Tag: arrest

  • 26 ವಯಸ್ಸಿನ ಮಹಿಳೆ ಮೇಲೆ ಗ್ಯಾಂಗ್‍ರೇಪ್ – ಆರೋಪಿಗಳ ಬಂಧನ

    26 ವಯಸ್ಸಿನ ಮಹಿಳೆ ಮೇಲೆ ಗ್ಯಾಂಗ್‍ರೇಪ್ – ಆರೋಪಿಗಳ ಬಂಧನ

    ಧಾರವಾಡ: 26 ವರ್ಷದ ಮಹಿಳೆಯ ಮೇಲೆ ಇಬ್ಬರು ಸೇರಿ ಅತ್ಯಾಚಾವೆಸಗಿದ ಘಟನೆ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆರೋಪಿಗಳನ್ನು ಅದೇ ಗ್ರಾಮದ ಮಕ್ತುಂಸಾಬ್ ತಲ್ಲೂರ ಹಾಗೂ ಈರಪ್ಪ ಅರವಳ್ಳಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಾ ಜೀವನ ಮಾಡುತ್ತಿದ್ದರು. ಬುಧವಾರ ರಾತ್ರಿ ಮನೆಯಲ್ಲಿ ಬಟ್ಟೆ ಹೊಲಿಯುತ್ತಿದ್ದಾಗ ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿ ಬಲವಂತವಾಗಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಇಬ್ಬರೂ ಪರಾರಿಯಾಗಿದ್ದರು.

    ಈ ಸಂಬಂಧ ನೊಂದ ಮಹಿಳೆ ತಡರಾತ್ರಿಯಲ್ಲಿಯೇ ಸ್ಥಳೀಯ ಗರಗ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಗರಗ ಪೊಲೀಸರು ಜಿಲ್ಲಾ ಪೊಲೀಸ್ ಅಧಿಕಾರಿ ಸಂತೋಷ್ ಬಾಬು, ಡಿವೈಎಸ್‍ಪಿ ಬಿ.ಪಿ. ಚಂದ್ರಶೇಖರ್ ಮತ್ತು ಸಿಪಿಐ ಪ್ರಶಾಂತ ನಾಯ್ಕ್ ಅವರ ನಿರ್ದೇಶನದ ಮೇರೆಗೆ ಇಬ್ಬರು ಆರೋಪಿಗಳನ್ನು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.

  • ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    ಯುವತಿ ಮೇಲೆ ನಿರಂತರ ಅತ್ಯಾಚಾರ- ಸ್ವಯಂ ಘೋಷಿತ ಬಾಬಾ ಸಿಯಾ ರಾಮ್ ದಾಸ್ ಬಂಧನ

    – ರಾಜಕಾರಣಿಗಳಿಗೆ ಶಾಲಾ ಬಾಲಕಿಯರನ್ನ ಸಪ್ಲೈ ಮಾಡ್ತಿದ್ರು ಎಂದ ಸಂತ್ರಸ್ತೆ

    ಲಕ್ನೋ: ಯುವತಿಯ ಮೇಲೆ 8 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಸ್ವಯಂ ಘೋಷಿತ ದೇವ ಮಾನವ ಬಾಬಾ ಸಿಯಾ ರಾಮ್ ದಾಸ್‍ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬಾಬಾ ಸಿಯಾ ರಾಮ್ ದಾಸ್‍ರನ್ನ ಬಂಧಿಸಿದ್ದಾರೆ. ಸುಮಾರು 8 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

    ಯುವತಿಯನ್ನು ಆಕೆಯ ಸಂಬಂಧಿಕರು 50 ಸಾವಿರ ರೂ.ಗೆ ಬಾಬಾನ ಮಹಿಳಾ ಭಕ್ತೆಯೊಬ್ಬಳಿಗೆ ಮಾರಾಟ ಮಾಡಿದ್ದರು. ಮೊದಲಿಗೆ ಯುವತಿಯನ್ನ ಲಕ್ನೋಗೆ ಕರೆದುಕೊಂಡು ಹೋಗಿ ನಂತರ ಮಿಶ್ರಿಕ್‍ನಲ್ಲಿನ ಬಾಬಾ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಬಾಬಾ ಅತ್ಯಾಚಾರದ ಎಂಎಂಎಸ್ ಕೂಡ ಚಿತ್ರೀಕರಣ ಮಾಡಿದ್ದು, ಯಾರಿಗಾದರೂ ಈ ವಿಷಯ ತಿಳಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದರು. ಅಲ್ಲದೇ ಮಿಶ್ರಿಖ್‍ನಿಂದ ಆಗ್ರದಲ್ಲಿನ ಆಶ್ರಮಕ್ಕೆ ಕರೆದೊಯ್ದು ಸುಮಾರು 8 ತಿಂಗಳ ಕಾಲ ಅಲ್ಲೇ ನನ್ನನ್ನು ಇರಿಸಲಾಗಿತ್ತು. ಅಲ್ಲಿ ಇತರೆ ಭಕ್ತರು ನನ್ನ ಮೇಲೆ ಪ್ರತಿ ರಾತ್ರಿ ಅತ್ಯಾಚಾರ ನಡೆಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

    ನಂತರ ಯುವತಿ ಮಿಶ್ರಿಕ್‍ಗೆ ಹಿಂದಿರುಗಿದಾಗ ಬಾಬಾ ಮತ್ತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಯುವತಿ ಹೇಗೋ ಮಾಡಿ ಬಾಬಾನ ಫೋನ್ ಪಡೆದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಬಾಬಾ ಸಿಯಾ ರಾಮ್ ದಾಸ್ ತನ್ನ ಮಾಲೀಕತ್ವದ ಬಾಲಕಿಯರ ಶಾಲೆಯ ಮೂಲಕ ಸೆಕ್ಸ್ ದಂಧೆ ಕೂಡ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಲ್ಲದೆ ಬಾಲಕಿಯರನ್ನು ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಪ್ಲೈ ಮಾಡಲಾಗುತ್ತಿತ್ತು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.

    ಈ ಸಂಬಂಧ ಸಿತಾಪುರ್ ಪೊಲೀಸರು ಬಾಬಾ ವಿರುದ್ಧ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿಕೊಂಡಿದ್ದು, ಇತರೆ ಆರೋಪಗಳ ಮೇಲೂ ತನಿಖೆ ಮುಂದುವರೆಸಿದ್ದಾರೆ.

    ಆದರೆ ಸ್ವಯಂಘೋಷಿತ ಬಾಬಾ ಈ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದು, ಯುವತಿಯನ್ನ ಈ ಹಿಂದೆ ಭೇಟಿಯೇ ಮಾಡಿಲ್ಲ ಎಂದು ಹೇಳಿದ್ದಾರೆ.

  • ಕೊಲೆ ಮಾಡಿ ಕಳ್ಳತನ ನಡೆದಿದೆ ಎಂದು ಬಿಂಬಿಸಿದ್ದ ಆರೋಪಿಗಳು 8 ಗಂಟೆಯಲ್ಲಿ ಸಿಕ್ಕಿಬಿದ್ರು

    ಕೊಲೆ ಮಾಡಿ ಕಳ್ಳತನ ನಡೆದಿದೆ ಎಂದು ಬಿಂಬಿಸಿದ್ದ ಆರೋಪಿಗಳು 8 ಗಂಟೆಯಲ್ಲಿ ಸಿಕ್ಕಿಬಿದ್ರು

    ಮುಂಬೈ: ಕಳ್ಳತನದ ನೆಪದಲ್ಲಿ ನಾಲ್ವರು ಸ್ನೇಹಿತರು 17 ವರ್ಷದ ಯುವಕನ ಗಂಟಲು ಕೊಯ್ದು ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

    ಆರೋಪಿಗಳನ್ನು ಶಹಝಾದ್ ಅಲಿ (20), ಸದ್ದಾಂ ಶೌಕಾಟ್ ಅಲಿ (19), ಸದ್ದಾಂ ಶೈಖ್ (18) ಮತ್ತು ಸೂತ್ರಧಾರ ನಯಾಜ್ ಹಶ್ಮಿ (19) ಎಂದು ಗುರುತಿಸಲಾಗಿದೆ. ಕೃತ್ಯ ನಡೆದ 8 ಗಂಟೆಯೊಳಗೆ ಖೇರ್ವಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಹತ್ಯೆಯಾದ ದುರ್ದೈವಿ ಅಜಯ್ ಜೈಸ್ವಾಲ್ (17) ಎಂದು ಗುರುತಿಸಲಾಗಿದೆ. ಈ ಘಟನೆ ಸಾಂಟ್ ದಯಾನೇಶ್ವರ ನಗರದ ಕೊಳಗೇರಿಯಲ್ಲಿ ನಡೆದಿತ್ತು.

    ಅಜಯ್ ಪೋಷಕರು ಮನೆಯಿಂದ ಹೊರಗೆ ಹೋಗಿದ್ದು, ಮಂಗಳವಾರ ಬೆಳಗ್ಗೆ 7 ಗಂಟೆಗೆ ವಾಪಸ್ ಬಂದಿದ್ದಾರೆ. ಕೊಲೆ ಮಾಡಿ ಕಳ್ಳರು ಮನೆಯ ಮುಂಬಾಗಿಲನ್ನು ಲಾಕ್ ಮಾಡಿ ಪರಾರಿಯಾಗಿದ್ದರು. ಮನೆಗೆ ಬಂದ ಪೋಷಕರು ಬಾಗಿಲನ್ನು ಬಡಿದಿದ್ದು, ಯಾವುದೇ ಪ್ರತಿಕ್ರಿಯೇ ಬರದಿದ್ದಾಗ ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಅಜಯ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದನ್ನು ನೋಡಿ ಪೋಷಕರು ದೂರು ದಾಖಲಿಸಿದ್ದರು.

    ಪಕ್ಕದಲ್ಲಿಯೇ ವಾಸಿಸುತ್ತಿದ್ದ, ಅಜಯ್ ಸಹೋದರಿ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳನ್ನು ಬಂಧಿಸಲು ಅನಿಲ್ ಕುಂಬಾರೆ ಅವರ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಪಾಟೀಲ್ ಮಾಹಿತಿ ನೀಡಿದ್ದಾರೆ.

    ನಾಲ್ವರು ಆರೋಪಿಗಳು ಮೊದಲೇ ಪ್ಲಾನ್ ಮಾಡಿ ಅಜಯ್‍ನನ್ನು ಕೊಲ್ಲಲು ಆತನ ಮನೆಗೆ ಹೋಗಿದ್ದರು. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದೇ ಇರಲು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದೇವು ಎಂದು ವಿಚಾರಣೆ ವೇಳೆ ಆರೋಪಿಗಳು  ತಮ್ಮ  ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಹಶ್ಮಿ ಒಬ್ಬ ಡ್ರಗ್‍ಗೆ ಅಡಿಕ್ಟ್ ಆಗಿದ್ದ. ಅವನ ಜೊತೆಗೆ ಬಂದಿದ್ದ ಸ್ನೇಹಿತರಿಗೆ ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅವರು ಗಂಟಲು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅತ್ಯಾಚಾರ ಪ್ರಕರಣ: ಚೈನ್ನೈ ಎಕ್ಸ್ ಪ್ರೆಸ್ ಸಿನಿಮಾದ ನಿರ್ಮಾಪಕ ಕರೀಂ ಮೊರಾನಿ ಅರೆಸ್ಟ್

    ಅತ್ಯಾಚಾರ ಪ್ರಕರಣ: ಚೈನ್ನೈ ಎಕ್ಸ್ ಪ್ರೆಸ್ ಸಿನಿಮಾದ ನಿರ್ಮಾಪಕ ಕರೀಂ ಮೊರಾನಿ ಅರೆಸ್ಟ್

    ಹೈದರಾಬಾದ್: ಮದುವೆಯಾಗೋದಾಗಿ ನಂಬಿಸಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ನಿರ್ಮಾಪಕ ಕರೀಂ ಮೊರಾನಿಯನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣದ ಹಯಾತ್‍ನಗರ ಪೊಲೀಸರು ತಡ ರಾತ್ರಿ ಬಂಧಿಸಿದ್ದು, 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಈ ಕೃತ್ಯ ಎಸಗಲಾಗಿದೆ. ಇನ್ನೂ ಆರೋಪಿ ಕರೀಂ ಮೊರಾನಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬರುತ್ತಿದ್ದಂತೆ ಜಾಮೀನು ಕೋರಿ ಹೈದ್ರಾಬಾದ್ ನ್ಯಾಯಾಲಯದ ಮೊರೆ ಹೋಗಿದ್ದರು. ಜಾಮೀನು ಸಿಗದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ತೆಲಂಗಾಣ ಪೊಲೀಸರು ಆರೋಪಿ ಕರೀಂ ಮೊರಾನಿಯರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಯುವತಿಯನ್ನು ರಾಮೋಜಿ ಫಿಲ್ಮ್ ಸಿಟಿ ಪ್ರದೇಶಗಳಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಮಾಡಲಾಗಿದೆ. ನಗ್ನ ಚಿತ್ರ ಹಾಗೂ ವಿಡಿಯೋ ಗಳನ್ನು ತೆಗೆದು ಬ್ಲಾಕ್‍ಮೇಲ್ ಮಾಡುತ್ತಿದ್ದು, ನನ್ನ ನಗ್ನ ವಿಡಿಯೋಗಳನ್ನು ಕರೀಂ ಅವರ ಸ್ನೇಹಿತರಿಗೆ ಶೇರ್ ಮಾಡುವುದಾಗಿ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರುದಾರ ಯುವತಿ ದೆಹಲಿಯಲ್ಲಿ ಬಿಬಿಎ ಪದವಿ ಪಡೆದಿದ್ದು, ಮುಂಬೈನಲ್ಲಿ ರಂಗಭೂಮಿ ಕಲಾವಿದೆಯಾಗಿದ್ದರು. ಯುವತಿಗೆ ಕರೀಂನ ಮಗಳ ಮೂಲಕ ಪರಿಚಯವಾಗಿದ್ದಳು ಎಂದು ಹೇಳಲಾಗಿದೆ. ಮೊರಾನಿ ಬಾಲಿವುಡ್ ನ ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್, ದಿಲ್‍ವಾಲೆ, ಹ್ಯಾಪಿ ನ್ಯೂ ಇಯರ್ ಸೇರಿದಂತೆ ಹಿಟ್ ಚಿತ್ರಗಳಿಗೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

  • ಎಟಿಎಂ ಕಳ್ಳತನ ಮಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಕಳ್ಳ

    ಎಟಿಎಂ ಕಳ್ಳತನ ಮಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಕಳ್ಳ

    ಚಿತ್ರದುರ್ಗ: ಎಟಿಎಂ ಮಷೀನ್ ಒಡೆದು ಹಣ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಜಾಜೂರು ಗ್ರಾಮದ ಕೆನೆರಾ ಬ್ಯಾಂಕ್ ಪಕ್ಕದಲ್ಲೇ ಇದ್ದ ಕೆನೆರಾ ಎಟಿಎಂನಲ್ಲಿ ಹಣದ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಗ್ರಾಮದ ಹೂವಿನ ವ್ಯಾಪಾರಿ ನಂದೀಶ(26) ಎಂಬ ವ್ಯಕ್ತಿ ಕುಡಿದ ಆಮಲಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಸಿಸಿ ಕ್ಯಾಮೆರಾ ಒಡೆಯುವಾಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

    ಸಾರ್ವಜನಿಕರು ನೀಡಿದ ಮಾಹಿತಿಯ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಅರೆಸ್ಟ್

    ನವದೆಹಲಿ: ಸ್ಥಳೀಯ ಬಿಜೆಪಿ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ರಾಜು ಕುಮಾರ್ ಅಲಿಯಾಸ್ ರಾಜು ಪೆಹಲ್ವಾನ್ (33) ಬಂಧಿತ ಆಟಗಾರ. ಆರೋಪಿ ರಾಜುನನ್ನು ಬುಧವಾರ ಪೊಲೀಸರು ದೆಹಲಿಯ ಹೊರವಲದ ಸಿರಾಸ್ಪುರ್‍ದಲ್ಲಿ ಬಂಧಿಸಿದ್ದಾರೆ.

    ಘಾಜಿಯಬಾದ್ ಖೋಡಾ ಕಾಲೋನಿ ಬಳಿ ಸೆಪ್ಟಂಬರ್ 2 ರಂದು ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಬಿಜೆಪಿ ನಾಯಕ ಗಂಜೇಂದ್ರ ಭಾಟಿ ಅವರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಭಾಟಿ ಅವರ ಸಹಾಯಕ ಬಲ್ಬೀರ್ ಸಿಂಗ್ ಚೌಹಾಣ್ ಗಾಯಗೊಂಡಿದ್ದರು.

    ಉತ್ತರ ಪ್ರದೇಶ ಪೊಲೀಸರು ಸೆಪ್ಟಂಬರ್ 11 ರಂದು ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ನರೇಂದರ್ ಅಲಿಯಾಸ್ ಫೌಜಿಯನ್ನು ಅರೆಸ್ಟ್ ಮಾಡಿದ್ದರು. ಆತನ ವಿಚಾರಣೆ ವೇಳೆ ಈ ಕೃತ್ಯದಲ್ಲಿ ರಾಜು ಪೆಹಲ್ವಾನ್ ಕೂಡ ಭಾಗಿಯಾಗಿದ್ದಾನೆ ಎಂದು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ರಾಜು ಪೆಹಲ್ವಾನ್ ಸಿರಾಸ್ಪುರ್‍ದಲ್ಲಿ ಇರುವ ಮಾಹಿತಿ ತಿಳಿದು ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಒಂದು ತಂಡವನ್ನು ರಚನೆ ಮಾಡಿಕೊಂಡರು. ಆರೋಪಿ ರಾಜು ಬೇರೆ ಸ್ಥಳಕ್ಕೆ ನಾಪತ್ತೆಯಾಗಲು ಜಿಟಿ ಕಾರ್ನಾಲ್ ರಸ್ತೆ ಸಮೀಪದ ಸಿರಾಸ್ಪುರ್‍ದ ಗುರುದ್ವಾರದ ಬಸ್ ನಿಲ್ದಾಣದಲ್ಲಿ ನಿಂತಿದ್ದನು. ಪೊಲೀಸರು ಹಿಡಿಯಲು ಮುಂದಾಗಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಕೊನೆಗೆ ಪೊಲೀಸರು ರಾಜುವನ್ನು ಸೆರೆ ಹಿಡಿದಿದ್ದಾರೆ.

    ಕೊಲೆ ಕೃತ್ಯ ಎಸಗಲು ಇಬರಿಬ್ಬರು ಮುಂಗಡವಾಗಿ 10 ಲಕ್ಷ ಮತ್ತು 50 ಸಾವಿರ ರೂ. ಹಣವನ್ನು ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.

    2013 ರಲ್ಲಿ ನಮ್ಮ ವಾಹನಗಳು ಗ್ರೇಟರ್ ನೋಯ್ಡಾದ ಬಳಿ ಡಿಕ್ಕಿ ಹೊಡೆದ ಬಳಿಕ ಭಾಟಿ ನಮ್ಮ ಮೇಲೆ ದಾಳಿ ನಡೆಸಿದ್ದರು. ನಂತರ 2015 ರಲ್ಲಿ ಭಾಟಿ ಬಲವಂತವಾಗಿ ರಾಜಿ ಮಾಡಿಸಿದ್ದರು. ಆದರೆ ಅವರು ಬೆದರಿಕೆ ಹಾಕಿ ಕ್ರೀಡಾ ಆವರಣದಲ್ಲಿ ಗುಂಡು ಹಾರಿಸಿದ್ದರು. ನಾನು ಪೊಲೀಸರಿಗೆ ದೂರು ನೀಡಲು ಹೋದಾಗ ಆ ಪ್ರದೇಶದಲ್ಲಿ ಅವರು ಪ್ರಭಾವಿ ವ್ಯಕ್ತಿಯಾದ್ದರಿಂದ ಯಾರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ವಿಚಾರಣೆಯ ವೇಳೆಯಲ್ಲಿ ಬಂಧಿತ ರಾಜು ಹೇಳಿದ್ದಾನೆ.

    ಕೊನೆಗೆ ರಾಜು ಭಾಟಿ ಅವರನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಎರಡು ತಿಂಗಳ ಹಿಂದೆ ಫೌಜಿಯ ಜೊತೆ ಸಂಪರ್ಕದಲ್ಲಿದ್ದು, ಲೋನಿ ನಗರದ ಭೂಪ್ಖೇರಿ ಗ್ರಾಮದ ಮುಖೇಶ್ ಹಾಗೂ ರಾಜಕೀಯ ವೈರತ್ವ ಹೊಂದಿದ್ದ ಶರ್ಮಾ ಅವರು ಇವರ ಜೊತೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ನಗರದ ಇಬ್ಬರು ಉದ್ಯಮಿಗಳಾದ ಸೂರಜ್ ಮತ್ತು ಪರ್ಮೋಡಾ ಅವರ ಹತ್ತಿರ ಭಾಟಿಯನ್ನು ಕೊಲ್ಲಲು 8 ಲಕ್ಷ ರೂ. ಹಣವನ್ನು ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜು ಪೆಹಲ್ವಾನ್ ವಿವಿಧ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಆಟವಾಡಿದ್ದಾನೆ. 2005 ಮತ್ತು 2009 ರಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಪ್ರತಿನಿಧಿಸಿದ್ದ ಜೊತೆಗೆ ಭಾರತದ ಕಬಡ್ಡಿ ತಂಡದಲ್ಲೂ ಸ್ಥಾನವನ್ನು ಪಡೆದಿದ್ದ.

  • ಹಂಸವನ್ನು ಬಂಧಿಸಿದ್ರು ಇಂಗ್ಲೆಂಡ್ ಪೊಲೀಸರು

    ಹಂಸವನ್ನು ಬಂಧಿಸಿದ್ರು ಇಂಗ್ಲೆಂಡ್ ಪೊಲೀಸರು

    ಲಂಡನ್: ವಿಶೇಷ ಆರೋಪಿಯನ್ನು ಯು.ಕೆಯ ಕೆಂಬ್ರೀಜ್ಜ್ ಶೈರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಹಂಸವೊಂದು ರಸ್ತೆಯಲ್ಲಿ ಓಡಾಡುವುದ್ದನ್ನು ಜನರು ನೋಡಿ ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದೆಂದು ಪೊಲೀಸರಿಗೆ ತಿಳಿಸಿದ್ದರು. 2007ರಲ್ಲಿ ಬಿಡುಗಡೆಯಾದ ಹಾಟ್ ಫಜ್ ಚಿತ್ರದ ತರಹ ಪೊಲೀಸರು ಬಂದು ಹಂಸವೊಂದನ್ನು ಬಂಧಿಸಿ ತಮ್ಮ ಕಾರಿನ ಹಿಂದಿನ ಸೀಟ್‍ನಲ್ಲಿ ಇರಿಸಿ ಕರೆದುಕೊಂಡು ಹೋಗಿದ್ದರು.

    ಹಂಸವೊಂದನ್ನು ಬಂಧಿಸಿ ಪ್ರಾಣಿದಯಾ ಸಂಘಟನೆಯ ಸದಸ್ಯರನ್ನು ಕರೆಸಿ ಹಂಸಕ್ಕೆ ಗಾಯವಾಗಿದೆಯೇ ಎಂದು ಪರೀಕ್ಷಿಸಿ ನಂತರ ನದಿಯಲ್ಲಿ ಸುರಕ್ಷಿತವಾಗಿ ಬಿಡಲಾಯಿತ್ತು.

    ಕೆಂಬ್ರೀಜ್ಜ್ ಶೈರ್ ಪೊಲೀಸರು ಹಂಸನನ್ನು ಹಿಡಿದಿರುವ ಆ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

    ಮಂಡ್ಯ: ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು. ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿತ್ತು. ಮನೆಯ ಸಮೀಪ ಓಡಾಡುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು.

    ಚಲುವರಾಜು ಪಕ್ಕದ ಮನೆಯ ನಾಗರಾಜು ಮೇಲೆ ಚೂರಿ ಮತ್ತು ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ನಾಗರಾಜುವನ್ನು ಕಾಪಾಡಲು ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಯತ್ನಿಸಿದ್ದರು. ಆದರೆ ಅವರ ಮೇಲೂ ಚೂರಿ ಮತ್ತು ಮರದ ತುಂಡಿನಿಂದ ಚಲುವರಾಜು ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಲಗೂರು ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿ ಚಲುವರಾಜುನನ್ನು ಬಂಧಿಸಿದ್ದಾರೆ.

  • ಭೂಗತ ಪಾತಕಿ ದಾವೂದ್ ಬೇಟೆಯತ್ತ ಹೆಜ್ಜೆ – ಮುಂಬೈನಲ್ಲಿ ಡಾನ್ ತಮ್ಮ ಅರೆಸ್ಟ್

    ಭೂಗತ ಪಾತಕಿ ದಾವೂದ್ ಬೇಟೆಯತ್ತ ಹೆಜ್ಜೆ – ಮುಂಬೈನಲ್ಲಿ ಡಾನ್ ತಮ್ಮ ಅರೆಸ್ಟ್

    ಮುಂಬೈ: ಇಂಗ್ಲೆಂಡ್‍ನಲ್ಲಿರುವ ಆಸ್ತಿ-ಪಾಸ್ತಿ ಜಪ್ತಿ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಮತ್ತೊಂದು ಶಾಕ್ ಸಿಕ್ಕಿದೆ. ಸುಲಿಗೆ ಪ್ರಕರಣದಲ್ಲಿ ದಾವೂದ್ ತಮ್ಮ ಇಕ್ಬಲ್ ಕಸ್ಕರ್‍ನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ನಾಗ್‍ಪಾಡಾದಲ್ಲಿರುವ ಮನೆಯಿಂದ ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದ ತಂಡ ಕಸ್ಕರ್ ನನ್ನು ಬಂಧಿಸಿದೆ. ಮುಂಬೈನಲ್ಲಿ ನಾಲ್ಕು ಫ್ಲ್ಯಾಟ್ ನೀಡಿದ್ರೂ ಮತ್ತಷ್ಟು ಫ್ಲ್ಯಾಟ್ ನೀಡುವಂತೆ ಬೆದರಿಕೆ ಹಾಕಿದ್ದ ಅಂತ ಬಿಲ್ಡರೊಬ್ಬರು ನೀಡಿದ್ದ ದೂರಿನ ಮೇಲೆ ಕಸ್ಕರ್‍ನನ್ನು ಜೈಲಿಗಟ್ಟಲಾಗಿದೆ.

    2003ರಲ್ಲಿ ಕಸ್ಕರ್‍ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿಕೊಂಡಿರುವ ದಾವೂದ್‍ನನ್ನು ಭಾರತಕ್ಕೆ ಕರೆತರುವಲ್ಲಿ ಆತನ ತಮ್ಮನ ಬಂಧನ ಮಹತ್ವದ ಹೆಜ್ಜೆ ಎಂದೇ ಭಾವಿಸಲಾಗಿದೆ.

    ದಾವೂದ್ ಬಗ್ಗೆ ಈಗ ಮಾತಾಡೋದು ಬೇಡ. ಆ ವಿಷ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಆತನನ್ನು ಸುಮ್ಮನೆ ಬಿಡಲಾಗದು ಎಂದು ಇತ್ತೀಚೆಗಷ್ಟೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದರು.

  • ರಸ್ತೆಯಲ್ಲಿ ಹೋಗೋ ವೃದ್ಧರೇ ಇವರ ಟಾರ್ಗೆಟ್- ನಕಲಿ ಔಷಧಿ ಕೊಡಿಸಿ ಯಾಮಾರಿಸ್ತಿದ್ದ ಗ್ಯಾಂಗ್ ಅರೆಸ್ಟ್

    ರಸ್ತೆಯಲ್ಲಿ ಹೋಗೋ ವೃದ್ಧರೇ ಇವರ ಟಾರ್ಗೆಟ್- ನಕಲಿ ಔಷಧಿ ಕೊಡಿಸಿ ಯಾಮಾರಿಸ್ತಿದ್ದ ಗ್ಯಾಂಗ್ ಅರೆಸ್ಟ್

    ಹುಬ್ಬಳಿ: ಹುಬ್ಬಳ್ಳಿ ಧಾರವಾಡ ಜನರೇ ನೀವು ಔಷಧಿ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರವಿರಲಿ. ಯಾವುದು ನಕಲಿ, ಯಾವುದು ಅಸಲಿ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಯಾಕೆಂದರೆ ವೃದ್ಧಾಪ್ಯವನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಔಷಧಿ ಕೊಟ್ಟು ಯಾಮಾರಿಸುತ್ತಿದ್ದಾರೆ.

    ಹೌದು. ಇಂಥದೊಂದು ನಕಲಿ ಔಷಧಿ ಮಾರಾಟ ಮಾಡುವ ತಂಡ ನಿಮ್ಮನ್ನ ರಸ್ತೆಯಲ್ಲಿ ಮಾತನಾಡಿಸಿ ಯಾಮಾರಿಸುತ್ತಾರೆ. ಆದರೆ ಸದ್ಯ ಇವರನ್ನು ಧಾರವಾಡದಲ್ಲಿ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ರಾಘವೇಂದ್ರ ಆಯುರ್ವೇದಿಕ್ ಎಂಬ ಹೆಸರಿಟ್ಟುಕೊಂಡಿರುವ ಈ ತಂಡ ನಕಲಿ ಔಷಧಿ ಮಾರಾಟ ಮಾಡುತ್ತಿತ್ತು. ವೃದ್ಧ ಜನರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಮಾತನಾಡಿಸಿ, ನಿಮಗೆ ಒಳ್ಳೆ ಔಷಧಿ ಕೊಡಿಸುತ್ತೇವೆ ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆದು ಪಾರಾರಿಯಾಗುತ್ತಿದ್ದರು.

    ಇವರು ನೀಡಿದ ಔಷಧಿಯಿಂದ ವೃದ್ಧರಿಗೆ ಯಾವುದೇ ಪರಿಣಾಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಜನರು ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಈ ನಿಖರ ಮಾಹಿತಿ ಪಡೆದ ಪೊಲೀಸರು ಧಾರವಾಡದ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವೆಂಕಟೇಶ ಹಾಗೂ ಎಲ್ಲಪ್ಪ ಎನ್ನುವವರನ್ನು ನಗರದ ದಾಸನಕೊಪ್ಪ ಕ್ರಾಸ್ ಬಳಿಯ ಅಂಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂ. ನಗದು ಹಾಗೂ ಚೆಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.