Tag: arrest

  • 2 ಗಂಟೆಯಲ್ಲಿ 12ಕಿಮೀ ಓಡಿ ಕೊಲೆ ಆರೋಪಿಯನ್ನು ಹಿಡಿದ ಪೊಲೀಸ್ ಶ್ವಾನ

    2 ಗಂಟೆಯಲ್ಲಿ 12ಕಿಮೀ ಓಡಿ ಕೊಲೆ ಆರೋಪಿಯನ್ನು ಹಿಡಿದ ಪೊಲೀಸ್ ಶ್ವಾನ

    – ಧೈರ್ಯಶಾಲಿ ತುಂಗಾಗೆ ಪೊಲೀಸರಿಂದ ಸನ್ಮಾನ
    – ಓಡಿಕೊಂಡು ಹೋಗಿ ಕೊಲೆ ಆರೋಪಿ ಮನೆ ಮುಂದೆ ನಿಂತ ನಾಯಿ

    ದಾವಣಗೆರೆ: ಎರಡು ಗಂಟೆ ಸತತವಾಗಿ 12 ಕಿಲೋಮೀಟರ್ ಓಡಿ ದಾವಣಗೆರೆಯ ಪೊಲೀಸ್ ಶ್ವಾನವೊಂದು ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

    ಪೊಲೀಸ್ ಟ್ರೈನಿಂಗ್ ಪಡೆದ ಡಾಬರ್ ಮ್ಯಾನ್ ಜಾತಿಯ 9 ವರ್ಷದ ತುಂಗಾ ಹೆಸರಿನ ಶ್ವಾನ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದೆ. ಕೊಲೆ ನಡೆದ ಸ್ಥಳದಲ್ಲಿ ಕೆಲ ಕಾಲ ಸುತ್ತಿದ ತುಂಗಾ ನಂತರ ಓಡಲು ಶುರು ಮಾಡಿದೆ. ಸತತ ಎರಡು ಗಂಟೆ ಓಡಿ ನೇರವಾಗಿ ಆರೋಪಿಯ ಮನೆಯ ಮುಂದೆ ನಿಂತು ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದೆ.

    ಕಳೆದ ಕೆಲ ದಿನಗಳ ಹಿಂದೆ ಆರೋಪಿ ಚೇತನ್, ಚಂದ್ರ ನಾಯಕ್ ಮತ್ತು ಅವರ ಸ್ನೇಹಿತರು ಸೇರಿಕೊಂಡು ಧಾರವಾರ ಜಿಲ್ಲೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದು, ಆ ಮನೆಯಲ್ಲಿ ಪಿಸ್ತೂಲ್ ಮತ್ತು ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಈ ವೇಳೆ ಇದ್ದನ್ನು ಹಂಚಿಕೊಳ್ಳುವ ವಿಚಾರದಲ್ಲಿ ಚಂದ್ರ ಮತ್ತು ಚೇತನ್ ನಡುವೆ ಜಗಳವಾಗಿದೆ. ಆಗ ಚಂದ್ರನನ್ನು ಚಾನೆಲ್‍ವೊಂದರ ಬಳಿಗೆ ಕರೆಯಿಸಿಕೊಂಡ ಚೇತನ್ ಕದ್ದ ಪಿಸ್ತೂಲ್‍ನಿಂದ ಚಂದ್ರನನ್ನು ಶೂಟ್ ಮಾಡಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಈ ಕೊಲೆಯಾದ ಸ್ಥಳಕ್ಕೆ ತುಂಗಾಳನ್ನು ನೋಡಿಕೊಳ್ಳುತ್ತಿದ್ದ ಮುಖ್ಯ ಪೇದೆ ಶ್ವಾನವನ್ನು ಬೆಳಗ್ಗೆ 9.30ಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಘಟನೆಯ ಸ್ಥಳದಲ್ಲಿ ವಾಸನೆಯನ್ನು ತೆಗೆದುಕೊಂಡ ತುಂಗಾ ತಕ್ಷಣ ಅಲ್ಲಿಂದ ಓಡಲು ಶುರು ಮಾಡಿದ್ದಾಳೆ. ನಮಗೆ ಸುಳಿವೇ ಸಿಗಲಿಲ್ಲ. ಆದರೆ ತುಂಗಾ ಘಟನಾ ಸ್ಥಳದಿಂದ 12 ಕಿಮೀ ಓಡಿದ್ದಾಳೆ. ಮೊದಲು ಕಾಶಿಪುರ ತಂಡಾಗೆ ಬಂದಳು. ನಂತರ ಅಲ್ಲಿಂದ ಒಂದು ವೈನ್‍ಶಾಪ್‍ಗೆ ಹೋದಳು. ಅಲ್ಲಿಂದ ಒಂದು ಮನೆಯ ಬಳಿ ನಿಂತುಕೊಂಡಳು. ಅಲ್ಲಿ ಆರೋಪಿ ಚೇತನ್ ಫೋನಿನಲ್ಲಿ ಮಾತನಾಡುತ್ತಿದ್ದ. ಆತನನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಚೆನ್ನಗಿರಿ ವಿಭಾಗ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಮುನ್ನೊಲ್ಲಿ ಹೇಳಿದ್ದಾರೆ.

    ಸದ್ಯ ಆರೋಪಿ ಚೇತನ್‍ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದು, ನಾನೇ ಕೊಲೆ ಮಾಡಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಜೊತೆಗೆ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹಿಡಿದು ಕೊಟ್ಟ ತುಂಗಾಗೆ ದಾವಣಗೆರೆ ಪೊಲೀಸರು ಸನ್ಮಾನ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ದಾವಣಗೆರೆ ಎಸ್‍ಪಿ, ಇಂದು ಶ್ರೀ ಅಮರ್ ಕುಮಾರ್ ಪಾಂಡೆ ಐಪಿಎಸ್, ಮಾನ್ಯ ಎಡಿಜಿಪಿಯವರು ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ್ದು, ಇತ್ತೀಚಿಗೆ ಸೂಳೇಕೆರೆ ಬಳಿ ನಡೆದ ಕೊಲೆ ಪತ್ತೆ ಪ್ರಕರಣದಲ್ಲಿ ಮಹತ್ತರ ಪಾತ್ರವಹಿಸಿದ್ದ ಶ್ವಾನದಳದ ಕ್ರೈಮ್ ವಿಭಾಗದ ಶ್ವಾನ ‘ತುಂಗಾ’ಗೆ ಹೂವಿನ ಹಾರ ಹಾಕುವ ಮೂಲಕ ಗೌರವಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ತುಂಗಾನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಅದರ ಟ್ರೈನರ್, ಈಕೆ ನಿಜವಾಗಿಯೂ ಬೆಸ್ಟ್ ಡಾಗ್. ಆಕೆ ಇನ್ನೂ ಪೊಲೀಸ್ ವಿಭಾಗಕ್ಕಾಗಿ 15 ವರ್ಷ ಕೆಲಸ ಮಾಡುವ ಶಕ್ತಿಯನ್ನು ಹೊಂದಿದ್ದಾಳೆ. ನಾನು ಹಲವಾರು ಶ್ವಾನಗಳಿಗೆ ಟ್ರೈನಿಂಗ್ ಮಾಡಿದ್ದೇನೆ. ಯಾವುದೇ ಶ್ವಾನವಾಗಲಿ ಕ್ರೈಮ್ ನಡೆದ ಸ್ಥಳದಿಂದ ವಾಸನೆ ಹಿಡಿದು ಕೇವಲ 3-4 ಕಿಲೋಮೀಟರ್ ಹೋಗುತ್ತವೆ. ಆದರೆ ತುಂಗಾ ಮಾತ್ರ 12 ಕಿಮೀವರೆಗೆ ಹೋಗಿ ಆರೋಪಿಯನ್ನು ಹಿಡಿದುಕೊಟ್ಟಿದ್ದಾಳೆ ಎಂದಿದ್ದಾರೆ.

  • ಮನಬಂದಂತೆ ರಸ್ತೆಯಲ್ಲಿ ಓಡಾಡುತ್ತಿದ್ದ ಕಾಂಗರೂವನ್ನು ಬಂಧಿಸಿದ ಪೊಲೀಸರು

    ಮನಬಂದಂತೆ ರಸ್ತೆಯಲ್ಲಿ ಓಡಾಡುತ್ತಿದ್ದ ಕಾಂಗರೂವನ್ನು ಬಂಧಿಸಿದ ಪೊಲೀಸರು

    ಫ್ಲೋರಿಡಾ: ಮನಬಂದಂತೆ ರಸ್ತೆಯಲ್ಲಿ ಸುತ್ತುತ್ತಿದ್ದ ಕಾಂಗರೊಂದನ್ನು ಪೊಲೀಸರು ಬಂಧಿಸಿರುವ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

    ಕಾಂಗರೂ ನಮ್ಮ ನಿವಾಸದ ಬಳಿ ಓಡಾಡುತ್ತಿದೆ. ಜೊತೆಗೆ ರಸ್ತೆಯಲ್ಲಿ ಮಲಗಿಕೊಂಡು ವಾಹನ ಸವಾರರಿಗೆ ತೊಂದರೆ ಕೊಡುತ್ತಿದೆ ಎಂದು ಫ್ಲೋರಿಡಾದ ಲಾಡರ್ಡೇಲ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ನಡುರಸ್ತೆಯಲ್ಲಿ ಮಲಗಿದ್ದ ತುಂಟ ಕಾಂಗರೂವನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

    ಮೊದಲು ಅಲ್ಲಿನ ನಿವಾಸಿಗಳು ಯಾವುದೋ ಪ್ರಾಣಿ ನಮ್ಮ ಏರಿಯಾದಲ್ಲಿ ಓಡಾಡುತ್ತಾ ಬಹಳ ತೊಂದರೆ ಕೊಡುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಯಾವುದೋ ನಾಯಿ ಆಥವಾ ಬೆಕ್ಕು ಇರಬೇಕು ಎಂದು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅಲ್ಲಿ ಇದ್ದ ಕಾಂಗರೂವನ್ನು ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಸತತ ಎರಡು ಗಂಟೆಯ ಕಾರ್ಯಾಚರಣೆಯ ಮೂಲಕ ಕಾಂಗರೂವನ್ನು ಬಂಧಿಸಿರುವ ಪೊಲೀಸರು ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದಾರೆ.

    https://twitter.com/FLPD411/status/1283784930011611137

    ಈ ವಿಚಾರ ತಿಳಿದ ಕಾಂಗರು ಸಾಕಿರುವ ಮಾಲೀಕ ಆಂಟೋನಿ ಮಕಿಯಾಸ್, ತನಗೆ ವಾಪಸ್ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಫ್ಲೋರಿಡಾದ ಲಾಡರ್ಡೇಲ್ ಪ್ರದೇಶದಲ್ಲಿ ಕಾಂಗರೂವನ್ನು ಸಾಕಲು ಅನುಮತಿ ಇಲ್ಲದ ಕಾರಣ ಪೊಲೀಸರು ಆತನಿಗೆ ಅದನ್ನು ವಾಪಸ್ ನೀಡಲು ಮುಂದಾಗಿಲ್ಲ.

  • ಹೆಂಡ್ತಿ ಮೇಲೆ ಕಣ್ಣಾಕಿದ್ದಕ್ಕೆ 20ರ ಸೋದರನ ಕೊಲೆ

    ಹೆಂಡ್ತಿ ಮೇಲೆ ಕಣ್ಣಾಕಿದ್ದಕ್ಕೆ 20ರ ಸೋದರನ ಕೊಲೆ

    – ಪಕ್ಕದ್ಮನೆ ಬಾಗಿಲ ಮುಂದೆ ಶವ ಬಿಸಾಕಿದ್ರು

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಾಯದಿಂದ ತನ್ನ ಸಹೋದರನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಿಸಾಲ್‍ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಧ್ಯರಾತ್ರಿಯಲ್ಲಿ ಶವವನ್ನು ತಮ್ಮ ನೆರೆಹೊರೆಯವರ ಮನೆಯ ಬಾಗಿಲಿನ ಹೊರಗೆ ಎಸೆದಿದ್ದಾರೆ. ವೇದ ಪ್ರಕಾಶ್ (20) ಮೃತ ಯುವಕ. ಆರೋಪಿಗಳನ್ನು ಓಂ ಪ್ರಕಾಶ್ (30) ಮತ್ತು ಪತ್ನಿ ದೇವಿ (26) ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    ಆರೋಪಿ ಓಂ ಪ್ರಕಾಶ್ ಅದೇ ಪ್ರದೇಶದ ದೇವಿಯ ಜೊತೆ ಮದುವೆಯಾಗಿದ್ದನು. ಆದರೆ ಮೃತ ವೇದ ಪ್ರಕಾಶ್ ಅತ್ತಿಗೆಯ ಮೇಲೆಯೇ ಕಣ್ಣಾಕಿದ್ದ. ಅಲ್ಲದೇ ಆಕೆಯೊಂದಿಗೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದು, ಪದೇ ಪದೇ ಆಕೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ತಿಳಿದು ಓಂ ಪ್ರಕಾಶ್ ಸಹೋದರನಿಗೆ ಬುದ್ಧಿವಾದ ಹೇಳಿದ್ದಾನೆ. ಆದರೂ ವೇದ ಪ್ರಕಾಶ್ ಮತ್ತೆ ಅದೇ ಕೆಲಸ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ಆರೋಪಿ ರಾತ್ರಿ ವೇಳೆ ಸಹೋದರನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಇದಕ್ಕೆ ಪತ್ನಿ ದೇವಿ ಕೂಡ ಸಾಥ್ ನೀಡಿದ್ದು, ನಂತರ ಶವವನ್ನು ಪಕ್ಕದ ಮನೆಯ ಬಾಗಿಲಿನ ಮುಂದೆ ಎಸೆದಿದ್ದಾರೆ. ಆ ಬಳಿಕ ತನಗೂ ಕೊಲೆಗೂ ಸಂಬಂಧ ಇಲ್ಲವೆಂಬಂತೆ ನಾಟಕ ಶುರು ಮಾಡಿದ್ದ. ಗ್ರಾಮಸ್ಥರು ಬೆಳಗ್ಗೆ ಎದ್ದು ಶವ ನೋಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ವೇದ ಪ್ರಕಾಶ ತಂದೆ, ಹಿರಿಯ ಮಗ ಮತ್ತು ಆತನ ಹೆಂಡತಿ ಸೇರಿಕೊಂಡು ಕಿರಿಯ ಮಗನನ್ನು ಕೊಲೆ ಮಾಡಿದ್ದಾರೆ. ಅತ್ತಿಗೆಯ ಜೊತೆ ಕೆಟ್ಟದ್ದಾಗಿ ವರ್ತಿಸಿದ್ದಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ತಂದೆ ನೀಡಿದ ದೂರಿ ಅನ್ವಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿ ಓಂ ಪ್ರಕಾಶ್, ಆತ ನನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ನನಗೆ ಇಷ್ಟವಾಗಿಲ್ಲ, ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.

  • ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರೀತಿ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಯುವತಿಯಿಂದ ಕರೆ ಮಾಡಿಸಿ ಯುವಕರನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಆನೇಕಲ್‍ನ ಕಿರಣ್‍ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ಗ್ಯಾಂಗ್‍ನ ಯುವಕರು ಕಿರಣ್‍ನನ್ನು ಹೆದರಿಸಿ ಸುಲಿಗೆ ಮಾಡಿದ್ದರು. ಈ ವಿಚಾರವಾಗಿ ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

  • ವೃದ್ಧ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮಗ-ಮೊಮ್ಮಗ ಅರೆಸ್ಟ್

    ವೃದ್ಧ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ ಮಗ-ಮೊಮ್ಮಗ ಅರೆಸ್ಟ್

    ಮಂಗಳೂರು: ವೃದ್ಧ ತಾಯಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಮಗ ಹಾಗೂ ಮೊಮ್ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸವಣಾಲು ಗ್ರಾಮದ ಹಲಸಿನ ಕಟ್ಟೆ ನಿವಾಸಿ 70 ವರ್ಷದ ವೃದ್ಧೆ ಅಪ್ಪಿ ಶೆಟ್ಟಿಯವರಿಗೆ ಅವರ ಹಿರಿಯ ಪುತ್ರ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಹಿಗ್ಗಾಮುಗ್ಗ ಥಳಿಸಿ ಎತ್ತಿ ನೆಲಕ್ಕೆ ಎಸೆದಿದ್ದರು. ಈ ಅಮಾನವೀಯ ದೃಶ್ಯವನ್ನು ಇನ್ನೋರ್ವ ಮೊಮ್ಮಗ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದರು.

    ಇದೀಗ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಹಿರಿಯ ನಾಗರಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ವೃದ್ಧೆ ಅಪ್ಪಿ ಶೆಟ್ಟಿಯವರನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

  • ಕಲ್ಲಿನಲ್ಲಿ ಹೊಡೆದಳು ಎಂದು 8 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ, ಪ್ಲಾಸ್ಟಿಕ್ ಡ್ರಮ್‍ನಲ್ಲಿ ತುಂಬಿ ಕೊಂದೇ ಬಿಟ್ಟ

    ಕಲ್ಲಿನಲ್ಲಿ ಹೊಡೆದಳು ಎಂದು 8 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ, ಪ್ಲಾಸ್ಟಿಕ್ ಡ್ರಮ್‍ನಲ್ಲಿ ತುಂಬಿ ಕೊಂದೇ ಬಿಟ್ಟ

    – ಬುದ್ಧಿಮಾಂದ್ಯ ತಂದೆಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಲ್ಲಲ್ಲಿ ಹೊಡೆದ ಬಾಲಕಿ

    ಚೆನ್ನೈ: ತನಗೆ  ಕಲ್ಲಿನಲ್ಲಿ ಹೊಡೆದಳು ಎಂಬ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಯುವಕನೋರ್ವ 8 ವರ್ಷದ ಮುಗ್ದ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಲ್ವಿಲೈನಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಮುತಾರ್ ಎಂದು ಗುರುತಿಸಲಾಗಿದೆ. ಎಂಟು ವರ್ಷದ ಮುತಾರ್ ತನ್ನ ತಾಯಿ ಹಾಗೂ ಅಣ್ಣನ ಜೊತೆ ಕಲ್ವಿಲೈನಲ್ಲಿ ವಾಸವಿದ್ದಳು. ಅದೇ ಜಾಗದಲ್ಲಿ ವಾಸವಿದ್ದ ಆರೋಪಿ ಮುತೀಶ್ವರನ್ ಮನೆಗೆ ದಿನ ಟಿವಿ ನೋಡಲು ಹೋಗುತ್ತಿದ್ದಳು. ಈ ವೇಳೆ ಈ ಘಟನೆ ನಡೆದಿದ್ದು, ಸಾಥನ್‍ಕುಲಂ ಪೊಲೀಸರು ಆರೋಪಿ ಮುತೀಶ್ವರನ್‍ನನ್ನು ಬಂಧಿಸಿದ್ದಾರೆ.

    ಬುಧವಾರ ಬೆಳಗ್ಗೆ ಸುಮಾರು 11.30 ವೇಳೆ ಮುತಾರ್ ಆರೋಪಿ ಮನೆಗೆ ಟಿವಿ ನೋಡಲು ಹೋಗಿದ್ದಾಳೆ. ಈ ವೇಳೆ ಮುತೀಶ್ವರನ್ ಆತನ ಬುದ್ಧಿಮಾಂದ್ಯ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಅವನ ವಿರುದ್ಧ ಜಗಳ ಮಾಡಿದ್ದಾಳೆ ಜೊತೆಗೆ ಕಲ್ಲಿನಿಂದ ಹೊಡೆದಿದ್ದಾಳೆ. ಈ ವೇಳೆ ಕೋಪಗೊಂಡು ಮುತೀಶ್ವರನ್ ಆಕೆಯನ್ನು ಕತ್ತುಹಿಸುಕಿದ್ದಾನೆ. ಆಗ ಮುತಾರ್ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಗ ಅವಳನ್ನು ಒಂದು ಪ್ಲಾಸ್ಟಿಕ್ ಡ್ರಮ್‍ನಲ್ಲಿ ತುಂಬಿ ಮುಚ್ಚಳ ಹಾಕಿದ್ದಾನೆ.

    ಬಾಲಕಿಯನ್ನು ಸಾಯಿಸಿ ಅವಳನ್ನು ಡ್ರಮ್‍ಗೆ ತುಂಬಿದ ಮುತೀಶ್ವರನ್ ಒಂದು ಗಂಟೆಯ ನಂತರ ಅವನ ಸ್ನೇಹಿತ, ನಂದೀಶ್ವರನ್ ಬಳಿ ಹೋಗಿದ್ದಾನೆ. ನಮ್ಮ ಮನೆಯಲ್ಲಿ ಕಸ ತುಂಬಿದ ಡ್ರಮ್ ಇದೆ ಅದನ್ನು ಎಸೆದು ಬರಲು ನನಗೆ ನೀನು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ನಂದೀಶ್ವರ್ ಒಪ್ಪಿಕೊಂಡಿದ್ದಾನೆ ನಂತರ ಇಬ್ಬರು ಸೇರಿ ಬೈಕಿನಲ್ಲಿ ಒಂದೂವರೆ ಕಿ.ಮೀ ಡ್ರಮ್ ಅನ್ನು ಸಾಗಿಸಿದ್ದಾರೆ. ಅಲ್ಲಿ ಒಂದು ಸೇತುವೆ ಬಳಿ ಬೈಕ್ ನಿಲ್ಲಿಸಿ ಬಾಲಕಿಯ ಮೃತದೇಹವನ್ನು ಚಾನೆಲ್‍ಗೆ ಎಸೆದು ಬಂದಿದ್ದಾರೆ.

    ಈ ವೇಳೆ ಮಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಮುತಾರ್ ಕುಟುಂಬ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ನಂತರ ಸ್ಥಳೀಯರು ಇಬ್ಬರು ಯುವಕರು ಇಲ್ಲಿ ಅನುಮಾಸ್ಪದವಾಗಿ ಬಂದಿದ್ದರು ಎಂದು ಹೇಳಿದ್ದಾರೆ. ಅದೇ ಜಾಗದಲ್ಲಿ ಮುತಾರ್ ಮೃತದೇಹ ಸಿಕ್ಕಿದೆ. ಆಗ ಪೊಲೀಸ್ ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಯುವಕ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ತಾಳಿ ಸಮೇತ ಸ್ನೇಹಿತರ ಮನೆಗೆ ಕರ್ಕೊಂಡು ಹೋದ- ಒಪ್ಪದ್ದಕ್ಕೆ ಪ್ರೇಯಸಿಯ ಹತ್ಯೆ

    ತಾಳಿ ಸಮೇತ ಸ್ನೇಹಿತರ ಮನೆಗೆ ಕರ್ಕೊಂಡು ಹೋದ- ಒಪ್ಪದ್ದಕ್ಕೆ ಪ್ರೇಯಸಿಯ ಹತ್ಯೆ

    ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತಾಳಿ ಕಟ್ಟಿಸಿಕೊಳ್ಳಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪ್ರಕಾಶ್ ನಗರದ 19 ವರ್ಷದ ಯುವತಿ ಕೊಲೆಯಾಗಿದ್ದು, ಆರೋಪಿಯನ್ನು ರಾಜಾಜಿನಗರ ರೌಡಿಶೀಟರ್ ಅಭಿಗೌಡ ಎಂದು ಗುರುತಿಸಲಾಗಿದೆ. ಗಿರಿನಗರದ ದ್ವಾರಕನಗರ ಸೆಂಟ್ ಪೀಟರ್ಸ್ ಶಾಲೆ ಬಳಿ ಈ ಘಟನೆ ನಡೆದಿದೆ. ರೌಡಿಶೀಟರ್ ಅಭಿಗೌಡ ರಾಜಾಜಿನಗರದಿಂದ ಗಿರಿನಗರಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಅಂದಿದ್ದಕ್ಕೆ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ರೌಡಿಶೀಟರ್ ಅಭಿಗೌಡ ಮತ್ತು ಯುವತಿ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ವಾಸವಿದ್ದರು. ಒಂದೇ ಏರಿಯಾ ಆಗಿದ್ದ ಇಬ್ಬರು ಪರಸ್ವರ ಪ್ರೀತಿ ಮಾಡುತ್ತಿದ್ದರು. ಸೋಮವಾರ ಸಂಜೆ ಆರೋಪಿ ಅಭಿಗೌಡ ಯುವತಿಗೆ ಫೋನ್ ಮಾಡಿ ಹೊರಗಡೆ ಬರುವಂತೆ ಕೇಳಿಕೊಂಡಿದ್ದನು. ಅದರಂತೆಂಯೇ ಆರೋಪಿ ಅಭೀಗೌಡ ತಾಳಿ ಸಮೇತ ಮದುವೆಯಾಗಲು ಯುವತಿಯನ್ನ ಗಿರಿನಗರ ಸ್ನೇಹಿತರ ಮನೆಗೆ ಕರೆದುಕೊಂಡು ಹೋಗಿದ್ದನು.

    ಈ ವೇಳೆ ಅಭಿಗೌಡ ಯುವತಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಆಗ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದಾನೆ. ಇತ್ತ ಯುವತಿ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

    ಯುವತಿಯನ್ನ ಕೊಲೆ ಮಾಡಿದ ಬಳಿಕ ರಾಜಾಜಿನಗರ ಪೊಲೀಸ್ ಠಾಣೆಗೆ ಹೋಗಿ ಆರೋಪಿ ಅಭಿಗೌಡ ಸರೆಂಡರ್ ಆಗಿದ್ದಾನೆ. ರಾಜಾಜಿನಗರ ಪೊಲೀಸರು ಆತನನ್ನು ಗಿರಿನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

  • ಗಾಂಜಾದ ಅಮಲಿನಲ್ಲಿ ನಡು ರಸ್ತೆಯಲ್ಲಿ ತಲವಾರು ಬೀಸಿದ ಯುವಕರು – ಮೂವರಿಗೆ ಗಾಯ

    ಗಾಂಜಾದ ಅಮಲಿನಲ್ಲಿ ನಡು ರಸ್ತೆಯಲ್ಲಿ ತಲವಾರು ಬೀಸಿದ ಯುವಕರು – ಮೂವರಿಗೆ ಗಾಯ

    ಮಂಗಳೂರು: ಗಾಂಜಾ ಸೇವನೆಯ ಮತ್ತಿನಲ್ಲಿ ತಡರಾತ್ರಿ ನಡು ರಸ್ತೆಯಲ್ಲೇ ಇಬ್ಬರು ಯುವಕರು ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ಮಂಗಳೂರು ನಗರದ ಬಜಿಲಕೇರಿ ಎಂಬಲ್ಲಿ ನಡೆದಿದೆ.

    ತಲವಾರಿನೊಂದಿಗೆ ರಸ್ತೆಯಲ್ಲಿ ಕಿರುಚಾಡುತ್ತಾ ಬಂದು ಇನ್ನೊಂದು ಕೋಮಿನ ಮನೆಗೆ ನುಗ್ಗಲು ಯತ್ನಿಸಿದ್ದು, ಯಾವುದೇ ದ್ವೇಷ ಇಲ್ಲದೆ ಗಾಂಜಾದ ಅಮಲಿನಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ವಿಚಾರ ತಿಳಿದು ತಕ್ಷಣ ಸ್ಥಳೀಯ ಬಂದರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಪೊಲೀಸರ ಎದುರೇ ಯುವಕರು ತಲವಾರು ಬೀಸಿ ಪೊಲೀಸರನ್ನೂ ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಪೊಲೀಸರು ಇಬ್ಬರು ಯವಕರಿಂದ ಉಪಾಯದಿಂದ ಮಾರಕಾಸ್ತ್ರಗಳನ್ನು ಕಿತ್ತುಕೊಂಡು ನಂತರ ಬಂಧಿಸಿದ್ದಾರೆ. ಈ ಸಂಬಂಧ ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

  • ಪ್ರೇಮ ಪ್ರಕರಣದ ಗಲಾಟೆಯಲ್ಲಿ ಐವರ ಕೊಲೆ- ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ

    ಪ್ರೇಮ ಪ್ರಕರಣದ ಗಲಾಟೆಯಲ್ಲಿ ಐವರ ಕೊಲೆ- ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ

    – ಐದು ಜನ ಕೊಲೆ ಆರೋಪಿಗಳ ಬಂಧನ

    ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧ ಹಿನ್ನೆಲೆ ಹಳೇ ವೈಷಮ್ಯದಿಂದ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಕಗ್ಗೊಲೆ ಪ್ರಕರಣದ ಶವಗಳಿಗೆ ಒಂದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

    ಮರಣೋತ್ತರ ಪರೀಕ್ಷೆ ಬಳಿಕ ಜೆಸಿಬಿ ಮೂಲಕ ಗುಂಡಿ ತೋಡಿ ಶವಗಳನ್ನ ಮುಚ್ಚಲಾಗಿದೆ. ಐದು ಜನ ಕೊಲೆ ಆರೋಪಿಗಳನ್ನೂ ಬಂಧಿಸಲಾಗಿದೆ. ಯುವತಿ ಸಂಬಂಧಿಕರಾದ ಅಂಬಣ್ಣ, ಸೋಮಶೇಖರ್, ಸಣ್ಣ ಫಕೀರಪ್ಪ, ರೇಖಾ, ಗಂಗಮ್ಮ ಬಂಧಿತ ಆರೋಪಿಗಳು.

    ಮನೆಯವರ ವಿರೋಧದ ನಡುವೆ ಯುವತಿ ಮಂಜುಳ ಅದೇ ಬಡಾವಣೆಯ ಮೌನೇಶ್‍ನನ್ನು ಏಳು ತಿಂಗಳ ಕೆಳಗೆ ಮದುವೆಯಾಗಿದ್ದಳು. ಹುಡುಗನ ಮನೆಯಲ್ಲಿ ಮದುವೆಗೆ ಸಮ್ಮತಿಯಿದ್ದಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಯುವತಿ ಮಂಜುಳಾ ತಂದೆ ಫಕಿರಪ್ಪ ಎರಡನೇ ಮದುವೆಯಾಗಿ ಮೊದಲ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಪ್ರಶ್ನಿಸಲು ಮಂಜುಳಾ ತವರು ಮನೆಗೆ ಹೋದಾಗ ಗಲಾಟೆಯಾಗಿದೆ. ತಂದೆಯ ವಿರುದ್ಧ ಯುವತಿ ಪೊಲೀಸ್ ಠಾಣೆಗೆ ಹೋದಾಗ, ಮನೆಗೆ ಬಂದ ಆರೋಪಿಗಳು ಸಿಕ್ಕಸಿಕ್ಕವರನ್ನು ಕೊಚ್ಚಿಹಾಕಿದ್ದಾರೆ.

    ಘಟನೆಯಲ್ಲಿ ಯುವಕನ ತಂದೆ ಈರಪ್ಪ, ತಾಯಿ ಸುಮಿತ್ರಾ, ಅಣ್ಣಂದಿರಾದ ಹನುಮೇಶ್, ನಾಗರಾಜ್ ಹಾಗೂ ಅತ್ತಿಗೆ ಶ್ರೀದೇವಿ ಸೇರಿ ಐದು ಜನ ಕೊಲೆಯಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

  • ಲಾಕ್‍ಡೌನ್ ವೇಳೆ ಮದ್ಯ ಕದ್ದು ಹೆಚ್ಚಿನ ಬೆಲೆಗೆ ಮಾರಲು ಪ್ಲಾನ್- 6.60 ಲಕ್ಷ ಮೌಲ್ಯದ ಎಣ್ಣೆ ವಶ

    ಲಾಕ್‍ಡೌನ್ ವೇಳೆ ಮದ್ಯ ಕದ್ದು ಹೆಚ್ಚಿನ ಬೆಲೆಗೆ ಮಾರಲು ಪ್ಲಾನ್- 6.60 ಲಕ್ಷ ಮೌಲ್ಯದ ಎಣ್ಣೆ ವಶ

    ಹಾಸನ: ಲಾಕ್‍ಡೌನ್ ಸಮಯದಲ್ಲಿ ಎಣ್ಣೆ ಕಳ್ಳತನ ಮಾಡಿ ಮತ್ತೆ ಲಾಕ್‍ಡೌನ್ ಆದರೆ ಹೆಚ್ಚು ಬೆಲೆಗೆ ಮಾರಬಹುದು ಎಂದು ಪ್ಲಾನ್ ಮಾಡಿದ್ದ ಇಬ್ಬರು ಖತರ್ನಾಕ್ ಮದ್ಯ ಕಳ್ಳರನ್ನು ಜಿಲ್ಲೆಯ ಸಕಲೇಶಪುರ ತಾಲೂಕಿನ ಪೊಲೀಸರು ಬಂಧಿಸಿದ್ದಾರೆ.

    ಮೋಹನ್ (31) ಮತ್ತು ಚಂದ್ರು (42) ಬಂಧಿತ ಆರೋಪಿಗಳು. ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ತಾಲೂಕು ಸೇರಿದಂತೆ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕವಾಗಿ ಮದ್ಯದ ಕಳ್ಳತನ ನಡೆಯುತ್ತಿತ್ತು. ಹೀಗಾಗಿ ಸಕಲೇಶಪುರ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

    ಪೊಲೀಸರ ತನಿಖೆಯಲ್ಲಿ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಗಳ ಆರು ಲಕ್ಷದ ಅರವತ್ತು ಸಾವಿರ ಮೌಲ್ಯದ ಮದ್ಯ, ಒಂದು ಕಾರು, ಒಂದು ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳು ಲಾಕ್‍ಡೌನ್ ಸಮಯದಲ್ಲಿ ಮದ್ಯ ಕದ್ದು ನಂತರದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.