Tag: arrest

  • ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ಬೆಂಗಳೂರು: ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇನ್ಪೆಕ್ಷನ್ ಆಗಬಾರದು ಎನ್ನುವ ನಿಟ್ಟಿನಲ್ಲಿ ಐಸಿಯುಗೆ ಹೋಗುವಾಗ ವೈದ್ಯರಿಂದ ಹಿಡಿದು ರೋಗಿಯ ಎಟೆಂಡರ್ ವರೆಗೂ ಚಪ್ಪಲಿ, ಶೂಗಳನ್ನು ಬಿಟ್ಟು ಹೋಗಬೇಕು.

    ಇದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ಚಪ್ಪಲಿ, ಶೂಗಳನ್ನು ಕಳ್ಳತನ ಮಾಡಲು ಶುರುಮಾಡಿಕೊಂಡಿದ್ದನು. ಕದ್ದ ಮಾಲನ್ನು ಆಸ್ಪತ್ರೆಯ ಕೂಗಳತೆಯಲ್ಲಿರೋ ನೈಟ್ ಬಾಟ ಎಂದೇ ಫೇಮಸ್ ಆಗಿರೋ ಸೆಕೆಂಡ್ ಹ್ಯಾಂಡ್ ಚಪ್ಪಲಿ, ಶೂಗಳನ್ನು ಮಾರಾಟ ಮಾಡೋ ಫುಟ್ ಪಾತ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದನು.

    ಕಳೆದ ಎರಡು ತಿಂಗಳಿಂದ ಆಸ್ಪತ್ರೆಯ ಸಿಬ್ಬಂದಿಗೆ ಇದು ದೊಡ್ಡ ತಲೆ ನೋವಾಗಿತ್ತು. ವೈದ್ಯರ ಕಾಸ್ಟ್ಲೀ ಶೂಗಳು, ರೋಗಿಯನ್ನು ನೋಡಲು ಬರುವವರ ಚಪ್ಪಲಿ, ಶೂಗಳು ಪ್ರತಿನಿತ್ಯ ಮಾಯವಾಗುತ್ತಿತ್ತು. ಹೇಗಾದರೂ ಮಾಡಿ ಆ ಕಳ್ಳನನ್ನು ಹಿಡಿಯಲೇಬೇಕು ಎಂದು ಆಸ್ಪತ್ರೆಯ ಸೆಕ್ಯುರಿಟಿಗಳು ನಿರ್ಧರಿಸಿದ್ದರು.

    ಆದರೆ ಗುರುವಾರ ಆ ಕಳ್ಳನ ನಸೀಬು ಕೈ ಕೊಟ್ಟಿತ್ತು. ರೋಗಿಯ ಸಂಬಂಧಿಕರ ರೀತಿ ಆಸ್ಪತ್ರೆಗೆ ಬರಿಗಾಲಲ್ಲಿ ಬಂದು ಒಳ್ಳೆಯ ಚಪ್ಪಲಿಯನ್ನು ಹಾಕಿಕೊಂಡು ಎಸ್ಕೇಪ್ ಆಗುತ್ತಿದ್ದ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಿಡಿದು ಜಾಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ ಈ ಚಪ್ಪಲಿ, ಶೂಗಳು ಕಳ್ಳತನ ಆಗುತ್ತಿದ್ದದ್ದು ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ.

    ನೇಪ್ರೊ ನ್ಯೂರಾಲಜಿ ಬ್ಲಾಕ್ ನಲ್ಲಿ ಐಸಿಯುವಿಗೆ ಹೋಗೋ ಡಾಕ್ಟರ್ ಗಳು, ರೋಗಿಯ ಕಡೆಯವರು ಚಪ್ಪಲಿ, ಶೂಗಳನ್ನು ಶೂ ಸ್ಟಾಂಡ್ ನಲ್ಲಿ ಬಿಟ್ಟು ಹೋಗುತ್ತಾರೆ. ಕಳೆದ 2 ತಿಂಗಳಿಂದ ಪ್ರತಿನಿತ್ಯ ಎರಡು ಜೊತೆ ಚಪ್ಪಲಿ ಅಥವಾ ಶೂಗಳ ಕಳ್ಳತನ ಮಾಡುತ್ತಿದ್ದ ಈತ ಇಂದು ಪೊಲೀಸರ ಅಥಿತಿಯಾಗಿದ್ದಾನೆ.

     

  • ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

    ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

    ಚಿಕ್ಕಬಳ್ಳಾಪುರ: ಬ್ಯಾಂಕುಗಳಿಂದ ಭಾರೀ ಮೊತ್ತದ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರ ಗಮನ ಬೇರೆ ಕಡೆಗೆ ಸೆಳೆದು ಕ್ಷಣ ಮಾತ್ರದಲ್ಲಿ ಲಕ್ಷ ಲಕ್ಷ ಎಗರಿಸುತ್ತಿದ್ದ ಖತರ್ನಾಕ್ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿಕುಪ್ಪಂ ಗ್ರಾಮದ ರಮಣ ಹಾಗೂ ಸತೀಶ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಹೀಗಿತ್ತು ಇವರ ಕೃತ್ಯ:
    ಬಂಧಿತ ಕಳ್ಳರು ಕೆಳಗೆ 10 ರೂ. ಹಾಗೂ 100 ರೂಪಾಯಿ ನೋಟು ಬಿಸಾಡಿ ನಂತರ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗ್ರಾಹಕರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದರು. ಈ ವೇಳೆ ಬೈಕ್ ಹಾಗೂ ಕಾರುಗಳಲ್ಲಿ ಇಟ್ಟಿರುತ್ತಿದ್ದ ಲಕ್ಷಾಂತರ ರೂ. ಹಣವನ್ನು ಎಗರಿಸುತ್ತಿದ್ದರು. ಅಷ್ಟೇ ಅಲ್ಲದೇ ಬೈಕ್ ಹಾಗೂ ಕಾರುಗಳನ್ನು ಫಾಲೋ ಮಾಡಿ ಸಾರ್ವಜನಿಕರನ್ನು ಯಾಮಾರಿಸಿ ಅದರಲ್ಲಿರುತ್ತಿದ್ದ ಹಣವನ್ನು ಎಗರಿಸುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ಹೊಂಡಾ ಆ್ಯಕ್ಟಿವಾದ ಡಿಕ್ಕಿಯಲ್ಲಿದ್ದ 2.40 ಲಕ್ಷ ರೂ. ಹಣ ಕದ್ದು ಪರಾರಿಯಾಗುತ್ತಿದ್ದಾಗ ಇಬ್ಬರು ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಂಧಿತರನ್ನು ವಿಚಾರಣೆ ನಡೆಸಿದಾಗ ಕಳೆದ 2 ವರ್ಷದಲ್ಲಿ ಜಿಲ್ಲೆಯಲ್ಲಿ ಎಸಗಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿದೆ. ಸತತ 6 ದಿನಗಳ ಕಾಲ ಡಿಆರ್ ಸಿಬ್ಬಂದಿ ಹಾಗೂ ಪೊಲೀಸರು ಓಜಿಕುಪ್ಪಂ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಬಂಧಿತರಿಂದ 15 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣದಲ್ಲಿ ರಾಮು, ಗಿರೀಶ್ ಎಂಬುವವರು ಕೂಡ ಪಾಲುದಾರರಾಗಿದ್ದು, ಪರಾರಿಯಾಗಿರುವ ಇಬ್ಬರಿಗೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಅಸಲಿಗೆ ಓಜಿಕುಪ್ಪಂ ಗ್ಯಾಂಗ್ ಅಂತಲೇ ಫೇಮಸ್ ಆಗಿರೋ ಈ ಗ್ಯಾಂಗ್ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ಕದಿಯೋದರಲ್ಲಿ ಎಕ್ಸ್‍ಪರ್ಟ್. ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆ ಇದೇ ರೀತಿ ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು, ಹಲವರ ಮೇಲೆ ಪ್ರಕರಣಗಳು ದಾಖಲಾಗಿದೆ.

    ಈಗಾಗಲೇ ಬಂಧಿತರು ಜೈಲಿಗೆ ಹೋಗಿ ಬಂದಿದ್ದು, ಕೆಲವರು ಜಾಮೀನು ಪಡೆದು ಹೊರ ಬಂದಿದ್ದಾರೆ. 350 ಮನೆಗಳಿರುವ ಓಜಿಕುಪ್ಪಂ ಅನ್ನೋ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಮನೆಗಳ ಸದಸ್ಯರು ಕಳ್ಳತನವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರಂತೆ. ಇನ್ನೂ ಇವರು ಕದ್ದ ಹಣದಲ್ಲಿ ಒಂದಷ್ಟು ದೇವರ ಪಾಲು ಅಂತ ದೇವರ ಕಾರ್ಯಗಳಿಗೂ ಮೀಸಲಿಡುತ್ತಿದ್ದ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಮತ್ತೆ ಕೃತ್ಯ:
    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಸ್‍ಪಿ ಕಾರ್ತಿಕ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿ, ಕಳ್ಳರ ಬಂಧನಕ್ಕೆ ಸಹಕರಿಸಿದ ಪೊಲೀಸರನ್ನ ಪ್ರಶಂಸೆ ಮಾಡಿದ ಮರುಕ್ಷಣವೇ ಜಿಲ್ಲೆಯಲ್ಲಿ ಇಂತಹದ್ದೇ ಕೃತ್ಯ ನಡೆಸುವ ಮೂಲಕ ಕಳ್ಳರು ಪೊಲೀಸರಿಗೆ ಶಾಕ್ ನೀಡಿದ್ದಾರೆ. ಗೌರಿಬಿದನೂರು ಪಟ್ಟಣದಲ್ಲಿ ಎಸ್‍ಬಿಐ ಬ್ಯಾಂಕಿನಿಂದ 50 ಸಾವಿರ ರೂ. ಹಣ ಡ್ರಾ ಮಾಡಿ ಆಕ್ಟೀವಾ ಹೊಂಡಾ ಡಿಕ್ಕಿಯಲ್ಲಿಟ್ಟುಕೊಂಡು ಮನೆ ಕಡೆ ತೆರಳುತ್ತಿದ್ದ ಮಂಜುಳಾರನ್ನು ಹಿಂಬಾಲಿಸಿದ ಖದೀಮರು ಆಕೆಯ ಗಮನ ಬೇರೆಡೆ ಸೆಳೆದು ಅಷ್ಟು ಹಣವನ್ನು ಎಗರಿಸಿದ್ದಾರೆ.

    ಮಂಜುಳಾರನ್ನು ಹಿಂಬಾಲಿಸಿದ ಕಳ್ಳರು ನಿಮ್ಮ ಬೆನ್ನ ಮೇಲೆ ಹುಳು ಇದೆ. ಹುಳು ತೆಗೆದುಬಿಡ್ತೀವಿ. ಗಲೀಜಾಗಿದೆ ತೊಳೆದುಕೊಳ್ಳಲು ನೀರು ತನ್ನ ಅಂತ ಹೋಟೆಲ್ ಕಡೆ ಕಳುಹಿಸಿ ಡಿಕ್ಕಿಯಲ್ಲಿದ್ದ 50 ಸಾವಿರ ರೂ. ಹಣ ಕಳವು ಮಾಡಿದ್ದಾರೆ. ಖತರ್ನಾಕ್ ಖದೀಮರ ಕೃತ್ಯ ಹೋಟೆಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧಿತ ಕಳ್ಳರ ಗ್ಯಾಂಗ್ ಸದಸ್ಯರೇ ಈ ಕೃತ್ಯ ನಡೆಸಿದ ಶಂಕೆ ವ್ಯಕ್ತವಾಗಿದೆ.

  • ಚಿಂದಿ ಆಯುವ ನೆಪದಲ್ಲಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚೋರಿಯರ ಬಂಧನ

    ಚಿಂದಿ ಆಯುವ ನೆಪದಲ್ಲಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚೋರಿಯರ ಬಂಧನ

    ಹಾವೇರಿ: ಚಿಂದಿ ಆಯುವ ನೆಪದಲ್ಲಿ ರಾತ್ರಿ ಹೊತ್ತು ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚಾಲಾಕಿ ಚೋರಿಯರನ್ನು ಹಾವೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಸುಮಾರು 35 ರಿಂದ 38 ವರ್ಷಗಳ ಶಿಲ್ಪಾ ಶಿಕ್ಕಲಿಗಾರ, ರೇಣುಕಾ ಅಲಿಯಾಸ್ ರೇಷ್ಮಾ ಹಾಗೂ ಗಂಗವ್ವ ಬಂಧಿತ ಆರೋಪಿಗಳು. ಆರೋಪಿಗಳಿಂದ 40 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂಲತಃ ಹುಬ್ಬಳ್ಳಿಯವರು ಆಗಿರುವ ಈ ಚೋರಿಯರು ಕ್ಲಿನಿಂಗ್ ನೆಪದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದರು. ಯಾರಿಗೂ ಅನುಮಾನ ಬರಬಾರದು ಎಂದು ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು.

    ಈ ಮೂವರು ದರೋಡೆಕೋರರು ಚಿಂದಿ ಆಯುತ್ತಾ ಬೀಗ ಹಾಕಿದ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇಬ್ಬರು ದರೋಡೆಕೋರರು ಕಾವಲಾಗಿ ನಿಲ್ಲುತ್ತಿದ್ದು, ಮತ್ತೊಬ್ಬಳು ಅಂಗಡಿಯೊಳಗೆ ಹೋಗಿ ಅಲ್ಲಿರುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದಳು.

    ದರೋಡೆ ಮಾಡುತ್ತಾ, ಓಡಾಡುತ್ತಿದ್ದ ಇವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.

  • ಹೆಲ್ಮೆಟ್ ಹಾಕಿಲ್ಲ ಎಂದು ಬೈದಿದ್ದಕ್ಕೆ ಪೊಲೀಸರ ಕಾಲರ್ ಹಿಡಿದು ಹಲ್ಲೆಗೈದ ಯುವಕರು

    ಹೆಲ್ಮೆಟ್ ಹಾಕಿಲ್ಲ ಎಂದು ಬೈದಿದ್ದಕ್ಕೆ ಪೊಲೀಸರ ಕಾಲರ್ ಹಿಡಿದು ಹಲ್ಲೆಗೈದ ಯುವಕರು

    ತುಮಕೂರು: ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರರು ಮತ್ತು ಪೊಲೀಸರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ವಿಶ್ವವಿದ್ಯಾಲಯದ ಆವರಣದ ಬಳಿ ನಡೆದಿದೆ.

    ವಿಶ್ವವಿದ್ಯಾಲಯದ ಬಳಿ ರಿಯಾಜ್ ಪಾಷಾ ಹಾಗೂ ಮಹಮ್ಮದ್ ಯೂಸೂಫ್ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಪೊಲೀಸರು ಬೈಕ್ ತಡೆದು ಲೈಸೆನ್ಸ್ ಸೇರಿದಂತೆ ಇತರ ದಾಖಲೆಗಳನ್ನು ಕೇಳಿದ್ದಾರೆ. ಆದರೆ ಯುವಕರು ದಾಖಲೆಯನ್ನು ನೀಡಲಿಲ್ಲ. ಇದರಿಂದ ಕೋಪಗೊಂಡ ಪೊಲೀಸರು ಅವಾಚ್ಯವಾಗಿ ಶಬ್ದದಿಂದ ಬೈದಿದ್ದಾರೆ.

    ಬೈದಿದ್ದಕ್ಕೆ ಇಬ್ಬರು ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಇಬ್ಬರ ನಡುವೆ ಹೊಡೆದಾಟ ಆಗಿದೆ. ಈ ಘಟನೆಯಲ್ಲಿ ಸಂಚಾರಿ ಪೂರ್ವ ಠಾಣಾ ಎಎಸ್‍ಐ ಬಸವರಾಜು ತುಟಿಗೆ ಗಾಯವಾಗಿದೆ. ಇಬ್ಬರು ಯುವಕರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಶರ್ಟ್ ಹರಿದಿದೆ.

    ಕರ್ತವ್ಯ ನಿರತ ಪೊಲೀಸರ ಮೇಲೆ ಕೈ ಮಾಡಿದ್ದಕ್ಕೆ ಕಾನೂನು ಪ್ರಕಾರ ಆರೋಪಿಗಳಿಬ್ಬರನ್ನು ಹೊಸಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

  • ದೇವಸ್ಥಾನವನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    ದೇವಸ್ಥಾನವನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    ವಿಜಯಪುರ: ಮೂರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಟು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೇವಸ್ಥಾನವನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮುದ್ದು ರಾಜ್ (41), ಬಾಗಲಕೋಟೆ ಜಿಲ್ಲೆಯ ಮಲ್ಲನಗೌಡ ಆಕೂರು (57) ಹಾಗೂ ರವಿ ಮುರನಾಳ (24) ಎಂದು ಹೇಳಲಾಗಿದೆ. ಇನ್ನೂ ಬೈಕ್ ಕಳ್ಳತನ ಮಾಡುತ್ತಿದ್ದ ವಸಂತ ಹಾಗೂ ಮಲ್ಲಿಕಾರ್ಜುನ. ಲಾರಿಗಳನ್ನೇ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರಾದ ವಿಜಯಪುರದ ಮೂಲದ ಭರತ ಅಗರವಾಲ್, ಅಬ್ದುಲ್ ರಜಾಕ್ ಮಸಳಿ ಹಾಗೂ ಬಾದಷಾ ನದಾಫ್‍ನನ್ನು ಬಂಧಿಸಲಾಗಿದೆ.

    ಬಂಧಿತರಿಂದ 43 ಲಕ್ಷ ರೂ. ನಗದು ಹಣ, 76 ಕೆಜಿ ಬೆಳ್ಳಿ ಮೂರ್ತಿ ಹಾಗೂ 417 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಬೈಕ್ ಕಳ್ಳರಿಂದ ಒಂದು ಲಕ್ಷ ರೂ. ಮೌಲ್ಯದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರು ಒಂದುವರೆ ಟನ್ ಸಕ್ಕರೆ ಹೊಂದಿದ್ದ ಲಾರಿಯನ್ನೇ ಕಳ್ಳತನ ಎಸಗಿದ್ದರು. ಅದನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.

    ಪೊಲೀಸರು ವಸ್ತುಗಳನ್ನು ಕಳೆದುಕೊಂಡಿದ್ದ ಮೂಲ ಮಾಲೀಕರುಗಳಿಗೆ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದ ಜನರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಂಧಿಸಿದ್ದ ಎಲ್ಲಾ ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

  • ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

    ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

    ಕಲಬುರಗಿ: ತಂದೆ ಮಾಡಿದ ಸಾಲಕ್ಕಾಗಿ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆರೋಪಿಗಳನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

    ಅಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಧನ್ ರಾಜ್ ಮತ್ತು ಸೀತಾರಾಂ ಬಂಧಿತ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇಟ್ಟಿಗೆ ವ್ಯಾಪಾರಿಯೊಬ್ಬರ ಬಳಿ ಕಾಶೀನಾಥ್ ಎಂಬಾತ ಕೆಲಸಕ್ಕೆ ಬರುತ್ತೇನೆ ಎಂದು 1 ಲಕ್ಷ ರೂಪಾಯಿ ಹಣ ಪಡೆದಿದನು.

    ಕೆಲಸಕ್ಕೂ ಬಾರದೇ ಹಣವನ್ನು ವಾಪಸ್ ನೀಡದ ಹಿನ್ನಲೆಯಲ್ಲಿ ಮಧ್ಯವರ್ತಿಗಳಾದ ಧನ್ ರಾಜ್ ಮತ್ತು ಸೀತಾರಾಂ ಇಬ್ಬರೂ ಸೇರಿ ಕಾಶೀನಾಥನ ಮಗ ಕುಮಾರ್ ಎಂಬ ಬಾಲಕನನ್ನು ನವೆಂಬರ್ 12 ರಂದು ಕಿಡ್ನಾಪ್ ಮಾಡಿದರು. ನಂತರ ಮಹಾರಾಷ್ಟ್ರಕ್ಕೆ ಕರೆದೊಯ್ದು ಹಣ ತಗೊಂಡು ಬಾ ಇಲ್ಲದಿದ್ದರೆ ಮಗನನ್ನು ಮುಗಿಸ್ತೇವೆ ಎಂದು ಫೋನ್ ಮಾಡಿದ್ದಾರೆ.

    ಈ ವೇಳೆ ಪ್ರಕರಣ ದಾಖಲಿಸಿಕೊಂಡ ನಿಂಬರ್ಗಾ ಪೊಲೀಸರು ಹಣ ನೀಡುವ ವೇಳೆಯಲ್ಲಿಯೇ ಆರೋಪಿಗಳನ್ನು ಬಂಧಿಸಿ ಬಾಲಕನನ್ನು ಕಾಪಾಡಿದ್ದು, ಆರೋಪಿಗಳಿಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ.

  • ಸೊಂಟ ಹಿಡಿದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ- ಕಾಮುಕನನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ರು

    ಸೊಂಟ ಹಿಡಿದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ- ಕಾಮುಕನನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ರು

    ಬೆಂಗಳೂರು: ಜಿಮ್‍ನಿಂದ ಮನೆಗೆ ತೆರಳುತ್ತಿದ್ದ ಯುವತಿಯ ಸೊಂಟ ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನ 6ನೇ ಬ್ಲಾಕ್‍ನಲ್ಲಿ ನಡೆದಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಬೇಗೂರು ನಿವಾಸಿ ನಾರಾಯಣ ಸ್ವಾಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಘಟನೆ?: ಸಂತ್ರಸ್ತೆ ಮೂಲತಃ ಕಲಬುರಗಿಯವರಾಗಿದ್ದು, ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ವಾಸವಿದ್ದಾರೆ. ನವೆಂಬರ್ 17ರಂದು ಕೆಲಸ ಮುಗಿಸಿ ರಾತ್ರಿ ಜಿಮ್‍ಗೆ ಹೋಗಿದ್ದು, ಜಿಮ್ ಮುಗಿಸಿ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕಾಮುಕರು ಬೈಕ್‍ನಲ್ಲಿ ಬಂದಿದ್ದು, ಹಿಂಬದಿಯಲ್ಲಿ ಕುಳಿತ್ತಿದ್ದವನು ಯುವತಿಯ ಸೊಂಟವನ್ನು ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ನಂತರ ಯುವತಿ ಜೋರಾಗಿ ಕೂಗಿಕೊಂಡಾಗ ತಕ್ಷಣ ಕಾಮುಕರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

    ಯುವತಿ ಕೂಗಿಗೆ ಕೂಡಲೇ ಅವರ ಸ್ನೇಹಿತರು ಬಂದಿದ್ದಾರೆ. ನಂತರ ಸುಮಾರು ಅರ್ಧ ಕಿ.ಮೀ ದೂರ ಕಾಮುಕರನ್ನು ಬೆನ್ನಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅಲ್ಲಿ ಸೇರಿದ್ದ ಸಾರ್ವಜನಿಕರು ಅವರನ್ನ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಜೊತೆಗಿದ್ದ ಇನ್ನೊಬ್ಬನ ತಪ್ಪಿಲ್ಲದ ಕಾರಣ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ಆರೋಪಿ ನಾರಾಯಣ ಸ್ವಾಮಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

  • ಒನ್‍ವೇಯಲ್ಲಿ ಫೋನ್‍ನಲ್ಲಿ ಮಾತಾಡ್ಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ

    ಒನ್‍ವೇಯಲ್ಲಿ ಫೋನ್‍ನಲ್ಲಿ ಮಾತಾಡ್ಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ

    ಬೆಂಗಳೂರು: ಒನ್ ವೇಯಲ್ಲಿ ಬರುವುದಲ್ಲದೇ ಫೋನ್‍ನಲ್ಲಿ ಕೂಡ ಮಾತಾಡಿಕೊಂಡು ಬಂದಿದ್ದನ್ನು ಪ್ರಶ್ನೆ ಮಾಡಿದ ಟ್ರಾಫಿಕ್ ಪೊಲೀಸ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಗರದ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಆರೋಪಿ ದಿಲೀಪ್ ಎಂಬಾತ ಎಚ್‍ಎಸ್‍ಅರ್ ಟ್ರಾಫಿಕ್ ಪೇದೆ ಭೀಮಶಂಕರ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಎರಡು ದಿನಗಳ ಹಿಂದೆ ಅಂದರೆ ಗುರುವಾರ ಬೆಳಿಗ್ಗೆ ಸುಮಾರು 10.30ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿ ದಿಲೀಪ್ ಸರ್ಜಾಪುರದ ಒನ್ ವೇ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ. ಅಷ್ಟೇ ಅಲ್ಲದೇ ಡ್ರೈವ್ ಮಾಡುತ್ತಿದ್ದಾಗ ಫೋನಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ನಂತರ ಟ್ರಾಫಿಕ್ ಪೊಲೀಸ್ ಭೀಮಶಂಕರ್ ಅವರು ಕಾರನ್ನು ತಡೆದು ಒನ್ ವೇಯಲ್ಲಿ, ಅದೂ ಫೋನಿನಲ್ಲಿ ಮಾತಾಡಿಕೊಂಡು ಬರುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಫೈನ್ ಹಾಕಲು ಮುಂದಾಗಿದ್ದಾರೆ. ಇದರಿಂದ ಕೋಪಕೊಂಡ ದಿಲೀಪ್ ತನ್ನ ಕಾರಿನಲ್ಲಿದ್ದ ಬೇಸ್‍ಬಾಲ್ ಬ್ಯಾಟ್ ತಂದು “ನನಗೆ ಫೈನ್ ಹಾಕ್ತೀಯಾ” ಎಂದು ಕರ್ತವ್ಯ ನಿರತ ಪೊಲೀಸ್ ಗೆ ಹೊಡೆದಿದ್ದಾನೆ.

    ಈ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

  • ಸಿಹಿತಿಂಡಿ ಆಸೆ ತೋರಿಸಿ 5ನೇ ಕ್ಲಾಸ್ ಬಾಲಕಿ ಮೇಲೆ ಗ್ಯಾಂಗ್‍ರೇಪ್!

    ಸಿಹಿತಿಂಡಿ ಆಸೆ ತೋರಿಸಿ 5ನೇ ಕ್ಲಾಸ್ ಬಾಲಕಿ ಮೇಲೆ ಗ್ಯಾಂಗ್‍ರೇಪ್!

    ಭೋಪಾಲ್: 10 ವರ್ಷದ ಬಾಲಕಿಯ ಮೇಲೆ 65 ವರ್ಷದ ಸೆಕ್ಯೂರಿಟಿ ಗಾರ್ಡ್ ಮತ್ತು ಇತರೆ ಇಬ್ಬರು ಸೇರಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸಂತ್ರಸ್ತೆ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಮೇಲೆ ಮೂರು ತಿಂಗಳಲ್ಲಿ 2-3 ಬಾರಿ ಅತ್ಯಾಚಾರ ನೆಡೆದಿದೆ. ಕೊನೆಯ ಬಾರಿ ನವೆಂಬರ್ 12 ರಂದು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಜೆಹಾಂಗಿರಬಾದ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರೀತಂ ಸಿಂಗ್ ಥಾಕೂರ್ ಅವರು ಹೇಳಿದರು.

    ಸೆಕ್ಯೂರಿಟಿ ಗಾರ್ಡ್ ನನ್ಹು ಲಾಲ್, ಪಾನ್ ಅಂಗಡಿ ಇಟ್ಟುಕೊಂಡಿರೋ ಗೋಕುಲ್ ಪನ್ವಾಲಾ (45) ಮತ್ತು ಚಾಲಕ ಜ್ಞಾನೇಂದ್ರ ಪಂಡಿತ್ (36) ಬಂಧಿತ ಆರೋಪಿಗಳು. ಇವರೆಲ್ಲರೂ ಸುಮನ್ ಪಾಂಡೆ (50) ಎಂಬುವನ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸುಮನ್ ಪಾಂಡೆಯನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿ ಮೌನವಾಗಿ ಇರುತ್ತಿದ್ದಳು. ಇದನ್ನು ಗಮನಿಸಿದ ತಾಯಿ ಮಗಳನ್ನು ವಿಚಾರಿಸಿದ್ದಾರೆ. ಬಾಲಕಿ ಮೊದಲಿಗೆ ಯಾವುದೇ ವಿಚಾರವನ್ನು ತಿಳಿಸಿರಲಿಲ್ಲ. ಆದ್ರೆ ನಂತರ ನಡೆದ ಎಲ್ಲಾ ಸಂಗತಿಯನ್ನು ವಿವರಿಸಿದ್ದಾಳೆ. ನಂತರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಆರೋಪಿಗಳು ಸಂತ್ರಸ್ತೆ ಇದ್ದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಪಾಂಡೇ ಬಾಲಕಿಗೆ ಸಿಹಿತಿಂಡಿಯ ಆಸೆಯನ್ನು ತೋರಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ವಿಷಯವನ್ನ ಯಾರಿಗಾದ್ರೂ ಹೇಳಿದ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬಾಲಕಿಗೆ ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 367 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಥಾಕೂರ್ ಅವರು ತಿಳಿಸಿದರು.

     

     

  • ಮನೆ ಬಾಡಿಗೆಗೆ ಬಂದು ವಾಮಾಚಾರ – ಮಾಟ ತೆಗೆಸ್ತೀವೆಂದು 46 ಲಕ್ಷ ಪೀಕಿದ ಖದೀಮ ಜೋಡಿ

    ಮನೆ ಬಾಡಿಗೆಗೆ ಬಂದು ವಾಮಾಚಾರ – ಮಾಟ ತೆಗೆಸ್ತೀವೆಂದು 46 ಲಕ್ಷ ಪೀಕಿದ ಖದೀಮ ಜೋಡಿ

    ಚಿಕ್ಕಮಗಳೂರು: ಮನೆ ಬಾಡಿಗೆಗೆ ಬಂದ ಜೋಡಿ ಮನೆ ಮಾಲೀಕರಿಂದಲೇ 46 ಲಕ್ಷ ರುಪಾಯಿ ವಸೂಲಿ ಮಾಡಿದ ಘಟನೆ ಚಿಕ್ಕಮಗಳೂರಿನ ಶಂಕರಪುರದಲ್ಲಿ ನಡೆದಿದೆ.

    ಅಜೀಜ್ ಹಾಗು ಜ್ಯೋತಿ ಅನ್ನೋರು ಲಿವಿಂಗ್ ಟುಗೆದರ್ ರಿಲೇಷನ್‍ಶಿಪ್ ಇಟ್ಕೊಂಡಿದ್ದು, ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದೀವಿ ಅಂತ ಹೇಳಿ ರೇಣುಕಮ್ಮ ಅನ್ನೋರ ಮನೆಗೆ ಬಾಡಿಗೆಗೆ ಬಂದ್ರು. ಆದ್ರೆ ರೇಣುಕಮ್ಮನವರ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಖತರ್ನಾಕ್ ಜೋಡಿ ನಿಮ್ಮ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದಕ್ಕೆ ಅವರು ಸತ್ತು ಹೋದ್ರು ಎಂದೆಲ್ಲಾ ಹೇಳಿದ್ದರು.

    ನಿಮಗೂ, ನಿಮ್ಮ ಮಕ್ಕಳಿಗೂ ಮಾಟ-ಮಂತ್ರ ಮಾಡಿಸಿದ್ದಾರೆ. ಆಂಧ್ರದಲ್ಲಿ ಪವರ್‍ಫುಲ್ ಸ್ವಾಮೀಜಿ ಹತ್ರ ಹೋದ್ರೆ ನಿಮ್ಮ ಕಷ್ಟವೆಲ್ಲಾ ಬಗೆಹರಿಯುತ್ತೆ ಅಂತ ಹೇಳಿ 46 ಲಕ್ಷ ಹಣ ಕಿತ್ತಿದ್ದರು.

    ಕೊನೆಗೆ ಸಿಸಿಟಿವಿ ಪರಿಶೀಲಿಸಿದಾಗ ಇವರೇ ಆ ಕೆಲಸ ಮಾಡಿರೋದು ಗೊತ್ತಾಗಿದೆ. ಈ ನಯವಂಚಕರ ಬಗ್ಗೆ ಗೊತ್ತಾಗ್ತಿದ್ದಂತೆ ರೇಣುಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.