Tag: arrest

  • ಮಹಿಳೆ ಜೊತೆ ಅಕ್ರಮ ಸಂಬಂಧ, ಬ್ಯಾಂಕ್ ಲೋನ್ – 2 ಸಮಸ್ಯೆಗೆ ಪರಿಹಾರ ಅಂತ ಪತ್ನಿಯನ್ನೇ ಕೊಂದ

    ಮಹಿಳೆ ಜೊತೆ ಅಕ್ರಮ ಸಂಬಂಧ, ಬ್ಯಾಂಕ್ ಲೋನ್ – 2 ಸಮಸ್ಯೆಗೆ ಪರಿಹಾರ ಅಂತ ಪತ್ನಿಯನ್ನೇ ಕೊಂದ

    – ಹಾವು ಕಚ್ಚಿದೆ ಅಂತ ನಾಟಕ, ತನಿಖೆ ವೇಳೆ ಸತ್ಯಾಂಶ ಬಯಲು

    ದಾವಣಗೆರೆ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದರೆ ಬ್ಯಾಂಕ್ ಲೋನ್ ಸಂಪೂರ್ಣವಾಗಿ ಕ್ಲಿಯರ್ ಆಗುತ್ತೆ ಎಂದುಕೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.

    ರೋಜಾ ಮೃತ ಮಹಿಳೆ. ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ ಎಂದು ಹೇಳಿ ಪತಿ ಅಶೋಕ್ ನಾಟಕವಾಡಿದ್ದನು. ಆದರೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಗಂಡನೇ ಕೊಲೆ ಮಾಡಿರುವ ಸತ್ಯಾಂಶ ಹೊರಗೆ ಬಂದಿದೆ.

    ಏನಿದು ಪ್ರಕರಣ?
    ಸಿಂಗಟಗೆರೆ ಗ್ರಾಮದ ಅಶೋಕ್ ಕಳೆದ ಆರು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ರೋಜಾಳನ್ನು ಮದುವೆಯಾಗಿದ್ದನು. ಕಳೆದ ಆರು ವರ್ಷಗಳಿಂದ ಗಂಡ-ಹೆಂಡತಿ ಸುಖವಾಗಿ ಸಂಸಾರ ನಡೆಸುತ್ತಾ ಬಂದಿದ್ದರು. ರೋಜಾ ಹೆಸರಿನಲ್ಲಿ ಆರೋಪಿ ಅಶೋಕ್ ಬ್ಯಾಂಕ್ ಒಂದರಲ್ಲಿ 5 ಲಕ್ಷ ಗೃಹ ಸಾಲ ತೆಗೆದುಕೊಂಡಿದ್ದನು. ಆದರೆ ಹಣವನ್ನು ಖರ್ಚು ಮಾಡಿಕೊಂಡಿದ್ದು, ಹೇಗೆ ಸಾಲ ತೀರಿಸೋದು ಎಂದು ಯೋಚನೆ ಮಾಡುತ್ತಿದ್ದನು.

    ಆಗ ಪತ್ನಿ ರೋಜಾಳನ್ನು ಕೊಲೆ ಮಾಡಿದರೆ ಲೋನ್ ಸಂಪೂರ್ಣ ಕ್ಲಿಯರ್ ಆಗುತ್ತೆ. ಮುಂದೆ ಕಟ್ಟುವ ಅವಶ್ಯಕತೆ ಇರೋದಿಲ್ಲ ಎಂದು ಯೋಚನೆ ಮಾಡಿದ್ದಾನೆ. ಅದರಂತೆಯೇ ಪತ್ನಿಯನ್ನು ತನ್ನ ಮೆಕ್ಕೆಜೋಳದ ಹೊಲಕ್ಕೆ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪತ್ನಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡು ರೋಜಾ ಪ್ರಜ್ಞೆ ತಪ್ಪಿದ್ದಾರೆ ಎಂದು ಎಸ್.ಪಿ.ಹನುಮಂತರಾಯ ತಿಳಿಸಿದ್ದಾರೆ. ಆಗ ಮನೆಗೆ ಫೋನ್ ಮಾಡಿ ಹೊಲದಲ್ಲಿ ಕೆಲಸ ಮಾಡುವಾಗ ರೋಜಾಳಿಗೆ ಹಾವು ಕಚ್ಚಿರಬಹುದು. ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಹೇಳಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರೋಜಾ ಸಾವನ್ನಪ್ಪಿದ್ದಾಳೆ.

    ಹೊನ್ನಾಳಿ ಪೊಲೀಸರು ಸಹಜ ಸಾವು ಎಂದು ಕೇಸ್ ದಾಖಲಿಸಿ ನಂತರ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ರೋಜಾಳ ತವರು ಮನೆಯವರು ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ಮಾಡಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನವಿದ್ದ ರೋಜಾಳ ತಂದೆ ಹಾಲೇಶಪ್ಪ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಸಿಪಿಐ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ.

    ಆರೋಪಿ ಅಶೋಕನಿಗೆ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಕೂಡ ಇದ್ದು, ಇದೇ ಕಾರಣಕ್ಕೆ ರೋಜಾಳ ಜೊತೆ ಮನೆಯಲ್ಲಿ ಸಾಕಷ್ಟು ಬಾರಿ ಜಗಳವಾಗಿತ್ತು. ಲೋನ್‍ನ ಹಣವನ್ನು ಕೂಡ ಬಳಕೆ ಮಾಡಿಕೊಂಡು ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೋಜಾಳನ್ನು ಸಾಯಿಸಿದರೆ ಮಾತ್ರ ಎರಡು ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿದಿದ್ದನು. ಅದರಂತೆಯೇ ಮೆಕ್ಕೆಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆದಿದ್ದಾನೆ. ಅಲ್ಲದೆ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  • ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

    ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

    – ಆರು ಗಂಟೆಗಳಲ್ಲೇ ಆರೋಪಿಗಳ ಬಂಧನ

    ಬೆಂಗಳೂರು: ಭಾನುವಾರ ಕಾಡುಗೋಡಿಯಲ್ಲಿ ನಡೆದ ಹೆಚ್.ಎ.ಎಲ್ ಉದ್ಯೋಗಿ ರಾಜೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆ ನಡೆದ ಆರು ಗಂಟೆಗಳಲ್ಲಿ ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳನ್ನು ಜಾನ್‍ಪಾಲ್ ಹಾಗೂ ದಿನೇಶ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್‍ಪಾಲ್ ತಂಗಿ ಜಾಸ್ಮಿನ್‍ಗೆ ಏಳು ವರ್ಷಗಳ ಹಿಂದೆ ರಾಜೇಶ್ ಜೊತೆ ವಿವಾಹ ಮಾಡಲಾಗಿತ್ತು. ಇವರಿಗೆ ಐದು ವರ್ಷದ ಗಂಡು ಹಾಗೂ ಮೂರು ತಿಂಗಳ ಹೆಣ್ಣು ಮಗು ಇದ್ದು, ಕಾಡುಗೋಡಿಯ ವೀರಸ್ವಾಮಿರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದರು.

    ಕಳೆದ ನಾಲ್ಕು ತಿಂಗಳ ಹಿಂದೆ ಜಾಸ್ಮಿನ್ ಮತ್ತು ರಾಜೇಶ್ ನಡುವೆ ಜಗಳವಾಗಿದ್ದು, ಜಾಸ್ಮಿನ್ ಕೆಜಿಎಫ್‍ನಲ್ಲಿರುವ ತನ್ನ ತವರು ಮನೆಗೆ ಹೋಗಿ ಅಲ್ಲೆ ವಾಸವಿದ್ದಳು. ಆದರೆ ಇದೇ ತಿಂಗಳ 15 ರಂದು ಜಾಸ್ಮಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ವಿಷಯ ತಿಳಿದ ಜಾಸ್ಮಿನ್ ಅಣ್ಣ ಯೋಧನಾಗಿರುವ ಜಾನ್‍ಪಾಲ್ ರಜೆಯ ಮೇಲೆ ತಂಗಿಯ ಶವಸಂಸ್ಕಾರಕ್ಕೆ ಬಂದಿದ್ದನು. ತಂಗಿಯ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ತಿಳಿದು ತನ್ನ ಚಿಕ್ಕಪ್ಪನ ಮಗನಾದ ದಿನೇಶ್ ಜೊತೆಗೂಡಿ ಕೊಲೆ ಮಾಡಲು ಪ್ಲಾನ್ ಮಾಡಿದ್ದನು. ಅದರಂತೆಯೇ ಕೆಜಿಎಫ್‍ನಿಂದ ಕಾಡುಗೋಡಿಗೆ ಬಂದಿದ್ದ ರಾಜೇಶ್‍ನನ್ನು ಕಾಡುಗೋಡಿ ವೀರಸ್ವಾಮಿರೆಡ್ಡಿ ಲೇಔಟ್‍ನ ಮಯೂರ ಬೇಕರಿ ಬಳಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

    ವಿಷಯ ತಿಳಿದ ಕಾಡುಗೋಡಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಕೊಲೆ ನಡೆದ ಆರು ಗಂಟೆಗಳಲ್ಲಿಯೇ ಇಬ್ಬರು ಆರೋಪಿಗಳನ್ನು ಬಂಗಾರ ಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಅರ್ಚಕರ ಹತ್ಯೆ ಪ್ರಕರಣ – 9 ಆರೋಪಿಗಳಿಗೆ  ನ್ಯಾಯಾಂಗ ಬಂಧನ

    ಅರ್ಚಕರ ಹತ್ಯೆ ಪ್ರಕರಣ – 9 ಆರೋಪಿಗಳಿಗೆ ನ್ಯಾಯಾಂಗ ಬಂಧನ

    – 4.7 ಲಕ್ಷ ಹಣ, ಫೋನ್, ಬೈಕ್, ಕಾರು ವಶ

    ಮಂಡ್ಯ: ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ, ದೇವಸ್ಥಾನದ ಹುಂಡಿ ದೋಚಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಒಟ್ಟು ಈ ಪ್ರಕರಣಗಳಲ್ಲಿ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

    ಸೆಪ್ಟೆಂಬರ್ 14 ರಂದು ಕೊಲೆ ಮತ್ತು ದರೋಡೆ ಆರೋಪದ ಮೇಲೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಿದ ವೇಳೆ ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ತಲೆಮರಿಸಿಕೊಂಡಿದ್ದ ನಾಲ್ವರನ್ನು ಬಂಧಿಸಲು ಬಲೆ ಬೀಸಿದ್ದರು. ಇದೀಗ ಆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಶಿವು, ಮಂಜು, ಶಿವರಾಜ್ ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಈಗ ಬಂಧಿತರಾಗಿರುವ ನಾಲ್ಕು ಮಂದಿಯಿಂದ 4.7 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್, 2 ಬೈಕ್ ಮತ್ತು 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಸೆಪ್ಟೆಂಬರ್ 10ರ ಮಧ್ಯರಾತ್ರಿ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಕೊಲೆ ಗೈದು ದೇವಸ್ಥಾನದಲ್ಲಿದ್ದ ಮೂರು ಹುಂಡಿಯ ಹಣವನ್ನು ದೋಚಿಕೊಂಡು ಹಂತಕರು ಪರಾರಿಯಾಗಿದ್ದರು. ಪ್ರಕರಣ ನಡೆದ ಮೂರೇ ದಿನಗಳಲ್ಲಿ ಪೊಲೀಸರು ಐದು ಮಂದಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರನ್ನು ಬಂಧಿಸುವ ವೇಳೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಆರೋಪಿಗಳಾದ ವಿಜಿ, ಗಾಂಧಿ ಹಾಗೂ ಮಂಜು ಎಂಬವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮೂವರಿಗೂ ಕಾಲಿಗೆ ಪೆಟ್ಟು ಬಿದ್ದಿತ್ತು.

  • ವಿವಾಹಿತೆ ಮೇಲೆ ಆರು ಮಂದಿಯಿಂದ ಗ್ಯಾಂಗ್‍ರೇಪ್ – ವಿಡಿಯೋ ರೆಕಾರ್ಡ್

    ವಿವಾಹಿತೆ ಮೇಲೆ ಆರು ಮಂದಿಯಿಂದ ಗ್ಯಾಂಗ್‍ರೇಪ್ – ವಿಡಿಯೋ ರೆಕಾರ್ಡ್

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್

    ಜೈಪುರ: 45 ವರ್ಷದ ಮಹಿಳೆಯ ಮೇಲೆ ಆರು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳು ಅತ್ಯಾಚಾರ ಎಸಗಿದ್ದಲ್ಲದೇ ಕೃತ್ಯದ ವಿಡಿಯೋವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ವಿವಾಹಿತ ಮಹಿಳೆ ತನ್ನ ಸಂಬಂಧಿಯೊಂದಿಗೆ ಯಾರಿಗೋ ಸಾಲವನ್ನು ನೀಡಲು ಹೋಗುತ್ತಿದ್ದರು. ಸಂತ್ರಸ್ತೆ ಹಣವನ್ನು ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಆರು ಮಂದಿ ಬೆಟ್ಟದ ಮೇಲೆ ತಡೆದಿದ್ದಾರೆ. ಆಗ ಆರೋಪಿಗಳು ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಜೊತೆಯಲ್ಲಿದ್ದ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಡಿಎಸ್‍ಪಿ ಕುಶಾಲ್ ಸಿಂಗ್ ಹೇಳಿದರು.

    ಒಬ್ಬ ವ್ಯಕ್ತಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಗ ಉಳಿದವರು ವಿಡಿಯೋವನ್ನು ರೇಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೇ ಉಳಿದ ಐದು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಸಿಂಗ್ ತಿಳಿಸಿದರು.

    ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ಪತಿಗೆ ತಿಳಿಸಿದ್ದಾರೆ. ನಂತರ ಆಕೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಈಗಾಗಲೇ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

  • ಕೇರಳ, ಪಶ್ಚಿಮ ಬಂಗಾಳದಲ್ಲಿ 11 ಕಡೆ ದಾಳಿ – 9 ಉಗ್ರರ ಬಂಧನ

    ಕೇರಳ, ಪಶ್ಚಿಮ ಬಂಗಾಳದಲ್ಲಿ 11 ಕಡೆ ದಾಳಿ – 9 ಉಗ್ರರ ಬಂಧನ

    – ತಪ್ಪಿತು ಉಗ್ರರ ದಾಳಿ

    ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 11 ಕಡೆ ದಾಳಿ ಮಾಡಿ 9 ಜನ ಉಗ್ರರನ್ನು ಇಂದು ಬಂಧಿಸಿದ್ದಾರೆ.

    ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ 9 ಮಂದಿ ಉಗ್ರರನ್ನು ಎನ್‍ಐಎ ಅರೆಸ್ಟ್ ಮಾಡಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಿಂದ ಒಂಬತ್ತು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಆರು ಮಂದಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಲಾಗಿದ್ದು, ಉಳಿದ ಮೂವರನ್ನು ಕೇರಳದಿಂದ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದೆ.

    ಬಂಧಿತ ಭಯೋತ್ಪಾದಕರನ್ನು ಕೇರಳದ ಎರ್ನಾಕುಲಂ ಮೂಲದವರಾದ ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್, ಮೊಸರಾಫ್ ಹುಸೈನ್ ಮತ್ತು ಪಶ್ಚಿಮಾ ಬಂಗಾಳದ ಮುರ್ಷಿದಾಬಾದ್ ಮೂಲಕದ ನಜ್ಮಸ್ ಸಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಾಲ್, ಲ್ಯುಯೆನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಎಂದು ಗುರುತಿಸಲಾಗಿದೆ.

    ಈ ವಿಚಾರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್‍ಐಎ, ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿಗಳನ್ನು ಪಾಕಿಸ್ತಾನ ಮೂಲದ ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರು ಎಂದು ತಿಳಿದು ಬಂದಿದೆ. ಇವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‍ಐಎ ತಿಳಿಸಿದೆ.

    ಈ ಭಯೋತ್ಪಾದಕರ ಸಂಘ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಹಣವನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿತ್ತು. ಇದರಲ್ಲಿ ಕೆಲ ಉಗ್ರರು ಹಣ ಬಂದ ನಂತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ದೆಹಲಿಗೆ ಪ್ರಯಾಣಿಸಲು ಯೋಜನೆ ರೂಪಿಸಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಇವರನ್ನು ಬಂಧಿಸಿದ್ದು, ದೇಶದಲ್ಲಿ ನಡೆಯಬೇಕಿದ್ದ ಹಲವಾರು ಭಯೋತ್ಪಾದಕ ದಾಳಿಗಳು ನಿಂತು ಹೋಗಿವೆ ಎಂದು ಎನ್‍ಐಎ ಹೇಳಿದೆ.

    ಬಂಧಿತರಿಂದ ಡಿಜಿಟಲ್ ಸಾಧನಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ತೀಕ್ಷ್ಣವಾದ ಶಸ್ತ್ರಾಸ್ತ್ರಗಳು, ದೇಶೀಯ ನಿರ್ಮಿತ ಬಂದೂಕುಗಳು, ಸ್ಥಳೀಯವಾಗಿ ತಯಾರಿಸಿದ ದೇಹದ ರಕ್ಷಾಕವಚ, ಮನೆಯಲ್ಲಿ ತಯಾರಿಸಿದ ಸ್ಫೋಟಕ ಸಾಧನಗಳು, ತಯಾರಿಸಲು ಬಳಸುವ ಪುಸ್ತಕಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಐಎ ಮಾಹಿತಿ ನೀಡಿದೆ.

  • ಒಂದೂವರೆ ವರ್ಷದಿಂದ ಬಲೆ ಹಾಕಿ ಕಾಯ್ತಿದ್ದ – ಕೊನೆಗೂ ಪ್ರತೀಕಾರಕ್ಕಾಗಿ ಚಿರತೆ ಕೊಂದ

    ಒಂದೂವರೆ ವರ್ಷದಿಂದ ಬಲೆ ಹಾಕಿ ಕಾಯ್ತಿದ್ದ – ಕೊನೆಗೂ ಪ್ರತೀಕಾರಕ್ಕಾಗಿ ಚಿರತೆ ಕೊಂದ

    – ಹಸು ಕಳೆದುಕೊಂಡವನ ಸೇಡಿನ ಕಥೆ

    ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಹಸುವನ್ನು ಕೊಂದಿದ್ದಕ್ಕೆ ಒಂದೂವರೆ ವರ್ಷದಿಂದ ಕಾದು ಕೊನೆಗೂ ಚಿರತೆಯನ್ನು ಕೊಂದಿರುವ ಘಟನೆ ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

    ಚಿರತೆಯನ್ನು ಕೊಂದ 34 ವರ್ಷದ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದೆ. ಚಿರತೆ ಆರೋಪಿಯ ಹಸುವನ್ನು ಒಂದು ವರ್ಷದ ಹಿಂದೆ ಕೊಂದ ನಂತರ ಚಿರತೆಗಾಗಿ ಬಲೆ ಹಾಕಿದ್ದನು ಎಂದು ತಿಳಿದು ಬಂದಿದೆ.

    ಸೆಪ್ಟೆಂಬರ್ 8 ರಂದು ಕನ್ನಿಮಲಾ ಎಸ್ಟೇಟ್ ಕೆಳ ವಿಭಾಗದಲ್ಲಿ ನಾಲ್ಕು ವರ್ಷದ ಚಿರತೆ ಬಲೆಗೆ ಬಿದ್ದು ಶವವಾಗಿ ಪತ್ತೆಯಾಗಿತ್ತು. ನಂತರ ಅರಣ್ಯ ಇಲಾಖೆ ಚಿರತೆಯ ಸಾವಿನ ಬಗ್ಗೆ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಕುಮಾರ್ ಚಿರತೆಯನ್ನು ಕೊಂದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಈ ವೇಳೆ ಇದು ಪ್ರತೀಕಾರಕ್ಕಾಗಿ ನಡೆದ ಕಥೆ ಎಂದು ಬಹಿರಂಗವಾಗಿದೆ.

    ಕುಮಾರ್ ಹಸು ಹೊಲದಲ್ಲಿ ಮೇಯುತ್ತಿದ್ದಾಗ ಇದೇ ಚಿರತೆ ಹಾಡಹಗಲೇ ಹಸುವಿನ ದಾಳಿ ಮಾಡಿ ಕೊಂದು ಹಾಕಿತ್ತು. ಆ ಹಸು ಕುಮಾರ್ ಜೀವನದ ಆಧಾರವಾಗಿತ್ತು. ಹೀಗಾಗಿ ತನ್ನ ಹಸುವನ್ನು ಕೊಂದು ಚಿರತೆಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ.

    ಕುಮಾರ್‌ನ ಸೇಡಿನ ಕಥೆಯನ್ನು ನೆರೆಹೊರೆಯವರು ಅರಣ್ಯ ಸಿಬ್ಬಂದಿಗೆ ತಿಳಿಸಿದ ನಂತರ ಚಿರತೆಯ ಸಾವಿನ ರಹಸ್ಯ ಬಹಿರಂಗವಾಗಿದೆ. ನಾನು ಚಿರತೆಗಾಗಿ ಬಲೆಯನ್ನು ಹಾಕಿದ್ದೆ. ಸುಮಾರು ಕಳೆದ 1.5 ವರ್ಷಗಳಿಂದ ಚಿರತೆಗಾಗಿ ಕಾಯುತ್ತಿದ್ದೆ. ಆಗಾಗ ನಾನು ಹಾಕಿದ್ದ ಬಲೆಯನ್ನು ಪರಿಶೀಲಿಸುತ್ತಿದ್ದೆ. ಕೊನೆಗೆ ಚಿರತೆ ನಾನು ಹಾಕಿದ್ದ ಬಲೆಗೆ ಬಿದ್ದಿದೆ. ಆಗ ಚಿರತೆಯನ್ನು ಚಾಕುವಿನಿಂದ ಇರಿದು ಕೊಂದಿದ್ದೇನೆ ಎಂದು ಆರೋಪಿ ಕುಮಾರ್ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾನೆ.

    ಮುನ್ನಾರ್ ಎಸಿಎಫ್ ಸಜೀಶ್ ಕುಮಾರ್ ಮತ್ತು ಶ್ರೇಣಿ ಅಧಿಕಾರಿ ಎಸ್.ಹರೀಂದ್ರನಾಥ್ ತಂಡ ಆರೋಪಿಯನ್ನು ಬಂಧಿಸಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ತಡರಾತ್ರಿ ಗೆಳೆಯನ ಮನೆಯಲ್ಲಿ ಮಗಳು – ಜನರ ಮುಂದೆಯೇ ಕೊಚ್ಚಿ ಕೊಂದ ತಂದೆ

    ತಡರಾತ್ರಿ ಗೆಳೆಯನ ಮನೆಯಲ್ಲಿ ಮಗಳು – ಜನರ ಮುಂದೆಯೇ ಕೊಚ್ಚಿ ಕೊಂದ ತಂದೆ

    – ಮನವಿ ಮಾಡಿದ್ರೂ ಮನೆಗೆ ವಾಪಸ್ ಬರಲಿಲ್ಲ
    – ತಡೆಯಲು ಬಂದ ಪ್ರಿಯಕರನ ಮೇಲೂ ಹಲ್ಲೆ

    ಲಕ್ನೋ: ಪ್ರಿಯಕರನ ಮನೆಯಲ್ಲಿದ್ದ 18 ವರ್ಷದ ಮಗಳನ್ನು ತಂದೆಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.

    ಖನ್‍ಪನ್ನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಯುವತಿಯ ಪ್ರಿಯಕರನ ಮೇಲೂ ಹಲ್ಲೆ ನಡೆದಿದ್ದು, ಸದ್ಯಕ್ಕೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

    ಏನಿದು ಪ್ರಕರಣ?
    ಮೃತ ಹುಡುಗಿ ಅದೇ ಗ್ರಾಮದ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದು, ಆತ ಅಂಗಡಿ ನಡೆಸುತ್ತಿದ್ದನು. ಮಂಗಳವಾರ ತಡರಾತ್ರಿ ಯುವತಿ ಮನೆಯಿಂದ ಓಡಿ ಹೋಗಿ ಗೆಳೆಯನ ಮನೆಗೆ ಹೋಗಿದ್ದಳು. ಆಕೆಯ ತಂದೆಗೆ ಮಗಳು ಗೆಳೆಯ ಮನೆಯಲ್ಲಿ ಆತನ ಜೊತೆಯಲ್ಲಿದ್ದಾಳೆ ಎಂದು ಗೊತ್ತಾಗಿದೆ. ತಕ್ಷಣ ತಂದೆ ಕೊಡಲಿಯನ್ನು ಎತ್ತಿಕೊಂಡು ಯುವಕನ ಮನೆಗೆ ಹೋಗಿದ್ದಾನೆ. ತಂದೆಯ ಜೊತೆ ಕುಟುಂಬದ ಇತರ ಸದಸ್ಯರು ಸಹ ಹೋಗಿದ್ದರು.

    ಯುವತಿ ತನ್ನ ಪ್ರಿಯಕನ ಮನೆಯಲ್ಲಿರುವುದನ್ನು ಕುಟುಂಬದವರು ನೋಡಿದ್ದಾರೆ. ಮೊದಲಿಗೆ ಮಗಳನ್ನು ಮನೆಗೆ ವಾಪಸ್ ಬರುವಂತೆ ಕೇಳಿಕೊಂಡಿದ್ದಾರೆ. ಆದರೆ ಹುಡುಗಿ ಮನೆಗೆ ಬರಲ್ಲ ಎಂದು ವಾದ ಮಾಡಲು ಪ್ರಾರಂಭಿಸಿದ್ದಾಳೆ. ಇದರಿಂದ ಕೋಪಕೊಂಡ ತಂದೆ ಕೊಡಲಿಯಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ಭೀಕರ ಹತ್ಯೆಗೆ ಆ ಪ್ರದೇಶದ ಜನರು ಸಾಕ್ಷಿಯಾಗಿದ್ದರು. ಆಕೆಯನ್ನು ಉಳಿಸಲು ಪ್ರಯತ್ನಿಸಿದ ಯುವಕನ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಥಳೀಯ ನಿವಾಸಿಗಳಿಂದ ಮಾಹಿತಿ ತಿಳಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಹುಡುಗಿಯ ಗೆಳೆಯನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇದು ಮರ್ಯಾದಾ ಹತ್ಯೆಯ ಪ್ರಕರಣ. ನಾವು ಹುಡುಗಿಯ ತಂದೆಯನ್ನು ಬಂಧಿಸಿ ಕೊಡಲಿಯನ್ನು ವಶಪಡಿಸಿಕೊಂಡಿದ್ದೇವೆ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಕುಮಾರ್ ಹೇಳಿದ್ದಾರೆ.

  • ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    ಮಗನನ್ನೇ ಕೊಲ್ಲಲು 2 ಲಕ್ಷಕ್ಕೆ ಸುಪಾರಿ – ಪಾಪಿ ತಂದೆ ಸೇರಿ 6 ಮಂದಿ ಅರೆಸ್ಟ್

    – ಏರಿ ಮೇಲೆ ಮಗನಿಗೆ ಗುಂಡು ಹೊಡೆಸಿದ್ದ ಅಪ್ಪ

    ಹಾಸನ: ಆಸ್ತಿ ವಿವಾದದ ವಿಚಾರವಾಗಿ ಮಗನನ್ನೇ ಕೊಲೆ ಮಾಡಿಸಿದ ಅಪ್ಪನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ಕಳೆದ ತಿಂಗಳು ಕೊಲೆಯಾಗಿತ್ತು. ಆಗಸ್ಟ್ 27ರ ರಾತ್ರಿ ಬೈಕಿನಲ್ಲಿ ಬರುತ್ತಿದ್ದ ಪುನೀತ್(26) ಎಂಬಾತನನ್ನು ಶೂಟೌಟ್ ಮಾಡಲಾಗಿತ್ತು. ಕುಟುಂಬ ಕಲಹ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಪುನೀತ್ ತಂದೆ ಹೇಮಂತ್, ಕಾಂತರಾಜು, ಪ್ರಶಾಂತ್, ಸುನಿಲ್, ನಂದೀಶ, ನಾಗರಾಜ್ ಎಂದು ಗುರುತಿಸಲಾಗಿದೆ. ಮಗನ ಜೀವ ತೆಗೆಯಲು ನಾಲ್ಕೈದು ತಿಂಗಳಿಂದ ಪ್ಲಾನ್ ಮಾಡಿದ್ದ ತಂದೆ ಹೇಮಂತ್, ಇದಕ್ಕಾಗಿ 2 ಲಕ್ಷ ರೂಪಾಯಿಗೆ ಸುಪಾರಿ ಕೂಡ ನೀಡಿದ್ದ. ಕೆರೆ ಏರಿ ಮೇಲೆ ಆರೋಪಿಗಳಾದ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು. ಇನ್ನಿಬ್ಬರು ಪುನೀತ್ ಬೈಕ್‍ನಲ್ಲಿ ಬರುತ್ತಿರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದರು.

    ಪುನೀತ್ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ದೂರು ನೀಡಿದ್ದು, ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯ ಇತ್ತು. ಈ ಕಾರಣದಿಂದ ಪತಿ ಹಾಗೂ ಇನ್ನೊಬ್ಬ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಮೇರೆಗೆ ತಂದೆ ಹೇಮಂತ್ ಅನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆಯ ವಿಚಾರ ಹೊರಗೆ ಬಂದಿದೆ.

    2 ಲಕ್ಷ ರೂ.ಗೆ ಮಗನನ್ನೇ ಡೀಲ್ ಮಾಡಿದ್ದ ತಂದೆ ಮುಂಗಡವಾಗಿ 5 ಸಾವಿರ ನೀಡಿದ್ದ ಎನ್ನಲಾಗಿದೆ. ಈಗ ಪಾಪಿ ತಂದೆ ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5 ಮೊಬೈಲ್, 1.88 ಲಕ್ಷ ರೂ ನಗದು ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ ಶ್ರೀನಿವಾಸ್ ಗೌಡ, ಕಗ್ಗಂಟಾಗಿದ್ದ ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

  • ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    – ಮಾವ ಸಾವು, ಗಂಭೀರ ಸ್ಥಿತಿಯಲ್ಲೇ ಉಳಿದ ಸೋದರತ್ತೆ

    ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ದರೋಡೆಕೋರರನ್ನು ಪಂಜಾಬ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ಆಗಸ್ಟ್ 28ರ ರಾತ್ರಿ ರೈನಾ ಸೋದರತ್ತೆ ಕುಟುಂಬದ ಮೇಲೆ ತಂಡವೊಂದು ದಾಳಿ ಮಾಡಿತ್ತು. ಮನೆಯ ಮಹಡಿಯ ಮೇಲೆ ಮಲಗಿದ್ದ ಕುಟುಂಬದ ಎಲ್ಲರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ರೈನಾರ ಸೋದರ ಮಾವ ಸಾವನ್ನಪ್ಪಿದ್ದರು. ಅತ್ತೆಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದರು. ಜೊತೆಗೆ ಅವರ ಮಕ್ಕಳಿಬ್ಬರು ಕೂಡ ಹಲ್ಲೆಗೊಳಗಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪಂಜಾಬಿನ ಡಿಜಿಪಿ ದಿನಕರ್ ಗುಪ್ತಾ, ಬಂಧಿತರು ಹೊರರಾಜ್ಯದವರಾಗಿದ್ದಾರೆ. ಇವರ ಗ್ಯಾಂಗಿನಲ್ಲಿ 11 ಮಂದಿ ಇದ್ದು ಎಲ್ಲರನ್ನು ಪತ್ತೆ ಮಾಡಲಾಗಿದೆ. ಆದರೆ ಸದ್ಯ ಮೂವರು ಸಿಕ್ಕಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ನಮ್ಮ ಸಿಬ್ಬಂದಿ ಶೋಧಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಬಂಧಿತರು ಪಠಾಣ್ ಕೋಟ್ ರೈಲ್ವೆ ನಿಲ್ದಾಣದಲ್ಲಿರುವ ಕೊಳೆಗೇರಿಯಲ್ಲಿ ವಾಸವಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ದರೋಡೆ ಮತ್ತು ಕೊಲೆ ಮಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಇವರು ಶ್ರೀಮಂತರ ಮನೆ ನೋಡಿ ದರೋಡೆ ಮಾಡುತ್ತಿದ್ದರು. ತಡೆಯಲು ಬಂದವರನ್ನು ರಾಡುಗಳಿಂದ ಹೊಡೆದು ಕೊಲೆ ಮಾಡುತ್ತಿದ್ದರು ಎಂದು ಗುಪ್ತಾ ತಿಳಿಸಿದ್ದಾರೆ.

    ಘಟನೆ ನಡೆದ ಆ.28ರ ರಾತ್ರಿ ರೈನಾ ಅವರ ಕುಟುಂಬದ ಮೇಲೆ ಹಲ್ಲೆ ಮಾಡುವ ಮೊದಲು, ಬೇರೆ ಮನೆಯಲ್ಲಿ ದರೋಡೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂರು ಮನೆಯಲ್ಲಿ ಪ್ರಯತ್ನಿಸಿದರೂ ಆಗಿಲ್ಲ. ಕೊನೆಗೆ ನಾಲ್ಕನೇಯದಾಗಿ ರೈನಾ ಅವರ ಸೋದರತ್ತೆ ಮನೆಗೆ ಬಂದಿದ್ದಾರೆ.

    ಮನೆಗೆ ಏಣಿ ಹಾಕಿ ಮೇಲೆ ಹೋಗಿದ್ದಾರೆ. ಮೊದಲಿಗೆ ಮಹಡಿ ಮೇಲೆ ಮಲಗಿದ್ದ ನಾಲ್ವರನ್ನು ರಾಡುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಮನೆಯೊಳಗೆ ನುಗ್ಗಿ ಮನೆಯಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಪಠಾಣ್ ಕೋಟ್ ರೈಲ್ವೆ ನಿಲ್ದಾಣಕ್ಕೆ ಬಂದ ಕದ್ದ ಚಿನ್ನ ಮತ್ತು ಹಣವನ್ನು ಸಮನಾಗಿ ಹಂಚಿಕೊಂಡು, ಅದೇ ಕೊಳಗೇರಿಯಲ್ಲಿ ಬೇರೆ ಬೇರೆ ವಾಸ ಮಾಡಲು ಪ್ರರಂಭಿಸಿದ್ದಾರೆ. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

    ಈ ವಿಚಾರವಾಗಿ ಅಂದು ಟ್ವೀಟ್ ಮಾಡಿದ್ದ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆಯ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರಾದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದರು.

    ಜೊತೆಗೆ ಇದೂವರೆಗೂ ಅಂದು ರಾತ್ರಿ ಏನಾಯಿತು ಮತ್ತು ಯಾರೂ ಮಾಡಿದರು ಎಂಬುದು ಏನೂ ಗೊತ್ತಿಲ್ಲ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಆ ಅಪರಾಧಿಗಳು ಇನ್ನೊಂದು ಕೃತ್ಯ ಮಾಡಲು ನಾವು ಬಿಡಬಾರದು ಎಂದು ರೈನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದರು.

  • ಮದ್ವೆಗೂ ಮುನ್ನವೇ ಪರಿಚಯವಿದ್ದ ಪತ್ನಿಯ ಸ್ನೇಹಿತನನ್ನೇ ಕೊಂದ

    ಮದ್ವೆಗೂ ಮುನ್ನವೇ ಪರಿಚಯವಿದ್ದ ಪತ್ನಿಯ ಸ್ನೇಹಿತನನ್ನೇ ಕೊಂದ

    – ಹೆಂಡ್ತಿ ತನ್ನ ಗೆಳೆಯನನ್ನ ಭೇಟಿಯೇ ಮಾಡಿಲ್ಲ
    – ಫೇಸ್‍ಬುಕ್ ಮೂಲಕ ಚಾಟಿಂಗ್

    ಮುಂಬೈ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ ಪತ್ನಿಯ ಸೋಷಿಯಲ್ ಮೀಡಿಯಾದ ಗೆಳೆಯನನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಸೌರಭ್ ವೆಂಕಟ್ ಜಾಧವ್ ಎಂದು ಗುರುತಿಸಲಾಗಿದೆ. ಆರೋಪಿ ಅಯಾಜ್ ಶೇಖ್ ಮತ್ತು ಆತನ ಸ್ನೇಹಿತ ಸೋನ್ಯಾ ಬರಾಥೆ ಇಬ್ಬರು ಸೇರಿಕೊಂಡು ಔಂಧ್ ಆಸ್ಪತ್ರೆಯ ಆವರಣದಲ್ಲಿ ಜಾದವ್‍ನನ್ನು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಯ ಸಹೋದರ ಪೊಲೀಸರಿಗೆ ಈ ಕುರಿತು ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಶೇಖ್ ತನ್ನ ಪತ್ನಿ ಜಾಧವ್ ಜೊತೆ ಹೆಚ್ಚಾಗಿ ಮಾತನಾಡುತ್ತಿದ್ದರಿಂದ ಕೋಪಗೊಂಡು ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೃತ ಜಾಧವ್ ಸಂಜಯ್‍ನಗರ ನಿವಾಸಿಯಾಗಿದ್ದು, ಖಾಸಗಿ ಆಟೋಮೊಬೈಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಅಯಾಜ್ ಶೇಖ್ ಪತ್ನಿ ಮತ್ತು ಕೊಲೆಯಾದ ಜಾಧವ್ ಇಬ್ಬರೂ ಮದುವೆಗೂ ಮುಂಚೆಯೇ ಪರಿಯಚ ಇತ್ತು. ಆದರೆ ಶೇಖ್ ಪತ್ನಿ ಜಾಧವ್‍ನೊಂದಿಗೆ ಫೇಸ್‍ಬುಕ್‍ನಲ್ಲಿ ಚಾಟ್ ಮಾಡುತ್ತಿದ್ದು, ಇಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ.

    ತನ್ನ ಪತ್ನಿ ಜಾಧವ್ ಜೊತೆ ಮಾತನಾಡುತ್ತಿದ್ದಾಳೆಂದು ತಿಳಿದ ನಂತರ ಆರೋಪಿ ಶೇಖ್ ಕೋಪಗೊಂಡಿದ್ದನು. ನಂತರ ಶೇಖ್ ಮತ್ತು ಬರಾಥೆ ಮಾತನಾಡಬೇಕು ಎಂದು ಜಾಧವ್‍ನನ್ನು ಔಂಧ್ ಆಸ್ಪತ್ರೆಯ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರೂ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಮೃತ ಜಾಧವ್ ಸಹೋದರ ಈ ಕುರಿತು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಆರೋಪಿಗಳು ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಈಗಾಗಲೇ ಬಂಧಿಸಲಾಗಿದೆ.