Tag: art

  • ಡಿ.15ರ ವರೆಗೆ `ಬೆಂಗಳೂರು ಹಬ್ಬ’ – 40 ಕಡೆ 500ಕ್ಕೂ ಅಧಿಕ ಕಾರ್ಯಕ್ರಮ

    ಡಿ.15ರ ವರೆಗೆ `ಬೆಂಗಳೂರು ಹಬ್ಬ’ – 40 ಕಡೆ 500ಕ್ಕೂ ಅಧಿಕ ಕಾರ್ಯಕ್ರಮ

    ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಕಲೆ, ಸಂಸ್ಕೃತಿ, ಸಾಹಿತ್ಯ ಪ್ರೀತಿಯನ್ನು ಅನಾವರಣಗೊಳಿಸುವ ಬೆಂಗಳೂರು ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಮುಂದಿನ 15 ದಿನಗಳ ಕಾಲ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಲೋಕ ಧರೆಗಳಿಯಲಿದೆ. ನಗರದ 40ಕ್ಕೂ ಹೆಚ್ಚು ಕಡೆ ಬೆಂಗಳೂರು ಹಬ್ಬ (Bengaluru Festival) ಅನಾವರಣಗೊಳ್ಳಲಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಶನಿವಾರ (ನ.30) ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ನಮ್ಮ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ನಮ್ಮ ಜಾತ್ರೆ ಕಾರ್ಯಕ್ರಮ ಬೆಂಗಳೂರು ಹಬ್ಬಕ್ಕೆ ನಾಂದಿಯಾಗಿದ್ದು, ಡಿ.15ರ ವರೆಗೆ ಬೆಂಗಳೂರು ಹಬ್ಬವನ್ನು ಆಚರಿಸಲಾಗುತ್ತಿದೆ.

    ಕನ್ನಡ ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರು ಹಬ್ಬ 2ನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸುತ್ತಿದೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಅದ್ದೂರಿ ತೆರೆ – ಲಕ್ಷಾಂತರ ಭಕ್ತರು ಸಾಕ್ಷಿ

    ಬೆಂಗಳೂರು ಹಬ್ಬದಲ್ಲಿ ನಗರದ 40 ಕಡೆ ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರನ್ನು ಮನಸೂರೆಗೊಳಿಸುವ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆರ್ಗನೈಸ್ ಮಾಡಲಾಗಿದೆ. ಪ್ರಮುಖವಾಗಿ ನಗರದ ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ), ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯ ಸಭಾ ಮತ್ತು ಎನ್‌ಜಿಎಂಎನಂತಹ ಜನಪ್ರಿಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ನಮ್ಮ ಜಾತ್ರೆಯಲ್ಲಿ ಭಾಗವಹಿಸಿದ ಕಲಾವಿದರು ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ

    ನಗರದ ವಿವಿಧ ಸ್ಥಳಗಳಲ್ಲಿ ಪ್ರತಿದಿನ 10ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದೆ. ಗೋಡೆ ಚಿತ್ರ, ಕಲಾ ಪ್ರದರ್ಶನ, ಬೆಂಗಳೂರು ಸಮಸ್ಯೆ ಬಗೆಹರಿಸುವ ಬೆಂಗಳೂರು ಚಾಲೆಂಜ್, 38 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೃಹತ್ ಜಾನಪದ ಸಂಗೀತ ಕಾರ್ಯಕ್ರಮ, ಬೊಂಬೆಯಾಟ, ನಾಟಕ ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://blrhubba.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

    ಬೆಂಗಳೂರು ಹಬ್ಬದ ಮತ್ತೊಂದು ವಿಶೇಷ ಅಂದ್ರೆ ಕವಿ ಕುವೆಂಪು ಅವರ 120ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗಲಗಲ ಗದ್ದಲ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ವೇಳೆ ಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ನಮ್ಮ ಮಠ-ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ: ಯತ್ನಾಳ್

  • ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ಪತ್ತೆ; ಶ್ರೀಮಂತರ ಮಕ್ಕಳಲ್ಲಿ ವೈರಸ್‌ ಕಂಡುಬಂದಿದ್ದು ಹೇಗೆ?

    ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ಪತ್ತೆ; ಶ್ರೀಮಂತರ ಮಕ್ಕಳಲ್ಲಿ ವೈರಸ್‌ ಕಂಡುಬಂದಿದ್ದು ಹೇಗೆ?

    ಗಿನ ಮಕ್ಕಳು ಹಾಗೂ ವಿದ್ಯಾರ್ಥಿಗಳ ಪೈಕಿ ಅನೇಕರು ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಈ ಕುರಿತು ಪ್ರತಿನಿತ್ಯ ಮಾಧ್ಯಮಗಳು, ಪತ್ರಿಕೆಗಳು ವರದಿ ಮಾಡುತ್ತಲೇ ಇರುತ್ತವೆ. ಆದರೂ ಕ್ಯಾರೇ ಎನ್ನದೇ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವು ಮಾದಕ ವಸ್ತುಗಳ ಮೊರೆಹೋಗುತ್ತಿದ್ದಾರೆ. ಅದರಲ್ಲೂ ಶ್ರೀಮಂತರ ಮಕ್ಕಳು ದುಡ್ಡಿದೆ ಎಂದು ಸ್ಟೈಲ್‌ ಮಾಡಲು ಹೋಗಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ತ್ರಿಪುರಾ ಜರ್ನಲಿಸ್ಟ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್‌ಎಸಿಎಸ್ (TSACS) ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ವೈರಸ್‌ ಪತ್ತೆಯಾಗಿದ್ದು, 47 ಮಂದಿ ವಿದ್ಯಾರ್ಥಿಗಳು ಏಡ್ಸ್‌ಗೆ ಬಲಿಯಾಗಿದ್ದಾರೆ ಎಂದು ತ್ರಿಪುರಾ (Tripura) ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಕಾರಣವೇನು? ವಿದ್ಯಾರ್ಥಿಗಳಲ್ಲಿ HIV ಸೋಂಕು ಹೇಗೆ ಬಂತು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

    HIV ಎಂದರೇನು?
    HIV (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಒಂದು ರೀತಿಯ ವೈರಸ್ ಆಗಿದೆ. ಅದು ದೇಹವನ್ನು ಪ್ರವೇಶಿಸಿದಾಗ ಅದನ್ನು HIV ಸೋಂಕು ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ರೋಗವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಏಡ್ಸ್‌ ರೋಗ ಉಂಟಾಗುತ್ತದೆ.

    ತ್ರಿಪುರಾದ ವಿದ್ಯಾರ್ಥಿಗಳಲ್ಲಿ HIV ಕಂಡುಬಂದಿದ್ದು ಹೇಗೆ?
    ತ್ರಿಪುರಾ ರಾಜ್ಯದ 220 ಶಾಲೆಗಳು ಹಾಗೂ 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು ಪತ್ತೆಯಾಗಿದೆ ಎಂದಿರುವ ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ, HIV ಸೋಂಕು ಹರಡಲು ಇದೂ ಕಾರಣ ಆಗಿರಬಹುದು ಎಂದು ಊಹಿಸಿದೆ.

    ಈ ಸಂಬಂಧ ತ್ರಿಪುರಾ ರಾಜ್ಯಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರತಿದಿನ ಐದರಿಂದ ಏಳು ಹೊಸ HIV ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಟಿಎಸ್‌ಎಸಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

    ಮೇ 2024ರ ವೇಳೆಗೆ ತ್ರಿಪುರಾದ ART (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರ ಒಟ್ಟು 8,729 HIV ಸೋಂಕಿತ ವ್ಯಕ್ತಿಗಳನ್ನು ನೋಂದಾಯಿಸಿವೆ. ಅದರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬರು ಮಂಗಳಮುಖಿ ಒಳಗೊಂಡಿದ್ದಾರೆ. HIV ಸೋಂಕಿತರ ಪೈಕಿ 5,674 ಜನರು ಜೀವಂತವಾಗಿದ್ದಾರೆ ಎಂದು TSACS ಅಧಿಕಾರಿ ಬಹಿರಂಗಪಡಿಸಿದ್ದಾರೆ.

    ಎಲ್ಲರೂ ಶ್ರೀಮಂತರ ಮನೆ ಮಕ್ಕಳು:
    ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತರ ಮನೆ ಮಕ್ಕಳು. ಈ ವಿದ್ಯಾರ್ಥಿಗಳ ಪೋಷಕರು ಸ್ಥಿತಿವಂತರು. ಸಾಕಷ್ಟು ಮನೆಗಳಲ್ಲಿ ತಂದೆ – ತಾಯಿ ಇಬ್ಬರಿಗೂ ಸರ್ಕಾರಿ ನೌಕರಿ ಇದೆ. ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ಹಣ ನೀಡುತ್ತಾರೆ. ಮಕ್ಕಳ ಎಲ್ಲ ಬೇಕು, ಬೇಡಗಳನ್ನೂ ಈಡೇರಿಸುತ್ತಾರೆ. ಹೀಗಾಗಿ, ಮಕ್ಕಳ ಕೈನಲ್ಲಿ ಸಾಕಷ್ಟು ಹಣ ಓಡಾಡುವ ಕಾರಣ ಅವರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ.

    ಈ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನ ತಮ್ಮ ರಕ್ತನಾಳಗಳಿಗೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುತ್ತಾರೆ. ಒಬ್ಬರು ಬಳಸುವ ಇಂಜೆಕ್ಷನ್ ನೀಡಲ್‌ ಅನ್ನೇ ಬಹುತೇಕರು ಬಳಕೆ ಮಾಡುತ್ತಿದ್ದ ಕಾರಣ ಸುಲಭವಾಗಿ ಎಚ್‌ಐವಿ ಏಡ್ಸ್ ರೋಗಾಣು ಹರಡಿದೆ ಎಂದು ವೈದ್ಯರು ವಿವರಿಸಿದ್ದಾರೆ.

    ಉನ್ನತ ಹುದ್ದೆ ಹೊಂದಿರುವ ಶ್ರೀಮಂತ ಪೋಷಕರು ತಮ್ಮ ಮಕ್ಕಳ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅವರ ಕೈಗೆ ಹೆಚ್ಚೆಚ್ಚು ಹಣ ನೀಡುತ್ತಾರೆ. ಆದರೆ ಮಕ್ಕಳು ಅದನ್ನು ಒಳ್ಳೆಯ ವಿಷಯಕ್ಕೆ ಬಳಸಿಕೊಳ್ಳದೇ ಈ ರೀತಿಯ ಚಟಗಳನ್ನು ಕಲಿತು ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳು ಕೆಟ್ಟ ಚಟಗಳ ದಾಸರಾಗಿದ್ದಾರೆ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ ಕಾಲ ಮೀರಿರುತ್ತದೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರಬಹುದು.

    HIV ಹರಡುವುದು ಹೇಗೆ?
    ಲೈಂಗಿಕ ಸಂಪರ್ಕ, ರಕ್ತ ವರ್ಗಾವಣೆ,ಸೂಜಿಗಳು ಅಥವಾ ಸಿರಿಂಜಿಗಳನ್ನು ಹಂಚಿಕೊಳ್ಳುವುದು, ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ HIV ಹರಡುವ ಸಾಧ್ಯತೆಗಳು ಹೆಚ್ಚು.

    ರೋಗಲಕ್ಷಣಗಳೇನು?
    ಚಳಿ, ಗಂಟಲು ಕೆರತ, ಹುಣ್ಣುಗಳು, ದೇಹದ ನೋವು, ಸ್ನಾಯು ನೋವು, ಸುಸ್ತು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ಒಂದೂವರೆ ತಿಂಗಳವರೆಗೆ ಇರುತ್ತದೆ. ಏಡ್ಸ್ ಸಂಭವಿಸಿದಾಗ, ಎಲ್ಲಾ ರೀತಿಯ ಸೋಂಕುಗಳು ರೋಗಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಮತ್ತು ಈ ಹಂತದಲ್ಲಿ ಅಸಂಖ್ಯಾತ ರೋಗಲಕ್ಷಣಗಳನ್ನು ಕಾಣಬಹುದು.

    ಏಡ್ಸ್ HIV ಸೋಂಕಿನ ಅಂತಿಮ ಮತ್ತು ಅತ್ಯಂತ ಗಂಭೀರ ಹಂತವಾಗಿದೆ. ಏಡ್ಸ್ ಹೊಂದಿರುವ ಜನರು ಕೆಲವು ಬಿಳಿ ರಕ್ತ ಕಣಗಳ ಕಡಿಮೆ ಎಣಿಕೆಗಳನ್ನು ಹೊಂದಿರುತ್ತಾರೆ ಮತ್ತು ತೀವ್ರವಾಗಿ ಹಾನಿಗೊಳಗಾದ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ.

    ಏಡ್ಸ್ ತೂಕ ನಷ್ಟ, ತೀವ್ರ ಸುಸ್ತು, ಬಾಯಿ ಅಥವಾ ಜನನಾಂಗದ ಹುಣ್ಣುಗಳು, ಜ್ವರ, ರಾತ್ರಿ ಬೆವರುವಿಕೆ ಮತ್ತು ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಆಗಲು ಕಾರಣವಾಗಬಹುದು.

    ಚುಂಬನ ಮತ್ತು ತಬ್ಬಿಕೊಳ್ಳುವುದರಿಂದ HIV ಬರುತ್ತಾ?
    ಪರಸ್ಪರ ಚುಂಬಿಸುವುದು ಮತ್ತು ತಬ್ಬಿಕೊಳ್ಳುವುದರಿಂದ HIV ಬರುವುದಿಲ್ಲ. ಆದರೆ ನಿಮ್ಮ ಬಾಯಲ್ಲಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತಸ್ರಾವ ಆಗಿದ್ದು, ನೀವು ಬಾಯಿಗೆ ಬಾಯಿ ಕೊಟ್ಟು ಚುಂಬಿಸುವುದರಿಂದ HIV ಸೋಂಕು ಉಂಟಾಗುವ ಸಾಧ್ಯತೆಗಳಿವೆ. 

    ಇನ್ನು HIV/AIDS ಹೊಂದಿರುವ ವ್ಯಕ್ತಿಯನ್ನು ಸ್ಪರ್ಶಿಸುವುದು ಅಥವಾ ತಬ್ಬಿಕೊಳ್ಳುವುದು, ಸಾರ್ವಜನಿಕ ಸ್ನಾನಗೃಹಗಳು ಅಥವಾ ಈಜುಕೊಳಗಳನ್ನು ಬಳಸುವುದು, HIV/AIDS ಹೊಂದಿರುವ ಯಾರೊಂದಿಗಾದರೂ ಕಪ್‌, ಪಾತ್ರೆಗಳನ್ನು ಹಂಚಿಕೊಳ್ಳುವುದರಿಂದರಿಂದಲೂ ಯಾವುದೇ ರೀತಿಯ ಸೋಂಕು ತಗುಲುವುದಿಲ್ಲ.

    ಚಿಕಿತ್ಸೆ ಏನು?
    ಡಾ.ಉಮಂಗ್ ಅಗರ್ವಾಲ್ ಪ್ರಕಾರ, ಏಡ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಸುಳ್ಳು. ವಾಸ್ತವವಾಗಿ, ನಿರಂತರವಾಗಿ ಎಚ್ಐವಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ, ಈ ವೈರಸ್ ಅನ್ನು ನಿಯಂತ್ರಣದಲ್ಲಿ ಇರಿಸಬಹುದು. ಅದರ ಚಿಕಿತ್ಸೆಯನ್ನು ಮುಂದುವರಿಸುವ ಮೂಲಕ, ಏಡ್ಸ್ ಅನ್ನು ತಪ್ಪಿಸಬಹುದು.

    HIV ಯ ಚಿಕಿತ್ಸೆಯನ್ನು ಆಂಟಿರೆಟ್ರೋವೈರಲ್ ಥೆರಪಿ (ART) ಎಂದು ಕರೆಯಲಾಗುತ್ತದೆ. HIV ಹೊಂದಿರುವ ಪ್ರತಿಯೊಬ್ಬರಿಗೂ ART ಅನ್ನು ಶಿಫಾರಸು ಮಾಡುತ್ತಾರೆ. HIV ಇರುವವರು ಆದಷ್ಟು ಬೇಗ  ಔಷಧಿಗಳನ್ನು ತೆಗೆದುಕೊಳ್ಳಬೇಕು. ಆಂಟಿರೆಟ್ರೋವೈರಲ್ ಥೆರಪಿ HIV ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ  HIV ಯೊಂದಿಗಿನ ಜನರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಅಲ್ಲದೇ HIV ಪ್ರಸರಣದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

    ಚಿಕಿತ್ಸೆಯನ್ನು ಮಧ್ಯದಲ್ಲಿ ಬಿಡುವುದರಿಂದ ಏಡ್ಸ್ ಮರುಕಳಿಸುವಿಕೆಗೆ ಕಾರಣವಾಗಬಹುದು. ಎಚ್ಐವಿ ಚಿಕಿತ್ಸೆಯನ್ನು ಸಮಯಕ್ಕೆ ಪ್ರಾರಂಭಿಸಿದರೆ, ಇತ್ತೀಚಿನ ದಿನಗಳಲ್ಲಿ ಹಲವಾರು ಔಷಧಿಗಳಿವೆ. ಇದು ರೋಗಿಯನ್ನು ಏಡ್ಸ್‌ಗೆ ಬಲಿಯಾಗದಂತೆ ತಡೆಯುತ್ತದೆ.

  • ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಬಾಗಲಕೋಟೆ: ಬೆಳ್ಳಂಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬಾಗಲಕೋಟೆ (Bagalakote) ಜಿಲ್ಲೆ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದ ಲೋಕಣ್ಣ ಬಡಿಗೇರ (Lokanna Badigera).

    ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ಸಂಪೂರ್ಣ ವ್ಯರ್ಥ. ಆದರೂ ಕಲೆಯನ್ನೇ (Art) ನಂಬಿ ಜೀವನ ನಡೆಸುತ್ತಿದೆ ಲೋಕಣ್ಣ ಬಡಿಗೇರ ಕುಟುಂಬ. ತಾತ-ಮುತ್ತಾತಂದಿರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಲ್ಪಕಲಾ ಅಕಾಡೆಮಿಗಳಿಂದ ಸಹಾಯ ಕೋರಿದ್ದಾರೆ.

    ನೋಡುಗರ ಕಣ್ಣಿಗೆ ಬರೀ ಕಲ್ಲು ಕಂಡರೆ, ಶಿಲ್ಪಿಯ (Sculptor) ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.

    ದಿನಕ್ಕೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. 1 ಮೂರ್ತಿ ರೂಪುಗೊಳ್ಳಲು ಎರಡರಿಂದ ನಾಲ್ಕು ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ, 9 ಅಡಿ ಉದ್ದದ ಮೂರ್ತಿಯವರೆಗೂ ಶಿಲ್ಪ ಕೆತ್ತನೆ ಮಾಡುತ್ತಾರೆ.

    ಕಲಾವಿದ ಲೋಕಣ್ಣ ಬಡಿಗೇರ ಅವರ ಕಲಾಕುಸುರಿಯಿಂದ ಶಿವ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ವಾಲ್ಮೀಕಿ ಮೂರ್ತಿಗಳು, ಸಿದ್ಧಾರೊಢ, ಶಿವಾಜಿ, ವೀರಭದ್ರೇಶ್ವರ, ಗಣಪತಿ, ಬುದ್ಧ, ಬಸವ ಸೇರಿದಂತೆ ದೇವಸ್ಥಾನದ ದ್ವಾರಗಳು ಸಿದ್ಧಗೊಂಡಿವೆ. ಇವರ ಕೈಯಿಂದ ಅರಳಿದ ಕಲಾಕೃತಿಗಳು ಹೈದರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದಾಗಿದೆ.

    ಈ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಶಿಲ್ಪಕಲಾವಿದ ಲೋಕಣ್ಣ ಬಡಿಗೇರ, ತನಗೆ ಶಿಲ್ಪಕಲೆ ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಈ ಕಲೆಯೇ ಜೀವನಾಧಾರ. 20 ವರ್ಷಗಳಿಂದ ನಾನು ಶಿಲ್ಪಕಲೆ ಮತ್ತು ಕ್ಲೇ ಮೋಡ್ಲಿಂಗ್ (ಮಣ್ಣಿನ ಮೂರ್ತಿ) ಮಾಡುತ್ತಿದ್ದೇನೆ. ಈ ಶಿಲ್ಪಕಲೆ ನಮ್ಮ ಅಜ್ಜಿ ಮುತ್ತಜ್ಜನ ಕಾಲದಿಂದಲೂ ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇವೆ. 20 ವರ್ಷದಲ್ಲಿ ಸಾವಿರಾರು ಮೂರ್ತಿ ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದೇನೆ. ಜನರು ಬಂದು ತಮ್ಮಿಷ್ಟದ ಮೂರ್ತಿ ಮಾಡಿಸಿಕೊಂಡು ಹೋಗ್ತಾರೆ. ಆದ್ರೆ, ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಆದರೀಗ ಕಲ್ಲಲ್ಲಿ ಕಲೆಯನ್ನು ಅರಳಿಸುವ‌ ಕಲಾವಿದನಿಗೆ ಸರ್ಕಾರದ ನೆರವು ಬೇಕಿದೆ. ಲೋಕಣ್ಣ ಬಡಿಗೇರ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂಬುದು ಕಲಾಪ್ರಿಯರ ಒತ್ತಾಸೆ.

  • 16ರ ಬಾಲಕಿಯಿಂದ 8 ಬಾರಿ ಅಂಡಾಣು ಮಾರಾಟ – 4 ಆಸ್ಪತ್ರೆಗಳು ಶಾಶ್ವತ ಬಂದ್

    16ರ ಬಾಲಕಿಯಿಂದ 8 ಬಾರಿ ಅಂಡಾಣು ಮಾರಾಟ – 4 ಆಸ್ಪತ್ರೆಗಳು ಶಾಶ್ವತ ಬಂದ್

    ಚೆನ್ನೈ: 16 ವರ್ಷದ ಬಾಲಕಿಯಿಂದ ಅಕ್ರಮವಾಗಿ ಅಂಡಾಣು ಪಡೆದು ಮಾರಾಟ ಮಾಡಿದ ಆರೋಪದ ಮೇಲೆ ತಮಿಳುನಾಡಿನ 4 ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.

    ಬಾಲಕಿಯ ತಾಯಿಯು ಅಕೆಯ ಅಂಡಾಣುಗಳನ್ನು 8 ಬಾರಿ ವಿವಿಧ ಕೇಂದ್ರಗಳಿಗೆ ದಾನ ಮಾಡುವಂತೆ ಒತ್ತಾಯಿಸಿದ್ದಳು ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ತಮಿಳುನಾಡು ಸಿಎಂಗೆ ಕೋವಿಡ್ – ಆಸ್ಪತ್ರೆಗೆ ದಾಖಲು

    21-35 ವಯೋಮಾನದ ಮಹಿಳೆಯರಿಗೆ ಒಂದು ಬಾರಿ ಮಾತ್ರವೇ ಅಂಡಾಣು ದಾನ ಮಾಡಲು ಅನುಮತಿಯಿದೆ. ಆದರೆ ಈ ಪ್ರಕರಣದಲ್ಲಿ ಬಾಲಕಿಯನ್ನು ಹಲವು ಬಾರಿ ಅಂಡಾಣು ಪಡೆಯಲು ಬಲವಂತ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯನ್ನು ವಯಸ್ಕಳೆಂದು ತೋರಿಸಲು ನಕಲಿ ಆಧಾರ್ ಕಾರ್ಡ್ ಮಾಡಿಸಲಾಗಿದ್ದು, ನಕಲಿ ಗಂಡನ ಒಪ್ಪಿಗೆಯನ್ನೂ ಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್‌ ಸರ್ಕಾರ ಸ್ಥಾಪನೆ – ಪೊಲೀಸರಿಗೆ ಸಿಕ್ತು ಹೀಗೊಂದು ದಾಖಲೆ

    ಆಸ್ಪತ್ರೆಗಳು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸಿವೆ. ಅಲ್ಲದೆ, ಆಸ್ಪತ್ರೆಗಳು ಅರ್ಹ ಸಲಹೆಗಾರರನ್ನು ಹೊಂದಿಲ್ಲ, ಅಂಡಾಣು ದಾನಿ ಹುಡುಗಿಗೆ ಕಾರ್ಯವಿಧಾನದ ಸಾಧಕ-ಬಾಧಕಗಳ ಬಗ್ಗೆಯೂ ತಿಳಿಸಿಲ್ಲ ಎಂಬುದನ್ನು ವಿಚಾರಣಾ ಸಮಿತಿ ಕಂಡುಹಿಡಿದಿದೆ. ಹಾಗಾಗಿ ಆಧಾರ್ ದುರ್ಬಳಕೆ ಮತ್ತು ಪೋಕ್ಸೋ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣದಲ್ಲಿ ಭಾಗಿಯಾದ ಆಸ್ಪತ್ರೆಗಳಿಗೆ ವೈದ್ಯರೂ ಸೇರಿದಂತೆ 50 ಲಕ್ಷ ರೂ. ವರೆಗೆ ದಂಡ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆಯಡಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ಆರೋಗ್ಯ ಸಚಿವರು ವಿವರಿಸಿದ್ದಾರೆ. ಇದನ್ನೂ ಓದಿ: ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲವು ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆ ಸ್ಥಗಿತಗೊಳಿಸಲು 2 ವಾರಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೆ ಆಸ್ಪತ್ರೆಗಳು ರಾಜ್ಯ ಆರೋಗ್ಯ ವಿಮಾ ಯೋಜನೆಯಡಿ ತಮ್ಮ ಎಂಪನೆಲ್‌ಮೆಂಟ್ (ಕೇಂದ್ರಸರ್ಕಾರದ ವಿಮೆ ಯೋಜನೆಗಳಿಗೆ ಆಯ್ಕೆಯಾದವರ ಪಟ್ಟಿ) ಅನ್ನು ಸಹ ಕಳೆದುಕೊಳ್ಳುತ್ತವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

    ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

    ಮಡಿಕೇರಿ: ಕೊಡಗಿನ ಗಡಿ ಭಾಗ ಕಾರ್ಮಾಡುವಿನಲ್ಲಿ ವನವಾಸಿ ಜನರು ಗಿರಿ ಜನೋತ್ಸವದ ಅದ್ಧೂರಿ ಕಾರ್ಯಕ್ರಮ ನಡೆಸಿದರು.

    ಗಿರಿಜನರನ್ನು ಒಂದು ಕಡೆ ಸೇರಿಸುವ ಉದ್ದೇಶದಿಂದ ಮತ್ತು ಗಿರಿ ಜನರ ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮೈಸೂರಿನ ರಂಗಯಣ ಮತ್ತು ವನವಾಸಿ ಕಲ್ಯಾಣ ಕೇಂದ್ರ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಪೋನ್ನಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ರಾಜ್ಯಮಟ್ಟದ ಗಿರಿಜನೊತ್ಸವ ಕಾರ್ಯಕ್ರಮ ನಡೆಸಿದರು. ವನವಾಸಿಗಳು ಕಾಡಿನಲ್ಲಿ ಪ್ರಕೃತಿಯನ್ನು ಪೂಜಿಸಿತ್ತಾ ಕಾಡಿನಲ್ಲೇ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.

    ಅವರ ಆಚಾರ, ವಿಚಾರ, ಕಲೆ, ಸಂಸ್ಕೃತಿ ಶ್ರೀಮಂತವಾಗಿದ್ದು ಆಧುನಿಕ ಯುಗದಲ್ಲಿ ಕಲೆಯನ್ನು ಉಳಿಸಲು ಯುವ ಪೀಳಿಗೆಯಲ್ಲಿ ಕಲೆಯನ್ನು ಬೆಳೆಸುವ ಉದ್ದೇಶದಿಂದ ಹಲವಾರು ಕಲಾ ತಂಡಗಳನ್ನು ಒಂದು ಕಡೆ ಸೇರಿಸಿ 10ಕ್ಕೂ ಹೆಚ್ಚು ಕಲಾ ತಂಡಗಳು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಿದರು. ರಂಗಾಯಣ ನಡೆ ಗಿರಿಜನರೆಡೆಗೆ ಎಂದು ಘೋಷ ವಾಖ್ಯಾ ಇಟ್ಟುಕೊಂಡು ಗಿರಿ ಜನರ ಕಡೆಗೆ ಹೋಗುತ್ತಿದ್ದೇವೆ ಎಂದು ರಂಗಾಯಣ ನಿರ್ದೇಶಕ ಅಡಂಡ್ಡ ಕಾರ್ಯಪ್ಪ ಎಂದರು.

    ಕೊಡಗು ಜಿಲ್ಲೆಯ ಕಾಡು ಕುರುಬ. ಮಲೆಕುಡಿಯ ಯರವ ಜನಾಂಗದ ಆದಿವಾಸಿಗಳು ಸೇರಿದಂತೆ ಮೈಸೂರು, ಚಾಮರಾಜನಗರ, ದಕ್ಷಿಣಕನ್ನಡ, ಮಂಡ್ಯ, ರಾಮನಗರದ ಗಿರಿಜನ ಕಲಾ ತಂಡಗಳು ಅವರ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು ನೃತ್ಯ ಮಾಡಿದರು. ಪೂಜಕುಣಿತ, ಯರವರಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಯರವ ಕುಣಿತ ಪರೆಕೊಟ್ ಹೀಗೆ ಮುಂತಾದ ನೃತ್ಯಗಳನ್ನು ಕಾಡಿನಲ್ಲಿ ಸಿಕ್ಕುವ ಪರಿಕರಗಳನ್ನು ಬಳಸಿಕೊಂಡು ಹಾಡು ಹಾಡುತ್ತಾ ನೃತ್ಯ ಮಾಡುತ್ತಾ ನೆರೆದಿದ್ದ ಪ್ರೇಕ್ಷಕರಿಗೆ ಕಲಾರುಚಿಯನ್ನು ಉಣಬಡಿಸಿದರೆ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.

    ಒಟ್ಟಿನಲ್ಲಿ ಆಧುನಿಕ ನೃತ್ಯಗಳನ್ನು ನೋಡಿ ಬೇಸತ್ತಿದ್ದ ಜನರು ಹಲವು ಜಿಲ್ಲೆಯ ಕಲಾತಂಡಗಳ ಸಂಸ್ಕøತಿಯನ್ನು ಬಿಂಬಿಸುವ ಜಾನಪದ ನೃತ್ಯಗಳನ್ನು ನೋಡಿ ಸಖತ್ ಎಂಜಾಯ್ ಮಾಡಿದರು. ಇನ್ನೂ ಕಲಾವಿದರಂತೂ ಬೇರೆ ಸಂಸ್ಕೃತಿ ಬಿಂಬಿಸುವ ಕಲೆಗಳನ್ನು ನೋಡಿ ಖುಷಿಪಟ್ಟರು.

  • ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಪಬ್ಲಿಕ್ ಹೀರೋ, ಯೋಗ ಸಾಧಕಿ ತನುಶ್ರೀಗೆ ಉಡುಪಿ ರಾಜ್ಯೋತ್ಸವ ಪ್ರಶಸ್ತಿ ಗರಿ

    ಉಡುಪಿ: ಯೋಗ ಸಾಧಕಿ, ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ, ಡ್ರಾಮ ಜೂನಿಯರ್ ಕಲಾವಿದೆ ಶ್ರಾವ್ಯ ಮರವಂತೆ ಸೇರಿದಂತೆ 36 ಸಾಧಕರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

    ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ನಾಲ್ಕು ಸಂಘಸಂಸ್ಥೆ ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಇಲ್ಲಿದೆ.

    ದೈವಾರಾಧನೆ: ಶ್ರೀರಂಗ ಪಾಣಾ, ಮೋಂಟು ಪಾಣರ, ಮಂಜುನಾಥ ಶೇರಿಗಾರ.
    ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್, ವಸಂತ ಪೂಜಾರಿ ಮುನಿಯಾಲು, ದಿನಕರ ಭಂಡಾರಿ ಕಣಜಾರು
    ಸಾಹಿತ್ಯ: ನವೀನ್ ಸುವರ್ಣ ಪಡ್ರೆ
    ಯಕ್ಷಗಾನ: ಸುದರ್ಶನ ಉರಾಳ, ಶಶಿಕಲಾ ಪ್ರಭು, ನಾಗೇಶ್ ಗಾಣಿಗ
    ಪತ್ರಿಕೋದ್ಯಮ: ಉದಯ ಶಂಕರ ಪಡಿಯಾರ್, ಆರ್ ಶ್ರೀಪತಿ ಹೆಗಡೆ ಹಕ್ಲಾಡಿ
    ಶೈಕ್ಷಣಿಕ: ಡಾ ಕೆ ಗೋಪಾಲಕೃಷ್ಣ ಭಟ್, ಡಾ ಸುಧಾಕರ ಶೆಟ್ಟಿ, ಡಾ ಸುಧೀರ್ ರಾಜ್ ಕೆ
    ಸಂಕೀರ್ಣ: ಪೂರ್ಣಿಮಾ ಜನಾರ್ದನ್ ಕೊಡವೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಹರಿಪ್ರಸಾದ್ ರೈ
    ಯೋಗ : ಶೇಖರ ಕಡ್ತಲ
    ಕಲೆ (ಕರಕುಶಲ): ಬಾಬು ಕೊರಗ
    ಕಲೆ ಕಾಷ್ಟ ಶಿಲ್ಪ: ಶ್ರೀಪತಿ ಆಚಾರ್ಯ


    ಕಲೆ, ಪೆನ್ಸಿಲ್ ಲೆಡ್ ಕಲೆ : ಸುರೇಂದ್ರ
    ಕಲೆ (ಶಿಲ್ಪಕಲೆ): ರಾಧಾ ಮಾಧವ ಶೆಣೈ
    ವೈದ್ಯಕೀಯ : ಡಾ ಎಂ ರವಿರಾಜ್ ಶೆಟ್ಟಿ
    ಸಂಗೀತ: ಪ್ರಕಾಶ್ ದೇವಾಡಿಗ, ಮಾಯಾ ಕಾಮತ್
    ನೃತ್ಯ: ವಿಧೂಷಿ ಯಶ ರಾಮಕೃಷ್ಣ, ಕಿಶೋರ್ ದೇವಾಡಿಗ
    ಸಮಾಜಸೇವೆ: ಇಮ್ತಿಯಾಝ್, ಕೂಸ ಕುಂದರ್, ಜಯಂತ್ ರಾವ್, ನಾರಾಯಣ ಮೂರ್ತಿ
    ಕ್ರೀಡೆ: ಶರತ್ ಶೆಟ್ಟಿ, ನಾಗಶ್ರೀ ಗಣೇಶ್ ಶೇರುಗಾರ
    ಬಾಲಪ್ರತಿಭೆ: ತನುಶ್ರೀ ಪಿತ್ರೋಡಿ, ಕು. ಶ್ರಾವ್ಯ ಮರವಂತೆ
    ಸಂಘ ಸಂಸ್ಥೆ: ಸ್ವಚ್ಚ್ ಭಾರತ್ ಫ್ರೆಂಡ್ಸ್ ಉಡುಪಿ, ಉಮಾಮಹೇಶ್ವರ ಭಜನಾ ಮಂದಿರ ಅಂಬಲಪಾಡಿ, ಉಡುಪಿ, ದುರ್ಗಾಪರಮೇಶ್ವರಿ ಫ್ರೇಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ವೆಂಕಟರಮಣ ಸ್ಪೋಟ್ರ್ಸ್ & ಕಲ್ಚರಲ್ಸ್ ಪಿತ್ರೋಡಿ ಉದ್ಯಾವರ.

  • ಮರಳಲ್ಲಿ ಮೂಡುತಿದೆ ಹಂಪಿ, ತಾಜ್‍ಮಹಲ್

    ಮರಳಲ್ಲಿ ಮೂಡುತಿದೆ ಹಂಪಿ, ತಾಜ್‍ಮಹಲ್

    ಬಳ್ಳಾರಿ: ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿವಿಧ ಕಲೆಗಳ ಸಮಾಗಮವೂ ನಡೆಯುತ್ತಿದೆ. ಎಂದಿನಂತೆ ಈ ಬಾರಿಯು ಮರಳು ಕಲಾ ಪ್ರದರ್ಶನವನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದೆ.

    ಕಮಲಾಪುರ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಸಜ್ಜಾಗುತ್ತಿರುವ ಮರಳು ಕಲಾ ಪ್ರದರ್ಶನವು ಈ ಬಾರಿಯ ಮುಖ್ಯ ಆಕರ್ಷಣೆ ಆಗಲಿದೆ. ಒರಿಸ್ಸಾ ಕಲಾವಿದ ನಾರಾಯಣ ಸಾಹು ನೇತೃತ್ವದ ತಂಡವು ಮರಳಲ್ಲಿ ಹಂಪಿ ವಿರುಪಾಕ್ಷ ದೇವಾಲಯದ ಗೋಪುರ, ಉಗ್ರನರಸಿಂಹ, ಆನೆಲಾಯ ಮತ್ತು ಹಂಪಿಯ ಕಲ್ಲಿನ ರಥವನ್ನು ಮರಳಲ್ಲಿ ನಿರ್ಮಿಸಲಾಗುತ್ತಿದೆ.

    ಜೊತೆಗೆ ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ಹಾಗೂ ಇತರ ಸ್ಮಾರಕಗಳನ್ನು ನೈಜತೆಯಿಂದ ಮರಳಲ್ಲಿ ಅರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮರಳು ಕಲಾ ಪ್ರದರ್ಶನವು 2 ದಿನಗಳ ಕಾಲ ಉತ್ಸವದಲ್ಲಿ ಮೆರಗನ್ನು ನೀಡಲಿದೆ. ಕಳೆದ ಉತ್ಸವದಲ್ಲಿ ಮರಳು ಕಲಾಕೃತಿಗಳು ಹಾರ್ಟ್ ಫೆವರೇಟ್ ಆಗಿತ್ತು. ಈ ಬಾರಿಯೂ ಹೆಚ್ಚು ಜನರನ್ನು ಈ ಕಲಾಕೃತಿಗಳು ಸೆಳೆಯಲಿವೆ.

  • ಟಿ.ವಿಗಳ ಪ್ರಭಾವದಿಂದ ಪರಂಪರಾಗತ ಕಲೆ, ಸಂಸ್ಕೃತಿಗಳು ನಾಶದತ್ತ: ಅಧ್ಯಕ್ಷ ಕರಿಯಣ್ಣನವರ್

    ಟಿ.ವಿಗಳ ಪ್ರಭಾವದಿಂದ ಪರಂಪರಾಗತ ಕಲೆ, ಸಂಸ್ಕೃತಿಗಳು ನಾಶದತ್ತ: ಅಧ್ಯಕ್ಷ ಕರಿಯಣ್ಣನವರ್

    -ಯುವ ಸೌರಭ ಕಾರ್ಯಕ್ರಮಕ್ಕೆ ಚಾಲನೆ

    ಹಾವೇರಿ: ಟಿವಿ ಮಾಧ್ಯಮಗಳ ಪ್ರಭಾವದಿಂದ ಭಾರತೀಯ ಪಾರಂಪರಿಕ ಕಲೆ, ಸಾಹಿತ್ಯ, ಸಂಸ್ಕೃತಿ ವಿನಾಶದತ್ತ ಸಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಯುವ ಸೌರಭ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್.ಜೆ.ಎಂ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಗುರುವಾರ ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಹಾಡು, ನೃತ್ಯ, ಭರತನಾಟ್ಯ ದಂತಹ ಕಲೆಗಳು ರಾಮಾಯಣ ಮಹಾಭಾರತದಂತಹ ಸಾಹಿತ್ಯಿಕ ಕೃತಿಗಳು ನಮ್ಮ ಪರಂಪರೆಯನ್ನು ಬಿಂಬಿಸುತ್ತವೆ. ಇಂತಹ ಅದ್ಭುತ ಕಲೆಗಳು, ಸಾಹಿತ್ಯಗಳು, ನಮ್ಮ ಜನರ ಮಾನಸಿಕ ನೆಮ್ಮದಿ ಹಾಗೂ ಸಂತೋಷಕ್ಕೆ ಕಾರಣವಾಗಿದ್ದವು. ಈ ಪರಂಪರೆಯನ್ನು ಬೆಳೆಸಲು ಯುವಸೌರಭ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಯುವಪೀಳಿಗೆ ಇಂತಹ ವೇದಿಕೆಯನ್ನು ಬಳಸಿಕೊಂಡು ನಮ್ಮ ಪರಂಪರೆ ಉಳಿಸಬೇಕು ಎಂದು ಕರೆನೀಡಿದರು.

    ಹೊಸಮಠದ ಬಸವಶಾಂತಲಿಂಗ ಮಾಹಾಸ್ವಾಮಿಗಳು ಮಾತನಾಡಿ, ಭಾರತ ಕಲೆಗಳ ತವರೂರು. ಕಲೆಗೆ ಸೋಲದ ಮನಸುಗಳಿಲ್ಲ. ಎಂತ ಕಲ್ಲು ಮನಸ್ಸಿನ ವ್ಯಕ್ತಿಯೂ ಕೂಡ ತಲೆಬಾಗಲೇಬೇಕು. ವ್ಯಾಪಾರ ಕುಸಿತವಾದರೆ ಅಮೆರಿಕ ದೇಶ ನಾಶವಾಗುತ್ತದೆ. ರಾಜಕೀಯ ಕುಸಿತವಾದರೆ ಯುರೋಪ್ ದೇಶ ನಾಶವಾಗುತ್ತದೆ ಹಾಗೂ ತಂತ್ರಜ್ಞಾನ ವ್ಯವಸ್ಥೆ ಹಾಳಾದರೆ ಜಪಾನ್ ನಾಶವಾಗುತ್ತದೆ. ಅದೇ ರೀತಿ ಕಲೆ ಸಂಸ್ಕೃತಿ ಸಂಸ್ಕಾರ ಕುಸಿದರೆ ಭಾರತ ದೇಶವೇ ನಾಶವಾಗುತ್ತದೆ. ಭಾರತ ದೇಶದ ಕಲೆ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಎಲ್ಲರ ಶ್ರದ್ಧೆ ಶ್ರಮ ಹಾಗೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.

    ತಾಲೂಕಿನ ಪಿಎಲ್‍ಡಿ ಬ್ಯಾಂಕ್‍ನ ಅಧ್ಯಕ್ಷರಾದ ಮಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಶಿಕಲಾ ಹುಡೇದ, ಹಾಗೂ ಎಸ್.ಜೆ.ಎಂ ಕಾಲೇಜಿನ ಪ್ರಾಚಾರ್ಯರಾದ ಪಿ.ಬಿ.ವಿಜಯಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಗೀರಿಶ್ ಬಡಿಗೇರ್ ವಿಕ್ರಮ್‍ರಿಂದ ತಬಲಾ ಸೋಲೋ, ಗಾಯತ್ರಿ ಪತ್ರಿಮಠ ಹಾಗೂ ಗಾಯತ್ರಿ ಮಾಯಾಚಾರ್ ಅವರಿಂದ ಹಿಂದೂಸ್ತಾನಿ ಸಂಗೀತ, ದೊಂಡಾಸಾ ಕಲಬುರ್ಗಿ ಹಾಗೂ ವಾರಿಣಿ ವಿ ಮನ್ನಾರಿ ಅವರಿಂದ ಸುಗಮ ಸಂಗೀತ, ಹನುಮಂತಪ್ಪ ಕರಾವಳಿ ಅವರಿಂದ ಜಾನಪದ ಸಂಗೀತ, ವಿದ್ಯಾಶ್ರೀ ಚವ್ಹಾಣ ಅವರಿಂದ ಜೋಗಿಪದ, ಶರಣಪ್ಪ ಬಡ್ಡಿಯವರಿಂದ ಭರತನಾಟ್ಯ, ದಿವ್ಯಾ ನಾಯಕ್ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಶ್ರೀಕಾಂತ್ ಅವರಿಂದ ನಂದಿಕೋಲು, ಹಜರತ್‍ಸಾಬ್ ಯಲಿಗಾರ ಅವರಿಂದ ಹೆಜ್ಜೆಮೇಳ, ಬಿ.ಸಿ.ವೆಂಕಟಾಪುರುಮಠ ಅವರಿಂದ ಕಥಾಕೀರ್ತನ ಹಾಗೂ ಜಮುರ ಕಲಾತಂಡದಿಂದ ಸಾಯೋ ಆಟ ನಾಟಕ ಪ್ರದರ್ಶನಗಳು ಜರುಗಿದವು.

  • ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಕಾರವಾರ: ಸಮುದ್ರ ತೀರದಲ್ಲಿ ಮೋಜು ಮಸ್ತಿ ಮಾಡಿ ಬಿಸಾಡಿದ ಮದ್ಯದ ಬಾಟಲ್‍ನಲ್ಲಿ ಕುಮಟಾ ಯುವ ಬ್ರಿಗೇಡ್ ಕಲಾಕೃತಿ ನಿರ್ಮಾಣ ಮಾಡಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಕರಾವಳಿಯ ಕಡಲ ತೀರ, ಇಲ್ಲಿನ ಸುಂದರ ಸಮುದ್ರಗಳನ್ನು ನೋಡಲು ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ. ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಬಂದರೆ, ಕೆಲವರು ಮೋಜು ಮಸ್ತಿ ಮಾಡಲು ಕಡಲ ಕಿನಾರೆಗೆ ಬರುತ್ತಾರೆ. ಹೀಗೆ ಪ್ರವಾಸದ ನೆಪದಲ್ಲಿ ಸಮುದ್ರ ತೀರಕ್ಕೆ ಬಂದು ಮದ್ಯ ಸೇವಿಸಿ ಬಾಟಲ್‍ಗಳನ್ನು ಕಡಲ ಕಿನಾರೆಯಲ್ಲಿಯೇ ಬಿಸಾಡಿ ಹೋಗುತ್ತಾರೆ. ಹೀಗೆ ಬಿಸಾಡಿದ ಮದ್ಯದ ಬಾಟಲ್‍ಗಳು ಸಮುದ್ರ ತೀರದ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ಇಲ್ಲಿನ ಪರಿಸರದ ಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟದ ವನ್ನಳ್ಳಿ ಸಮುದ್ರ ತೀರದಲ್ಲಿ ಪ್ರತಿದಿನ ಮದ್ಯದ ಬಾಟಲ್‍ಗಳನ್ನು ಹೆಕ್ಕಿ ಸ್ವಚ್ಛ ಮಾಡುತ್ತಿದ್ದರು.

    ಹೀಗೆ ಹೆಕ್ಕಿದ ಮದ್ಯದ ಬಾಟಲ್‍ಗಳೇ ಸಾವಿರಾರು ಇದ್ದು, ಇದನ್ನು ತ್ಯಾಜ್ಯ ಘಟಕಕ್ಕೆ ರವಾನೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಕಾರಣದಿಂದ ಕುಮಟಾ ಯುವ ಬ್ರಿಗೇಡ್ ಯುವಕರು ವನಳ್ಳಿ ಕಡಲ ತೀರದ ಸುತ್ತಮುತ್ತ ಬಿದ್ದಿರುವ ಮದ್ಯ ಬಾಟಲ್‍ಗಳನ್ನು ತಂದು ಶೇಕರಿಸಿ ಸುಮುದ್ರ ತೀರದಲ್ಲಿ ಮದ್ಯದ ಬಾಟಲ್‍ಗಳಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದಾರೆ.

    ಕುಡಿದು ಬಿಸಾಡಿದ ಮದ್ಯದ ಬಾಟಲ್‍ನಿಂದ ಇಡೀ ಕಡಲ ತೀರದಲ್ಲಿ ಕಲಾಕೃತಿ ನಿರ್ಮಾಣ ಮಾಡುತಿದ್ದು, ಸಮುದ್ರ ತೀರವನ್ನು ಸ್ವಚ್ಛವಾಗಿಡಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಹೊರಟಿದ್ದು, ಮೊದಲ ಹಂತವಾಗಿ ಮದ್ಯದ ಬಾಟಲ್‍ಗಳ ಕಲಾಕೃತಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಲಾಕೃತಿ ನೋಡಿಯಾದರೂ ಪ್ರವಾಸಿಗರು ಸಮುದ್ರ ತೀರವನ್ನು ಸ್ವಚ್ಛವಾಗಿಡಲಿ ಎಂಬುದು ಬ್ರಿಗೇಡ್ ಟೀಮ್‍ನ ಯುವಕರ ಆಶಯವಾಗಿದೆ.

  • ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಕಲೆ, ಸಂಸ್ಕೃತಿಗಾಗಿ ಸರ್ಕಾರಿ ನೌಕರಿಗೆ ಗುಡ್‍ಬೈ ಅಂದ್ರು ಹಗರಿಬೊಮ್ಮನಹಳ್ಳಿಯ ರಾಜಾರಾವ್

    ಬಳ್ಳಾರಿ: ರಾಜ್ಯದಲ್ಲಿ ಎಷ್ಟೋ ಮಂದಿ ಎಲೆಮರೆ ಕಾಯಿಯಂತೆ ಕಲಾವಿದರಿದ್ದಾರೆ. ಈ ರೀತಿಯಿದ್ದ ನೂರಾರು ಕಲಾವಿದರನ್ನ ಪ್ರವರ್ಧಮಾನಕ್ಕೆ ಕರೆ ತಂದಿದ್ದು, ಅದಕ್ಕಾಗಿ ಸರ್ಕಾರಿ ಸೇವೆಗೆ ಗುಡ್‍ಬೈ ಹೇಳಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    ಹಗರಿಬೊಮ್ಮನಹಳ್ಳಿ ನಿವಾಸಿ ತಟ್ಟಿ ರಾಜಾರಾವ್ ಅವರು ಬಳ್ಳಾರಿಯ ಬಹುತೇಕ ಕಲಾವಿದರಿಗೆ ಚಿರಪರಿಚಿತರು. ಗ್ರಾಮೀಣ ಕಲೆ-ಕಲಾವಿದರ ಉಳಿಸಿಲು ಪಣತೊಟ್ಟು, ಸರ್ಕಾರಿ ನೌಕರಿಗೆ ಗುಡ್‍ಬೈ ಹೇಳಿದ್ದಾರೆ. ಪಿಯುಸಿ ಓದಿರುವ ಇವರಿಗೆ 1976ರಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಸಹಾಯಕರ ಕೆಲಸ ಸಿಕ್ಕಿತ್ತು. ಆದರೆ ವಿಆರ್‍ಎಸ್ ಪಡೆದಿದ್ದಾರೆ. ಕುಕನೂರ ರಹೀಮಾನವ್ವ ನಾಟಕ ಕಂಪನಿ, ಗುಡಿಗೇರಿ ಎನ್ ಬಸವರಾಜರ ನಾಟಕ ಕಂಪನಿ, ಸುಳ್ಳ ದೇಸಾಯಿಯವರ ನಾಟಕ ಕಂಪನಿಗಳಲ್ಲಿ ರಂಗಗೀತೆ, ಜಾನಪದ ಹಾಡುಗಳನ್ನ ಹಾಡುತ್ತಿದ್ದ ಇವರಿಗೆ ಕಲೆಯೇ ಜಗತ್ತು ಆಗಿದೆ.

    ಹಳ್ಳಿ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ನಿರ್ಮಿಸಿಕೊಡ್ತಿದ್ದಾರೆ. ಸೋಬಾನೆ ಪದದ ಹಾಡುಗಾರರು, ಸುಡುಗಾಡು ಸಿದ್ದರು, ಡೊಳ್ಳು ಕುಣಿತ, ಬಯಲಾಟ, ದೊಡ್ಡಾಟ, ಕೋಲಾಟ, ಸುಗ್ಗಿ ಹಾಡುಗಳು ಸೇರಿದಂತೆ ಹಳ್ಳಿ ಸೊಗಡಿನ ಕಲಾವಿದರನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿದ್ದಾರೆ.

    ಇವರಿಂದ ತರಬೇತಿ ಪಡೆದ ನೂರಾರು ಕಲಾವಿದರು ರಾಜ್ಯದೆಲ್ಲೆಡೆ ಕಲಾಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮಾಸಾಶನವೂ ಸಿಗುವಂತೆ ಮಾಡಿದ್ದಾರೆ. ರಾಜಾರಾವ್‍ರ ಕಲಾಸೇವೆಗೆ ಪತ್ನಿ ಜ್ಯೋತಿ ಸಹ ಸಾಥ್ ನೀಡಿದ್ದಾರೆ.

    https://www.youtube.com/watch?v=3cSjfiSR810

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews