Tag: arrest

  • ಯುವತಿಯರನ್ನು ಚುಡಾಯಿಸಲು ಹೋಗಿ ಸಿಕ್ಕಿ ಬಿದ್ರು ಆರು ಯುವಕರು

    ಯುವತಿಯರನ್ನು ಚುಡಾಯಿಸಲು ಹೋಗಿ ಸಿಕ್ಕಿ ಬಿದ್ರು ಆರು ಯುವಕರು

    ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಆರು ಜನ ಯುವಕರನ್ನು ನಗರದ ಬೆಂಡಿಗೇರಿ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಮೊಹಮ್ಮದ್ ಗೌಸ್ ಧಾರವಾಡ, ಸೊಹೇಲ್ ಅಹ್ಮದ್, ಅಖ್ತರ್ ರಜಾ ಶಿವಳ್ಳಿ, ದಾವಲಸಾಬ್, ರಿಜ್ವಾನ್, ಅಲ್ತಾಫ್ ಮಿಶ್ರಿಕೋಟಿ ಬಂಧಿತ ಯುವಕರು.

    ಬಂಧಿತ ಯುವಕರು ನಗರದಾದ್ಯಂತ ಸುತ್ತುತ್ತ ಕಾಲೇಜು, ಶಾಪಿಂಗ್ ಮಾಲ್ ಗಳಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ರಸ್ತೆ ವ್ಹೀಲಿಂಗ್ ಮಾಡುತ್ತ, ಚೀರಾಡುತ್ತಲೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೀಗಾಗಿ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಆರೋಪಿಗಳು ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗುತ್ತಿದ್ದರು.

    ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಡಿಸಿಪಿ ರೇಣುಕಾ ಸುಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಬುಧವಾರ ಮಫ್ತಿ ವೇಷದಲ್ಲಿ ಮಹಿಳಾ ಪೊಲೀಸರು ನೆಹರೂ ಕಾಲೇಜು ಬಳಿ ಹೋಗಿದ್ದರು. ಈ ವೇಳೆ ಕಾಲೇಜಿನ ಹೊರಗೆ ನಿಂತಿದ್ದ 6 ಜನ ಆರೋಪಿಗಳು ಯುವತಿಯರನ್ನು ಚುಡಾಯಿಸುತ್ತಿದ್ದರು. ತಕ್ಷಣವೇ ಅವರನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

  • ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ರಾಂಚಿ: ಮಾನಸಿಕ ಅಸ್ವಸ್ಥನೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿ, ಪೊಲೀಸರು ಹಾಗೂ ಜನರಿಂದ ತಪ್ಪಿಸಿಕೊಳ್ಳಲು ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುಮಾರು 5 ಕಿ.ಮೀ. ಓಡಿರುವ ಘಟನೆ ಜಾರ್ಖಂಡ್ ನ ಸೆರೈಕೆಲಾ- ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಹರಿ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. 30 ವರ್ಷದ ಸುಕ್ರ ಹೆಸಾ ಮೃತ ಶಿಕ್ಷಕಿ. ಸುಕ್ರ ಹೆಸಾ ಅವರು ಖಪ್ರಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ನಡೆದಿದ್ದೇನು?:
    ಆರೋಪಿ ಹರಿ ಶಾಲೆಯ ಹತ್ತಿರದಲ್ಲಿ ಒಬ್ಬನೇ ವಾಸವಾಗಿದ್ದನು. ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಊಟ ಬಡಿಸುವ ವೇಳೆ ಹರಿ ಏಕಾಏಕಿ ದಾಳಿ ಮಾಡಿ ಕತ್ತಿಯಿಂದ ಅವರ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಶಿಕ್ಷಕಿಯ ತಲೆ ಹಿಡಿದುಕೊಂಡು ಕಾಡಿನೊಳಗೆ ಓಡಿಹೋಗಿದ್ದ ಎಂದು ಸೆರೈಕೆಲಾ ಉಪ-ವಿಭಾಗಿಯ ಪೊಲೀಸ್ ಅಧಿಕಾರಿ (ಎಸ್‍ಡಿಪಿಓ) ಅವಿನಾಶ್ ಕುಮಾರ್ ಹೇಳಿದ್ದಾರೆ.

    ಆರೋಪಿಯನ್ನು ಪೊಲೀಸರು ಬೆನ್ನೆಟ್ಟಿ ಹೋಗಿದ್ದು, ಸತತ ಎರಡು ಗಂಟೆಗಳ ಕಾಲ ಕಾಡಿನಲ್ಲಿ ಹುಡುಕಾಡಿದ ನಂತರ ಆರೋಪಿ ಹರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಥಳೀಯರು ಹರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜನರಿಂದ ಆತನನ್ನು ಕಾಪಾಡಿ ಬಂಧಿಸುವ ಸಂದರ್ಭದಲ್ಲಿ ಸೆರೈಕೆಲಾ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಸೇರಿ ನಾಲ್ಕು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ ಎಂದು ಎಸ್‍ಡಿಪಿಓ ಹೇಳಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳದಲ್ಲಿ ಆರೋಪಿಯು ಶಿಕ್ಷಕಿಯನ್ನು ಕೊಲೆ ಮಾಡಿ, ಮೃತದೇಹದ ತಲೆಯನ್ನು ಕೈಯಲ್ಲಿ ಹಿಡಿದು ಕುಳಿತ್ತಿದ್ದನು. ಅವನ ಸುತ್ತ ಸ್ಥಳೀಯರು ನಿಂತಿದ್ದರು. ಆದರೆ ಆರೋಪಿ ಬಳಿ 2 ಕತ್ತಿ ಇದ್ದಿದ್ದರಿಂದ ಯಾರು ಕೂಡ ಆರೋಪಿಯ ಬಳಿ ಹೋಗಲು ಪ್ರಯತ್ನಿಸಲಿಲ್ಲ. ಪೊಲೀಸರು ಹರಿಯನ್ನು ಘಟನಾ ಸ್ಥಳದಲ್ಲೇ ಬಂಧಿಸಲು ಪ್ರಯತ್ನಿಸಿದರೂ ಸ್ಥಳದಲ್ಲಿ ಬಹಳ ಜನರು ನೆರೆದಿದ್ದ ಕಾರಣಕ್ಕೆ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಆಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

    ಸ್ಥಳೀಯರು ಹರಿಯನ್ನು ಕಲ್ಲಿನಿಂದ ಹೊಡೆಯಲು ಆರಂಭಿಸಿದಾಗ ಆತ ಶಾಲೆಯಿಂದ ಸುಮಾರು 5 ಕಿ.ಮೀ ದೂರದ ಹೆಸೆಲ್ ಎಂಬ ಹಳ್ಳಿಯ ಕಾಡಿಗೆ ತಪ್ಪಿಸಿಕೊಂಡು ಓಡಿಹೋಗಿದ್ದ. ನಂತರ ಪೊಲೀಸರು ಕಷ್ಟಪಟ್ಟು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಸಿಂಗ್ ಅವರು ತಿಳಿಸಿದರು.

    ಈ ಘಟನೆಯಿಂದ ಆರೋಪಿ ಹರಿ ಗಾಯಗೊಂಡಿದ್ದು, ಆತನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಜೆಮೆಶೆಡ್‍ಪುರ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ಆಡಳಿತ ಸಿಬ್ಬಂದಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಪುರಾತನ ಮೂರ್ತಿಗಳೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಗಳ ಬಂಧನ!

    ಪುರಾತನ ಮೂರ್ತಿಗಳೆಂದು ನಂಬಿಸಿ ವಂಚಿಸುತ್ತಿದ್ದ ಆರೋಪಿಗಳ ಬಂಧನ!

    ಹುಬ್ಬಳ್ಳಿ: ಪುರಾತನ ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಐಶ್ವರ್ಯ ದೊರೆಯುತ್ತದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಗರದ ನಿವಾಸಿಗಳಾದ ನಿರುಪಾದಿ ಸಮಳಾಪೂರ, ಕುಂದಗೋಳದ ಹೈದರ್ ಅಲಿ ಭಾವಿಕಟ್ಟಿ ಹಾಗೂ ರಸೂಲ್ ಮಿಯಾ ಮುಲ್ಲಾ ಬಂಧಿತ ಆರೋಪಿಗಳು. ಇವರು ನಮ್ಮಲ್ಲಿ ಪುರಾತನ ಕಾಲದ ಮೂರ್ತಿಗಳು ಇವೆ. ಇವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಿದರೆ ನಿಮಗೆ ಇಷ್ಟಾರ್ಥ ಸಿದ್ಧಿ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಗ್ರಾಹಕರನ್ನು ನಂಬಿಸಿ ವಂಚಿಸುತ್ತಿದ್ದರು. ಇವರ ಮಾತಿಗೆ ಗ್ರಾಹಕರು ಮರುಳಾಗಿ ಲಕ್ಷಾಂತರ ರೂಪಾಯಿ ನೀಡಿ ಕಂಚಿನ ಮೂರ್ತಿಗಳನ್ನು ಪಡೆದುಕೊಂಡಿದ್ದಾರೆ.

    ಆರೋಪಿಗಳು ಮಾರುತ್ತಿದ್ದ ಮೂರ್ತಿಗಳು ಕಂಚಿನ ಮೂರ್ತಿಗಳಾಗಿದ್ದು, ಯಾವುದು ಪುರಾತನ ಮೂರ್ತಿಗಳಲ್ಲ ಎಂದು ವಂಚನೆಗೊಳಗಾದ ಜನರು ಪೊಲೀಸರಿಗೆ ದೂರು ನೀಡಿದ್ದರು. ನಗರದಲ್ಲಿ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ದೂರು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಒಂದು ಆಟೋ ಮತ್ತು ಎರಡು ಕಂಚಿನ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

  • ಶಾಸಕ ಆನಂದಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ಬಂಧನ

    ಶಾಸಕ ಆನಂದಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ಬಂಧನ

    ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀನಿವಾಸ್ ಕಳೆದ ಹಲವಾರು ದಿನಗಳಿಂದ ಶಾಸಕ ಆನಂದಸಿಂಗ್ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದನು. ಆನಂದಸಿಂಗ್ ಕೇವಲ ಮುಸ್ಲಿಂ ಸಮುದಾಯದ ಜನರ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ ಅಂತಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುತ್ತಿದ್ದನು. ಹೀಗಾಗಿ ಆರೋಪಿ ಶ್ರೀನಿವಾಸ್ ವಿರುದ್ಧ ಆನಂದ್ ಸಿಂಗ್ ಸಂಬಂಧಿ ಸಂದೀಪ್ ಸಿಂಗ್  ದೂರು ದಾಖಲು ಮಾಡಿದ್ದರು.

    ದೂರಿನ ಆಧಾರದ ಮೇರೆಗೆ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಆರೋಪಿ ಶ್ರೀನಿವಾಸ್ ಆನಂದ್ ಸಿಂಗ್ ವಿರುದ್ಧ ಮಾಡಿದ ಪೋಸ್ಟ್ ಗೆ ಹಲವರು ಪರ ಹಾಗೂ ವಿರೋಧವಾಗಿ ಕಮೆಂಟ್ ಮಾಡಿದ್ದವರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.

    ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಲಿವುಡ್ ನಟ ಆರ್ಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!

    ಕಾಲಿವುಡ್ ನಟ ಆರ್ಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!

    ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಆರ್ಯ ವಿರುದ್ಧ ತಿರುನೆಲ್ವೆಲಿಯಲ್ಲಿರುವ ಅಂಬಸಮುದ್ರಂ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

    ಆರ್ಯ 2011ರಲ್ಲಿ ನಟಿಸಿದ ‘ಅವನ್ ಇವನ್’ ಚಿತ್ರ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿತ್ತು. ಅವನ್ ಇವನ್ ಚಿತ್ರದಲ್ಲಿ ನಟ ಆರ್ಯ ಹಾಗೂ ನಟ ವಿಶಾಲ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.

    ಬಾಲ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಸಿಂಗಮತ್ತಿ ಜಮೀನ್ ಅವರ ಬಗ್ಗೆ ತಪ್ಪಾಗಿ ತೋರಿಸಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ಆರ್ಯ ಹಾಗೂ ನಿರ್ದೇಶಕ ಬಾಲ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.

    ಈ ಮೊಕದ್ದಮೆಗೆ ಸಂಬಂಧಿಸಿದಂತೆ ತಿರುನೆಲ್ವೆಲಿಯ ಅಂಬಸಮುದ್ರಂ ಕೋರ್ಟ್ ವಿಚಾರಣೆ ಹಾಜರಾಗುವಂತೆ ಆರ್ಯ ಮತ್ತು ಬಾಲಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದರೂ ಇವರಿಬ್ಬರು ವಿಚಾರಣೆಗೆ ಗೈರಾಗಿದ್ದರು.

    ಸಾಕಷ್ಟು ಬಾರಿ ವಿಚಾರಣೆ ಗೈರು ಹಾಜರಿ ಹಾಕಿದ್ದಕ್ಕೆ ಕೋರ್ಟ್ ಇವರಿಬ್ಬರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಜುಲೈ 13 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಯಲಿದೆ.

  • ಖೋಟಾ ನೋಟು ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ ಖದೀಮರು!

    ಖೋಟಾ ನೋಟು ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ ಖದೀಮರು!

    ರಾಯಚೂರು: ಜಿಲ್ಲೆಯ ದೇವದುರ್ಗ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಖೋಟಾ ನೋಟು ಖದೀಮರು ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.

    ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಖೋಟಾ ನೋಟುಗಳನ್ನು ಹಂಚಿರುವ ಬಗ್ಗೆ ಇದ್ದ ಅನುಮಾನಗಳಿಗೆ ಪುಷ್ಟಿ ಸಿಕ್ಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಖೋಟಾ ನೋಟು ಜಾಲದಲ್ಲಿ ಸಿಲುಕಿದ್ದಾರೆ.

    ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಬೇರು ಬಿಟ್ಟಿದ್ದು, ಚುನಾವಣಾ ವೇಳೆ ದೇವದುರ್ಗದ ಜಾಲಹಳ್ಳಿಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು.

    ಈಗ ಬಂಧಿತರಾಗಿರುವ ಅಯ್ಯಾಳಪ್ಪ, ಪ್ರಕಾಶ್, ಶ್ರೀನಿವಾಸರೆಡ್ಡಿ, ಹನುಮಂತ, ಬಸವ ಹಾಗೂ ರಾಮಕೃಷ್ಣ ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಬೆಲೆಯ 500 ಹಾಗೂ 2000 ರೂಪಾಯಿ ಖೋಟಾ ನೋಟು ಜಪ್ತಿ ಮಾಡಲಾಗಿದೆ.

    ಸದ್ಯ ವಿಚಾರಣೆ ಇನ್ನೂ ಮುಂದುವರೆದಿದ್ದು ಪೊಲೀಸರು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ.

  • ಸ್ನೇಹಿತೆ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯ ಬಂಧನ!

    ಸ್ನೇಹಿತೆ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯ ಬಂಧನ!

    ಬೆಂಗಳೂರು: ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಮಹೇಂದ್ರ ಕುಮಾರ್ ಬಂಧಿತ ಆರೋಪಿ. ಜೂನ್ 10ರಂದು ಮಹೇಂದ್ರ ಲಾಡ್ಜ್ ಗೆ ಹೋಗಿ ಯುವಕನನ್ನು ಬೆದರಿಸಿದ್ದನು.

    ಯುವಕನೊಬ್ಬ ತನ್ನ ಸ್ನೇಹಿತೆ ಜೊತೆಗೆ ಲಾಡ್ಜ್ ಗೆ ಹೋಗಿದ್ದ. ಆಗ ಮಹೇಂದ್ರ ಮಧ್ಯರಾತ್ರಿ ಲಾಡ್ಜ್ ರೂಮ್‍ಗೆ ಹೋಗಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಲಾಡ್ಜ್ ರೂಮ್‍ನಲ್ಲಿ ಏನ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿ, ನಿಮ್ಮ ವಿಡಿಯೋಗಳು ಸಹ ನಮ್ಮ ಬಳಿ ಇದೆ ಎಂದು ಹೇಳಿ 50 ಸಾವಿರ ರೂ. ಹಣದ ಬೇಡಿಕೆ ಇಟ್ಟನು. ಹಣ ನೀಡಿಲ್ಲ ಎಂದರೆ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕುತ್ತೇನೆ ಎಂದು ಬೆದರಿಸಿದ್ದಾನೆ.

    ಕೊನೆಗೆ ದೂರುದಾರ ಯುವಕ ಹಣ ಕೊಡಲು ಒಪ್ಪಿಕೊಂಡನು. ಬಳಿಕ ಮಹೇಂದ್ರ ಯುವಕನನ್ನು ಕಾರಿನಲ್ಲಿ ಎಟಿಎಂಗೆ ಕರೆದುಕೊಂಡು ಹೋಗಿ 20 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದನು. ಹಣ ಪಡೆದ ಬಳಿಕ ಮಹೇಂದ್ರ ಯುವಕನನ್ನು ಕೆಆರ್ ಪುರಂ ಬಳಿ ಬಿಟ್ಟು ಹೋಗಿದ್ದಾನೆ.

    ಇದಾದ ಬಳಿಕ ಮಹೇಂದ್ರ ಮತ್ತೆ ಯುವಕನ ಮೊಬೈಲ್‍ಗೆ ಕರೆ ಮಾಡಿ ಉಳಿದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಯುವಕ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜೈ ಭಾರತ್ ಸಂಘ ಎನ್ನುವ ಸಂಘಟನೆ ಮಾಡಿಕೊಂಡಿದ್ದನೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಆರೋಪಿ ಇದೇ ರೀತಿ ಕೃತ್ಯ ಎಸಗುತ್ತಿದ್ದನು. ಆದರೆ ನೊಂದವರು ಮಾನಕ್ಕೆ ಹೆದರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಈಗ ಅಂತಿಮವಾಗಿ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.

  • ಫುಡ್ ಡೆಲೆವರಿ ಬಾಯ್ಸ್ ಕೈಗೆ ಸಿಕ್ಕಿ ಬಿದ್ರು ದರೋಡೆಕೋರರು!

    ಫುಡ್ ಡೆಲೆವರಿ ಬಾಯ್ಸ್ ಕೈಗೆ ಸಿಕ್ಕಿ ಬಿದ್ರು ದರೋಡೆಕೋರರು!

    ಬೆಂಗಳೂರು: ಗ್ರಾಹಕರಂತೆ ಫುಡ್ ಆರ್ಡರ್ ಮಾಡಿ, ದರೋಡೆ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಫುಡ್ ಡೆಲಿವರಿ ಬಾಯ್ಸ್ ತಂಡವೊಂದು ಗುರುವಾರ ರಾತ್ರಿ ಸೆರೆ ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ಶೇಷಾದ್ರಿಪುರಂನಲ್ಲಿ ನಡೆದಿದೆ.

    ಬುಧವಾರ ರಾತ್ರಿ ಊಟ ಬುಕ್ ಮಾಡಿ ಮಲ್ಲೇಶ್ವರಂಗೆ ತಂದುಕೊಡುವಂತೆ ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದ. ರಾಜಾಜಿನಗರದ ಫುಡ್ ಕೋರ್ಟ್ ನಿಂದ ಮುಬಾರಕ್ ಎನ್ನುವವರು ಊಟವನ್ನು ಬೈಕಿನಲ್ಲಿ ತಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಐದು ಜನ ಮುಬಾರಕ್ ಅವರಿಗೆ ಅಡ್ಡಗಟ್ಟಿ, ಚಾಕು ಇರಿದು, ಮೊಬೈಲ್ ಹಾಗೂ ಹಣ ದರೋಡೆ ಮಾಡಿದ್ದರು.

    ಘಟನೆಯಿಂದಾಗಿ ಫುಡ್ ಡೆಲಿವರಿ ಬಾಯ್ಸ್ ಜಾಗೃತಗೊಂಡಿದ್ದು, ಗುರುವಾರ ರಾತ್ರಿಯೂ ಇಂತಹದ್ದೇ ಕರೆ ಬಂದಿತ್ತು. ಹೀಗಾಗಿ ಒಬ್ಬ ಹುಡುಗನನ್ನು ಮುಂದೆ ಕಳುಹಿಸಿ, ಹಿಂದೆ ತಂಡವಾಗಿ ಹುಡುಗರು ಹೋಗಿದ್ದರು. ದಾರಿಯಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ಹುಡುಗನಿಂದ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದಂತೆ, ಎಲ್ಲ ಹುಡುಗರು ದರೋಡೆಕೋರರನ್ನು ಸೆರೆ ಹಿಡಿದು ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಲಿಕಾನ್ ಸಿಟಿಯಲ್ಲಿ ಗೌರಿ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್ ಸೆರೆ

    ಸಿಲಿಕಾನ್ ಸಿಟಿಯಲ್ಲಿ ಗೌರಿ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್ ಸೆರೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಈಗಾಗಲೇ ಹಂತಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೌರಿ ಹತ್ಯೆ ನಡೆಯುವ ಮೊದಲೇ ಆರೋಪಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂಬುವುದು ತಿಳಿದಿದೆ. ಈಗ ಗೌರಿ ಲಂಕೇಶ್ ಹಂತಕರ ಮಾದರಿಯ ಮತ್ತೊಂದು ಗ್ಯಾಂಗ್‍ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಶಾಭಾಜ್ ಖಾನ್, ಫೊಕಾರಂ, ನಿತಿನ್ ಶರ್ಮ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದಿದ್ದ ಈ ಗ್ಯಾಂಗ್, ಮೇ 21ರಂದು ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮಸೂದ್ ಅಲಿ ಎಂಬವರನ್ನು ಗುಂಡಿಟ್ಟು ಕೊಂದಿದ್ದರು.

    ಆರೋಪಿಗಳು ವೈಟ್ ಫೀಲ್ಡ್ ನಲ್ಲಿ ಎರಡು ದಿನಗಳ ಮೊದಲೇ ಶೂಟಿಂಗ್ ಪ್ರಾಕ್ಟೀಸ್ ಮಾಡಿದ್ದರು. ನಂತರ ಬೈಕಿನಲ್ಲಿ ಕಾರನ್ನು ಫಾಲೋ ಮಾಡಿದ್ದ ಕಿಡಿಗೇಡಿಗಳು ಎರಡು ಬಾರಿ ಗುದ್ದಿ, ಬಳಿಕ ಗುಂಡು ಹಾರಿಸಿ ಪರಾರಿಯಾಗಿದ್ದರು.

    ಆರೋಪಿಗಳ ಸೆರೆಗೆ ಮಾರುವೇಷದಲ್ಲಿ ಫೀಲ್ಡ್ ಗಿಳಿದ ಪುಲಿಕೇಶಿನಗರ ಠಾಣೆ ಪೊಲೀಸರು, 2 ದಿನ ಜಿಮ್‍ನಲ್ಲಿ ವರ್ಕೌಟ್ ಮಾಡಿ, ಅಂಗಡಿಯಲ್ಲಿ ಕೆಲಸ ಮಾಡಿದ್ದರು. ಕೊನೆಗೆ ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಆರೋಪಿಗಳನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯ ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 11 ಆರೋಪಿಗಳ ಬಂಧನ – 4.46 ಲಕ್ಷ ಹಣ, 34 ಲಕ್ಷ ಬೆಲೆ ಬಾಳುವ 3 ಕಾರ್, 2 ಬೈಕ್, 11 ಮೊಬೈಲ್ ವಶ

    11 ಆರೋಪಿಗಳ ಬಂಧನ – 4.46 ಲಕ್ಷ ಹಣ, 34 ಲಕ್ಷ ಬೆಲೆ ಬಾಳುವ 3 ಕಾರ್, 2 ಬೈಕ್, 11 ಮೊಬೈಲ್ ವಶ

    ತುಮಕೂರು: ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯಶನೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ ಅವರನ್ನು ಅಡ್ಡಗಟ್ಟಿ 13 ಲಕ್ಷ ಹಣ ದರೋಡೆ ಮಾಡಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೀಪು, ವೆಂಕಟೇಶ್, ಶಿವು, ಸಾಗರ್, ಹೇಮಂತ್, ನಿತಿನ್, ವಿನಯ್, ಜಗದೀಶ್, ಭರತ್, ಸಂತೋಷ ಮತ್ತು ನಂದೀಶ್ ಬಂಧಿತ ಆರೋಪಿಗಳು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ದರೋಡೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಆರೋಪಿ ಮಡಕೆಹಳ್ಳಿ ಗ್ರಾಮದ ದೀಪು ಎಂದು ತಿಳಿದುಬಂದಿದೆ.

    ಬಂಧಿತ ಆರೋಪಿಗಳಿಂದ 4.46 ಲಕ್ಷ ರೂ. ಹಣ, 34 ಲಕ್ಷ ರೂ. ಬೆಲೆಬಾಳುವ ಮೂರು ಕಾರು, ಎರಡು ಬೈಕ್ ಮತ್ತು 11 ಮೊಬೈಲ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ದೀಪು ಕುಣಿಗಲ್ ನಿವಾಸಿಯಾಗಿದ್ದು, ಉಳಿದ ಆರೋಪಿಗಳು ಬೆಂಗಳೂರಿನ ಕೊಳಚೆ ಪ್ರದೇಶ ನಿವಾಸಿಗಳಾಗಿದ್ದಾರೆ.

    ದೋಚಿದ ಹಣವನ್ನು ಆರೋಪಿಗಳು ಹಂಚಿಕೆ ಮಾಡಿಕೊಂಡಿದ್ದಾರೆ. ಕೆಲವರು ಬ್ಯಾಂಕ್ ಸಾಲ ಕಟ್ಟಿದ್ದಾರೆ. ಮತ್ತೆ ಕೆಲವರು ಗೋವಾ ಪ್ರವಾಸಕ್ಕೆ ಹೋಗಿ ಮೋಜು ಮಾಡಿ ಲಕ್ಷಾಂತರ ಹಣ ಕಳೆದಿದ್ದಾರೆ. ಜೂನ್ 9 ರಂದು ರಾತ್ರಿ ಧನಂಜಯಸ್ವಾಮಿ ಆರೋಪಿಗಳು ಪೂಜೆ ಮಾಡಿಸುವ ನೆಪದಲ್ಲಿ ಕಾರು ಅಡ್ಡಗಟ್ಟಿದ್ದರು. ಬಳಿಕ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣದೊಂದಿಗೆ ಕಾರು ಅಪಹರಿಸಿದ್ದರು.