Tag: arrest

  • 5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    5 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಹೊಡೆದ ಟೀಚರ್ ಬಂಧನ

    ಹೈದರಾಬಾದ್: ಇಲ್ಲಿನ ಟರ್ನಾಕಾದಲ್ಲಿರೋ ಸೇಕ್ರೆಡ್ ಹಾರ್ಟ್ ಶಾಲೆಯ 5 ವರ್ಷದ ಬಾಲಕನಿಗೆ ಚಡಿ ಏಟು ಕೊಟ್ಟ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಯುಕೆಜಿ ಓದುತ್ತಿದ್ದ ಮೊಹಮ್ಮದ್ ಖಾಜಾ ಲತೀಫ್ ಟೀಚರ್ ಕೈಯಿಂದ ಹೊಡೆತ ತಿಂದ ಬಾಲಕ. ಶಿಕ್ಷಕಿಯನ್ನು ಕುಮುಧಿನಿ ಎಂದು ಗುರುತಿಸಲಾಗಿದ್ದು, ಸದ್ಯ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಾಲೆಯಲ್ಲಿ ಟೀಚರ್ ಕೈಯಿಂದ ಹೊಡೆತ ತಿಂದ ಪರಿಣಾಮ ಬಾಲಕನ ಬೆನ್ನಲ್ಲಿ ಗಾಯಗಳಾಗಿದ್ದು, ಮನೆಗೆ ಬಂದು ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನ ದೂರನ್ನು ಆಲಿಸಿದ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.

    ಬೆಳಗ್ಗೆ ತರಗತಿ ನಡೆಯುತ್ತಿದ್ದ ವೇಳೆ ಬಾಲಕ ಲತೀಫ್ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಆತನಿಗೆ ಕಚ್ಚಿದ್ದಾನೆ. ಹೀಗಾಗಿ ಶಿಕ್ಷಕಿ ಕುಮುಧಿನಿ ಕೋಲಿನಿಂದ ಬಾಲಕನಿಗೆ ಹೊಡೆದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಆದ್ರೆ ಬಾಲಕನ ವಿರುದ್ಧ ಶಿಕ್ಷಕಿಯ ಕ್ರೂರ ವರ್ತನೆಗೆ ಶಿಕ್ಷೆಯಾಗಬೇಕು ಎಂದು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರೋ ಎನ್‍ ಜಿಒವೊಂದು ಪಟ್ಟು ಹಿಡಿದಿದೆ.

    ಸದ್ಯ ಬಾಲಕನ ತಾಯಿ ನೀಡಿದ ದೂರಿನನ್ವಯ ಐಪಿಸಿಯ ಸೂಕ್ತ ಸೆಕ್ಷನ್‍ಗಳಡಿ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ಮೋದಿ ಸರ್ಕಾರಕ್ಕೆ ಶಾಕ್ ಕೊಟ್ಟ ಖದೀಮರು- 12 ಲಕ್ಷ ರೂ. ಹಳೇ ನೋಟು ಪತ್ತೆ

    ಮೋದಿ ಸರ್ಕಾರಕ್ಕೆ ಶಾಕ್ ಕೊಟ್ಟ ಖದೀಮರು- 12 ಲಕ್ಷ ರೂ. ಹಳೇ ನೋಟು ಪತ್ತೆ

    ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೇ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟ್ ಬ್ಯಾನ್ ಮಾಡಿ ಒಂದು ವರ್ಷವೇ ಕಳೆದರೂ ಹಳೆ ನೋಟ್‍ಗಳ ಬದಲಾವಣೆ ಮಾಡುವ ಮಾಫಿಯಾ ಇನ್ನೂ ಕಾರ್ಯಾಚರಣೆ ನಡೆಸುತ್ತಲೇ ಇದೆ. ಇದಕ್ಕೆ ತಾಜಾ ಉದಾರಣೆ ಎಂಬಂತೆ ಗದಗ ನಗರದಲ್ಲಿ ಹಳೇ ನೋಟ್ ಗಳನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

    ಬಂಧಿತರಲ್ಲಿ ಇಬ್ಬರು ಗದಗ ನಗರ ನಿವಾಸಿಗಳಾಗಿದ್ದು ಮತ್ತಿಬ್ಬರು ಗದಗ ತಾಲೂಕಿನ ನಾಗಾವಿ ಮತ್ತು ಮಲ್ಲಸಮುದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. ಗದಗ ರಾಧಾಕೃಷ್ಣ ನಗರದ ಮಾಬುಸುಬಾನಿ ಸವಡಿ(40), ನಗರದ ಗಂಗಿಮಡಿ ಕಾಲೋನಿ ನಿವಾಸಿ ಮಹಮದ್ ಯುಷುಫ್ ಗುಳಗುಂದಿ (26) ಹಾಗೂ ತಾಲೂಕಿನ ಮಲ್ಲಸಮುದ್ರ ಗ್ರಾಮದ ಸುರೇಶ್ ಹಳ್ಳಿಕೇರಿ(45), ನಾಗಾವಿ ಗ್ರಾಮದ ಮುತ್ತಪ್ಪ ಮಲ್ಲಮ್ಮ ನವರ್ (36) ಬಂಧಿತ ಆರೋಪಿಗಳು.

    ಹಳೇ ನೋಟುಗಳನ್ನು ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಗರದ ರೈಲ್ವೇ ಕ್ವಾಟ್ರಸ್ ಬಳಿ ಬೈಕ್ ಮೇಲೆ ಹಣ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 12 ಲಕ್ಷ ರೂ. ಮೌಲ್ಯದ ಹಳೇ ನೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳನ್ನು ಪೋಲಿಸರು ಬಂಧಿಸಿದ ನಂತರ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿದೆ. ಈ ಹಣ ಯಾರದ್ದು? ಹಳೇ ನೋಟುಗಳನ್ನ ಇನ್ನೂ ಎಕ್ಸ್‍ಚೆಂಜ್ ಮಾಡುವ ಕುಳಗಳು ಯಾರು? ಬ್ಲಾಕ್ ಮನಿ ವೈಟ್ ಮನಿ ಮಾಡೊಕೆ ಸಜ್ಜಾಗಿದ್ದಾರಾ ಕಪ್ಪು ಕುಳಗಳು? ಆ ಹಳೇನೋಟನ್ನು ಈಗಲೂ ಸ್ವೀಕರಿಸ್ತಾರೆ ಅಂದರೆ ಅದರ ಹಿಂದಿರುವ ಕೈವಾಡವಾದರು ಎಂತಹದ್ದು? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆ ನಂತರವಷ್ಟೇ ಉತ್ತರ ಸಿಗಲಿದೆ.

     

  • ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ತುಮಕೂರು: ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ರಮೇಶ್ ಮತ್ತು ಹರೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ತುಮಕೂರು ಹೊರವಲಯದ ಯಲ್ಲಾಪುರದ ನಿವಾಸಿಗಳಾದ ಈ ವಂಚಕರ ತಂಡ ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ಫೋನ್ ಮಾಡಿ ನಿಧಿ ಸಿಕ್ಕಿದೆ, ಬೇಕಾದರೆ 2 ಲಕ್ಷ ರೂ. ತಗೊಂಡು ಬನ್ನಿ ಎಂದು ಹೇಳಿ ವಂಚಿಸುತ್ತಿದ್ದರು.

    ಸಾರ್ವಜನಿಕರ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಹೋದ ಡಿಸಿಬಿ ಪೊಲೀಸರು ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ ನಿಧಿ ಮಾರಲು ಕಾಯುತಿದ್ದ ತಂಡದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಈ ವಂಚಕರು ಚಿನ್ನದ ನಾಣ್ಯದ ಬದಲು ಪಾತ್ರೆಯ ಇದ್ದಿಲು ತುಂಬಿಕೊಂಡು ಬಂದಿದ್ದು ಪತ್ತೆಯಾಗಿದೆ. ಇದ್ದಿಲು ತುಂಬಿದ ಪಾತ್ರೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ

    ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ

    ಬೆಂಗಳೂರು: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

    ಇಬ್ರಾಹಿಂ ಅಲಿಯಾಸ್ ಕಲು, ಫಾಯಾಜ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 300 ಗ್ರಾಂ ಚಿನ್ನ ಹಾಗೂ 8 ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಗರದೆಲ್ಲೆಡೆ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬೈಕ್‍ನಲ್ಲಿ ಬಂದು ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಂತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸರಗಳ್ಳರು ಓಡಾಡೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಕಳ್ಳತನ ಮಾಡಲು ಬಳಸುತ್ತಿದ್ದ ಬೈಕ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

  • ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ನಿಧಿ ಆಸೆಗೆ ಮಗು ಬಲಿ ಕೊಡೋಕೆ ಮುಂದಾಗಿದ್ದವರ ಬಂಧನ

    ಮೈಸೂರು: ನಿಧಿಗಾಗಿ ಕೇರಳದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಗು ಬಲಿ ಕೊಡಲು ಮುಂದಾಗಿ ತಮ್ಮದಲ್ಲದ ಜಮೀನಿನಲ್ಲಿ ಗುಂಡಿ ತೆಗೆದ ಏಳು ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ನೆರಳೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸುಧೀರ್ ಎಂಬಾತ ನಿಧಿಗಾಗಿ ಇಂತಹ ಪ್ಲಾನ್ ಮಾಡಿದ್ದ. ಅದೇ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನಿಧಿ ಇದೆ ಎಂದು ಸುಧೀರ್ ತನ್ನ ಸುಳ್ಯದ ಗೆಳೆಯ ರವೀಂದ್ರ ಹಾಗೂ ಇನ್ನಿತರ ಐದು ಜನರೊಂದಿಗೆ ಹಳ್ಳ ತೆಗೆಯಲು ಜಮೀನಿಗೆ ಹೋಗಿದ್ದಾನೆ.

    ಈ ಸಂದರ್ಭದಲ್ಲಿ ರವೀಂದ್ರ ಜೊತೆ 11 ವರ್ಷದ ಮಗು ಕೂಡ ಇತ್ತು. ಅಲ್ಲದೆ ಪೂಜೆಯ ಸಾಮಾಗ್ರಿಗಳು, ಕೇರಳದ ಜ್ಯೋತಿಷ್ಯ ಶಾಸ್ತ್ರದ ಪುಸ್ತಕಗಳು ಹಾಗೂ ಮಾಂತ್ರಿಕ ವಿದ್ಯೆಯ ಸಾಮಾಗ್ರಿಗಳು ಕೂಡ ಇದ್ದವು. ಇವರೆಲ್ಲಾ ಸೇರಿ ಹಳ್ಳ ತೆಗೆಯುವುದನ್ನು ಸ್ಥಳೀಯರು ಗಮನಿಸಿ ನಿಧಿಗಾಗಿ ಮಗು ಬಲಿ ಕೊಡಲಾಗುತ್ತಿದೆ ಎಂದು ಶಂಕಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕೌವಲಂದೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಜಮೀನಿನ ಮಾಲೀಕ ಮಹೇಶ್ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲಕನನ್ನು ಹೊರತು ಪಡಿಸಿ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕಬೋರ್ಡ್ ಮಾಡಿಕೊಡಲ್ಲ ಎಂದಿದ್ದಕ್ಕೆ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದೇಬಿಟ್ಟ!

    ಕಬೋರ್ಡ್ ಮಾಡಿಕೊಡಲ್ಲ ಎಂದಿದ್ದಕ್ಕೆ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದೇಬಿಟ್ಟ!

    ಮುಂಬೈ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    ಸ್ಥಳಿಯ ಮಾಧ್ಯಮಗಳ ವರದಿಗಳ ಪ್ರಕಾರ ಕೊಲೆಯಾದ ವ್ಯಕ್ತಿ ಸುಧೀರ್ ಪವಾರ್(24) ಎಂದು ಗುರುತಿಸಲಾಗಿದೆ. ಬಡಗಿ ವೃತ್ತಿ ಮಾಡಿಕೊಂಡಿದ್ದ ಸುಧೀರ್ ಬಾಂದ್ರಾ (ಪೂರ್ವ) ಪ್ರದೇಶದಲ್ಲಿ ನೆಲೆಸಿದ್ದ.

    ಈತನ ನೆರೆಮನೆಯಲ್ಲಿ ವಾಸವಿದ್ದ ಕುಟುಂಬ ಸಹೋದರರಾದ ಚೋಟಾಲ್ ಸಹಾನಿ (34), ರಾಕೇಶ್ ಸಹಾನಿ (40) ತಮಗೇ ಒಂದು ಮರದ ಕಬೋರ್ಡ್ ಮಾಡಿಕೊಡುವಂತೆ ಕೇಳಿದ್ದಾರೆ. ಸಹೋದರರ ಮನವಿಯನ್ನು ಆತ ನಿರಾಕರಿಸಿದ್ದು ಮೂವರ ನಡುವೆ ಜಗಳಕ್ಕೆ ಆರಂಭವಾಗಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿದ್ದು ಚೋಟಾಲ್ ಸ್ಥಳದಲ್ಲಿದ್ದ ಸುತ್ತಿಗೆಯಿಂದ ಪವಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

    ಇದನ್ನು ಕಂಡು ಆತಂಕಗೊಂಡ ಚೋಟಾಲ್ ತಕ್ಷಣ ಪವಾರ್ ಕುಟುಂಬಸ್ಥರಿಗೆ ಆತ ಕಟ್ಟಡ ಮೇಲಿಂದ ಬಿದ್ದು ಗಾಯಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪವಾರ್ ಸಹೋದರಿ ಸಾರ್ವಜನಿಕರ ಸಹಾಯದಿಂದ ಆತನನ್ನು ಸ್ಥಳೀಯ ಆಸ್ಪತ್ರೆ ಕೊಂಡ್ಯೊಯುವ ಪ್ರಯತ್ನ ನಡೆಸಿದ್ದು, ದಾರಿ ಮಧ್ಯದಲ್ಲಿಯೇ ಪವಾರ್ ಸಾವನ್ನಪ್ಪಿದ್ದಾನೆ.

    ಸುಧೀರ್ ಪವಾರ್ ಜೊತೆ ಜಗಳವಾಡಿ ಆತನ ಕೊಲೆಗೆ ಕಾರಣರಾದ ಸಹೋದರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಸತ್ಯಾಂಶ ಬೆಳಕಿಗೆ ಬಂದಿದ್ದು ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

    ಘಟನೆಯ ಕುರಿತು ಮುಂಬೈನ ಖೇರ್ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬಳಿ 22 ನಂಬರ್‍ನ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದು, ಆರೋಪಿಯನ್ನು ಏರ್‍ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

    ಬಾದೆ ದಾನೇಶ್ವರ್ ಎಂಬಾತ ಬಂಧಿತ ಆರೋಪಿ. ಈತ ನವೆಂಬರ್ 2 ರಂದು ಕೆಐಎಎಲ್‍ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‍ಜಿ 424ನಲ್ಲಿ ಪ್ರಯಾಣ ಮಾಡಲು ಯತ್ನಿಸಿದ್ದನು. ಈ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಹ್ಯಾಂಡ್ ಬ್ಯಾಗ್ ಮುಖಾಂತರ ಗುಂಡುಗಳನ್ನು ಕೊಂಡೊಯ್ಯುತ್ತಿದ್ದನು. ತಪಾಸಣೆ ಮಾಡುವ ವೇಳೆ ಅಕ್ರಮ ಗುಂಡುಗಳು ಹಾಗೂ ಕಾಟ್ರಿಡ್ಜ್ ಪತ್ತೆಯಾಗಿವೆ.

    ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಬಳಿ 22 ನಂಬರ್‍ನ ಎರಡು ಖಾಲಿ ಕಾಟ್ರಿಡ್ಜ್ ಹಾಗೂ 5.56 ನಂಬರ್‍ನ ಒಂದು ಹೆಡ್ ಪಾರ್ಟ್ ಪತ್ತೆಯಾಗಿವೆ. ಆದರೆ ವಿಚಾರಣೆಯ ವೇಳೆ ಬೇರೆ ಯಾವುದೇ ರೀತಿಯ ದಾಖಲಾತಿಗಳು ದೊರಕಲಿಲ್ಲ.

    ಈ ಘಟನೆ ಸಂಬಂಧ ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

  • ನೋಟ್‍ಬ್ಯಾನ್ ವರ್ಷಾಚರಣೆ ದಿನವೇ ಭರ್ಜರಿ ಬೇಟೆ – ಕಲಬುರಗಿಯಲ್ಲಿ 50 ಲಕ್ಷ ರೂ. ಕಪ್ಪುಹಣ ಪತ್ತೆ

    ನೋಟ್‍ಬ್ಯಾನ್ ವರ್ಷಾಚರಣೆ ದಿನವೇ ಭರ್ಜರಿ ಬೇಟೆ – ಕಲಬುರಗಿಯಲ್ಲಿ 50 ಲಕ್ಷ ರೂ. ಕಪ್ಪುಹಣ ಪತ್ತೆ

    ಕಲಬುರಗಿ: ನೋಟ್ ಬ್ಯಾನ್ ಆಗಿ ಇವತ್ತಿಗೆ ಒಂದು ವರ್ಷವಾದರೂ ಇನ್ನೂ ಕಪ್ಪುಹಣದ ಛಾಯೆ ಮುಗಿದಿಲ್ಲ. ಜಿಲ್ಲೆಯಲ್ಲಿ ಪೊಲೀಸರು ಫೈನಾನ್ಸ್ ಮೇಲೆ ದಾಳಿ ಮಾಡಿದ್ದು, 50 ಲಕ್ಷ ರೂ. ಕಾಳಧನ ಪತ್ತೆಯಾಗಿದೆ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಗಾಯಕವಾಡ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ಸೇರಿದಂತೆ ಇತರೆ ಮೂವರು ಮೀಟರ್ ಬಡ್ಡಿ ದಂಧೆಕೋರನ್ನೂ ಕೂಡ ಬಂಧಿಸಲಾಗಿದೆ. ಮೀನಾಕ್ಷಿ ಕಾಂತಾ, ನಾಗರಾಜ್ ಕಲಶೆಟ್ಟಿ ಮತ್ತು ಶ್ರೀಕಾಂತ ಒಂಟಿ ಬಂಧಿತ ಆರೋಪಿಗಳಾಗಿದ್ದಾರೆ.

    ಆರೋಪಿ ಕರಣ್ ಗಾಯಕವಾಡ್ ಮೀಟರ್ ಬಡ್ಡಿ ಮೂಲಕ ಜನರ ಬಳಿ ಹಣವನ್ನು ವಸೂಲಿ ಮಾಡುತ್ತಿದ್ದನು. ಈತನ ಬಗ್ಗೆ ಖಚಿತವಾದ ಮಾಹಿತಿ ಪಡೆದು ನಂತರ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಾಖಲೆಯಿಲ್ಲದ 2000, 500 ಹಾಗೂ 100 ರೂ. ಮುಖಬೆಲೆಯ 40 ಲಕ್ಷ ರೂಪಾಯಿ ಹಣ ಮತ್ತು ದಾಖಲಾತಿಗಳು ದೊರೆತಿವೆ. ಈ ಎಲ್ಲಾ ಪ್ರಕರಣದಲ್ಲಿ ಒಟ್ಟು 50 ಲಕ್ಷ ರೂ. ಕಾಳಧನ ಪತ್ತೆಯಾಗಿದೆ.

    ಈ ಕುರಿತು ಕಲಬುರಗಿಯ ಆರ್ ಜೆ. ಬ್ರಹ್ಮಪೂರ್ ಠಾಣೆ ಹಾಗೂ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

     

  • ಮಾತು ಬಾರದ, ಕಿವಿ ಕೇಳಿಸದ 70ರ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ- 19ರ ಯುವಕ ಬಂಧನ

    ಮಾತು ಬಾರದ, ಕಿವಿ ಕೇಳಿಸದ 70ರ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ- 19ರ ಯುವಕ ಬಂಧನ

    ಮುಂಬೈ: ಮಾತನಾಡಲು ಬಾರದ ಮತ್ತು ಕಿವಿ ಕೇಳಿಸದ 70 ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 19 ವರ್ಷದ ಯುವಕನನ್ನು ನಗರದ ಮಾಲ್ವಾನಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಪ್ರೇಮ್ ಸಿಂಗ್ ನೇಗಿ ಎಂದು ಗುರುತಿಸಲಾಗಿದ್ದು, ಆರೋಪಿಯು ಅದೇ ಪೊಲೀಸ್ ಕ್ವಾಟರ್ಸ್ ವಾಸಿಸುತ್ತಿದ್ದು, ಇಬ್ಬರು ಸಿಬಿಐ ಅಧಿಕಾರಿಗಳ ಮನೆಯಲ್ಲಿ ಆಡುಗೆ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ನಡೆದಿದ್ದೇನು?:
    ಸಂತ್ರಸ್ತೆ ಮಾಲ್ವಿಣಿ ನಗರದ ದೇವಾಲಯದ ಸಮೀಪ ಫುಟ್‍ಬಾತ್‍ನಲ್ಲಿ ಹೂವಿನ ಅಂಗಡಿಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಮಾತನಾಡಲು ಮತ್ತು ಕಿವಿಯೂ ಕೂಡ ಕೇಳಿಸುತ್ತಿರಲಿಲ್ಲ.

    ಕಳೆದ ಬುಧವಾರ ರಾತ್ರಿ ಸಂತ್ರಸ್ತೆ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ತಕ್ಷಣ ಸಂತ್ರಸ್ತೆ ಕಿರುಚಾಡಿದ್ದಾರೆ. ಅಲ್ಲೇ ಪಕ್ಕದ ಅಂಗಡಿಯಲ್ಲಿ ಕಾಫಿ ಕುಡಿಯುತ್ತಿದ್ದ ಇಬ್ಬರು ಯುವಕರು ಕಾಪಾಡಲು ಓಡಿ ಬಂದಿದ್ದಾರೆ. ಅವರು ಬಂದ ತಕ್ಷಣ ಆರೋಪಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಕತ್ತಲಾಗಿದ್ದರಿಂದ ಯಾವುದೋ ವಾಹನ ಬಂದು ಡಿಕ್ಕಿ ಹೊಡೆದಿದೆ. ತಕ್ಷಣ ರಸ್ತೆಯಲ್ಲಿಯೇ ಬಿದ್ದಿದ್ದಾನೆ. ನಂತರ ಇಬ್ಬರು ಯುವಕರು ಮತ್ತು ಕೆಲವು ಮಂದಿ ಆತನನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

    ಸಂತ್ರಸ್ತೆ ಕಳೆದ ಮೂರು ವರ್ಷಗಳಿಂದ ದೇವಾಲಯದ ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದು, ದಿನ ದೇವಸ್ಥಾನಕ್ಕೆ ಬರುತ್ತಿದ್ದವರು ನೋಡಿ ಅವರಿಗೆ ಹಣ, ಊಟದ ಸಹಾಯ ಮಾಡುತ್ತಿದ್ದರು. ಹೂವಿನ ಅಂಗಡಿಗೆ ಹೋಗಿ ಹೂವಿನ ಮಾಲೆಯನ್ನು ತಯಾರು ಮಾಡಿಕೊಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮಾಲೀಕ ಊಟ ಮತ್ತು ಮಲಗಲು ಸ್ಥಳವನ್ನು ನೀಡುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವು. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಆರೋಪಿಯ ವಿಚಾರಣೆ ವೇಳೆ ಪೊಲೀಸ್ ಠಾಣೆಯ ಹಿಂಭಾಗಲ್ಲಿರುವ ಸಿಬಿಐ ಕ್ವಾಟರ್ಸ್ ಆರೋಪಿ ವಾಸವಾಗಿದ್ದನು. ಸಂತ್ರಸ್ತೆಯ ಅಂಗಡಿಯ ಪಕ್ಕ ಕುಡಿಯುತ್ತಾ ಕುಳಿತ್ತಿದ್ದ, ಸಂತ್ರಸ್ತೆ ಮಲಗಿದ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ಅವರು ಮತ್ತಷ್ಟು ಮಾಹಿತಿ ನೀಡಿದರು.

  • ಬೆಂಗ್ಳೂರಲ್ಲಿ ಎಟಿಎಂ ಹಣ ಕದ್ದವನು ಮಂಡ್ಯದಲ್ಲಿ ಸಿಕ್ಕಿಬಿದ್ದ

    ಬೆಂಗ್ಳೂರಲ್ಲಿ ಎಟಿಎಂ ಹಣ ಕದ್ದವನು ಮಂಡ್ಯದಲ್ಲಿ ಸಿಕ್ಕಿಬಿದ್ದ

    ಮಂಡ್ಯ: ಬೆಂಗಳೂರಿನ ಜಾಲಹಳ್ಳಿ ಕ್ರಾಸ್‍ನಲ್ಲಿರುವ ಎಟಿಎಂಗೆ ಸಿಬ್ಬಂದಿ ಹಣ ತುಂಬುವಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದ ಖದೀಮನೊಬ್ಬನನ್ನು ಮಂಡ್ಯ ಜಿಲ್ಲೆ, ಮಳವಳ್ಳಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

    ನಿತಿನ್ ಕುಮಾರ್ ಎಂಬವನೇ ಬಂಧಿತ ಆರೋಪಿ. ಸೋಮವಾರದಂದು ಮೂವರು ಯುವಕರ ಗುಂಪು ಎಣ್ಣೆ ಕುಡಿದು ಮಳವಳ್ಳಿ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಅವರನ್ನು ಹಿಂಬಾಲಿಸಿದಾಗ ತಮ್ಮ ಬಳಿಯಿದ್ದ ಬ್ಯಾಗ್ ತೆಗೆದುಕೊಂಡು ಬಟ್ಟೆ ಅಂಗಡಿಯೊಂದರ ಒಳಗೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ರು.

    ಆದ್ರೆ ಅವರನ್ನು ಬೆನ್ನತ್ತಿ ಹಿಡಿದ ಪೊಲೀಸರು, ಅವರ ಬಳಿಯಿದ್ದ ಬ್ಯಾಗ್ ಪರೀಕ್ಷಿಸಿದಾಗ ಬ್ಯಾಗ್ ತುಂಬಾ ಎರಡು ಸಾವಿರ, ಐನೂರು, ನೂರು ರೂಪಾಯಿ ಮುಖಬೆಲೆಯ ನೋಟುಗಳಿರುವುದು ಪತ್ತೆಯಾಗಿತ್ತು.

    ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಎಟಿಎಂಗೆ ತುಂಬಲು ಹೋಗುತ್ತಿದ್ದ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಮಳವಳ್ಳಿಯವನಾದ ನಿತಿನ್‍ಕುಮಾರ್ ಬೆಂಗಳೂರಿನಲ್ಲೇ ವಾಸವಿದ್ದ. ಸೋಮವಾರ ಬೆಳಗ್ಗೆ ಹಣ ದೋಚಿದವನು ನೇರವಾಗಿ ಮಳವಳ್ಳಿಗೆ ಬಂದಿದ್ದ.

    ಇದರ ಅರಿವಿರದ ಇನ್ನಿಬ್ಬರು ಯುವಕರು ಗೆಳೆಯ ನಿತಿನ್‍ಕುಮಾರ್ ಜೊತೆ ಸೇರಿಕೊಂಡಿದ್ರು. ಆದ್ರೆ ಇದೀಗ ಪೊಲೀಸರ ಚಾಣಾಕ್ಷತೆಯಿಂದ ಆರೋಪಿ ನಿತಿನ್‍ಕುಮಾರ್ 15 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಿದ್ದಾನೆ. ನಿತಿನ್ ಕುಮಾರ್ ಜೊತೆ ಹಣ ದೋಚಿದ್ದ ಮತ್ತೊಬ್ಬ ಆರೋಪಿ ಮಾರುತಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

    ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರದಂದು ನಡೆದಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ರ್ಕಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದರು.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಳು. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು. ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.