Tag: arrest

  • ಕುರಿ ಕಳ್ಳರ ಬಂಧನ-ಎಂಟೂವರೆ ಲಕ್ಷ ಮೌಲ್ಯದ 150 ಕುರಿಗಳು ವಶ

    ಕುರಿ ಕಳ್ಳರ ಬಂಧನ-ಎಂಟೂವರೆ ಲಕ್ಷ ಮೌಲ್ಯದ 150 ಕುರಿಗಳು ವಶ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿಯಲ್ಲಿ ಕುರಿಗಳನ್ನು ಕದಿಯುತ್ತಿದ್ದ ಐವರು ಕಳ್ಳರನ್ನ ಬಂಧಿಸಲಾಗಿದೆ. ಬಂಧಿತರಿಂದ ಎಂಟೂವರೆ ಲಕ್ಷ ಮೌಲ್ಯದ 150 ಕುರಿಗಳು ಮತ್ತು ಟಾಟಾ ಎಸ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿಗಳನ್ನು ಶಿವಪ್ಪ ಕಾಳೆ (40), ಫಕ್ಕೀರಪ್ಪ ಕಾಳೆ (50), ಚನ್ನಪ್ಪ ಕಾಳೆ (29), ಬಲರಾಮ ಚವ್ಹಾಣ (40) ಮತ್ತು ನಾಗಪ್ಪ ಚವ್ಹಾಣ (38) ಎಂದು ಗುರುತಿಸಲಾಗಿದೆ. ಬಂಧಿತರು ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಧಾರವಾಡ, ಹುಬ್ಬಳ್ಳಿ, ಶಿಗ್ಗಾಂವಿ, ಸವಣೂರು ಸೇರಿದಂತೆ ಎಂಟು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

    ಕುರಿಗಾಯಿಗಳು ಕುರಿಗಳನ್ನು ಮೇಯಲು ಬಿಟ್ಟು ಊಟಕ್ಕೆ ಹೋದ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಗಳನ್ನ ಕಳ್ಳತನ ಮಾಡುತ್ತಿದ್ದರು. ಬಂಕಾಪುರ ಪಿಎಸ್‍ಐ ಸಂತೋಷಕುಮಾರ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

  • ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಒಬ್ಬಂಟಿಯಾಗಿ ಸಂಚಾರಿಸುವವರನ್ನು ಟಾರ್ಗೆಟ್ ಮಾಡ್ತಿದ್ದ ದರೋಡೆ ಗ್ಯಾಂಗ್ ಅಂದರ್

    ಬೆಂಗಳೂರು: ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ನಗರದ ಮಹದೇವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊಹಮ್ಮದ್ ರಸೂಲ್ (19), ಸಿರಾಜ್ ಶೇಖ್(20), ಅಪ್ಸರ್ ಶೇಖ್ (20) ಮತ್ತು ಪ್ರದೀಪ್ (22) ಬಂಧಿತ ಅರೋಪಿಗಳು. ಬಂಧಿತರು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಫೈನ್ ಅರ್ಪಾಟ್ ಮೆಂಟ್ ಬಳಿಯ ನಿರ್ಜನ ಪ್ರದೇಶದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

    ಮಾರಕಾಸ್ತ್ರಗಳೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಲು ಕಾಯುತ್ತಿದ್ದ ಆರೋಪಿಗಳ ನಡವಳಿಕೆ ಕುರಿತು ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ದರೋಡೆ ನಡೆಸಲು ಸಂಗ್ರಹಿಸಿಟ್ಟಿದ್ದ ಮಾರಕಾಸ್ತ್ರ, ಖಾರದ ಪುಡಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂಧಿತರಿಂದ 3 ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಗ್ಯಾಂಗ್ ನ ಮತ್ತೊಬ್ಬ ದರೋಡೆಕೋರ ಧನರಾಜ್ ಆಯುಧ ಸಮೇತ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಧನರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಮದ್ಯದ ನಶೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರಗೈದು ಕೊಲೆಗೈದ ಕಾಮುಕರು ಅಂದರ್

    ಮದ್ಯದ ನಶೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರಗೈದು ಕೊಲೆಗೈದ ಕಾಮುಕರು ಅಂದರ್

    ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    60 ವರ್ಷದ ಶುಕರಾ ಬಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ತಾಲೂಕಿನ ಸೂರವಾರ ಗ್ರಾಮದ ಮಲ್ಲಿಕಾರ್ಜುನ್(26), ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ನಿವಾಸಿ ಗಜೇಂದ್ರ(25) ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಮಲ್ಲಿಕಾರ್ಜುನ ಈ ಮೊದಲೇ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಜುಲೈ 16 ರಂದು ಬಿಡುಗಡೆಯಾದ ಬಳಿಕ ಸಂಬಂಧಿ ಗಜೇಂದ್ರನ ಊರಿಗೆ ತೆರಳಿದ್ದ. ಜುಲೈ 26 ಗುರುವಾರ ಇಬ್ಬರು ದಂಡೋತಿ ಗ್ರಾಮದ ಹೊರವಲಯದಲ್ಲಿ ಕೂತು ಮದ್ಯಪಾನ ಮಾಡಿದ್ದಾರೆ. ಸಂಜೆ ಜಮೀನಿನ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕ ವೃದ್ಧೆಯ ಮೇಲೆ ಜಮೀನಿನಲ್ಲಿ ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಲ್ಲಿನಿಂದ ಜಜ್ಜೆ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಮುಂಜಾನೆ ಕೆಲಸಕ್ಕೆ ಹೋದ ಶುಕರಾರವರು ರಾತ್ರಿಯಾದರೂ ಮನೆಗೆ ಬಾರದೆ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಡರಾತ್ರಿ 11ರ ಸಮಯದಲ್ಲಿ ಅವರ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ವೃದ್ಧೆಯ ಕುಟುಂಬಸ್ಥರು ಮಾಡ್‍ಬೂಳ್ ಠಾಣೆಯಲ್ಲಿ ದೂರು ನೀಡಿದ್ದರು.

    ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದ ಪೊಲೀಸರು ಗ್ರಾಮಸ್ಥರನ್ನು ವಿಚಾರಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಮದ್ಯಪಾನ ಸೇವಿಸಿ ಕುಳಿತುಕೊಂಡಿದ್ದ ವಿಚಾರವನ್ನು ತಿಳಿಸಿದ್ದಾರೆ. ಈ ಆಧಾರದ ಹಿನ್ನೆಲೆಯಲ್ಲಿ ಒರ್ವ ಗಜೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಮಾಹಿತಿಯ ಆಧಾರದಲ್ಲಿ ಮಲ್ಲಿಕಾರ್ಜುನ್ ನನ್ನು ಬಂಧಿಸಿದ್ದಾರೆ.

  • ಮೈಸೂರಿನ ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ – ದಾಳಿ ವೇಳೆ ಬಯಲಾಯ್ತು ರಹಸ್ಯ

    ಮೈಸೂರಿನ ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ – ದಾಳಿ ವೇಳೆ ಬಯಲಾಯ್ತು ರಹಸ್ಯ

    ಮೈಸೂರು: ನಗರದ ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಬ್ಲೂ ಫಿಲಂ ತೆಗೆಯುತ್ತಿದ್ದ ವಿಚಾರ ಬಹಿರಂಗವಾಗಿದೆ.

    ವಿಜಯನಗರ ವಾಟರ್ ಟ್ಯಾಂಕ್ ಬಳಿ ಇರುವ ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪೊಲೀಸರಿಗೆ ಒಂದು ಡೈರಿ ಸಿಕ್ಕಿತ್ತು. ಈಗ ಆ ಡೈರಿಯಿಂದ ಹೈಟೆಕ್ ವೇಶ್ಯಾವಟಿಕೆ ದಂಧೆಗೆ ಪೊಲೀಸರ ಕುಮ್ಮಕ್ಕು ನೀಡಿರುವ ಶಂಕೆ ವ್ಯಕ್ತವಾಗಿದೆ. ಡೈರಿಯಲ್ಲಿ ಸಿಸಿಬಿಗೆ 7 ಸಾವಿರ, ಪೇದೆಯೊಬ್ಬರಿಗೆ 10 ಸಾವಿರ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದರಿಂದ ಈ ದಂಧೆಯಲ್ಲಿ ಪೊಲೀಸರು ಇದ್ದಾರೆ ಎಂದು ದಾಳಿ ನಡೆಸಿದ್ದ ಪೊಲೀಸರು ಶಂಕಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ 7 ಗಂಟೆಗೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.

    ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಪಾರ್ಲರ್ ಗಳಿಗೆ ಬರುತ್ತಿದ್ದ ಕೆಲವು ಯುವತಿರ ನಗ್ನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಬಳಿಕ ಇದೇ ವೀಡಿಯೋ ಮುಂದಿಟ್ಟುಕೊಂಡು ಪಾರ್ಲರ್ ಗೆ ಬರುತ್ತಿದ್ದ ಗ್ರಾಹಕರಿಗೆ ಬ್ಲ್ಯಾಕ್ ಮೇಲೆ ಮಾಡಿ ಅವರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದರು. ಇದರ ಚಿತ್ರೀಕರಣವನ್ನೂ ಆರೋಪಿಗಳು ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ.

    ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿದ್ದು, 7 ಯುವತಿಯ ರಕ್ಷಣೆ ಮಾಡಿ, 5 ಮಂದಿ ಪುರುಷರನ್ನು ಬಂಧಿಸಲಾಗಿದ್ದು, ಒಂದು ಕಾರು, ಮೊಬೈಲ್ ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ.

  • ಸಚಿವ ಡಿಕೆಶಿ ಹೆಸರು ಬಳಸಿ ಮೋಸ- ಕೆಲಸ ಕೊಡಿಸೋದಾಗಿ ಹೇಳಿ 14 ಲಕ್ಷ ರೂ. ಪಂಗನಾಮ

    ಸಚಿವ ಡಿಕೆಶಿ ಹೆಸರು ಬಳಸಿ ಮೋಸ- ಕೆಲಸ ಕೊಡಿಸೋದಾಗಿ ಹೇಳಿ 14 ಲಕ್ಷ ರೂ. ಪಂಗನಾಮ

    ಬೆಂಗಳೂರು: ವ್ಯಕ್ತಿಯೊಬ್ಬ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಶಾಖಾಧಿಕಾರಿ ಎಂದು ಹೇಳಿಕೊಂಡು ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ಬರೋಬ್ಬರಿ 14 ಲಕ್ಷ ರೂ.ಯನ್ನು ದೋಚಿ ಮೋಸ ಮಾಡಿದ್ದಾನೆ.

    ಕೆಪಿಎಸ್‍ಸಿ ನೌಕರಿಯ ಆಕಾಂಕ್ಷೆಯಲ್ಲಿದ್ದ ವೆಂಕಟೇಶ್ ಮೋಸ ಹೋದ ಯುವಕ. ಮಂಜುನಾಥ್ ಎಂಬಾತ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ಮೋಸ ಮಾಡಿದ್ದಾನೆ. ಮಂಜುನಾಥ್ 2015ರಲ್ಲಿ ವೆಂಕಟೇಶ್ ನನ್ನ ಪರಿಚಯ ಮಾಡಿಕೊಂಡಿದ್ದನು. ಆಗ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ನಕಲಿ ಐಡಿ ತೋರಿಸಿ ಹಂತ ಹಂತವಾಗಿ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ.

    ಮೋಸ ಮಾಡಿದ್ದು ಹೇಗೆ?:
    ಮಂಜುನಾಥ್ ರಾಜಾಜಿನಗರದಲ್ಲಿರುವ ಗೃಂಥಾಲಯಕ್ಕೆ ಹೋಗುವಾಗ ನಮ್ಮನ್ನು ಪರಿಚಯ ಮಾಡಿಕೊಂಡಿದ್ದರು. ನಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿಯಾಗಿದ್ದೇನೆ. ನಮಗೆ ಕೆಪಿಎಸ್‍ಸಿಯಲ್ಲಿ ಪರಿಚಯ ಇದ್ದಾರೆ. ಕಂದಾಯ ಇಲಾಖೆಯಲ್ಲಿ ಕೆಪಿಎಸ್‍ಸಿ ಮೆಂಬರ್ ಕೋಟಾದಡಿ ಕೆಲಸ ಕೊಡಿಸೋದಾಗಿ ಹೇಳಿದ್ದನು. ಮೊದಲು ನಾನು ನಂಬಿರಲಿಲ್ಲ. ಬಳಿಕ ಐಡಿ ಕಾರ್ಡ್ ತೋಸಿದ್ದರು. ಅದರಲ್ಲಿ ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಇತ್ತು. ಆದರೂ ನಾನು ನಂಬಿರಲಿಲ್ಲ. ಬಳಿಕ ದಿನ ಕಳೆದಂತೆ ಪ್ರತಿದಿನ ಪರಿಚಯ ಮಾಡಿಕೊಂಡರು.

    ಮಂಜುನಾಥ್ ನಾನು ಕೆಲಸ ಕೊಡಿಸುತ್ತೇನೆ ಎಂದು ಹಂತ ಹಂತವಾಗಿ ಹಣ ಪಡೆದುಕೆಂಡಿದ್ದಾನೆ. ನಾನು ಹಣವನ್ನು ಟ್ರಾನ್ಸ್ ಫರ್ ಮಾಡುತ್ತೀನಿ ಎಂದಾಗ ಬೇಡ ಅಧಿಕಾರಿಗಳಿಗೆ ಕೊಡಬೇಕು ಎಂದು ನಗದು ರೂಪದಲ್ಲಿ ಪಡೆದುಕೊಂಡಿದ್ದಾನೆ. ಆದರೆ ಒಂದು ಬಾರಿ ಸುಮಾರು 3 ಲಕ್ಷ 60 ಸಾವಿರ ರೂ. ಯನ್ನು ಬ್ಯಾಂಕಿಗೆ ಕಳುಹಿಸಿದ್ದೆ. ಆ ದಾಖಲಾತಿ ನನ್ನ ಬಳಿ ಇದೆ. 6 ತಿಂಗಳ ಹಿಂದೆ ಒಂದು ನಕಲಿ ಅಪಾಯಿಂಟ್ ಮೆಂಟ್ ಆರ್ಡರ್ ಕಾಪಿಯನ್ನು ನಮ್ಮ ಮನಗೆ ಕಳುಹಿಸಿದ್ದನು. ಆಗ ಆರ್ಡರ್ ಕಾಪಿ ನಕಲಿ ಎಂದು ತಿಳಿಯಿತು. ಈ ಬಗ್ಗೆ ಕಂದಾಯ ಇಲಾಖೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ.

    ಒಂದು ದಿನ ನನ್ನ ಸಹೋದರನ ಜೊತೆ ಕಂದಾಯ ಇಲಾಖೆಗೆ ಒಳ ಹೋಗಿ ವಿಚಾರಿಸಿದಾಗ ಅದು ನಕಲಿ ಎಂದು ತಿಳಿಯಿತು. ಬಳಿಕ ಆತನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬಳಿಕ ನಿಮ್ಮ ಮನೆಗೆ ಬಂದು ಗಲಾಟೆ ಮಾಡುವುದಾಗಿ ಹೇಳಿದಾಗ ಹಣ ಹಿಂದಿರುಗಿಸುವುದಾಗಿ ಹೇಳಿದ್ದನು. ಆದರೆ ಇನ್ನು ಹಣವನ್ನು ನೀಡಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ ಎಂದು ಹಣ ಕಳೆದುಕೊಂಡ ವೆಂಕಟೇಶ್ ಹೇಳಿದ್ದಾರೆ.

    ಆರೋಪಿ ಮಂಜುನಾಥ್ ಹಲವಾರು ಯುವಕರಿಗೆ ಇದೇ ರೀತಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದರು. ಸದ್ಯಕ್ಕೆ ಸುಬ್ರಮಣ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು

    ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು

    ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಬಂಧಿಸಲು ಹೋದಾಗ ರೌಡಿಯೊಬ್ಬ ಮುಗಿಬಿದ್ದ ಪರಿಣಾಮ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ.

    ಬಿನ್ನಮಿಲ್ ಕ್ಯಾಂಟೀನ್ ಬಳಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆ.ಪಿ ಅಗ್ರಹಾರ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಇದನ್ನು ಓದಿ: ರಾಜಕೀಯ ದ್ವೇಷ: ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳ ನಾಶ – 25ಕ್ಕೂ ಹೆಚ್ಚು ವಾಹನಗಳ ಗಾಜು ಪೀಸ್‍ ಪೀಸ್

    ಹೇಗಾಯಿತು?:
    ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಮತ್ತು ಆತನ ಗ್ಯಾಂಗ್ ಇದೇ ತಿಂಗಳ 25ರ ರಾತ್ರಿ ಚೋಳೂರುಪಾಳ್ಯ ಮತ್ತು ಕೆ.ಪಿ ಅಗ್ರಹಾರದಲ್ಲಿ ದಾಂಧಲೆ ನಡೆಸಿದ್ದರು. ಸುಮಾರು 25 ಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಕಚೇರಿಗೆ ನುಗ್ಗಿ ಅಲ್ಲಿ ಧ್ವಂಸ ಮಾಡಿ, ಇನ್ನು ಮುಂದೆ ಕಚೇರಿ ಓಪನ್ ಮಾಡದಂತೆ ಬೆದರಿಸಿ ಮಚ್ಚು ಬಿಸಾಕಿದ್ದರು. ಬಳಿಕ ಈ ಬಗ್ಗೆ ಪೊಲೀಸರು ಗಂಭೀರವಾಗಿ ವಿಚಾರಣೆ ಮಾಡಿ ಅವರನ್ನು ಬಂಧಿಸಲು ಮುಂದಾಗಿದ್ದರು.

    ಪೊಲೀಸರು ಆರೋಪಿಗಳಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಇಂದು ಬೆಳಗಿನ ಜಾವ ಬಿನ್ನಿಮಿಲ್ ಬಳಿ ಬಂಧಿಸಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆರೋಪಿ ಕಿರ್ಬಾ ಬಂಧಿಸಲು ಹೋಗಿದ್ದ ಹೆಡ್ ಕಾನ್ ಸ್ಟೇಬಲ್ ನಾಗರಾಜಪ್ಪ ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಆರೋಪಿಗಳ ಪೈಕಿ ಒಬ್ಬನ ಕಾಲಿಗೆ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಗುಂಡು ಹಾರಿಸಿದ್ದಾರೆ.

    ಸದ್ಯಕ್ಕೆ ಗುಂಡೇಟು ತಿಂದಿದ್ದ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

  • ಚಾಕಲೇಟ್ ಕದಿಯಲು ಹೋಗಿ ರೇಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮಹಿಳಾ ಪೇದೆ!

    ಚಾಕಲೇಟ್ ಕದಿಯಲು ಹೋಗಿ ರೇಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮಹಿಳಾ ಪೇದೆ!

    ಚೆನ್ನೈ: ಪೊಲೀಸ್ ಪೇದೆಯೊಬ್ಬಳು ಸೂಪರ್ ಮಾರ್ಕೆಟ್‍ನಲ್ಲಿ ಚಾಕಲೇಟ್ ಕದಿಯುತ್ತ ರೇಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ಎಗ್ಮೋರ್ ನಲ್ಲಿ ನಡೆದಿದೆ.

    ಎಂ.ನಂದಿನಿ (34) ಕಳ್ಳತನ ಮಾಡಿ ಸಿಕ್ಕಿ ಬಿದ್ದ ಪೊಲೀಸ್ ಪೇದೆ. ಚಾಕಲೇಟ್ ಕದಿಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿದ ಮಾಲೀಕ ತಕ್ಷಣ ಪೊಲೀಸ್ ಪೇದೆಯನ್ನು ವಿಚಾರಿಸಿದ್ದಾರೆ.

    ಆಗಿದ್ದು ಏನು?
    ನಂದಿನಿ ಬುಧವಾರ ಸೂಪರ್ ಮಾರ್ಕೆಟ್ ಗೆ ಹೋಗಿದ್ದು, ಅಲ್ಲಿ ಚಾಕಲೇಟ್ ಮತ್ತು ಸೊಳ್ಳೆ ಕ್ರಿಮ್ ಅನ್ನು ಕದ್ದು ಬ್ಯಾಗಿನಲ್ಲಿ ಹಾಕಿಕೊಂಡಿದ್ದಾಳೆ. ಆಕೆಯನ್ನು ವಿಚಾರಿಸಿದಾಗ ಹೆದರಿ ಓಡಲು ಶುರುಮಾಡಿದ್ದಾಳೆ. ಮಾರ್ಕೆಟ್ ಸಿಬಂದಿಯೊಬ್ಬರೂ ಅವಳನ್ನು ಹಿಂಬಾಲಿಸಿ ಆಕೆಯ ಬ್ಯಾಗಿನಲ್ಲಿದ್ದ ಚಾಕಲೇಟ್ ಮತ್ತು ಸೊಳ್ಳೆ ಕ್ರಿಮ್ ಪಡೆದುಕೊಂಡಿದ್ದಾರೆ.

    ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಆಕೆ ತನ್ನ ವಿರುದ್ಧ ಪೊಲೀಸ್ ದೂರು ನೀಡಬೇಡಿ ಎಂದು ಹೇಳಿ ಕ್ಷಮೆಯಾಚಿಸಿದ್ದಾಳೆ. ಹಾಗಾಗಿ ಮಾಲೀಕರು ಆಕೆಯ ಮೇಲೆ ದೂರು ನೀಡಿರಲಿಲ್ಲ. 115 ರೂ. ಮೌಲ್ಯದ ವಸ್ತುವನ್ನು ಕದ್ದ ಹಿನ್ನೆಲೆಯಲ್ಲಿ ಆಕೆ ಪತ್ರದ ಮೂಲಕ ಕ್ಷಮೆ ಕೇಳಿಕೊಂಡಿದ್ದಾಳೆ.

    ಘಟನೆಯ ನಂತರ ನಂದಿನಿ ಈ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ. ಬಳಿಕ ನಂದಿನಿಯ ಪತಿ ಮೂವರ ಜೊತೆ ಆಗಮಿಸಿ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಂಗಡಿಯ ಸಿಬ್ಬಂದಿ ಗಲಾಟೆಯನ್ನು ಬಿಡಿಸಲು ಹೋದಾಗ ಅವರ ಮೇಲೆಯೂ ಇವರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹಲ್ಲೆ ನಡೆದ ಬಳಿಕ ಅಂಗಡಿಯ ಮಾಲೀಕನಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆ ಮಹಿಳಾ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತುಗೊಳಿಸಿ, ಆಕೆಯ ಪತಿಯನ್ನು ಬಂಧಿಸಿದ್ದಾರೆ.

  • ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಹೆಚ್ಚುತ್ತಿದ್ದು, ಸರಗಳ್ಳನನ್ನು ಚೇಸ್ ಮಾಡಿ ಯುವಕನೊಬ್ಬ ಸೆರೆ ಹಿಡಿದಿರುವ ಘಟನೆ ಕುಮಾರಸ್ವಾಮಿ ಲೇಔಟ್ ನ ದೇವರಕೆರೆಯಲ್ಲಿ ನಡೆದಿದೆ.

    ಆರೋಪಿ ಚೇತನ್ ಶ್ವೇತಾ ಅವರ ಸುಮಾರು 70 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು. ಬಳಿಕ ಯುವಕ ಶರತ್ ಆರೋಪಿಯನ್ನು ಚೇಸ್ ಮಾಡಿ ಹಿಡಿದು ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ವಿವರ:
    ಗುರುವಾರ ಶ್ವೇತಾ ಅವರ ಬರ್ತ್ ಡೇ ಇತ್ತು. ಆದ್ದರಿಂದ ಹುಟ್ಟುಹಬ್ಬವನ್ನು ಮುಗಿಸಿ ಮನೆ ಮುಂದೆ ಸಂಬಂಧಿಕರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಆರೋಪಿ ವಾಕಿಂಗ್ ಮಾಡುವ ರೀತಿ ಶ್ವೇತಾ ಅವರ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಆಗ ಶ್ವೇತಾ ಕೂಗಿಕೊಂಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಶರತ್ ಸರಗಳ್ಳತನವನ್ನು ಗಮನಿಸಿ ತನ್ನ ಬೈಕಿನಲ್ಲಿ ಚೇಸ್ ಮಾಡಿಕೊಂಡು ಹೋಗಿದ್ದಾರೆ. ಶರತ್ ಸುಮಾರು 2 ಕಿ.ಮೀ ವರೆಗೆ ಆರೋಪಿಯನ್ನು ಚೇಸ್ ಮಾಡಿದ್ದಾರೆ.

    ಕೊನೆಗೆ ನಗರದ ಇಸ್ರೋ ಲೇಔಟ್ ನಲ್ಲಿ ಶರತ್ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕ ಶರತ್ ಸಾಹಸದಿಂದ ಮತ್ತೆ ಶ್ವೇತಾ ಅವರಿಗೆ ಮರಳಿ ಅವರ 70 ಗ್ರಾಂ ಸರ ಸಿಕ್ಕಿದೆ.

  • ಪ್ರೇಯಸಿಗೆ ಗಿಫ್ಟ್ ಕೊಡಿಸಲು ಚಿನ್ನದಂಗಡಿಗೆ ಕನ್ನ – ಖದೀಮ ಪ್ರೇಮಿ ಬಂಧನ

    ಪ್ರೇಯಸಿಗೆ ಗಿಫ್ಟ್ ಕೊಡಿಸಲು ಚಿನ್ನದಂಗಡಿಗೆ ಕನ್ನ – ಖದೀಮ ಪ್ರೇಮಿ ಬಂಧನ

    ಬೆಂಗಳೂರು: ಪ್ರೇಯಸಿಗೆ ಗಿಫ್ಟ್ ಕೊಡಿಸುವುದಕ್ಕೆ ಹೋಗಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನದ ಸರ ಎಗರಿಸಿದ್ದ ಪ್ರಿಯತಮ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿ ಅಬ್ದುಲ್ ಮುಬಾರಕ್ ಬಂಧಿತ ಆರೋಪಿ. ಈತ ತೆಲಂಗಾಣದಲ್ಲಿ ಎಕ್ಸೈಸ್ ಸೂಪರಿಂಟೆಂಡೆಂಟ್ ಅಂತ ಹೇಳಿ ಯುವತಿಗೆ ಮೋಸ ಮಾಡಿದ್ದಾನೆ. ಈಗ ಈತನ ವಿರುದ್ಧ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

    ಘಟನೆ ವಿವರ:
    ಮುಬಾರಕ್ ನಾನು ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ ಯುವತಿಗೆ ಹೇಳಿದ್ದ. ಈತನ ಮಾತನ್ನು ನಂಬಿದ ಯುವತಿ ಈತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಬಾರಕ್ ಮದುವೆ ಆಗೋಣ ಅಂತ ಯುವತಿಗೆ ನಂಬಿಸಿದ್ದಾನೆ. ಅದರಂತೆಯೇ ಮದುವೆಗೆ ಆಭರಣ ಖರೀದಿ ಮಾಡಲು ಇಬ್ಬರು ಬಸವನಗುಡಿಯ ನಾಕೋಡಾ ಜ್ಯುವೆಲ್ಲರಿ ಶಾಪಿಗೆ ಹೋಗಿದ್ದಾರೆ. ಈ ವೇಳೆ ಮುಬಾರಕ್ ಟ್ರಯಲ್ ನೋಡುತ್ತೇನೆ ಎಂದು ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಂಡಿದ್ದಾನೆ. ನಂತರ ತನ್ನ ಸ್ನೇಹಿತರಿಗೆ ಕರೆ ಮಾಡುತ್ತೇನೆ ಎಂದು ಪ್ರೇಯಸಿಯ ಬಳಿ ಐಫೋನ್ ತೆಗೆದು ಕೊಂಡಿದ್ದಾನೆ.

    ಪ್ರೇಯಸಿಯ ಐಫೋನ್ ತೆಗೆದುಕೊಂಡು ಜ್ಯುವೆಲ್ಲರಿ ಅಂಗಡಿಯಿಂದ ಹೊರ ಬಂದು ಆತ ಚಿನ್ನದ ಸರ ಮತ್ತು ಫೋನಿನೊಂದಿಗೆ ಪರಾರಿಯಾಗಿದ್ದಾನೆ. ಇತ್ತ ಆರೋಪಿ ಮುಬಾರಕ್ ಪರಾರಿಯಾದ ತಕ್ಷಣ ನಿಮ್ಮ ಗಂಡ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾನೆ ಎಂದು ಜ್ಯುವೆಲ್ಲರಿ ಸಿಬ್ಬಂದಿ ಯುವತಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಅವನು ಗಂಡ ಅಲ್ಲ, ಮದುವೆಯಾಗುತ್ತೀನಿ ಎಂದು ನಂಬಿಸಿ ಆಭರಣ ತೆಗೆದುಕೊಳ್ಳಲು ಅಂಗಡಿಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಯವತಿ ತಿಳಿಸಿದ್ದಾಳೆ.

    ಜ್ಯವೆಲ್ಲರಿ ಸಿಬ್ಬಂದಿ ಈ ಬಗ್ಗೆ ಬಸವನಗುಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹಿಡಿದು ಬಂಧಿಸಿದ್ದಾರೆ.

  • ವಿದ್ಯಾರ್ಥಿನಿಯರನ್ನ ಚುಡಾಯಿಸುತ್ತಿದ್ದ ಯುವಕರು ಹುಬ್ಬಳ್ಳಿ ಪೊಲೀಸ್ ಬಲೆಗೆ ಬಿದ್ರು

    ವಿದ್ಯಾರ್ಥಿನಿಯರನ್ನ ಚುಡಾಯಿಸುತ್ತಿದ್ದ ಯುವಕರು ಹುಬ್ಬಳ್ಳಿ ಪೊಲೀಸ್ ಬಲೆಗೆ ಬಿದ್ರು

    ಹುಬ್ಬಳ್ಳಿ: ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಒಂಬತ್ತು ಜನ ಯುವಕರನ್ನು ಹುಬ್ಬಳ್ಳಿಯ ಚೆನ್ನಮ್ಮ ಪಡೆಯ ಮುಫ್ತಿ ಪೊಲೀಸರು ಬಂಧಿಸಿದ್ದಾರೆ.

    ನಗರದ ನಿವಾಸಿಗಳಾದ ಅಮನ್, ಇಮಾಮ್ ಗೌಸ್, ತೌಸಿಫ್, ಮೈನುದ್ದೀನ್ ಸೈಯದ್, ಮೆಹಬೂಬ್, ಜಾಕೀಸ್ ಹುಸೇನ್, ಸಲ್ಮಾನ್ ಬಂಧಿತ ಯುವಕರು. ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಲ್ಲ, ಆದರೂ ನಗರದ ನೆಹರು ಕಾಲೇಜು ಹಾಗೂ ಬಿಡ್ನಾಳ ಆರ್.ಪಾಟೀಲ್ ಸ್ಕೂಲ್ ಬಳಿ ನಿಂತು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು.

    ಎಂದಿನಂತೆ ಇಂದು ಕೂಡಾ ನೆಹರು ಕಾಲೇಜಿನ ಮುಂದೆ ಬಂಧಿತ ಯುವಕರು ನಿಂತು, ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಖಚಿತ ಮಾಹಿತಿ ಪಡೆದು ಅಲ್ಲಿಗೆ ಚನ್ನಮ್ಮ ಪಡೆಯ ಮಫ್ತಿ ಪೊಲೀಸರು ಬಂದು ಯುವಕರನ್ನು ಬಂಧಿಸಿದ್ದಾರೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.