Tag: aravinda limbavali

  • ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

    ಸುಮಲತಾ ಏಕಾಂಗಿಯಾಗಿ ಗೆದ್ದಿದ್ದಾರೆ ಏಕಾಂಗಿಯಾಗಿ ಎದುರಿಸ್ತಾರೆ: ಲಿಂಬಾವಳಿ

    ಉಡುಪಿ: ಕೆಆರ್‍ಎಸ್ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಕಚ್ಚಾಟ ನಡೆಯುತ್ತಿದೆ. ಸುಮಲತಾಗೆ ಬಿಜೆಪಿ ಬೆಂಬಲ ಬೇಕಾಗಿಲ್ಲ. ಅವರು ಏಕಾಂಗಿಯಾಗಿ ಗೆದ್ದವರು ಏಕಾಂಗಿಯಾಗಿ ಹೋರಾಡುತ್ತಾರೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಲಿಂಬಾವಳಿ ಅವರು, ಇಬ್ಬರೂ ರಾಜಕಾರಣದ ಮಟ್ಟವನ್ನು ಮೀರಿ ಟೀಕೆ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಥರ ಕಚ್ಚಾಡುವುದು, ಯಾರಿಗೂ ಶೋಭೆ ತರುವಂತದ್ದಲ್ಲ ಇಬ್ಬರು ಯೋಚನೆ ಮಾಡಲಿ. ಕೆಆರ್‍ಎಸ್ ನಿಜವಾಗಿ ಬಿರುಕು ಬಿಟ್ಟಿದ್ದರೆ, ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಆ ಕೆಲಸವನ್ನು ನೀರಾವರಿ ಇಲಾಖೆ ನಿಶ್ಚಿತವಾಗಿ ಕೈಗೆತ್ತಿಕೊಳ್ಳುತ್ತದೆ. ಪರಸ್ಪರ ಆರೋಪಗಳನ್ನು ಮಾಡಿಕೊಳ್ಳೋದು ಶೋಭೆಯಲ್ಲ. ಇಲ್ಲಿ ವೈಯಕ್ತಿಕ ವಿಚಾರ, ಹಳೇ ಜಟಾಪಟಿಯನ್ನು ಮುಂದುವರೆಸೋದು ಸರಿಯಲ್ಲ ಎಂದರು.

    ಉಡುಪಿ ಜಿಲ್ಲೆ ಕಾರ್ಕಳದ ರಾಧಾಕೃಷ್ಣ ಹಿರ್ಗಾನ ಎಂಬ ವ್ಯಕ್ತಿಯು ಸೈನ್ಯವನ್ನು ಅವಹೇಳನ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿದ ವಿಚಾರದಲ್ಲಿ ಸಿದ್ದರಾಮಯ್ಯ ಆತನ ಪರ ಟ್ವೀಟ್ ಮಾಡಿರೋದು ಸರಿಯಲ್ಲ. ಸೈನ್ಯವನ್ನು ಅವಹೇಳನ ಮಾಡಿದ ವ್ಯಕ್ತಿಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದು ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ಭಾರತೀಯ ಸೈನಿಕರನ್ನು ಕೊಲ್ಲಿ ಎಂದ ವಿಚಾರವನ್ನು ಖಂಡಿಸಬೇಕಿತ್ತು. ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಈ ಥರ ಯಾರಾದರೂ ಹೇಳಿದ್ದರೆ ಯಾವುದೇ ಭಾರತೀಯನಿಗೆ ಸಹಜವಾಗಿ ಸ್ವಾಭಿಮಾನ ಕೆರಳುತ್ತದೆ, ಸಿದ್ದರಾಮಯ್ಯ ಆತನನ್ನು ಬೆಂಬಲಿಸಿರುವುದು ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕ್ರಮ ಜರುಗಿಸಿದ್ದು ತಪ್ಪು ಎನ್ನುತ್ತಾರೆ. ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

  • ಕುಶ ಆನೆಯನ್ನು ಮರಳಿ ಕಾಡಿಗೆ ಬಿಡಿ – ಅರಣ್ಯಧಿಕಾರಿಗಳಿಗೆ ಲಿಂಬಾವಳಿ ಸೂಚನೆ

    ಕುಶ ಆನೆಯನ್ನು ಮರಳಿ ಕಾಡಿಗೆ ಬಿಡಿ – ಅರಣ್ಯಧಿಕಾರಿಗಳಿಗೆ ಲಿಂಬಾವಳಿ ಸೂಚನೆ

    ಮಡಿಕೇರಿ: ದುಬಾರೆಯಲ್ಲಿರುವ ಕುಶ ಆನೆಯನ್ನು ಮರಳಿ ಕಾಡಿಗೆ ಬಿಡುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಲಿಂಬಾವಳಿ ಸೂಚನೆ ನೀಡಿದ್ದಾರೆ.

    ಕಳೆದ ವರ್ಷ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಹೋಗಿದ್ದ ಸಾಕಾನೆ ಕುಶಾ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವತರು ಸೆರೆಹಿಡಿದಿದ್ದು ದುಬಾರೆ ಅರಣ್ಯ ಪ್ರದೇಶಕ್ಕೆ ಕರೆ ತಂದಿದ್ದರು. ಆದರೆ ಇದೀಗಾ ಸಾಕಾನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅರಣ್ಯಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶನನ್ನು ಸೆರೆ ಹಿಡಿದು ತರಲಾಗಿತ್ತು. ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಇಂದು ಸಭೆ ನಡೆಸಿ ಮಾಹಿತಿ ಪಡೆದರು. ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ. ಕುಶ ಆನೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಸಚಿವರು ಕುಶ ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಬಿಡುಗಡೆಗೆ ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು.

    ಇದೇ ಸಂದರ್ಭದಲ್ಲಿ ದುಬಾರೆ ಸಮೀಪ ಪ್ರಜ್ಞಾ ಚೌಟ ಎಂಬವರು ಆನೆಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಕ್ತವಾಗಿರುವ ಆಕ್ಷೇಪಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅವರ ಸುಪರ್ದಿಯಲ್ಲಿರುವ ಆನೆಗಳನ್ನು ಇಲಾಖೆ ವಶಕ್ಕೆ ಪಡೆಯುವ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಸಂಜಯ್ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರು ಮತ್ತು ವಿಜಯಕುಮಾರ್ ಗೋಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ,) ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು.

  • ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಬೆಂಗಳೂರು: ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ರಾಜ್ಯಪಾಲರಾದ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಆಮಂತ್ರಣ ನೀಡಿದರು.

    ರಾಜಭವನದಲ್ಲಿ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಅರವಿಂದ ಲಿಂಬಾವಳಿ ಪುಷ್ಪ ಗುಚ್ಚವನ್ನು ನೀಡಿ, ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿ ಕೇಳಿಕೊಂಡರು. ಈ ಸಂದರ್ಭ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಜೊತೆಗಿದ್ದರು.

    ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಮೂರು ಸ್ಥಳಗಳನ್ನು ಒಳಗೊಂಡಂತೆ ದೇಶದ 75 ಸ್ಥಳಗಳಲ್ಲಿ 75 ವಾರಗಳ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯನ್ನು ರಾಜ್ಯಪಾಲರೊಂದಿಗೆ ಸಚಿವರು ಮಾಹಿತಿ ಹಂಚಿಕೊಂಡರು.

  • ಸಚಿವರೊಬ್ಬರು ಕರೆ ಮಾಡಿ ನನ್ನನ್ನೇ ಕೇಳಿದ್ರು- ಅರವಿಂದ ಲಿಂಬಾವಳಿ

    ಸಚಿವರೊಬ್ಬರು ಕರೆ ಮಾಡಿ ನನ್ನನ್ನೇ ಕೇಳಿದ್ರು- ಅರವಿಂದ ಲಿಂಬಾವಳಿ

    ಬೆಂಗಳೂರು: ಇತ್ತೀಚೆಗೆ 2 ಬಾರಿ ಸಚಿವರಾಗಿದ್ದವರು ದೂರವಾಣಿ ಕರೆ ಮಾಡಿ ನನ್ನನ್ನೇ ಕೇಳುವ ಮಟ್ಟಕ್ಕೆ ಬಂದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಎಷ್ಟರಮಟ್ಟಿಗೆ ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಬೆಳವಣಿಗೆಗಳನ್ನು ಕಂಡು ಈ ಷಡ್ಯಂತ್ರ ನಡೆಯುತ್ತಿದೆ. ನನ್ನ ವಿರುದ್ಧವೂ ಕಾಂಗ್ರೆಸ್-ಜೆಡಿಎಸ್ ನಾಯಕರಿಂದ ಷಡ್ಯಂತ್ರ ನಡೆಯುತ್ತಿದೆ. ಮೈತ್ರಿ ನಾಯಕರ ಜೊತೆ ನಮ್ಮ ಪಕ್ಷದ ಒಂದಿಬ್ಬರು ನಾಯಕರು ಕೈಜೋಡಿಸಿ ಸಂಚು ಮಾಡುತ್ತಿದ್ದಾರೆ. ಯಾವ ಷಡ್ಯಂತ್ರ ಎಂದು ಸಂದರ್ಭ ಬಂದಾಗ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಯಾವ ವಿಚಾರ ಎನ್ನುವುದನ್ನು ಲಿಂಬಾವಳಿ ಅವರು ಸ್ಪಷ್ಟವಾಗಿ ಹೇಳಲಿಲ್ಲ.

    ವಿಶ್ವಾಸ ಮತವನ್ನು ಇಂದಾದರೂ ಮುಗಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಸ್ಪೀಕರ್ ಅವರಿಗೆ ಪತ್ರ ಬರೆಯುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದ್ದೇವೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ರೀತಿಯ ಬೆಳವಣಿಗೆಗಳನ್ನು ರಾಜ್ಯದ ಆಡಳಿತಾರೂಢ ಸರ್ಕಾರ ಮಾಡುತ್ತಿದೆ ಎಂದರು.

    ಶಾಸಕರಿಗೆ ಹೆದರಿಸುವುದು, ಬಿಜೆಪಿ ಶಾಸಕರಿಗೆ ಆಮಿಷ ತೋರಿಸುವ ಕೆಲಸವನ್ನೂ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಇಂದು ಇದನ್ನು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಸದನದ ಬೆಳವಣಿಗೆ ನೋಡಿ ನಾಳೆ ತೆಗೆದುಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದರು.

    ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇನ್ನಾದರೂ ವಾಮಮಾರ್ಗಗಳನ್ನು ಬಿಟ್ಟು ಸದನದೊಳಗೆ ತಮ್ಮ ವಿಶ್ವಾಸ ಮತವನ್ನು ಕೇಳಬೇಕು ಎಂದು ಒತ್ತಾಯಿಸಿದರು.