Tag: arrest

  • ಭಟ್ಕಳದಿಂದ ಉಡುಪಿಗೆ ಗಾಂಜಾ ಸಪ್ಲೈ- ಗಾಂಜಾ ಸೇವಿಸಿದ್ದ ಐವರು ಬಂಧನ

    ಭಟ್ಕಳದಿಂದ ಉಡುಪಿಗೆ ಗಾಂಜಾ ಸಪ್ಲೈ- ಗಾಂಜಾ ಸೇವಿಸಿದ್ದ ಐವರು ಬಂಧನ

    ಉಡುಪಿ: ಜಿಲ್ಲೆಯ ಬೈಂದೂರು ಪೊಲೀಸರು ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ಐವರು ಆರೋಪಿಗಳ ಸಹಿತ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತರನ್ನು ಬ್ರಹ್ಮಾವರದ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ, ಕೇರಳ ತಿರುವನಂತಪುರಂ ನಿವಾಸಿ ಯದುನಾರಾಯಣ, ಬೈಂದೂರು ಬಿಜೂರು ನಿವಾಸಿ ಗುರುರಾಜ್ ಪೂಜಾರಿ, ಉಪ್ಪುಂದ ನಿವಾಸಿ ಸುನೀಲ್ ಪೂಜಾರಿ, ಮತ್ತು ಬಿಜೂರು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯ್ಕ್ ಅವರಿಗೆ ದೊರಕಿದ ಅಧಿಕೃತ ಮಾಹಿತಿ ಆಧರಿಸಿ ಉಪ್ಪುಂದದ ಪ್ರಸಿದ್ಧ ಲಾಡ್ಜ್ ಮೇಲೆ ದಾಳಿ ನಡೆಸಲಾಗಿತ್ತು.

    ದಾಳಿ ಸಂದರ್ಭ ಲಾಡ್ಜಿನ ರೂಮಿನೊಳಗೆ ಗಾಂಜಾ ಸೇವಿಸುತ್ತಿದ್ದುದು ಪತ್ತೆಯಾಗಿದೆ. ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ದುಬಾರಿ ಗಾಂಜಾ ಪತ್ತೆಯಾಗಿದೆ. ಆರೋಪಿಗಳಿಂದ 6 ಮೊಬೈಲ್ ಫೋನ್‍ಗಳು, 3 ದ್ವಿಚಕ್ರ ವಾಹನಗಳು ಸೇರಿದಂತೆ 1,71,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ತನಿಖೆ ವೇಳೆ ಆರೋಪಿಗಳಿಗೆ ಭಟ್ಕಳ ಮೂಲದ ಶಬ್ಬೀರ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಬ್ಯಾಗಿನಲ್ಲಿ ಗಾಂಜಾ ಸೇವಿಸಲು ಬಳಸುವ ಒಸಿಬಿ ಸ್ಲಿಮ್ ಪ್ರೀಮಿಯಂ ಎನ್ನುವ ಕಾಗದದ ಚೂರುಗಳು ಪತ್ತೆಯಾಗಿವೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೋದಿ, ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಓರ್ವ ಅರೆಸ್ಟ್

    ಮೋದಿ, ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಓರ್ವ ಅರೆಸ್ಟ್

    ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕುಸುಂಬಿ ಗ್ರಾಮದ ಆರೋಪಿಯನ್ನು ಉತ್ತರ ಪ್ರದೇಶದ ಪೊಲೀಸರ ತಂಡ ಬಂಧಿಸಿದೆ. ಆರೋಪಿಯ ವಿರುದ್ಧ ಸದ್ಯ ಸೆಕ್ಷನ್ 124 ಎ (ದೇಶದ್ರೋಹ) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ವ್ಯಕ್ತಿಯ ವಿರುದ್ಧ ಉತ್ತರದ ಸಿಂಘಾಬಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ನಿರಂತರ ಪೋಸ್ಟ್ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಲಾಗಿತ್ತು.

    ಒಡಿಶಾ ಪೊಲೀಸರ ಸಹಕಾರದಲ್ಲಿ ಸದ್ಯ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಒಡಿಶಾದ ಸಾಲಿಪುರದಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದಾನೆ ಎನ್ನಲಾಗಿದೆ. ಈ ವ್ಯಕ್ತಿಯನ್ನು ಟ್ರಾನ್ಸಿಟ್ ರಿಮಾಂಡ್‍ಗೆ ಕರೆದೊಯ್ಯಲು ಯುಪಿ ಪೊಲೀಸ್ ತಂಡ ಚಿಂತಿಸಿದೆ.

  • ಗಾಂಜಾ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಅರೆಸ್ಟ್

    ಗಾಂಜಾ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಅರೆಸ್ಟ್

    ನೆಲಮಂಗಲ: ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬಂದ ನಂತರ ಬೆಂಗಳೂರಲ್ಲಿ ಪೊಲೀಸರು ಪುಲ್ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನ ನಡೆದಿದ್ದು, ವ್ಯಕ್ತಿಯನ್ನು ಡಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಶಿವಗಂಗೆ ರಸ್ತೆಯ ಲಾರಿ ಪಾರ್ಕಿಂಗ್ ನಲ್ಲಿ ಪಂಜಾಬ್ ಮೂಲದ ಅಶೋಕ್ ಶರ್ಮನನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 210 ಗ್ರಾಂ ಗಾಂಜಾ ವಶಪಡಿಸಿಕೊಂಡ ಡಾಬಸ್ ಪೇಟೆ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಡಿ.ಆರ್ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಗಾಂಜಾ ಮಾರಾಟಗಾರರು ನಗರ ಬಿಟ್ಟು ಗ್ರಾಮಾಂತರ ಪ್ರದೇಶಕ್ಕೆ ಬಂದಿರುವ ಶಂಕೆ ಸಾಕಷ್ಟು ವ್ಯಕ್ತವಾಗಿದ್ದು ಪೊಲೀಸರು ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ.

  • ದರೋಡೆ ನಡೆಸಲು ಹೊರಟಿದ್ದ ಗ್ಯಾಂಗ್ – ಸಿನಿಮೀಯ ರೀತಿಯಲ್ಲಿ ಬಂಧನ

    ದರೋಡೆ ನಡೆಸಲು ಹೊರಟಿದ್ದ ಗ್ಯಾಂಗ್ – ಸಿನಿಮೀಯ ರೀತಿಯಲ್ಲಿ ಬಂಧನ

    ಕಾರವಾರ: ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ಶಿರಸಿಯ ಯಲ್ಲಾಪುರ ರಸ್ತೆಯ ಬಳಿ ನಡೆದಿದೆ.

    ಶಿರಸಿಯ ವಿದ್ಯಾ ನಗರದ ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸೀನ್ (23), ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಮರ್ದಾನ್ ಶಫಿಸಾಬ (19) ಹಾಗೂ ಚರಣ್ ನಾಯ್ಕ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ದರೋಡೆಗೆ ಬಳಸುವ ವಸ್ತುಗಳು ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ. ಬಂಧಿತರಿಂದ ಮಾರಕಾಸ್ತ್ರಗಳು, ಬೈಕ್, ಮತ್ತು ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಡಿಎಸ್‍ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ್ ಮಾರ್ಗದರ್ಶನದಲ್ಲಿ ಶಿರಸಿ ಮಾರುಕಟ್ಟೆ ಠಾಣೆಯ ಪಿಎಸ್‍ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 5 ಕೆಜಿ ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರು ಆರೋಪಿಗಳ ಬಂಧನ

    5 ಕೆಜಿ ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರು ಆರೋಪಿಗಳ ಬಂಧನ

    ಹುಬ್ಬಳ್ಳಿ: ರಾಜ್ಯದಲ್ಲಿ ಡ್ರಗ್ಸ್-ಗಾಂಜಾ ನಶೆಯ ಚರ್ಚೆಗಳು ನಡೆಯುತ್ತಿದ್ದಾಗಲೇ, ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಸದ್ದಿಲ್ಲದೇ ಗಾಂಜಾ ಪ್ರಕರಣವೊಂದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಮಾರುತಿ ಹರಣಶಿಕಾರಿ ಮತ್ತು ಚಂದಪ್ಪ ಹರಣಶಿಕಾರಿಯ ಎಂದು ಗುರುತಿಸಲಾಗಿದೆ. ಬಂಧಿತರಿಂದ 5 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ನಿರಂತರ ಗಾಂಜಾ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾಲ ಬೀಸಿದ್ದ ಉಪನಗರ ಠಾಣೆಯ ಪೊಲೀಸರು, ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಯಾವ ಯಾವ ಭಾಗದಿಂದ ನಗರಕ್ಕೆ ಗಾಂಜಾ ಬರುತ್ತದೆ, ಯಾರಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯರು ಯಾರು ಖರೀದಿ ಮಾಡುತ್ತಾರೆಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗಲೇ, ಗದಗ ಕಡೆಯಿಂದ ಗಾಂಜಾ ಬರುತ್ತಿರುವುದು ತಿಳಿದು ಬಂದಿತ್ತು.

    ಉಪನಗರ ಠಾಣೆ ಇನ್ಸ್ ಪೆಕ್ಟರ್ ಹೊಳೆಣ್ಣನವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಉಮೇಶ ಹೆದ್ದೇರಿ, ಮಲ್ಲಿಕಾರ್ಜುನ ಧನಿಗೊಂಡ, ಸುನೀಲ ಪಾಂಡೆ, ಮಂಜು ಎಕ್ಕಡಿ, ರವಿ ಹೊಸಮನಿ, ರೇಣಪ್ಪ ಚಿಕ್ಕಲಿಗ್ಯಾರ, ಬಸವರಾಜ ಸುಣಗಾರ, ಕರಬಸಪ್ಪ ನೆಲಗುಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರ ಈ ಕಾರ್ಯದಿಂದ ನಗರದಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯ ಮೂಲ ಸಿಗುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ.

  • ಮಾದಕ ವಸ್ತುಗಳನ್ನು ಮಾರಾಟ ಮಾಡ್ತಿದ್ದ ಮೂವರ ಬಂಧನ

    ಮಾದಕ ವಸ್ತುಗಳನ್ನು ಮಾರಾಟ ಮಾಡ್ತಿದ್ದ ಮೂವರ ಬಂಧನ

    – 4.40 ಲಕ್ಷ ನಗದು, 11 ಕೆಜಿ ಗಾಂಜಾ ವಶ

    ಬೆಂಗಳೂರು: ಮಾದಕವಸ್ತುಗಳ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಲಿಕಾನ್ ಸಿಟಿಯ ಬೇಗೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಹಮ್ಮದ್ ಅಲಗೀರ್, ಮಹಮ್ಮದ್ ರಿಪೂನ್ ಹಾಗೂ ಮೊಹರ್ ಅಲಿ ಬಂಧಿತ ಆರೋಪಿಗಳು. ಇವರು ಪಶ್ಚಮ ಬಂಗಾಳ ಮೂಲದವರು ಎನ್ನಲಾಗಿದೆ. ಬಂಧಿತರಿಂದ 4.40 ಲಕ್ಷ ನಗದು, 11 ಕೆಜಿ ಗಾಂಜಾ ಸೇರಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಗಳು ಮಾದಕ ವಸ್ತುಗಳನ್ನು ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ನಗರದ ವಿವಿಧ ಭಾಗಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ಪೊಲೀಸ್ ಫೈರಿಂಗ್ – ಜೋಡಿ ಕೊಲೆ ಆರೋಪಿಯ ಬಂಧನ

    ಬೆಳ್ಳಂಬೆಳಗ್ಗೆ ಪೊಲೀಸ್ ಫೈರಿಂಗ್ – ಜೋಡಿ ಕೊಲೆ ಆರೋಪಿಯ ಬಂಧನ

    ಹಾಸನ: ಕಳೆದ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದರೆ ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಎರಡೇ ದಿನದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆಯಲ್ಲಿ ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಇದನ್ನೂ ಓದಿ: ಚನ್ನರಾಯಪಟ್ಟಣದಲ್ಲಿ ಜೋಡಿ ಕೊಲೆ – 80 ಎಕ್ರೆ ಜಮೀನು ಹೊಂದಿದ್ದ ದಂಪತಿಯ ಬರ್ಬರ ಹತ್ಯೆ

    ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಹಿಡಿದಿದ್ದಾರೆ. ಇದೊಂದು ಕಾರ್ಯವು ರೌಡಿ ಅಸಾಮಿಗಳಿಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ಗಂಟೆಯನ್ನು ಬಾರಿಸಿದಂತಾಗಿದೆ.

    ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿತ್ತು. ಮನೆಯನ್ನು ದರೋಡೆ ಮಾಡಲು ಬಂದು, ದಂಪತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು.

    ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು. ಮುರುಳಿಧರ್ ದಂಪತಿಗೆ ಮಕ್ಕಳು ಇರಲಿಲ್ಲ. ಜೊತೆಗೆ ಮುರುಳಿಧರ್ ಬಿ.ಎಸ್ಸಿ ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ವಾಸವಿದ್ದರು.

    ಇತ್ತೀಚೆಗೆ ಅವರು ತಮ್ಮ ಜಮೀನನ್ನು ಮಾರಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರು ಮನೆಯಲ್ಲಿ ಜಮೀನು ಮಾರಿರುವ ದುಡ್ಡನ್ನು ಇಟ್ಟಿಕೊಂಡಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿದ್ದಾರೆ. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಿ ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು.

  • 2 ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ – ಮುಖ ಸುಟ್ಟು, ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ

    2 ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ – ಮುಖ ಸುಟ್ಟು, ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ

    – ಬಾಲಕನ ಪಾಲಿಗೆ ರಣರಾಕ್ಷಸಿಯಾರದ ಅಜ್ಜಿ, ತಾಯಿ

    ಬೆಂಗಳೂರು: ಅಮ್ಮ ಅಂದರೆ ನಿಸ್ವಾರ್ಥ ಜೀವಿ, ಆಕೆಗೆ ಮಕ್ಕಳ ಬಗ್ಗೆ ಕನಿಕರ ಜಾಸ್ತಿ. ತಾಯಿ ಅಂದರೆ ದೇವರಿದ್ದಂತೆ, ಮಕ್ಕಳಿಗೆ ಎಂದೂ ಕೆಟ್ಟದ್ದನ್ನು ಬಯಸದ ಮಹಾತಾಯಿ ಅಂತೆಲ್ಲಾ ಹೇಳುತ್ತಾರೆ. ಆದರೆ ಈ ಮಗುವಿನ ವಿಚಾರದಲ್ಲಿ ಇದೆಲ್ಲವೂ ಸುಳ್ಳಾಗಿದೆ. ಹೆತ್ತಮ್ಮ, ಅಜ್ಜಿಯೇ 2 ವರ್ಷದ ಮಗುವಿಗೆ ನರಕ ತೋರಿಸಿದ್ದಾರೆ.

    ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ ನಾಲ್ಕು ಮಕ್ಕಳಿವೆ. ಇದರಲ್ಲಿ ನಾಲ್ಕನೇ ಮಗು 2 ವರ್ಷದ ಮಗುವಿಗೆ ಅಜ್ಜಿ ಮತ್ತು ತಾಯಿ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಮತ್ತೊಂದು ಮಗುವಿನ ಹೆರಿಗೆಗಾಗಿ ಮಗುವಿನ ತಾಯಿ ತನ್ನ ತಾಯಿಯ ಮನೆಗೆ ಬಂದಿದ್ದಾಳೆ. ಈ ವೇಳೆ ಅಜ್ಜಿ ಹಾಗೂ ತಾಯಿ ಇಬ್ಬರು ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.

    ಕಳೆದ 15 ದಿನಗಳಿಂದಲೂ ಈ ಮಗುವಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಮಗು ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆ ಮುಖಕ್ಕೆ ಗುದ್ದಿ ಅಜ್ಜಿ ಮುಬೀನಾ ಕೂಡ ಚಿತ್ರಹಿಂಸೆ ಕೊಟ್ಟಿದ್ದಾಳೆ. ಮಗು ಅಳುವುದನ್ನು ನಿಲ್ಲಿಸಲ್ಲ ಎಂಬ ಕಾರಣಕ್ಕೆ ಮನಸೋಇಚ್ಛೆ ಥಳಿಸಿದ್ದು, ಮಗುವಿನ ಮೈ ಕೈಯನ್ನು ಸುಟ್ಟು ಹಲ್ಲೆ ಮಾಡಿದ್ದಾಳೆ. ಗಂಡ ಇಮ್ರಾನ್ ಪಾಷಾ ಮಗು ಬಗ್ಗೆ ಕೇಳಿದರೆ ಹೆಂಡತಿ, ಅತ್ತೆ ಸೇರಿಕೊಂಡು ಮುಚ್ಚಿದ್ದಾರೆ.

    ಪುಟ್ಟಕಂದಮ್ಮ ಮೇಲೆ ಹಲ್ಲೆ ಮಾಡಲು ಕಾರಣ, ಇಮ್ರಾನ್ ಪಾಷಾ ಹಾಗೂ ಅಜೀರಾ ಪ್ರೀತಿಸಿ ಮದುವೆಯಾಗಿದ್ದರು. ಇದು ಅಜೀರಾ ತಾಯಿ ಮುಬೀನಾಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಇದಾದ ನಂತರ ಅಜೀರಾ ಹೆರಿಗೆಗೆ ಮನೆಗೆ ಬಂದಿದ್ದಳು. ಈ ವೇಳೆ ಮಗು ಅಪ್ಪ ಬೇಕು ಎಂದು ಹಠ ಮಾಡಿದೆ. ಈ ಕಾರಣಕ್ಕೆ ಮಗುವನ್ನು ಅಜ್ಜಿ ಮತ್ತು ತಾಯಿ ಸೇರಿಕೊಂಡು ಥಳಿಸಿದ್ದಾರೆ.

    ಸದ್ಯ ಮಗುವಿನ ಮುಖ, ಕಣ್ಣಿಗೆ ಗಾಯವಾಗಿದ್ದು, ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಇಮ್ರಾನ್ ಪಾಷಾ, ಪತ್ನಿ ಮತ್ತು ಅತ್ತೆ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯ ನಂತರ ಎಸ್ಕೇಪ್ ಆಗಿದ್ದ ಸೈತಾನ್ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

  • ಸ್ನೇಹಿತರ ಕೊಲೆ – 24 ಗಂಟೆಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅಂದರ್

    ಸ್ನೇಹಿತರ ಕೊಲೆ – 24 ಗಂಟೆಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅಂದರ್

    ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಬ್ಬರು ಯುವಕರ ಕೊಲೆ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶ್ರೀನಿವಾಸ್ ಪರಶುರಾಮ ಹಿರೇಕುಂಬಿ (26) ಅವಿನಾಶ್ ಬಸವರಾಜ ನರಗುಂದ (29) ಸಂಜೀವ ರೇವಣಸಿದ್ದಪ್ಪ ವಡ್ಡರ (28) ಮತ್ತು ಮಧು ಕಲ್ಮೇಶ ಹಾದಿಮನಿ (25) ಬಂಧಿತ ಆರೋಪಿಗಳು. ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ನಿಯಾಜ್ ಜೋರಮ್ಮನವರ ಮತ್ತು ಈತನ ಗೆಳೆಯ ಮಂಜುನಾಥ ಕಬ್ಬಿನ್ ಇಬ್ಬರನ್ನು ನಾಲ್ವರು ಕಬ್ಬಿಣದ ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ಸೀನು ನಿಯಾಜ್‍ನೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಕಾರಣಕ್ಕೆ ಗೆಳೆಯರೊಂದಿಗೆ ಬಂದು ಹತ್ಯೆ ಮಾಡಿದ್ದಾನೆ.

    ಸೀನುಗೆ ಸಾಥ್ ನೀಡಿದ ಮೂವರು ಸ್ನೇಹಿತರ ಬಂಧನವಾಗಿದೆ. ಮೃತ ಇಬ್ಬರು ಮತ್ತು ಆರೋಪಿಗಳು ಒಂದೇ ಪ್ರದೇಶದವರಾಗಿದ್ದು, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಹುಬ್ಬಳ್ಳಿ ಗೋಪನಕೊಪ್ಪ ಸಿದ್ರಾಮೇಶ್ವರನಗರ 3ನೇ ಕ್ರಾಸ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಇಬ್ಬರನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಶ್ವಾಪುರ ಠಾಣೆಯ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಎಸಿಬಿ ದಾಳಿ – ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

    ಎಸಿಬಿ ದಾಳಿ – ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

    ಬೆಂಗಳೂರು: ಎಸಿಬಿ ಕಳೆದ ಮೂರು ದಿನಗಳಿಂದ ಅಧಿಕಾರಿಗಳ ಕಚೇರಿ ಮತ್ತು ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಮನೆಯಲ್ಲಿ ಎಸಿಬಿ ದಾಳಿ ಮಾಡಿದೆ.

    ಗುರುವಾರ ಎಸಿಬಿ ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ದಾಳಿ ಮಾಡಿತ್ತು. ಈ ವೇಳೆ 22 ಲಕ್ಷ ನಗದು ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇಂದು ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಮನೆ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.

    ನಾಗೇಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, 82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಎಸಿಬಿ ಅಧಿಕಾರಿಗಳು ನಾಗೇಶ್ ಮತ್ತು ಸುಬ್ಬಯ್ಯ ಇಬ್ಬರನ್ನು ಬಂಧಿಸಿದ್ದಾರೆ.

    ಅಭಿವೃದ್ಧಿ ನಿಗಮದ ಅಧಿಕಾರಿಗಳು ಸರ್ಕಾರದಿಂದ ಹಣ ಮಂಜೂರು ಮಾಡಿಕೊಂಡು ಹಣ ಹೊಡೆಯುತ್ತಿದ್ದಾರೆ ಎಂಬ ಆರೋಪಿ ಕೇಳಿ ಬಂದಿತ್ತು. ಅಲ್ಲದೇ ಕಳಪೆ ಜಮೀನು ಖರೀದಿ ಮಾಡಿ ಜನರಿಗೆ ಮಾರಾಟ ಮಾಡಿದ್ದರು. ಜನರಿಂದ ಬಂದ ಹಣವನ್ನು ಹಂಚಿಕೊಳ್ಳುವಾಗ ಬೆಂಗಳೂರಿನ ವಸಂತ್‍ನಗರದಲ್ಲಿರುವ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ಎಸಿಬಿ ದಾಳಿ ಮಾಡಿತ್ತು. ಆಗ ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಇಬ್ಬರು ಸಿಕ್ಕಿಬಿದ್ದಿದ್ದರು.