Tag: arrest

  • ತರಕಾರಿ ಮಾರುವ ನೆಪದಲ್ಲಿ ಗೋಮಾಂಸ ಮಾರಾಟ

    ತರಕಾರಿ ಮಾರುವ ನೆಪದಲ್ಲಿ ಗೋಮಾಂಸ ಮಾರಾಟ

    ಮಡಿಕೇರಿ: ತರಕಾರಿ ಮಾರಾಟ ಮಾಡುವ ನೆಪದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ವಾಹನವೊಂದರಲ್ಲಿ ತರಕಾರಿ ಮಾರಾಟ ಮಾಡುವ ನೆಪದಲ್ಲಿ ಗೋಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸೋಮಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಜೊತೆಗೆ ಬಷೀರ್ ಎಂಬಾತ ಮೈಸೂರು ಜಿಲ್ಲೆಯ ಕೆ.ಆರ್ ನಗರದಿಂದ ಅಕ್ರಮವಾಗಿ ಗೋಮಾಂಸ ತಂದು ಮಾರಾಟ ಮಾಡುತ್ತಿದ್ದನು.

    ತರಕಾರಿ ಕೊಳ್ಳಲು ಹೋದ ಸಂದರ್ಭ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಗ್ರಾಮದವರಿಗೆ ತಿಳಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಗ್ರಾಮಸ್ಥರು ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಹತ್ತಾರು ಕೆ.ಜಿ ಗೋಮಾಂಸ ಇರುವುದು ಪತ್ತೆಯಾಗಿದೆ. ಕೂಡಲೇ ಶ್ರೀಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಗೋಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಗಲಾಟೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲವು ಸಮಯ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪೊಲೀಸರು ಗೋಮಾಂಸ ಮತ್ತು ಮಾಂಸ ಮಾರಾಟ ಮಾಡಲು ಬಳಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಗೋಮಾಂಸ ಮಾರಾಟ ಮಾಡುತ್ತಿದ್ದ ಸೋಮಶೇಖರ್ ಎಂಬಾತನ್ನು ಬಂಧಿಸಿದ್ದಾರೆ. ಆದರೆ ಮತ್ತೊಬ್ಬ ಆರೋಪಿ ಬಷೀರ್ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಿಟಕಿ ಮುರಿದು, ಬಾಯಿಗೆ ಬಟ್ಟೆ ಕಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ- ಆರೋಪಿಗಳು ಅರೆಸ್ಟ್

    ಕಿಟಕಿ ಮುರಿದು, ಬಾಯಿಗೆ ಬಟ್ಟೆ ಕಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ- ಆರೋಪಿಗಳು ಅರೆಸ್ಟ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೊಡಗು ಎಸ್ ಪಿ.ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.

    ಮಡಿಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಎಮ್ಮೇಮಾಡು ನಿವಾಸಿಗಳಾದ ಇಬ್ರಾಹಿಂ, ಅಶ್ರಫ್ ಹಾಗೂ ಮಸ್ತಾಫಾ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಕತ್ತಿ, ಟೇಪ್‍ಗಳು, ಮೊಬೈಲ್ ಫೋನ್, ಮಾರುತಿ 800 ಕಾರು, 121 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಇದರ ಜೊತೆಗೆ ಎರಡು ತಿಂಗಳ ಹಿಂದಷ್ಟೇ ಕಳವು ಮಾಡಿದ್ದ 3 ಚೀಲ ಕಾಫಿ ಮತ್ತು 400 ಕೆ.ಜಿ ಕರಿ ಮೆಣಸು ಸೇರಿದಂತೆ ಒಟ್ಟು 12 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಆರೋಪಿಗಳು ಕೊಡಗು ಹಾಗೂ ಮೈಸೂರು ಸೇರಿದಂತೆ ಇತರೇ ಜಿಲ್ಲೆಗಳ ಶ್ರೀಮಂತರ ಮನೆಗಳ ದರೋಡೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಮೇ 5ರಂದು ವಿರಾಜಪೇಟೆ ತಾಲೂಕಿನ ಶಿವಾಸ್ ಜಂಕ್ಷನ್ ಬಳಿ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಮನೆಯವರ ಕೈ, ಬಾಯಿ ಕಟ್ಟಿ ಹಲ್ಲೆ ನಡೆಸಿ ಸಿನಿಮೀಯಾ ರೀತಿಯಲ್ಲಿ ದರೋಡೆ ಮಾಡಲಾಗಿತ್ತು. ಘಟನೆ ಸ್ಥಳೀಯರಲ್ಲಿ ಭಯವನ್ನು ಉಂಟು ಮಾಡಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸುಮನ್ ಡಿ.ಪನ್ನೇಕರ್, ವಿರಾಜಪೇಟೆ ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆದಳದ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದರು.

  • ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    – ಬಿಯರ್ ಬಾಟಲ್‍ಗಳಿಂದ ಹಲ್ಲೆ

    ಬೆಂಗಳೂರು: ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಣಿ ಕೊಲೆಯಾದ ಯುವಕ. ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಸೇರಿ ಮಣಿಯನ್ನು ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮೃತ ಮಣಿ ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ನಾಲ್ವರು ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಸೇರಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ನಾಲ್ವರ ನಡುವೆ ಗಲಾಟೆ ಶುರುವಾಗಿ. ಗಲಾಟೆ ವಿಕೋಪಕ್ಕೆ ಹೋಗಿ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಮೂವರು ಸೇರಿ ಮಣಿ ಮೇಲೆ ಬಿಯರ್ ಬಾಟಲ್‍ಗಳಿಂದ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಮಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಕೆಂಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

  • ಪ್ರೇಯಸಿ ಇದ್ರೂ ಅಪ್ರಾಪ್ತೆ ಜೊತೆ ಸಂಬಂಧ- ಏಕಾಂತದಲ್ಲಿದ್ದನ್ನ ನೋಡಿದ್ದಕ್ಕೆ 8ರ ಬಾಲಕನ ಹತ್ಯೆ

    ಪ್ರೇಯಸಿ ಇದ್ರೂ ಅಪ್ರಾಪ್ತೆ ಜೊತೆ ಸಂಬಂಧ- ಏಕಾಂತದಲ್ಲಿದ್ದನ್ನ ನೋಡಿದ್ದಕ್ಕೆ 8ರ ಬಾಲಕನ ಹತ್ಯೆ

    – ಆಟವಾಡಲೂ ಮೊಬೈಲ್ ಕೊಟ್ಟು ಸ್ಮಶಾನದಲ್ಲೇ ಕೊಲೆ
    – ಪ್ರೇಮಿಗಳು ಒಟ್ಟಿಗೆ ಇದ್ದುದ್ದನ್ನ ನೋಡಿದ್ದೆ ತಪ್ಪಾಯ್ತು

    ಚೆನ್ನೈ: ಏಕಾಂತದಲ್ಲಿದ್ದುದನ್ನು ನೋಡಿದ್ದಕ್ಕೆ ಪ್ರೇಮಿಗಳಿಬ್ಬರು 8 ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ.

    ಭವನೇಶ್ (8) ಕೊಲೆಯಾದ ಬಾಲಕ. 17 ವರ್ಷದ ಅಪ್ರಾಪ್ತ ಹುಡುಗಿ ಮತ್ತು ಆಕೆಯ ಪ್ರಿಯಕರ ಅಜಿತ್ ಕುಮಾರ್(21) ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ತಂಗರಾಜ್ ಮತ್ತು ಸುಮತಿ ದಂಪತಿಯ ಪುತ್ರ ಭವನೇಶ್ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ದಂಪತಿ ಬನಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರ ಬೆಳಗ್ಗೆ ಪೋಷಕರು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮೃತ ಬಾಲಕ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದಾನೆ. ಆದರೆ ಭವನೇಶ್ ಸಂಜೆಯಾದರೂ ಮನೆಗೆ ಹಿಂದಿರುಗಲಿಲ್ಲ. ಕೆಲಸಕ್ಕೆ ಹೋಗಿದ್ದ ಪೋಷಕರು ಸಂಜೆ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಭವನೇಶ್ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.

    ಪೊಲೀಸರು ಗುರುವಾರ ರಾತ್ರಿ ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಳೀಯರು ಸ್ಮಶಾನದ ಬಳಿ ಬಾಲಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಭನವೇಶ್ ಶವವಾಗಿ ಪತ್ತೆಯಾಗಿದ್ದನು. ನಂತರ ಬಾಲಕನ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಯಾರೋ ಹೊಡೆದು ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಭವನೇಶ್ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಥವಾಮಣಿ ನೇತೃತ್ವದ ತಂಡ ಬಾಲಕನ ಕೊಲೆಯ ಬಗ್ಗೆ ತನಿಖೆ ಮಾಡಲು ಶುರು ಮಾಡಿದ್ದರು. ಮೊದಲು ತನಿಖಾ ಅಧಿಕಾರಿಗಳು ಬಾಲಕನ ಸಂಬಂಧಿಕರು, ನೆರೆಹೊರೆಯವರನ್ನು ವಿಚಾರಣೆ ಮಾಡಿದ್ದಾರೆ. ನಂತರ ಅದೇ ಪ್ರದೇಶ ಮಕ್ಕಳನ್ನ ವಿಚಾರಣೆ ಮಾಡಿದ್ದಾರೆ. ಆಗ ಮಕ್ಕಳು ಅಪ್ರಾಪ್ತ ಹುಡುಗಿ ಮತ್ತು ಆತನ ಪ್ರಿಯಕರನೊಂದಿಗೆ ಭವನೇಶ್ ಇದ್ದನು ಎಂದು ತಿಳಿಸಿದ್ದಾರೆ. ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಾಲಕ ಭವನೇಶ್ ಅಪ್ರಾಪ್ತ ಹುಡುಗಿಯ ಮನೆಯಲ್ಲಿ ನಾವಿಬ್ಬರು ಒಟ್ಟಿಗೆ ಇದ್ದುದ್ದನ್ನು ನೋಡಿದ. ಅಲ್ಲದೆ ಇದನ್ನು ನನ್ನ ಪ್ರೇಯಸಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದನು ಎಂದು ಆರೋಪಿ ಅಜಿತ್ ಹೇಳಿದ್ದಾನೆ. ಆರೋಪಿ ಅಜಿತ್ ಈಗಾಗಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೂ ಅಪ್ರಾಪ್ತೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಮೃತ ಬಾಲಕ ಅವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿದ್ದಾನೆ.

    ಆರೋಪಿಗಳಿಬ್ಬರು ಬಾಲಕನ್ನು ಸಮೀಪದ ಸ್ಮಶಾನದ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟಿದ್ದಾರೆ. ಈ ವೇಳೆ ಅಪ್ರಾಪ್ತೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ತನ್ನ ಪ್ರಿಯತಮೆಗೆ ಹೇಳದಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ ಬಾಲಕ ಇಬ್ಬರ ಸಂಬಂಧವನ್ನು ಪ್ರಿಯತಮೆಗೆ ಹೇಳುವುದಾಗಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಇಬ್ಬರು ಅಲ್ಲೆ ಬಿದ್ದಿದ್ದ ಬಾಟಲ್ ತೆಗೆದುಕೊಂಡು ಬಾಲಕನಿಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಅಲ್ಲೆ ಬಿಟ್ಟು ಹೋಗಿದ್ದಾರೆ ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಅಪ್ರಾಪ್ತೆ ಮತ್ತು ಅಜಿತ್‍ಕುಮಾರ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

  • ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    – ದೊಡ್ಡ ಬ್ಯಾಗಿನಲ್ಲಿ 2 ಲ್ಯಾಪ್‍ಟಾಪ್, 4 ಹಾರ್ಡ್ ಡಿಸ್ಕ್ ಪತ್ತೆ

    ಜೈಪುರ: ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈನ ಸನ್ಯಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಜೈನ ಸನ್ಯಾಸಿ ಮನೆಯಲ್ಲಿ ಪೆನ್ ಡ್ರೈವ್, ಕಾಂಡೋಮ್ ಪ್ಯಾಕೆಟ್ ಮತ್ತು ಎರಡು ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು 38 ವರ್ಷದ ಜೈನ ಸನ್ಯಾಸಿ ಸುಕುಮಾಲ್ ನಂದಿ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಆರೋಪಿ ವಾಸಿಸುತ್ತಿದ್ದ ಸಮುದಾಯದ ಆಶ್ರಯ ಮನೆಯೊಂದರಲ್ಲಿ ದೊಡ್ಡ ಬ್ಯಾಗ್‍ನಲ್ಲಿ ಪತ್ತೆಯಾಗಿವೆ.

    ಬಂಧಿತ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೌಲಿಗೆ ನಿಯೋಜಿಸಲಾಗಿತ್ತು. ಈ ತಂಡವು ಶುಕ್ರವಾರ ಬೆಳಗ್ಗೆ ಆರೋಪಿ ಸನ್ಯಾಸಿ ವಾಸಿಸುತ್ತಿದ್ದ ಮನೆಗೆ ಹೋಗಿದೆ. ಅಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ದೊಡ್ಡ ಬ್ಯಾಗ್‍ಯೊಂದು ಪತ್ತೆಯಾಗಿದೆ.

    ಆ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ 19 ಮೊಬೈಲ್ ಫೋನ್, ಎರಡು ಲ್ಯಾಪ್‍ಟಾಪ್, ನಾಲ್ಕು ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೆಟ್‍ಗಳು ಮತ್ತು 33 ಪೆನ್ ಡ್ರೈವ್‍ಗಳನ್ನು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳು ಹಾರ್ಡ್ ಡಿಸ್ಕ್ ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಅದರಲ್ಲಿ ಅನೇಕ ಅಶ್ಲೀಲ ವಿಡಿಯೋ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸಂತ್ರಸ್ತೆ ಗರ್ಭಿಣಿ ತನ್ನ ಅತ್ತಿಗೆಯೊಂದಿಗೆ ಗುರುವಾರ ಆಶೀರ್ವಾದ ಪಡೆಯಲು ಆರೋಪಿ ಸನ್ಯಾಸಿಯನ್ನು ಭೇಟಿ ಮಾಡಲು ಹೋಗಿದ್ದರು. ಮೊದಲು ಸಂತ್ರಸ್ತೆಯ ಅತ್ತಿಗೆ ರೂಮಿಗೆ ಹೋಗಿದ್ದಾರೆ. ಆಗ ಸನ್ಯಾಸಿ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆ ರೂಮಿಗೆ ಹೋಗಿದ್ದು, ಈ ವೇಳೆ ಆರೋಪಿ ನಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿದರೆ ನನ್ನ ಅಧಿಕಾರವನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲಕ್ಷ್ಮಣ್ ಗೌರ್ ಹೇಳಿದರು.

    ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ನಡೆದ ಘಟನೆಯನ್ನು ಕುಟುಂಬದವರ ಬಳಿ ಹೇಳಿದ್ದಾರೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಬಂದು ಸನ್ಯಾಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎಂದು ಲಕ್ಷ್ಮಣ್ ಗೌಡರ್ ತಿಳಿಸಿದರು.

  • ಶಿವನ ವಿಗ್ರಹದ ಪೀಠದ ಮೇಲೆ ಟಿಕ್‍ಟಾಕ್ – ನಾಲ್ವರ ಬಂಧನ

    ಶಿವನ ವಿಗ್ರಹದ ಪೀಠದ ಮೇಲೆ ಟಿಕ್‍ಟಾಕ್ – ನಾಲ್ವರ ಬಂಧನ

    ಮಂಗಳೂರು: ಶಿವನ ವಿಗ್ರಹದ ಪೀಠದ ಮೇಲೆ ಟಿಕ್‍ಟಾಕ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

    ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಫ್ ಹಾಗೂ ಅರ್ಫಾಜ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಕಂಚಿನಡ್ಕ ಹಿಂದೂ ರುದ್ರಭೂಮಿಯಲ್ಲಿ ಟಿಕ್‍ಟಾಕ್ ಮಾಡಿದ್ದರು.

    ಆರೋಪಿಗಳು ಕಂಚಿನಡ್ಕದ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ್ದರು. ಇದನ್ನು ನೋಡಿದ ರುದ್ರಭೂಮಿ ಅಧ್ಯಕ್ಷ ಹಿಂದು ಧಾರ್ಮಿಕ ಶೃದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ವಿಡಿಯೋ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಪಬ್‍ಜಿಯಿಂದ ಪರಿಚಯ ನಂತ್ರ ಫೇಸ್‍ಬುಕ್ ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಒತ್ತಾಯ

    ಪಬ್‍ಜಿಯಿಂದ ಪರಿಚಯ ನಂತ್ರ ಫೇಸ್‍ಬುಕ್ ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಒತ್ತಾಯ

    – ಪಾಗಲ್ ಸ್ನೇಹಿತನ ಕ್ರಿಮಿನಲ್ ಬುದ್ಧಿಗೆ ಬೆಚ್ಚಿಬಿದ್ದ ಯುವತಿ

    ಗಾಂಧಿನಗರ: ಪಬ್‍ಜಿ ಗೇಮ್ ಆಟದಿಂದ ಪರಿಚಯವಾದ ಸ್ನೇಹಿತನೊಬ್ಬ ನಂತರ ಸ್ನೇಹಿತೆಯ ಫೇಸ್‍ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಬೇಡಿಕೆ ಇಟ್ಟಿರುವ ಶಾಂಕಿಂಗ್ ಘಟನೆ ಗುಜರಾತಿನಲ್ಲಿ ನಡೆದಿದೆ.

    ಈ ಘಟನೆ ಗುಜರಾತ್‍ನ ಅಹಮದಾಬಾದ್‍ನ ಒಗ್ನಾಜ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯ ವಿರುದ್ಧ 22 ವರ್ಷದ ಯುವತಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದಾರೆ.

    ಯುವತಿ ಬಹಳ ದಿನಗಳಿಂದ ಪಬ್‍ಜಿ ಆಡುತ್ತಿದ್ದಳು. ಇದರ ಜೊತೆಗೆ ಸಮಯವಿದ್ದಾಗ ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ಪಬ್‍ಜಿ ಆಡುತ್ತಿದ್ದಳು. ಈ ವೇಳೆ ಆ ಯುವತಿ ಜಿತೇಂದ್ರ ಕುಮಾರ್ ಅನ್ನು ಈಕೆಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಆಗ ಜಿತೇಂದ್ರ ಕುಮಾರ್ ಯುವತಿಯನ್ನು ಪರಿಚಯ ಮಾಡಿಕೊಂಡು ನಂಬರ್ ಪಡೆದು ಮಾತನಾಡಿದ್ದಾನೆ. ಆದರೆ ಜಿತೇಂದ್ರನ ನಡುವಳಿಕೆ ಸರಿಯಿಲ್ಲದ ಕಾರಣ ಆಕೆ ಸ್ವಲ್ಪ ದಿನದ ನಂತರ ಮಾತನಾಡುವುದನ್ನು ಯುವತಿ ಬಿಟ್ಟಿದ್ದಾಳೆ.

    ಇದಾದ ಸ್ವಲ್ಪ ದಿನಕ್ಕೆ ಯುವಕ ಆಕೆಯ ಮೊಬೈಲ್ ನಂಬರ್ ಬಳಸಿ ಯುವತಿಯ ಫೇಸ್‍ಬುಕ್ ಐಡಿ ಮತ್ತು ಮೇಲ್ ಹ್ಯಾಕ್ ಮಾಡಿ ಪಾಸ್‍ವಾರ್ಡ್ ಚೇಂಜ್ ಮಾಡಿದ್ದಾನೆ. ಒಂದು ದಿನ ಯುವತಿ ಫೇಸ್‍ಬುಕ್ ಮತ್ತು ಮೇಲ್ ಖಾತೆಗೆ ಲಾಗಿನ್ ಆದಾಗ ಈ ವಿಚಾರ ತಿಳಿದೆ. ಆಗ ಯುವತಿ ಅವನ ಸಹೋದರನ ಜೊತೆ ಚರ್ಚಿಸಿ ಜಿತೇಂದ್ರ ಕುಮಾರ್ ಬಳಿ ಮಾತನಾಡಲು ಹೋಗಿದ್ದಾಳೆ. ಈ ವೇಳೆ ಆತ 50 ಸಾವಿರ ಹಣ ನೀಡಿದರೆ ನಿನಗೆ ಪಾಸ್‍ವಾರ್ಡ್ ವಾಪಸ್ ನೀಡುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾನೆ.

    ಇದಕ್ಕೆ ಒಪ್ಪದ ಯುವತಿ ವಾಪಸ್ ಬಂದಿದ್ದಾಳೆ. ಆದರೆ ಒಂದು ದಿನ ಕರೆ ಮಾಡಿದ ಜಿತೇಂದ್ರ ಕುಮಾರ್ ನಿನಗೆ ದುಡ್ಡು ಕೊಡಲು ಆಗಲಿಲ್ಲ ಎಂದರೆ ಒಂದು ಬಾರಿ ನಗ್ನ ವಿಡಿಯೋ ಕಾಲ್ ಮಾಡು ಎಂದು ಹೇಳಿದ್ದಾನೆ. ಇದರಿಂದ ಬೇಸತ್ತ ಯುವತಿ ಗಟ್ಟಿ ಮನಸ್ಸು ಮಾಡಿ ಯುವಕನ ಮೇಲೆ ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದಾಳೆ. ಈ ಸಂಬಂಧ ಸೋಲಾ ಪೊಲೀಸರು ಈಗ ಜಿತೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    – 1 ಸಾವಿರ ಮಂದಿಯಿಂದ 15 ಸಾವಿರ ಪಡೆದು ವಂಚನೆ
    – 50 ಜನರಿಗೆ ನಕಲಿ ಹಕ್ಕು ಪತ್ರ ವಿತರಣೆ

    ಬೆಂಗಳೂರು: ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಸೈಟ್ ಹಂಚುತ್ತೇವೆ ಎಂದು ಸುಳ್ಳು ಹೇಳಿ ಹಣ ಬಾಚುತ್ತಿದ್ದ ಜಾಲವೊಂದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಜಯನಂದಸ್ವಾಮಿ ಎಂದು ಗುರುತಿಸಲಾಗಿದೆ. ಈತ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಓಪನ್ ಮಾಡಿಕೊಂಡು ಬೆಂಗಳೂರು ಮೂಲಕ ರಮೇಶ್ ಎಂಬಾತನನ್ನು ಪರಿಚಯ ಮಾಡಿಕೊಂಡು ಇಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಸೈಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ.

    ನಿಮಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಕೊಡಿಸುತ್ತೇವೆ ಎಂದು ವಿಜಯಾನಂದ ಸ್ವಾಮಿ ಮತ್ತು ರಮೇಶ್ ಜನರನ್ನು ನಂಬಿಸಿದ್ದಾರೆ. ಜೊತೆಗೆ ತನ್ನ ರೈತ ಸಂಘದ ಹೆಸರಿನಲ್ಲಿ ಸದ್ಯರನ್ನಾಗಿ ನೋಂದಾಯಿಸಕೊಳ್ಳುವುದಾಗಿ ಹೇಳಿ ಸುಮಾರು 1000 ಜನರ ಬಳಿ ತಲಾ 15 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಅವರಿಗೆ ನಿವೇಶನದ ನಕಲಿ ಹಕ್ಕು ಪತ್ರವನ್ನು ನೀಡಿದ್ದಾರೆ. ಇವನ ಮಾತು ನಂಬಿ ಸುಮಾರು ಸಾವಿರ ಜನ ಮೋಸ ಹೋಗಿದ್ದಾರೆ.

    ಅಲ್ಲದೇ ಈಗಾಗಲೇ 50 ಜನರಿಗೆ ನಕಲಿ ಹಕ್ಕು ಪತ್ರಗಳನ್ನು ಹಂಚಿದ್ದಾರೆ. ಈ ಪತ್ರದಲ್ಲಿ ಬಿಡಿಎ ನಕಲಿ ರಬ್ಬರ್ ಸ್ಟಾಂಪ್ ಹಾಕಲಾಗಿದೆ ಹಾಗೂ ಅಯುಕ್ತರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಜನರಿಗೆ ನಿವೇಶನ ಪತ್ರ ನೀಡಿ ಅವರಿಂದ 50 ಸಾವಿರದಿಂದ 3 ಲಕ್ಷದವರೆಗೆ ಹಣ ಪಡೆದಿದ್ದಾರೆ. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸುಮಾರು 3000 ಜನಕ್ಕೆ ಈ ರೀತಿ ಮೋಸ ಮಾಡುವ ಯೋಜನೆ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    3 ಲಕ್ಷ ಕೊಟ್ಟು ಒಟ್ಟು ಆರು ನಿವೇಶದ ನಕಲಿ ಹಕ್ಕು ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಯೊಬ್ಬರು ಪತ್ರದ ಅಸಲೀತವನ್ನು ಚೆಕ್ ಮಾಡಲು ಬೆಂಗಳೂರು ಪ್ರಾಧಿಕಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಧಿಕಾರಿಗಳಿಗೆ ಹಕ್ಕು ಪತ್ರವನ್ನು ನೀಡಿದಾಗ ಇವು ನಕಲಿ ಪತ್ರ ಎಂದು ತಿಳಿದಿದೆ. ಆಗ ತಕ್ಷಣ ಅಧಿಕಾರಿಗಳು ಕಾರ್ಯಚರಣೆ ಇಳಿದು ನಕಲಿ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಾನಂದ ಕಚೇರಿಗೆ ದಾಳಿ ಮಾಡಿ ನಕಲಿ ಹಕ್ಕು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

  • ತ್ರಿಕೋನ ಪ್ರೇಮ ಕಥೆಯಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರೇಯಸಿ ಸಾವು

    ತ್ರಿಕೋನ ಪ್ರೇಮ ಕಥೆಯಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರೇಯಸಿ ಸಾವು

    ಬೆಂಗಳೂರು: ಪ್ರಿಯಕರನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಮೋನಿಕಾ (22) ಮೃತ ಯುವತಿ. ಜೂನ್ 7 ರಂದು ಮೃತ ಮೋನಿಕಾ ಮೇಲೆ ಪ್ರಿಯಕರ ಹಲ್ಲೆ ಮಾಡಿದ್ದನು. ಅಂದಿನಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಇಂದು ಫಲಕಾರಿಯಾಗದೆ ಮೋನಿಕಾ ಸಾವನ್ನಪ್ಪಿದ್ದಾಳೆ.

    ಏನಿದು ಪ್ರಕರಣ?
    ಮೃತ ಮೋನಿಕಾ ಕಳೆದ 4 ವರ್ಷಗಳಿಂದ ಆರೋಪಿ ಬಬೀತ್‍ನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಬಬೀತ್ ಜೊತೆ ಲವ್ ಬ್ರೇಕ್ ಅಪ್ ಆಗಿತ್ತು. ನಂತರ ಮೋನಿಕಾ ಕಳೆದ 5 ತಿಂಗಳಿನಿಂದ ರಾಹುಲ್‍ನನ್ನು ಪ್ರೀತಿಸುತ್ತಿದ್ದಳು. ಜೂನ್ 7 ರಂದು ರಾಹುಲ್ ಹುಟ್ಟುಹಬ್ಬವಿತ್ತು. ಅಂದು ಮೋನಿಕಾ ಬರ್ತ್ ಡೇ ಪಾರ್ಟಿಗೆಂದು ರಾಹುಲ್ ಮನೆಗೆ ಹೋಗಿದ್ದಳು. ಈ ಬಗ್ಗೆ ತಿಳಿದು ಆರೋಪಿ ಬಬೀತ್ ನೇರವಾಗಿ ರಾಹುಲ್ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.

    ರಾಹುಲ್ ಮನೆಯಿಂದ ಮೋನಿಕಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆಯ ಗೋಡೆಗೆ ತಲೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಪೋಷಕರಿಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ ಎಂದು ನಂಬಿಸಿದ್ದನು. ಪ್ರಜ್ಞೆ ತಪ್ಪಿದ್ದ ಮೋನಿಕಾಳನ್ನು ಜೂನ್ 7 ರಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾಳೆ.

    ಅನುಮಾನಗೊಂಡ ಪೋಷಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಮಾಡಿದ ನಂತರ ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವನ್ನ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಬಬೀತ್ ಮತ್ತು ರಾಹುಲ್ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನ ಕೊಲೆ ಪ್ರಕರಣವನ್ನಾಗಿ ಬದಲಾಯಿಸಿ ತನಿಖೆ ಮುಂದುವರಿಸಲಾಗಿದೆ.

  • ವೃದ್ಧ ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಮಗ ಅರೆಸ್ಟ್

    ವೃದ್ಧ ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಮಗ ಅರೆಸ್ಟ್

    ಬೆಂಗಳೂರು: ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಶ್ರೀರಂಗಪಟ್ಟಣದ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರನ್ನು ಕೊಲೆ ಮಾಡಿದ ಬಳಿಕ ಸೇತುವೆ ಮೇಲಿಂದ ಹಾರಿದ್ದ. ತಂದೆ-ತಾಯಿಗೆ ಪಿಂಡ ಬಿಟ್ಟು ತಲೆ ಬೋಳಿಸಿಕೊಂಡು ಬಳಿಕ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಈ ವೇಳೆ ಆತನ ಪ್ರಾಣ ಹೊಗದೆ ಎರಡು ಕಾಲು ಮುರಿದಿತ್ತು. ಹೀಗಾಗಿ ತನ್ನ ಸಂಬಂಧಿಕರಿಗೆ ಫೋನ್ ಮಾಡಿದ್ದು, ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ನಡೆದಿದ್ದೇನು?:
    ಆರೋಪಿ ಸಂತೋಷ್ ಬುಧವಾರ ತನ್ನ ಹೆತ್ತವರಾದ ನರಸಿಂಹ ರಾಜು(70) ಹಾಗೂ ಸರಸ್ವತಿ (64) ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಈ ಘಟನೆ ಕಾಮಾಕ್ಷಿಪಾಳ್ಯದ ರಂಗನಾಥ ಪುರದಲ್ಲಿ ನಡೆದಿತ್ತು. ಹೆತ್ತವರನ್ನು ಕೊಲೆ ಮಾಡಿದ ಬಳಿಕ ಸಂತೋಷ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಮಗನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.

    ದಂಪತಿ ಮೂಲತಃ ಮೈಸೂರಿನವರಾಗಿದ್ದು, ಮಗ ಹಾಗೂ ಸೊಸೆ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮನೆ ಕೆಲಸದವರು ಬುಧವಾರ ಬೆಳಗ್ಗೆ ಬಂದಾಗ ರಾಜು ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪಕ್ಕದ ಕೋಣೆಯಲ್ಲಿ ಸರಸ್ವತಿ ಮೃತದೇಹ ಬಿದ್ದಿತ್ತು. ಇದನ್ನು ಕಂಡು ಗಾಬರಿಗೊಂಡ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

    ಇತ್ತ ನೆರೆಹೊರೆಯವರು, ತಿಂಗಳ ಹಿಂದೆಯಷ್ಟೇ ಮಗ ತನ್ನ ವೃದ್ಧ ಪೋಷಕರ ಜೊತೆ ಜಗಳವಾಡಿದ್ದನು. ಅಲ್ಲದೆ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದನು. ಈ ಹಿನ್ನೆಲೆಯಲ್ಲಿ ಆತನೇ ಕೊಲೆ ಮಾಡಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮದುವೆ ದಲ್ಲಾಳಿಯಾಗಿ ಮೃತ ರಾಜು ಕೆಲಸ ಮಾಡುತ್ತಿದ್ದರೆ, ಸರಸ್ವತಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟಿದ್ದರು. ಇತ್ತ ಆರೋಪಿ ಸಂತೋಷ್ ಪತ್ನಿ ಗರ್ಭಿಣಿಯಾಗಿದ್ದು, ತವರಲ್ಲಿ ಹೋಗಿ ನೆಲೆಸಿದ್ದಳು.