Tag: arrest

  • ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    ಹೊಳೆನರಸೀಪುರದ ಒಂಟಿ ಮನೆಯಲ್ಲಿ ಹುಕ್ಕಾಬಾರ್ – ಏಳು ಮಂದಿ ಬಂಧನ

    – ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ

    ಹಾಸನ: ಒಂಟಿ ಮನೆಯೊಂದರಲ್ಲಿ ನಡೆಯುತ್ತಿದ್ದ ಹುಕ್ಕಾಬಾರ್ ಪಾರ್ಟಿ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು, ಏಳು ಮಂದಿ ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಅಡಿಕೆರೆ ಗ್ರಾಮದಲ್ಲಿ, ಚನ್ನರಾಯಪಟ್ಟಣ ತಾಲೂಕು ಮೂಲದ ಎಚ್.ವಿ.ಸುಹಾಸ್ ನೇತೃತ್ವದಲ್ಲಿ ಹುಕ್ಕಾಬಾರ್ ನಡೆಯುತ್ತಿತ್ತು. ಸುಹಾಸ್ ಸೇರಿ ಆರು ಜನರ ಬಂಧನವಾಗಿದೆ. ಒಂಟಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಹುಕ್ಕಾಬಾರ್ ನಡೆಸುತ್ತಿದ್ದ ಸುಹಾಸ್ ತನ್ನದೇ ಗ್ರಾಹಕರನ್ನು ಹೊಂದಿದ್ದ ಎನ್ನಲಾಗಿದೆ.

    ಗ್ರಾಮೀಣ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬರುವುದಿಲ್ಲ ಎಂದು ಭಾವಿಸಿ ಪಾರ್ಟಿ ಮಾಡಿದ್ದಾರೆ. ಆದರೆ ಖಚಿತ ಮಾಹಿತಿ ಆಧರಿಸಿ ರಾತ್ರಿ ಮನೆ ಮೇಲೆ ದಾಳಿ ಮಾಡಿದ ಹೊಳೆನರಸೀಪುರ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ಸಿಪಿಐ ಆರ್.ಪಿ. ಅಶೋಕ್, ಪಿಎಸ್‍ಐ ಮೋಹನ್ ಕೃಷ್ಣ ತಂಡ ಕಾರ್ಯಾಚರಣೆ ನಡೆಸಿ ಹುಕ್ಕಾಬಾರ್ ಬಂದ್ ಮಾಡಿಸಿದೆ.

  • ಗಾಂಜಾ ಪೆಡ್ಲರ್ಸ್ ಅರೆಸ್ಟ್ – 10 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ವಶ

    ಗಾಂಜಾ ಪೆಡ್ಲರ್ಸ್ ಅರೆಸ್ಟ್ – 10 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ವಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಗಾಂಜಾ ಸಾಗಾಟ ಮಾಡುತ್ತಿದ್ದ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

    ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಟೆ ಬಳಿ ದಾಳಿ ನಡೆಸಿದ ಪೊಲೀಸರು ಇಂಡಿಕಾ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಬರೋಬ್ಬರಿ 10 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ಹಾಗೂ ಶಿಡ್ಲಘಟ್ಟ ಮೂಲದ ಶಭಾಜ್‍ನನ್ನ ಬಂಧಿಸಲಾಗಿದೆ.

    ಈ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರನ್ನ ಸಹ ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿಗೆ ಹೊಂದಿಕೊಂಡಿರೋದರಿಂದ ಜಿಲ್ಲೆಯ ಪೊಲೀಸರು ಗಡಿಭಾಗದಲ್ಲಿ ಶ್ವಾನದಳದೊಂದಿಗೆ ತಪಾಸಣೆ ನಡೆಸುತ್ತಿದ್ದು, ಗಾಂಜಾ ಸಾಗಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಂಧಿತ ಆರೋಪಿಗಳು ನೆರೆಯ ರಾಜ್ಯದ ವಿಶಾಖಪಟ್ಟಣಂ, ರಾಜಮಂಡ್ರಿ, ಅನಂತಪುರ ಸೇರಿದಂತೆ ಮತ್ತಿತರ ಭಾಗಗಳಿಂದ ಈ ಗಾಂಜಾವನ್ನ ತರುತ್ತಿದ್ದೀವಿ ಎಂಬ ಮಾಹಿತಿಯನ್ನು ನೀಡಿದ್ದಾರೆ.

    ಕಳೆದ ಒಂದು ವಾರದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಅಕ್ರಮ ಗಾಂಜಾಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಆಂಧ್ರ ಪ್ರದೇಶದ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾವಹಿಸಿ ತಪಾಸಣೆ ಕಾರ್ಯ ನಡೆಸುತ್ತಿದ್ದೇವೆ. ಅಲ್ಲದೇ ನೆರೆಯ ಆಂಧ್ರ ಪ್ರದೇಶದ ಅನಂತಪುರ, ಚಿತ್ತೂರು ಪೊಲೀಸರ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಗಾಂಜಾ ಸಾಗಾಟಕ್ಕೆ ಬ್ರೇಕ್ ಹಾಕುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

  • ರಾಜಕಾರಣಿಗಳ ಮೇಲೆ ದಾಳಿಗೆ ಸಂಚು – ಇಬ್ಬರು ಉಗ್ರರು ಅರೆಸ್ಟ್

    ರಾಜಕಾರಣಿಗಳ ಮೇಲೆ ದಾಳಿಗೆ ಸಂಚು – ಇಬ್ಬರು ಉಗ್ರರು ಅರೆಸ್ಟ್

    – ದೆಹಲಿಗೆ ಪಿಸ್ತೂಲ್ ಖರೀದಿಸಲು ಬಂದು ಪೊಲೀಸರ ಬಲೆಗೆ

    ನವದೆಹಲಿ: ರಾಷ್ಟ್ರ ರಾಜಧಾನಿಯ ವಿಶೇಷ ಪೊಲೀಸ್ ಪಡೆ ಇಬ್ಬರು ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ (ಬಿಕೆಐ) ಉಗ್ರ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ.

    ಬಂಧಿತರನ್ನು ದಿಲಾವರ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ಪಂಜಾಬ್‍ನಿಂದ ದೆಹಲಿಗೆ ಪಿಸ್ತೂಲ್ ಖರೀದಿ ಮಾಡಲು ಬಂದಿದ್ದರು ಎನ್ನಲಾಗಿದೆ. ಜೊತೆಗೆ ದೆಹಲಿ ಮತ್ತು ಪಂಜಾಬ್ ಮೂಲದ ಕೆಲ ರಾಜಕಾರಣಿಗಳನ್ನು ಕೊಲ್ಲಲು ಅವರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಪಿ ಸಂಜೀವ್ ಯಾದವ್, ಇಬ್ಬರು ಉಗ್ರರನ್ನು ವಾಯುವ್ಯ ದೆಹಲಿಯಲ್ಲಿ ಬಂಧಿಸಲಾಗಿದೆ. ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಅವರನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇಬ್ಬರು ಪಂಜಾಬ್‍ನಿಂದ ದೆಹಲಿಗೆ ಪಿಸ್ತೂಲ್ ಖರೀದಿ ಮಾಡಲು ಬಂದಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಮೂಲದ ಡೀಲರ್ ಬಳಿ 6 ಪಿಸ್ತೂಲ್‍ಗಳನ್ನು ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಬಂಧಿತರಿಂದ ಆರು ಪಿಸ್ತೂಲ್ ಮತ್ತು ಎರಡು ಗ್ರೇನೆಡ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರು ದೆಹಲಿ ಮತ್ತು ಪಂಜಾಬ್ ಮೂಲದ ಕೆಲ ರಾಜಕಾರಣಿಗಳನ್ನು ಕೊಲ್ಲಲು ಪ್ಲಾನ್ ಮಾಡಿದ್ದರು. ಅವರು ಟಾರ್ಗೆಟ್ ಮಾಡಿದ್ದ ರಾಜಕಾರಣಿಗಳು ಯಾರೂ ಎಂಬ ವಿಚಾರ ನಮಗೆ ಗೊತ್ತಾಗಿದೆ. ಆದರೆ ಈಗ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

    ದೆಹಲಿ ಪೊಲೀಸರು ಬಂಧಿಸಿರುವ ದಿಲಾವರ್ ಸಿಂಗ್ ಸಕ್ರಿಯ ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ ಉಗ್ರ ಸಂಘಟನೆಯ ಭಯೋತ್ಪಾದಕನಾಗಿದ್ದು, ಈತನ್ನು 2019ರಲ್ಲಿ ದುಬೈನಿಂದ ಗಡಿಪಾರು ಮಾಡಿಲಾಗಿತ್ತು. ನಂತರ ಈತ ಭಾರತಕ್ಕೆ ಬಂದಿದ್ದು, ಪಂಜಾಬ್ ಪೊಲೀಸರು ಈತನನ್ನು ಬಂಧಿಸಿದ್ದರು. ಆದರೆ ದಿಲಾವರ್ ಬೇಲ್ ಪಡೆದು ಹೊರಗೆ ಬಂದಿದ್ದಾನೆ. ಉಗ್ರನಿಗೆ ಜಾಮೀನು ಸಿಕ್ಕಿದ್ದು ಹೇಗೆ ಎಂದು ದೆಹಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

  • ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    – 20 ಕೃಷ್ಣಮೃಗ ಚರ್ಮ, 2 ಕೊಂಬು ವಶಕ್ಕೆ, 6 ಮಂದಿ ಅರೆಸ್ಟ್

    ಕೊಪ್ಪಳ: ಕೃಷ್ಣಮೃಗಳ ಬೇಟೆಯಾಡಿ ಚರ್ಮ, ಕೊಂಬುಗಳ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ನಿವಾಸಿಗಳಾದ ತುಗ್ಲೆಪ್ಪ, ಶರಣಪ್ಪ ಚೌಹಾಣ, ಮಲ್ಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಯಲಬುರ್ಗಾ ಭಾಗದ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

    ಬಂಧಿತರಿಂದ 20 ಕೃಷ್ಣಮೃಗ ಚರ್ಮ, 2 ಕೃಷ್ಣಮೃಗ ಟ್ರೋಫಿಯುಳ್ಳ ಕೊಂಬು, ಒಂದು ಜಿಂಕೆ ಮರಿ ಸೇರಿದಂತೆ ದಂಧೆಗೆ ಬಳಸುತ್ತಿದ್ದ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೃಷ್ಣಮೃಗದ ಒಂದು ಚರ್ಮಕ್ಕೆ 50 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಭಾಗದಲ್ಲಿ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿನಿಮಿಯ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮಾರುವೇಶ ಧರಿಸಿಕೊಂಡು ಜಿಂಕೆ ಚರ್ಮ ಖರೀದಿಗೆ ಬಂದಿದ್ದೇವೆ ಎಂದು ಹೇಳಿ ಗ್ಯಾಂಗ್‍ನ್ನು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

  • ದಿನ ಹಿಂಸೆ ನೀಡುತ್ತಿದ್ದಕ್ಕೆ ಡಬಲ್ ಮರ್ಡರ್ – 24 ಗಂಟೆಯಲ್ಲಿ ಕೊಲೆಗಾರನ ಬಂಧನ

    ದಿನ ಹಿಂಸೆ ನೀಡುತ್ತಿದ್ದಕ್ಕೆ ಡಬಲ್ ಮರ್ಡರ್ – 24 ಗಂಟೆಯಲ್ಲಿ ಕೊಲೆಗಾರನ ಬಂಧನ

    – ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ

    ಮಂಡ್ಯ: ಇಟ್ಟಿಗೆ ಕಾರ್ಖಾನೆಯಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಮೇಶ್ ಬಂಧಿತ ಆರೋಪಿ. ಈತ ಮಂಡ್ಯದ ಕಾಳೇನಹಳ್ಳಿಯಲ್ಲಿ ಸೆ.4ರಂದು ಬಸವರಾಜು ಮತ್ತು ರಾಮಮೂರ್ತಿ ಇಬ್ಬರನ್ನು ಕೊಲೆ ಮಾಡಿದ್ದನು. ಘಟನೆ ನಡೆದ 24 ಗಂಟೆಯಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಸೆ.4ರಂದು ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆ ಬಳಿ ಇದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ಜೋಡಿ ಕೊಲೆ ನಡೆದಿತ್ತು. ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಬಸವರಾಜು ಮತ್ತು ತುಮಕೂರು ಮೂಲದ ರಾಮಮೂರ್ತಿ ಕಾರ್ಮಿಕರ ಬರ್ಬರ ಹತ್ಯೆಯಾಗಿತ್ತು. ಈ ಸಂಬಂಧ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶೀಘ್ರವಾಗಿ ಕೊಲೆ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದರು.

    ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಒಂದೇ ದಿನದಲ್ಲಿ ಜೋಡಿ ಕೊಲೆ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಕಾರ್ಮಿಕ ಚಿಕ್ಕಮಗಳೂರು ಜಿಲ್ಲೆಯ ಕೋಡಿಹಳ್ಳಿ ಗ್ರಾಮದ ರಮೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ದಿನ ಈತ ಕೂಡ ಅವರ ಜೊತೆಯಲ್ಲಿ ಮಲಗಿದ್ದ. ಈತನೇ ಬೆಳಗ್ಗೆ ಪೊಲೀಸರಿಗೆ ಕೊಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದ.

    ಬದುಕುಳಿದ್ದ ಈತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದನಂತೆ ಸತ್ಯ ಬಾಯ್ಬಿಟ್ಟಿದ್ದಾನೆ. ಆ ದಿನ ಕೊಲೆಯಾದ ಇಬ್ಬರಿಗೂ ಮದ್ಯ ಕುಡಿಸಿ ಮಲಗಿದ್ದಾಗ ಹಾರೆಯಿಂದ ಹಲ್ಲೆ ಮಾಡಿ ಸಾಯಿಸಿರುವುದಾಗಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಕೂಡ ಇಬ್ಬರು ಹಲವಾರು ಬಾರಿ ಮದ್ಯ ಸೇವಿಸಿ ಬಂದು ತನಗೆ ಕಿರುಕುಳ ನೀಡಿದ್ದರು. ಇದಕ್ಕಾಗಿ ನಾನು ಇವರನ್ನು ಕೊಲೆ ಮಾಡಿದೆ ಎಂದು ವಿಚಾರಣೆ ಒಪ್ಪಿಕೊಂಡಿದ್ದಾನೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ.

    ಜೋಡಿ ಕೊಲೆ ಪ್ರಕರಣದಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಕೇವಲ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಮ್ಮ ಸಿಬ್ಬಂದಿ ಕೆಲಸವನ್ನು ಶ್ಲಾಘಿಸಿದ್ದಾರೆ.

  • ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ಉಡುಪಿ: ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‍ಬಾಸ್ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ರೈಲ್ಲೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

    ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‍ಐ ನೇತೃತ್ವದ ತಂಡ ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ಅನ್ನು ಎಸೆಯಲು ಮುಂದಾಗಿದ್ದಾನೆ. ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‍ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.

  • ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    – ವಿಧವೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆಟೋ ಡ್ರೈವರ್
    – ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ

    ತಿರುವನಂತಪುರಂ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಡ್ರೈವರ್ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶೋಭಾ (37) ಮೃತ ಮಹಿಳೆ. ಆರೋಪಿ ಬಿಬಿನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಶೋಭಾ ವಿಧವೆಯಾಗಿದ್ದು, ಆರೋಪಿ ಆಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.

    ಏನಿದು ಪ್ರಕರಣ?
    ಮಂದಮಚೇರಿ ಮೂಲದ ಶೋಭಾ ಆಗಸ್ಟ್ 24 ರಂದು ಕಾಣೆಯಾಗಿದ್ದು, ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಆಗಸ್ಟ್ 28 ರಂದು ಶೋಭಾ ಮನೆಯಿಂದ ಸುಮಾರು 34 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.

    ಮೃತ ಶೋಭಾಗೆ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದನು. ಆರೋಪಿ ಬಿಬಿನ್ ಫೇಸ್‍ಬುಕ್ ಮೂಲಕ ಶೋಭಾಗೆ ಪರಿಚಯವಾಗಿದ್ದನು. ನಂತರ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಆದರೆ ಬಿಬಿನ್ ಇತ್ತೀಚೆಗೆ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಮಾತನಾಡಲು ಶೋಭಾ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಗೆ ಆರೋಪಿ ಬಿಬಿನ್ ಕೋಪದಲ್ಲಿ ಶೋಭಾಳನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಮೃತ ಶೋಭಾಳ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದನು. ಪೊಲೀಸರು ಶೋಭಾ ಫೋನ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಆಗ ಆರೋಪಿ ಬಿಬಿನ್ ಶೋಭಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • 2ನೇ ಪತಿಯ ಮಗಳ ಮೇಲೆ ಪ್ರೀತಿ – ಮಲಗಿದ್ದ ಮೊದಲ ಪುತ್ರಿಯನ್ನೇ ಕೊಂದ ತಾಯಿ

    2ನೇ ಪತಿಯ ಮಗಳ ಮೇಲೆ ಪ್ರೀತಿ – ಮಲಗಿದ್ದ ಮೊದಲ ಪುತ್ರಿಯನ್ನೇ ಕೊಂದ ತಾಯಿ

    – ಗಂಡ ಬದುಕಿದ್ದಾಗಲೇ ಮತ್ತೊಂದು ವಿವಾಹ

    ಮೈಸೂರು: ತಾಯಿಯೊಬ್ಬಳು ಹೆತ್ತ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಯಲಕ್ಷ್ಮಿ (6) ತಾಯಿಯಿಂದಲೇ ಹತ್ಯೆಯಾದ ಬಾಲಕಿ. ಆರೋಪಿ ತಾಯಿ ಪವಿತ್ರಾ ಆಕೆಯ ಎರಡನೇ ಪತಿ ಸೂರ್ಯ ಹಾಗೂ ಪವಿತ್ರಾ ತಾಯಿ ಗೌರಮ್ಮ ಸೇರಿ ಕೊಲೆ ಮಾಡಿದ್ದಾರೆ. ಇದೀಗ ಮೇಟಗಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪವಿತ್ರಾ ಎಂಟು ವರ್ಷಗಳ ಹಿಂದೆ ಸಿದ್ದೇಶ್ ಜೊತೆ ಮದುವೆಯಾಗಿದ್ದಳು. ಆದರೆ ಪವಿತ್ರಾ ಮೊದಲ ಪತಿ ಬದುಕಿರುವಾಗಲೇ ಸೂರ್ಯ ಎಂಬಾತನ ಜೊತೆ ಮತ್ತೊಂದು ವಿವಾಹವಾಗಿದ್ದಳು. ಅಲ್ಲದೇ ಮೊದಲ ಪತಿಗೆ ಜನಿಸಿದ ಮಗಳು ಜಯಲಕ್ಷ್ಮಿ ಮೇಲೆ ಪವಿತ್ರಾ ದ್ವೇಷ ಬೆಳೆಸಿಕೊಂಡಿದ್ದಳು. ಇದೇ ಹಿನ್ನೆಲೆಯಲ್ಲಿ ಮಗಳು ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಪವಿತ್ರಾ ಎರಡನೇ ಪತಿ ಸೂರ್ಯ ಹಾಗೂ ತಾಯಿ ಗೌರಮ್ಮ ಸಹಾಯ ಮಾಡಿದ್ದರು.

    ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮಗಳ ಅಂತ್ಯ ಸಂಸ್ಕಾರ ಕೂಡ ನೆರವೇರಿಸಿದ್ದಳು. ಮಗಳು ಕಾಣದಿದ್ದಾಗ ಮೊದಲ ಪತಿ ಸಿದ್ದೇಶ್ ಮೇಟಗಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ತಂದೆ ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸರು ತನಿಖೆ ನಡೆಸಿದ್ದು, ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯಲ್ಲಿ ಇದು ಅಸಹಜ ಸಾವು ಎಂದು ದೃಢವಾಗಿದೆ. ಎರಡನೇ ಗಂಡನಿಗೆ ಜನಿಸಿದ ಮಗಳ ಮೇಲೆ ಆರೋಪಿ ಪ್ರೀತಿ ಇಟ್ಟುಕೊಂಡಿದ್ದಳು. ಆದರೆ ಮೊದಲ ಪತಿಯ ಮೇಲಿನ ದ್ವೇಷದಿಂದಲೇ ಆರೋಪಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದ್ವೆ ಆಗಿದ್ರೂ 3 ವರ್ಷದಿಂದ ಅನೈತಿಕ ಸಂಬಂಧ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ

    ಮದ್ವೆ ಆಗಿದ್ರೂ 3 ವರ್ಷದಿಂದ ಅನೈತಿಕ ಸಂಬಂಧ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ

    – ಕೊಲೆಯ ಮೊದಲು ಪತಿಗೆ ಮದ್ಯ ಕುಡಿಸಿದ್ಲು

    ಧಾರವಾಡ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಪೀರಸಾಬ್ ನದಾಫ (38) ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಕೊಲೆಯಾದವನು. ಕಳೆದ ಮೂರು ವರ್ಷಗಳಿಂದ ಪೀರಸಾಬ್ ನದಾಫ ಪತ್ನಿ ಪರ್ವಿನ್ ಬಾನುಗೆ ಸೋಮಯ್ಯ ಪೂಜಾರ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ವಿಷಯವಾಗಿ ಪತಿ ಪೀರಸಾಬ್ ಹಾಗೂ ಪತ್ನಿ ಪರ್ವಿನ್ ಬಾನು ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ತಿಳಿದು ಬಂದಿದೆ.

    ಕಳೆದ 8 ದಿನಗಳ ಹಿಂದೆ ಪೀರಸಾಬ್ ಏಕಾಎಕಿ ನಾಪತ್ತೆಯಾಗಿದ್ದ. ಪೀರಸಾಬ ತಾಯಿ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಕಳೆದ ಮೂರು ದಿನಗಳ ಹಿಂದೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದರು. ನಂತರ ಧಾರವಾಡ ಗ್ರಾಮೀಣ ಪೊಲೀಸರು ಪೀರಸಾಬ್ ಬಗ್ಗೆ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಆಗ ಪತ್ನಿ ಮತ್ತು ಆತನ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಪೀರಸಾಬ್ ನನ್ನು ಕೊಲೆ ಮಾಡಿದ ನಂತರ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿಗೆ ಎಸೆದಿದ್ದಾರೆ. ಸದ್ಯ ಪೊಲೀಸರು ಕೊಲೆಯಾದವನ ಶವ ಪತ್ತೆ ಹಚ್ಚಿ ಮೂವರನ್ನ ಬಂಧಿಸಿದ್ದಾರೆ.

    ಕೊಲೆಯಲ್ಲಿ ಮತ್ತೊಬ್ಬ ಆರೋಪಿಯಾದ ಮಲ್ಲಿಕಾರ್ಜುನ ಮಡಿವಾಳರ ಕೂಡ ಭಾಗಿಯಾಗಿದ್ದ. ಕೊಲೆಯ ಮಾಡುವ ಮೊದಲು ಆರೋಪಿ ಪತ್ನಿಯೇ ಪತಿಗೆ ಮದ್ಯ ಕುಡಿಸಿದ್ದಳು. ಸದ್ಯ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

  • ಬೈಕಿಗೆ ಬೆಂಕಿ – ಸ್ನೇಹಿತರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ

    ಬೈಕಿಗೆ ಬೆಂಕಿ – ಸ್ನೇಹಿತರ ನಡುವೆ ಗಲಾಟೆ, ಓರ್ವನಿಗೆ ಚಾಕು ಇರಿತ

    ಚಿಕ್ಕಬಳ್ಳಾಪುರ: ಸ್ನೇಹಿತನಿಗೆ ಚಾಕುವಿನಿಂದ ಮನಸ್ಸೋಇಚ್ಛೆ ಇರಿದಿದ್ದ ಇಬ್ಬರು ಯುವಕರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಸಯ್ಯದ್ ಅಹ್ಮದ್ ಸ್ನೇಹಿತರಿಂದ ಹಲ್ಲೆಗೊಳಗಾದ ಯುವಕ. ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಹಿಂಭಾಗದಲ್ಲಿ ಮದ್ಯದ ಅಮಲಿನಲ್ಲಿದ್ದ ಸಯ್ಯದ್ ಅಹ್ಮದ್‍ನಿಗೆ ಆತನ ಸ್ನೇಹಿತರಾದ ರಾಮು, ಪ್ರವೀಣ್ ಮತ್ತು ವೇಣು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿಗಳಾದ ರಾಮು ಮತ್ತು ಪ್ರವೀಣ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪ್ರಕರಣದ ಮತ್ತೊಬ್ಬ ಆರೋಪಿ ವೇಣು ನಾಪತ್ತೆಯಾಗಿದ್ದಾನೆ. ಐದು ದಿನಗಳ ಹಿಂದೆ ಆರೋಪಿ ರಾಮು ಮನೆ ಬಳಿ ನಿಲ್ಲಿಸಿದ್ದ ಬೈಕಿಗೆ ಅಪರಿಚಿತರು ಬೆಂಕಿ ಹಚ್ಚಿದ್ದರು. ಇದರಿಂದ ರಾಮು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅಲ್ಲದೇ ಬೈಕ್ ಪಕ್ಕದಲ್ಲೇ ಇದ್ದ ಬೇರೊಬ್ಬರ ಕಾರಿಗೂ ಬೆಂಕಿ ತಗುಲಿತ್ತು.

    ಈ ಸಂಬಂಧ ಆಕ್ರೋಶಗೊಂಡಿದ್ದ ರಾಮು ತನ್ನ ಸ್ನೇಹಿತರ ಜೊತೆಗೂಡಿ ಬೆಂಕಿ ಹಚ್ಚಿದ್ದವರು ಯಾರು ಅಂತ ಪತ್ತೆ ಮಾಡೋಣ ಬಾ ಎಂದು ಕುಡಿದ ಅಮಲಿನಲ್ಲಿದ್ದ ಅಹ್ಮದ್‍ನನ್ನು ಕರೆದಿದ್ದಾನೆ. ಆದರೆ ಆಹ್ಮದ್ ಬರಲು ನಿರಾಕರಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಚಾಕುವಿನಿಂದ ಇರಿದಿದ್ದಾರೆ. ಅಹ್ಮದ್ ಮುಖ, ತಲೆ, ಕೈ ಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.