲ. ಆದರೆ ಇದನ್ನು ಭಯೋತ್ಪಾದಕರು ಮತ್ತು ಪಾಕಿಸ್ತಾನಿಗಳು ಹೆಚ್ಚು ಬಳಸಿಕೊಳ್ಳುತ್ತಾರೆ, ಇದರಿಂದ ದುರುಪಯೋಗವಾಗುತ್ತಿದೆ ಎಂದು ರಾಜ್ಯಪಾಲರು ಮನವಿ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದರು.

  • ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್‍ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು 6 ಜನ ಗಂಭೀರ ಗಾಯಗೊಂಡಿದ್ದಾರೆ.

    ಶ್ರೀನಗರದಿಂದ 55 ಕಿ.ಮೀ. ದೂರದಲ್ಲಿರುವ ಅನಂತ್‍ನಾಗ್ ಪಟ್ಟಣದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಆದರೆ ಗುರಿ ತಪ್ಪಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. 6 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ 6 ಜನ ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟ ಸಂಭವಿಸುತ್ತಿದ್ದಂತೆ ಅಲ್ಲಿನ ಭದ್ರತಾ ಪಡೆ ಸುತ್ತುವರಿದಿದ್ದು, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಬಂಧಿಸಲು ಬೇಟೆ ಪ್ರಾರಂಭಿಸಿದ್ದಾರೆ. ಈವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದ ಕಣಿವೆಯಲ್ಲಿ ಉಗ್ರರು ಭದ್ರತಾ ಪಡೆ ಮೇಲೆ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.

    ಸೆಪ್ಟೆಂಬರ್ 28ರಂದು ಶ್ರೀನಗರದ ಡೌನ್ ಟೌನ್‍ನಲ್ಲಿ ಉಗ್ರರು ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ಗ್ರೆನೇಡ್ ಎಸೆದಿದ್ದರು. ಅದೂ ಸಹ ಗುರಿ ತಪ್ಪಿತ್ತು, ಈ ಮೂಲಕ ಆಗಲೂ ಭಾರೀ ಅನಾಹುತ ತಪ್ಪಿದಂತಾಗಿತ್ತು. ಸಿಆರ್ ಪಿಎಫ್‍ನ 38 ಬೆಟಾಲಿಯನ್ ಸಿಬ್ಬಂದಿ ನವಾ ಕಡಲ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ನಿಯೋಜಿಸಿದ್ದಾಗ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು.

  • ಕಾಶ್ಮೀರ ವಿಷಯದ ಬಗ್ಗೆ ಮೊಂಡುವಾದ – ಪ್ರಶ್ನೆ ಕೇಳಿದ ಪಾಕ್ ವಾಹಿನಿ ವಿರುದ್ಧವೇ ಖುರೇಷಿ ಕಿಡಿ

    ಕಾಶ್ಮೀರ ವಿಷಯದ ಬಗ್ಗೆ ಮೊಂಡುವಾದ – ಪ್ರಶ್ನೆ ಕೇಳಿದ ಪಾಕ್ ವಾಹಿನಿ ವಿರುದ್ಧವೇ ಖುರೇಷಿ ಕಿಡಿ

    ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ವಿಚಾರದಲ್ಲಿ 58 ರಾಷ್ಟ್ರಗಳು ಪಾಕಿಸ್ತಾನದ ಪರವಾಗಿವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‍ಎಚ್‍ಆರ್ ಸಿ)ಯಲ್ಲಿ ಹೇಳಿದ್ದಾರೆ. ಆ 58 ದೇಶಗಳ ಹೆಸರು ಹೇಳುವಿರಾ ಎಂದು ಪ್ರಶ್ನಿಸಿದ್ದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಬ್ಬಿಬ್ಬಾಗಿದ್ದಾರೆ.

    ಪಾಕಿಸ್ತಾನದ ವಾಹಿನಿಯೊಂದರ ಟಾಕ್ ಶೋನಲ್ಲಿ, ಕಾಶ್ಮೀರದ ವಿಷಯದಲ್ಲಿ 58 ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಿವೆ ಎಂದು ಇಮ್ರಾನ್ ಖಾನ್ ಯುಎನ್‍ಎಚ್‍ಆರ್ ಸಿಯಲ್ಲಿ ತಿಳಿಸಿದ್ದಾರೆ ಎಂದು ಪದೇ ಪದೆ ಪ್ರಸ್ತಾಪಿಸಿದ್ದರಿಂದ ಈ ಕುರಿತು ನಿರೂಪಕರು ಖುರೇಷಿಗೆ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೆ ತಬ್ಬಿಬ್ಬಾದ ಖುರೇಷಿ, ನೀವು ಯಾವ ಅಜೆಂಡಾದಂತೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    ಹಲವು ಬಾರಿ ಇಮ್ರಾನ್ ಖಾನ್ ಹೇಳಿಕೆಯನ್ನು ಪ್ರಸ್ತಾಪಿಸಿದ್ದರಿಂದ ನಿರೂಪಕರು ಈ ಪ್ರಶ್ನೆ ಕೇಳಿದ್ದು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಯಾವ ದೇಶಗಳು ಬೆಂಬಲಿಸಿವೆ ಅಥವಾ ಬೆಂಬಲಿಸಿಲ್ಲ ಎಂದು ಹೇಳಬಹುದೇ? ನಿಮಗನಿಸಿದ್ದನ್ನು ನೀವು ಹೇಳಬಹುದು ಎಂದು ಕೇಳಿದ್ದಾರೆ. ಇಷ್ಟಕ್ಕೆ ಖುರೇಷಿ ಕೆಂಡಾಮಂಡಲವಾಗಿದ್ದಾರೆ.

    ತಮ್ಮ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಇಮ್ರಾನ್ ಖಾನ್ ಅಭಿಪ್ರಾಯವನ್ನು ಹಾಕಿದ್ದರ ಕುರಿತು ಪ್ರಸ್ತಾಪಿಸುವಂತೆ ಒತ್ತಾಯಿಸಿದ ಖುರೇಷಿ, ಇಲ್ಲ ನಾನು ಮಾಡಿದ್ದ ಟ್ವೀಟ್‍ನ್ನು ನನಗೆ ತೋರಿಸಿ, ಪ್ರಧಾನಿ ಖಾನ್ ಬರೆದದಲ್ಲ. ನನ್ನ ಟ್ವೀಟ್ ಹೇಳಿದ್ದೀರಿ, ಅದನ್ನು ನನಗೆ ತೋರಿಸಿ ನನ್ನ ಟ್ವೀಟ್ ನನಗೆ ಬೇಕು ಎಂದು ಪಟ್ಟು ಹಿಡಿದ್ದಾರೆ.

    ಆಗ ವಾಹಿನಿಯವರು ಖುರೇಷಿ ಟ್ವೀಟ್ ತೋರಿಸಿದ್ದಾರೆ. ಆದರೂ ಖುರೇಷಿ ತಮ್ಮ ಮೊಂಡು ವಾದವನ್ನು ಮುಂದುವರಿಸಿದ್ದಾರೆ. ಟ್ವೀಟ್‍ನಲ್ಲಿ ಯಾವುದೇ ತಪ್ಪಿಲ್ಲ. ನಾನು ಹೇಳಿದ್ದಕ್ಕೆ ಬದ್ಧನಾಗಿದ್ದೇನೆ. ಇದರಲ್ಲಿ ಅಚ್ಚರಿ ಏನಿದೆ, ನೀವು ಯಾವ ಅಜೆಂಡಾ ಅನುಸರಿಸುತ್ತಿದ್ದೀರಿ ಎಂದು ವಾಹಿನಿ ವಿರುದ್ಧವೇ ಕಿಡಿಕಾರಿದ್ದಾರೆ.

  • ಕಾಶ್ಮೀರದ ವಿಚಾರದಲ್ಲಿ ನೆಹರು ಮಾಡಿದ ತಪ್ಪು ಹಿಮಾಲಯಕ್ಕಿಂತ ದೊಡ್ಡದು – ಅಮಿತ್ ಶಾ

    ಕಾಶ್ಮೀರದ ವಿಚಾರದಲ್ಲಿ ನೆಹರು ಮಾಡಿದ ತಪ್ಪು ಹಿಮಾಲಯಕ್ಕಿಂತ ದೊಡ್ಡದು – ಅಮಿತ್ ಶಾ

    ನವದೆಹಲಿ: ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ವಿರುದ್ಧ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಕಾಶ್ಮೀರದ ದೀರ್ಘಕಾಲದ ಸಮಸ್ಯೆಗಳಿಗೆ ನೆಹರು ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶ್ಮೀರವನ್ನು ಒಟ್ಟಾಗಿ ಕೊಂಡೊಯ್ಯುವ ವಿಚಾರದ ನಿರ್ಧಾರವನ್ನು ಯಾರೊಂದಿಗೂ ಚರ್ಚಿಸದೇ ಜವಾಹರ್‍ಲಾಲ್ ನೆಹರು ವೈಯಕ್ತಿಕವಾಗಿ ತೆಗೆದುಕೊಂಡರು. ಈ ತಪ್ಪು ಹಿಮಾಲಯಕ್ಕಿಂತ ದೊಡ್ಡದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸರ್ದಾರ್ ವಲ್ಲಭಾಯ್ ಪಟೇಲರು 630 ಪ್ರಾಂತ್ಯಗಳನ್ನು ಒಗ್ಗೂಡಿಸಿದ್ದರು. ನೆಹರು ಅವರಿಗೆ ಒಂದೇ ಕೆಲಸವಿತ್ತು(ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವುದು). ಇದನ್ನೂ ನೆಹರು ಅವರು ಸರಿಯಾಗಿ ಮಾಡಲಿಲ್ಲ. ಈ ಕೆಲಸವನ್ನು ಆಗಸ್ಟ್ 2019ರಲ್ಲಿ 370ನೇ ವಿಧಿಯನ್ನು ಮೋದಿ ಸರ್ಕಾರ ರದ್ದುಪಡಿಸುವ ಮೂಲಕ ನಮ್ಮ ಸರ್ಕಾರ ಮಾಡಿತು ಎಂದು ವಾಗ್ದಾಳಿ ನಡೆಸಿದರು.

    370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಇಂದೂ ಸಹ 370ನೇ ವಿಧಿ ರದ್ದು ಹಾಗೂ ಕಾಶ್ಮೀರದ ಕುರಿತು ಹಲವು ಊಹಾಪೋಹಗಳು ಓಡಾಡುತ್ತಿವೆ. ಅವುಗಳ ಕುರಿತು ಸ್ಪಷ್ಟಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

    ದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಇತಿಹಾಸವನ್ನು ವಿರೂಪಗೊಳಿಸಿವೆ. 1947ರಿಂದ ಈ ವರೆಗೆ ಜಮ್ಮು ಕಾಶ್ಮೀರ ನಮಗೆ ಚರ್ಚೆಯ ಹಾಗೂ ವಿವಾದದ ವಿಷಯವಾಗಿತ್ತು. ಈ ಇತಿಹಾಸವನ್ನು ಸರ್ವಜನಿಕರಿಗೆ ತಿಳಿಸಲಾಗಿದೆ. ಇತಿಹಾಸ ಬರೆಯುವ ಜವಾಬ್ದಾರಿ ತಪ್ಪುಗಳನ್ನು ಮಾಡಿದ ಜನರ ಕೈಯಲ್ಲೇ ಇದ್ದಿದ್ದರಿಂದ ನಿಜ ಸಂಗತಿಗಳನ್ನು ಮರೆಮಾಚಲಾಗಿತ್ತು. ಸರಿಯಾದ ಇತಿಹಾಸವನ್ನು ಜನರಿಗೆ ತಿಳಿಸುವ ಕಾಲ ಈಗ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ವಿಚಾರವನ್ನು ಪದೆ ಪದೇ ಚರ್ಚಿಸಿದ್ದಕ್ಕೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ವಿಶ್ವಸಂಸ್ಥೆಯಲ್ಲಿ ಯಾವುದೇ ದೇಶ ಪಾಕಿಸ್ತಾನವನ್ನು ಬೆಂಬಲಿಸಿಲ್ಲ. ಎಲ್ಲ ದೇಶಗಳು ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಅತಿ ದೊಡ್ಡ ರಾಜತಾಂತ್ರಿಕ ವಿಜಯವಾಗಿದೆ ಎಂದು ಶ್ಲಾಘಿಸಿದರು.

    ಜಮ್ಮು ಕಾಶ್ಮೀರದಲ್ಲಿ ಯಾವುದೇ ರೀತಿಯ ದಿಗ್ಬಂಧನವಿಲ್ಲ. ಅದು ಇರುವುದು ನಿಮ್ಮ ತಲೆಯಲ್ಲಿ. ಕಾಶ್ಮೀರದ 196 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲೆಡೆ ಕಫ್ರ್ಯೂ ಹಿಂಪಡೆಯಲಾಗಿದೆ. ಕೇವಲ 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಶೀಘ್ರದಲ್ಲೇ ಜಮ್ಮು ಕಾಶ್ಮೀರ ಸಹಜ ಸ್ಥಿಯತ್ತ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.