Tag: army chief

  • ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ನವದೆಹಲಿ: ಭಾರತದ ಹೊಸ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಭಾನುವಾರ ಚೀನಾಗೆ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದ್ದಾರೆ. ಭಾರತ-ಚೀನಾ ಗಡಿಯಲ್ಲಿರುವ ಯಾವುದೇ ಪ್ರದೇಶವನ್ನೂ ಕಳೆದುಕೊಳ್ಳಲು ನಾವು ಬಿಡುವುದಿಲ್ಲ ಎಂದಿದ್ದಾರೆ.

    ಮನೋಜ್ ಪಾಂಡೆ ನೂತನ ಸೇನಾ ಮುಖ್ಯಸ್ಥರಾಗುತ್ತಿದ್ದಂತೆ ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತ ಚೀನಾ ಗಡಿಯ ಭೂ ಪ್ರದೇಶ ಯಥಾಸ್ಥಿತಿಯಲ್ಲಿರುತ್ತದೆ. ಭಾರತದ ಭೂ ಪ್ರದೇಶದಲ್ಲಿ ಯಾವುದೇ ನಷ್ಟವಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

    ಪ್ರಸ್ತುತ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಪರಿಸ್ಥಿತಿ ಸಾಮಾನ್ಯವಾಗಿದೆ. ನಮ್ಮ ಪಡೆಗಳು ಪ್ರಮುಖ ದೈಹಿಕ ಸ್ಥಾನಗಳನ್ನು ಹೊಂದಿದ್ದಾರೆ. ನಮ್ಮ ಎದುರಾಳಿಗಳು ನಡೆಸಿರುವ ಪ್ರಚೋದನಾಕಾರಿ ಕ್ರಮಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

    ಭಾರತ-ಚೀನಾ ಗಡಿಯಲ್ಲಿ ಹೆಚ್ಚುವರಿ ಉಪಕರಣ ಹಾಗೂ ಪಡೆಗಳನ್ನು ಸೇರಿಸಿದ್ದೇವೆ. ಮೂಲಸೌಕರ್ಯಗಳ ಅಭಿವೃದ್ಧಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಲಾಗಿದೆ. ಕಳೆದ 2 ವರ್ಷಗಳಿಂದ ಇರುವ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು.

  • ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ನವದೆಹಲಿ: ಸಂಸತ್ತಿನಿಂದ ಆದೇಶ ಕೊಟ್ಟರೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಓಕೆ) ವಶಕ್ಕೆ ಪಡೆಯಲು ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಹೇಳಿದ್ದಾರೆ.

    ಆರ್ಮಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ ಎಂಬುದು ಸಂಸತ್ತಿನ ನಿರ್ಣಯವಾಗಿದೆ. ಸಂಸತ್ತು ಬಯಸಿದರೆ ಆ ಪ್ರದೇಶವೂ (ಪಿಒಕೆ) ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ನಮ್ಮ ಸೈನ್ಯಕ್ಕೆ ಆದೇಶ ಸಿಕ್ಕರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಭಾರತೀಯ ಸೇನೆಯು ಮೊದಲಿಗಿಂತ ಈಗ ಉತ್ತಮವಾಗಿ ತಯಾರಾಗಿದೆ ಎಂದು ತಿಳಿಸಿದರು.

    ನಾವು ಭಾರತದ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡುತ್ತೇವೆ. ಸಂವಿಧಾನವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಹಾಗೂ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ನೀಡುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಿದಂತೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಅಧಿಕಾರಿಗಳಿಗೆ ಹಾಗೂ ಯೋಧರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

    ಭವಿಷ್ಯದ ಯುದ್ಧಗಳಿಗೆ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವುದು, ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸುವುದನ್ನು ಸ್ವಾಗತಿಸುತ್ತೇನೆ ಎಂದ ಮನೋಜ್ ಮುಕುಂದ್ ನಾರವಾಣೆ ಅವರು, ಇದು ಏಕೀಕರಣದತ್ತ ಒಂದು ದೊಡ್ಡ ಹೆಜ್ಜೆ ಎಂದು ತಿಳಿಸಿದರು.

    ಚೀನಾ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಗಡಿಯಲ್ಲಿ ಸವಾಲುಗಳನ್ನು ಎದುರಿಸಲು ಸೈನ್ಯವು ಸಿದ್ಧವಾಗಿದೆ. ಸಿಯಾಚಿನ್ ನಮಗೆ ಬಹಳ ಮುಖ್ಯವಾಗಿದೆ. ಅಲ್ಲಿ ಒಂದು ತಂಡವು ಪಶ್ಚಿಮ ಮತ್ತು ಉತ್ತರ ಪ್ರದೇಶಗಳನ್ನು ನೋಡಿಕೊಳ್ಳುತ್ತದೆ. ಇದು ಆಯಕಟ್ಟಿನ ಮಹತ್ವದ್ದಾಗಿದೆ. ಅಲ್ಲಿಂದಲೇ ಒಡಂಬಡಿಕೆ ಸಂಭವಿಸಬಹುದು ಎಂದು ಹೇಳಿದರು.

    ಅಧಿಕಾರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜನರಲ್ ನಾರವಾಣೆ, ಅಧಿಕಾರಿಗಳ ಕೊರತೆ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸುವ ಜನರ ಕೊರತೆ ಅಲ್ಲ. ನಾವು ಅಧಿಕಾರಿಗಳನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಕಡಿಮೆ ಮಾಡಿಲ್ಲ ಎಂದರು.

  • ಉಗ್ರರು ನಿಯಂತ್ರಿಸುತ್ತಿರುವ ಪಿಓಕೆಯನ್ನು ವಶಕ್ಕೆ ಪಡೆಯುತ್ತೇವೆ- ಬಿಪಿನ್ ರಾವತ್

    ಉಗ್ರರು ನಿಯಂತ್ರಿಸುತ್ತಿರುವ ಪಿಓಕೆಯನ್ನು ವಶಕ್ಕೆ ಪಡೆಯುತ್ತೇವೆ- ಬಿಪಿನ್ ರಾವತ್

    ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಪಾಕಿಸ್ತಾನ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅದು ಉಗ್ರರ ನಿಯಂತ್ರಣದಲ್ಲಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗುಡುಗಿದ್ದಾರೆ.

    ಪಾಕಿಸ್ತಾನವು ಅಕ್ರಮವಾಗಿ ಕಾಶ್ಮೀರವನ್ನು ಆಕ್ರಮಿಸಿದೆ. ಆದರೆ ಇದು ಅದರ ನಿಯಂತ್ರಣದಲ್ಲಿರದೆ ಉಗ್ರರು ನಿಯಂತ್ರಿಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಇದ್ದರೆ ಮಾತ್ರ ಜಮ್ಮು ಕಾಶ್ಮೀರ ಪೂರ್ಣವಾ ರಾಜ್ಯವಾಗುತ್ತದೆ. ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಪಿಓಕೆಯನ್ನು ಆಕ್ರಮಿಸಿಕೊಳ್ಳಲಾಗಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದರು.

    ಸಂವಿಧಾನದಲ್ಲಿ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿದಾಗ ಪಾಕಿಸ್ತಾನ ಯಾವುದೇ ತಕರಾರು ತೆಗೆಯಲಿಲ್ಲ. ಆದರೆ ಇದನ್ನು ರದ್ದುಗೊಳಿಸಿದ್ದಕ್ಕೆ ಪಾಕಿಸ್ತಾನ ಯಾಕೆ ವಿರೋಧ ವ್ಯಕ್ತಪಡಿಸಿತು ಎಂದು ಪ್ರಶ್ನಿಸಿದರು.

    ಇದೇ ವೇಳೆ, ಭಾರತೀಯ ಸೇನೆಗೆ ವಿಶ್ವದ ಅತ್ಯುತ್ತಮ ಅಮೆರಿಕ ನಿರ್ಮಿತ ಸಿಗ್ ಸೌರ್ ರೈಫಲ್ ಲಭ್ಯವಾಗಲಿದೆ. ಈ ವರ್ಷದ ಅಂತ್ಯಕ್ಕೆ ಇನ್‍ಫ್ಯಾಂಟ್ರಿ ಸೈನಿಕರಿಗೆ ಈ ರೈಫಲ್ ಸಿಗಲಿದೆ ಎಂದು ಭರವಸೆ ನೀಡಿದರು.

  • ಕಾರ್ಗಿಲ್ ಯುದ್ಧದಂತಹ ಪ್ರಯತ್ನಕ್ಕೆ ಕೈ ಹಾಕುವ ಧೈರ್ಯ ಪಾಕ್‍ಗೆ ಇಲ್ಲ: ಬಿಪಿನ್ ರಾವತ್

    ಕಾರ್ಗಿಲ್ ಯುದ್ಧದಂತಹ ಪ್ರಯತ್ನಕ್ಕೆ ಕೈ ಹಾಕುವ ಧೈರ್ಯ ಪಾಕ್‍ಗೆ ಇಲ್ಲ: ಬಿಪಿನ್ ರಾವತ್

    ನವದೆಹಲಿ: ಪಾಕಿಸ್ತಾನವು ಮತ್ತೊಮ್ಮೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಂತಹ ಪ್ರಯತ್ನ ಮಾಡುವುದಿಲ್ಲ. ಏಕೆಂದರೆ ಪಾಕ್ ಅನೇಕ ಪರಿಣಾಮಗಳನ್ನು ಎದುರಿಸಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

    ಪಾಕಿಸ್ತಾನದ ವಿರುದ್ಧ ಕಾರ್ಗಿಲ್‍ನಲ್ಲಿ ನಡೆದ ಆಪರೇಷನ್ ವಿಜಯ್‍ದಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ನೆನಪಿಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಶಸ್ತ್ರ ಪಡೆಗಳು ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಿವೆ. ಎಲ್ಲ ಪ್ರದೇಶವನ್ನೂ ರಕ್ಷಿಸುತ್ತೇವೆ. ಸೈನ್ಯದವರು ಕಟ್ಟುನಿಟ್ಟಾಗಿ ಕಾವಲು ಕಾಯುತ್ತಿವೆ ಎಂದು ತಿಳಿಸಿದರು.

    ಪಾಕಿಸ್ತಾನವು ಕಾರ್ಗಿಲ್ ನಂತಹ ಮತ್ತೊಂದು ಯುದ್ಧಕ್ಕೆ ಮುಂದಾಗುವುದಿಲ್ಲ ಎಂದು ಭಾವಿಸಿದ್ದೇನೆ. ಅವರಿಗೆ ಯುದ್ಧದ ಭೀಕರತೆ ಮುಟ್ಟಿದೆ. ಪಾಕಿಸ್ತಾನವು ಮುಂಬರುವ ದಿನಗಳಲ್ಲಿ ಹಾಗೂ ವರ್ಷಗಳಲ್ಲಿ ಒಳನುಸುಳುವಿಕೆಯನ್ನು ಪ್ರಯತ್ನಿಸಲು ಧೈರ್ಯ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಬಾಲಿವುಡ್ ಗೀತರಚನೆಕಾರ ಸಮೀರ್ ಅವರು ಬರೆದ ಕಾರ್ಗಿಲ್ ವೀರರಿಗೆ ಮೀಸಲಾದ ವಿಶೇಷ ಗೌರವದ ಹಾಡಿನ ವಿಡಿಯೋವನ್ನು ಬಿಪಿನ್ ರಾವತ್ ಬಿಡುಗಡೆ ಮಾಡಿದರು. ವಿಡಿಯೋದಲ್ಲಿ ಬಾಲಿವುಡ್‍ನ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಅನೇಕ ಪ್ರಸಿದ್ಧ ನಟರಿದ್ದಾರೆ.

  • ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    – ಸೇನಾ ಮುಖ್ಯಸ್ಥ ರಾವತ್ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ
    – ಹುತಾತ್ಮ ಮಹಿಳಾ ಯೋಧರ ಮೃತದೇಹ ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದಿದ್ದ ಬಿಪಿನ್ ರಾವತ್

    ನವದೆಹಲಿ: ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ನೇಮಕಾತಿಗೆ ಇರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಬಳಕೆದಾರರು, ರಾವತ್ ಹೇಳಿಕೆ ಸೇನೆಯನ್ನು ಮುಜುಗರಕ್ಕೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸೇನಾ ಮುಖ್ಯಸ್ಥರು ಹೇಳಿದ್ದೇನು?: ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ರಾವತ್ ಅವರು, ಮಹಿಳಾ ನೇಮಕಾತಿಯ ಹಲವು ಆಯಾಮಗಳ ಬಗ್ಗೆ ಮಾತನಾಡಿದ್ದರು.

    ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲು ನಾನು ಸಿದ್ಧನಿದ್ದೇನೆ. ಆದರೂ ಸೇನೆಯಲ್ಲಿರುವ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಅವರೆಲ್ಲಾ ಮಹಿಳಾ ಕಮಾಂಡರ್ ಗಳು ತಮ್ಮ ನೇತೃತ್ವ ವಹಿಸುವುದನ್ನು ಒಪ್ಪಲ್ಲ ಎಂದು ಹೇಳಿದ್ದರು.

    ಸೇನೆಯಲ್ಲಿ ಮಹಿಳೆಯರು ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಯಲ್ಲಿ ಅವರೇ ನಮ್ಮ ಶಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಯುದ್ಧಭೂಮಿಯಲ್ಲಿ ಆ ಮಹಿಳಾ ಯೋಧರು ಮೃತಪಡುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದರೆ ಮೃತದೇಹ ಮನೆಗೆ ಮರಳಿದಾಗ ಅದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದು ಹೇಳಿದ್ದರು.

    ಹಾಗಂತ ಅವರು ಬೇರೆಲ್ಲೂ ಸಾಯಲ್ಲ ಎಂದು ನಾನು ಹೇಳಲ್ಲ. ಮಕ್ಕಳನ್ನು ಹೊಂದಿರುವ ಮಹಿಳೆಯರು ರಸ್ತೆ ಅಪಘಾತಗಳಲ್ಲೂ ಸಾಯುತ್ತಾರೆ. ಆದರೆ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನೋಡಲು ದೇಶ ಬಯಸುವುದೇ ಎಂದು ಪ್ರಶ್ನಿಸಿದರು.

    ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ ಕಮಾಂಡರ್ ಹುದ್ದೆ ನೀಡಿದರೆ ಅವರು ದೀರ್ಘಾವಧಿಗೆ ಕುಟುಂಬದ ಹೊಣೆಗಾರಿಕೆಯಿಂದ ದೂರ ಉಳಿಯಬಹುದೇ? ಆಗ ಅವರಿಗೆ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸಿದ ಅವರು ನಾನು ಹೀಗೆ ಹೇಳಿದರೆ ವಿವಾದಕ್ಕೆ ಗುರಿಯಾಗುತ್ತದೆ ಎಂದು ಹೇಳಿದ್ದಾರೆ.

    ಟ್ಟೀಟ್ ನಲ್ಲಿ ಏನಿದೆ?:
    ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇದೆ. ಹೀಗಾಗಿ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ ಎಂದು ವಿಷ್ಣುಕಾಂತ್ ಶರ್ಮಾ ಎಂಬವರು ಟ್ವೀಟ್ ಮಾಡಿದ್ದಾರೆ.

    https://twitter.com/Dibyendu69/status/1074174987802599425

    ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೀಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಬಾಕಿ ಇದೆ ಎಂದು ಪ್ರಶ್ನಿಸಿ ಜಸ್ಕಿರಾತ್ ಸಿಂಗ್ ನಗ್ರ ಎಂಬವರು ಕಿಡಿಕಾಡಿದ್ದಾರೆ.

    ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ ಎಂದು ಲಿಂಡ್ಸೆ ಪೆರೆರಾ ಎಂಬವರು ಬಿಪಿನ್ ರಾವತ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com