Tag: arrest

  • ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕ ಕೊನೆಗೂ ಅರೆಸ್ಟ್

    ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕ ಕೊನೆಗೂ ಅರೆಸ್ಟ್

    – 10 ಲಕ್ಷ ವಂಚಿಸಿದ್ದ ಆರೋಪಿ ಸೆರೆ

    ಮೈಸೂರು: ಕಡಿಮೆ ಬೆಲೆಗೆ ಗೋಡಂಬಿ ಮಾರಾಟ ಮಾಡುವ ಆಮಿಷವೊಡ್ಡಿ 10 ಲಕ್ಷ ವಂಚಿಸಿದ್ದ ಆರೋಪಿಯನ್ನು ಮೈಸೂರಿನ ಉದಯಗಿರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತನನ್ನು ತಮಿಳುನಾಡಿನ ಪಳನಿಮಲೈ ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಉದಯಗಿರಿಯ ನಿವಾಸಿ ರೋಹನ್ ಖಾನ್ ಎಂಬವರಿಗೆ 10 ಲಕ್ಷ ವಂಚಿಸಿದ್ದ. ಇಂಪೋರ್ಟ್-ಎಕ್ಪೋರ್ಟ್ ವ್ಯವಹಾರ ಮಾಡುತ್ತಿರುವ ರೋಹನ್ ಖಾನ್ ಗೆ ನಾಲ್ಕು ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಆರ್‍ಟಿಜಿಎಸ್ ಮೂಲಕ ಆರೋಪಿ ಪಳನಿ ಮಲೈ ಹಾಗೂ ಪತ್ನಿ ರಾಧಿಕಾ ಪಳನಿ ಮಲೈ 10 ಲಕ್ಷ ರೂ. ಪಡೆದಿದ್ದರು.

    ಈ ವಂಚಕ ದಂಪತಿ ತಮಿಳುನಾಡಿನ ಸೇಲಂ ಜಿಲ್ಲೆಯ ಪನೃತ್ತಿ ಪಟ್ಟಣದಲ್ಲಿ ಎಸ್‍ಪಿ ಆರ್ ಎಂಬ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದರು. ಗೋಡಂಬಿಯನ್ನೂ ಕೊಡದೆ ಹಣವನ್ನೂ ಹಿಂದಿರುಗಿಸದೆ ಆರೋಪಿ ತಲೆಮರೆಸಿಕೊಂಡಿದ್ದ. ನಾಲ್ಕು ವರ್ಷಗಳ ಸತತ ಪ್ರಯತ್ನದ ನಂತರ ಉದಯಗಿರಿ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಳನಿ ಮಲೈ ಒಬ್ಬ ಮೋಸಗಾರ ಎಂದು ತಮಿಳುನಾಡಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲೇ ಪಳನಿ ಮಲೈನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ನೂರಕ್ಕೆ ನೂರರಷ್ಟು ರಾಜಕೀಯ- ಪಬ್ಲಿಕ್ ಟಿವಿಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯೆ

    ನೂರಕ್ಕೆ ನೂರರಷ್ಟು ರಾಜಕೀಯ- ಪಬ್ಲಿಕ್ ಟಿವಿಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯೆ

    ಧಾರವಾಡ: ಬಿಜೆಪಿ ಮುಖಂಡ ಯೋಗೇಶ್ವರ್ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಇದು ಶೇ.100 ರಷ್ಟು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

    ಸತತ 9 ಗಂಟೆಗಳ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿದ ಬಳಿಕ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಹಾಗೂ ಕೊರೊನಾ ಪರೀಕ್ಷೆ ನಡೆಸಲು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವಿಚಾರಣೆಯ ಕುರಿತು ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ ಅವರು, ಈ ಕೇಸಿನಲ್ಲಿ ನೂರಕ್ಕೆ ನೂರರಷ್ಟು ರಾಜಕೀಯ ಇದೆ. ಇದರಲ್ಲಿ ಹೇಳೋದು ಏನಿದೆ ಎಂದು ಪ್ರಶ್ನೆ ಮಾಡಿ ಮುಂದೆ ಸಾಗಿದರು.

    ವೈದ್ಯಕೀಯ ಪರೀಕ್ಷೆಯ ಬಳಿಕ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. ಸದ್ಯ ಅವರನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿಗೆ ಅವರನ್ನು ಕರೆತರಲಾಗಿದೆ. ಇತ್ತ ವಿನಯ್ ಕುಲಕರ್ಣಿ ಅವರು ಬಂಧನ ವಿರೋಧಿಸಿ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಇತ್ತ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದ ಸಂದರ್ಭದಲ್ಲೂ ಆಸ್ಪತ್ರೆ ಬಳಿ ಜಮಾಯಿಸಿದ್ದ ಅವರ ಅಭಿಮಾನಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಇತ್ತ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಸಿಬಿಐ ಅಧಿಕಾರಿಗಳನ್ನು ಬಿಜೆಪಿ ಸರ್ಕಾರ ಅಸ್ತ್ರವಾಗಿ ಬಳಕೆ ಮಾಡುತ್ತಿದೆ. ಇದು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ.

  • ಕೊನೆಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್

    ಕೊನೆಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್

    ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.

    ಬಿಜೆಪಿ ಮುಖಂಡ ಯೋಗೇಶ್ವರ್ ಕೊಲೆ ಪ್ರಕರಣದಲ್ಲಿ ಬೆಳಗ್ಗೆಯಿಂದ ಸತತ 9 ಗಂಟೆಗಳ ಕಾಲ ವಿನಯ್ ಅವರನ್ನು ವಶಕ್ಕೆ ಪಡೆದು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಸದ್ಯ ಅವರನ್ನು ಬಂಧಿಸಿ ಕೊರೊನಾ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಧಾರವಾಡದ ಬರಾಕೊಟ್ರಿಯಲ್ಲಿರುವ ಕುಲಕರ್ಣಿ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ 6 ಮಂದಿಯ ತಂಡ ಕುಲಕರ್ಣಿಯನ್ನು ವಶಕ್ಕೆ ಪಡೆದು, ಧಾರವಾಡ ಉಪನಗರ ಠಾಣೆಗೆ ಕರೆದೊಯ್ದಿದಿತ್ತು. ವಿನಯ್ ಕುಲಕರ್ಣಿ ತನ್ನದೇ ವಾಹನದಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರು.

    2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

    ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಯೋಗಿಶ್ ಗೌಡನ ಸಹೋದರನ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಇತ್ತ ವಿನಯ್ ಕುಲಕರ್ಣಿಯವರ ಹೆಸರನ್ನು ಕೈ ಬಿಡಲು ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ ಗೌಡ ತಾಯಿ ಆರೋಪಿಸಿದ್ದರು.

    ರಾಜ್ಯ ಸರ್ಕಾರ 2019 ಸೆಪ್ಟೆಂಬರ್ 9ರಂದು ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿರುವ ಸಿಬಿಐ ಪ್ರಕರಣದ ಆರೋಪಿಗಳಾದ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

  • ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರ ಬಂಧನ

    ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರ ಬಂಧನ

    ಶಿವಮೊಗ್ಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಜಯನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಿಲಕ್ ನಗರದ ಮೊಬೈಲ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.21 ಲಕ್ಷ ರೂ. ನಗದು ಹಾಗೂ 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಅಂಗಡಿ ಮಾಲೀಕ ಅಜೇಯ (35), ಕಿರಣ್ (32), ಹಾಗೂ ಸಂದೀಪ್ (28) ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

  • ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕ್ತಿದ್ದ 7 ಮಂದಿಯ ಬಂಧನ

    ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕ್ತಿದ್ದ 7 ಮಂದಿಯ ಬಂಧನ

    ಚಾಮರಾಜನಗರ: ಕಾಡು ಪ್ರಾಣಿ ಬೇಟೆಗೆ ಹೊಂಚು ಹಾಕುತ್ತಿದ್ದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಜಾನ್ ಜೋನಸ್, ಜಾನ್ ಬೋಸ್ಕೊ, ಅಂಥೋಣಿ ಆನಂದ್ ಕುಮಾರ್, ಸೈಮನ್ ಸ್ಟಾಲಿನ್, ಭಾಗ್ಯರಾಜ್, ಅಂತೋಣಿ ರಾಜ್ ಹಾಗೂ ಸೇಸುರಾಜ್ ಎಂದು ಗುರುತಿಸಲಾಗಿದ್ದು, ಇವರನ್ನು ಚಾಮರಾಜನಗರ ಜಿಲ್ಕೆಯ ಕೊಳ್ಳೇಗಾಲ ತಾಲೂಕಿನ ಜಾಗೇರಿಯ ಕರಚಿಕಟ್ವೆ ಬಳಿ ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 7 ನಾಡ ಬಂದೂಕು ಹಾಗೂ ಸಿಡಿಮದ್ದುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಈ ಭರ್ಜರಿ ಕಾರ್ಯಾಚರಣೆ ಮಾಡಿ ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದೆ.

  • ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಬಂಧನ!

    ಬೆಂಗಳೂರು: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಾರ್ಥಕ್ ಆರ್ಯ ಬಂಧಿತ ಟೆಕ್ಕಿಯಾಗಿದ್ದು, ಫಾರಿನರ್ಸ್ ಪೋಸ್ಟ್ ಮೂಲಕ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇತ್ತೀಚಿಗೆ ಬೆಲ್ಜಿಯಂನಿಂದ ನಗರಕ್ಕೆ ಬಂದ ಕೊರಿಯರ್ ಮೂಲಕ ಆರೋಪಿ ಡ್ರಗ್ಸ್ ತರಿಸಿದ್ದ. ಅನುಮಾನದಿಂದ ಪೊಲೀಸರು ಈ ಕೊರಿಯರ್ ಯನ್ನು ಟ್ರ್ಯಾಕ್ ಮಾಡಿ ನಗರದ ಚಾಮರಾಜಪೇಟೆ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ನಡೆಸಿದ್ದರು.

    ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್ ನಲ್ಲಿ ಸಿಸಿಬಿ ಪರಿಶೀಲನೆ ನಡೆಸಿದ ಬಳಿಕ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್‍ಎಸ್‍ಆರ್ ಲೇಔಟ್‍ನ ಟೆಕ್ಕಿ ಮನೆಯಲ್ಲಿಪೊಲೀಸರು ಶೋಧ ನಡೆಸಿದ್ದರು. ಸಿಸಿಬಿ ವಿಶೇಷ ವಿಚಾರಣಾ ದಳದಿಂದ ಟೆಕ್ಕಿ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಟೆಕ್ಕಿ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

    ಸಿಸಿಬಿ ಪೊಲೀಸರ ದಾಳಿಯ ಸಂದರ್ಭದಲ್ಲಿ 4.99 ಗ್ರಾಂ ಎಲ್‍ಎಸ್‍ಡಿ, ಎಂಎಚ್ ಸೀರಿಸ್ ಪಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿ ಸಾರ್ಥಕ್ ಆರ್ಯ ನಗರದ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

  • ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ

    ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ

    – ಲೈವ್ ಮಾಡಿ ಹಣಗಳಿಸುತ್ತಿದ್ದ ಆರೋಪಿ
    – 2ನೇ ಪತ್ನಿಯಿಂದ ಪೊಲೀಸರಿಗೆ ದೂರು

    ಭೋಪಾಲ್: ಹಣದ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪತ್ನಿಯರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಲೈವ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಪಟ್ಟಣದಲ್ಲಿ ನಡೆದಿದೆ.

    24 ವರ್ಷದ ಚರಣ್‍ಜೀತ್ ಬಂಧಿತ ಆರೋಪಿ. ವಿವಿಧ ಆ್ಯಪ್‍ಗಳ ಮೂಲಕ ಲೈವ್ ಶೋ ನಡೆಸುತ್ತಿದ್ದ. ಅಲ್ಲದೇ ಜನರಿಂದ ಲೈವ್ ವೀಕ್ಷಣೆ ಮಾಡಲು 100 ರೂ. ನಿಂದ 1 ಸಾವಿರದ ವರೆಗೂ ದರ ನಿಗದಿ ಮಾಡಿದ್ದ. ಆ ಮೂಲಕ ಲಕ್ಷ ಲಕ್ಷ ರೂ. ಹಣ ಗಳಿಸುವ ಉದ್ದೇಶವನ್ನು ಆರೋಪಿ ಹೊಂದಿದ್ದ ಎಂಬ ಮಾಹಿತಿ ಲಭಿಸಿದೆ.

    ಆರೋಪಿಯ 2ನೇ ಪತ್ನಿ ಅಕ್ಟೋಬರ್ 21ರಂದು ನೀಡಿದ ದೂರಿನ ಮೇರೆಗೆ ಶನಿವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಕ್ಷಕರಿಗೆ ಖಾಸಗಿ ಕ್ಷಣಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸುವ ಮೂಲಕ ಲೈಂಗಿಕ ಹಿಂಸೆ ಹಾಗೂ ಬೆದರಿಕೆ, ಅತ್ಯಾಚಾರ ಮತ್ತು ಗೌಪ್ಯತೆಯ ಉಲ್ಲಂಘನೆ ಆರೋಪಗಳನ್ನು ಬಂಧಿತ ಎದುರಿಸುತ್ತಿದ್ದಾನೆ.

    10ನೇ ತರಗತಿ ವರೆಗೂ ಶಿಕ್ಷಣ ಪಡೆದಿರುವ ಆರೋಪಿ ಸೈಬರ್ ವರ್ಲ್ಡ್ ಮತ್ತು ಟೆಕ್ ಮಾಹಿತಿಯನ್ನು ಹೊಂದಿದ್ದು, ಕೆಲ ಡೇಟಿಂಗ್ ಆ್ಯಪ್‍ಗಳಲ್ಲಿಯೂ ಈತ ಸಕ್ರಿಯನಾಗಿದ್ದ. ಅಲ್ಲದೇ ಅಂತಹ ಆ್ಯಪ್‍ಗಳಿಂದ ಗಿಫ್ಟ್ ಪಡೆಯವುದು ಹೇಗೆ ಎಂಬ ಬಗ್ಗೆಯೂ ಮಾಹಿತಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಆ್ಯಪ್‍ಗಳಲ್ಲಿ ಡಿಪಿ ಸೆಟ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ತಕ್ಷಣ ವೀಕ್ಷಕರ ಮೊಬೈಲ್‍ಗೆ ಪ್ರತ್ಯೇಕ ಸಂದೇಶ ರವಾನೆಯಾಗುತ್ತಿತ್ತು. ಅಲ್ಲಿ 100 ರೂ. ಗಳಿಗೆ ಡೆಮೋ ನೋಡಬಹುದಿತ್ತು. ಬಳಿಕ ಲೈವ್ ನೋಡಲು 500 ರಿಂದ ಒಂದು ಸಾವಿರ ರೂ.ಗಳ ವರೆಗೂ ಪಾವತಿ ಮಾಡಬೇಕಿತ್ತು. ಮುಖ ಕಾಣಿಸದೆ ಹಾಗೂ ಕಾಣಿಸುವಂತೆ ವೀಡಿಯೋ ನೋಡಲು ಅವಕಾಶವಿತ್ತು. ಇದಕ್ಕೆ ಪ್ರತ್ಯೇಕ ಹಣ ಗಳಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

    ಇದುವರೆಗೂ ಆರೋಪಿ 6 ಲಕ್ಷ ರೂ. ವರೆಗೂ ಹಣ ವರ್ಗಾವಣೆ ಪಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿ ಪ್ರತಿ ದಿನ 3 ರಿಂದ 4 ಸಾವಿರ ರೂ. ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆ್ಯಪ್‍ನಲ್ಲಿ ಆತನಿಗೆ ಹಣ ಪಾವತಿ ಮಾಡಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ವಿದಿಶಾ ಜಿಲ್ಲೆಯೂ ಭೋಪಾಲ್‍ನಿಂದ ಸುಮಾರು 50 ಕಿಮೀ ದೂರದಲ್ಲಿದ್ದು, ಮೂಲತಃ ಕೃಷಿ ಮಾಡುವ ಜನರೇ ಹೆಚ್ಚಾಗಿದ್ದಾರೆ. ಆರೋಪಿಯ ಮೊದಲ ಪತ್ನಿ ಬೆಂಗಳೂರು ಮೂಲದವರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 2ನೇ ಪತ್ನಿ ಉತ್ತರ ಪ್ರದೇಶದ ನಿವಾಸಿದ್ದು, ಆಕೆಗೆ ತಾನು ಅಪಾರ ದೈವ ಭಕ್ತ ಎಂದು ಹೇಳಿ ಮೋಸ ಮಾಡಿ ಮದುವೆಯಾಗಿದ್ದ. ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಿದ್ರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಪತಿಯ ಕೃತ್ಯದಿಂದ ಬೇಸತ್ತ ಮಹಿಳೆ ಅಕ್ಟೋಬರ್ 21ರಂದು ವಿಧಿಶಾ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಳು. ಆದ್ರೆ ಈ ಮೊದಲೇ ಆಗಿರುವ ಮದುವೆ ವಿಷಯ ಹೇಳಿರಲಿಲ್ಲ. ಮದುವೆ ಬಳಿಕ ತನ್ನ ಕೆಲ ಖಾಸಗಿ ವೀಡಿಯೋ ಸೆರೆ ಹಿಡಿದ ಚರಣ್ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಫೋಟೋ ಮತ್ತು ವೀಡಿಯೋಗಳನ್ನ ತೋರಿಸಿ ಆ್ಯಪ್ ನಲ್ಲಿ ಲೈಂಗಿಕ ಕ್ರಿಯೆ ನೀಡುವಂತೆ ತನಗೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಆರೋಪಿಯ ಕೃತ್ಯದ ಬಗ್ಗೆ ಮೊದಲ ಪತ್ನಿ ಇದುವರೆಗೂ ಪೊಲೀಸರಿಗೆ ಯಾವುದೇ ದೂರು ನೀಡಲ್ಲ. ಆಕೆಯನ್ನು ಆರೋಪಿ ಮನವೊಲಿಸಿ ಮುಂದಿನ ಭವಿಷ್ಯದಲ್ಲಿ ಐಶಾರಾಮಿ ಜೀವನದ ಆಸೆ ತೋರಿಸಿದ್ದ ಎಂದು ವಿಎಸ್‍ಪಿ ವಿಕಾಸ್ ಪಾಂಡೆ ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿ ತನ್ನ ಕೃತ್ಯದ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಆತನ ಮೊಬೈಲ್, ಬ್ಯಾಕ್ ವಿವರ ಸೇರಿದಂತೆ 12 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮಫ್ತಿಯಲ್ಲಿ ಎನ್‍ಸಿಬಿ ದಾಳಿ – ಡ್ರಗ್ಸ್ ಖರೀದಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ

    ಮಫ್ತಿಯಲ್ಲಿ ಎನ್‍ಸಿಬಿ ದಾಳಿ – ಡ್ರಗ್ಸ್ ಖರೀದಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ

    ಮುಂಬೈ: ಡ್ರಗ್ಸ್ ಖರೀದಿಸುವಾಗ ಬಾಲಿವುಡ್ ಕಿರುತೆರೆ ನಟಿಯೊಬ್ಬಳು ರೆಡ್‍ಹ್ಯಾಡ್ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನು ಎನ್‍ಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಇಡೀ ಭಾರತದ ಚಿತ್ರರಂಗಕ್ಕೆ ಡ್ರಗ್ ಕಳಂಕ ಅಂಟಿಕೊಂಡಿದೆ. ಈಗಾಗಲೇ ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಡ್ರಗ್ ವಿಚಾರದಲ್ಲಿ ಆರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೊತೆಗೆ ಸ್ಯಾಂಡಲ್‍ವುಡ್‍ನಲ್ಲಿ ನಟಿಮಣಿಯರಾದ ರಾಗಿಣಿ ಮತ್ತು ಸಂಜಾನ ಗಲ್ರಾನಿ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ.

    ಈಗ ಬಾಲಿವುಡ್‍ನಲ್ಲಿ ಸವ್ಧಾನ್ ಇಂಡಿಯಾ ಮತ್ತು ದೇವೋ ಕೆ ದೇವ್ ಮಹಾದೇವ್ ನಂತಹ ಟಿವಿ ಧಾರಾವಾಹಿಗಳಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸಿದ್ದ ನಟಿ ಪ್ರೀತಿಕಾ ಚೌಹಾನ್ ಅವರನ್ನು ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುಂಬೈನ ಮೆರ್ಸೋವಾ ಏರಿಯಾದಲ್ಲಿ ಎನ್‍ಸಿಬಿ ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯಚರಣೆ ಮಾಡುತ್ತಿದ್ದರು. ಈ ವೇಳೆ ಡ್ರಗ್ ಖರೀದಿಗೆ ಬಂದ ಪ್ರೀತಿಕಾ ಚೌಹಾನ್ ಅವರನ್ನು ಅಧಿಕಾರಿಗಳು ಸಾಕ್ಷಿ ಸಮೇತ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ಪ್ರೀತಿಕಾ ಚೌಹಾನ್ ಡ್ರಗ್ಸ್ ಖರೀದಿಗೆ ಬಂದಾಗ ಬಂಧಿಸಲಾಗಿದೆ. ಈ ನಟಿಮಣಿಯ ಜೊತೆ ಆಕೆಗೆ ಡ್ರಗ್ಸ್ ನೀಡಲು ಬಂದ ಮತ್ತು ತೆಗೆದುಕೊಳ್ಳಬಂದ ಎಲ್ಲರನ್ನು ಸೇರಿ ಒಟ್ಟು ಐದು ಜನರನ್ನು ಎನ್‍ಸಿಬಿ ಬಂಧಿಸಿದೆ. ಪ್ರೀತಿಕಾ ಚೌಹಾನ್ ಬಂಧನದ ನಂತರ ಅವರನ್ನು ಮುಂಬೈನ ಕಿಲಾ ಕೋರ್ಟಿಗೆ ಹಾಜರು ಪಡಿಸಲಾಗಿದೆ. ಈಗಾಗಲೇ ಬಾಲಿವುಡ್‍ನಲ್ಲಿ ಡ್ರಗ್ ಕೇಸ್ ಬಹಳ ಸದ್ದು ಮಾಡುತ್ತಿದೆ. ಇದರ ನಡುವೆಯ ಪ್ರೀತಿಕಾ ಚೌಹಾನ್ ಸಿಕ್ಕಿಬಿದ್ದಿದ್ದಾರೆ.

    ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್‍ನಲ್ಲಿ ಡ್ರಗ್ಸ್ ಕೇಸ್ ಬಹಳ ಸದ್ದು ಮಾಡಿತ್ತು. ವಾಟ್ಸಪ್ ಚಾಟಿನಲ್ಲಿ ಡ್ರಗ್ಸ್ ವಿಚಾರವಾಗಿ ಮೆಸೇಜ್ ಮಾಡಿದ್ದ ಕಾರಣ ಸುಶಾಂತ್ ಪ್ರೇಯಸಿ ರಿಯಾ 28 ದಿನಗಳ ಕಾಲ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಅವರನ್ನು ಎನ್‍ಸಿಬಿ ವಿಚಾರಣೆ ಮಾಡಿತ್ತು.

    ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೊವಿಕ್ ಚಕ್ರವರ್ತಿ, ಸುಶಾಂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಉದ್ಯೋಗಿ ದೀಪೇಶ್ ಸಾವಂತ್ ಅವರನ್ನು ಎನ್‍ಸಿಬಿ ಬಂಧಿಸಿದೆ. ರಿಯಾ ಮತ್ತು ದೀಪೇಶ್ ಅವರನ್ನು ಈ ತಿಂಗಳ ಆರಂಭದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ರಿಯಾ ಮುಂಬೈನ ಬೈಕುಲ್ಲಾ ಜೈಲಿನಲ್ಲಿ 28 ದಿನಗಳನ್ನು ಕಳೆದಿದ್ದರು.

  • ಹಾಡಹಗಲೇ ಬೀಗ ಮುರಿದು ಮನೆಗಳ್ಳತನ ಮಾಡುತ್ತಿದ್ದ ಟೆರರ್ ಲೇಡಿ ಅರೆಸ್ಟ್

    ಹಾಡಹಗಲೇ ಬೀಗ ಮುರಿದು ಮನೆಗಳ್ಳತನ ಮಾಡುತ್ತಿದ್ದ ಟೆರರ್ ಲೇಡಿ ಅರೆಸ್ಟ್

    – ಪ್ಲಾಸ್ಟಿಕ್ ಆಯುವ ವೇಷದಲ್ಲಿ ಓಡಾಟ

    ಹಾವೇರಿ: ಹಾಡಹಗಲೇ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹಾವೇರಿ ನಗರಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿ ಮಹಿಳೆಯನ್ನು ಮೂಲತಃ ಕಲಬುರಗಿ ಜಿಲ್ಲೆಯ ಬಾಪುನಗರದ ಜಯಶ್ರೀ ಕನ್ವರ್ ಉಪಾದ್ಯ (30) ಎಂದು ಗುರುತಿಸಲಾಗಿದೆ. ಹಾವೇರಿ ನಗರದ ಅಶ್ವಿನಿ ನಗರ, ಶಿವಾಜಿ ನಗರ ಸೇರಿದಂತೆ ನಗರದ ನಾಲ್ಕು ಮನೆಗಳನ್ನು ಈಕೆ ಕಳ್ಳತನ ಮಾಡಿದ್ದಾಳೆ. ಬಂಧಿತ ಆರೋಪಿಯಿಂದ 3,43,500 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ.

    ಹಾಡಹಗಲೇ ಈ ಮಹಿಳೆ ಪ್ಲಾಸ್ಟಿಕ್ ಆಯುವ ವೇಷದಲ್ಲಿ ಓಡಾಡಿ, ಕಬ್ಬಿಣದ ರಾಡು ಉಪಯೋಗಿಸಿ ಐದೇ ಐದು ನಿಮಿಷದಲ್ಲಿ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು ಎನ್ನಲಾಗಿದೆ. ಹಾವೇರಿ ನಗರಠಾಣೆಯ ಸಿಪಿಐ ಪ್ರಭಾವತಿ ಶೇತಸನದಿ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿ ಈ ಖತರ್ನಾಕ್ ಲೇಡಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಆಸ್ತಿಗಾಗಿ ಸಂಜನಾ, ರಾಗಿಣಿ ಜಾಮೀನಿಗಾಗಿ ಬೆದರಿಕೆ ಪತ್ರ – ಇಬ್ಬರ ಬಂಧನ

    ಆಸ್ತಿಗಾಗಿ ಸಂಜನಾ, ರಾಗಿಣಿ ಜಾಮೀನಿಗಾಗಿ ಬೆದರಿಕೆ ಪತ್ರ – ಇಬ್ಬರ ಬಂಧನ

    ತುಮಕೂರು: ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟಿನ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರರಕಣದಲ್ಲಿ ಟ್ವಿಸ್ಟ್ ಲಭಿಸಿದ್ದು, ಕೌಟುಂಬಿಕ ಕಲಹದ ದ್ವೇಷದ ಕಾರಣದಿಂದ ಬಾಂಬ್ ಬೆದರಿಕೆ ಹಾಕಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ ಎಂಬವರನ್ನು ಬಂಧಿಸಲಾಗಿದೆ. ಕೌಟುಂಬ ಕಲಹದ ದ್ವೇಷ ಕಾರಣದಿಂದ ರಾಜಶೇಖರ್ ಪತ್ರವನ್ನು ಕಳುಹಿಸಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭಿಸಿದೆ.

    ಕೌಟುಂಬಿಕ ಕಲಹ: ಸದ್ಯ ಬಂಧನವಾಗಿರುವ ರಾಜಶೇಖರ್, ರಮೇಶ್ ಎಂಬಾತನ ಮೇಲೆ ದ್ವೇಷ ಸಾಧಿಸಲು ಪತ್ರ ಕಳುಹಿಸಿದ್ದ ಎನ್ನಲಾಗಿದೆ. ಈ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಕೆಲ ಸಮಯದಿಂದ ರಾಜಶೇಖರ್ ಹಾಗೂ ರಮೇಶ್ ನಡುವೆ ಆಸ್ತಿ ವಿಚಾರವಾಗಿ ಜಗಳವಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರಮೇಶ್‍ನನ್ನು ಸಿಲುಕಿಸಲು ಪ್ಲಾನ್ ಮಾಡಿದ್ದ ರಾಜಶೇಖರ್, ವೇದಾಂತನ ಸಹಾಯ ಪಡೆದು ಪತ್ರ ಬರೆಯಿಸಿದ್ದ. ಆ ಬಳಿಕ ಚೇಳೂರು ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದ.

    ರಾಜಶೇಖರ್ ಮಾವನ ಮನೆಯ ಆಸ್ತಿಗಾಗಿ ಅವರ ಇಬ್ಬರು ಮಕ್ಕಳನ್ನು ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫಲಕಾರಿ ಆಗಿರಲಿಲ್ಲ. ಕಳೆದ 9 ತಿಂಗಳ ಹಿಂದೆ ರಮೇಶ್ ಅದೇ ಮನೆಯಲ್ಲಿ ಮದುವೆಯಾಗಿದ್ದ, ಪರಿಣಾಮ ಆತನ ವಿರುದ್ಧ ಪಿತೂರಿ ಮಾಡಿದ್ದ ರಾಜಶೇಖರ್ ಪತ್ರ ಬರೆದಿದ್ದ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

    ರಾಜಶೇಖರ್ ಆಸ್ತಿಗಾಗಿ ಕಳೆದ ವರ್ಷಗಳಿಂದ ನಾಟಕ ಮಾಡುತ್ತಿದ್ದ. ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ಈ ಹಿಂದೆ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿ ಮಾಡಿ ರಮೇಶ್ ಹಾಗೂ ಮಾವನ ಮೇಲೆ ಆರೋಪ ಮಾಡಿದ್ದ. ಛಾಪಾಕಾಗದಲ್ಲಿ ಒಂದೂವರೆ ಲಕ್ಷಕ್ಕೆ ಮಗಳನ್ನೇ ಮಾರಾಟ ಮಾಡಿದ್ದಾರೆ ಎಂದು ಸೃಷ್ಟಿಸಿ ಆರೋಪಿಸಿದ್ದ. ಈ ವೇಳೆ ನಕಲಿ ಛಾಪಾಕಾಗದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಚೇಳೂರು ಪೊಲೀಸರು ರಾಜಶೇಖರನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪೊಲೀಸರ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿದ ರಾಜಶೇಖರ್ ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದ ಎರಡು ಪ್ರಮುಖ ಪ್ರಕರಣಗಳ ಹೆಸರು ಬಳಿಸಿಕೊಂಡು ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಆ ಆರೋಪವನ್ನು ರಮೇಶ್ ಮೇಲೆ ಹೋಗುವಂತೆ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.