Tag: arrest

  • ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

    ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

    – ಸುಟ್ಟು ಕರಕಲಾದ ಮೂರು ಅಂತಸ್ತಿನ ಮನೆ

    ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದಿಂದ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಕಾವಲ್‌ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು

    ಕಾವಲ್ ಭೈರಸಂದ್ರದಲ್ಲಿರುವ ಮೂರು ಅಂತಸ್ತಿನ ಮನೆ ಬೆಂಕಿಗಾಹುತಿಯಾಗಿದೆ. ಶಾಸಕರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪಾಳು ಮನೆಯಂತೆ ಭಾಸವಾಗುತ್ತಿದೆ. ಪರಿಣಾಮ ಅಕ್ಕಪಕ್ಕದ ರಸ್ತೆ, ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಸದ್ಯಕ್ಕೆ ಪೊಲೀಸರು ಕೆಜಿ ಹಳ್ಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನ ಬಂದ್ ಮಾಡಿದ್ದಾರೆ.

    ಕಿಡಿಗೇಡಿಗಳು ಸ್ಥಳಕ್ಕೆ ಬಂದ ಪೊಲೀಸರು ಮೇಲೂ ದಾಳಿ ಮಾಡಿದ್ದು, ಸಿಕ್ಕ ಸಿಕ್ಕ ವಸ್ತುಗಳಿಗೆಲ್ಲಾ ಬೆಂಕಿ ಹಚ್ಚಿದ್ದರು. ಕೊನೆಗೆ ರಾತ್ರಿಯೆಲ್ಲಾ ಫೀಲ್ಡ್‌ಗೆ ಇಳಿದಿದ್ದ ಪೊಲೀಸರು 110 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದ್ದು, ಗಾಯಗೊಂಡ ಪೊಲೀಸರಿಗೆ ನಗರದ ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಬೆನ್ನು, ಮುಖಕ್ಕೆ ಸೇರಿದಂತೆ ಹಲವು ಕಡೆ ಗಂಭೀರ ಗಾಯಗಳಾಗಿವೆ.

    ಅಲ್ಲದೇ ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಆರೋಪಿಗಳಿಗೆ ಗಾಯವಾಗಿದ್ದು, 10 ಜನರಲ್ಲಿ 6 ಜನ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರು ಜನ ಪರಾರಿಯಾಗಿದ್ದಾರೆ. ಈಗಾಗಲೇ ಪೊಲೀಸರ ಗೋಲಿಬಾರ್‌ಗೆ ಮೂರು ಬಲಿಯಾಗಿದ್ದಾರೆ.

    ಇಡೀ ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಿಕ್ಕಿದರೆ ಹಲ್ಲೆ ಮಾಡುತ್ತಾರೆ ಎಂದು ಪೊಲೀಸರು ಬುರ್ಖಾ ಹಾಕಿ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

  • ಸೋದರನ ಪರವಾಗಿ ನಿಂತಿದ್ದಕ್ಕೆ ಯುವಕನ ಹತ್ಯೆ ಮಾಡಿದ್ದ ಗ್ಯಾಂಗ್ ಬಂಧನ

    ಸೋದರನ ಪರವಾಗಿ ನಿಂತಿದ್ದಕ್ಕೆ ಯುವಕನ ಹತ್ಯೆ ಮಾಡಿದ್ದ ಗ್ಯಾಂಗ್ ಬಂಧನ

    ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಣಿ (27) ಕೊಲೆಯಾಗಿದ್ದ ಯುವಕ. ಇದೀಗ ಮೈಕೋ ಲೇಔಟ್ ಠಾಣಾ ಪೊಲೀಸರು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂತೋಷ್, ಅಲೆಕ್ಸಾಂಡರ್, ವಿಜಯ್, ದಿಲೀಪ್ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ.

    ಕಳೆದ ಸೋಮವಾರ ಅಂದರೆ ಆಗಸ್ಟ್ 3 ರಂದು ಮಧ್ಯರಾತ್ರಿ ಬಿಟಿಎಂ ಲೇಔಟ್‍ನ 2ನೇ ಹಂತದ ಎನ್.ಎಸ್.ಪಾಳ್ಯದಲ್ಲಿ ಈ ಕೊಲೆ ನಡೆದಿತ್ತು. ಮಣಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

    ಕೊಲೆಯಾಗಿರುವ ಮಣಿಯ ಸಹೋದರ ಲೋಕೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳು ಹಾಗೂ ಲೋಕೇಶ್ ನಡುವೆ ಜಗಳವಾಗಿತ್ತು. ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ ಮಣಿ ತನ್ನ ತಮ್ಮನ ಪರವಾಗಿ ಜಗಳ ಮಾಡಿಕೊಂಡಿದ್ದನು. ಇದೇ ಕಾರಣದಿಂದ ಆರೋಪಿಗಳು ಮಣಿಯನ್ನ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.

    ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಚಂದನ್, ಸುಮಂತ್, ಲಿಖಿತ್ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಈ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಈ ನಾಲ್ವರು ಯುವಕರು ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದರು.

    ಅಲ್ಲದೇ ಒಬ್ಬ ಬೈಕ್ ಓಡಿಸುತ್ತಿದ್ದರೆ ಹಿಂದೆ ಕುಳಿತಿದ್ದವ ವ್ಹೀಲಿಂಗ್ ಮಾಡುತ್ತಿರುವುದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ಇದೀಗ ಪೊಲೀಸರು ಯುವಕರು ವ್ಹೀಲಿಂಗ್ ಮಾಡಲು ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ.

  • ಗುಡಿಸಲಲ್ಲಿ ಒಟ್ಟಿಗಿದ್ದ ಪ್ರೇಮಿಗಳು- ಬೀಗ ಹಾಕಿ ಬೆಂಕಿ ಹಚ್ಚಿದ ಕುಟುಂಬಸ್ಥರು

    ಗುಡಿಸಲಲ್ಲಿ ಒಟ್ಟಿಗಿದ್ದ ಪ್ರೇಮಿಗಳು- ಬೀಗ ಹಾಕಿ ಬೆಂಕಿ ಹಚ್ಚಿದ ಕುಟುಂಬಸ್ಥರು

    ಲಕ್ನೋ: 19 ವರ್ಷದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಹುಡುಗಿಯ ಕುಟುಂಬದವರೇ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಪ್ರಿಯಾಂಕಾ ಮತ್ತು ಭೋಲಾ (23) ಮೃತ ಪ್ರೇಮಿಗಳು. ಮಾತೌಂಡ್ ಪ್ರದೇಶದ ಕಾರ್ಚಾ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಪ್ರಿಯಾಂಕಾ ತನ್ನ ಪ್ರಿಯಕರ ಭೋಲಾ ಜೊತೆ ಇದ್ದುದ್ದನ್ನು ಯುವತಿಯ ಕುಟುಂಬದ ಸದಸ್ಯರು ನೋಡಿದ್ದಾರೆ. ನಂತರ ಅವರು ಗುಡಿಸಲಿಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಇಬ್ಬರ ಕಿರುಚಾಟ ಕೇಳಿ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭೋಲಾ ಸಾವನ್ನಪ್ಪಿದ್ದಾನೆ. ಇನ್ನೂ ಪ್ರಿಯಾಂಕಾ ಶೇ.80 ರಷ್ಟು ಸುಟ್ಟಗಾಯಗಳಿಗೆ ಬಳಲುತ್ತಿದ್ದಳು. ಆಕೆಯನ್ನು ಕಾನ್ಪುರದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾಳೆ.

    ಯುವತಿಯ ಕುಟುಂಬದ ಒಂಬತ್ತು ಸದಸ್ಯರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿವೆ. ಸದ್ಯಕ್ಕೆ ಇಬ್ಬರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

  • ಮಧ್ಯರಾತ್ರಿ ಪತ್ನಿಯ ಕತ್ತು ಕೊಯ್ದು ಎಸ್ಕೇಪ್- ಅಮ್ಮನ ಶವದ ಜೊತೆ ಮಲಗಿದ್ದ ಮಕ್ಕಳು

    ಮಧ್ಯರಾತ್ರಿ ಪತ್ನಿಯ ಕತ್ತು ಕೊಯ್ದು ಎಸ್ಕೇಪ್- ಅಮ್ಮನ ಶವದ ಜೊತೆ ಮಲಗಿದ್ದ ಮಕ್ಕಳು

    ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸಂಧ್ಯಾ (26) ಕೊಲೆಯಾದ ವಿವಾಹಿತೆ. ಈ ಘಟನೆ ನಗರದ ಮಾರತಹಳ್ಳಿಯಲ್ಲಿ ನಡೆದಿದ್ದು, ಆರೋಪಿ ಪತಿ ನಾಗೇಶ್ ಸೋಮವಾರ ರಾತ್ರಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಮೂರು ವರ್ಷದ ಹಿಂದೆ ಮುನ್ನೇಕೊಳಲು ಮೂಲದ ಸಂಧ್ಯಾಳನ್ನು ಆರೋಪಿ ನಾಗೇಶ್ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆರೋಪಿ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸೋಮವಾರ ರಾತ್ರಿ ಸಂಧ್ಯಾ ತನ್ನ ಇಬ್ಬರು ಮಕ್ಕಳ ಜೊತೆ ಮನೆಯಲ್ಲಿ ಮಲಗಿದ್ದಳು. ಈ ವೇಳೆ ನಿದ್ದೆ ಮಾಡುತ್ತಿದ್ದ ಪತ್ನಿಯ ಕತ್ತುನ್ನು ಕೊಯ್ದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ನಂತರ ಆರೋಪಿ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಪರಾರಿಯಾಗಿದ್ದನು. ಇತ್ತ ಮಂಗಳವಾರ ಮುಂಜಾನೆ ಮಕ್ಕಳು ಎದ್ದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮಕ್ಕಳು ಅಳುತ್ತಿದ್ದದ್ದನ್ನು ಕೇಳಿ ನೆರೆಹೊರೆಯವರು ಬಂದು ನೋಡಿದ್ದಾರೆ. ಆಗ ಸಂಧ್ಯಾ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದನ್ನು ನೋಡಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಕಳ್ಳತನ ಮಾಡಲು ಬಂದು ಕೊಲೆ ಮಾಡಿರಬಹುದು ಎಂದು ಮನೆಯೊಳಗೆ ಪರಿಶೀಲನೆ ಮಾಡಿದ್ದರು.

    ಆಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳು, ಹಣ ಎಲ್ಲ ಇದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಆರೋಪಿ ಪತಿ ಮಧ್ಯರಾತ್ರಿ ಮನೆಯಿಂದ ಪರಾರಿಯಾಗಿದ್ದು ಸೆರೆಯಾಗಿತ್ತು. ತಕ್ಷಣ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

  • 2 ವರ್ಷದಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ರೌಡಿಶೀಟರ್ ಮೇಲೆ ಫೈರಿಂಗ್

    2 ವರ್ಷದಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ರೌಡಿಶೀಟರ್ ಮೇಲೆ ಫೈರಿಂಗ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಕೆಜಿ ಹಳ್ಳಿ ಪೊಲೀಸರು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಆರೋಪಿ ಅನೀಫ್ ಅಹಮದ್ ಗುಂಡೇಟು ತಿಂದ ರೌಡಿಶೀಟರ್. ಆರೋಪಿ ಕೊಲೆ, ಕೊಲೆ ಯತ್ನ ಮತ್ತು ರಾಬರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

    ಕಳೆದ ಎರಡು ವರ್ಷದಿಂದ ಪೊಲೀಸರ ಕೈಗೆ ಸಿಗದೆ ಆರೋಪಿ ರೌಡಿಶೀಟರ್ ತಪ್ಪಿಸಿಕೊಂಡಿದ್ದನು. ಮಂಗಳವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಲು ಹೋಗಿದ್ದಾರೆ. ಆಗ ಆರೋಪಿ ಅಹಮದ್‍ನನ್ನು ಸೆರೆಹಿಡಿಯಲು ಯತ್ನಿಸಿದ ವೇಳೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಕೆಜಿ ಹಳ್ಳಿ ಪೊಲೀಸರು ಗುಂಡು ಹಾರಿಸಿದ್ದಾರೆ.

    ಸದ್ಯಕ್ಕೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಆರೋಪಿ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • 8 ಮಂದಿ ದರೋಡೆಕೋರರ ಬಂಧನ – 70 ಸ್ಮಾರ್ಟ್‌ಫೋನ್, 23 ಲ್ಯಾಪ್‌ಟಾಪ್ ವಶ

    8 ಮಂದಿ ದರೋಡೆಕೋರರ ಬಂಧನ – 70 ಸ್ಮಾರ್ಟ್‌ಫೋನ್, 23 ಲ್ಯಾಪ್‌ಟಾಪ್ ವಶ

    – ಎರಡು ಗುಂಪುಗಳಾಗಿ ಕಳ್ಳತನ

    ಭುವನೇಶ್ವರ: ಎಂಟು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಒಡಿಶಾದ ಅವಳಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.  ಬಂಧಿತ ಆರೋಪಿಗಳಿಂದ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ರಂಜನ್ ಸತ್ಪತಿ (20), ಸಂಜಯ್ ಬೆಹೆರಾ (23), ಮಂಟು ಪೈಕ್ರೆ (38), ಚಂದನ್ ಪ್ರಧಾನ್ (27), ಪ್ರಸಾದ್ ಮೋಹಪಾತ್ರ (32), ಜಾವೇದ್ (37), ಅಲೋಕ್ ಬೆಹೆರಾ (28), ಮತ್ತು ಪ್ರದೀಪ್ ದಾಸ್ (33) ಎಂದು ಗುರುತಿಸಲಾಗಿದೆ.

    ಆರೋಪಿಗಳು ಎರಡು ಗುಂಪುಗಳಾಗಿ ವಿಗಂಡಣೆಯಾಗಿ ದರೋಡೆ ಮಾಡುತ್ತಿದ್ದರು. ಒಂದು ಗುಂಪು ನಗರದ ಖಂಡಗಿರಿ ಮತ್ತು ಟೊಮಾಂಡೋ ಪ್ರದೇಶಗಳಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‍ಗಳನ್ನು ಕದಿಯುತ್ತಿದ್ದರು. ನಂತರ ಅದನ್ನು ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು.

    ಮತ್ತೊಂದು ಗುಂಪು ಮುಂಜಾನೆ ವಾಕಿಂಗ್ ಬರುತ್ತಿದ್ದ ಜನರನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರನ್ನು ಬೆದರಿಸಿ ಮೊಬೈಲ್ ಫೋನ್ ಮತ್ತು ಬೈಕ್‍ಗಳನ್ನು ಕಸಿದುಕೊಳ್ಳುವಲ್ಲಿ ತೊಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ಬರೋಬ್ಬರಿ 70 ಸ್ಮಾರ್ಟ್‌ಫೋನ್‌ಗಳು, 23 ಲ್ಯಾಪ್‌ಟಾಪ್‌ಗಳು ಮತ್ತು 9 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದ್ವೆ ಮಾಡದ್ದಕ್ಕೆ ನಾಲ್ವರು ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ

    ಮದ್ವೆ ಮಾಡದ್ದಕ್ಕೆ ನಾಲ್ವರು ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ

    – ನೆರೆ ಮನೆಗೆ ಓಡಿ ಹೋಗಿ ತಾಯಿ ಬಚಾವ್
    – ಅರ್ಧ ಕಿ.ಮೀ ದೂರ ಓಡಿ ಪರಾರಿಯಾಗಲು ಯತ್ನ

    ಮಂಗಳೂರು: ಮಾನಸಿಕ ಅಸ್ವಸ್ಥನೊಬ್ಬ ತನ್ನ ನಾಲ್ವರು ರಕ್ತ ಸಂಬಂಧಿಗಳನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿ ನಡಿದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾದ ಕಾಸರಗೋಡಿನ ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ಈ ಬರ್ಬರ ಹತ್ಯೆ ನಡೆದಿದೆ. ಇಲ್ಲಿನ ಕೃಷಿ ಕೂಲಿ ಕಾರ್ಮಿಕ ಸಹೋದರರಾದ ಬಾಬು (65), ವಿಠಲ (60), ಸದಾಶಿವ (55) ಮತ್ತು ಈ ಮೂವರು ಸೋದರಿ ದೇವಕಿ (58) ಕೊಲೆಯಾದ ದುರ್ದೈವಿಗಳು.

    ಕೊಲೆಯಾದ ದೇವಕಿ ಆರೋಪಿ ಉದಯ್‍ನ ಚಿಕ್ಕಮ್ಮನಾಗಿದ್ದು, ಉಳಿದ ಮೂವರು ಆರೋಪಿಯ ಮಾವಂದಿರಾಗಿದ್ದಾರೆ. ಆರೋಪಿ ಉದಯ್ ಅವಿವಾಹಿತನಾಗಿದ್ದು, ಕಳೆದ ಕೆಲ ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತನಗೆ ಮದುವೆ ಮಾಡಿಸಿಲ್ಲ ಎಂದು ತನ್ನ ಸಂಬಂಧಿಗಳೊಂದಿಗೆ ಆಗಾಗ ಆರೋಪಿ ಜಗಳ ಮಾಡುತ್ತಿದ್ದ.

    ಕೆಲವು ದಿನಗಳ ಹಿಂದೆ ಆರೋಪಿ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಆದರೆ ಸೋಮವಾರ ರಾತ್ರಿ ಮನೆಗೆ ಬಂದ ಆರೋಪಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದು ಮನೆಯಲ್ಲಿದ್ದವರ ಮೇಲೆ ದಾಳಿ ಮಾಡಿದ್ದಾನೆ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ತನ್ನ ತಾಯಿಯನ್ನೂ ಕೊಲೆ ಮಾಡಲು ಹೋಗಿದ್ದಾನೆ. ಅದೃಷ್ಟವಶಾತ್ ಆರೋಪಿಯ ತಾಯಿ ನೆರೆಮನೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

    ನೆರೆಮನೆಯವರು ಆಗಮಿಸುವಷ್ಟರಲ್ಲಿ ಆರೋಪಿ ಸುಮಾರು ಅರ್ಧ ಕಿಲೋಮೀಟರ್ ದೂರ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಸ್ಥಳೀಯರು ಕಟ್ಟತ್ತಾರಿನಿಂದ ಆತನನ್ನು ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆ ತಂದಿದ್ದಾರೆ. ಆರೋಪಿ ಮತ್ತೆ ಪರಾರಿಯಾಗಲೆತ್ನಿಸಿದಾಗ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಮಂಡ್ಯದಲ್ಲಿ ಮಗನಿಂದ್ಲೇ ತಾಯಿಯ ಕೊಲೆ – ಮೊಬೈಲ್ ಬಳಸಬೇಡ ಅಂದಿದ್ದೇ ತಪ್ಪಾಯ್ತು

    ಮಂಡ್ಯದಲ್ಲಿ ಮಗನಿಂದ್ಲೇ ತಾಯಿಯ ಕೊಲೆ – ಮೊಬೈಲ್ ಬಳಸಬೇಡ ಅಂದಿದ್ದೇ ತಪ್ಪಾಯ್ತು

    – ತಾಯಿ ಮೃತದೇಹ ತಬ್ಬಿಕೊಂಡು ಗೋಳಾಡಿ ನಾಟಕ ಮಾಡಿದ್ದ ಆರೋಪಿ

    ಮಂಡ್ಯ: ಜಿಲ್ಲೆಯ ಮನೆಯೊಂದರಲ್ಲಿ ಹಾಡುಹಗಲೇ ಮಹಿಳೆ ಬರ್ಬರ ಹತ್ಯೆಯಾಗಿತ್ತು. ಇದೀಗ ಪೊಲೀಸರು ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗನೇ ತಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಮೂರು ದಿನದ ಹಿಂದಷ್ಟೇ ಮಂಡ್ಯದ ವಿದ್ಯಾನಗರದ ಮನೆಯೊಂದರಲ್ಲಿ ಹಾಡಹಗಲೇ ಮಹಿಳೆಯ ಭೀಕರ ಹತ್ಯೆ ನಡೆದಿತ್ತು. ಈ ಘಟನೆಯಿಂದ ಅಕ್ಕಪಕ್ಕದ ನಿವಾಸಿಗಳನ್ನು ಬೆಚ್ಚಿಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪಶ್ಚಿಮ ಠಾಣೆ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ವಂತ ಮಗನೇ ತಾಯಿಯನ್ನು ಕೊಲೆ ಮಾಡಿರೋದು ಬಹಿರಂಗವಾಗಿದೆ.

    ಮಾಜಿ ಸಂಸದೆ, ನಟಿ ರಮ್ಯಾ ಈ ಹಿಂದೆ ಬಾಡಿಗೆ ಪಡೆದಿದ್ದ ಮನೆಯ ಪಕ್ಕದ ಔಟ್‍ಹೌಸ್‍ನಲ್ಲಿ 45 ವರ್ಷದ ಶ್ರೀಲಕ್ಷ್ಮೀ ಅಲಿಯಾಸ್ ಲಲಿತಾಂಬ ತಮ್ಮ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಎರಡು ವರ್ಷಗಳಿಂದ ವಾಸವಿದ್ದರು. ಜುಲೈ 29 ರಂದು ಚಾಕುವಿನಿಂದ ಹಲವು ಬಾರಿ ಇರಿದು ಆಕೆಯ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಬಂಧಿಸಿದಂತೆ ಆಕೆಯ ಹಿರಿಯ ಮಗ ಮನುಶರ್ಮನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಮನುಶರ್ಮ ಹುಡುಗಿಯೊಬ್ಬಳ ಜೊತೆ ಫೋನಿನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ, ಮಗನ ನಡುವೆ ಜಗಳ ನಡೆಯುತ್ತಿತ್ತು. ಜುಲೈ 29ರಂದು ಕೂಡ ಹುಡುಗಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಗಮನಿಸಿ ತಾಯಿ ಬೈದಿದ್ದಾರೆ. ಮಾತು ಕೇಳದಿದ್ದಾಗ ಲಲಿತಾಂಬ ಮಗನಿಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಮನುಶರ್ಮ, ತರಕಾರಿ ಕತ್ತರಿಸುವ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾನೆ.

    ಕೊಲೆ ಮಾಡಿದ ನಂತರ ಬಟ್ಟೆ ಬದಲಿಸಿಕೊಂಡು ರಕ್ತಿಸಿಕ್ತವಾಗಿದ್ದ ತನ್ನ ಬಟ್ಟೆ ಹಾಗೂ ಚಾಕುವನ್ನು ರೈಲ್ವೆ ಹಳಿಗಳ ಮೇಲೆ ಬಿಸಾಡಿದ್ದಾನೆ. ಕೊಲೆಯಾದ ಮಹಿಳೆಯ ಎರಡನೇ ಮಗ ಆದಿತ್ಯ, ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಕೊಲೆ ನಡೆದಿರುವುದು ತಿಳಿದಿದೆ. ಕೆಲವು ಗಂಟೆ ಬಿಟ್ಟು ಮನೆಗೆ ವಾಪಸ್ ಬಂದಿದ್ದ ಆರೋಪಿ, ತನಗೇನೂ ಗೊತ್ತಿಲ್ಲವೆಂಬಂತೆ ತಾಯಿ ಮೃತದೇಹ ತಬ್ಬಿಕೊಂಡು ಗೋಳಾಡಿ, ಪ್ರಕರಣ ದಾರಿ ತಪ್ಪಿಸುವ ಯತ್ನ ನಡೆಸಿದ್ದನು.

    ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿದ್ದ ತಾಯಿ, ಮಗ ದಾರಿತಪ್ಪ ಬಾರದೆಂದು ಬೈದು, ಒಂದೇಟು ಹೊಡೆದಿದ್ದರು. ಆದರೆ ಹೆತ್ತ ತಾಯಿಯನ್ನೇ ಕೊಂದು ಮಗ ಜೈಲು ಸೇರಿದ್ದಾನೆ.

  • ಮದ್ವೆ ಆಗಿದ್ರೂ ಅನೈತಿಕ ಸಂಬಂಧ- ಮಂಚದ್ಮೇಲೆ ಮಲಗಿ ಹಾಡು ಕೇಳ್ತಿದ್ದ ವಿವಾಹಿತ ಪ್ರೇಯಸಿಯ ಕೊಲೆ

    ಮದ್ವೆ ಆಗಿದ್ರೂ ಅನೈತಿಕ ಸಂಬಂಧ- ಮಂಚದ್ಮೇಲೆ ಮಲಗಿ ಹಾಡು ಕೇಳ್ತಿದ್ದ ವಿವಾಹಿತ ಪ್ರೇಯಸಿಯ ಕೊಲೆ

    – ವಿವಾಹ ಆಗೋದಾಗಿ ನಂಬಿಸಿ ದೈಹಿಕ ಸಂಬಂಧ

    ಹೈದರಾಬಾದ್: ವಿವಾಹಿತ ಯುವತಿಯನ್ನ ಪ್ರಿಯಕರನೇ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತೇಜಸ್ವಿನಿ (21) ಕೊಲೆಯಾದ ಯುವತಿ. ಅಜ್ಜ ಮತ್ತು ಅಜ್ಜಿ ಮನೆಗೆ ಬಂದಿದ್ದು, ಶನಿವಾರ ಮಧ್ಯಾಹ್ನ ಮನೆಯ ಹೊರಗೆ ಮಲಗಿದ್ದಾಗ ಪ್ರಿಯಕರ ಬಂದು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಏನಿದು ಪ್ರಕರಣ?
    ಮೃತ ತೇಜಸ್ವಿನಿ ಇತ್ತೀಚೆಗಷ್ಟೆ ಮದುವೆಯಾಗಿದ್ದಳು. ಆದರೆ ಮಾನಸಿಕ ಸಮಸ್ಯೆಗಳಿಂದ ಪತಿಯಿಂದ ದೂರವಾಗಿದ್ದು, ತನ್ನ ತಂದೆಯ ಜೊತೆ ಕೆಲವು ತಿಂಗಳಿನಿಂದ ವಾಸ ಮಾಡುತ್ತಿದ್ದಳು. ಈ ವೇಳೆ ತನ್ನ ಆಪ್ತ ಸಂಬಂಧಿ ದುರ್ಗಾ ಪ್ರಸಾದ್ (25) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದುರ್ಗಪ್ರಸಾದ್ ಕೂಡ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಸಂಬಂಧವನ್ನು ಮುಂದುವರಿಸಿದ್ದನು.

    ಇತ್ತೀಚೆಗೆ ಆರೋಪಿ ದುರ್ಗ ಪ್ರಸಾದ್, ತೇಜಸ್ವಿನಿಯನ್ನು ಮದುವೆಯಾಗಲು ಇಷ್ಟಪಡುವುದಿಲ್ಲ. ಹೀಗಾಗಿ ಆಕೆಯನ್ನು ದೂರ ಮಾಡುತ್ತಿದ್ದನು. ಆದರೆ ಯುವತಿ ಮದುವೆ ಆಗುವಂತೆ ಪ್ರಿಯಕರನನ್ನು ಒತ್ತಾಯಿಸುತ್ತಿದ್ದಳು. ತೇಜಸ್ವಿನಿ ಮೂರು ದಿನಗಳ ಹಿಂದೆ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಶನಿವಾರ ಮಧ್ಯಾಹ್ನ ಮನೆಯ ಹೊರಗೆ ಮಂಚದ ಮೇಲೆ ಮಲಗಿಕೊಂಡು, ಫೋನಿನಲ್ಲಿ ಹಾಡುಗಳನ್ನು ಕೇಳುತ್ತಿದ್ದಳು.

    ಈ ವೇಳೆ ದುರ್ಗಪ್ರಸಾದ್ ಬಂದು ಚಾಕುವಿನಿಂದ ಆಕೆಯ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಅಲ್ಲದೇ ಆಕೆಯ ಕತ್ತನ್ನು ಸಹ ಕೊಯ್ದಿದ್ದಾನೆ. ತಕ್ಷಣ ತೇಜಸ್ವಿ ಕೂಗಿಕೊಂಡಿದ್ದಾಳೆ. ಆಗ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿ ಬೈಕ್‍ನಲ್ಲಿ ಪರಾರಿಯಾಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಮಾಹಿತಿ ತಿಳಿದು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆದ ಸ್ವಲ್ಪ ದೂರದಲ್ಲಿ ಆರೋಪಿ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಆರೋಪಿ ದುರ್ಗಾ ಪ್ರಸಾದ್ ಶನಿವಾರ ಸಂಜೆ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.