Tag: art

  • ಅರ್ಥ ಅಕಾಡೆಮಿಯಿಂದ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ

    ಅರ್ಥ ಅಕಾಡೆಮಿಯಿಂದ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ

    ಬೆಂಗಳೂರು: ಯುವ ಸಮುದಾಯವನ್ನು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳತ್ತ ಸಳೆಯುವ ಅರ್ಥ(ಎಲಿಮೆಂಟ್ಸ್ ಆಫ್ ಆರ್ಟ್ ಆಂಡ್ ಹೆರಿಟೇಜ್ ಅಕಾಡೆಮಿ) ಕಾಲೇಜಿನಿಂದ ನಗರದಲ್ಲಿ ಶನಿವಾರ `ತ್ರಿಕಂ-2018 ನಾಟ್ಯೋತ್ಸವ ನಡೆಸಲು ತಯಾರಾಗಿದೆ.

    ಖ್ಯಾತ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ನಟಿ ಮತ್ತು ಮಾಡೆಲ್ ಆಗಿರುವ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ ನಡೆಯಲಿದೆ. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿರುವ ರೂಪಾ, ಕಥಕ್ ಮತ್ತು ಕೊರಿಯೋಗ್ರಫಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳನ್ನು ಯುವ ಸಮುದಾಯಕ್ಕೆ ಪರಿಚಯಿಸುಲು ಮತ್ತು ಯುವ ಪೀಳಿಗೆಯನ್ನು ಸೆಳೆಯುವ ಉದ್ದೇಶದಿಂದ ಈ ನಾಟ್ಯೋತ್ಸವವನ್ನು ಆಯೋಜಿಸಲಾಗಿದೆ.

    ಈ ನಾಟ್ಯೋತ್ಸವದಲ್ಲಿ ರೂಪಾ ರವೀಂದ್ರನ್ ಅವರೇ ರೂಪಿಸಿ, ನಟಿಸಿರುವ ‘ನೃತ್ಯಂ ಶಿವಂ’ ಎಂಬ ಡ್ಯಾನ್ಸ್ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಈ ಡಾಕ್ಯೂಮೆಂಟರಿಯಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಯುವ ಸಮುದಾಯಕ್ಕೆ ಪರಿಚಯಸಲಿದೆ. ನೃತ್ಯಂ ಶಿವಂ ಶಾಸ್ತ್ರೀಯ ಕಥಕ್ ಡ್ಯಾನ್ಸ್ ಮೂಲಕ ನೃತ್ಯ ಪರಂಪರೆ ಮತ್ತು ಗುರುಪರಂಪರೆಯನ್ನು ಹೇಳಲಿದೆ. ಈ ಸಾಕ್ಷ್ಯ ಚಿತ್ರ ಗುರು ಪಂಡಿತ ರಾಜೇಂದ್ರ ಗಂಗನಿ ಅವರ ಸ್ಫೂರ್ತಿದಾಯಕ ಮಾತುಗಳನ್ನು ಒಳಗೊಂಡಿದೆ.

    ನಾಟ್ಯೋತ್ಸವದ ಸ್ಥಳ: `ತ್ರಿಕಂ-2018′ ನಾಟ್ಯೋತ್ಸವ ಇದೇ ಶನಿವಾರ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಶ್ರೀ ಶಾರದಾ ಮಠದ ಸಭಾಂಗಣ(44/2)ದಲ್ಲಿ ನಡೆಯಲಿದೆ. ಸಂಜೆ 5.30ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಸಮಾರಂಭದಲ್ಲಿ ಶ್ರೀ ಶಾರದಾ ಮಠದ ಮಾತೆ, ಕಲಾಶ್ರೀ ಗುರು ಡಾ ಸುಪರ್ಣ ವೆಂಕಟೇಶ್ ಮೊದಲಾದವರು ಉಪಸ್ಥತರಿರಲಿದ್ದಾರೆ.

    ರೂಪಾ ಅವರು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಲೆಯ ಆಸಕ್ತಿಯಿಂದಲೇ 13 ದೇಶಗಳನ್ನು ಸುತ್ತಿ ಅಧ್ಯಯನ ನಡೆಸಿದ್ದಾರೆ. ಕೆಎಸ್ ಡಿಎಲ್, ಮೈಸೂರು ಸೋಪ್ ಮತ್ತು ಖಾದಿ ಗ್ರಾಮೋದ್ಯೋಗದ ಬ್ರ್ಯಾಂಡ್ ಅಂಬಾಸಡರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟಲ್ಲದೇ ಎನ್‍ಜಿಓ, ಕಾರ್ಪೋರೇಟ್ ಸಿನಿಮಾ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರೂಪಾ ರವೀಂದ್ರನ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  • ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ, ಕಿತ್ತು ತಿನ್ನೋ ಬಡತನ- ಉಡುಪಿಯ ನಿಶಾಗೆ ಬೇಕಿದೆ ಭರತನಾಟ್ಯ ಕಾಸ್ಟ್ಯೂಮ್

    ಉಡುಪಿ: ಈಕೆ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಹುಡುಗಿ. ಯಕ್ಷಗಾನ ಹಾಗೂ ಭರತನಾಟ್ಯದಲ್ಲಿ ಚಿಕ್ಕಂದಿನಲ್ಲೇ ಪರಿಣತಿ ಪಡೆದಾಕೆ. ಇಷ್ಟೆಲ್ಲಾ ಇದ್ರೂ ಆಕೆಯ ಮನೆಯಲ್ಲಿ ಮಾತ್ರ ಕಿತ್ತು ತಿನ್ನುವ ಬಡತನ. ಇದರಿಂದ ಭರತನಾಟ್ಯಮತ್ತು ಕಲೆಯನ್ನು ಮುಂದುವರಿಸಲಾಗದ ಸ್ಥಿತಿ ಆಕೆಯದ್ದು. ಉಡುಪಿಯ ಕೋಟದಿಂದ ಬಂದಿರುವ ನಿಶಾ ಇದೀಗ ಬೆಳಕಿನ ನಿರೀಕ್ಷೆಯಲ್ಲಿದ್ದಾಳೆ.

    ನಿಶಾ ಉಡುಪಿ ಜಿಲ್ಲೆಯಲ್ಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಊರಿನವಳು. ಈಕೆ ತಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಲೇ ನೋವುಂಡವಳು. ನಿಶಾಳ ತಾಯಿ ಶಾರದಾಗೆ ಎರಡೂ ಕಿಡ್ನಿ ಫೇಲಾಗಿತ್ತು. ತನ್ನ ದೊಡ್ಡಮ್ಮ ಕಿಡ್ನಿ ನೀಡಿ ನಿಶಾಳ ಅಮ್ಮನನ್ನು ಬದುಕಿಸಿದ್ದರು. ದೊಡ್ಡಮ್ಮ, ಅಜ್ಜಿ, ಮಾವ ಸೇರಿ ಮನೆಯಲ್ಲಿ ಒಟ್ಟು ಏಳು ಜನ. ಎಲ್ಲರನ್ನು ಸಾಕುವ ಜವಾಬ್ದಾರಿ ನಿಶಾಳ ಅಪ್ಪ ರಾಘುವಿನ ಹೆಗಲ ಮೇಲಿದೆ. ಮೇಸ್ತ್ರಿ ಕೆಲಸ ಮಾಡುವ ರಾಘುವಿಗೆ ಸಂಸಾರ ಸಾಗರವನ್ನು ಹೊತ್ತು ಈಜಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಿಶಾ ಚಿಕ್ಕಂದಿನಿಂದಲೇ ಕಷ್ಟದ ಜೊತೆಯಾಗಿ ಬೆಳೆದವಳು.

    ನಿಶಾ ಕೋಟ ವಿವೇಕ ಬಾಲಕಿಯರ ಹೈಸ್ಕೂಲಿನಲ್ಲಿ ಎಂಟನೇ ಕ್ಲಾಸ್ ವಿದ್ಯಾರ್ಥಿನಿ. ಓದಿನಲ್ಲಿ ಶಾಲೆಗೆ ಮುಂದಿರುವ ಈಕೆ ಯಕ್ಷಗಾನ, ಭರತನಾಟ್ಯದಲ್ಲಿ ಪ್ರವೀಣೆ. ತನ್ನ ತಂಡದ ಜೊತೆ ಅಲ್ಲಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾಳೆ. ಭರತನಾಟ್ಯ ಕ್ಲಾಸಿಗೆ ತಿಂಗಳಿಗೆ 300 ರೂಪಾಯಿ ಫೀಸ್ ಕೊಡೋದಕ್ಕೂ ಈಕೆಗೆ ಕಷ್ಟವಾಗುತ್ತಿದೆ. ಭರತನಾಟ್ಯ ಕಾರ್ಯಕ್ರಮಗಳಿದ್ದರೆ ನಿಶಾ ಬಳಿ ಸರಿಯಾದ ಕಾಸ್ಟ್ಯೂಮ್‍ಗಳಿಲ್ಲ. ವಿಶೇಷ ದಿನಗಳಲ್ಲಿ ತೊಡಲು ಒಳ್ಳೆಯ ಬಟ್ಟೆಗಳಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ನಿಶಾ ಸಹಾಯ ಅಪೇಕ್ಷಿಸಿದ್ದಾಳೆ.

    ಎಷ್ಟೇ ಬಡತನ ಇದ್ರೂ ಈಕೆಯಲ್ಲಿರುವ ಪ್ರತಿಭೆಗೆ ಕೊರತೆಯಾಗಿಲ್ಲ. ವಿದ್ಯೆಗೆ ಹಣ ಅಡ್ಡಿಯಾಗಿಲ್ಲ. ಇಷ್ಟರವರೆಗೆ ಹೇಗೋ ಆಗಿದೆ. ಮುಂದೆ ಪಿಯೂಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು. ವರ್ಷಕ್ಕೆ 15 ಸಾವಿರ ರೂಪಾಯಿ ಫೀಸ್ ಕಟ್ಟಬೇಕು. ಎಂಬಿಬಿಎಸ್ ಮಾಡಿ ವೈದ್ಯೆಯಾಗಬೇಕು ಅನ್ನೋ ಕನಸು ಇಟ್ಟುಕೊಂಡಿದ್ದಾಳೆ ನಿಶಾ.