ಲಾಹೋರ್: ಪನಾಮಾ ಪೇಪರ್ಸ್ ಹಗರಣದಲ್ಲಿ 7 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಲಂಡನ್‍ನಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಏರ್ ಫೋರ್ಟ್‍ನಲ್ಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.
ಲಂಡನ್ ನಿಂದ ಲಾಹೋರ್ ಗೆ ಶುಕ್ರವಾರ ಸಂಜೆ ವೇಳಗೆ ನವಾಜ್ ಷರೀಫ್ ಪುತ್ರಿ ಮಾರಿಯಾಮ್ ಜೊತೆ ಆಗಮಿಸುತ್ತಿದ್ದು, ಈ ವೇಳೆ ಸ್ವಾಗರ ಕೋರಿ ಬೆಂಬಲಿಗರು ಮೆರವಣಿಗೆ ನಡೆಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿದೆ. ಭದ್ರತೆಗೆ 10 ಸಾವಿರ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಂಧನದ ಬಳಿಕ ಹೆಲಿಕಾಪ್ಟರ್ ಮೂಲಕ ಇಸ್ಲಾಮಾಬಾದ್ ನ ಅದೀಲಾ ಜೈಲಿಗೆ ಕರೆದ್ಯೊಯುವ ಸಾಧ್ಯತೆ ಇದೆ.
ಪಾಕಿಸ್ತಾನ ಸುಪ್ರೀಂಕೋರ್ಟ್ ನವಾಜ್ ಷರೀಫ್ ದೋಷಿ ಎಂದು 2017ರ ಜುಲೈ 28 ರಂದು ತೀರ್ಪು ನೀಡಿತ್ತು. ಅಲ್ಲದೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನವಾಜ್ ಷರೀಫ್ ಅರ್ಹರಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಬಳಿಕ ಈ ವೇಳೆ ಶರೀಫ್ ತಮ್ಮ ಹುದ್ದೆ ತೋರೆದು ಅನಾರೋಗ್ಯದ ಕಾರಣ ಕೆಲ ದಿನಗಳ ಹಿಂದೆ ಲಂಡನ್ ಗೆ ತೆರಳಿದ್ದರು.
2017ರ ಜುಲೈನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ನವಾಜ್ ಷರೀಫ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ನಂತರ ಕಳೆದ ವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಲಂಡನ್‍ನಲ್ಲಿ ಐಷಾರಾಮಿ ಬಂಗಲೆ ಸೇರಿದಂತೆ ಅಕ್ರಮ ಆಸ್ತಿ ಖರೀದಿಸಿದ್ದ ಆರೋಪದ ಮೇರೆಗೆ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ ಮತ್ತು ಪನಾಮ ಹಗರಣದಲ್ಲಿ ಪುತ್ರಿ ಮರಿಯಮ್ ನವಾಜ್‍ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಏನಿದು ಪ್ರಕರಣ?
ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ವಾದಿಸಿದ್ದರು.
ಏನಿದು ಪನಾಮ ಪೇಪರ್ ಕೇಸ್?
ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು `ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.