Tag: Arnab Goswami

  • ಅರ್ನಬ್‌ ಗೋಸ್ವಾಮಿಗೆ ಸುಪ್ರೀಂನಿಂದ ಜಾಮೀನು ಮಂಜೂರು

    ಅರ್ನಬ್‌ ಗೋಸ್ವಾಮಿಗೆ ಸುಪ್ರೀಂನಿಂದ ಜಾಮೀನು ಮಂಜೂರು

    ನವದೆಹಲಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ  ಜಾಮೀನು ಮಂಜೂರು ಮಾಡಿದೆ

    ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ.  ಈ ವೇಳೆ ಕೋರ್ಟ್‌ 50 ಸಾವಿರ ಬಾಂಡ್‌,  ವೈಯಕ್ತಿಕ  ಶ್ಯೂರಿಟಿ,  ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

    ಮೇ 2018 ರಲ್ಲಿ ಅಲಿಬಾಗ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಅರ್ನಬ್‌  ಗೋಸ್ವಾಮಿ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿ ಮಹಾರಾಷ್ಟ್ರ ಪೊಲೀಸರು ಅರ್ನಬ್  ಅವರನ್ನು ಬಂಧಿಸಿದ್ದರು.

    ನಾವು ರಿಪಬ್ಲಿಕ್ ಟಿವಿಯನ್ನು ನೋಡುವುದಿಲ್ಲ, ಆದರೆ ಈ ಪ್ರಕರಣದಲ್ಲಿ ಸಾಂವಿಧಾನಿಕ ಕೋರ್ಟ್ ಮಧ್ಯೆ ಪ್ರವೇಶಿಸುವ ಅಗತ್ಯವಿದೆ.ರಾಜ್ಯ ಸರ್ಕಾರಗಳು ಜನರ ವ್ಯಕ್ತಿಗತ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿದರೆ ಜನರ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಇರುತ್ತದೆ  ಎಂದು ಕೋರ್ಟ್‌ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತ್ತು.

    ಅರ್ನಬ್ ಗೋಸ್ವಾಮಿಯವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದರು.

  • ಕಾಲಾವಕಾಶ ತೆಗೆದುಕೊಂಡು ಶಾಲೆ ತೆರೆಯುವುದು ಸೂಕ್ತ: ಪ್ರತಾಪ್ ಸಿಂಹ

    ಕಾಲಾವಕಾಶ ತೆಗೆದುಕೊಂಡು ಶಾಲೆ ತೆರೆಯುವುದು ಸೂಕ್ತ: ಪ್ರತಾಪ್ ಸಿಂಹ

    ಮಡಿಕೇರಿ: ಕಾಲಾವಕಾಶ ತೆಗೆದುಕೊಂಡು ಪೋಷಕರು ಹಾಗೂ ಶಿಕ್ಷಕ ಸಮುದಾಯವನ್ನು ಕೊರೊನಾ ಟೆಸ್ಟ್ ತಪಾಸಣೆ ಬಳಿಕ ಶಾಲೆ ತೆರೆಯುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಶಾಲೆಗಳನ್ನು ಆದಷ್ಟು ಬೇಗ ತೆರೆಯಬೇಕು. ಹಾಗೆಯೇ ಬೇಡ ಎನ್ನುವ ಭಾವನೆ ಇದೆ. ಈಗಾಗಲೇ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಎಲ್ಲರೊಂದಿಗೆ ಶಾಲೆ ತೆರೆಯುವ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ದೆಹಲಿಯ ಎನ್‍ಸಿಆರ್ ಭಾಗದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಶಾಲೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಅದಕ್ಕೂ ಮೊದಲು ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳುವುದು ಒಳಿತು ಎಂದರು.

    ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆರ್‍ಆರ್ ನಗರದಲ್ಲಿ ಕನಿಷ್ಠ 40 ಸಾವಿರ ಮತ್ತು ಶಿರಾ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿರುವ ಬಗ್ಗೆ ಮಾತನಾಡಿ, ಬಾಳಾಠಾಕ್ರೆ ಅವರನ್ನು ಮಹಾರಾಷ್ಟ್ರದ ಹುಲಿ ಎನ್ನುತ್ತಿದ್ದರು. ಇದನ್ನು ನೋಡಿದರೆ ಹುಲಿ ಎದುರಿಸಲು ಇಲಿ ಹುಟ್ಟಿಕೊಂಡಿದೆ ಅನ್ನಿಸುತ್ತಿದೆ. ಉದ್ಧವ್ ಠಾಕ್ರೆ ಒಂದು ರಾಜ್ಯದ ಸಿಎಂ ಆಗಿ ಪೊಲೀಸರನ್ನು ಕಳುಹಿಸಿ ಬಂಧಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾಧ್ಯಮಗಳು ಅವುಗಳ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಮಾಧ್ಯಮಗಳ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

    ಒಂದು ವೇಳೆ ಮಾಧ್ಯಮಗಳು ಆಧಾರ ರಹಿತ ಆರೋಪ ಮಾಡಿದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ನಟಿ ಕಂಗನಾ ರಾಣಾವತ್ ಹೇಳಿದಂತೆ ಇದು ಶಿವಸೇನಾ ಅಲ್ಲ ಸೋನಿಯಾ ಸೇನೆ ಎನ್ನುವಂತೆ, 1975 ರಲ್ಲಿ ಕಾಂಗ್ರೆಸ್ ತುರ್ತುಪರಿಸ್ಥಿತಿ ಹೇರಿದಂತೆ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಇದರಲ್ಲಿ ಪೊಲೀಸರು ಆಡಳಿತ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.