Tag: arrest

  • ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    ಶಟರ್ ಧ್ವಂಸಗೊಳಿಸಿ ದೇಗುಲದಿಂದ ಪಲ್ಲಕ್ಕಿ ಹೊರತಂದು ಮೆರವಣಿಗೆ – 50ಕ್ಕೂ ಅಧಿಕ ಮಂದಿ ಅರೆಸ್ಟ್

    – ನಿರ್ಬಂಧದ ನಡುವೆ ಅಡ್ಡ ಪಲ್ಲಕ್ಕಿ ಉತ್ಸವ
    – ಪೊಲೀಸ್ ವಾಹನಕ್ಕೂ ಡಿಕ್ಕಿ

    ಕೊಪ್ಪಳ: ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ್ದು, ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವರ ಆರಾಧನೆ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಬಾರಿ ಕೊರೊನಾ ಭೀತಿಯಿಂದ ತಲತಲಾಂತರದಿಂದ ಆಚರಿಸಿಕೊಂಡು ಬಂದಂತಹ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ದೇವಸ್ಥಾನದ ಆವರಣದಲ್ಲಿ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು.

    ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಆರಂಭವಾಗುತ್ತಿದಂತೆ ಏಕಾಏಕಿ ಪಲ್ಲಕ್ಕಿ ಹೊತ್ತ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆಯಲು ಆರಂಭಿಸಿದರು. ಕೊನೆಗೆ ದೇವಸ್ಥಾನದ ಶಟರ್ ಧ್ವಂಸಗೊಳಿಸಿ ಪಲ್ಲಕ್ಕಿಯನ್ನು ಹೊರ ತಂದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ಮಧ್ಯೆ ಪಲ್ಲಕ್ಕಿ ಹೊರಬರುತ್ತಿದಂತೆ ಅಲ್ಲೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ವಾಹನದ ಗಾಜು ಪುಡಿ ಪುಡಿಯಾಗಿದೆ.

    ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಹಶೀಲ್ದಾರರು ನಿರ್ಬಂಧ ಹೇರಿದರೂ ಕೂಡ ಸಾವಿರಾರು ಜನಜಂಗುಳಿ ಮಧ್ಯೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ್ದಾರೆ. ಅಲ್ಲದೇ ನಾನಾ ಅವಾಂತರಕ್ಕೂ ಕಾರಣವಾಯಿತು. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮಾತಿಗೂ ಜನರು ಕ್ಯಾರೆ ಮಾಡಲಿಲ್ಲ. ಕೊನೆಗೆ ಪೊಲೀಸರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಜನ್ರು ಮೇಲೆ ಲಾಠಿ ಕೂಡ ಬೀಸಿದರು.

    ಒಂದು ಗಂಟೆಗಳ ಕಾಲ ಗ್ರಾಮದ ಮಧ್ಯೆ ಗ್ರಾಮಸ್ಥರು ಪಲ್ಲಕ್ಕಿ ಬಿಟ್ಟು ಹೋಗಿದ್ದರು. ಕೊನೆಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಸ್ಥಾನಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕ ಮತ್ತು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಇಬ್ಬರು ದೂರಿನನ್ವಯ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

  • ಕೋಳಿ ಬಾಜಿ ಕಟ್ಟಿ ಆಡುತ್ತಿದ್ದವರ ಬಂಧನ

    ಕೋಳಿ ಬಾಜಿ ಕಟ್ಟಿ ಆಡುತ್ತಿದ್ದವರ ಬಂಧನ

    ಮಡಿಕೇರಿ: ‘ಬಾಜಿ ಕಟ್ಟಿ ಆಡುಬಾರಾ ಮೀಸೆ ಮಾವ..’ ಅನ್ನೋದು ಕನ್ನಡ ಸಿನಿಮಾವೊಂದರ ಫೇಮಸ್ ಗೀತೆ. ಆದರೆ ಇಲ್ಲಿ ಇದೇ ನಾಟಿ ಕೋಳಿ ಹುಂಜಗಳನ್ನು ಬಳಸಿ ಬಾಜಿ ಆಡಲು ಹೋಗಿ ಅಂದರ್ ಆಗಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಊರುಬೈಲ್ ನಲ್ಲಿ 10 ಜನರನ್ನು ಕೊಡಗು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಪ್ರತಿ ಕೋಳಿಗಳ ಮೇಲೆ ಸಾವಿರಾರು ರೂಪಾಯಿ ಬಾಜಿ ಕಟ್ಟಿ ಜೂಜಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಕೊಡಗು ಡಿಸಿಐಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ 10 ಜನರನ್ನು ಬಂಧಿಸಿದ್ದಾರೆ.

    ಪೊಲೀಸರು ದಾಳಿ ಮಾಡುತಿದ್ದಂತೆಯೇ ಜೂಜಾಡುತ್ತಿದ್ದ ಇನ್ನೂ ಕೆಲವರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಬಂಧಿತ ಖದೀಮರಿಂದ 35 ಸಾವಿರ ಮೌಲ್ಯದ 15 ಕೋಳಿಗಳು ಮತ್ತು ಬಾಜಿ ಕಟ್ಟಿದ್ದ 20,300 ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ.

    ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆ ದಾಹಕ್ಕೆ ಕತ್ತರಿಯಿಂದ ಪತ್ನಿಯನ್ನು ಕೊಲೆಗೈದ ಪತಿ ಅರೆಸ್ಟ್

    ವರದಕ್ಷಿಣೆ ದಾಹಕ್ಕೆ ಕತ್ತರಿಯಿಂದ ಪತ್ನಿಯನ್ನು ಕೊಲೆಗೈದ ಪತಿ ಅರೆಸ್ಟ್

    ಬೆಂಗಳೂರು: ವರದಕ್ಷಿಣೆ ದಾಹಕ್ಕಾಗಿ ಕತ್ತರಿಯಿಂದ ಹೆಂಡತಿಯ ಕೊಲೆ ಮಾಡಿದ್ದ ಪಾಪಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಪತಿಯನ್ನು ಯಲಹಂಕದ ಅಳ್ಳಾಲಸಂದ್ರ ನಿವಾಸಿ ಜಾನ್ಸನ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ನಂದಿನಿಯನ್ನು ಕತ್ತರಿಯಿಂದ ಚುಚ್ಚು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಕೇಸ್ ಅನ್ನು ವಿಚಾರಣೆ ಮಾಡುತ್ತಿದ್ದ ಯಲಹಂಕ ಪೊಲೀಸರು ಜಾನ್ಸನ್ ಅನ್ನು ಬಂಧಿಸಿದ್ದಾರೆ.

    ಜಾನ್ಸನ್ ಮತ್ತು ನಂದಿನಿ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಸುಂದರವಾಗಿತ್ತು. ಆದರೆ ನಂತರ ಪ್ರತಿದಿನ ಕುಡಿದು ಬರುತ್ತಿದ್ದ ಜಾನ್ಸನ್ ಹೆಂಡತಿ ಬಳಿ ಜಗಳ ಆಡುತ್ತಿದ್ದ. ಆಗಸ್ಟ್ 16ರಂದು ವರದಕ್ಷಿಣೆ ವಿಚಾರಕ್ಕಾಗಿ ಗಲಾಟೆ ಮಾಡಿದ್ದ ಜಾನ್ಸನ್, ಮನೆಯಲ್ಲಿದ್ದ ಕತ್ತರಿಯಿಂದ ಹೆಂಡತಿಯ ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದ. ನಂದಿನಿ ತೀವ್ರ ರಕ್ತಸ್ರಾವವಾಗಿ ಸ್ತಳದಲ್ಲೇ ಪ್ರಾಣಬಿಟ್ಟಿದ್ದಳು.

    ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಜಾನ್ಸನ್‍ನನ್ನು ಇಂದು ಯಲಹಂಕ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

  • ಬೈಕ್ ಅಡ್ಡಗಟ್ಟಿ, ಚಾಕು ತೋರಿಸಿ ದರೋಡೆ – ಕಳ್ಳರು ಅರೆಸ್ಟ್

    ಬೈಕ್ ಅಡ್ಡಗಟ್ಟಿ, ಚಾಕು ತೋರಿಸಿ ದರೋಡೆ – ಕಳ್ಳರು ಅರೆಸ್ಟ್

    ಬೆಂಗಳೂರು: ಬೈಕ್ ಅಡ್ಡಗಟ್ಟಿ ನಂತರ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬನಶಂಕರಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಸಂತೋಷ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಈ ಇಬ್ಬರು ಬೈಕಿನಲ್ಲಿ ಏಕಾಂಗಿಯಾಗಿ ಬರುತ್ತಿರುವವರನ್ನು ಅಡ್ಡಗಟ್ಟಿ ಅವರ ಬೈಕ್ ಸಮೇತ ಅಪಹರಿಸಿ ದರೋಡೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಜೊತೆಗೆ ಬಂಧಿತ ಆರೋಪಿಗಳ ಪೈಕಿ ಸಂತೋಷ್ ಕೆಲ ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಅಗಸ್ಟ್ 14ರ ರಾತ್ರಿ ಹೊಸೂರಿನಿಂದ ಬೈಕಿನಲ್ಲಿ ಬರುತ್ತಿದ್ದ ಭರಣಿಯೇಂದ್ರನ್‍ನನ್ನು ಈ ಇಬ್ಬರು ಆರೋಪಿಗಳು ಕದಿರೇನಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ನಂತರ ಚಾಕು ತೋರಿಸಿ ಜೇಬಿನಲ್ಲಿದ್ದ 8,500 ನಗದು ಮತ್ತು ವಿವೊ ಮೊಬೈಲ್ ಅನ್ನು ಕಿತ್ತುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಆತನನ್ನು ಬೈಕಿನಲ್ಲೇ ಅಪಹರಣ ಮಾಡಿ ಎಟಿಎಂಗೆ ಕರೆದೊಯ್ದ 20 ಸಾವಿರ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದಾರೆ.

    ಆ ನಂತರ ಭರಣಿಯೇಂದ್ರನ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ ಪ್ರಕರಣಗಳು ದಾಖಲಾಗಿದ್ದು, ಸದ್ಯ ಬನಶಂಕರಿ ಪೊಲೀಸರು ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಬೆಂಗ್ಳೂರಲ್ಲಿ ಶಂಕಿತ ಉಗ್ರನ ಬಂಧನ – ಫೋನ್, ಲ್ಯಾಪ್‍ಟಾಪ್‍ಗಳು ವಶಕ್ಕೆ

    ಬೆಂಗ್ಳೂರಲ್ಲಿ ಶಂಕಿತ ಉಗ್ರನ ಬಂಧನ – ಫೋನ್, ಲ್ಯಾಪ್‍ಟಾಪ್‍ಗಳು ವಶಕ್ಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಂಕಿತ ಐಸಿಸಿ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಯ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತನನ್ನು ಅಬ್ದುರ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ನಿವಾಸಿ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿದ್ದ ಅಬ್ದುರ್ ರೆಹಮಾನ್ ಬಂಧನದ ನಂತರ ಕರ್ನಾಟಕದ ಮೂರು ಕಡೆ ಎನ್‍ಐಎ ದಾಳಿ ಮಾಡಿದೆ.

    ದಾಳಿ ವೇಳೆ ಫೋನ್, ಲ್ಯಾಪ್ ಟಾಪ್ ಹಾಗೂ ಡಿಜಿಟಲ್ ಡಿವೈಸ್ ಗಳನ್ನ ಎನ್‍ಐಎ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ, ತನಗೆ ಐಸಿಸ್ ನಂಟಿರುವ ಬಗ್ಗೆ ರೆಹಮಾನ್ ಒಪ್ಪಿಕೊಂಡಿದ್ದಾನೆ. ಸ್ಥಳೀಯ ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ನೆರವಾಗಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.

    2014ರಲ್ಲಿ ಸಿರಿಯಾಗೆ ಭೇಟಿ ನೀಡಿದ್ದು, ಈ ವೇಳೆ ಐಸಿಸ್ ಉಗ್ರರಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲದೆ 10 ದಿನಗಳ ಕಾಲ ಸಿರಿಯಾದಲ್ಲಿದ್ದು ಚಿಕಿತ್ಸೆ ನೀಡಿ ವಾಪಸ್ ಆಗಿದ್ದರ ಬಗ್ಗೆಯೂ ಅಬ್ದುರ್ ರೆಹಮಾನ್ ತಿಳಿಸಿದ್ದಾನೆ.

  • ಶ್ರೀಮಂತ ಯುವತಿಯರೇ ಟಾರ್ಗೆಟ್ – ಪ್ರೀತಿಯ ನಾಟಕವಾಡಿ ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    ಶ್ರೀಮಂತ ಯುವತಿಯರೇ ಟಾರ್ಗೆಟ್ – ಪ್ರೀತಿಯ ನಾಟಕವಾಡಿ ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    ಬೆಂಗಳೂರು: ಡೇಟಿಂಗ್ ಆಪ್, ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಮದುವೆ ಆಗೋದಾಗಿ ನಂಬಿಸಿ ಯುವತಿಯರಿಗೆ ವಂಚಿಸುತ್ತಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಸುಹಾಸ್ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಉತ್ತರಹಳ್ಳಿಯ ನಿವಾಸಿಯಾಗಿದ್ದು, ಇದೀಗ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಹರಿಪ್ರಸಾದ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಡೇಟಿಂಗ್ ಆಪ್ ಮೂಲಕ ಶ್ರೀಮಂತ ಹುಡುಗಿಯರನ್ನ ಟಾರ್ಗೆಟ್ ಮಾಡುತ್ತಿದ್ದನು. ನಂತರ ತಾನೂ ವಿದೇಶದಲ್ಲಿ ಬಿಸಿನೆಸ್ ಮಾಡುತ್ತಿರೋದಾಗಿ ಯುವತಿಯರಿಗೆ ನಂಬಿಸುತ್ತಿದ್ದನು. ಅದರಂತೆ ಐಷಾರಾಮಿ ಕಾರು, ಹೋಟೆಲಿನಲ್ಲಿ ವಾಸ ಮಾಡುತ್ತಿರುವಂತೆ ಅವರಿಗೆ ಫೋಟೋ ಕಳುಹಿಸುತ್ತಿದ್ದನು. ನಂತರ ಯುವತಿಯರನ್ನು ಪ್ರೀತಿಸುವ ನಾಟಕವಾಡುತ್ತಿದ್ದನು.

    ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದನು. ಇದೇ ರೀತಿ ಅನೇಕ ಯುವತಿಯರಿಗೆ ನಂಬಿಸಿ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದನು. ಇತ್ತೀಚೆಗೆ ಯುವತಿಯೊಬ್ಬಳಿಂದ ಕಾರು ಖರೀದಿ ಮಾಡುವುದಾಗಿ ಹೇಳಿ 12 ಲಕ್ಷ ಹಣ ಪಡೆದು ವಂಚನೆ ಮಾಡಿದ್ದನು. ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಸುಹಾಸ್ ಹರಿಪ್ರಸಾದ್‍ನನ್ನು ಬಂಧಿಸಿದ್ದಾರೆ.

  • ಪ್ಲೀಸ್ ನನ್ನನ್ನು ಗಲ್ಲಿಗೇರಿಸಿ – ಲಿವ್ ಇನ್ ಪಾರ್ಟ್ನರ್ ಗರ್ಭಿಣಿಯನ್ನ ಕೊಂದು ಪೊಲೀಸರಿಗೆ ಶರಣು

    ಪ್ಲೀಸ್ ನನ್ನನ್ನು ಗಲ್ಲಿಗೇರಿಸಿ – ಲಿವ್ ಇನ್ ಪಾರ್ಟ್ನರ್ ಗರ್ಭಿಣಿಯನ್ನ ಕೊಂದು ಪೊಲೀಸರಿಗೆ ಶರಣು

    – ಪೊಲೀಸ್ ಠಾಣೆಗೆ ಬಂದು ಪೆನ್, ಪೇಪರ್ ಕೇಳಿದ ಯುವಕ

    ಮುಂಬೈ: 27 ವರ್ಷದ ಯುವಕನೊಬ್ಬ ತನ್ನ ಲಿವ್-ಇನ್ ಪಾರ್ಟ್ನರ್ ಗರ್ಭಿಣಿಯನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ರಂಜನ್‍ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರೆಗಾಂವ್ ಗ್ರಾಮದಲ್ಲಿ ನಡೆದಿದೆ. ಮೃತ ಗರ್ಭಿಣಿಯನ್ನ ಸೋನಮಣಿ ಸೊರೆನ್ ಎಂದು ಗುರುತಿಸಲಾಗಿದೆ. ಆರೋಪಿ ಕಿರಣ್ ಫಂಡೆ ಲಿವ್ ಇನ್ ಸಂಗಾತಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

    ಏನಿದು ಪ್ರಕರಣ?
    ಮೃತ ಸೋನಮಣಿ ಮತ್ತು ಕಿರಣ್ ಕೆಲವು ತಿಂಗಳಿಂದ ಲಿವ್-ಇನ್ ರಿಲೀಷನ್‍ಶಿಪ್‍ನಲ್ಲಿದ್ದಾರೆ. ಇಬ್ಬರೂ ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಶನಿವಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಕೊಂಡ ಆರೋಪಿ ಗರ್ಭಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೊರೆನ್ ಗರ್ಭಿಣಿಯಾದ ನಂತರ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸೊರೆನ್‍ನನ್ನು ಕೊಲೆ ಮಾಡಿದ ನಂತರ ಆರೋಪಿ ಭಯಗೊಂಡು ರಂಜನ್‍ಗಾಂವ್ ಪೊಲೀಸ್ ಠಾಣೆಗೆ ಬಂದಿದ್ದಾನೆ. ನಂತರ ಪೊಲೀಸರ ಬಳಿ ತನಗೆ ಪೆನ್ ಮತ್ತು ಪೇಪರ್ ನೀಡುವಂತೆ ಕೇಳಿಕೊಂಡಿದ್ದಾನೆ. ಅದರಲ್ಲಿ “ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಮತ್ತು ಕೊಲೆ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಗಲ್ಲಿಗೇರಿಸಿ” ಎಂದು ಬರೆದಿದ್ದಾನೆ.

    ಪೊಲೀಸ್ ಅಧಿಕಾರಿಗೆ ಆ ಪೇಪರ್ ನೀಡಿದ್ದಾನೆ. ಜೊತೆಗೆ ತನ್ನ ಮನೆ ವಿಳಾಸ ಮತ್ತು ಕೀಲಿಯನ್ನು ಪೊಲೀಸರಿಗೆ ನೀಡಿದ್ದಾನೆ. ತಕ್ಷಣ ಪೊಲೀಸರ ತಂಡ ಆತ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದ್ದಾರೆ. ಅಲ್ಲಿ ರೂಮಿನಲ್ಲಿ ಸೊರೆನ್ ಶವವಾಗಿ ಪತ್ತೆಯಾಗಿದ್ದಳು.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

  • ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

    ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

    – ಸಜೀವ ಗುಂಡು, ಬೈಕ್ ಕಾರು ವಶ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸಿದ ಶೂಟೌಟ್ ಪ್ರಕರಣವನ್ನು ಬೆನ್ನಟ್ಟಿದ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

    ಧಾರವಾಡ ಫ್ರೂಟ್ ಇರ್ಫಾನ್ ಎಂಬುವ ರೌಡಿಶೀಟರ್ ಅನ್ನು ಹಳೇ ಹುಬ್ಬಳ್ಳಿ ಅಲ್ತಾಜ್ ಸಭಾ ಭವನ ಬಳಿ ಆಗಸ್ಟ್ 6ರಂದು ಗುಂಡಿನ ಮಳೆಗೆರೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಸ್ಕೇಪ್ ಆಗಲು ನೆರವಾಗಿದ್ದ ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಬುಲೆಟ್ ಚಲಾಯಿಸಿದ ಧಾರವಾಡದ ಅಫ್ತಾಬ್ ಬೇಪಾರಿ, ಡಿಯೋ ಚಲಾಯಿಸಿದ ತೌಸೀಫ್, ಕಾರು ಚಾಲನೆ ಮಾಡಿದ್ದ ಅಮೀರ್ ತಮಟಗಾರ, ಆರೋಪಿಗಳಿಗೆ ಹಣ ನೀಡಿದ್ದನೆನ್ನಲಾಗಿರುವ ಮೊಹೀನ್ ಪಟೇಲ್ ಹಾಗೂ ಇನ್ನೊಬ್ಬ ಅತಿಯಾಬಖಾನ್ ತಡಕೋಡ ನನ್ನು ಬಂಧಿಸಲಾಗಿದೆ. ಫ್ರೂಟ್ ಇರ್ಫಾನ್ ಮೇಲೆ ಗುಂಡು ಹಾರಿಸಿದವರು ಮುಂಬೈನಿಂದ ಬಂದಿದ್ದ ಬಾಡಿಗೆ ಹಂತಕರು ಎನ್ನಲಾಗಿದೆ. ಅವರು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಶೋಧ ಮುಂದುವರಿದಿದೆ.

    ಹತ್ಯೆಗೈದು ಪರಾರಿಯಾಗಲು ನೆರವಾದ ಸ್ಥಳೀಯ ತಂಡಕ್ಕೆ ಮೊಮಿನ್ 3 ಲಕ್ಷ ರೂ. ಹಾಗೂ ಮುಂಬೈನಿಂದ ಬಂದಿದ್ದ ಹಂತಕರಿಗೆ 5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಲಾಗಿದೆ. ಕೃತ್ಯಕ್ಕೆ ಬಳಕೆಯಾಗಿದ್ದ 2 ಬೈಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡ್ಕೊಂಡು 6 ಲಕ್ಷ ಮೋಸ – ಮಹಿಳೆ ಅರೆಸ್ಟ್

    ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡ್ಕೊಂಡು 6 ಲಕ್ಷ ಮೋಸ – ಮಹಿಳೆ ಅರೆಸ್ಟ್

    ಹಾಸನ: ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಆರು ಲಕ್ಷ ಮೋಸ ಮಾಡಿದ್ದ ಚಾಲಾಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಲಕ್ಷ್ಮಿ (32) ಮತ್ತು ಆಕೆಗೆ ಸಹಾಯ ಮಾಡಿದ್ದ ಶಿವಣ್ಣ ಎಂದು ಗುರುತಿಸಲಾಗಿದೆ. ಆರೋಪಿ ಲಕ್ಷ್ಮಿ ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಶಿವಣ್ಣ ಕೋಲಾರ ಮೂಲದವನು ಎಂದು ತಿಳಿದುಬಂದಿದೆ. ಹಾಸನದ 40 ವರ್ಷದ ಅವಿವಾಹಿತ ಪರಮೇಶ್ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಆರೋಪಿ ಲಕ್ಷ್ಮಿ ಮ್ಯಾಟ್ರಿಮೋನಿ ಮೂಲಕ ಪರಮೇಶ್‍ನನ್ನು ಪರಿಚಯ ಮಾಡಿಕೊಂಡಿದ್ದಳು. ನಾನು ಅನಾಥೆ, ಚಿಕ್ಕಮನ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಐಟಿಯಲ್ಲಿ ಉದ್ಯೋಗಿ ಎಂದು ಪರಿಚಯ ಮಾಡಿಕೊಂಡಿದ್ದಳು. ನಂತರ ಡಿಸೆಂಬರ್ 2019 ರಿಂದ 2020ರ ತನಕ ಸುಮಾರು ಆರು ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು.

    ಹಣ ಬಂದ ಕೂಡಲೇ ನನಗೆ ಕಾಲ್ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು. ಆರೋಪಿ ಶಿವಣ್ಣನ ಸಹಾಯ ಪಡೆದು ಜನರಿಗೆ ಮೋಸ ಮಾಡುತ್ತಿದ್ದಳು. ಕೊನೆಗೆ ಪರಮೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಅಂತಿಮವಾಗಿ ಹಾಸನ ಪೊಲೀಸರು ಬೀಸಿದ್ದ ಬಲೆಗೆ ಶಿವಣ್ಣ ಮತ್ತು ಲಕ್ಷ್ಮಿ ಬಿದ್ದಿದ್ದಾರೆ.

    ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಲಭೆಕೋರರಿಗೆ ಮುಂದುವರಿದ ಬೇಟೆ – ತಡರಾತ್ರಿ 35 ಆರೋಪಿಗಳು ಅರೆಸ್ಟ್

    ಗಲಭೆಕೋರರಿಗೆ ಮುಂದುವರಿದ ಬೇಟೆ – ತಡರಾತ್ರಿ 35 ಆರೋಪಿಗಳು ಅರೆಸ್ಟ್

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಪುಂಡರಿಗಾಗಿ ಖಾಕಿಗಳ ಬೇಟೆ ಮುಂದುವರಿದಿದೆ. ಸಿಸಿಟಿವಿ, ಮೊಬೈಲ್ ವಿಡಿಯೋ ಹಾಗೂ ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಂದ ಮಾಹಿತಿ ಕಲೆಹಾಕಿ ಮಿಡ್‍ನೈಟ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಕಳೆದ ರಾತ್ರಿ ಕೂಡ ಪೊಲೀಸರು ಒಟ್ಟು 35 ಮಂದಿ ಪುಂಡರನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. ತಡರಾತ್ರಿ ಗಲಭೆಕೋರರಿಗೆ ಡಿಜೆ ಹಳ್ಳಿ ಪೊಲೀಸರು ಬೇಟೆ ಮುಂದುವರಿಸಿದ್ದು, 10 ಮಂದಿಯನ್ನು ಬಂಧಿಸಿದ್ದಾರೆ. ಇವರು ಗಲಭೆ ಬಳಿಕ ತಲೆಮರೆಸಿಕೊಂಡಿದ್ದರು.

    ಕಳೆದ ಮೂರ್ನಾಲ್ಕು ದಿನಗಳಿಂದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಬಿ ಪೊಲೀಸರು ಕೂಡ ತಡರಾತ್ರಿ ಮತ್ತೆ 25 ಮಂದಿ ಆರೋಪಿಗಳು ಬಂಧಿಸಿದ್ದಾರೆ. ಹೀಗಾಗಿ ಒಟ್ಟು 35 ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಕಾರ್ಪೊರೇಟರ್ ಖಲೀಂಪಾಷಾ ಸೇರಿದಂತೆ, 7 ಮಂದಿಯನ್ನಷ್ಟೇ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 64 ಮಂದಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವತ್ತು ರಾತ್ರಿ ಮತ್ತು ನಾಳೆಯೂ ಕಾರ್ಯಾಚರಣೆ ಮುಂದುವರಿಯಲಿದ್ದು, ಒಟ್ಟು 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.