Tag: Arrests

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಮೂವರು ಅರೆಸ್ಟ್

    ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಮೂವರು ಅರೆಸ್ಟ್

    ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ನಗರದ ಹೊರವಲಯದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

    ಸಂಜಯ ಭೈರಪ್ಪ ಮಾಳಿ, ಅರುಣ್ ಜೈಪಾಲ ಶೇಕಣ್ಣವರ್, ಖಂಡೋಬಾ ಚವ್ಹಾಣ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ 5 ಜನ ಮಹಿಳೆಯರನ್ನ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    POLICE

    ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೃಷ್ಣವೇಣಿ ಗುರ್ಲಹೊಸೂರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

  • ಉಗ್ರ ಸಂಘಟನೆಯೊಂದಿಗೆ ಸಂಪರ್ಕ- ಶಿರಸಿ ಯುವಕನನ್ನು ಬಂಧಿಸಿದ ಎನ್‍ಐಎ

    ಉಗ್ರ ಸಂಘಟನೆಯೊಂದಿಗೆ ಸಂಪರ್ಕ- ಶಿರಸಿ ಯುವಕನನ್ನು ಬಂಧಿಸಿದ ಎನ್‍ಐಎ

    ಕಾರವಾರ: ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

    28 ವರ್ಷದ ಸೈಯದ್ ಇದ್ರಿಸ್ ನಬಿ ಸಾಬ್ ಬಂಧಿತ ಆರೋಪಿಯಾಗಿದ್ದಾನೆ. ಲಷ್ಕರ್-ಎ-ತೊಯ್ಬಾದ ಸಂಘಟನೆಯಲ್ಲಿ ಗುರುತಿಸಿಕೊಂಡು ಪಶ್ಚಿಮಬಂಗಾಳದಲ್ಲಿ ಬಂಧಿಯಾಗಿದ್ದ ತಾನಿಯಾ ಪರ್ವೀನ್ ಎನ್ನುವವನೊಂದಿಗೆ ಈತ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ.

    ಮೊಬೈಲ್ ಫೋನ್ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ. ಎನ್‍ಐಎ ಪ್ರಾಥಮಿಕ ತನಿಖೆಯ ಪ್ರಕಾರ ಈತ ಐಎಸ್‍ಐ ಉಗ್ರ ಸಂಘಟನೆಯೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಬಂಧಿಸಿ ಕೋಲ್ಕತ್ತಾಗೆ ಕರೆದೊಯ್ದಿದ್ದಾರೆ.

    ಬಂಧನ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್‍ಐಎ, ಬಂಧಿತ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಗಳು ನಿರ್ವಹಿಸುತ್ತಿದ್ದ ವಿವಿಧ ಸಾಮಾಜಿಕ ಜಾಲತಾಣಗಳ ಗುಂಪುಗಳ ಭಾಗವಾಗಿದ್ದು, ಇವುಗಳನ್ನು ಭಯೋತ್ಪಾದಕ ಚಟುವಟಿಕೆ ಮತ್ತು ಎಲ್‍ಇಟಿ ಉಗ್ರ ಸಂಘಟನೆಯ ಸ್ಪೀಪರ್ ಸೆಲ್ ಆಗಿ ನೇಮಕ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗಿತ್ತು. ಆರೋಪಿಯನ್ನು ಕೋಲ್ಕತ್ತಾ ಎನ್‍ಐಎ ಕೋರ್ಟಿನಲ್ಲಿ ಹಾಜರುಪಡಿಸಲು ಕರೆದ್ಯೊಲಾಗುತ್ತಿದೆ ಎಂದು ತಿಳಿಸಿದೆ.

  • ಶಿಕ್ಷಣ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ – 20ಕ್ಕೂ ಹೆಚ್ಚು ರೈತರ ಬಂಧನ

    ಶಿಕ್ಷಣ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ – 20ಕ್ಕೂ ಹೆಚ್ಚು ರೈತರ ಬಂಧನ

    ಚಾಮರಾಜನಗರ: ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯಲ್ಲಿ ಸಚಿವ ಸುರೇಶ್ ಕುಮಾರ್ ಗೆ ರೈತಸಂಘದ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

    ಪೊಲೀಸರು 20ಕ್ಕೂ ಹೆಚ್ಚು ರೈತ ಸಂಘದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹಿಂತೆಗೆದುಕೊಳ್ಳಬೇಕು. ಅಲ್ಲದೇ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಭೆ ಕರೆಯಬೇಕು ಎಂದು ಒತ್ತಾಯ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

    ರಾಷ್ಟ್ರಿಯ ಹೆದ್ದಾರಿ 209ರ ಮೂಲಕ ಸಚಿವರು ಚಾಮರಾಜನಗರಕ್ಕೆ ಬರುತ್ತಿರುವ ವಿಷಯ ತಿಳಿದ ರೈತರು, ಮಂಗಲ ಗ್ರಾಮದ ಬಳಿ ಅವಿತು ಸಚಿವರು ಬರುತ್ತಿದ್ದಂತೆ ವಾಹನ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಸೇರಿದಂತೆ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

  • ಮುಖ್ಯಮಂತ್ರಿಗೆ ಮನವಿ ನೀಡಲು ಬಂದ ರೈತರ ಬಂಧನ

    ಮುಖ್ಯಮಂತ್ರಿಗೆ ಮನವಿ ನೀಡಲು ಬಂದ ರೈತರ ಬಂಧನ

    ಹಾವೇರಿ: ಸಾಲಮನ್ನಾ ಹಾಗೂ ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ ರೈತರನ್ನ ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಹಾನಗಲ್ ತಾಲೂಕು ಬಾಳಂಬೀಡ ಮತ್ತು ಹಿರೇಕಾಂಶಿ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಸಿಎಂಗೆ ಮನವಿ ನೀಡಲು ಹೋಗುತ್ತಿರೋ 20ಕ್ಕೂ ಅಧಿಕ ರೈತರನ್ನ ಪೊಲೀಸರು ಬಂಧಿಸಿದ್ದಾರೆ.

    ರಾಜ್ಯದ ರೈತರಿಗೆ ಸಾಲಮನ್ನಾ ಯೋಜನೆ, ರೈತರಿಗೆ ಹೊಸ ಸಾಲವನ್ನ ಬ್ಯಾಂಕ್‍ನಲ್ಲಿ ನೀಡುತ್ತಿಲ್ಲ, ಬೆಳೆ ವಿಮೆ ಹಾಗೂ ಪರಿಹಾರ ಸಿಕ್ಕಿಲ್ಲ, ಅಲ್ಲದೆ ಪೊಲೀಸ್ ಇಲಾಖೆಯ ಔರಾದಕರ್ ವರದಿಯನ್ನ ಜಾರಿಗೆ ಮಾಡಬೇಕು ಎಂದು ರೈತ ಮುಖಂಡ ಹನುಮಂತ ಕಬ್ಬಾರ ಆಗ್ರಹಿಸಿದ್ದಾರೆ.

  • ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಬೆಳಗಾವಿ(ಚಿಕ್ಕೋಡಿ): ನಕಲಿ ನೋಟು ಸರಬರಾಜು ಮಾಡುತ್ತಿದ್ದ 5 ಅಂತರಾಜ್ಯ ಕಳ್ಳರನ್ನು ಬೆಳಗಾವಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ. ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಂಕೇಶ್ವರ ಠಾಣೆಯ ಪೊಲೀಸರು ಐವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರದ ಅಮರ್ ಶಂಕರ್ ಅಂಬೇಕರ(28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ದೈರ್ಯಶೀಲ ಬಾಬುರಾವ್ ಪಾಟೀಲ್(42), ಬಾಬಾಸೋ ವಸಂತ್ ಪಾಟೀಲ್(31), ನಿಪ್ಪಾಣಿ ಪಟ್ಟಣದ ರಾಜೇಶ್ ಮಾರುತಿ ಮೋಹಿತೆ(48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ್ ಶಂಕರ್ ತೇಲಿ(50) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೋಟಿನ ಬಂಡಲ್ ಮೇಲೆ ಕೆಳಗೆ 500ರೂ. ಮುಖ ಬೆಲೆಯ ನೋಟು ಇಟ್ಟು ಮಧ್ಯದಲ್ಲಿ ನೋಟಿನ ಮಾದರಿಯ ಬಿಳಿ ಹಾಳೆಗಳನ್ನು ಇಡಲಾಗಿದೆ.

    ಇಂತಹ 12 ಬಂಡಲ್ ನಕಲಿ ನೋಟು ಪತ್ತೆಯಾಗಿವೆ. ಪ್ರತಿ ಬಂಡಲ್ ನಲ್ಲಿ 2 ಲಕ್ಷ ರೂ. ನಕಲಿ ನೋಟುಗಳಿವೆ ಎಂದು ನಂಬುವ ಹಾಗೆ ಮಾಡಿ 1 ಲಕ್ಷ ರೂ. ಅಸಲಿ ನೋಟು ಕೊಟ್ಟರೆ 3 ಲಕ್ಷ ರೂ. ನಕಲಿ ನೋಟು ಕೊಡುವುದಾಗಿ ನಂಬಿಸಿ, ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಕಲಿ ನೋಟಿನ ಬಂಡಲ್‍ನ ಎರಡೂ ಬದಿಗೆ ಅಸಲಿ ನೋಟು ಕಾಣುವ ರೀತಿಯಲ್ಲಿ ಬಣ್ಣ ಮಾಡಿ ಪ್ಲಾಸ್ಟಿಕ್‍ನಿಂದ ಸುತ್ತಿಡಲಾಗಿತ್ತು. ಒಟ್ಟು 12 ಸಾವಿರ ರೂ. ಅಸಲಿ ನೋಟು ಮತ್ತು 23.88 ಲಕ್ಷ ರೂ. ನಕಲಿ ನೋಟನ್ನು ಪೊಲೀಸರಿಂದ ವಶ ಪಡಿಸಿಕೊಳ್ಳಲಾಗಿದೆ.

    ದಾಳಿ ಸಂದರ್ಭದಲ್ಲಿ ನೋಟುಗಳ ಜೊತೆಗೆ ಸಾಗಾಣಿಕೆಗೆ ಬಳಸುತ್ತಿದ್ದ ಬುಲೇರೋ ಜೀಪ್, ಸುಜುಕಿ ಸ್ವಿಫ್ಟ್ ಕಾರು ಹಾಗೂ 5 ವಿವಿಧ ಕಂಪನಿಯ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಸಿಲಿಕಾನ್ ಸಿಟಿಯಲ್ಲಿ ನಡೆದ ‘ಆಪರೇಷನ್ ಬಾಂಗ್ಲಾ’ ಹಿಂದಿದೆ ರೋಚಕ ಸ್ಟೋರಿ

    ಸಿಲಿಕಾನ್ ಸಿಟಿಯಲ್ಲಿ ನಡೆದ ‘ಆಪರೇಷನ್ ಬಾಂಗ್ಲಾ’ ಹಿಂದಿದೆ ರೋಚಕ ಸ್ಟೋರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದು, ಅವರನ್ನು ಬಲೆಗೆ ಬೀಳಿಸಲು ಸಿಟಿ ಸ್ಪೆಷಲ್ ಬ್ರ್ಯಾಂಚ್ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದು ಹೇಗೆ ಎನ್ನುವ ರೋಚಕ ಸ್ಟೋರಿಯೊಂದು ಬಹಿರಂಗಗೊಂಡಿದೆ.

    ಅಕ್ರಮವಾಗಿ ವಲಸೆ ಬಂದ ಬಾಂಗ್ಲಾದೇಶಿಯರನ್ನು ಪತ್ತೆಹಚ್ಚಲು ಸಿಟಿ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಉಪಯೋಗಿಸಿದ ಮಾಸ್ಟರ್ ಪ್ಲಾನ್ ರಾಮ ಬಾಣವಾಗಿದೆ. ಹತ್ತಾರು ದಿನಗಳ ಕಾಲ ಚರ್ಚೆ ಮಾಡಿ ಚಕ್ರವ್ಯೂಹ ರಚಿಸಿದ್ದ ಸಿಟಿ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು, ಬೆಂಗಳೂರಿಗೆ ಅಕ್ರಮವಾಗಿ ವಲಸೆ ಬಂದಿದ್ದ ಬಾಂಗ್ಲಾದೇಶಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಂಗ್ಲಾದವರನ್ನ ಪತ್ತೆ ಮಾಡಲು ಬಿಬಿಎಂಪಿ ಅಧಿಕಾರಿಗಳ ವೇಷದಲ್ಲಿ ಪೊಲೀಸರು ಹೋಗಿದ್ದರು. ಪಾಲಿಕೆ ಕಡೆಯಿಂದ ನಿಮಗೆ ಮನೆ, ಸೈಟ್, ವಿದ್ಯುತ್ ವ್ಯವಸ್ಥೆ ಮಾಡಿಕೊಡೊದಾಗಿ ಬಾಂಗ್ಲಾದವರಿಗೆ ಅಮಿಷವೊಡ್ಡಿ ಸತ್ಯ ಹೊರ ತಂದಿದ್ದಾರೆ.

    ಪೊಲೀಸರು ಅಂಗೈಯಲ್ಲಿ ಚಂದ್ರನ ತೋರಿಸಿದ್ದೆ ತಡ ಅಕ್ರಮ ವಲಸಿಗರು ಪಟ ಪಟ ಅಂತ ತಮ್ಮ ಜಾತಕ ಬಿಚ್ಚಿಟ್ಟಿದ್ದಾರೆ. ಸತತ ಹತ್ತು ದಿನಗಳ ಕಾಲ ಬಿಬಿಎಂಪಿ ಅಧಿಕಾರಿಗಳ ಹೆಸರಲ್ಲೇ ಕಾರ್ಯಚರಣೆ ನಡೆಸಿ, ಅಕ್ರಮ ಬಾಂಗ್ಲಾ ವಲಸಿಗರ ಹಾಟ್ ಸ್ಪಾಟ್‍ಗಳಾದ ಮಾರತ್ತಹಳ್ಳಿ, ರಾಮಮೂರ್ತಿ ನಗರದ ನೆಲೆಗಳ ವಿವರ ಪಡೆದು, ಸಿಸಿಬಿ ಕೈಗೆ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಕೊಟ್ಟಿದ್ದರು. ಸಿಟಿ ಸ್ಪೆಷಲ್ ಬ್ರ್ಯಾಂಚ್ ಕೊಟ್ಟ ಮಾಹಿತಿ ಮೇರೆಗೆ ಅಕ್ರಮವಾಗಿ ನೆಲೆಸಿದ್ದ 60 ಮಂದಿಯನ್ನ ಸಿಸಿಬಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ವೀಲ್ಹಿಂಗ್ ಮಾಡ್ತಿದ್ದ 12 ಮಂದಿ ಬೈಕ್ ಸವಾರರ ಬಂಧನ

    ವೀಲ್ಹಿಂಗ್ ಮಾಡ್ತಿದ್ದ 12 ಮಂದಿ ಬೈಕ್ ಸವಾರರ ಬಂಧನ

    ಬೆಂಗಳೂರು: ರೋಡ್‍ಗಳಲ್ಲಿ ವೀಲ್ಹಿಂಗ್ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಸಾರಿ ಸಾರಿ ಹೇಳಿದರೂ ಯುವ ಪೀಳಿಗೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗೆ ಸೋಮವಾರ ಸಿಲಿಕಾನ್ ಸಿಟಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 12 ಮಂದಿ ಬೈಕ್ ಸವಾರರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

    ಹೆಬ್ಬಾಳ, ಆರ್.ಟಿ.ನಗರ, ಯಲಹಂಕ, ನೆಲಮಂಗಲ, ಹೆರಘಟ್ಟ, ರಸ್ತೆಯಲ್ಲಿ ತಡರಾತ್ರಿ ಮಫ್ತಿಯಲ್ಲಿ ಪೊಲೀಸರ ತಂಡ ರೋಡಿಗಿಳಿದಿತ್ತು. ಈ ವೇಳೆ ರಾತ್ರಿ ರೋಡಿನಲ್ಲಿ 15ಕ್ಕೂ ಹೆಚ್ಚು ಬೈಕ್ ಸವಾರರು ವೀಲ್ಹಿಂಗ್ ಮಾಡುತ್ತಿರುವುದು ಖಾಕಿ ಕಣ್ಣಿಗೆ ಬಿದ್ದಿದೆ. ಆಗ ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನತ್ತಿ ಹೋಗಿ ಸೆರೆಹಿಡಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ

    ಈ ಹಿಂದೆ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿತ್ತು. ಸ್ಕೂಟಿಗಳಲ್ಲಿ ಯುವಕರು ಆಗಸ್ಟ್ 4ರಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗ ಥಳಿಸಿದ್ದರು. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲ್ಹಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು.

    https://www.youtube.com/watch?v=mrzf9pynAio

  • ಸಿಲಿಕಾನ್ ಸಿಟಿ ಜನರೇ ಎಚ್ಚರ- ಬೆಂಗ್ಳೂರಿಗೆ ಕಾಲಿಟ್ಟಿದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್

    ಸಿಲಿಕಾನ್ ಸಿಟಿ ಜನರೇ ಎಚ್ಚರ- ಬೆಂಗ್ಳೂರಿಗೆ ಕಾಲಿಟ್ಟಿದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್

    -ಮನೆ ಮುಂದೆ ನಿಲ್ಲಿಸುವ ಕಾರುಗಳೇ ಟಾರ್ಗೆಟ್
    -ಆನ್‍ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡ್ತಿದ್ರು

    ಬೆಂಗಳೂರು: ಮನೆ ಮುಂದೆ ಕಾರ್ ನಿಲ್ಲಿಸುವ ಸಿಲಿಕಾನ್ ಸಿಟಿ ಮಂದಿ ಎಚ್ಚರದಿಂದಿರಿ. ಯಾಕಂದ್ರೆ ಬೆಂಗಳೂರಿಗೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್ ಕಾಲಿಟಿದ್ದು, ಕೇವಲ 5 ನಿಮಿಷದಲ್ಲಿ ನಿಮ್ಮ ಕಾರು ಕದ್ದು ಎಸ್ಕೇಪ್ ಆಗುತ್ತಾರೆ.

    ಹೌದು. ಈ ಖರ್ತನಾಕ್ ಗ್ಯಾಂಗ್ ಯೂಟ್ಯೂಬ್ ಪ್ರಿಯರು, ಯೂಟ್ಯೂಬ್ ನಿಂದಲೇ ಲಕ್ಷಾಂತರ ರೂ. ಸಂಪಾದನೆ ಮಾಡಿದವರು. ಆ ಯ್ಯೂಟ್ಯೂಬ್ ನಿಂದಲೇ ಈಗ ಜೈಲನ್ನೂ ಕೂಡ ಸೇರಿದ್ದಾರೆ. ಆಶ್ಚರ್ಯ ಎನಿಸಿದರು ಇದು ನಿಜ. ಈ ಖತರ್ನಾಕ್ ಕಳ್ಳರು ಯೂಟ್ಯೂಬ್ ನೋಡಿಕೊಂಡೆ ಕಳ್ಳತನ ಮಾಡುತ್ತಾರೆ. ಯಾವ ಕಾರು ಕದಿಯೋಕೆ ಯಾವ ಟೆಕ್ನಿಕ್ ಬೇಕು ಅನ್ನೋದು ಯೂಟ್ಯೂಬ್ ವಿಡಿಯೋಗಳನ್ನು ನೋಡಿಯೇ ಫೈನಲ್ ಮಾಡಿ, ಮನೆ ಮುಂದೆ ನಿಲ್ಲಿಸುವ ಕಾರುಗಳನ್ನು ಸಲೀಸಾಗಿ ಕದ್ದು ಪರಾರಿಯಾಗಿ ಬಿಡುತ್ತಿದ್ದರು.

    ಈ ಕುಖ್ಯಾತ ಕಾರು ಕಳ್ಳರ ಗ್ಯಾಂಗ್‍ನಲ್ಲಿದ್ದ ಮೂವರು ಸದ್ಯ ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ದಿಲೀಶ್, ಶಾಜಿ ಕೇಶವನ್, ಆಲಿ ಅಹಮ್ಮದ್ ಎಂದು ಗುರುತಿಸಲಾಗಿದೆ. ನಗರದ ಹಲವೆಡೆ ಸುಮಾರು 9ಕ್ಕೂ ಹೆಚ್ಚು ಕಾರನ್ನ ಆರೋಪಿಗಳು ಕಳ್ಳತನ ಮಾಡಿದ್ದರು. ಬಂಧಿತ ಆರೋಪಿ ದಿಲೀಶ್ ಆನ್ ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡಿ, ತರಿಸಿ ಅದರ ಮೂಲಕ ಕಾರುಗಳನ್ನು ಕದಿಯುತ್ತಿದ್ದ. ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರ್ ಗ್ಲಾಸ್‍ನ್ನ ಒಡೆದು ಸ್ಟೇರಿಂಗ್ ವಯರ್‍ಗೆ ಕೀ ಓಪನರ್ ಅಟಾಚ್ ಮಾಡಿ ಈ ಗ್ಯಾಂಗ್ ಕಳ್ಳತನ ಮಾಡುತ್ತಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಮೂವರು ಖತರ್ನಾಕ್ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಯೂಟ್ಯೂಬ್ ಮೂಲಕ ಕಾರು ಕಳ್ಳತನ ಮಾಡುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಈ ಗ್ಯಾಂಗ್ ಕದ್ದ ಕಾರುಗಳನ್ನ ಮಂಗಳೂರು, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಕಾರು ಕಳ್ಳತನಕ್ಕೂ ಮುನ್ನ ಮೂರು, ಮೂರು ಬಾರಿ ವಿಡಿಯೋ ಅನ್ನು ಕೂಲಂಕುಷವಾಗಿ ನೋಡಿ ಕಳ್ಳತನಕ್ಕೆ ಆರೋಪಿಗಳು ತಯಾರಾಗುತ್ತಿದ್ದರು. ಕಾರು ಯಾವ ಮಾಡೆಲ್ ಇದೆ. ಹೇಗೆ ಕಳ್ಳತನ ಮಾಡಬಹುದು ಅನ್ನೋದನೆಲ್ಲಾ ಯೂಟ್ಯೂಬ್‍ನಲ್ಲಿ ನೋಡಿಕೊಂಡು, ಅದರಲ್ಲಿ ಇರುವ ಪ್ಲಾನ್ ರೀತಿಯಲ್ಲಿಯೇ ಕಾರನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು ಎಂದು ಪೊಲೀಸರ ಬಳಿ ಕಳ್ಳರು ಹೇಳಿದ್ದಾರೆ.

    ಜೊತೆಗೆ ಖತರ್ನಾಕ್ ಗ್ಯಾಂಗ್ ಸಾಕಷ್ಟು ಪ್ರಕರಣಗಳನ್ನು ಇದೇ ರೀತಿ ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ. ಈ ಕಳ್ಳರು ಅದೆಷ್ಟು ಖತರ್ನಾಕ್ ಎಂದರೆ ಯೂಟ್ಯೂಬ್ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿಟ್ಟುಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.

     

  • 51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಸಿಐಡಿ ಅರಣ್ಯ ಘಟಕದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಉಜಿರೆಯ ಎ.ಎಂ ಆಬ್ರಾಹಂ, ಕಣ್ಣೂರಿನ ಸುರೇಶ್ ಬಾಬು ಮತ್ತು ಹಾಸನದ ರಮೇಶ್ ಎಂದು ಗುರುತಿಸಲಾಗಿದೆ. ಉಜಿರೆಯ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳಿಂದ 51  ಕೆಜಿ ತೂಕದ 10 ಆನೆ ದಂತಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ಆಬ್ರಾಹಂ ಕೋವಿಯಿಂದ ಆನೆಗಳನ್ನು ಕೊಂದು ದಂತಗಳನ್ನು ಸಂಗ್ರಹಿಸುತ್ತಿದ್ದ. ಅನೆಗಳನ್ನು ಕೊಂದು ದಂತಗಳನ್ನು ಮಂಗಳೂರಿನ ಅನ್ವರ್ ಎಂಬಾತನ ಮೂಲಕ ಕರಾವಳಿ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದ. ಬಂಧಿತರಿಂದ 10 ಆನೆ ದಂತ, ಒಂದು ಕೋವಿ ಮತ್ತು 8 ಜೀವಂತ ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

    ಈ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅನ್ವರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

  • ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ- ನಾಲ್ವರ ಬಂಧನ

    ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ- ನಾಲ್ವರ ಬಂಧನ

    ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪುತ್ತೂರಿನ ಆರ್ಯಾಪು ನಿವಾಸಿಗಳಾದ ಕಿರಣ್(36), ಚರಣ್(26), ಉಳ್ಳಾಲ ನಿವಾಸಿ ಪ್ರೀತೇಶ್(28) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಅತ್ತಾವರ ನಿವಾಸಿ ಸ್ಟೀವನ್ ಮೊಂತೇರೊನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಹಿಂಜಾವೇ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ(30) ಅವರನ್ನು ಹಣಕಾಸು ವಿಚಾರದಲ್ಲಿ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಕೊಲೆ ಮಾಡಿದ್ದರು.

    ಮಂಗಳವಾರ ಸಂಪ್ಯ ಪೊಲೀಸ್ ಠಾಣೆ ಮುಂಭಾಗ ಗಣೇಶೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸಾರ್ವಜನಿಕರ ಎದುರಲ್ಲೇ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.

    ಕಾರ್ತಿಕ್ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಹಣವನ್ನು ಪಡೆದಿದ್ದರು. ಈ ವಿಚಾರಕ್ಕೆ ಕಾರ್ತಿಕ್ ಜೊತೆ ಕಿರಣ್ ಮತ್ತು ಸೋದರ ಚರಣ್ ಹಾಗೂ ಪ್ರೀತೇಶ್ ಜಗಳಕ್ಕಿಳಿದಿದ್ದರು. ಆಗ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪಗೊಂಡ ಮೂವರು ಆರೋಪಿಗಳು ಕಾರ್ತಿಕ್‍ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.

    ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸುತ್ತಮುತ್ತಲ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.