Tag: arrest

  • ಆಹಾರವೆಂದು ಸ್ಫೋಟಕವನ್ನು ತಿಂದ 6ರ ಬಾಲಕ – ಬಾಯಿ ಸಿಡಿದು ಸ್ಥಳದಲ್ಲೇ ಸಾವು

    ಆಹಾರವೆಂದು ಸ್ಫೋಟಕವನ್ನು ತಿಂದ 6ರ ಬಾಲಕ – ಬಾಯಿ ಸಿಡಿದು ಸ್ಥಳದಲ್ಲೇ ಸಾವು

    ಚೆನ್ನೈ: ದೇಶಿ ನಿರ್ಮಿತ ಸ್ಫೋಟಕವನ್ನು ಸೇವಿಸಿ ಆರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಬಳಿಯ ಅಲಗರೈ ಗ್ರಾಮದಲ್ಲಿ ನಡೆದಿದೆ.

    ಕಾವೇರಿ ನದಿ ದಡದಲ್ಲಿ ಮೀನುಗಳನ್ನು ಹಿಡಿಯಲು ಅಲಗರೈ ಗ್ರಾಮದ ಮೂವರು ಸೇರಿ ದೇಶಿ ನಿರ್ಮಿತ ಮೂರು ಸ್ಫೋಟಕಗಳನ್ನು ತಂದಿದ್ದರು. ಆ ಮೂರು ಜೆಲೆಟಿನ್ ಸ್ಫೋಟಕದಲ್ಲಿ ಎರಡು ತುಂಡುಗಳನ್ನು ಉಪಯೋಗಿಸಿ ಉಳಿದ ಇನ್ನೊಂದು ಸ್ಫೋಟಕವನ್ನು ಸ್ನೇಹಿತ ಭೂಪತಿಯ ಮೆಯಲ್ಲಿ ಇಟ್ಟಿದ್ದರು.

    ಈ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ ಭೂಪತಿಯವರ ಆರು ವರ್ಷದ ಮಗ ಅದು ತಿನ್ನುವ ಪದಾರ್ಥ ಎಂದು ತಿಳಿದು ಬಾಯಿಯಲ್ಲಿ ಹಾಕಿಕೊಂಡಿ ಅಗೆದಿದ್ದಾನೆ. ಆದರೆ ತಕ್ಷಣ ಅದು ಬ್ಲಾಸ್ಟ್ ಆಗಿದ್ದು, ಬಾಲಕ ಬಾಯಿಗೆ ತೀವ್ರ ಹಾನಿಯಾಗಿದೆ. ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಹೀಗಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಸ್ಫೋಟಕ ಬಳಸುವ ವಿಚಾರ ಗೊತ್ತಾಗುತ್ತದೆ ಎಂದು ಭೂಪತಿ ಮತ್ತು ಆತನ ಸ್ನೇಹಿತರು ಮಗುವಿನ ಅಂತ್ಯಕ್ರಿಯೇ ಮಾಡಲು ಮುಂದಾಗಿದ್ದಾರೆ.

    ಈ ಮಧ್ಯೆ ಪೊಲೀಸರಿಗೆ ಸ್ಥಳೀಯರು ಯಾರೋ ಕರೆ ಮಾಡಿ ವಿಚಾರವನ್ನು ಮುಟ್ಟಿಸಿದ್ದಾರೆ. ವಿಚಾರದ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆಯನ್ನು ನಿಲ್ಲಿಸಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈಗ ಈ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.

  • ‘ಸಾಯಿಸ್ತಿಯಾ.. ಸಾಯ್ಸು ನೋಡೋಣ’ ಎಂದ ಪತ್ನಿ- ಕತ್ತು ಸೀಳಿ ಕೊಂದ ಪತಿ

    ‘ಸಾಯಿಸ್ತಿಯಾ.. ಸಾಯ್ಸು ನೋಡೋಣ’ ಎಂದ ಪತ್ನಿ- ಕತ್ತು ಸೀಳಿ ಕೊಂದ ಪತಿ

    – ದಂಪತಿ ಕೋಳಿ ಜಗಳದಲ್ಲಿ ಮಗು ಅನಾಥ
    – ಬಿರಿಯಾನಿ ತಿಂದು ಹೆಂಡ್ತಿ ಕೊಂದು ಪತಿ ಹೈಡ್ರಾಮಾ

    ಬೆಂಗಳೂರು: ದಂಪತಿಯ ಕೋಳಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಹೊಂಗಸಂದ್ರದ ಶ್ರೀನಿವಾಸ ಲೇಔಟಿನಲ್ಲಿ ನಡೆದಿದೆ.

    ಕೊಲೆಯಾದ ಪತ್ನಿಯನ್ನು ವೆಂಕಟಲಕ್ಷ್ಮೀ (26) ಎಂದು ಗುರುತಿಸಲಾಗಿದೆ. ಟೈಲರ್ ಕೆಲಸ ಮಾಡುತ್ತಿದ್ದ ಸುರೇಶ್ (30) ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈಗ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದು, ಇತ್ತ ತಾಯಿ ಸಾವು, ತಂದೆ ಜೈಲಿಗೆ ಹೋದ ಪರಿಣಾಮ ಅವರ ಮಗು ಅನಾಥವಾಗಿದೆ.

    ಕಳೆದ ಭಾನುವಾರ ರಜೆ ದಿನವಾದ ಕಾರಣ ಗಂಡ ಹೆಂಡತಿ ಸೇರಿಕೊಂಡು ಚಿಕನ್ ತಂದು ಬಿರಿಯಾನಿ ಮಾಡಿದ್ದಾರೆ. ಊಟ ಮುಗಿದ ಬಳಿಕ ಎಂದಿನಂತೆ ಪತಿ ಸುರೇಶ್ ಮೇಲೆ ಅನುಮಾನ ಪಟ್ಟು ಪತ್ನಿ ವೆಂಕಟಲಕ್ಷ್ಮೀ ಜಗಳ ಮಾಡಿದ್ದಾಳೆ. ಈ ವೇಳೆ ಸುರೇಶ್ ಸಾಯುಸುತ್ತೇನೆ ಎಂದು ಅವಾಜ್ ಹಾಕಿದ್ದಾನೆ. ಆಗ ಪತ್ನಿ ‘ಸಾಯಿಸ್ತಿಯಾ.. ಸಾಯ್ಸು ನೋಡೋಣ’ ಎಂದಿದ್ದಾಳೆ. ಆಗ ಸುರೇಶ್ ಮನೆಯಲ್ಲಿದ್ದ ಚಾಕುವಿನಿಂದ ವೆಂಕಟಲಕ್ಷ್ಮೀಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ನಂತರ ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸುರೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಸುರೇಶ್ ನಾನು ಕೊಲೆ ಮಾಡಲಿಲ್ಲ ಅವಳೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಳು ಎಂದು ಹೈಡ್ರಾಮಾ ಮಾಡಿದ್ದಾನೆ. ಆದರೆ ಕೊನೆಗೆ ತಾನೇ ಪತ್ನಿ ವೆಂಕಟಲಕ್ಷ್ಮೀಯನ್ನು ಕೊಂದಿದ್ದಾಗಿ ಸುರೇಶ್ ತಪ್ಪೊಪ್ಪಿಕೊಂಡಿದ್ದಾನೆ.

    ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಠಾಣೆಯ ರೆಸ್ಟ್ ರೂಮಿನಲ್ಲಿ ಜೂಜಾಟ- ಐವರು ಕಾನ್ಸ್‌ಟೇಬಲ್ ಬಂಧನ

    ಠಾಣೆಯ ರೆಸ್ಟ್ ರೂಮಿನಲ್ಲಿ ಜೂಜಾಟ- ಐವರು ಕಾನ್ಸ್‌ಟೇಬಲ್ ಬಂಧನ

    ದಾವಣಗೆರೆ: ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಆದರೆ ದಾವಣಗೆರೆಯ ಗ್ರಾಮಾಂತರ ಠಾಣೆಯಲ್ಲಿ ಕೆಲ ಸಿಬ್ಬಂದಿ ರೆಸ್ಟ್ ರೂಮಿನಲ್ಲಿ ಜೂಜಾಟವಾಡಿ ಸಿಕ್ಕಿ ಬಿದ್ದಿದ್ದಾರೆ.

    ಮಂಗಳವಾರ ರಾತ್ರಿ ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆ ಆವರಣದ ವಿಶ್ರಾಂತಿ ಕೊಠಡಿಯಲ್ಲಿ ಜೂಜಾಟವಾಡುತ್ತಿದ್ದ ಐವರು ಕಾನ್ಸ್‌ಟೇಬಲ್‌ಗಳನ್ನು ಬಂಧಿಸಲಾಗಿದೆ. ಠಾಣೆಯ ರೆಸ್ಟ್ ರೂಂಮಿನಲ್ಲೇ ಜೂಜಾಟವಾಡುತ್ತಿದ್ದು, ರೆಡ್ ಹ್ಯಾಂಡಾಗಿ ಐಜಿ ಸ್ಕ್ವಾಡ್‍ಗೆ ಸಿಕ್ಕಿ ಬಿದ್ದಿದ್ದಾರೆ.

    ದಾವಣಗೆರೆ ಗ್ರಾಮಾಂತರ ಠಾಣೆಯ ರೆಸ್ಟ್ ರೂಮಿನಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂದು ಪೂರ್ವ ವಲಯದ ಐಜಿ ರವಿಯವರಿಗೆ ಮಾಹಿತಿ ಹೋಗಿತ್ತು. ಖಚಿತ ಮಾಹಿತಿ ಮೇರೆಗೆ ಐಜಿ ನಿರ್ದೇಶನದಂತೆ ರೇಡ್ ಮಾಡಲಾಗಿದೆ. ಆಗ ಕಾನ್ಸ್‌ಟೇಬಲ್‌ಗಳಾದ ಲೋಹಿತ್, ನಾಗರಾಜ್, ಮಂಜಪ್ಪ, ಮಹೇಶ್ ಮತ್ತು ಬಾಲರಾಜ್ ಸಿಕ್ಕಿಬಿದ್ದಿದ್ದಾರೆ.

    ಐವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಜೂಜಾಟದಲ್ಲಿ ತೊಡಗಿದ್ದ ಐವರಿಂದ 29 ಸಾವಿರ ರೂಪಾಯಿಯನ್ನು ವಶಪಡೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡದೆ ಪೊಲೀಸ್ ಠಾಣೆಯ ರೆಸ್ಟ್ ರೂಮಿನಲ್ಲೇ ರಾಜಾರೋಷವಾಗಿ ಇಸ್ಪೀಟ್ ಆಡುತ್ತಿದ್ದು, ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಜಿಲ್ಲಾಡಳಿತ ಕೊರೊನಾ ಕರ್ತವ್ಯಕ್ಕೆ ನೇಮಕ ಮಾಡಿತ್ತು. ಆದರೆ ಕರ್ತವ್ಯವನ್ನು ಮರೆತು ಲಾಕ್‍ಡೌನ್ ಸಮಯದಲ್ಲಿ ಪಿಬಿ ರಸ್ತೆಯಲ್ಲಿನ ಬಿಲಾಲ್ ಕಾಂಪೌಂಡ್ ಆವರಣದಲ್ಲಿ ಈ ಸಿಬ್ಬಂದಿ ಜೂಜಾಟದಲ್ಲಿ ತೊಡಗಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸರು ದಾಳಿ ನಡೆಸಿ 7 ಜನ ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ಬಂಧಿಸಿದ್ದರು. ಅಲ್ಲದೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ತನ್ನ ಪತ್ನಿಯನ್ನು ಪಟಾಯಿಸಿದವನ ಕೊಲೆ ಮಾಡಿ ರಕ್ತ ಕುಡಿದ್ದಿದ ಆರೋಪಿ ಅರೆಸ್ಟ್

    ತನ್ನ ಪತ್ನಿಯನ್ನು ಪಟಾಯಿಸಿದವನ ಕೊಲೆ ಮಾಡಿ ರಕ್ತ ಕುಡಿದ್ದಿದ ಆರೋಪಿ ಅರೆಸ್ಟ್

    – ಅಪಹರಿಸಿ ರೈಲ್ವೇ ಟ್ರ್ಯಾಕ್ ಬಳಿ ಮರ್ಡರ್

    ಬೆಂಗಳೂರು: ತನ್ನ ಪತ್ನಿಯನ್ನು ಪಟಾಯಿಸಿಕೊಂಡು ಹೋದವನನ್ನು ಬರ್ಬರವಾಗಿ ಕೊಲೆ ಮಾಡಿ ಅವನ ರಕ್ತವನ್ನು ಕುಡಿದಿದ್ದ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ತಬ್ರೇಜ್, ನಿಜಾಮ್ ಹಾಗೂ ಅಲಿ ಅಂಡು ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ತಬ್ರೇಜ್ ಪತ್ನಿಯೊಂದಿಗೆ ವಾಸವಿದ್ದ ಶುಭಾನ್ ಅನ್ನು ಈ ಮೂವರು ಅಪಹರಿಸಿಕೊಂಡು ಬಂದು ಅವನನ್ನು ಹೊಡೆದು ಕೊಂದಿದ್ದರು. ಈ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ತಬ್ರೇಜ್ ಪತ್ನಿ ಮದುವೆಯಾದ ಬಳಿಕ ಶುಭಾನ್ ಜೊತೆ ಓಡಿ ಹೋಗಿದ್ದಳು. ಶುಭಾನ್ ಮತ್ತು ತಬ್ರೇಜ್ ಪತ್ನಿ ತುಮಕೂರಿನಲ್ಲಿ ವಾಸವಾಗಿದ್ದರು. ಈ ವಿಚಾರ ಒಂದು ದಿನ ತಬ್ರೇಜ್‍ಗೆ ಗೊತ್ತಾಗಿದೆ. ಆತ ಕೂಡಲೇ ತನ್ನ ಇಬ್ಬರು ಸ್ನೇಹಿತರಾದ ನಿಜಾಮ್ ಹಾಗೂ ಅಲಿಯನ್ನು ಕರೆದುಕೊಂಡು ತುಮಕೂರಿಗೆ ಹೋಗಿ ಶುಭಾನ್ ಅನ್ನು ಕಿಡ್ಯಾಪ್ ಮಾಡಿದ್ದಾನೆ. ನಂತರ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರೈಲ್ವೇ ಟ್ರ್ಯಾಕ್ ಬಳಿ ಕೊಂದು ಹಾಕಿದ್ದಾರೆ. ಈ ವೇಳೆ ತಬ್ರೇಜ್, ಶುಭಾನ್ ರಕ್ತವನ್ನು ಕೂಡ ಕುಡಿದ್ದಿದ್ದಾನೆ.

    ಈ ಪ್ರಕರಣವನ್ನು ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ಇಂದು ಹಂತಕರನ್ನು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್, ಪಿಕ್ ಪ್ಯಾಕೇಟರ್ ಆಗಿದ್ದು ಆತನ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • 7 ತಿಂಗ್ಳ ಗರ್ಭಿಣಿಯ ಮೇಲೆ 4 ಬಾರಿ ಗುಂಡು ಹಾರಿಸಿದ್ಳು- ಪತಿಯ 2ನೇ ಪತ್ನಿಯನ್ನು ಕೊಂದ ಫಸ್ಟ್ ಹೆಂಡ್ತಿ

    7 ತಿಂಗ್ಳ ಗರ್ಭಿಣಿಯ ಮೇಲೆ 4 ಬಾರಿ ಗುಂಡು ಹಾರಿಸಿದ್ಳು- ಪತಿಯ 2ನೇ ಪತ್ನಿಯನ್ನು ಕೊಂದ ಫಸ್ಟ್ ಹೆಂಡ್ತಿ

    ಲಕ್ನೋ: ಮಹಿಳೆಯೊಬ್ಬಳು ತನ್ನ ಪತಿಯ ಎರಡನೇ ಪತ್ನಿಯನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಬಾನಾಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಬಾನಾ ಟ್ರಾನ್ಸ್ ಪೋರ್ಟರ್ ಮೊಹಮ್ಮದ್ ಜಾಕೀರ್ ನ ಮೊದಲ ಪತ್ನಿ. ಜಾಕೀರ್ ಕೆಲವು ವರ್ಷಗಳ ಹಿಂದೆ ಆಲಿಯಾಳನ್ನು ಮದುವೆಯಾಗಿದ್ದನು. ಇದೀಗ ಕೊಲೆಯಾದ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಮಹಿಳೆಯರು ಆಗಾಗ ಫೋನ್‍ನಲ್ಲಿ ಜಗಳ ಮಾಡುತ್ತಿದ್ದರು. ಜಾಕೀರ್ ಇಬ್ಬರ ಹೆಂಡತಿಯರ ಜಗಳದಿಂದ ಬೇಸರಗೊಂಡಿದ್ದನು. ಈ ಘಟನೆಯ ನಂತರ ಪತಿ ಕಾಣೆಯಾಗಿದ್ದಾನೆ. ಅಪರಾಧ ನಡೆದ ಸ್ಥಳದಲ್ಲಿಯೇ ಆರೋಪಿ ಶಬಾನಾಳನ್ನು ಬಂಧಿಸಲಾಗಿದೆ. ಅಲ್ಲದೇ ಕೊಲೆ ಮಾಡಲು ಬಳಸಿದ್ದ 9 ಎಂಎಂ ಪಿಸ್ತೂಲ್ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ತಿಳಿಸಿದ್ದಾರೆ.

    ಆಲಿಯಾಳ ಸಂಬಂಧಿ ಔಷಧಿ ತರಲು ಮೆಡಿಕಲ್ ಶಾಪ್‍ಗೆ ಹೋಗಿದ್ದಳು. ಆಗ ಆರೋಪಿ ಶಬಾನಾ ಇದ್ದಕ್ಕಿದ್ದಂತೆ ಆಲಿಯಾ ಮನೆಗೆ ಬಂದು ಆಕೆಯನ್ನ ಹೊರಗೆ ಕರೆದುಕೊಂಡು ಬಂದು ನೆಲಕ್ಕೆ ತಳ್ಳಿದ್ದಾಳೆ. ನಂತರ ಆಕೆಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾಳೆ. ಪರಿಣಾಮ ಆಲಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಶಬಾನಾ ಕೊಲೆ ಮಾಡಿದ ನಂತರ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿಲ್ಲ. ಆಲಿಯಾಳ ಮೃತದೇಹದ ಬಳಿಯೇ ತನ್ನ ಪಿಸ್ತೂಲ್‍ನನ್ನು ಹಿಡಿದುಕೊಂಡು ನಿಂತಿದ್ದಳು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆಕೆಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ ಪ್ರಕರಣ- ಕಾಡಿನಲ್ಲಿ ಪ್ರಿಯಕರ ಅರೆಸ್ಟ್

    ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ ಪ್ರಕರಣ- ಕಾಡಿನಲ್ಲಿ ಪ್ರಿಯಕರ ಅರೆಸ್ಟ್

    ಬೆಂಗಳೂರು: ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೈಹಿಕವಾಗಿ ಬಳಸಿಕೊಂಡು ಪ್ರಿಯಕರ ಮೋಸ – ಸೆಲ್ಫಿ ವಿಡಿಯೋದಲ್ಲೇ ನಟಿ ಆತ್ಮಹತ್ಯೆ

    ಆರೋಪಿ ದಿನೇಶ್‍ನನ್ನು ಸದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಚಂದನಾ (29) ಆತ್ಮಹತ್ಯೆ ಮಾಡಿಕೊಂಡ ನಟಿ. ಚಂದನಾ ಆತ್ಮಹತ್ಯೆ ಮಾಡಿಕೊಂಡ ನಂತರ ಆರೋಪಿ ದಿನೇಶ್ ಪರಾರಿಯಾಗಿದ್ದನು. ಈತನನ ವಿರುದ್ಧ ಚಂದನಾ ಪೋಷಕರು ದೂರು ದಾಖಲಿಸಿದ್ದರು. ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಪೊಲೀಸರು ಆರೋಪಿ ದಿನೇಶ್‍ಗಾಗಿ ಹುಡುಕಾಟ ನಡೆಸುತ್ತಿದ್ದರು.

    ಇದೀಗ ಪೊಲೀಸರು ಆರೋಪಿಯನ್ನು ಚಿಕ್ಕಮಗಳೂರು ಕಾಡಿನಲ್ಲಿ ಬಂಧಿಸಿದ್ದಾರೆ. ಇಷ್ಟು ದಿನ ಆರೋಪಿ ಕಾಡಿನಲ್ಲೇ ತಲೆಮರೆಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದಿನೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ ಮೇ 28 ರಂದು ಚಂದನಾ ವಿಷ ಕುಡಿದು ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಚಂದನಾ ಮತ್ತು ಪ್ರಿಯಕರ ದಿನೇಶ್ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಎರಡು ಮನೆಯಲ್ಲೂ ಇವರ ಮದುವೆಗೆ ಒಪ್ಪಿಗೆ ನೀಡಲಾಗಿತ್ತು.

    ದಿನೇಶ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಹಣವನ್ನು ಪಡೆದುಕೊಂಡಿದ್ದನು. ಅಷ್ಟೇ ಅಲ್ಲದೇ ಆರೋಪಿ ಚಂದನಾರನ್ನು ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದನು. ಅಲ್ಲದೇ ಆರೋಪಿ ದಿನೇಶ್ ಚಂದನಾರಿಗೆ ಗರ್ಭಪಾತ ಕೂಡ ಮಾಡಿಸಿದ್ದನು ಎಂದು ತಿಳಿದು ಬಂದಿತ್ತು. ಕೊನೆಗೆ ಲಕ್ಷ, ಲಕ್ಷ ಹಣ ಪಡೆದು ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಆರೋಪಿ ಚಂದನಾರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ನೊಂದು ಚಂದನಾ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ನಟಿ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಿಯಕರ ತನ್ನ ಕುಟುಂಬದವರ ಜೊತೆ ಪರಾರಿಯಾಗಿದ್ದನು. ಸದ್ಯಕ್ಕೆ ಪೊಲೀಸರು ಆರೋಪಿ ದಿನೇಶ್‍ನನ್ನು ಬಂಧಿಸಿದ್ದಾರೆ.

  • ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದ ಚಾಲಕಿ ಕಳ್ಳಿಯರು ಅರೆಸ್ಟ್

    ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದ ಚಾಲಕಿ ಕಳ್ಳಿಯರು ಅರೆಸ್ಟ್

    ಬೆಂಗಳೂರು: ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದ ಚಾಲಕಿ ಕಳ್ಳರನ್ನು ಸಿಲಿಕಾನ್ ಸಿಟಿಯ ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತರನ್ನು ಸಜ್ಜಾದ್, ಶಾಜೀಯಾ, ಫಹಿಮಾ ಎಂದು ಗುರುತಿಸಲಾಗಿದೆ. ಇವರು ಯಾರು ಇಲ್ಲದ ಸಮಯ ನೋಡಿಕೊಂಡು ಒಬ್ಬಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈಗ ಇವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ನಾಲ್ಕು ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

    ಈ ಮೂವರು ಸೇರಿಕೊಂಡು ಕಳೆದ ತಿಂಗಳು ಹಿದಾಯತ್ ಎಂಬವರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದರು. ಈ ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಈ ಮೂವರನ್ನು ಜೈಲಿಗೆ ಕಳುಹಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಕೆ.ಆರ್.ಪುರ, ಬಸವನಗುಡಿ, ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ.

  • ಉದ್ಯಮಿಯ ಹತ್ಯೆ ಪ್ರಕರಣ- ಜನರ ಎದುರಿನಲ್ಲೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ್ರು

    ಉದ್ಯಮಿಯ ಹತ್ಯೆ ಪ್ರಕರಣ- ಜನರ ಎದುರಿನಲ್ಲೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ್ರು

    – ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ಬಯಲು
    – ನಾಲ್ವರು ಆರೋಪಿಗಳು ಅರೆಸ್ಟ್

    ಮಂಗಳೂರು: ಜಿಲ್ಲೆಯ ಮೂಲ್ಕಿಯಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ಮೂಡಬಿದ್ರೆಯಲ್ಲಿ ಶುಕ್ರವಾರ ಉದ್ಯಮಿಯಾಗಿರುವ ಅಬ್ದುಲ್ ಲತೀಫ್‍ರನ್ನು ದುಷ್ಕರ್ಮಿಗಳು ತಲ್ವಾರ್, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಇದೀಗ ಹಂತಕರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಸಿ ಕ್ಯಾಮೆರಾ ಪೊಲೀಸರಿಗೆ ಲಭ್ಯವಾಗಿದೆ.

    ಕಾರು ಮತ್ತು ಬೈಕಿನಲ್ಲಿ ಬಂದ ಸುಮಾರು ಒಂಭತ್ತು ಮಂದಿ ದುಷ್ಕರ್ಮಿಗಳು ಜನರೆದುರಿನಲ್ಲೇ ಬೀಭತ್ಸವಾಗಿ ದಾಳಿ ಮಾಡಿದ್ದಾರೆ. ಆಗ ಮೃತ ಲತೀಫ್ ತನ್ನ ಪ್ರಾಣ ರಕ್ಷಣೆಗೆ ಅವರಿಂದ ತಪ್ಪಿಸಿಕೊಂಡು ರಸ್ತೆಯೆಲ್ಲಾ ಓಡಾಡಿದ್ದಾರೆ. ಕೊನೆಗೆ ಲತೀಫ್ ಬ್ಯಾಂಕ್ ಒಳಗೆ ಹೋಗಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗದಲ್ಲೇ ಲತೀಫ್‍ಗೆ ಚೂರಿಯಿಂದ ಪದೇ ಪದೇ ಇರಿದಿದ್ದಾರೆ.

    ಅಲ್ಲದೇ ದೊಣ್ಣೆಯಿಂದ ಹೊಡೆದು ಅಲ್ಲಿಂದು ಪರಾರಿಯಾಗಿದ್ದಾರೆ. ಆಗ ಲತೀಫ್ ಮೆಟ್ಟಿಲುಗಳ ಮೇಲೆ ಉರುಳಾಡಿ ನರಳಿ ಕೊನೆಗೆ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಇದೆಲ್ಲವೂ ಲಭ್ಯವಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈಯಕ್ತಿಕ ದ್ವೇಷದಿಂದ ಈ ಹತ್ಯೆ ನಡೆದಿದ್ದು, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಸದ್ಯಕ್ಕೆ ಮಲ್ಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

  • ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

    ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

    ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • ಏಕಾಂಗಿಯಾಗಿ ಕಳ್ಳತನ- ಬಂದ ದುಡ್ಡಲ್ಲಿ ಯುವತಿಯರೊಂದಿಗೆ ಮೋಜು ಮಸ್ತಿ

    ಏಕಾಂಗಿಯಾಗಿ ಕಳ್ಳತನ- ಬಂದ ದುಡ್ಡಲ್ಲಿ ಯುವತಿಯರೊಂದಿಗೆ ಮೋಜು ಮಸ್ತಿ

    – 25 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದ ಕಳ್ಳ ಅರೆಸ್ಟ್

    ಬೆಂಗಳೂರು: ಏಕಾಂಗಿಯಾಗಿ ಮನೆಗಳ್ಳತ ಮಾಡಿ ಬಂದ ದುಡ್ಡಲ್ಲಿ ಯುವತಿಯರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಕಳ್ಳನನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಮಂಜ ಅಲಿಯಾಸ್ ಪುಳಂಗ ಮಂಜ ಎಂದು ಗುರತಿಸಲಾಗಿದೆ. ಮೂಲತಃ ಮಂಡ್ಯದವನಾದ ಮಂಜ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಜೊತೆಗೆ ಬೀಗ ಹಾಕಿದ ಮನೆಗಳು ಕಂಡರೆ ಅವುಗಳಿಗೆ ಏಕಾಂಗಿಯಾಗಿಯೇ ಕನ್ನ ಹಾಕುತ್ತಿದ್ದ. ಲಾಕ್‍ಡೌನ್ ನಡುವೆಯೂ ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಸ್ತುಗಳನ್ನು ಮಂಜ ಕಳ್ಳತನ ಮಾಡಿದ್ದ.

    ಪೊಲೀಸರಿಗೆ ಸುಳಿವು ಸಿಗದಿರಲಿ ಎಂದು ಏಕಾಂಗಿಯಾಗಿ ಕಳ್ಳತನ ಮಾಡುತ್ತಿದ್ದ ಮಂಜ, ಕದ್ದ ವಸ್ತುಗಳನ್ನು ಗೆಳೆಯರ ಮೂಲಕ ಅಡವಿಡಿಸುತ್ತಿದ್ದ. ಎಲ್ಲರ ಬಳಿ ನಾನು ಊರಿನಲ್ಲಿ ತುಂಬ ರಿಚ್ ಎಂದು ಹೇಳಿಕೊಂಡಿದ್ದ. ಕಳ್ಳ ಮಾಲನ್ನು ಅಡವಿಡಲೆಂದೆ ಹೊಸ ಹೊಸ ಗೆಳೆಯರನ್ನ ಮಾಡಿಕೊಳ್ಳುತ್ತಿದ್ದ. ಈ ಹಿಂದೆ ಕೂಡ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ. ಸದ್ಯ ಆರೋಪಿಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

    ಕಳ್ಳತನ ಮಾಡಿದ್ದ ಹಣದಲ್ಲಿ ಯುವತಿಯರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಆರೋಪಿ, ಅದರಲ್ಲಿ ವಕೀಲರಿಗೆ ಒಂದಷ್ಟು ಹಣ ಎತ್ತಿಡುತ್ತಿದ್ದ. ಸದ್ಯ ಆರೋಪಿಯ ಬಂಧನದಿಂದ 8 ಪ್ರಕಣಗಳು ಪತ್ತೆಯಾಗಿವೆ. ಬಂಧಿತನಿಂದ 25 ಲಕ್ಷ ಹಣ, ಚಿನ್ನಾಭರಣ, ಐದು ಬೈಕ್, 1 ಕಾರು ವಶಪಡಿಸಿಕೊಳ್ಳಲಾಗಿದೆ. ಮಂಜನನ್ನು ಸದ್ಯ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.