Tag: Arshad Nadeem

  • ನೀರಜ್‌ ಚೋಪ್ರಾ ನನ್ನ ಮಗನಿದ್ದಂತೆ: ಒಲಿಂಪಿಕ್ಸ್‌ ಚಿನ್ನ ಗೆದ್ದ ಪಾಕ್‌ನ ನದೀಮ್‌ ತಾಯಿ ಪ್ರತಿಕ್ರಿಯೆ

    ನೀರಜ್‌ ಚೋಪ್ರಾ ನನ್ನ ಮಗನಿದ್ದಂತೆ: ಒಲಿಂಪಿಕ್ಸ್‌ ಚಿನ್ನ ಗೆದ್ದ ಪಾಕ್‌ನ ನದೀಮ್‌ ತಾಯಿ ಪ್ರತಿಕ್ರಿಯೆ

    ಇಸ್ಲಾಮಾಬಾದ್:‌ ನೀರಜ್‌ ಚೋಪ್ರಾ (Neeraj Chopra) ನನ್ನ ಮಗನಿದ್ದಂತೆ. ಅವನಿಗಾಗಿಯೂ ನಾನು ಪ್ರಾರ್ಥಿಸುತ್ತೇನೆ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್‌ ನದೀಮ್‌ (Arshad Nadeem) ತಾಯಿ ಹೇಳಿದ್ದಾರೆ.

    ಒಲಿಂಪಿಕ್ಸ್‌ (Paris Olympics 2024) ಜಾವೆಲಿನ್‌ ಥ್ರೋ ಕುರಿತು ನದೀಮ್‌ ತಾಯಿ ಮಾತನಾಡುವಾಗ, ನೀರಜ್‌ ಚೋಪ್ರಾ ಕೂಡ ನನ್ನ ಮಗನಿದ್ದಂತೆ. ಅವನು ನದೀಮ್‌ನ ಸ್ನೇಹಿತ, ಸಹೋದರನೂ ಹೌದು. ಗೆಲುವು ಮತ್ತು ಸೋಲುಗಳು ಕ್ರೀಡೆಯ ಭಾಗವಾಗಿದೆ. ದೇವರು ಅವರನ್ನು ಆಶೀರ್ವದಿಸಲಿ. ಪದಕಗಳನ್ನು ಗೆಲ್ಲಲಿ. ಅವರಿಬ್ಬರು ಸಹೋದರರಂತೆ. ನಾನು ನೀರಜ್‌ಗಾಗಿಯೂ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics | ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್‌

    ನದೀಮ್‌ಗೆ ನೀಡಿದ ಬೆಂಬಲಕ್ಕಾಗಿ, ನನ್ನ ಮಗನಿಗಾಗಿ ಅವರು ಸಲ್ಲಿಸಿದ ಪ್ರಾರ್ಥನೆಗಳಿಗಾಗಿ ನಾನು ಇಡೀ ಪಾಕಿಸ್ತಾನಕ್ಕೆ ಕೃತಜ್ಞಳಾಗಿದ್ದೇನೆ ಎಂದು ಭಾವುಕವಾಗಿ ನದೀಮ್‌ ತಾಯಿ ಮಾತನಾಡಿದ್ದಾರೆ.

    ನೀರಜ್ ತಾಯಿ ಸರೋಜ ಕೂಡ, ಅರ್ಷದ್ ನನ್ನ ಮಗನಂತೆ ಎಂದು ಹೇಳಿದ್ದಾರೆ. ಈಗ ಅರ್ಷದ್ ತಾಯಿ ಕೂಡ ಅದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ನನ್ನ ಸ್ವಂತ ಮಗನನ್ನು ನೋಡುವ ರೀತಿಯಲ್ಲಿಯೇ ನೀರಜ್‌ನನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಭಾರತ ಪುರುಷರ ಹಾಕಿ ತಂಡಕ್ಕೆ ಕಂಚು

    ಪಾಕಿಸ್ತಾನದ ಇತಿಹಾಸದಲ್ಲೇ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್‌ ಅರ್ಷದ್‌ ಆಗಿದ್ದಾರೆ. ಇತ್ತ ಬ್ಯಾಕ್‌-ಟು-ಬ್ಯಾಕ್‌ ವೈಯಕ್ತಿಕ ಒಲಿಂಪಿಕ್ಸ್‌ ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್‌ ಆಗಿ ನೀರಜ್‌ ಹೊರಹೊಮ್ಮಿದ್ದಾರೆ.

    ನಾವು ಬೆಳ್ಳಿ ಪದಕದಿಂದ ತುಂಬಾ ಸಂತೋಷವಾಗಿದ್ದೇವೆ. ಚಿನ್ನ ಗೆದ್ದವರು ಕೂಡ ನಮ್ಮ ಮಗನಿದ್ದಂತೆ. ಬೆಳ್ಳಿ ಗೆದ್ದವರು ಕೂಡ ನಮ್ಮ ಮಗ. ಎಲ್ಲರೂ ಕ್ರೀಡಾಪಟುಗಳು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ನೀರಜ್‌ ತಾಯಿ ಸರೋಜ್ ಪ್ರತಿಕ್ರಿಯಿಸಿದ್ದಾರೆ.

    ನದೀಮ್ ಕೂಡ ಒಳ್ಳೆಯವನು. ಅವನು ಚೆನ್ನಾಗಿ ಆಡುತ್ತಾನೆ. ನೀರಜ್ ಮತ್ತು ನದೀಮ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾವು ಚಿನ್ನ ಮತ್ತು ಬೆಳ್ಳಿಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಚೋಪ್ರಾ ಮತ್ತು ನದೀಮ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದರೂ ಮೈದಾನದ ಹೊರಗೆ ಉತ್ತಮ ಸ್ನೇಹಿತರು. ನೀರಜ್ ವಾಸ್ತವವಾಗಿ ನದೀಮ್‌ಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಇದನ್ನೂ ಓದಿ: ವಿನೇಶ್‌ ಫೋಗಟ್‌ಗೆ 4 ಕೋಟಿ ರೂ. ಬಹುಮಾನ – ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಕಲ ಸಿದ್ಧತೆ

  • Paris Olympics | ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್‌

    Paris Olympics | ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್‌

    ಪ್ಯಾರಿಸ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತದ ನೀರಜ್‌ ಚೋಪ್ರಾ (Neeraj Chopra) ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ (Javelin) ಎಸೆತದಲ್ಲಿ ಬೆಳ್ಳಿ (Silver) ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.

     

    ನೀರಜ್‌ ಚೋಪ್ರಾ 89.45 ಮೀಟರ್‌ ದೂರ ಎಸೆದರೆ ಪಾಕಿಸ್ತಾನದ ಅರ್ಶದ್‌ ನದೀಂ (Arshad Nadeem) 92.97 ಮೀಟರ್‌ ದೂರ ಎಸೆದು ಚಿನ್ನದ ಪದಕ ಪಡೆದರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ 88.54 ಮೀಟರ್ಸ್ ದೂರ ಥ್ರೋ ಮಾಡಿ ಕಂಚು ಪಡೆದರು.

    2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. 6 ಅವಕಾಶಗಳ ಪೈಕಿ 5 ಪ್ರಯತ್ನಗಳಲ್ಲಿ ಫೌಲ್‌ ಆಗಿದ್ದ ನೀರಜ್‌ ಎರಡನೇ ಪ್ರಯತ್ನದಲ್ಲಿ 89.45 ಮೀಟರ್‌ ದೂರ ಎಸೆದರು.

     

    ನೀರಾಜ್‌ ಬೆಳ್ಳಿ ಗೆಲ್ಲುವುದರೊಂದಿಗೆ ಭಾರತ ಈ ಕೂಟದಲ್ಲಿ ಒಟ್ಟು ಐದು ಪದಕ ಗೆದ್ದಿದೆ. ಉಳಿದ ನಾಲ್ಕು ಕಂಚಿನ ಪದಕವಾಗಿದ್ದು ಗುರುವಾರ ಹಾಕಿಯಲ್ಲಿ ಸ್ಪೇನ್‌ ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.

    ಅರ್ಶದ್‌ ನದೀಂ ಅವರು ಚಿನ್ನ ಗೆಲ್ಲುವುದರೊಂದಿಗೆ ಪಾಕಿಸ್ತಾನ ಈ ಒಲಿಂಪಿಕ್ಸ್‌ ಟೂರ್ನಿಯಲ್ಲಿ ಮೊದಲ ಪದಕ ಪಡೆಯಿತು.

  • India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Athletics Championship) ಜಾವೆಲಿನ್ ಥ್ರೋನಲ್ಲಿ (Javelin Throw) ಭಾರತದ ನೀರಜ್ ಚೋಪ್ರಾ (Neeraj Chopra) ಚಿನ್ನ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಾಕಿಸ್ತಾನದ (Pakistan) ಅರ್ಷದ್ ನದೀಮ್ (Arshad Nadeem) 2ನೇ ಸ್ಥಾನ ಪಡೆದು ಬೆಳ್ಳಿ ಗೆದ್ದಿದ್ದಾರೆ.

    ಐತಿಹಾಸಿಕ ಸಾಧನೆಯಲ್ಲೂ ನೀರಜ್ ಚೋಪ್ರಾ ಪಾಕಿಸ್ತಾನದ ಪ್ರತಿಸ್ಪರ್ಧಿಯ ಸಾಧನೆಯನ್ನೂ ಕೊಂಡಾಡಿದ್ದಾರೆ. ಈ ಹಿಂದೆ ಜಾವೆಲಿನ್ ಎಸೆತದಲ್ಲಿ ಯುರೋಪಿಯನ್ ರಾಷ್ಟ್ರಗಳಷ್ಟೇ ಮುಂದಿದ್ದವು. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನವೂ ಆ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನೀರಜ್ ಚೋಪ್ರಾ, ನಾನು ಸ್ಪರ್ಧೆಗೂ ಮುನ್ನ ನನ್ನ ಮೊಬೈಲ್ ಅನ್ನು ಹೆಚ್ಚು ಬಳಸುವುದಿಲ್ಲ. ಆದರೆ ಇಂದು ನಾನು ನೋಡಿದೆ. ಈ ವೇಳೆ ನನ್ನ ಗಮನಸೆಳೆದ ಮೊದಲ ವಿಷಯವೆಂದರೆ ಭಾರತ ಮತ್ತು ಪಾಕಿಸ್ತಾನ. ಯುರೋಪಿಯನ್ ಅಥ್ಲೀಟ್‌ಗಳು ತುಂಬಾ ಅಪಾಯಕಾರಿ ಮತ್ತು ಯಾವುದೇ ಸಮಯದಲ್ಲಿ ದೊಡ್ಡ ಮುನ್ನಡೆ ಸಾಧಿಸಬಹುದು. ಹೀಗಾಗಿ ನಾವು ಕೊನೆಯ ಎಸೆತದವರೆಗೂ ಇತರ ಸ್ಪರ್ಧಿಗಳ ಬಗ್ಗೆ ಯೋಚಿಸುತ್ತಲೇ ಇರಬೇಕಾಗುತ್ತದೆ. ಆದರೆ ಈ ಬಾರಿ ಭಾರತ ಮತ್ತು ಪಾಕಿಸ್ತಾನದ ಹೋಲಿಕೆ ಮನೆಯಂತಹ ಅನುಭವ ನೀಡಿತು ಎಂದು ಚೋಪ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತದೆ. ಆದರೆ ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಮೆರೆದಿದ್ದ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿರುವ ಸಾಧನೆ ಮುಖ್ಯವಾದುದು. ಭಾರತ ಹಾಗೂ ಪಾಕಿಸ್ತಾನ ದೊಡ್ಡ ಸ್ಥಾನವನ್ನು ಗಳಿಸಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಅರ್ಷದ್ ತುಂಬಾ ಚೆನ್ನಾಗಿ ಸ್ಪರ್ಧಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಮ್ಮ ಎರಡೂ ದೇಶಗಳು ಈಗ ಹೇಗೆ ಬೆಳೆಯುತ್ತಿವೆ ಎಂದು ನಾವು ಚರ್ಚಿಸಿದ್ದೇವೆ. ಮೊದಲು ಈ ಸ್ಥಾನಕ್ಕೆ ಯುರೋಪಿಯನ್ ಕ್ರೀಡಾಪಟುಗಳಷ್ಟೇ ಬರಲು ಸಾಧ್ಯವಿತು. ಈಗ ನಾವು ಆ ಮಟ್ಟವನ್ನು ತಲುಪಿದ್ದೇವೆ ಎಂದು ನೀರಜ್ ಸಂತಸ ವ್ಯಕ್ತಪಡಿಸಿದ್ದಾರೆ.

    ಭಾರತದ ಬೀರಜ್ ಹಾಗೂ ಪಾಕಿಸ್ತಾನದ ಅರ್ಷದ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಬಲ್ಲಿ ಭಾರೀ ಪೈಪೋಟಿ ನಡೆಸಿದ್ದಾರೆ. ನೀರಜ್ ಫೈನಲ್‌ನಲ್ಲಿ ಜಾವೆಲಿನ್ ಅನ್ನು 88.17 ಮೀ. ದೂರ ಎಸೆದು ವಿಜಯಿಯಾದರೆ, ಅರ್ಷದ್ 87.82 ಮೀ. ಎಸೆದು 2ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]