Tag: aravindkejriwal

  • ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ಫ್ಯಾಕ್ಟರಿ ಅವಘಡದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆ- ಸಿಎಂರಿಂದ ತಲಾ 10 ಲಕ್ಷ ಪರಿಹಾರ

    ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಮುಂಜಾನೆ 5.22ರ ಸುಮಾರಿಗೆ ನಡೆದ ಈ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.

    ಉತ್ತರ ದೆಹಲಿಯ ರಾಣಿ ಜಾನ್ಸಿ ರಾಣಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 8 ಮಂದಿ ಆಸ್ಪತ್ರೆಗೆ ದಾಖಲಾದರೆ, ಸುಮಾರು 15 ಮಂದಿ ದುರ್ಘಟನೆಯಿಂದ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಓರ್ವನ ದೇಹ ಶೇ.80ರಷ್ಟು ಸುಟ್ಟಿದ್ದು, ಹೀಗೆ ಹಲವಾರು ಮಂದಿ ಗಾಯಗೊಂಡು  ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೃಷಿ ಮಾರುಕಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ- 35 ಮಂದಿ ಸಾವು

    ಘಟನೆಯ ಬಳಿಕ ಕಟ್ಟಡದ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಉದ್ದೇಶ ಪೂರ್ವಕ ಅಲ್ಲದ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.