Tag: arrest

  • ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

    ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

    ಮುಂಬೈ: ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್‍ಐ)ಗೆ ಯುದ್ಧ ವಿಮಾನಗಳ ವಿವರಗಳನ್ನು ಕದ್ದು ಕಳುಹಿಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನ ಉದ್ಯೋಗಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ.

    ಬಂಧಿತ ಹೆಚ್‍ಎಎಲ್ ಉದ್ಯೋಗಿಯನ್ನು 41 ವರ್ಷದ ದೀಪಕ್ ಶಿರ್ಸತ್ ಎಂದು ಗುರುತಿಸಲಾಗಿದೆ. ಈತ ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತನಿಂದ ಮೂರು ಮೊಬೈಲ್ ಫೋನುಗಳು ಮತ್ತು ಐದು ಸಿಮ್‍ಗಳು ಮತ್ತು ಎರಡು ಮೆಮೊರಿ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿಪಿ ವಿನಯ್ ರಾಥೋಡ್, ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್)ಯ ನಾಸಿಕ್ ಘಟಕವು, ಐಎಸ್‍ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಇಂದು ಬಂಧಿಸಿದೆ. ದೀಪಕ್ ಶಿರ್ಸತ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಭಾರತೀಯ ಯುದ್ಧ ವಿಮಾನ ಮತ್ತು ಅವುಗಳ ಉತ್ಪಾದನಾ ಘಟಕದ ಬಗ್ಗೆ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ)ಗೆ ವಾಟ್ಸಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಒದಗಿಸುತ್ತಿದ್ದ ಎಂದು ತಿಳಿಸಿದ್ದಾರೆ.

    ಈತ ಓಜರ್ ವಿಮಾನ ಘಟಕದಲ್ಲಿ ನಿಷೇಧಿತ ಜಾಗದಲ್ಲಿ ಓಡಾಡಿ ಅಲ್ಲಿನ ಫೋಟೋಗಳನ್ನು ತೆಗೆದು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಓಜರ್ ಘಟಕ ಮಿಗ್-21 ಎಫ್‍ಎಲ್ ವಿಮಾನ ಮತ್ತು ಕೆ-13 ಕ್ಷಿಪಣಿಗಳ ತಯಾರಿಕೆಗಾಗಿ 1964ರಲ್ಲಿ ಸ್ಥಾಪನೆಯಾಗಿತ್ತು. ಈ ವಿಭಾಗವು ಮಿಗ್-21 ಎಂ, ಮಿಗ್-21 ಬೈಸನ್ ಮಿಗ್-27 ಎಂ ಮತ್ತು ಅತ್ಯಾಧುನಿಕ ಸುಕೋಯ್-30 ಎಂಕೆಐ ಫೈಟರ್ ಜೆಟ್‍ಗಳ ರಿಪೇರಿ ಸಹ ಮಾಡುತ್ತಿದೆ.

  • ಸುಲಭವಾಗಿ ಹಣ ಸಂಪಾದಿಸಲು ಕಳ್ಳತನ – 43 ಲಕ್ಷ ಮೌಲ್ಯದ 108 ಬೈಕ್‍ಗಳು ವಶ

    ಸುಲಭವಾಗಿ ಹಣ ಸಂಪಾದಿಸಲು ಕಳ್ಳತನ – 43 ಲಕ್ಷ ಮೌಲ್ಯದ 108 ಬೈಕ್‍ಗಳು ವಶ

    – ಐಶಾರಾಮಿ ಜೀವನ ನಡೆಸ್ತಿದ್ದ ಆರೋಪಿಗಳು

    ಹೈದರಾಬಾದ್: ಆಂಧ್ರ ಪ್ರದೇಶದಾದ್ಯಂತ ಬರೋಬ್ಬರಿ 108 ಬೈಕ್‍ಗಳನ್ನು ಕಳ್ಳತನ ಮಾಡಿದ್ದ ಆರು ಮಂದಿ ಆರೋಪಿಗಳ ಗುಂಪನ್ನು ಪೂರ್ವ ಗೋದಾವರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮುಖ್ಯ ಆರೋಪಿಗಳನ್ನು ಕವಾಡಿ ನಾನಿ (25) ಮತ್ತು ಬಂಡಿ ಶಿವ (22) ಎಂದು ಗುರುತಿಸಲಾಗಿದೆ. ಇವರು ಬೈಕ್‍ಗಳನ್ನು ಕದ್ದು ಕಾಥೆಟಿ ಚಿನ್ನ, ದುರ್ಗ ಪ್ರಸಾಸ್, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಎಂಬವರಿಗೆ ಮಾರಾಟ ಮಾಡುತ್ತಿದ್ದರು. ಇವರು ಕದ್ದ ಬೈಕ್‍ಗಳನ್ನು ಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

    ಈವರೆಗೆ ಕದ್ದ 108 ಬೈಕ್‍ಗಳನ್ನು ಜಿಲ್ಲಾ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬೈಕ್‍ಗಳ ಮೌಲ್ಯ ಸುಮಾರು 43 ಲಕ್ಷ ರೂಪಾಯಿ. ಸುಮಾರು 108 ಬೈಕ್‍ಗಳನ್ನು ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯಿಂದ 34, ಪಶ್ಚಿಮ ಗೋದಾವರಿ 22, ವಿಶಾಖಪಟ್ಟಣಂ 43, ವಿಜಯವಾಡ 7 ಮತ್ತು ವಿಜಯನಗರಂದಿಂದ ಎರಡು ಬೈಕ್‍ಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಕವಾಡಿ ನಾನಿ ಮತ್ತು ಬಂಡಿ ಶಿವ ಸಹೋದರರಾಗಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಅಲಮುರು ಮಂಡಲ ನಿವಾಸಿಗಳು. ಇಬ್ಬರು ಆರೋಪಿಗಳು ನಕಲಿ ಕೀ ಅಥವಾ ಲಾಕ್‍ಗಳನ್ನು ಮುರಿದು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದರು. ನಂತರ ಈ ಬೈಕ್‍ಗಳನ್ನು ಇತರ ನಾಲ್ಕು ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು. ಸುಮಾರು 12,000 ರಿಂದ 15,000 ರೂ.ಗೆ ಮಾರಾಟ ಮಾಡುತ್ತಿದ್ದರು. ಬೈಕ್ ಖರೀದಿ ಮಾಡುತ್ತಿದ್ದವರು ಗ್ರಾಹಕರಿಗೆ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

    ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ನಾನಿಯನ್ನು ಈ ಹಿಂದೆ ಎರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಸೋಲಾಪುರ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಈತ 2016ರಲ್ಲಿ ಜೆಸಿಬಿ ಆಪರೇಟರ್ ಆಗಿ ಅಬುದಾಮಿಗೆ ತೆರಳಿದ್ದು 2018ರವರೆಗೂ ಅಲ್ಲಿಯೇ ಕೆಲಸ ಮಾಡುತ್ತಿದ್ದನು. ಅಲ್ಲಿಂದ ವಾಪಸ್ ಬಂದು ಸುಲಭವಾಗಿ ಹಣ ಸಂಪಾದಿಸಲು ಬೈಕ್ ಕಳ್ಳತನ ಮಾಡಲು ಶುರು ಮಾಡಿದ್ದನು. ಅಲ್ಲದೇ ಆರೋಪಿಗಳು ಬೈಕ್ ಕಳ್ಳತನದ ಮೂಲಕ ಐಶಾರಾಮಿ ಜೀವನವನ್ನು ನಡೆದುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಗುಂಪು ಸುಮಾರು ಎರಡು ವರ್ಷಗಳಿಂದ ಬೈಕ್ ಕಳ್ಳತನದಲ್ಲಿ ತೊಡಗಿದೆ. ಸದ್ಯಕ್ಕೆ ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಆಂಧ್ರ ಸಿಎಂ ಪರಿಹಾರ ನಿಧಿಯ 117 ಕೋಟಿಗೆ ಕನ್ನಕ್ಕೆ ಯತ್ನ- ದಕ್ಷಿಣ ಕನ್ನಡದ 6 ಮಂದಿ ಅರೆಸ್ಟ್

    ಆಂಧ್ರ ಸಿಎಂ ಪರಿಹಾರ ನಿಧಿಯ 117 ಕೋಟಿಗೆ ಕನ್ನಕ್ಕೆ ಯತ್ನ- ದಕ್ಷಿಣ ಕನ್ನಡದ 6 ಮಂದಿ ಅರೆಸ್ಟ್

    – ತುಳು ಚಿತ್ರದ ನಿರ್ಮಾಪಕ ಪ್ರಕರಣದ ಪ್ರಮುಖ ಆರೋಪಿ

    ಮಂಗಳೂರು: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಹಾರ ನಿಧಿಗೆ ಕನ್ನ ಹಾಕಲು ಪ್ರಯತ್ನ ಮಾಡಿದ ಕರಾವಳಿಯ ಆರು ಮಂದಿ ಖದೀಮರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

    ಆಂಧ್ರದ ಎಸಿಬಿ ಟೀಂ ಮಂಗಳೂರಿನಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆಂಧ್ರ ಸಿಎಂ ಪರಿಹಾರ ನಿಧಿಯಲ್ಲಿ ಒಟ್ಟು 117 ಕೋಟಿ ರೂಪಾಯಿ ವಂಚನೆಗೆ ಆರೋಪಿಗಳು ಪ್ಲಾನ್ ಮಾಡಿದ್ದು, ಚೆಕ್ ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರಳೀಕೃಷ್ಣ ರಾವ್ ನೀಡಿದ ದೂರಿನ ಆಧಾರದಲ್ಲಿ ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಜಾಲಾಡಿದ್ದಾರೆ.

    ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ಕೋಸ್ಟಲ್ ವುಡ್ ಚಿತ್ರ ನಿರ್ಮಾಪಕ ಉದಯ್ ಶೆಟ್ಟಿ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಹಾಗೂ ಕಬೀರ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳ ಪೈಕಿ ಮೂಡಬಿದಿರೆಯ ನಿವಾಸಿ ಯೋಗೀಶ್ ಆಚಾರ್ಯ, ಮೂಡಬಿದಿರೆಯ ಎಸ್‍ಬಿಐ ಬ್ಯಾಂಕಿಗೆ 52 ಕೋಟಿ ರೂಪಾಯಿ ಚೆಕ್ ನಗದೀಕರಣಕ್ಕೆ ಹಾಕಿದ್ದು, ನಗದು ವರ್ಗಾವಣೆ ಮಾಡುವಾಗ ಬ್ಯಾಂಕ್ ಮ್ಯಾನೇಜರ್ ರಿಲೀಫ್ ಫಂಡಿಗೆ ಕನ್ಫರ್ಮೇಶನ್ ಕೇಳಿದ್ದು, ಈ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

    ಕೂಡಲೇ ಮಂಗಳೂರಿಗೆ ಆಗಮಿಸಿದ ಆಂಧ್ರ ಎಸಿಬಿ ಟೀಂ ಯೋಗೀಶ್ ಆಚಾರ್ಯರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಆರೋಪಿಗಳ ಕುರಿತು ಮಾಹಿತಿ ಕೊಟ್ಟಿದ್ದು, ಪೊಲೀಸರು ಸದ್ಯ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಜಾಲ ಇತರ ರಾಜ್ಯಗಳಲ್ಲೂ ವ್ಯಾಪಕವಾಗಿ ಬೆಳೆದಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇವಲ ಆಂಧ್ರಪ್ರದೇಶ ಸಿಎಂ ಮಾತ್ರವಲ್ಲದೆ ಮಿಜೋರಾಂ, ಬಿಹಾರ, ಉತ್ತರ ಪ್ರದೇಶದ ಸಿಎಂ ಪರಿಹಾರ ನಿಧಿಗೂ ಕನ್ನ ಹಾಕಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

    ಈ ಆರೋಪಿಗಳು ಮುದ್ರಿತ ಚೆಕ್‍ನ್ನು ವಿಶಿಷ್ಟ ರಾಸಾಯನಿಕ ಬಳಸಿ ತಮಗೆ ಬೇಕಾದಂತೆ ಬರೆದುಕೊಳ್ಳುತ್ತಿದ್ದರು. ವಂಚನಾ ಜಾಲದಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬ ಕಿಂಗ್ ಪಿನ್ ಅಂತಾ ತಿಳಿದು ಬಂದಿದೆ. ಒಟ್ಟಿನಲ್ಲಿ ಅತೀ ದೊಡ್ಡ ವಂಚನಾ ಜಾಲವೊಂದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ಅವ್ಯವಹಾರಗಳು ಮುನ್ನಲೆಗೆ ಬರಲಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.

  • ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ

    ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ

    ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಬಂಧಿಸಿದೆ.

    ಬಂಧಿತರನ್ನು ತಮಿಳುನಾಡು ಮೂಲದ ಅಹಮ್ಮದ್ ಅಬ್ದುಲ್ ಖದೀರ್ (40) ಮತ್ತು ಬೆಂಗಳೂರಿನ ಇರ್ಫಾನ್ ನಾಸೀರ್ (33) ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರು ಮತ್ತು ಚೆನ್ನೈನಲ್ಲಿ ಐಸಿಸ್ ಉಗ್ರ ಸಂಘಟನೆಗಾಗಿ ದೇಣಿಗೆ ಮೂಲಕ ಹಣ ಸಂಗ್ರಹಿಸುತ್ತಿದ್ದರು ಮತ್ತು ಯುವಕರನ್ನು ಉಗ್ರ ಸಂಘಟನೆಗೆ ಸೇರಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದರು ಎಂದು ಎನ್‍ಐಎ ಹೇಳಿದೆ.

    ತಮಿಳುನಾಡಿನ ಚೆನ್ನೈ ಮೂಲದ ಅಹಮ್ಮದ್ ಅಬ್ದುಲ್ ಖದೀರ್ ಚೆನ್ನೈನಲ್ಲಿ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಇರ್ಫಾನ್ ನಾಸೀರ್ ಅಕ್ಕಿ ವ್ಯಾಪಾರಿಯಾಗಿದ್ದ. ಈ ಇಬ್ಬರನ್ನು ಬೆಂಗಳೂರಿನ ಗುರಪ್ಪನ ಪಾಳ್ಯ ಮತ್ತು ಫ್ರೇಜರ್ ಟೌನಿನಲ್ಲಿ ಪ್ರತ್ಯೇಕವಾಗಿ ಬಂಧಿಸಲಾಗಿದೆ. ಬಂಧಿತರಿಂದ ಬಾಂಬ್ ತಯಾರಿಸಲು ಬಳಸುತ್ತಿದ್ದ ಎಲೆಕ್ಟ್ರಿಕ್ ಸಾಧನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‍ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಈ ಇಬ್ಬರು ಸೇರಿಕೊಂಡು ಹಣವನ್ನು ಸಗ್ರಹಿಸಿವುದಲ್ಲದೇ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದನೆ ಮಾಡಿ ಅವರು ಸಿರಿಯಾಗೆ ಹೋಗಲು ಸಹಾಯ ಕೂಡ ಮಾಡುತ್ತಿದ್ದರು. ಇಂದು ಈ ಇಬ್ಬರನ್ನು ಅರೆಸ್ಟ್ ಮಾಡಿರುವ ಎನ್‍ಐಎ ಅಧಿಕಾರಿಗಳು ಬೆಂಗಳೂರಿನ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ವಿಚಾರಣೆ ನಡೆಸಲು ಕಸ್ಟಡಿಗೆ ತೆಗೆದುಕೊಂಡಿದೆ.

  • ಶೋಕಿಗಾಗಿ 70ರ ವೃದ್ಧೆ ಮನೆಗೆ ಕನ್ನ – ಇಬ್ಬರ ಬಂಧನ

    ಶೋಕಿಗಾಗಿ 70ರ ವೃದ್ಧೆ ಮನೆಗೆ ಕನ್ನ – ಇಬ್ಬರ ಬಂಧನ

    – 60 ಗ್ರಾಂ ಚಿನ್ನ, ಕಾರು ವಶ

    ಚಾಮರಾಜನಗರ: ಶೋಕಿಗಾಗಿ ವೃದ್ಧೆಯ ಮನೆಗೆ ಕನ್ನ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದ ಯುವಕರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮನು (21), ಕಿರಣ್ (20) ಬಂಧಿತ ಆರೋಪಿಗಳು. ಗುಂಡ್ಲುಪೇಟೆಯ ನಾಯಕರ ಬೀದಿಯಲ್ಲಿ ವಾಸವಿದ್ದ ಬಸಮ್ಮ (70) ವೃದ್ಧೆಯ ಮನೆಗೆ ಕನ್ನ ಹಾಕಿ ಬೀರುವಿನ್ನಲ್ಲಿದ್ದ ಓಲೆ, ಕಾಸು, ಚಿನ್ನದ ಉಂಗುರ ಸೇರಿದಂತೆ 60 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರು.

    ಅಕ್ಟೋಬರ್ 6ರಂದು ವೃದ್ಧೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿ 60 ಗ್ರಾಂ ಚಿನ್ನಾಭರಣ, ಕಾರನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ರೌಡಿಶೀಟರ್ ಕೊಲೆ ಪ್ರಕರಣ – 6 ಮಂದಿ ಆರೋಪಿಗಳ ಬಂಧನ

    ರೌಡಿಶೀಟರ್ ಕೊಲೆ ಪ್ರಕರಣ – 6 ಮಂದಿ ಆರೋಪಿಗಳ ಬಂಧನ

    ಶಿವಮೊಗ್ಗ: ರೌಡಿಶೀಟರ್ ಶಾರೂಖ್ ಖಾನ್‍ನನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಗಳನ್ನು ಹೊಸಮನೆಯ ಹನುಮಂತನಗರದ ನಿವಾಸಿ ರಮೇಶ್ (44), ವೆಂಕಟರಾಮ (35), ಚಂದ್ರ (37) ಹಾಗೂ ಸತ್ಯಸಾಯಿನಗರದ ಮಾರಿಯಮ್ಮ ಬೀದಿಯ ನಿವಾಸಿಗಳಾದ ಕಾರ್ತಿಕ್ (24) ಮಧುಸೂಧನ್ (28) ಹಾಗೂ ಕೆಳವಿ ರಮೇಶ್ (37) ಎಂದು ಗುರುತಿಸಲಾಗಿದೆ.

    ಜಿಲ್ಲೆಯ ಭದ್ರಾವತಿ ಮಸೀದಿ ಬಳಿ ಇದೇ ಅಕ್ಟೋಬರ್ 1 ರಂದು ರೌಡಿ ಶೀಟರ್ ಶಾರೂಖ್ ಖಾನ್ ಕೊಲೆ ನಡೆದಿತ್ತು. ಶಾರೂಖ್ ಖಾನ್ ಸೆ.30 ರಂದು ರಾತ್ರಿ ಸುಮಾರು 11.30ಕ್ಕೆ ಮನೆಯಿಂದ ಬೈಕ್ ತೆಗೆದುಕೊಂಡು ಹೋಗಿದ್ದನು. ಆದರೆ ಮರುದಿನ ಹೊಸಮನೆಯ ನೂರಾನಿ ಮಸೀದಿ ಬಳಿ ಕೊಲೆಯಾಗಿದ್ದ. ಈ ಕುರಿತು ಆತನ ತಂದೆ ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಇದೀಗ ಹೊಸಮನೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ವಾಹನ ತಪಾಸಣೆ ವೇಳೆ ಪೊಲೀಸರಿಂದ 1.10 ಕೋಟಿ ಹಣ ವಶ

    ವಾಹನ ತಪಾಸಣೆ ವೇಳೆ ಪೊಲೀಸರಿಂದ 1.10 ಕೋಟಿ ಹಣ ವಶ

    – ಚುನಾವಣೆ ಘೋಷಣೆ ನಂತ್ರ 2 ಕೋಟಿಗೂ ಅಧಿಕ ಹಣ ವಶ

    ಪಾಟ್ನಾ: ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ ಇದುವರೆಗೂ 2 ಕೋಟಿಗೂ ಅಧಿಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಬಿಹಾರದ ದರ್ಬಂಗಾ ಜಿಲ್ಲೆಯ ಪೊಲೀಸರು ವಾಹನವನ್ನು ಪರಿಶೀಲಿಸುವಾಗ ಬರೋಬ್ಬರಿ 1.10 ಕೋಟಿ ರೂಪಾಯಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ – ಆರ್‌ಜೆಡಿ, ಬಿಜೆಪಿ ಸೀಟ್‌ ಹಂಚಿಕೆ ಬಹುತೇಕ ಪೂರ್ಣ

    ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೋಹಿತ್ ಭಂಡರ್‍ವಾಲ್ ಮತ್ತು ಸಂತೋಷ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಇಬ್ಬರು ಮಧುಬಾನಿ ನಿವಾಸಿಗಳಾಗಿದ್ದು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳು ಹಣವನ್ನು ಮಧುಬಾನಿಯಿಂದ ಸ್ಕಾರ್ಪಿಯೋ ವಾಹನದಲ್ಲಿ ತೆಗೆದುಕೊಂಡು ಸಮಸ್ತಿಪುರಕ್ಕೆ ತಲುಪಿಸಲು ಹೋಗುತ್ತಿದ್ದರು. ಆದರೆ ಪೊಲೀಸರು ವಿಶಾನ್ಪುರದಲ್ಲಿ ಪರಿಶೀಲನೆ ವೇಳೆ ಈ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ದರ್ಬಂಗಾ ಜಿಲ್ಲಾಧಿಕಾರಿ ಡಾ.ತ್ಯಾಗರಾಜನ್ ತಿಳಿಸಿದ್ದಾರೆ.

    ಮಂಗಳವಾರ ತಾನೇ ರಾಜ್ಯದ ಕಾಲೀ ಚೆಕ್ ಪೋಸ್ಟ್‌ ನಲ್ಲಿ ವಾಹನದಿಂದ 1.73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅದೇ ಚೆಕ್ ಪೋಸ್ಟ್ ನಲ್ಲಿ ಮತ್ತೊಂದು ವಾಹನದಿಂದ ಸುಮಾರು 450 ಗ್ರಾಂ ಚಿನ್ನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪಾಟ್ನಾದಲ್ಲಿ ಪೊಲೀಸರು ಆರ್‌ಜೆಡಿ ಮುಖಂಡರ ವಾಹನದಿಂದ 74 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಹೀಗಾಗಿ ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ 2 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

    ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10ಕ್ಕೆ ಪ್ರಕಟವಾಗಲಿದೆ. ಮೊದಲ ಹಂತದ ಮತದಾನಕ್ಕೆ ಗುರುವಾರದಿಂದ ನಾಮಪತ್ರ ಸಲ್ಲಿಕೆಯಾಗಲಿದೆ. 243ರ ಪೈಕಿ 71 ಕ್ಷೇತ್ರಗಳಿಗೆ ಅ.28 ರಂದು ಚುನಾವಣೆ ನಡೆಯಲಿದೆ.

  • ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    – ವೈದ್ಯೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ

    ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    ತ್ರಿಶೂರ್ ಮೂಲದ ದಂತವೈದ್ಯ ಡಾ.ಸೋನಾರನ್ನು ಆರೋಪಿ ಮಹೇಶ್ ಕೊಲೆ ಮಾಡಿದ್ದನು. ಸೋನಾ ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಕೊಲೆ ಮಾಡಿದ ನಂತರ ಆರೋಪಿ ಎರಡು ದಿನಗಳ ಕಾಲ ಪರಾರಿಯಾಗಿದ್ದನು. ಆದರೆ ಕೇರಳ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.

    “ನಾವು ಮಂಗಳವಾರ ಆರೋಪಿ ಮಹೇಶ್‍ನನ್ನು ಬಂಧಿಸಿದ್ದೇವೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಸದ್ಯಕ್ಕೆ ಪ್ರಾಥಮಿಕ ವಿಚಾರಣೆ ಮಾಡುತ್ತಿದ್ದೇವೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಹೇಶ್ ಮೃತ ಡಾ.ಸೋನಾ ಜೊತೆ ಎರಡು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದನು. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದನು. ಹೀಗಾಗಿ ಸೋನಾರ ದಂತ ಚಿಕಿತ್ಸಾಲಯದಲ್ಲಿ ನಿರ್ಮಾಣ ಕೆಲಸ ಮಾಡಿದ್ದನು. ಇದಕ್ಕಾಗಿ ಸುಮಾರು 7 ಲಕ್ಷ ಹಣ ಖರ್ಚಾಗಿತ್ತು. ಆದರೆ ಮಹೇಶ್ ಸೋನಾರಿಂದ 22 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಾನೆ. ಹೀಗಾಗಿ ಹಣಕಾಸಿನ ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲದೇ ಸೋನಾ ತನ್ನ ಕ್ಲಿನಿಕ್‍ನಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ:
    ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದರು. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದನು.

    ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು.

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದು, ಪರಾರಿಯಾಗಿದ್ದನು.

    ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಮನೆಗಳ್ಳತನ ಮಾಡ್ತಿದ್ದವರು ಅಂದರ್- 6 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಮನೆಗಳ್ಳತನ ಮಾಡ್ತಿದ್ದವರು ಅಂದರ್- 6 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಹುಬ್ಬಳ್ಳಿ: ಅವಳಿನಗರದ ವಿವಿಧೆಡೆ ಕಳ್ಳತನ ಮಾಡಿದ ಇಬ್ಬರನ್ನೂ ಹುಬ್ಬಳ್ಳಿಯ ನವನಗರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಹುಬ್ಬಳ್ಳಿಯ ವೀರಮಾರುತಿ ನಗರದ ಭೀಮಣ್ಣ ಕ್ವಾಟಿ ಮತ್ತು ನಾಗರಾಜ ಕ್ವಾಟಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6.32 ಲಕ್ಷ ಮೌಲ್ಯದ 158 ಗ್ರಾಂ ಬಂಗಾರ ಹಾಗೂ 3, 800 ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತರಿಬ್ಬರು ಭೈರಿದೇವರಕೊಪ್ಪದಲ್ಲಿ ನಡೆದ ಎರಡು ಮನೆ ಹಾಗೂ ನವನಗರದ ಕೆಸಿಸಿ ಕಾಲೋನಿಯಲ್ಲಿ ಒಂದು ಮನೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಬ್ಬರನ್ನ ನವನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.

    ಬಂಧಿತ ಆರೋಪಿಗಳನ್ನ ಹಿಡಿಯುವಲ್ಲಿ ನವನಗರ ಪೊಲೀಸರು ಯಶ್ವಸಿಯಾದ ಪರಿಣಾಮ ಪೊಲೀಸ್ ಆಯುಕ್ತರು ನವನಗರ ಠಾಣೆಯ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

  • ಮತ್ತು ಬರೋ ಔಷಧಿ ನೀಡಿ ರೇಪ್ – 3 ವರ್ಷದಿಂದ ವಿಚ್ಛೇದಿತೆ ಜೊತೆ ಪೇದೆ ಸೆಕ್ಸ್

    ಮತ್ತು ಬರೋ ಔಷಧಿ ನೀಡಿ ರೇಪ್ – 3 ವರ್ಷದಿಂದ ವಿಚ್ಛೇದಿತೆ ಜೊತೆ ಪೇದೆ ಸೆಕ್ಸ್

    – ಮದ್ವೆ ಆಗಿದ್ರೂ ದೈಹಿಕ ಸಂಬಂಧ ಮುಂದುವರಿಸಲು ಒತ್ತಾಯ

    ಮುಂಬೈ: ಮದುವೆಯಾದ ನಂತರವೂ ತನ್ನೊಂದಿಗೆ ದೈಹಿಕ ಸಂಪರ್ಕ ಮುಂದುವರಿಸುವಂತೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಕಾನ್ಸ್‌ಟೇಬಲ್ ವಿರುದ್ಧ ವಿಚ್ಛೇದಿತೆ 33 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇರೆಗೆ ಆರೋಪಿ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ನಾಗ್ಪುರ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ವಿಕ್ರಮ್ ಸಿಂಗ್ ಬನಾಫರ್ (30) ಎಂದು ಗುರುತಿಸಲಾಗಿದೆ. ಈತ ನಾಗ್ಪುರ ನಗರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು. ಸತತ ಮೂರು ವರ್ಷದಿಂದ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕಾನ್ಸ್‌ಟೇಬಲ್ ಮೇಲೆ ಸಂತ್ರಸ್ತೆ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ 2016ರಲ್ಲಿ ಮೊದಲ ಬಾರಿಗೆ ಆರೋಪಿಯನ್ನು ಭೇಟಿಯಾಗಿದ್ದರು. ನಂತರ 2017ರಲ್ಲಿ ಅವನು ಮನೀಶ್ ನಗರ ಪ್ರದೇಶದಲ್ಲಿದ್ದ ತನ್ನ ಸ್ನೇಹಿತನ ಮನೆಗೆ ಸಂತ್ರಸ್ತೆಯನ್ನು ಕರೆದಿದ್ದನು. ಅಲ್ಲಿ ಆಕೆಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದ ಆಹಾರವನ್ನು ನೀಡಿದ್ದಾನೆ. ಅದನ್ನು ತಿಂದ ನಂತರ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವೇಳೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆರೋಪಿ ಆ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಸುಮಾರು ಮೂರು ವರ್ಷಗಳ ಕಾಲ ನನ್ನೊಂದಿಗೆ ಸೆಕ್ಸ್ ಮಾಡಿದ್ದಾನೆ. ಒಂದು ವೇಳೆ ನಾನು ಆರೋಪಿ ಜೊತೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದರೆ ಆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಆರು ತಿಂಗಳ ಹಿಂದೆಯಷ್ಟೇ ಆರೋಪಿ ಇನ್ನೊಬ್ಬ ಮಹಿಳೆಯೊಂದಿಗೆ ಮದುವೆ ಮಾಡಿಕೊಂಡಿದ್ದನು. ಆದರೂ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವಂತೆ ಸಂತ್ರಸ್ತೆಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದನು. ಮದುವೆಯಾದ ನಂತರವೂ ಕಾನ್ಸ್‌ಟೇಬಲ್ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಹೀಗಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಆತನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ವಿಜಯ್ ತಿಳಿಸಿದ್ದಾರೆ.