Tag: Arjuna Award

  • 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    ನವದೆಹಲಿ: ಧೈರ್ಯವೊಂದಿದ್ದರೆ ಎಂತಹ ಕಠಿಣ ಗುರಿಗಳನ್ನು ಸಹ ಸುಲಭವಾಗಿ ತಲುಪಬಹುದು ಎಂಬ ಮಾತಿದೆ. ಇದನ್ನು 2023ರ ಅರ್ಜನ ಪ್ರಶಸ್ತಿ ಪಡೆದ ಶೀತಲ್ ದೇವಿ (Sheetal Devi) ಸಾಬೀತುಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ಶೀತಲ್ ಕೈಗಳಿಲ್ಲದಿದ್ದರೂ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ (Para Asian Games) ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ತನ್ನ ಪಾದಗಳಿಂದ ಬಿಲ್ಲುಗಾರಿಕೆ ಮಾಡಿ ಕಳೆದ ವರ್ಷ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಅದ್ಭುತ ಸಾಧನೆಯನ್ನು ಗುರುತಿಸಿ ಶೀತಲ್ ದೇವಿ ಅವರಿಗೆ 2023ರ ಅರ್ಜುನ ಪ್ರಶಸ್ತಿಯನ್ನು (Arjuna Award) ನೀಡಿ ಗೌರವಿಸಲಾಗಿದೆ.

    ಶೀತಲ್ ದೇವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕ್ರೀಡಾ ಗೌರವವನ್ನು ಸ್ವೀಕರಿಸಿದ ನಂತರ ಶೀತಲ್ ದೇವಿ ಅವರು ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ದಿನ ವಿಶೇಷವಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ವಿಡಿಯೋದ ಜೊತೆಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಶೀತಲ್ ದೇವಿ ಯಾರು?
    ಶೀತಲ್ ಅವರು 2007ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಲೋಯಿಧಾರ್ ಗ್ರಾಮದಲ್ಲಿ ಫೋಕೊಮೆಲಿಯಾ ಎಂಬ ಅಪರೂಪದ ಕಾಯಿಲೆಯೊಂದಿಗೆ ಜನಿಸಿದರು. ಈ ಕಾಯಿಲೆಯಿಂದಾಗಿ ಅವರ ತೋಳುಗಳು ಸಂಪೂರ್ಣವಾಗಿ ರೂಪುಗೊಂಡಿರಲಿಲ್ಲ. ಈ ಅಂಗವೈಕಲ್ಯದ ನಡುವೆಯೂ 2023ರಲ್ಲಿ ಶೀತಲ್ ಅಂತಾರಾಷ್ಟ್ರೀಯ ಹಂತದಲ್ಲಿ ಅನೇಕ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ ಅವರ ಅಂಗವೈಫಲ್ಯ ಕ್ರೀಡೆಯನ್ನು ವೃತ್ತಿಜೀವನವನ್ನಾಗಿಸಲು ಬಿಡಲಿಲ್ಲ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ಶೀತಲ್ ದೇವಿಯವರ ಸಾಧನೆಗಳು:
    2023ರಲ್ಲಿ ಶೀತಲ್ ದೇವಿ ಪ್ಯಾರಾ-ಆರ್ಚರ್‌ಗೆ (Para Archer) ಸೇರಿದರು. ಜೆಕ್ ರಿಪಬ್ಲಿಕ್‌ನಲ್ಲಿ ನಡೆದ ವರ್ಲ್ಡ್ ಆರ್ಚರಿ ಪ್ಯಾರಾ ಚಾಂಪಿಯನ್‌ಶಿಪ್ 2023ರಲ್ಲಿ ಓಪನ್ ಮಹಿಳಾ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ಬೆಳ್ಳಿ ಪದಕವನ್ನು ಪಡೆದರು. ಮೊದಲು ಪ್ಯಾರಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ ಇವರಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ಗೆ ಕೊರೊನಾ ದೃಢ

    ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ, ಶೀತಲ್ ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇಷ್ಟು ಮಾತ್ರವಲ್ಲದೇ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಸಹ ಪಡೆದಿದ್ದಾರೆ. ಇದನ್ನೂ ಓದಿ: ದುಡ್ಡು ಇದ್ದವರು ದೇವಸ್ಥಾನ ಕಟ್ಟುತ್ತಾರೆ, ಇಲ್ಲದವರು ಇರುವಲ್ಲೇ ಪೂಜಿಸಿ: ಸಿದ್ದರಾಮಯ್ಯ

  • ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ (Mohammed Shami) ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ (Arjuna Award) ಸ್ವೀಕರಿಸಿದ್ದಾರೆ.

    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಇದರೊಂದಿಗೆ ಅನೇಕ ಕ್ರೀಡಾತಾರೆಗಳು ಅರ್ಜುನ ಪ್ರಶಸ್ತಿ ಪಡೆದು ಸಂತಸಪಟ್ಟರು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಶಮಿ ಸೇರಿದಂತೆ ಇತರ ಕ್ರೀಡಾಪಟುಗಳು ತೋರಿದ್ದ ಅದ್ಭುತ ಪ್ರದರ್ಶನಕ್ಕಾಗಿ 2023ರಲ್ಲಿ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿತ್ತು. ಹಿಂದಿನ 4 ವರ್ಷಗಳ ಅವಧಿಯಲ್ಲಿ ತೋರಿದ ಪ್ರದರ್ಶನ, ನಾಯಕತ್ವದ ಬೆಳವಣಿಗೆ, ಕ್ರೀಡಾ ಮನೋಭಾವ, ಶಿಸ್ತಿನ ಪ್ರಜ್ಞೆ ಈ ಮಾನದಂಡಗಳ ಆಧಾರದದಲ್ಲಿ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು.

    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಶಮಿ ಅದ್ಭುತ ಸಾಧನೆ ಮಾಡಿದ್ದರು. 7 ಪಂದ್ಯಗಳನ್ನಾಡಿದರೂ 24 ವಿಕೆಟ್‌ಗಳನ್ನು ಪಡೆಯುವ ಮೂಲಕ 2023ರ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಮೈಲುಗಲ್ಲನ್ನೂ ಸ್ಥಾಪಿಸಿದರು.

    ಅರ್ಜುನ್ ಪ್ರಶಸ್ತಿ ಪುರಸ್ಕೃತರ ಪಟ್ಟಿ: ಅಜಯ್ ರೆಡ್ಡಿ (ಅಂಧರ ಕ್ರಿಕೆಟ್), ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್. ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಅಂತಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್). ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

  • `ಬಾಹುಬಲಿʼಯಿಂದ ಪಡೆದ ರಾಜಕೀಯ ಲಾಭದ ಬೆಲೆ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? – ರಾಗಾ ಪ್ರಶ್ನೆ

    `ಬಾಹುಬಲಿʼಯಿಂದ ಪಡೆದ ರಾಜಕೀಯ ಲಾಭದ ಬೆಲೆ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? – ರಾಗಾ ಪ್ರಶ್ನೆ

    – ಪ್ರಧಾನಿ ಅವರ ಕ್ರೌರ್ಯ ನೋಡಿದ್ರೆ ನನಗೆ ನೋವಾಗುತ್ತೆ
    – ದೇಶದ ಪ್ರತಿ ಹೆಣ್ಣು ಮಗಳಿಗೆ ಸ್ವಾಭಿಮಾನ ಮೊದಲು, ಪದಕ ಆಮೇಲೆ
    – ಮೋದಿ, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಕೆಂಡಾಮಂಡಲ

    ನವದೆಹಲಿ: ಇಂದು ಘೋಷಿತ ಬಾಹುಬಲಿಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi), ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಯನ್ನು (Khel Ratna And Arjuna Award) ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು (Delhi Police) ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು 

    ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ, ವಿನೇಶ್‌ ಫೋಗಟ್‌ ಅವರು ರಸ್ತೆಯಲ್ಲಿ ಪದಕ ಇಡುತ್ತಿರುವ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮೊದಲು ಸ್ವಾಭಿಮಾನ, ಅದರ ನಂತರ ಯಾವುದೇ ಪದಕ ಅಥವಾ ಗೌರವ ಬರುತ್ತದೆ. ಇಂದು ‘ಘೋಷಿತ ಬಾಹುಬಲಿ’ಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಪ್ರಧಾನಿಯವರು ರಾಷ್ಟ್ರದ ಕಾವಲುಗಾರ, ಅವರ ಇಂತಹ ಕ್ರೌರ್ಯವನ್ನ ನೋಡಿದರೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ನಿವಾಸದಿಂದ ಡಬ್ಲ್ಯುಎಫ್‍ಐ ಕಚೇರಿ ಸ್ಥಳಾಂತರ

    ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ವಿನೇಶ್‌ ಫೋಗಟ್‌ 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಇತ್ತೀಚೆಗೆ ಪ್ರಧಾನಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದರು. ಶನಿವಾರ ಪ್ರಶಸ್ತಿಯನ್ನು ಹಿಂದಿರುಗಿಸಲು ಕರ್ತವ್ಯ ಪಥದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಪೊಲೀಸರು ಕುಸ್ತಿಪಟುವನ್ನು ತಡೆದರು. ಇದರಿಂದ ವಿನೇಶ್‌ ರಸ್ತೆಯಲ್ಲೇ ಪದಕಗಳನ್ನ ಬಿಟ್ಟು ಹೋದರು. ಇದಕ್ಕೂ ಮುನ್ನ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲ ದಿನಗಳ ನಂತರ ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದರು. ಇದನ್ನೂ ಓದಿ: ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದ್ರೆ ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿತು. ಹಾಗಾಗಿ ವಿನೇಶ್‌ ಫೋಗಟ್, ಸಾಕ್ಷಿ ಮಲಿಕ್‌, ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.

  • ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

    ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

    ನವದೆಹಲಿ: ಭಾರತದ ಕುಸ್ತಿಪಟುಗಳು ತಮ್ಮ ಪ್ರಶಸ್ತಿ ವಾಪ್ಸಿ ಅಭಿಯಾನವನ್ನು ಮುಂದುವರಿಸಿದ್ದಾರೆ. ಶನಿವಾರ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

    ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮಂಗಳವಾರ ಪ್ರಧಾನಿಗೆ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದಕ್ಕೂ ಮುಂಚೆ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲವು ದಿನಗಳ ನಂತರ ಬಜರಂಗ್ ಪುನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮಾಡಲು ಸಾಕಷ್ಟು ಕೆಲಸಗಳಿವೆ: ಕುಸ್ತಿ ಫೆಡರೇಷನ್‌ನಿಂದ ಬ್ರಿಜ್‌ ಭೂಷಣ್‌ ‘ಸನ್ಯಾಸತ್ವ’

    ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

    ಕುಸ್ತಿಪಟು ಫೋಗಟ್‌, 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಇದನ್ನೂ ಓದಿ: ನೂತನ ಕುಸ್ತಿ ಫೆಡರೇಶನ್‌ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

    ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದಕ್ಕೆ ಫೋಗಟ್, ಎಂಎಸ್ ಮಲ್ಲಿಖ್, ಬಜರಂಗ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.

  • ಅರ್ಜುನ ಪ್ರಶಸ್ತಿ ಸಿಕ್ಕಿದ್ದು 2017ರಲ್ಲಿ ಕೈ ಸೇರಿದ್ದು 2022ರಲ್ಲಿ – 5 ವರ್ಷಗಳ ಬಳಿಕ ಪೂಜಾರ ಪ್ರಶಸ್ತಿ ಸ್ವೀಕಾರ

    ಅರ್ಜುನ ಪ್ರಶಸ್ತಿ ಸಿಕ್ಕಿದ್ದು 2017ರಲ್ಲಿ ಕೈ ಸೇರಿದ್ದು 2022ರಲ್ಲಿ – 5 ವರ್ಷಗಳ ಬಳಿಕ ಪೂಜಾರ ಪ್ರಶಸ್ತಿ ಸ್ವೀಕಾರ

    ಮುಂಬೈ: ಟೀಂ ಇಂಡಿಯಾದ (Team India) ಕ್ರಿಕೆಟರ್‌ ಚೇತೇಶ್ವರ ಪೂಜಾರಗೆ (Cheteshwar Pujara) 2017ರಲ್ಲಿ ಅರ್ಜುನ ಪ್ರಶಸ್ತಿ (Arjuna Award) ಸಿಕ್ಕಿತ್ತು. ಆ ಪ್ರಶಸ್ತಿ 5 ವರ್ಷಗಳ ಬಳಿಕ ಇದೀಗ ಪೂಜಾರ ಕೈ ಸೇರಿದೆ.

    2017ರಲ್ಲಿ ಪೂಜಾರ ಅರ್ಜುನ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಿರಲಿಲ್ಲ. ಆ ಬಳಿಕ ಇದೀಗ 5 ವರ್ಷಗಳ ಬಳಿಕ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ರಿಂದ ಪೂಜಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆವೀರ ಸೂರ್ಯ

    ಈ ಬಗ್ಗೆ ಟ್ವೀಟ್ ಮಾಡಿರುವ ಪೂಜಾರ, ನಾನು 2017ರಲ್ಲಿ ಅರ್ಜುನ ಪ್ರಶಸ್ತಿ ಬಂದಾಗ ಸ್ವೀಕರಿಸಿರಲಿಲ್ಲ. ಕ್ರಿಕೆಟ್ ನಡುವೆ ಬಿಡುವಿಲ್ಲದ ಕಾರಣ ಹಾಗೆ ಉಳಿದುಕೊಂಡಿತ್ತು. ಇದೀಗ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್‌ರಿಂದ ಪ್ರಶಸ್ತಿ ಪಡೆದುಕೊಂಡಿದ್ದೇನೆ. ಬಿಸಿಸಿಐ (BCCI) ಮತ್ತು ಸಚಿವರಿಗೆ ಧನ್ಯವಾದ ಎಂದಿದ್ದಾರೆ. ಇದನ್ನೂ ಓದಿ: ಕಾಲ್ಚೆಂಡು ಹಬ್ಬ ಬಲು ದುಬಾರಿ – ಫಿಫಾ ಟಿಕೆಟ್ ದರ ಕೇಳಿದ್ರೆ ದಂಗಾಗ್ತಿರಿ!

    ಪೂಜಾರ ಸದ್ಯ ಸೌರಾಷ್ಟ್ರ ಪರ ವಿಜಯ್ ಹಜಾರೆ ದೇಸಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ-ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖೇಲ್ ರತ್ನ ಪ್ರಶಸ್ತಿಗೆ ಅಶ್ವಿನ್, ಮಿಥಾಲಿ ರಾಜ್ ಹೆಸರು ಶಿಫಾರಸು

    ಖೇಲ್ ರತ್ನ ಪ್ರಶಸ್ತಿಗೆ ಅಶ್ವಿನ್, ಮಿಥಾಲಿ ರಾಜ್ ಹೆಸರು ಶಿಫಾರಸು

    ಮುಂಬೈ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರನ್ನು ಪ್ರಸ್ತುತ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

    ಅಶ್ವಿನ್ ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮವಾದ ಬೌಲಿಂಗ್ ಮಾಡಿ 79 ಪಂದ್ಯಗಳಿಂದ 413 ವಿಕೆಟ್ ಪಡೆದು ಮಿಂಚಿದ್ದಾರೆ. ಅದಲ್ಲದೆ ಇತ್ತಿಚೇಗೆ ಮುಕ್ತಾಯಗೊಂಡ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಪಡೆದು ತಂಡಕ್ಕೆ ನೆರವಾಗಿದ್ದರು. ಅದೇ ರೀತಿ ಭಾರತ ಮಹಿಳಾ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‍ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಮಹಿಳಾ ಅಟಗಾರ್ತಿಯೆಂಬ ವಿಶ್ವದಾಖಲೆಯನ್ನು ಬರೆದಿದ್ದರು. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್‌ ವಿಶ್ವದಾಖಲೆ

    ಇವರೊಂದಿಗೆ ಕೆ.ಎಲ್ ರಾಹುಲ್, ಶಿಖರ್ ಧವನ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂಬ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಕೇಂದ್ರ ಕ್ರೀಡಾ ಇಲಾಖೆ ಜೂನ್ 21ರಂದು ಪ್ರಶಸ್ತಿಗಾಗಿ ಹೆಸರನ್ನು ನೋಂದಾಯಿಸಲು ಕೊನೆ ದಿನಾಂಕ ನಿಗದಿಪಡಿಸಿತ್ತು. ಅದರಂತೆ ಇದೀಗ ಬಿಸಿಸಿಐ ಈ ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡಿದೆ ಎಂದು ವರದಿ ಹೊರಬಿದ್ದಿದೆ. ಕಳೆದ ವರ್ಷ ಭಾರತ ಕ್ರಿಕೆಟ್ ತಂಡದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಇದನ್ನೂ ಓದಿ: ಅಶ್ವಿನ್‍ಗೆ ಒಲಿದ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ

  • ಅರ್ಜುನ ಪ್ರಶಸ್ತಿ ರೇಸ್‍ನಲ್ಲಿ ಬುಮ್ರಾ, ಧವನ್

    ಅರ್ಜುನ ಪ್ರಶಸ್ತಿ ರೇಸ್‍ನಲ್ಲಿ ಬುಮ್ರಾ, ಧವನ್

    ನವದೆಹಲಿ: ಕ್ರೀಡೆಗಳಲ್ಲಿ ವಿಶೇಷ ಪ್ರತಿಭೆಗಳನ್ನು ತೋರಿರುವ ಕ್ರೀಡಾಪಟುಗಳಿಗೆ ನೀಡಲಾಗುವ ಅರ್ಜನ ಪ್ರಶಸ್ತಿ ರೇಸ್‍ನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಅನುಭವಿ ಆಟಗಾರ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಶೀಘ್ರವೇ ಅರ್ಜನ ಅವಾರ್ಡ್‍ಗಾಗಿ ಆಟಗಾರರ ಹೆಸರನ್ನು ಶಿಫಾರಸು ಮಾಡಲಿದ್ದು, ಬುಮ್ರಾ ಹಾಗೂ ಧವನ್ ಅವರ ಹೆಸರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. 2019ರಲ್ಲೂ ಅರ್ಜುನ್ ಅವಾರ್ಡ್ ರೇಸ್‍ನಲ್ಲಿ ಬುಮ್ರಾ ಇದ್ದರೂ ರವೀಂದ್ರ ಜಡೇಜಾ ಅವರಿಗೆ ಪ್ರಶಸ್ತಿ ಲಭಿಸಿತ್ತು.

    ಬಿಸಿಸಿಐ ಈಗಾಗಲೇ ಇಬ್ಬರು ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಅರ್ಜುನ್ ಅವಾರ್ಡ್ ಗಾಗಿ ಶಿಫಾರಸು ಮಾಡಿದ್ದಾಗಿ ಪ್ರಕಟಿಸಿದೆ. ದೀಪ್ತಿ ಶರ್ಮಾ, ಶಿಖಾ ಪಾಂಡೆ ಹೆಸರು ಆಯ್ಕೆ ಆಗಿದೆ. ಸದ್ಯ ಪುರುಷರ ಕ್ರಿಕೆಟ್ ತಂಡದಿಂದ ಇಬ್ಬರು ಆಟಗಾರರ ಹೆಸರುನ್ನು ಸೂಚಿಸಲು ಬಿಸಿಸಿಐ ನಿರ್ಧರಿಸಿದ್ದಾಗಿ ತಿಳಿದುಬಂದಿದೆ.

    2019ರಲ್ಲಿ ಪುರುಷರ ಕ್ರಿಕೆಟ್ ತಂಡದಿಂದ ಬುಮ್ರಾ, ಜಡೇಜಾ ಹೆಸರೊಂದಿಗೆ ಮೊಹಮ್ಮದ್ ಶಮಿ ಹೆಸರು ಕೂಡ ಶಿಫಾರಸು ಮಾಡಲಾಗಿತ್ತು. ಬುಮ್ರಾರೊಂದಿಗೆ ಹೋಲಿಸಿದರೆ ರವೀಂದ್ರ ಜಡೇಜಾ ಅನುಭವಿ ಹಾಗೂ ದೀರ್ಘ ಕಾಲದಿಂದಲೂ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ ಅವರಿಗೆ ಪ್ರಶಸ್ತಿ ಲಭಿಸಿತ್ತು. ಆದರೆ ಈಗ ಬುಮ್ರಾ ಏಕದಿನ ಮಾದರಿಯ ಕ್ರಿಕೆಟ್‍ನಲ್ಲಿ ನಂ.1 ಬೌಲರ್ ಆಗಿದ್ದು, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯಗಳ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್ ಪಡೆದ ಏಷ್ಯಾದ ಏಕೈಕ ಬೌಲರ್ ಎಂಬ ದಾಖಲೆ ಬರೆದಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2018ರಲ್ಲಿ ಬಿಸಿಸಿಐ ಅರ್ಜುನ ಅವಾರ್ಡ್ ಗಾಗಿ ಶಿಖರ್ ಧವನ್, ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಹೆಸರನ್ನು ಶಿಫಾರಸು ಮಾಡಿತ್ತು. ಆ ವರ್ಷ ಮಂದಾನ ಮಾತ್ರ ಪ್ರಶಸ್ತಿ ಪಡೆದಿದ್ದರು. ಈ ಕಾರಣದಿಂದಲೇ ಧವನ್ ಅವರ ಹೆಸರನ್ನು ನೀಡಲಾಗಿದೆ ಎನ್ನಲಾಗಿದೆ.

  • ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು: ಕಬಡ್ಡಿ ಆಟಗಾರ ಬಿ.ಸಿ.ರಮೇಶ್

    ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು: ಕಬಡ್ಡಿ ಆಟಗಾರ ಬಿ.ಸಿ.ರಮೇಶ್

    – ಮನೆಗೊಂದು ಮರದಂತೆ ಮನೆಗೊಬ್ಬ ಕ್ರೀಡಾಪಟುವಿರಲಿ

    ರಾಮನಗರ: ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು ಎಂದು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಚನ್ನಪಟ್ಟಣದ ಹೊರವಲಯದಲ್ಲಿರುವ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಮನೆಗೊಂದು ಮಗು, ಮಗುವಿಗೊಂದು ಮರ ಎಂಬಂತೆ ಮನೆಗೊಬ್ಬ ಕ್ರೀಡಾಪಟು ಕೂಡ ಹೊರಬರಲಿ. ದೇಶದ ಉದ್ದಗಲಕ್ಕೂ ಕಬಡ್ಡಿ ಆಡಿ ಗೆಲುವು ಸಾಧಿಸಿದೆ. ನಮ್ಮ ತಂಡ ನಂತರ ವಿದೇಶಗಳಲ್ಲಿ ಆಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಮತ್ತು ದೇಶದ ಹೆಸರನ್ನು ಅಜರಾಮರಗೊಳಿಸಿದೆ. ಈ ಮೂಲಕ ಅನೇಕ ಪ್ರಶಸ್ತಿಗಳ ಜೊತೆಗೆ ಅತ್ಯುನ್ನತ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಇದಕ್ಕೆಲ್ಲ ಕಾರಣ ಶ್ರಮ ಮತ್ತು ಸಾಧಿಸುವ ಛಲ ಎಂದು ತಿಳಿಸಿದರು.

    ನನ್ನ ಬದುಕಿನ ಚಿತ್ರಣವನ್ನೊಮ್ಮೆ ಹಿಂದುರಿಗಿ ನೋಡಿದರೆ ಇಂದು ಆಶ್ಚರ್ಯವಾಗುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಆಕಸ್ಮಿಕವಾಗಿ ಕಬಡ್ಡಿ ಆಟಗಾರನಾಗಿ ಬೆಳೆದೆ. ಸತತ ಸೋಲುಂಡಿದ್ದ ಕರ್ನಾಟಕ ತಂಡವನ್ನು ಗೆಲ್ಲಿಸಿದ ನಂತರ ಉದ್ಯೋಗಗಳು ಅರಸಿಕೊಂಡು ಬಂದವು. ಮೊದಲಿಗೆ ಎಚ್‍ಎಂಟಿ ಗಡಿಯಾರ ಕಂಪನಿಯಲ್ಲಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಇಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.

    ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ನವೀನ್ ಕುಮಾರ್ ಮತ್ತು ಪ್ರಪಂಜನ್ ಮಾತನಾಡಿ, ತಮ್ಮ ಸಾಧನೆಗೆ ತಂದೆತಾಯಿಗಳ ಆಶೀರ್ವಾದ, ಗುರುಗಳ ಮಾರ್ಗದರ್ಶನ ಬಹಳ ಇದೆ. ನೀವು ಕೂಡ ಗುರುಹಿರಿಯರ ಆಶೀರ್ವಾದದ ಜೊತೆಗೆ ಶ್ರಮವಹಿಸಿದ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ.ಚೇತನ್, ಪುಣೆಯಲ್ಲಿ ಇಂಜಿನಿಯರ್ ಆಗಿರುವ ಅಶ್ವಿನ್ ಎಂ ಅವರು ಕಬಡ್ಡಿ ಪಟುಗಳು, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

  • ಅರ್ಜುನ ಪ್ರಶಸ್ತಿಗೆ ಪೂನಂ, ಬುಮ್ರಾ ಸೇರಿ ನಾಲ್ವರು ಕ್ರಿಕೆಟರ್ ಹೆಸರು ಶಿಫಾರಸು

    ಅರ್ಜುನ ಪ್ರಶಸ್ತಿಗೆ ಪೂನಂ, ಬುಮ್ರಾ ಸೇರಿ ನಾಲ್ವರು ಕ್ರಿಕೆಟರ್ ಹೆಸರು ಶಿಫಾರಸು

    ನವದೆಹಲಿ: 2016ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮತ್ತು ಮಹಿಳಾ ಟೀಂ ಇಂಡಿಯಾ ಆಟಗಾರ್ತಿ ಪೂನಂ ಯಾದವ್ ಅವರ ಹೆಸರನ್ನ ಬಿಸಿಸಿಐ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

    ಕ್ರೀಡಾ ರಂಗದಲ್ಲಿ ವಿಶೇಷ ಪ್ರತಿಭೆಗಳನ್ನು ಗೌರವಿಸಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೇಂದ್ರ ಕ್ರೀಡಾ ಇಲಾಖೆ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುತ್ತದೆ. 2018 ರಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಸ್ಮೃತಿ ಮಂದಾನ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    ವಿಶ್ವಕಪ್‍ಗೆ ಬುಮ್ರಾ ಸೇರಿದಂತೆ ಮೂವರು ಆಟಗಾರರು ಆಯ್ಕೆ ಆಗಿದ್ದು, ಮೇ 30 ರಿಂದ ಟೂರ್ನಿ ಆರಂಭವಾಗಲಿದೆ. ಇತ್ತ 2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಬುಮ್ರಾ ಸದ್ಯ ತಂಡದ ಪ್ರಮುಖ ಕೀ ಬೌಲರ್ ಎನಿಸಿಕೊಂಡಿದ್ದಾರೆ. 2018ರಲ್ಲಿ ಟೆಸ್ಟ್ ಆಡಿದ್ದ ಬುಮ್ರಾ 9 ಪಂದ್ಯಗಳಲ್ಲಿ 48 ವಿಕೆಟ್ ಪಡೆದು ಮಿಂಚಿದ್ದರು. 2013 ರಲ್ಲಿ ತಂಡದ ಪರ ಪಾದಾರ್ಪಣೆ ಮಾಡಿದ್ದ ಶಮಿ ಕೂಡ ಕಳೆದ 1 ವರ್ಷದಿಂದ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. 2018 ರಲ್ಲಿ ಶಮಿ ಟೆಸ್ಟ್ ಕ್ರಿಕೆಟ್‍ನಲ್ಲಿ 68 ವಿಕೆಟ್ ಕಬಳಿಸಿದ್ದಾರೆ.

    2009 ರಲ್ಲಿ ತಂಡದಲ್ಲಿ ಆಡಿದ್ದ ಜಡೇಜಾ ತಮ್ಮ ಆಲ್‍ರೌಂಡರ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಉತ್ತಮ ಫಿಲ್ಡರ್ ಕೂಡ ಆಗಿದ್ದಾರೆ. ಜಡೇಜಾ ಐಸಿಸಿ ಪ್ರಕಟಿಸುವ ವಿಶ್ವದ ಟಾಪ್ ಟೆಸ್ಟ್ ಕ್ರಿಕೆಟ್ ಆಟಗಾರರು ಹಾಗೂ ಅಲ್‍ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಮಹಿಳಾ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಪೂನಂ ಯಾದವ್ ಐಸಿಸಿ ಟಾಪ್ 10 ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  • ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಚಂಡೀಗಢ: ಬಾಕ್ಸಿಂಗ್ ನಲ್ಲಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದು 2010ರ ಅರ್ಜುನ ಪ್ರಶಸ್ತಿ ಪಡೆದಿದ್ದ ಬಾಕ್ಸರ್ ಇಂದು ಜೀವನೋಪಾಯಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

    ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದಿದ್ದ ದಿನೇಶ್ ಕುಮಾರ್ ಸದ್ಯ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಒಟ್ಟು 23 ಪದಕಗಳನ್ನು ಗೆದ್ದಿದ್ದು ಇದರಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಸ್ಪರ್ಧೆಯ ಪದಕಗಳು ಸೇರಿದೆ.

    2014 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 30 ವರ್ಷದ ದಿನೇಶ್ ಕುಮಾರ್ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಅವರ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿತ್ತು. ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದಿನೇಶ್ ಅವರ ಬಾಕ್ಸಿಂಗ್ ವೃತ್ತಿ ಜೀವನ ಅಲ್ಲಿಗೆ ಅಂತ್ಯವಾಗಿತ್ತು. ಆದರೆ ಇದಕ್ಕೂ ಮುನ್ನವೇ ದಿನೇಶ್ ಅವರ ತಂದೆ ಮಗನನ್ನು ತರಬೇತಿಗೊಳಿಸಿ ಉತ್ತಮ ಬಾಕ್ಸರ್ ಆಗಿ ಮಾಡಲು ಸಾಕಷ್ಟು ಹಣ ವ್ಯಹಿಸಿದ್ದರು. ಆದರೆ ಅವರ ಕನಸು ಸಂಪೂರ್ಣವಾಗಿ ನನಸಾಗುವ ಮುನ್ನವೇ ದಿನೇಶ್ ಅವರ ಜೀವನದಲ್ಲಿ ಅವಘಡ ಸಂಭವಿಸಿತ್ತು.

    https://twitter.com/ANI/status/1056582298257317888?

    ಕುಟುಂಬ ಮೇಲೆ ದಿನದಿಂದ ದಿನಕ್ಕೆ ಚಿಕಿತ್ಸೆ ಹಾಗೂ ತರಬೇತಿಗಾಗಿ ಪಡೆದ ಸಾಲದ ಮೊತ್ತದ ಒತ್ತಡ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ದಿನೇಶ್ ತಂದೆಗೆ ಸಹಾಯ ಮಾಡಲು ಅವರೊಂದಿಗೆ ಬೀದಿ ಬೀದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಇವರಿಗೆ ಸರ್ಕಾರದ ವತಿಯಿಂದ ಯಾವುದೇ ಸಹಾಯಕೂಡ ಲಭ್ಯವಾಗಿಲ್ಲ. ಸರ್ಕಾರ ನನಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ದಿನೇಶ್ ಪ್ರತಿಕ್ರಿಯೆ ನೀಡಿದ್ದಾರೆ.

    ತನಗಾದ ಅಪಘಾತದಿಂದ ಬಾಕ್ಸಿಂಗ್ ವೃತ್ತಿ ಜೀವನ ಅಂತ್ಯವಾದರೂ ನನ್ನಲ್ಲಿರುವ ಬಾಕ್ಸಿಂಗ್ ಹಾಗೆಯೇ ಇದೆ. ತಾನು ಈಗಲೂ ಕಿರಿಯರಿಗೆ ಬಾಕ್ಸಿಂಗ್ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದೆನೆ. ಅದ್ದರಿಂದ ರಾಜ್ಯಮಟ್ಟದಲ್ಲಿ ತರಬೇತಿ ನೀಡಲು ಉದ್ಯೋಗ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ದಿನೇಶ್ ಅವರ ಕೋಚ್ ಕೂಡ ದಿನೇಶ್ ಅವರಿಗೆ ಬೆಂಬಲವಾಗಿದ್ದು, ಸರ್ಕಾರ ಈತನಿಗೆ ಒಂದು ಉತ್ತಮ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv