Tag: arrest

  • ತಾಯಿಯ ಸಾಲ ವಾಪಸ್ ಕೊಡದ್ದಕ್ಕೆ ಯುವಕನ ಕೊಲೆ- ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    ತಾಯಿಯ ಸಾಲ ವಾಪಸ್ ಕೊಡದ್ದಕ್ಕೆ ಯುವಕನ ಕೊಲೆ- ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    ಕಲಬುರಗಿ: ಹಣಕಾಸಿನ ವಿಚಾರಕ್ಕೆ ಮೂವರು ಸ್ನೇಹಿತರು ಯುವಕನನ್ನು ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ತಾರಫೈಲ್ ಬಡಾವಣೆ ನಿವಾಸಿಗಳಾದ ಸುನೀಲ್ ಅಲಿಯಾಸ್ ಸೋನು, ಶಿವಲಿಂಗ ಹುಲಿಮನಿ ಮತ್ತು ರಾಜು ಬಂಧಿತ ಆರೋಪಿಗಳು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಾರಫೈಲ್ ಬಡಾವಣೆ ನಿವಾಸಿ ವಿಶಾಲ್‍ನನ್ನ ಜೂನ್ 26 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

    ಮೃತ ವಿಶಾಲ್ ಆರೋಪಿ ಸುನೀಲ್ ತಾಯಿ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಹೀಗಾಗಿ ಹಣವನ್ನು ವಾಪಸ್ ಕೊಡುವಂತೆ ಆರೋಪಿ ಸೋನು ಪದೇ ಪದೇ ಕೇಳುತ್ತಿದ್ದನು. ಆದರೆ ಮೃತ ವಿಶಾಲ್ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಆರೋಪಿ ಸೋನು ಸ್ನೇಹಿತರ ಜೊತೆ ಸೇರಿ ಸಾಲ ವಾಪಾಸ್ ಕೊಡಲು ವಿಳಂಬ ಮಾಡಿದ್ದಕ್ಕೆ ನಾಗನಹಳ್ಳಿ ಕ್ರಾಸ್ ಬಳಿ ವಿಶಾಲನ ಹತ್ಯೆ ಮಾಡಲಾಗಿತ್ತು.

    ನಾಗನಹಳ್ಳಿ ಕ್ರಾಸ್‍ನ ರಾಜಾಪುರ ನಾಲಾದ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ವಿಶಾಲ್ ಮೃತ ಸಿಕ್ಕಿತ್ತು. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • 12 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಾಗಾಟ – ನಾಲ್ವರ ಬಂಧನ

    12 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಾಗಾಟ – ನಾಲ್ವರ ಬಂಧನ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಬಳಿಯ ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಿಂದ 50 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಸೀಜ್ ಮಾಡಿರುವಂತ ಗಾಂಜಾ ಬೆಲೆ ಅಂದಾಜು 12 ಲಕ್ಷಕ್ಕೂ ಅಧಿಕವಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮೋಹಿದ್ ಖಾನ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭ ಬಂಧಿತ ಆರೋಪಿಗಳು.

    ಬಂಧಿತ ಆರೋಪಿಗಳಿಂದ 50 ಕೆಜಿ ಗಾಂಜಾ, ಕಾರು ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಮಾಯಾಜಾಲದಲ್ಲಿ 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ಮಂದಿಯ ತಂಡ ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿಯ ಶೇಖರ್ ಎಂಬವರಿಂದ 80 ಕೆಜಿ ಗಾಂಜಾ ಸೊಪ್ಪನ್ನು ತಂದಿದ್ದಾರೆ. 80 ಕೆಜಿ ಗಾಂಜಾ ಸೊಪ್ಪಿನಲ್ಲಿ 30ಕೆಜಿ ಸೊಪ್ಪನ್ನು ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದಾರೆ. ಉಳಿದ 50 ಕೆಜಿ ಗಾಂಜಾವನ್ನು ಮಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

    ಮಾರುತಿ 800 ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲೆಯ ಸಿಇಎನ್ ಠಾಣೆ ಇನ್ಸ್‍ಪೆಕ್ಟರ್ ರಕ್ಷಿತ್, ಪಿಎಸ್‍ಐ ರಮ್ಯಾ ಹಾಗೂ ಗೋಣಿಬೀಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ತಂಡವನ್ನು ರೈಡ್ ಮಾಡಿದ ದೊಡ್ಡ ಪ್ರಕರಣ ಇದಾಗಿದೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.

  • ದುಬೆ ದುಷ್ಕೃತ್ಯಕ್ಕೆ ಸಾಥ್ – ಪಂಚಾಯತ್ ಚುನಾವಣೆ ಗೆದ್ದಿದ್ದ ಪತ್ನಿ ಅರೆಸ್ಟ್

    ದುಬೆ ದುಷ್ಕೃತ್ಯಕ್ಕೆ ಸಾಥ್ – ಪಂಚಾಯತ್ ಚುನಾವಣೆ ಗೆದ್ದಿದ್ದ ಪತ್ನಿ ಅರೆಸ್ಟ್

    ಲಕ್ನೋ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ಪತ್ನಿ ಮತ್ತು ಆತನ ಮಗನನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

    ವಿಕಾಸ್ ದುಬೆಯ ಪತ್ನಿ ರಿಚಾ ದುಬೆಯನ್ನು ಕೃಷ್ಣನಗರ ನಿವಾಸದಿಂದ ಗುರುವಾರ ಸಂಜೆ ವಿಶೇಷ ಕಾರ್ಯಪಡೆ ತಂಡ (ಎಸ್‍ಟಿಎಫ್) ಆರೋಪಿಗಳಿಗೆ ಆಶ್ರಯ ನೀಡಿದ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರ ಜೊತೆಗೆ ವಿಕಾಸ್ ದುಬೆ ಮಗ ಮತ್ತು ಆತನ ಸಹಚರನೋರ್ವನನ್ನು ಬಂಧಿಸಲಾಗಿದೆ.

    ಬಂಧಿತ ರಿಚಾ ದುಬೆ, ಗ್ಯಾಂಗ್ ಸ್ಟಾರ್ ನಡೆಸುತ್ತಿದ್ದ ಎಲ್ಲ ಕೃತ್ಯಗಳಿಗೂ ಸಾಥ್ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ. ಕನ್ಪುರದಲ್ಲಿ ಪೊಲೀಸರನ್ನು ಕೊಂದ ಘಟನೆಯ ಬಗ್ಗೆ ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯಲ್ಲಿ ಕನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಕೊಂದ ಕೃತ್ಯದಲ್ಲಿ ಈಕೆಯೂ ಕೂಡ ಭಾಗವಾಗಿದ್ದಳು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈಕೆ ಬಿಕ್ರು ಗ್ರಾಮದಲ್ಲಿದ್ದ ದುಬೆ ಮನೆಗೆ ಸಿಸಿಟಿವಿಯನ್ನು ಅಳವಡಿಸಿ ಅದರ ದೃಶ್ಯಗಳನ್ನು ತನ್ನ ಮೊಬೈಲ್ ಮೂಲಕ ಕೂತಲ್ಲಿಯೇ ನೋಡುತ್ತಿದ್ದಳು. ಆ ಮನೆಯನ್ನು ನಾಶ ಮಾಡಿದ ಅಧಿಕಾರಿಗಳು ಆಕೆಯನ್ನು ಹುಡುಕಿಕೊಂಡು ಕೃಷ್ಣನಗರ ನಿವಾಸಕ್ಕೆ ಹೋಗಿದ್ದಾರೆ. ಆದರೆ ಆಕೆ ಅಲ್ಲಿಂದ ಪರಾರಿಯಾಗಿದ್ದಳು. ಆದರೆ ವಿಕಾಸ್ ದುಬೆ ಗುರುವಾರ ಸಿಕ್ಕಿಬಿದ್ದ ನಂತರ ಮತ್ತೆ ಆದೇ ಮನೆಗೆ ವಾಪಸ್ ಆಗಿದ್ದಾಳೆ. ಆನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಈಕೆ ಕೂಡ ಸ್ಥಳೀಯ ಗ್ರಾಮ ಪಂಜಾಯ್ತಿ ಚುನಾವಣೆಗೆ ನಿಂತು ಗೆದ್ದಿದ್ದಳು. ಮೊದಲು ಬಿಜೆಪಿ ಪಕ್ಷದಲ್ಲಿ ಇದ್ದ ವಿಕಾಸ್ ದುಬೆ ನಂತರದ ದಿನದಲ್ಲಿ ಸಮಾಜವಾದಿ ಪಕ್ಷಕ್ಕೆ ಬಂದಿದ್ದ. ಈತನೂ ಕೂಡ ಜೈಲಿನಲ್ಲೇ ಇದ್ದುಕೊಂಡೆ ನಗರ ಪಂಚಾಯ್ತಿ ಚುನಾವಣೆಗೆ ನಿಂತು ಜಯಗಳಿಸಿದ್ದ. ಜೊತೆಗೆ ಎಂಎಲ್‍ಐ ಆಗಬೇಕು ಎಂಬ ಕನಸು ಕಂಡಿದ್ದ ದುಬೆ, ಇದಕ್ಕಾಗಿ 2000ದಲ್ಲಿ ಬಿಜೆಪಿ ಸಚಿವ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲೇ ಕೊಲೆ ಕೂಡ ಮಾಡಿದ್ದ.

    ಜುಲೈ 2ರಂದು ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆ ಮತ್ತು ಅವನ ಗ್ಯಾಂಗ್ ನಾಪತ್ತೆಯಾಗಿತ್ತು. ವಿಕಾಸ್ ದುಬೆಗಾಗಿ ಉತ್ತರ ಪ್ರದೇಶದ ಪೊಲೀಸರು ನಿರಂತರ ಹುಡುಕಾಟ ನಡೆಸಿದ್ದರು. ಈ ಮಧ್ಯೆ ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಸಿಕ್ಕ ವಿಕಾಸ್ ದುಬೆಯ ಏಳು ಮಂದಿ ಸಹಚರನ್ನು ಎನ್‍ಕೌಂಟರ್ ಮಾಡಿದ್ದರು. ಇದಾದ ಒಂದು ವಾರದ ನಂತರ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜೈನ್‍ನಲ್ಲಿರುವ ಮಹಾಕಾಲ ದೇವಸ್ಥಾನದಲ್ಲಿ ಗುರುವಾರ ಸೆರೆಸಿಕ್ಕಿದ್ದ.

    ಗುರುವಾರ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ವಿಕಾಸ್ ದುಬೆಯನ್ನು ಇಂದು ಮುಂಜಾನೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಮಧ್ಯಪ್ರದೇಶದ ಪೊಲೀಸರಿಂದ ದುಬೆಯನ್ನು ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ನಮ್ಮ ವಾಹನ ಅಪಘಾತವಾಗಿ ಪಲ್ಟಿಯಾಗಿತ್ತು. ಈ ವೇಳೆ ದುಬೆ ತಮ್ಮ ಪೊಲೀಸರ ಬಂದೂಕನ್ನು ಕಿತ್ತುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತನನ್ನು ಎನ್‍ಕೌಂಟರ್ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ

    ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ: ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ

    ಲಕ್ನೋ: ಆ ಮಹಾಕಾಲನೇ ಆತನನ್ನು ಸಾವಿನಿಂದ ರಕ್ಷಿಸಿದ್ದಾನೆ ಎಂದು ಇಂದು ಬೆಳಗ್ಗೆ ಮಧ್ಯ ಪ್ರದೇಶದಲ್ಲಿ ಅರೆಸ್ಟ್ ಆದ ರೌಡಿ ಶೀಟರ್ ವಿಕಾಸ್ ದುಬೆ ತಾಯಿ ಸರ್ಲಾ ದೇವಿ ಅವರು ಹೇಳಿದ್ದಾರೆ.

    ಜುಲೈ 2ರ ಮಧ್ಯರಾತ್ರಿ ತನ್ನನ್ನು ಅರೆಸ್ಟ್ ಮಾಡಲು ಬಂದ ಪೊಲೀಸರನ್ನು ವಿಕಾಸ್ ದುಬೆ ಮತ್ತು ಅವನ ಸಹಚರರು ಗುಂಡಿದಾಳಿ ಮಾಡಿ ಅಮಾನುಷವಾಗಿ ಕೊಂದು ಹಾಕಿದ್ದರು. ಈ ಘಟನೆಯಲ್ಲಿ ಎಂಟು ಮಂದಿ ಅಮಾಯಾಕ ಪೊಲೀಸರು ಸಾವನ್ನಪ್ಪಿದ್ದರು. ಇದಾದ ಬಳಿಕ ಎಸ್ಕೇಪ್ ಆಗಿದ್ದ ವಿಕಾಸ್ ದುಬೆ ಇಂದು ಮಧ್ಯ ಪ್ರದೇಶದ ಉಜ್ಜೈನಿಯ ಮಹಾಕಾಲ ದೇವಸ್ಥಾನದಲ್ಲಿ ಸೆರೆಸಿಕ್ಕಿದ್ದಾನೆ.

    ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ವಿಕಾಸ್ ದುಬೆ ತಾಯಿ ಸರ್ಲಾ ದೇವಿ, ನಾನು ಆತ ಅರೆಸ್ಟ್ ಆದ ಎಂದು ಟಿವಿಯಲ್ಲಿ ನೋಡಿ ತಿಳಿದುಕೊಂಡೆ. ಆ ಮಹಾಕಾಲನೇ ಸಾವಿನಿಂದ ಆತನನ್ನು ರಕ್ಷಿಸಿದ್ದಾನೆ. ಆತ ಪ್ರತಿ ವರ್ಷ ಮಹಾಕಾಲನ ದರ್ಶನಕ್ಕೆ ಹೋಗುತ್ತಿದ್ದ. ಜೊತೆಗೆ ಆತ ಬಿಜೆಪಿ ಪಕ್ಷದಲ್ಲಿ ಇರಲಿಲ್ಲ ಎಸ್‍ಪಿ ಪಕ್ಷದಲ್ಲಿದ್ದ. ಈಗ ಸೆರೆ ಸಿಕ್ಕಿರುವ ವಿಕಾಸ್ ದುಬೆ ಮೇಲೆ ಸರ್ಕಾರ ಕಾನೂನಿನ ಅಡಿಯಲ್ಲಿ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದು ಹೇಳಿದ್ದಾರೆ.

    ಈ ಹಿಂದೆ ಮಗನ ಕ್ರೂರ ಕೃತ್ಯದ ಬಗ್ಗೆ ಮಾತನಾಡಿದ್ದ ಸರ್ಲಾ ದೇವಿ, ಆತ ಅಮಾಯಾಕ ಪೊಲೀಸರನ್ನು ಕೊಲೆ ಮಾಡಿದ್ದು ತಪ್ಪು. ಆತನೇ ಬಂದು ಪೊಲೀಸರಿಗೆ ಶರಣಾಗಬೇಕು. ಇಲ್ಲವಾದಲ್ಲಿ ಪೊಲೀಸರು ಅವನನ್ನು ಎನ್‍ಕೌಂಟರ್ ಮಾಡಲಿ. ನಾನು ಆತನ ಜೊತೆ ಮಾತನಾಡಿ ನಾಲ್ಕು ತಿಂಗಳಾಯ್ತು. ನಮ್ಮ ಕುಟುಂಬವೇ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾನೆ. ಆತ ರಾಜಕೀಯಕ್ಕೆ ಬಂದ ನಂತರ ಈ ರೀತಿಯ ಕೆಟ್ಟ ಬುದ್ಧಿ ಕಲಿತುಕೊಂಡ ಎಂದು ಹೇಳಿದ್ದರು.

    ಪೊಲೀಸರನ್ನು ಕೊಂದು ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆಯನ್ನು ಒಂದು ವಾರದ ನಂತರ ಇಂದು ಬೆಳಗ್ಗೆ ಮಧ್ಯ ಪ್ರದೇಶದ ಉಜ್ಜೈನ್ ನಲ್ಲಿರುವ ಮಹಾಕಾಲ ದೇವಸ್ಥಾನದಲ್ಲಿ ಬಂಧಿಸಲಾಗಿದೆ. ದೇವಸ್ಥಾನದ ಭದ್ರತಾ ಸಿಬ್ಬಂದಿ ದುಬೆಯನ್ನು ಗುರುತಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಬೆ ದೇವಸ್ಥಾನದಿಂದ ಹೊರ ಬರೋಷ್ಟರಲ್ಲಿ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

  • ಗ್ಯಾಂಗ್‍ಸ್ಟಾರ್ ದುಬೆ ಅರೆಸ್ಟ್ – ಸುಳಿವು ನೀಡಿದ ಸೆಕ್ಯೂರಿಟಿ ಗಾರ್ಡ್ ಹೇಳಿದ್ದೇನು?

    ಗ್ಯಾಂಗ್‍ಸ್ಟಾರ್ ದುಬೆ ಅರೆಸ್ಟ್ – ಸುಳಿವು ನೀಡಿದ ಸೆಕ್ಯೂರಿಟಿ ಗಾರ್ಡ್ ಹೇಳಿದ್ದೇನು?

    ಭೋಪಾಲ್: ಉತ್ತರ ಪ್ರದೇಶದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಮಧ್ಯಪ್ರದೇಶದ ದೇವಾಲಯದಲ್ಲಿ ಬಂಧಿಸಿದ್ದಾರೆ.

    ನಕಲಿ ಐಡಿ ಕಾರ್ಡ್ ಬಳಸಿ ಮಧ್ಯ ಪ್ರದೇಶಕ್ಕೆ ಎಂಟ್ರಿಕೊಟ್ಟಿದ್ದ ದುಬೆ, ಅಲ್ಲಿನ ಉಜ್ಜೈನ್‍ನಲ್ಲಿರುವ ಮಹಾಕಾಳಿ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಆತನನ್ನು ಗುರುತಿಸಿದ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಲಖನ್ ಯಾದವ್, ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ಮೂಲಕ ಕುಖ್ಯಾತ ರೌಡಿಯನ್ನು ಬಂಧಿಸುವಲ್ಲಿ ನೆರವಾಗಿದ್ದರು.

    ಈ ಬಗ್ಗೆ ಮಾತನಾಡಿರುವ ಲಖನ್ ಯಾದವ್ ಅವರು, ನಾನು ಈ ಮೊದಲೇ ಫೋಟೋದಲ್ಲಿ ವಿಕಾಸ್ ದುಬೆಯನ್ನು ನೋಡಿದ್ದೆ. ದುಬೆ ಇಂದು ಬೆಳಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಬಂದ. ಜೊತೆಗೆ ಅವನು ಹಿಂದಿನ ಬಾಗಿಲಿನಿಂದ ದೇವಸ್ಥಾನದ ಒಳ ಬರಲು ಪ್ರಯತ್ನಿಸುತ್ತಿದ್ದ. ವಿಕಾಸ್ ದುಬೆ ನಡವಳಿಕೆ ನೋಡಿ ನನಗೆ ಅನುಮಾನ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆತ ವಿಐಪಿ ಪಾಸ್ ಪಡೆದಿದ್ದರೂ ದೇವಸ್ಥಾನದ ಒಳಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದ ಎಂದು ಹೇಳಿದ್ದಾರೆ.

    ಈ ವೇಳೆ ನಾನು ದೇವಸ್ಥಾನದಲ್ಲಿ ಆತನನ್ನು ತಡೆದು ವಿಚಾರಣೆ ಮಾಡಿದೆ. ಆತ ಏನೂ ಮಾತನಾಡಲಿಲ್ಲ. ನಂತರ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಕರೆದುಕೊಂಡು ಹೋದರು ಎಂದು ಯಾದವ್ ಅವರು ತಿಳಿಸಿದ್ದಾರೆ. ಮಧ್ಯ ಪ್ರದೇಶದ ಪೊಲೀಸರು ಆತನನ್ನು ಬಂಧಿಸಿದ್ದು, ಉತ್ತರ ಪ್ರದೇಶದ ಪೊಲೀಸರಿಗೆ ಒಪ್ಪಿಸಲು ಸಿದ್ಧವಿದ್ದಾರೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಇಬ್ಬರು ದುಬೆ ಸಹಚರರನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ.

    ಇಂದು ಬೆಳಗ್ಗೆ ಮಧ್ಯಪ್ರದೇಶದ ಪೊಲೀಸರು ವಿಕಾಸ್ ದುಬೆಯನ್ನು ಬಂಧಿಸಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ದೃಢಪಡಿಸಿದ್ದರು. ಉತ್ತರ ಪ್ರದೇಶದಲ್ಲಿ ಆತ ಘಟನೆಯ ನಂತರ ನಮ್ಮ ರಾಜ್ಯ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ಕಾರಣ ಇಂದು ದುಬೆಯನ್ನು ಬಂಧಿಸಲು ಸಾಧ್ಯವಾಯ್ತು ಎಂದು ಮಿಶ್ರಾ ತಿಳಿಸಿದ್ದಾರೆ. ಇದರ ಜೊತೆಗೆ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್, ಉಜ್ಜೈನಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದರು.

  • ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ

    ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ

    – ಆರೋಪಿಗಳನ್ನ ಬೆನ್ನಟ್ಟಿ ಬಂಧಿಸಿದ ಪೊಲೀಸರು

    ಲಕ್ನೋ: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ.

    ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳನ್ನು ಮುನೇಶ್ ಮತ್ತು ಸಿಂಟು ಎಂದು ಗುರುತಿಸಲಾಗಿದೆ.

    ಟ್ರಕ್ ಮೈನ್ಪುರಿ ಮೂಲದ ಆಟೋ-ಶೋ ರೂಂಗೆ ಬೈಕ್‍ಗಳನ್ನು ತೆಗೆದುಕೊಂಡು ಗುರುಗ್ರಾಮ್‍ಗೆ ಹೋಗುತ್ತಿತ್ತು. ಆದರೆ ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಾದಚಾರಿ ಮಾರ್ಗದಲ್ಲಿ ಹೋಗಿದೆ. ಅಲ್ಲಿ ಏಳು ಮಂದಿ ಕಾರ್ಮಿಕರು ಮಲಗಿದ್ದರು. ಅವರ ಮೇಲೆ ಹರಿದಿದೆ. ಪರಿಣಾಮ ಐವರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದರು.

  • ಸಾಯುವ ವೇಳೆಯೂ ಕೊಲೆಗಾರರ ಸುಳಿವು ನೀಡಿದ ಪೊಲೀಸ್ ಪೇದೆ

    ಸಾಯುವ ವೇಳೆಯೂ ಕೊಲೆಗಾರರ ಸುಳಿವು ನೀಡಿದ ಪೊಲೀಸ್ ಪೇದೆ

    – ಪೇದೆ ಅಂಗೈಯಲ್ಲಿತ್ತು ಹಂತಕರ ಹಣೆಬರಹ

    ಹರ್ಯಾಣ: ಕಳೆದ ಮಂಗಳವಾರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದ್ದ ಆರು ಜನ ಆರೋಪಿಗಳನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

    ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ಕಳೆದ ಮಂಗಳವಾರ ಪೊಲೀಸ್ ಅಧಿಕಾರಿಗಳಾದ ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಈ ಆರೋಪಿಗಳನ್ನು ಪೊಲೀಸ್ ಪೇದೆ ರವೀಂದರ್ ಅವರು ಸಾವಿಗೂ ಮುನ್ನ ನೀಡಿದ ಸುಳಿವಿನಿಂದ ಸೋಮವಾರ ಪೊಲೀಸರು ಬಂಧಿಸಿದ್ದಾರೆ.

    ಕೊರೊನಾ ವೈರಸ್ ಭೀತಿಯ ನಡುವೆಯೂ ಬುಟಾನಾ ಪೊಲೀಸ್ ಠಾಣೆ ಬಳಿಯ ಸೋನಿಪತ್-ಜಿಂದ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಕೆಲ ಪುಂಡರು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಇದನ್ನು ಕೇಳಲು ರವೀಂದರ್ ಸಿಂಗ್ ಮತ್ತು ಕಪ್ತಾನ್ ಸಿಂಗ್ ಹೋಗಿದ್ದಾರೆ. ಆಗ ಕುಡಿತದ ಅಮಲಿನಲ್ಲಿದ್ದ ಪುಂಡರು ಅರಿತವಾದ ಅಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದು ಹಾಕಿದ್ದರು.

    ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆ ರವೀಂದರ್ ಸಿಂಗ್, ಸಾಯುವ ಮುನ್ನ ಆರೋಪಿಗಳ ಕಾರಿನ ನಂಬರ್ ಅನ್ನು ತನ್ನ ಅಂಗೈ ಮೇಲೆ ಬರೆದುಕೊಂಡಿದ್ದರು. ಈ ಸಂಖ್ಯೆ ರವೀಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡುವಾಗ ವೈದ್ಯರಿಗೆ ಸಿಕ್ಕಿದೆ. ನಂತರ ಈ ಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಹರ್ಯಾಣದ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್, ನಮ್ಮ ಅಧಿಕಾರಿಗಳನ್ನು ಕೊಂದ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಸಾಯುವ ಮುನ್ನವು ತನ್ನ ಪೊಲೀಸ್ ಕೌಶಲ್ಯವನ್ನು ತೋರಿಸಿರುವ ನಮ್ಮ ಧೈರ್ಯಶಾಲಿ ಪೇದೆ ರವೀಂದರ್ ಸಿಂಗ್, ಆರೋಪಿಗಳ ಕಾರಿನ ನಂಬರ್ ಅನ್ನು ತಮ್ಮ ಅಂಗೈಯಲ್ಲಿ ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ನಮಗೆ ಈ ನಂಬರ್ ಸಿಕ್ಕಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈ ಜಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡು ಡ್ರಿಂಕ್ಸ್ ಮಾಡಬೇಡಿ ಎಂದು ಬುದ್ಧಿ ಹೇಳಲು ಹೋದ ಪೊಲೀಸರನ್ನು, ಎಣ್ಣೆಯ ನಶೆಯಲ್ಲಿ ಪುಂಡರು ಚುಚ್ಚಿ ಸಾಯಿಸಿದ್ದರು. ಸಾಯುವ ವೇಳೆಯಲ್ಲೂ ತನ್ನ ಕರ್ತವ್ಯ ಮಾಡಿ ಪ್ರಾಣ ಬಿಟ್ಟ ಪೇದೆ ರವೀಂದರ್ ಸಿಂಗ್ ಅವರಿಗೆ ಮರಣ ನಂತರದ ಪೊಲೀಸ್ ಪದಕ ಕೊಡಲಾಗುವುದು ಎಂದು ಮನೋಜ್ ಯಾದವ್ ತಿಳಿಸಿದ್ದಾರೆ.

  • ಮದ್ವೆಗೆ ಕೆಲ ಗಂಟೆ ಇರುವಾಗ್ಲೇ ಬ್ಯೂಟಿ ಪಾರ್ಲರಿನಲ್ಲಿ ವಧು ಕೊಲೆ

    ಮದ್ವೆಗೆ ಕೆಲ ಗಂಟೆ ಇರುವಾಗ್ಲೇ ಬ್ಯೂಟಿ ಪಾರ್ಲರಿನಲ್ಲಿ ವಧು ಕೊಲೆ

    – ಮಾಜಿ ಪ್ರಿಯಕರನ ಫೋನ್ ರಿಸೀವ್ ಮಾಡಿದ್ದೇ ತಪ್ಪಾಯ್ತು
    – ಪ್ರೇಮಿಯ ಮನವೊಲಿಸಿ ಸ್ಥಳ ತಿಳಿದುಕೊಂಡ

    ಭೋಪಾಲ್: ಮದುವೆಗೆ ಇನ್ನೂ ಕೆಲವೇ ಗಂಟೆಗಳು ಇರುವಾಗಲೇ ಬ್ಯೂಟಿ ಪಾರ್ಲರಿನಲ್ಲಿ ವಧುವನ್ನು ಕೊಲೆ ಮಾಡಿರುವ ಘಟನೆ ಮಧ್ಯ ಪ್ರದೇಶದ ರತ್ನಂ ಜಿಲ್ಲೆಯಲ್ಲಿ ನಡೆದಿದೆ.

    ಸೋನು ಯಾದವ್ ಕೊಲೆಯಾದ ವಧು. ಜಿಲ್ಲೆಯ ಜೌರಾ ಪಟ್ಟಣದಲ್ಲಿ ಭಾನುವಾರ ವಧು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಮಾಜಿ ಪ್ರಿಯಕರ ರಾಮ್ ಯಾದವ್ ಕೊಲೆ ಮಾಡಿರಬಹುದು. ಆತ ವಧುವಿನ ಕತ್ತನ್ನು ಕೊಯ್ದು ಕೊಲೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಈ ಕೊಲೆಗೆ ಸಹಾಯ ಮಾಡಿದ ಮತ್ತು ಗಡಿ ದಾಟಲು ಸಹಾಯ ಮಾಡಿದ ಆರೋಪಿಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

    ಸೋನು ಯಾದವ್ ಮದುವೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಶಜಾಪುರ ಜಿಲ್ಲೆಯ ನಿವಾಸಿ ಸೋನು ವಿವಾಹ ದಿನದಂದು ಬೆಳಗ್ಗೆ ಕುಟುಂಬದೊಂದಿಗೆ ಜೌರಾ ಪಟ್ಟಣಕ್ಕೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಸೋನು ತನ್ನ ಸಂಬಂಧಿಯೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಳೆ. ಸೋನು ಬ್ಯೂಟಿ ಪಾರ್ಲರ್ ತಲುಪಿದ ಕೂಡಲೇ ಶಂಕಿತ ಪ್ರಿಯಕರ ರಾಮ್ ಯಾದವ್ ಅನೇಕ ಬಾರಿ ಫೋನ್ ಮಾಡಿದ್ದಾನೆ. ಆದರೆ ಸೋನು ಆತನ ಎಲ್ಲಾ ಕರೆಗಳನ್ನು ನಿರ್ಲಕ್ಷಿಸಿದಳು.

    ರಾಮ್ ಯಾದವ್ ತನ್ನ ಸ್ನೇಹಿತನ ಮೊಬೈಲ್ ಫೋನಿನಿಂದ ಸೋನುಗೆ ಫೋನ್ ಮಾಡಿದ್ದಾನೆ. ಬೇರೆ ನಂಬರ್ ಆಗಿದ್ದರಿಂದ ಸೋನು ಫೋನ್ ರಿಸೀವ್ ಮಾಡಿ ಮಾತನಾಡಿದ್ದಾಳೆ. ಆಗ ರಾಮ್ ಯಾದವ್ ಆಕೆಯ ಮನವೊಲಿಸಿ ಸೋನು ಇರುವ ಸ್ಥಳವನ್ನು ತಿಳಿದುಕೊಂಡಿದ್ದಾನೆ. ಆಕೆಯ ಇರುವ ಸ್ಥಳ ತಿಳಿಯುತ್ತಿದ್ದಂತೆ ರಾಮ್ ಯಾದವ್ ಬ್ಯೂಟಿ ಪಾರ್ಲರ್‌ಗೆ ಬಂದು ಸೋನುವಿನ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಪರಿಣಾಮ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸೋನುವನ್ನು ಕೊಲೆ ಮಾಡಿದ ನಂತರ ರಾಮ್ ಯಾದವ್ ತನ್ನ ಸ್ನೇಹಿತ ಪವನ್ ಪಂಚಲ್ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪಂಚಲ್ ರಾಜಸ್ಥಾನದ ಬಸ್ ನಿಲ್ದಾಣದಲ್ಲಿ ಇಳಿಸಿದ್ದಾನೆಂದು ತಿಳಿದುಬಂದಿದೆ. ರತ್ನಂನಿಂದ ರಾಜಸ್ಥಾನದ ಗಡಿ ಕೇವಲ 25 ಕಿ.ಮೀ ದೂರದಲ್ಲಿದೆ. ಪಂಚಲ್ ರತ್ನಂಗೆ ಹಿಂದಿರುಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ರಾಮ್ ಯಾದವ್‍ನನ್ನು ಬಂಧಿಸಲು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

    ಸೋನು ಯಾದವ್ ಮೂರು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಆರೋಪಿ ರಾಮ್‍ನನ್ನು ಭೇಟಿಯಾಗಿದ್ದಳು. ಬಳಿಕ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಬಂಧಿತ ಆರೋಪಿ ಪಂಚಲ್ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೇ ಆರೋಪಿ ರಾಮ್ ಯಾದವ್ ಪ್ರಿಯತಮೆ ಸೋನುವಿನ ಮದುವೆ ಬಗ್ಗೆ ತಿಳಿದುಕೊಂಡಿದ್ದು, ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಸೋನುವನ್ನು ಕೊಲೆ ಮಾಡುವ ಪ್ಲಾನ್ ಬಗ್ಗೆ ಸ್ನೇಹಿತ ಪಂಚಲ್‍ಗೆ ತಿಳಿಸಿದ್ದನು.

    ಎಸ್‍ಪಿ ಗೌರವ್ ತಿವಾರಿ ಈ ಪ್ರಕರಣದ ಬಗ್ಗೆ ಮಾತನಾಡಿ, ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಕೂಡಲೇ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದೇವೆ. ಆಗ ಇಬ್ಬರು ಪುರುಷುರು ಆ ಪ್ರದೇಶದಲ್ಲಿ ನಿಂತಿರುವುದು ಕಂಡು ಬಂದಿದೆ. ಒಬ್ಬ ಬ್ಯೂಟಿ ಪಾರ್ಲರಿಗೆ ಹೋಗಿದ್ದಾನೆ. ನಾವು ವಾಹನದ ನಂಬರ್ ಮತ್ತು ವಧುವಿಗೆ ಬಂದಿದ್ದ ಎರಡು ನಂಬರ್‌ಗಳನ್ನು ಪತ್ತೆ ಮಾಡಿದ್ದೇವೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು.

  • ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗ ಕುಸಲ್ ಮೆಂಡಿಸ್ ಅರೆಸ್ಟ್

    ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗ ಕುಸಲ್ ಮೆಂಡಿಸ್ ಅರೆಸ್ಟ್

    ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಶ್ರೀಲಂಕಾ ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ.

    ಶ್ರೀಲಂಕಾದ ರಾಜಧಾನಿ ಕೊಲಂಬೊದ ಹೊರ ಭಾಗದಲ್ಲಿ ಸೈಕಲ್ ಸವಾರನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದ ಅಪಘಾತ ಪ್ರಕರಣದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕುಸಲ್ ಮೆಂಡಿಸ್ ಶ್ರೀಲಂಕಾದ ಪುನದುರಾ ಪ್ರದೇಶದಲ್ಲಿ ತನ್ನ ಎಸ್‍ಯುವಿ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿ ಸೈಕಲ್ ಓಡಿಸುತ್ತಿದ್ದ ಓರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕುಸಲ್ ಮಂಡಿಸ್ ಅವರನ್ನು ಬಂಧಿಸಿದ್ದು, ಅವರ ಕಾರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಮಾರ್ಚ್‍ನಲ್ಲಿ ಶ್ರೀಲಂಕಾದಲ್ಲಿಯೇ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದ 16 ಜನರಲ್ಲಿ ಮೆಂಡಿಸ್ ಕೂಡ ಇದ್ದರು. ಆದರೆ ಕೊರೊನ ವೈರಸ್ ಭೀತಿಯಿಂದ ಈ ಸರಣಿಯನ್ನು ರದ್ದುಮಾಡಲಾಗಿತ್ತು. ಜೊತೆಗೆ ಶ್ರೀಲಂಕಾದಲ್ಲಿ ವರ್ಷಕ್ಕೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಎಂದು ವರದಿ ಪ್ರಕಟಿಸಿದೆ.

    ಈ ಹಿಂದೆ 2003ರಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಕೌಶಲ್ ಲೋಕುರಾಚಿ ಅವರು ಕೂಡ ಮಹಿಳಾ ಪಾದಚಾರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು. ಆಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಕೌಶಲ್ ಅವರನ್ನು ನಾಲ್ಕು ವರ್ಷ ಕ್ರಿಕೆಟಿನಿಂದ ಅಮಾನತು ಮಾಡಿ ಜೈಲಿಗೆ ಕೂಡ ಕಳುಹಿಸಲಾಗಿತ್ತು.

  • ಪ್ರೇಯಸಿಗೆ ಹೇಳದೆ ಬೇರೆ ಹುಡುಗಿ ಜೊತೆ ಪ್ರಿಯಕರ ಮದ್ವೆ- ಶಿಕ್ಷಕಿ ಆತ್ಮಹತ್ಯೆ

    ಪ್ರೇಯಸಿಗೆ ಹೇಳದೆ ಬೇರೆ ಹುಡುಗಿ ಜೊತೆ ಪ್ರಿಯಕರ ಮದ್ವೆ- ಶಿಕ್ಷಕಿ ಆತ್ಮಹತ್ಯೆ

    – ಸೋಶಿಯಲ್ ಮೀಡಿಯಾದಲ್ಲಿ ವಿವಾಹ ಫೋಟೋ ನೋಡಿ ಶಾಕ್
    – ಡೆತ್‍ನೋಟ್ ಬರೆದು ಯುವತಿ ಸೂಸೈಡ್

    ಬೆಂಗಳೂರು: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಮನನೊಂದು ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ನಡೆದಿದೆ.

    ಪವಿತ್ರ (27) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಪವಿತ್ರ, ನಾಗೇಶ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಪ್ರಿಯಕರ ನಾಗೇಶ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದು, ಮೋಸ ಮಾಡಿದ್ದನು. ಹೀಗಾಗಿ ಡೆತ್‍ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಆತ್ಮಹತ್ಯೆಗೆ ಶರಣಾದ ಪ್ರವಿತ್ರ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಾಸರಹಳ್ಳಿಯಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಾಗೇಶ್ ಮತ್ತು ಪವಿತ್ರ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ನಾಗೇಶ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಾಗೇಶ್ ಅನೇಕ ಬಾರಿ ಪೋಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದನು. ಆದರೂ ಪೋಷಕರು ಒಪ್ಪಿಗೆ ಸೂಚಿಸಿಲ್ಲ.

    ಕೊನೆಗೆ ಒಂದು ತಿಂಗಳ ಹಿಂದೆ ನಾಗೇಶ್ ಪೋಷಕರು ತೋರಿಸಿದ್ದ ಯುವತಿಯನ್ನು ಮದುವೆಯಾಗಿದ್ದನು. ನಂತರ ತನ್ನ ಮದುವೆ ಫೋಟೋವನ್ನು ನಾಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ನೋಡಿದ ಪವಿತ್ರ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ನಾಗೇಶ್‍ನ ಮಾತನಾಡಿಸಿದಾಗ ಆತ ಯಾವುದೇ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾನೆ. ಇದರಿಂದ ಪವಿತ್ರಾ ಮತ್ತಷ್ಟು ನೊಂದಿದ್ದಳು. ಈ ವೇಳೆ ತಾಯಿ ಸಮಾಧಾನ ಕೂಡ ಮಾಡಿದ್ದರು.

    ಈ ಎಲ್ಲ ಕಾರಣಗಳಿಂದ ನೊಂದಿದ್ದ ಪವಿತ್ರ ಶನಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮನೆಗೆ ವಾಪಸ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡೆತ್‍ನೋಟ್‍ನಲ್ಲಿ ತನ್ನ ಸಾವಿಗೆ ನಾಗೇಶ್ ಕಾರಣ ಎಂದು ಪವಿತ್ರ ಬರೆದಿದ್ದಾಳೆ.

    ಈ ಕುರಿತು ಮಾಗಡಿ ರೋಡ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಿಯಕರ ನಾಗೇಶ್‍ನನ್ನ ಮಾಗಡಿರೋಡ್ ಪೊಲೀಸರು ಬಂಧಿಸಿದ್ದಾರೆ.