Tag: arrest

  • 1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ- ಐವರು ಅರೆಸ್ಟ್

    1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ವಶ- ಐವರು ಅರೆಸ್ಟ್

    – ಆಟೋದಲ್ಲಿ ಸಾಗಿಸ್ತಿದ್ದಾಗ ಸಿಕ್ಕಿಬಿದ್ರು

    ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ವಿದೇಶಿ ಸಿಗರೇಟನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಗಳ ಬಳಿಯಿಂದ ಸುಮಾರು 1.03 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋವೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಆಗ ಆಟೋದಲ್ಲಿ ವಿವಿಧ ಬ್ರಾಂಡ್‍ಗಳ ಅಕ್ರಮವಾಗಿ ಆಮದು ಮಾಡಿಕೊಂಡ ವಿದೇಶಿ ಸಿಗರೇಟ್‍ಗಳ 503 ಪೆಟ್ಟಿಗೆ ಪತ್ತೆಯಾಗಿವೆ. ತಕ್ಷಣ ಆಟೋ ಚಾಲಕನನ್ನು ಬಂಧಿಸಿ ಸಿಗರೇಟ್‍ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಆಟೋ ಚಾಲಕನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗೋಶಮಹಲ್‍ನ ಸರ್ನಾ ಟ್ರಾನ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‍ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಪುಲ್ ರಾಂಕಾ (42), ಜಗದೀಶ್ ಕುಮಾರ್ (19), ದೂಂಗಾರ್ಚಂದ್ ಶ್ರೀ ಶ್ರೀಮಲ್ (65), ಪವನ್ ಕುಮಾರ್ ಪೆರ್ತಾನಿ (42) ಮತ್ತು ಸರ್ನಾ ಟ್ರಾನ್ಸ್ ಪೋರ್ಟ್ ನ ಡೆಲಿವರಿ ಏಜೆಂಟ್ ಎಂ.ಎ.ಹನೀಫ್ ಎಂದು ಗುರುತಿಸಲಾಗಿದೆ.

    “ಆರೋಪಿಗಳು ದೆಹಲಿಯಿಂದ ಅಕ್ರಮವಾಗಿ ವಿದೇಶಿ ಸಿಗರೇಟುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಬಳಿಕ ಅದನ್ನು ಸ್ಥಳೀಯ ಪಾನ್ ಅಂಗಡಿಗಳು ಮತ್ತು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಈ ಮೂಲಕ ಅವರು ಸರ್ಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟವನ್ನುಂಟುಮಾಡುತ್ತಿದ್ದಾರೆ” ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

    ಪರಾರಿಯಾಗಿದ್ದ ಸರ್ನಾ ಸಾರಿಗೆ ಮಾಲೀಕ ರವೀಂದರ್ ಸಿಂಗ್ ಸರ್ನಾನಿಂದ ವಿದೇಶಿ ಸಿಗರೇಟನ್ನು ಸಂಗ್ರಹಿಸುತ್ತಿರುವುದಾಗಿ ಆರೋಪಿ ವಿಪುಲ್ ಪೊಲೀಸರಿಗೆ ಹೇಳಿದ್ದಾನೆ. ಸದ್ಯಕ್ಕೆ ಬೇಗಂ ಬಜಾರ್ ಪೊಲೀಸರು ಐವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ- 27 ಯುವತಿಯರ ರಕ್ಷಣೆ

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ- 27 ಯುವತಿಯರ ರಕ್ಷಣೆ

    – ಪ್ರಮುಖ ಆರೋಪಿ ಸೇರಿ ಮೂವರ ಬಂಧನ

    ಬೆಂಗಳೂರು: ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

    ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಂಸದ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿಪಿ ನೇತೃತ್ವದ ಸಿಸಿಬಿ ಮಹಿಳಾ ವಿಭಾಗದ ತಂಡ ವೇಶ್ಯಾವಾಟಿಕೆ ಅಡ್ಡೆ ದಾಳಿ ಮಾಡಿದೆ.

    ದಾಳಿ ವೇಳೆ ವಿವಿಧ ರಾಜ್ಯದ ಒಟ್ಟು 27 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ನೇಪಾಳದ 9 ಯುವತಿಯರು, ಪಂಜಾಬ್ ನಾಲ್ಕು, ದೆಹಲಿ ಒಂದು, ಜಮ್ಮು ಕಾಶ್ಮೀರ್ 2, ಮಹಾರಾಷ್ಟ್ರ ಒಂದು ಸೇರಿದಂತೆ ವಿವಿದ ರಾಜ್ಯಗಳ ಒಟ್ಟು 27 ಯುವತಿಯರ ರಕ್ಷಣೆ ಮಾಡಲಾಗಿದೆ.

    ಇನ್ನೂ ಮಾಂಸದ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ಯೋಗೇಶ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

  • ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸ್ ಅರೆಸ್ಟ್

    ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸ್ ಅರೆಸ್ಟ್

    ಚೆನ್ನೈ: ಅಪ್ಪ-ಮಗನನ್ನು ಹಿಂಸಿಸಿ ಕೊಂದ ತಮಿಳುನಾಡಿನ ನಾಲ್ವರು ಪೊಲೀಸರನ್ನು ಸಿಬಿ-ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಲಾಕ್‍ಡೌನ್ ಉಲ್ಲಂಘನೆ ಮಾಡಿದ್ದಾರೆ ಎಂಬ ಕ್ಷುಲಕ ಕಾರಣಕ್ಕೆ ಅಪ್ಪ-ಮತ್ತು ಮಗನ್ನು ಠಾಣೆಗೆ ಎಳೆತಂದ ಪೊಲೀಸರು ಸಾಯುವವರೆಗೂ ಹಲ್ಲೆ ಮಾಡಿದ್ದರು. ಈ ಹಲ್ಲೆ ಮಾಡಿದ ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಗಳಾದ ರಘು ಗಣೇಶ್ ಮತ್ತು ಬಾಲಕೃಷ್ಣನ್ ಹಾಗೂ ಕಾನ್‍ಸ್ಟೆಬಲ್ ಮುರುಗನ್ ಅವರನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಲಾಕ್‍ಡೌನ್ ಅವದಿಗೂ ಮೀರಿ ಮೊಬೈಲ್ ಶಾಪ್ ಓಪನ್ ಮಾಡಿದ್ದಾರೆ ಎಂಬ ಕಾರಣಕ್ಕೆ ಠಾಣೆಗೆ ಅಪ್ಪ ಜಯರಾಜ್ ಮತ್ತು ಮಗ ಬೆನಿಕ್ಸ್ ಅನ್ನು ಕರೆತಂದಿದ್ದ ಪೊಲೀಸರು, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಪೊಲೀಸರ ಈ ಕ್ರೂರ ಕೃತ್ಯಕ್ಕೆ ಇಡೀ ದೇಶದಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ನಟ ಕಮಲ್ ಹಾಸನ್ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಕೂಡ ಹಾಕಿದ್ದರು.

    ಇದರ ಜೊತೆಗೆ ಜೂನ್ 19ರಂದು ಘಟನೆ ನಡೆದಾಗ ಸಾಥನ್‍ಕುಲಂ ಪೊಲೀಸ್ ಠಾಣೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಕೂಡ ಮಾಡಲಾಗಿದೆ. ಇದರಿಂದ ಅನುಮಾನಗೊಂಡ ಮದ್ರಾಸ್ ಹೈಕೋರ್ಟ್ ಸರಿಯಾಗಿ ತನಿಖೆ ಮಾಡುವಂತೆ ಜೊತೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಈಗ ಸಿಐಡಿ ತಂಡ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅರೆಸ್ಟ್ ಮಾಡಿ ತನಿಖೆ ಮಾಡುತ್ತಿದೆ.

    ಜೂನ್ 19ರಂದು ಮೊಬೈಲ್ ಅಂಗಡಿಯನ್ನು ನೀಡಿರುವ ಅವಧಿಗೂ ಹೆಚ್ಚು ಕಾಲ ತೆರೆದಿದ್ದಾರೆ ಎಂದು, ಜಯರಾಜ್ ಮತ್ತು ಜೆ ಬೆನಿಕ್ಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮ್ಯಾಜಿಸ್ಟ್ರೇಟ್ ಬಿ ಸರವಣ ಅವರನ್ನು ವಿಚಾರಣೆ ಮಾಡುವಂತೆ ಅದೇಶ ಮಾಡಿದ್ದರು. ಈ ವೇಳೆ ಅವರನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಅಪ್ಪ-ಮಗನ ಮೇಲೆ ಹಲ್ಲೆ ಮಾಡಿದ್ದರು.

    ಪೊಲೀಸರ ಏಟನ್ನು ತಡೆಯಲಾಗದ ಬೆನಿಕ್ಸ್ ಅಲ್ಲೇ ಕುಸಿದು ಬಿದ್ದಿದ್ದರು, ಅವರನ್ನು ಜೂನ್ 22ರ ಸಂಜೆ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಂದೇ ರಾತ್ರಿ ಆತ ಮೃತಪಟ್ಟಿದ್ದ. ಇದಾದ ನಂತರ ಅವರ ತಂದೆ ಜಯರಾಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಜೂನ್ 23ರ ಬೆಳಗ್ಗೆ ಅದೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರು ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಡಿಎಂಕೆ ಪಕ್ಷದ ಸಂಸದ ಕನಿಮೋಜಿ ಅವರು ಈ ವಿಚಾರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್.ಎಚ್.ಆರ್.ಸಿ) ಪತ್ರ ಬರೆದಿದ್ದು ಇದರಲ್ಲಿ, ಪೊಲೀಸ್ ಅಧಿಕಾರಿಗಳು ಬೆನ್ನಿಕ್ಸ್ ಅವರ ಗುದದ್ವಾರಕ್ಕೆ ಲಾಠಿ ಹಾಕಿದ್ದಾರೆ. ಈ ವೇಳೆ ರಕ್ತಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಜಯರಾಜ್ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಪೊಲೀಸರು ಶೂಳಿಂದ ಜಯರಾಜ್ ಅವರ ಎದೆಗೆ ಮೇಲೆ ಅನೇಕ ಬಾರಿ ಒದ್ದಿರುವ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

  • ಯುವತಿ ಜೊತೆ ಅನೈತಿಕ ಸಂಬಂಧ- ದೂರು ನೀಡಲು ಹೋಗ್ತಿದ್ದ ಪತ್ನಿಯನ್ನ ಅಟ್ಟಾಡಿಸಿ ಕೊಂದ ಪತಿ ಅರೆಸ್ಟ್

    ಯುವತಿ ಜೊತೆ ಅನೈತಿಕ ಸಂಬಂಧ- ದೂರು ನೀಡಲು ಹೋಗ್ತಿದ್ದ ಪತ್ನಿಯನ್ನ ಅಟ್ಟಾಡಿಸಿ ಕೊಂದ ಪತಿ ಅರೆಸ್ಟ್

    – ವಿಚ್ಛೇದನ ಕೊಡಲು ನಿರಾಕರಿಸಿದ್ದ ಪತಿ

    ಬೆಂಗಳೂರು: ರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ್ ಬಂಧಿತ ಆರೋಪಿ. ಮಂಜುನಾಥ್ ಮಂಗಳವಾರ ರಾತ್ರಿ ಬೀದಿಯಲ್ಲಿ ಪತ್ನಿ ಹೇಮಾಳನ್ನು ಅಟ್ಟಾಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

    ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಆರೋಪಿ ಮಂಜುನಾಥ್ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದನು. ಅಲ್ಲದೇ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಇದರಿಂದ ಮೃತ ಹೇಮಾ ಪತಿಯಿಂದ ವಿಚ್ಛೇದನ ಪಡೆಯಲು ಚಿಂತನೆ ನಡೆಸಿದ್ದಳು. ಈ ಬಗ್ಗೆ ಆರೋಪಿ ಮಂಜುನಾಥ್ ಜೊತೆ ಚರ್ಚಿಸಿದ್ದಳು. ಆದರೆ ಆರೋಪಿ ಪತ್ನಿಗೆ ವಿಚ್ಛೇದನ ಕೊಡಲು ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.

    ಅಷ್ಟೇ ಅಲ್ಲದೇ ಆರೋಪಿ ಮನೆಯಲ್ಲಿ ಕುಡಿದು ಪದೇ ಪದೇ ಗಲಾಟೆ ಮಾಡುತ್ತಿದ್ದನು. ಕಳೆದ ಎರಡು ದಿನಗಳಿಂದ ಗಲಾಟೆಯಾಗುತ್ತಿತ್ತು. ಮಂಗಳವಾರ ಸಂಜೆ ಪೊಲೀಸ್ ಠಾಣೆಗೆ ದೂರು ಕೊಡುತ್ತೀನಿ ಎಂದು ಹೇಮಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ನಿನ್ನ ಕೊಲೆ ಮಾಡಿ ನಾನೇ ಸ್ಟೇಷನ್‍ಗೆ ಹೋಗುತ್ತೀನಿ ಎಂದು ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಪತಿಯಿಂದ ತಪ್ಪಿಸಿಕೊಂಡು ಹೇಮಾ ಹೋಗುತ್ತಿದ್ದಳು. ಆಗ ರಸ್ತೆಯಲ್ಲಿ ಹಿಂಬಾಲಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ಪ್ರಕರಣದ ಬಗ್ಗೆ ವಿವರಿಸಿದರು.

    ಏನಿದು ಪ್ರಕರಣ?
    ಕುಣಿಗಲ್ ಮೂಲದ ಹೇಮಾಗೆ ಆರೋಪಿ ಮಂಜುನಾಥ್ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೃತ ಹೇಮಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಸಂಜೆ ಹೇಮಾ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ಹೋಗುತ್ತಿದ್ದಳು. ಈ ವೇಳೆ ಆರೋಪಿ ಹೇಮಾಗೆ ಚಾಕುವಿನಿಂದ ಇರಿದಿದ್ದನು. ನಂತರ ಗಾಬರಿಯಿಂದ ಪತ್ನಿ ಹೇಮಾ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಆದರೆ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ಮನೆಯಿಂದ ಬೀದಿಗೆ ಬಂದಿದ್ದಾನೆ. ಅಲ್ಲದೇ ಬೀದಿಯಲ್ಲಿ ಅಟ್ಟಾಡಿಸಿ ಪತ್ನಿ ಹೇಮಾ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. ಬಳಿಕ ಆರೋಪಿ ಎಸ್ಕೇಪ್ ಆಗಿದ್ದನು.

    ಮಾಹಿತಿ ತಿಳಿದು ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಿದ್ದರು. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

  • ಮದ್ವೆಯಾದ ಕೆಲ ದಿನದಲ್ಲೇ ಬೇರೆಯವನ ಜೊತೆ ಸಂಬಂಧ- 17ರ ಮಗಳ ನಾಲಿಗೆ ಕತ್ತರಿಸಿ ಕೊಲೆ

    ಮದ್ವೆಯಾದ ಕೆಲ ದಿನದಲ್ಲೇ ಬೇರೆಯವನ ಜೊತೆ ಸಂಬಂಧ- 17ರ ಮಗಳ ನಾಲಿಗೆ ಕತ್ತರಿಸಿ ಕೊಲೆ

    – 17 ವರ್ಷದ ಅಪ್ರಾಪ್ತೆಗೆ ವಿವಾಹ ಮಾಡಿದ್ದ ತಂದೆ
    – ಕುಟುಂಬಕ್ಕೆ ಕೆಟ್ಟ ಹೆಸರು ಬರೋ ಭಯದಲ್ಲಿ ಕೊಲೆ

    ಲಕ್ನೋ: ಮದುವೆಯಾದರೂ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅಪ್ರಾಪ್ತೆ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತೆ ಕೊಲೆಯಾದ ಮಗಳು. ಆರೋಪಿ ಸುಭಾಷ್ ತನ್ನ ಮಗಳ ನಾಲಿಗೆಯನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅಪ್ರಾಪ್ತೆಗೆ ಕೆಲವು ದಿನಗಳ ಹಿಂದೆ ಮದುವೆಯಾಗಿತ್ತು. ಆದರೆ ಆಕೆ ಪತಿಯ ಮನೆಯಿಂದ ಬಂದು ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ಅಪ್ರಾಪ್ತೆ ಅದೇ ಗ್ರಾಮದ ಚೋಟ್ಕಾವ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈತನ ಚಿಕ್ಕಪ್ಪ ಇಬ್ರಾಹಿಂ ಗ್ರಾಮದ ಮುಖ್ಯಸ್ಥರಾಗಿದ್ದನು. ಮಗಳ ಅನೈತಿಕ ಸಂಬಂಧದಿಂದ ಕೋಪಗೊಂಡ ಆರೋಪಿ ಸುಭಾಷ್ ಆಕೆಯ ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.

    ಆರೋಪಿ ಸುಭಾಷ್ ನೀಡಿದ್ದ ದೂರಿನ ಅನ್ವಯ ಪೋಕ್ಸೋ ಮತ್ತು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಅಪ್ರಾಪ್ತೆಯ ಗೆಳೆಯ ಚೋಟ್ಕಾವ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅಲ್ಲದೇ ಬಾಲ್ಯ ವಿವಾಹದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಎಸ್‍ಪಿ ಹೇಳಿದರು.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸುಭಾಷ್‍ನನ್ನು ಬಂಧಿಸಿದ್ದಾರೆ. ನನ್ನ ಮಗಳ ಅನೈತಿಕ ಸಂಬಂಧದಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

    ಈ ಹಿಂದೆಯೇ ಆರೋಪಿ ಸುಭಾಷ್ ತನ್ನ ಮಗಳ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದನು. ಇಬ್ರಾಹಿಂ ಮತ್ತು ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನು.

  • ಪತ್ನಿಯ ಕತ್ತು ಕುಯ್ದು ಪತಿಯಿಂದ ಬರ್ಬರ ಹತ್ಯೆ

    ಪತ್ನಿಯ ಕತ್ತು ಕುಯ್ದು ಪತಿಯಿಂದ ಬರ್ಬರ ಹತ್ಯೆ

    – 20 ದಿನಗಳ ಹಿಂದೆಯಷ್ಟೆ ಬಾಡಿಗೆ ಮನೆಗೆ ಬಂದಿದ್ರು

    ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಚಂದಾಪುರದ ಸಮೀಪದ ಬನಹಳ್ಳಿಯಲ್ಲಿ ನಡೆದಿದೆ.

    ಯೋಗಶ್ರೀ ಕೊಲೆಯಾದ ಮಹಿಳೆ. ಭಾನುವಾರ ಸುಮಾರು 4 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮಾಲೂರು ತಾಲೂಕಿನ ಕಡೂರು ಮೂಲದ ಅರುಣ್ ಎಂದು ಗುರುತಿಸಲಾಗಿದೆ.

    ಆರೋಪಿ ಅರುಣ್ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಮೂಲದ ಯೋಗಶ್ರೀ ಜೊತೆ ಕೆಲವು ವರ್ಷಗಳು ಮದುವೆಯಾಗಿದ್ದನು. ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಪ್ಪತ್ತು ದಿನಗಳ ಹಿಂದೆಯಷ್ಟೆ ಚಂದಾಪುರದ ಸಮೀಪದ ಬನಹಳ್ಳಿಯ ಬಾಡಿಗೆ ಮನೆಗೆ ಬಂದಿದ್ದರು. ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತೋಟವೊಂದರಲ್ಲಿ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು.

    ಭಾನುವಾರ ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಅರುಣ್ ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಮಾಹಿತಿ ತಿಳಿದು ಸೂರ್ಯನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿ ಅರುಣ್‍ನನ್ನು ಪೊಲೀಸರು ಬಂಧಿಸಿದ್ದಾರೆ.

  • ಅಪ್ರಾಪ್ತೆ ಸೋದರಿಯನ್ನೇ ಕೊಂದ ಅಣ್ಣ- ಅರ್ಧ ತಿಂದ ಶವ ಪತ್ತೆ

    ಅಪ್ರಾಪ್ತೆ ಸೋದರಿಯನ್ನೇ ಕೊಂದ ಅಣ್ಣ- ಅರ್ಧ ತಿಂದ ಶವ ಪತ್ತೆ

    – ಸ್ಥಳೀಯ ಯುವಕನೊಂದಿಗೆ 16ರ ಹುಡುಗಿ ಲವ್

    ಮುಂಬೈ: ಸ್ಥಳೀಯ ಯುವಕನನ್ನು ಪ್ರೀತಿಸಿದ್ದಕ್ಕೆ 16 ವರ್ಷದ ಅಪ್ರಾಪ್ತೆಯನ್ನು ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

    ಡೆಗ್ಲೂರ್ ತಾಲೂಕಿನ ಧಮಗಾಂವ್‍ನಲ್ಲಿ ಈ ಘಟನೆ ನಡೆದಿದ್ದು, ಮೃತಳನ್ನು ಕಲ್ಪನಾ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿ ಅನಿಲ್ ಸೂರ್ಯವಂಶಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕಲ್ಪನಾ ಸೂರ್ಯವಂಶಿ ಜೂನ್ 20 ರಂದು ನಾಪತ್ತೆಯಾಗಿದ್ದಳು. ಆದರೆ ಎರಡು ದಿನದ ನಂತರ ಜೂನ್ 22 ರಂದು ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನರಿಗಳು ಮತ್ತು ನಾಯಿಗಳು ಭಾಗಶಃ ತಿಂದಿದ್ದವು. ನಂತರ ನಾಂದೇಡ್ ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಶಂಕಿಸಿದ್ದರು.

    ಕಲ್ಪನಾ ಸೂರ್ಯವಂಶಿ ಮೃತದೇಹ ಪತ್ತೆಯಾದ ನಂತರ ಆಕೆಯ ತಾಯಿ ಸ್ಥಳೀಯ ಯುವಕನ ವಿರುದ್ಧ ಕೊಲೆ ಆರೋಪ ಮಾಡಿದ್ದರು. ನನ್ನ ಮಗಳು ಮತ್ತು ಯುವಕ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ದರಿಂದ ಆತನೇ ಕೊಂದಿರಬೇಕು ಎಂದು ಆರೋಪಿಸಿದ್ದರು. ನಂತರ ಆಕೆಯ ಪ್ರಿಯಕರನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು.

    ಇತ್ತ ಮಗಳು ನಾಪತ್ತೆಯಾದರೂ ಕುಟುಂಬದವರು ದೂರು ದಾಖಲಿಸದ ಕಾರಣ ತನಿಖಾ ಅಧಿಕಾರಿಗಳು ಕುಟುಂಬದವರ ಮೇಲೆ ಅನುಮಾನಗೊಂಡಿದ್ದಾರೆ. ಈ ಕೊಲೆಯಲ್ಲಿ ಕುಟುಂಬದ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

    ಕಲ್ಪನಾ ಅಂತ್ಯ ಸಂಸ್ಕಾರದ ನಂತರ ಪೊಲೀಸರು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಮೃತ ಹುಡುಗಿಯ ಸಹೋದರ ಅನಿಲ್ ಸೂರ್ಯವಂಶಿ (26) ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಲ್ಪನಾ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಸಂಬಂಧವನ್ನು ನಮ್ಮ ಕುಟುಂಬದವರು ವಿರೋಧಿಸಿದ್ದರು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಇದು ನಿಜಕ್ಕೂ ಮರ್ಯಾದಾ ಹತ್ಯೆ ಪ್ರಕರಣ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಜೂನ್ 30ರವರೆಗೂ ಪೊಲೀಸ್ ಕಸ್ಟಡಿಯಲ್ಲಿರುವಂತೆ ಆದೇಶಿಸಿದೆ ಎಂದು ಇನ್ಸ್ ಪೆಕ್ಟರ್ ದ್ವಾರಕದಾಸ್ ಚಿಖ್ಲಿಕರ್ ತಿಳಿಸಿದ್ದಾರೆ.

  • ಬೀಗ ಹಾಕಿದ ಮನೆಯೇ ಟಾರ್ಗೆಟ್- 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಬೀಗ ಹಾಕಿದ ಮನೆಯೇ ಟಾರ್ಗೆಟ್- 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

    – ಐಷಾರಾಮಿ ಜೀವನ ನಡೆಸ್ತಿದ್ದ ಕಳ್ಳ ಅಂದರ್

    ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು, ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನಾಗಿದ್ದಾನೆ. ಈ ಆರೋಪಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಂಧಿತನಿಂದ 560 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿ ಮಾರ್ಚ್ ತಿಂಗಳಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರ್ತಿ ಗ್ರಾಮದ ರೇಣುಕಮ್ಮ ಮನೆ ಒಡೆದು 1,20,000 ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಷ್ಟು ಕಳ್ಳತನದ ಪ್ರಕರಣಗಳು ಹೊರ ಬಂದಿವೆ.

    ಮಾಗಡಿ ಸರಹದ್ದಿನಲ್ಲಿ 2, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಮನೆ ಕಳ್ಳತನದ ಪ್ರಕರಣಗಳು ಹಾಗೂ ತುಮಕೂರು ಜಿಲ್ಲೆಯ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಕಾರಗೃಹದಲ್ಲಿದ್ದು, 2019ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದನು.

    ಜೈಲಿನಿಂದ ಹೊರ ಬಂದ ಮೇಲೂ ಈತ ತನ್ನ ಹಳೇ ಚಾಳಿಯನ್ನ ಬಿಟ್ಟಿರಲಿಲ್ಲ. ಈ ಆರೋಪಿ ಹಗಲು ಸಮಯದಲ್ಲೇ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದನು. ಇಂತಹ ಖತನಾರ್ಕ್ ಮನೆಗಳ್ಳನನ್ನ ಬಂಧಿಸಿದ ಮಾಗಡಿ ಪೊಲೀಸರಿಗೆ ಎಸ್‍ಪಿ ಅನೂಪ್ ಎ.ಶೆಟ್ಟಿ ಅಭಿನಂದಿಸಿದ್ದಾರೆ.

  • ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    – ಕೊಲೆ ಮಾಡಿದ 6 ದಿನದಲ್ಲಿ ಆರೋಪಿಗಳು ಅರೆಸ್ಟ್
    – 3 ವರ್ಷದಲ್ಲಿ ಮೂರು ವಿವಾಹ

    ಲಕ್ನೋ: ಮಹಿಳೆಯೊಬ್ಬಳು ಆಸ್ತಿಗೋಸ್ಕರ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಾಗಪತ್‍ನಲ್ಲಿ ನಡೆದಿದೆ.

    ವಿಕಾಸ್ ಸಿಂಗ್ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಜನಿ ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಆರೋಪಿ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ. ಮೃತನಿಗೆ ನಾಲ್ವರು ಹೆಂಡತಿಯರಿದ್ದು, ಅವರೊಂದಿಗೆ ಆಸ್ತಿಯನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವಿಕಾಸ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದನು. ವಿಕಾಸ್ ಸಿಂಗ್ ಕೆಲವು ದಿನಗಳ ಹಿಂದೆ ಬಾಗಪತ್‍ನಲ್ಲಿರುವ ತಮ್ಮ ಗ್ರಾಮಕ್ಕೆ ಬಂದಿದ್ದನು. ಜೂನ್ 19 ರಂದು ಗ್ರಾಮದಲ್ಲಿ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಕೊಲೆಯಾದ ಆರು ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ದೆಹಲಿಯ ನಂಗ್ಲೋಯಿ ಪ್ರದೇಶದವಳು ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

    ಮೃತ ವಿಕಾಸ್ ಸಿಂಗ್ ಮತ್ತು ಆರೋಪಿ ರಜನಿ 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೃತ ವಿಕಾಶ್ ಸಿಂಗ್ 2017 ಮತ್ತು 2020ರ ನಡುವೆ ಮತ್ತೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದನು. ಇದರಿಂದ ಆರೋಪಿ ರಜನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ವಿಕಾಸ್ ತನಗೆ ವಿಚ್ಛೇದನ ನೀಡುತ್ತಾನೆ ಮತ್ತು ತನ್ನ ಆಸ್ತಿಯನ್ನು ಮೂವರು ಪತ್ನಿಯರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಆರೋಪಿ ಭಯಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕೊನೆಗೆ ರಜನಿ ಆಸ್ತಿಗೋಸ್ಕರ ಪತಿಯನ್ನ ಕೊಲೆ ಮಾಡಿಸಲು ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆಯೇ ಕೊಲೆ ಮಾಡಲು ಕಿಲ್ಲರ್ ಸುಧೀರ್ ಸಿಂಗ್‍ಗೆ ಆರು ಲಕ್ಷ ರೂ. ನೀಡಿದ್ದಳು. ಸುದೀಪ್ ಸಿಂಗ್ ಕೊಲೆ ಮಾಡಲು ಮೂವರು ಸ್ಥಳೀಯ ಶೂಟರ್‌ಗಳನ್ನು ನೇಮಿಸಿದ್ದನು. ನಂತರ ಮೂವರು ವಿಕಾಸ್ ಸಿಂಗ್ ಮನೆಗೆ ಹೋಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಸದ್ಯಕ್ಕೆ ಆರೋಪಿಗಳಾದ ರಜನಿ, ಸುದೀರ್ ಸಿಂಗ್ ಮತ್ತು ರೋಹಿತ್ ಸಿಂಗ್‍ನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಸಚಿನ್ ಸಿಂಗ್ ಮತ್ತು ರವಿ ಸಿಂಗ್ ಪರಾರಿಯಾಗಿದ್ದಾರೆ.

  • ಮದ್ವೆ ಆಗೋದಾಗಿ ನಂಬಿಸಿ ‘ಜೋಶ್’ ಸಿನಿಮಾ ಖ್ಯಾತಿಯ ನಟಿಗೆ ಬ್ಲ್ಯಾಕ್‍ಮೇಲ್- ಆರೋಪಿಗಳು ಅರೆಸ್ಟ್

    ಮದ್ವೆ ಆಗೋದಾಗಿ ನಂಬಿಸಿ ‘ಜೋಶ್’ ಸಿನಿಮಾ ಖ್ಯಾತಿಯ ನಟಿಗೆ ಬ್ಲ್ಯಾಕ್‍ಮೇಲ್- ಆರೋಪಿಗಳು ಅರೆಸ್ಟ್

    ತಿರುವನಂತಪುರಂ: ದಕ್ಷಿಣ ಭಾರತದ ನಟಿ ಶಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಟಿ ಕಾಸಿಮ್‍ನ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕೆಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು. ನಾಲ್ವರು ಆರೋಪಿಗಳು ತ್ರಿಶೂರ್ ಮೂಲದವರಾಗಿದ್ದು, ನಟಿಗೆ ಮದುವೆ ಆಗುವುದಾಗಿ ನಂಬಿಸಿ ಹಣ ಸೂಲಿಗೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

     

    ಮಾರ್ಚ್ ತಿಂಗಳಲ್ಲಿ ಮದುವೆಯ ಬಗ್ಗೆ ಮಾತನಾಡಲು ಈ ಗ್ಯಾಂಗ್‍ನ ಒಬ್ಬ ವ್ಯಕ್ತಿ ನಟಿಯ ತಂದೆಯನ್ನು ಭೇಟಿ ಮಾಡಿದ್ದನು. ಈ ವೇಳೆ ವರ ದುಬೈನಲ್ಲಿ ಬಿಸಿನೆಸ್ ಮಾಡುತ್ತಿದ್ದಾನೆ. ಕೇರಳದ ಕೋಳಿಕೋಡ್‍ನಲ್ಲಿ ಕುಟುಂಬದವರು ವಾಸಿಸುತ್ತಿದ್ದಾರೆ ಎಂದು ನಂಬಿಸಿದ್ದಾನೆ. ನಕಲಿ ಪ್ರೋಫೈಲ್ ಕೂಡ ರೆಡಿ ಮಾಡಿದ್ದು, ನಟಿ ಕಾಸಿಮ್‍ಗೆ ಅಲ್ವರ್ ಅಲಿ ಎಂದು ಪರಿಯಚ ಮಾಡಿಕೊಂಡು ಫೋನಿನಲ್ಲಿ ಮಾತನಾಡಿದ್ದಾನೆ.

    ನಂತರ ಈ ಗ್ಯಾಂಗ್ ಕೊಚ್ಚಿಯಲ್ಲಿರುವ ನಟಿಯ ಮನೆಗೆ ಭೇಟಿ ನೀಡಿ ಮದುವೆ ಬಗ್ಗೆ ಮಾತುಕತೆ ಮಾಡಿದ್ದರು. ಮಾತುಕತೆ ಮುಗಿಸಿ ಮನೆಯಿಂದ ಹೋಗುವಾಗ ಅವರ ಮನೆ ಮತ್ತು ಕಾರ್ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದರು.

    ನಂತರ ಗ್ಯಾಂಗ್‍ನ ಓರ್ವ ಫೋನ್ ಮಾಡಿ ನಟಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಹಳೆಯ ಕೆಲವು ವಿಡಿಯೋಗಳನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನಟಿ ಹಣ ಕೊಡಲು ನಿರಾಕರಿಸಿದ್ದಾರೆ. ಆಗ ಆರೋಪಿ ತಂದೆಗೆ ನಿರಂತರವಾಗಿ ಫೋನ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಯ ನಟಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಮತ್ತು ನಟಿಗೆ ಮಾಡಿದ ಫೋನ್ ಡಿಟೈಲ್ಸ್ ಮೂಲಕ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.

    ನಮ್ಮಂತೆ ಬೇರೆ ಯಾರೂ ಇಂತಹವರ ಮೋಸದ ಬಲೆಗೆ ಬೀಳಬಾರದು. ಅದಕ್ಕಾಗಿಯೇ ನಾನು ನನ್ನ ಪೋಷಕರಿಗೆ ದೂರು ನೀಡಲು ಹೇಳಿದೆ. ಅವರು ಹಣ ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ನಟಿ ಹೇಳಿದ್ದಾರೆ.

    ನಟಿ ಶಮ್ನಾ ಕಾಸಿಮ್ ಅವರು ಪೂರ್ಣ ಹೆಸರಿನ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. 2007ರಲ್ಲಿ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಜೋಶ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.