Tag: aravind limbavali

  • ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮಹದೇವಪುರ ವಲಯದ ವಿವಿಧ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜಿಂಗ್ ಕೇಂದ್ರಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಅವರು, ಕೋವಿಡ್ ಸೋಂಕಿತರು ಪಾಸಿಟಿವ್ ಬಂದಿದ್ದರೂ ಹೊರಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಸೋಂಕಿತರು ಮನೆಯೊಳಗೆ ಇರಬೇಕು, ಹೊರಗೆ ತಿರುಗುವುದರಿಂದ ಇತರರಿಗೂ ಸೋಂಕು ಹಬ್ಬುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೊರಗೆ ಸುತ್ತುತ್ತಿರುವ ಸೋಂಕಿತರನ್ನು ಪತ್ತೆ ಮಾಡಲು ಪೊಲೀಸರ ನೆರವು ಪಡೆಯಲಾಗುವುದು ಎಂದು ತಿಳಿಸಿದರು.

    ಒಂದೇ ಶೌಚಾಲಯ ಇರುವ ಮನೆಗಳಲ್ಲಿ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರುವುದು ಕಷ್ಟ, ಅಂತಹವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರು ಟ್ರೈಯಾಜಿಂಗ್ ಕೇಂದ್ರಕ್ಕೆ ಬಂದ ನಂತರ ಪರಿಶೀಲನೆ ಮಾಡಿ, ವೈದ್ಯಕೀಯ ಚಿಕಿತ್ಸೆಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುವುದು ಎಂದರು.

    ಮೊದಲು ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟನೆ ಮಾಡಲಾಯಿತು, ನಂತರ ಹಾಡೋಸಿದ್ದಾಪುರದ ಐವಿರೋಜ್ ರೆಸಾರ್, ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು. ಮಂಡೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್, ಬಿದರಹಳ್ಳಿ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹತ್ತಿರ ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು.

  • ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ರಾಜ್ಯದಲ್ಲಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡ ಲಿಂಬಾವಳಿ

    ಕೋಲಾರ: ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕ್ರೇಜ್ ಹಾಗೂ ಕೊರೊನಾ ಹೆದರಿಕೆ ಶುರುವಾಗಿದೆ. ಹಾಗಾಗಿ ವ್ಯಾಕ್ಸಿನ್‍ಗೆ ಬೇಡಿಕೆ ಸೃಷ್ಟಿಯಾಗಿರುವ ಕಾರಣ ರಾಜ್ಯದಲ್ಲಿ ಅವ್ಯವಸ್ಥೆ ಆಗಿದೆ ಎಂದು ಕೋಲಾರದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ವ್ಯಾಕ್ಸಿನ್ ಅವ್ಯವಸ್ಥೆಯನ್ನ ಒಪ್ಪಿಕೊಂಡಿದ್ದಾರೆ.

    ಕೋಲಾರದ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ ಭೇಟಿ ನೀಡಿ ಬೆಡ್, ಆಕ್ಸಿಜನ್, ವ್ಯಾಕ್ಸಿನ್ ಸೇರಿದಂತೆ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಕುರಿತು ಸಿಎಂ ಕೂಡ ಹೇಳಿದ್ದಾರೆ. ರಾಜ್ಯದಲ್ಲಿ ಜನರು ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯಕ್ಕೆ ಬೇಕಾದ ವ್ಯಾಕ್ಸಿನ್ ನಮಗೆ ಸಿಗುತ್ತೆ ಎಂದಿದ್ದಾರೆ.

    ಕೋವಿಶೀಲ್ಡ್ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಆದರೆ ಕೊವ್ಯಾಕ್ಸಿನ್ ಸಿಗುತ್ತಿಲ್ಲ. ರಾಜ್ಯದಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳಲೇ ಬೇಕು ಎಂದು ರಾಜ್ಯದಲ್ಲಿರುವ ವ್ಯಾಕ್ಸಿನ್ ಅವ್ಯವಸ್ಥೆ ಒಪ್ಪಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಉತ್ಪಾದನೆ ಕಡಿಮೆಯಾಗಿದ್ದು, ನಮಗಿಂತ ಬೇರೆ ರಾಜ್ಯದಲ್ಲಿ ಹೆಚ್ಚು ಆರ್ಡರ್ ಮಾಡಿದ್ದಾರೆ. ಹಾಗಾಗಿ ಇರುವುದರಲ್ಲಿ ಅಡ್ಜಸ್ಟ್ ಮಾಡಿ ಕೊಡುತ್ತಿದ್ದಾರೆ ಎಂದರು.

    ಸೋಂಕಿನ ಪ್ರಮಾಣ ಹೆಚ್ಚಾದಂತೆ ಜನರಲ್ಲಿ ಅರಿವು ಹೆಚ್ಚಾಗಿದೆ. ಶೇ.30 ರಷ್ಟು ಸೋಂಕಿತ ಜನರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸೋಂಕು ಹರಡಲು ಮತ್ತಷ್ಟು ಕಾರಣವಾಗಿದೆ. ಲಾಕ್‍ಡೌನ್ ಅನಿವಾರ್ಯತೆಯನ್ನು ಜನರೇ ನಿರ್ಮಾಣ ಮಾಡುತ್ತಿದ್ದಾರೆ.

    ರಾಜ್ಯದಲ್ಲಿ ಕೇಸ್‍ಗಳು ಹೆಚ್ಚಾದರೆ ತಪ್ಪೇನಿಲ್ಲ, ಯಾಕೆಂದರೆ ನಮ್ಮಲ್ಲಿ ಟೆಸ್ಟಿಂಗ್‍ಗಳು ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಏನಾಗುತ್ತದೆ ಅಂತ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಾಹಯಕತೆಯನ್ನ ಹೇಳಿಕೊಂಡಿದ್ದಾರೆ. ಬೆಳಿಗ್ಗೆ ಒಂದು ರೀತಿ ಇದ್ದರೆ ಸಂಜೆಗೆ ಮತ್ತೊಂದು ಥರ ದೇಹದಲ್ಲಿ ಬದಲಾಗುತ್ತದೆ. ರೋಗ ಲಕ್ಷಣ ಇದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಕೂಡಲೇ ಕಳುಹಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ, ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದರು.

  • ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ನೈಟ್ ಕರ್ಫ್ಯೂ ಮೇಲ್ನೋಟಕ್ಕೆ, ನಾವು ನಿರ್ಬಂಧಿಸಿರುವುದು ನೈಟ್ ಲೈಫ್: ಅರವಿಂದ ಲಿಂಬಾವಳಿ

    ಚಾಮರಾಜನಗರ: ನೈಟ್ ಕರ್ಫ್ಯೂ ಜಾರಿಗೆ ತಂದಿರುವುದು ಮೇಲ್ನೋಟಕ್ಕೆ ಆದರೆ ನಾವೂ ನೈಟ್‍ಲೈಫ್‍ನ್ನು ನಿರ್ಬಂಧ ಮಾಡಿದ್ದೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ರಾಜ್ಯದಲ್ಲಿ ನೈಟ್ ಕರ್ಫ್ಯೂ ಕುರಿತು ಚಾಮರಾಜನಗರದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ನೈಟ್ ಕರ್ಫ್ಯೂ ಕುರಿತು ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಜನರ ರಕ್ಷಣೆ ಮಾಡುವ ಹೊಣೆ ಸರ್ಕಾರದ್ದಾಗಿದೆ. ವಿರೋಧ ಪಕ್ಷದವರಿಗೆ ಸಹಕಾರ ಕೊಡುವಂತೆ ನಾವು ಮನವಿ ಮಾಡುತ್ತೇವೆ. ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಕೂಡ ಸರ್ಕಾರ ಹಾಗೂ ವಿರೋಧ ಪಕ್ಷ ಇದೆ. ಅವರು ಯಾವ ರೀತಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ನೋಡಿ ಎಂದರು.

    ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ಸೂಚಿಸಿ. ನೈಟ್ ಕರ್ಫ್ಯೂ ಅನ್ನೋದು ನಿಮಗೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದರೆ ನೈಟ್‍ಲೈಫ್‍ನ್ನು ನಿರ್ಬಂಧಿಸಿದ್ದೇವೆ. ನೇರವಾಗಿ ಹೇಳುವುದಾದರೆ. ಕ್ಲಬ್, ಬಾರ್, ರೆಸ್ಟೋರೆಂಟ್‍ಗಳು ರಾತ್ರಿ ಒಂದು ಗಂಟೆಯ ವರೆಗೆ ಓಪನ್ ಇರುತ್ತದೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ: ಲಿಂಬಾವಳಿ

    ಚಾಮರಾಜನಗರ: ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಗಡಿ ಜಿಲ್ಲೆಯ ಬಂಡೀಪುರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದೆ, ಈ ಹಿನ್ನಲೆಯಲ್ಲಿ ಕಾಡಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬೇಸಿಗೆ ಇರುವುದರಿಂದ ಪ್ರಾಣಿಗಳ ಸಮಸ್ಯೆ ಕೂಡ ಆಲಿಸಲಾಗಿದೆ. ಸೋಲಾರ್ ಪಂಪ್ ಗಳ ಮೂಲಕ ಕೆಲವೆಡೆ ನೀರು ತುಂಬಿಸಲಾಗುತ್ತಿದೆ. ಮುಂದಿನ ಬೇಸಿಗೆ ವೇಳೆಗೆ ಪ್ರಾಣಿಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಬಂಡೀಪುರದಲ್ಲಿ ಪ್ರಾಣಿಗಳಿಗೆ ನೀರಿನ ದೊಡ್ಡ ಅಭಾವವಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೊಂದರೆಯಾಗದಂತೆ ಕ್ರಮವಹಿಸುವಂತೆ ತಿಳಿಸಿದರು.

    ಇದೇ ವೇಳೆ ಹುಲಿಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಟ್ಟಿಗೆ ಬಂಡೀಪುರ ಫಾರೆಸ್ಟ್ ರೌಂಡ್ ಹಾಕಿದ್ದರು. ಈ ವೇಳೆ ಎರಡು ಕಡೆ ಹುಲಿ ಪ್ರತ್ಯಕ್ಷವಾಗಿವೆ. ತೀರಾ ಅಪರೂಪಕ್ಕೆ ದರ್ಶನ ಕೊಡುವ ಹುಲಿಗಳು ಸಚಿವರಿಗೆ ಎರಡು ಕಡೆ ದರ್ಶನ ಕೊಟ್ಟಿರೋದು ವಿಶೇಷ. ಬಂಡೀಪುರದ ಕಡುಬನಕಟ್ಟೆ, ಗಾರೆಪಾಲದ ಬಳಿ ಹುಲಿ ದರ್ಶನವಾಗಿದೆ. ಕಡುಬನಕಟ್ಟೆ ಬಳಿ ನೀರಿನಲ್ಲಿ ಕುಳಿತಿದ್ದ ಹುಲಿ ದರ್ಶನವಾಗಿದೆ. ಇದರ ಜೊತೆಗೆ ಆನೆಗಳ ಹಿಂಡಿನ ದರ್ಶನ ಸಹ ಆಗಿದೆ.

  • ಶೀಘ್ರದಲ್ಲೇ ನಾಡಗೀತೆಗೆ ಕತ್ತರಿ – ಅರವಿಂದ ಲಿಂಬಾವಳಿ

    ಶೀಘ್ರದಲ್ಲೇ ನಾಡಗೀತೆಗೆ ಕತ್ತರಿ – ಅರವಿಂದ ಲಿಂಬಾವಳಿ

    ಗದಗ: ನಾಡಗೀತೆ ಬಹಳ ಸುದೀರ್ಘವಾಗಿ ಇರುವುದರಿಂದಾಗಿ ಪುನರ್ ಪರಿಶೀಲನೆ ಮಾಡಿ ಶೀಘ್ರದಲ್ಲೇ ನಾಡಗೀತೆ ಕಡಿತಕ್ಕೆ ಚಿಂತನೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರವಿಂದ್ ಲಿಂಬಾವಳಿ, ನಾಡಗೀತೆಗೆ ಶೀಘ್ರದಲ್ಲೆ ಕತ್ತರಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು ಶೀಘ್ರ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ನಾಡಗೀತೆ ದೊಡ್ಡದಾಗಿರುವುದರಿಂದ ಹಿರಿಯ ವಯಸ್ಕರು ನಿಂತುಕೊಳ್ಳಲು ಕಷ್ಟ ಆಗುತ್ತಿದೆ. ಹಾಗಾಗಿ ಈ ಹಿಂದೆಯೂ ನಾಡಗೀತೆಯ ಕಡಿತ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕಡಿಮೆ ಅವಧಿಯಲ್ಲಿ ಸಂಪೂರ್ಣ ನಾಡಗೀತೆ ಹಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದರು.

    ಕೊರೊನಾ ಮತ್ತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಕೊರೊನಾದಿಂದ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಿಕೆಗೆ ಚಿಂತನೆ ಮಾಡಲಾಗಿದೆ. ಮಾರ್ಚ್ 9 ರಂದು ಸಮ್ಮೇಳನ ಬಗ್ಗೆ ಪೂರ್ವಭಾವಿ ಸಭೆ ಮಾಡಬೇಕಿತ್ತು. ಆದರೆ ನಿನ್ನೆ ಕರ್ನಾಟಕ ಸರ್ಕಾರ 500 ಕ್ಕಿಂತ ಹೆಚ್ಚು ಜನ ಸೇರಬಾರದೆಂದು ಹೊಸ ಆದೇಶ ಹೊರಡಿಸಿರುವುದರಿಂದಾಗಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಬಗ್ಗೆ ನಾನು ಚಿಂತನೆ ಮಾಡುತ್ತಿದ್ದೇನೆ. ಸಹಜವಾಗಿ ಸರ್ಕಾರ ಜನರ ಬಗ್ಗೆ ಕಾಳಜಿ ಇರುವುದರಿಂದ ಹೊಸ ನೀತಿ ರೂಪಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದರು.

    ಈ ಮೊದಲು ಸಚಿವರು ಬೆಂಕಿಗಾಹುತಿಯಾದ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಹಾಗೂ ಗಣಿಗಾರಿಕೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.

    ಸಚಿವರೊಂದಿಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

  • 14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    ಬೆಂಗಳೂರು: ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ 14 ಸಾವಿರ ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಜಕ್ಕಾಸಂದ್ರದಲ್ಲಿ ಉದ್ಘಾಟಿಸಿದರು.

    ಸೇ ಟ್ರೀಸ್ (say tree) ಎನ್ವಿರಾನ್ಮೆಂಟಲ್ ಟ್ರಸ್ಟ್‌ ಈ ಕಾರ್ಯಕ್ರಮ ಆಯೋಜಿಸಿತ್ತು. ಕೆಎಸ್ಆರ್ ಪಿ ಪೊಲೀಸ್ ಕ್ವಾಟ್ರರ್ಸ್, ಜಕ್ಕಸಂದ್ರ 1ನೇ ಬ್ಲಾಕ್, ಕೋರಮಂಗಲದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ಗಿಡ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

    14 ಸಾವಿರ ಗಿಡ ನೆಡುವ ಉದ್ದೇಶಿತ ಯೋಜನೆಯ ಜಾಗ ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಜಂಕ್ಷನ್ ನಿಂದ‌ ಕೇವಲ 200 ಮೀಟರ್ ದೂರದಲ್ಲಿದೆ. ಮಿಯಾವಾಲ್ಕಿ ಅರಣ್ಯ ಎಂದು ಕರೆಯಲ್ಪಡುವ ಈ ದಟ್ಟವಾದ ಗಿಡವನ್ನು ನೆಟ್ಟ ಪ್ರದೇಶದ ಮರಗಳು ,ಸಾಮಾನ್ಯ ಮರಗಳಿಗಿಂತ ಶೇ. 30-40 ರಷ್ಟು ವೇಗವಾಗಿ ಬೆಳೆಯುತ್ತವೆ ಮತ್ತು ಕೇವಲ 2.5 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಕೇಂದ್ರ ರೇಷ್ಮೆ ಮಂಡಳಿಯ ಸುತ್ತಲಿನ ಪ್ರದೇಶದ ಮಾಲಿನ್ಯವನ್ನು ಕಡಿಮೆ ಮಾಡಲಿದೆ.

    ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬೆಂಗಳೂರನಲ್ಲಿ ಕಾಡು ಬೆಳಸುತ್ತಿರುವುದು ಸಂತಸದ ಸಂಗತಿ, ಬೆಂಗಳೂರಿನಲ್ಲಿ ಶೇ.9 ರಷ್ಟು ಕಾಡಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ರಷ್ಟು ಕಾಡಿದೆ. ಕೆಎಸ್‌ಆರ್‌ಪಿ ಕ್ಯಾಂಪಸ್ ನ ನಿವಾಸಿಗಳು ಇಲ್ಲಿನ ಗಿಡಗಳ ರಕ್ಷಣೆ ಮಾಡಿ ಬೆಳೆಸಬೇಕು ಎಂದು ಅವರು ಹೇಳಿದರು.

    ಸ್ಥಳೀಯ ನಿವಾಸಿಗಳು ಒಂದೊಂದು ಗಿಡದ ರಕ್ಷಣೆ ಮಾಡಿದರೆ ಉತ್ತಮವಾಗಿ ಗಿಡಗಳು ಬೆಳೆಯುತ್ತವೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಯೋಜನೆಯಿದ್ದು, ಯಾರಾದರು ಜಮೀನು ನೀಡಿದರೆ ಟ್ರಿ ಪಾರ್ಕ್ ಮಾಡಲಾಗುವುದು. ಸೋಶಿಯಲ್ ಫಾರೆಸ್ಟ್ ನಿರ್ಮಾಣ ನಾವೆಲ್ಲರೂ ಮಾಡಬೇಕಿದೆ, ಕಾಡು ಬೆಳೆದರೆ ನಾಡು ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ, ನಾಡು ಉಳಿಸೋಣ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿಧಾನಪರಿಷತ್ತನ ಸದಸ್ಯರಾದ ರಘುನಾಥ ಮಲ್ಕಾಪುರ, ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್ ಪಿ ಡಿಐಜಿಪಿ ವಿಕಾಶ್ ಕುಮಾರ್ ವಿಕಾಶ್, ಬಿಬಿಎಂಪಿ ಮಾಜಿ ಸದಸ್ಯರಾದ ಸರಸ್ವತಮ್ಮ, ಕ್ಲೆಮೆಂಟ್ ಜಯಕುಮಾರ, ದೇವಕಾಂತ, ದುರ್ಗೇಶ ಅಗ್ರಹಾರ, ಮದಸೂದನ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ಅರಣ್ಯಕ್ಕೆ ಹೋಗುವಾಗ ಪತ್ನಿ ಜೊತೆಗೆ ಹೋಗುತ್ತೀರಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಚಿವ ಅರವಿಂದ ಲಿಂಬಾವಳಿಯನ್ನು ಪ್ರಶ್ನಿಸಿದ್ದಾರೆ.

    ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಉತ್ತರ ಕೊಡಲು ಮುಂದಾದಾಗ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿದರು.

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ ಅಥವಾ ಒಬ್ಬನೇ ಹೋಗುತ್ತೀರಾ ಎಂದು ಪ್ರಶ್ನಿಸುವ ಮೂಲಕ ರಮೇಶ್ ಕುಮಾರ್, ಲಿಂಬಾವಳಿ ಕಾಳೆಲೆದಿದ್ದಾರೆ. ಇದಕ್ಕೆ ಉತ್ತರಿಸಿದ ಲಿಂಬಾವಳಿ, ಪತ್ನಿ ಸಮೇತ ಹೋಗಲ್ಲ, ನಾನೊಬ್ಬನೇ ಹೋಗುತ್ತೇನೆ. ಅರಣ್ಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ. ಇದರಿಂದ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • ಸಾಲುಮರದ ತಿಮ್ಮಕ್ಕ ಮನೆಗೆ ಅರಣ್ಯ ಸಚಿವ ಲಿಂಬಾವಳಿ ಭೇಟಿ

    ಸಾಲುಮರದ ತಿಮ್ಮಕ್ಕ ಮನೆಗೆ ಅರಣ್ಯ ಸಚಿವ ಲಿಂಬಾವಳಿ ಭೇಟಿ

    ಬೆಂಗಳೂರು: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಇಂದು ಸಾಲುಮರದ ತಿಮ್ಮಕ್ಕ ಅವರ ಮನೆಗೆ ತೆರಳಿ ಸಲಹೆ, ಸೂಚನೆಗಳನ್ನು ಪಡೆದಿದ್ದಾರೆ.

    ದಾಸರಹಳ್ಳಿಯ ಮಂಜುನಾಥ ನಗರದಲ್ಲಿರುವ ವೃಕ್ಷ ಮಾತೆ, 110 ವಯಸ್ಸಿನ ಸಾಲುಮರದ ತಿಮ್ಮಕ್ಕ ರವರ ಮನೆಗೆ ಭೇಟಿ ನೀಡಿ, ಅವರ ಯೋಗಕ್ಷೇಮ ವಿಚಾರಿಸಿ, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ಪಡೆಯಲಾಯಿತು ಎಂದು ಲಿಂಬಾವಳಿ ಟ್ವೀಟ್‌ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

    ಬೆಂಗಳೂರು: ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ದೈವ ಮಾನವನ ಮೊರೆ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ನೋವಿನಲ್ಲಿ ಶಾಸಕ ಅರವಿಂದ ಲಿಂಬಾವಳಿ, ವಿನಯ್ ಗುರೂಜಿ ಮೊರೆ ಹೋಗಿದ್ದಾರೆ. ದೈವ ಮಾನವನ ಮಾತು ಕೇಳಿ ಲಿಂಬಾವಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

    ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಜೊತೆಗೆ ಮೂಲ ಬಿಜೆಪಿ ಶಾಸಕರು ಕೆಲವರು ಸಚಿವರಾಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮೂಲ ಬಿಜೆಪಿ ಶಾಸಕರ ಪ್ರಮಾಣ ವಚನ ಸ್ವೀಕಾರ ರದ್ದಾಗಿತ್ತು. ಹಾಗೆಯೇ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡವರಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಹ ಒಬ್ಬರು. ತಮಗಾದ ಕೊನೆ ಗಳಿಗೆಯ ನಿರಾಸೆಯಿಂದ ಬೇಸರಗೊಂಡ ಲಿಂಬಾವಳಿ ದೈವ ಮಾನವ ವಿನಯ ಗುರೂಜಿ ಮೊರೆ ಹೋಗಿದ್ದಾರೆ.

    ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಶರವಣ ಜೊತೆ ವಿನಯ್ ಗುರೂಜಿಯನ್ನ ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿತಿಸಿರುವ ವಿನಯ್ ಗುರೂಜಿ, ಸಚಿವರಾಗಲು ಇನ್ನೂ ಸ್ವಲ್ಪ ಸಮಯದವರೆಗೆ ಕಾಯುವುದು ಅನಿವಾರ್ಯ ಎಂದಿದ್ದಾರೆ. ಅಲ್ಲಿಗೆ ತಮಗೆ ಸಚಿವ ಸ್ಥಾನದ ಯೋಗ ಸದ್ಯಕ್ಕೆ ಇಲ್ಲಾ ಎಂಬುದು ಶಾಸಕ ಅರವಿಂದ ಲಿಂಬಾವಳಿಗೆ ಖಚಿತವಾಗಿದೆ. ಮೊದಲೇ ಸಚಿವ ಸ್ಥಾನದಿಂದ ಕೊನೆ ಗಳಿಗೆಯಲ್ಲಿ ವಂಚಿತರಾದ ಅರವಿಂದ ಲಿಂಬಾವಳಿ ಸದ್ಯಕ್ಕೆ ಸಚಿವ ಸ್ಥಾನದ ಅವಕಾಶ ಇಲ್ಲ ಎನ್ನುವ ದೈವ ಮಾನವನ ಮಾತು ಕೇಳಿ ಮತ್ತಷ್ಟು ಬೇಸರಗೊಂಡಿದ್ದಾರೆ.

  • ನಮ್ಗೆ ಶಾಸಕರ ಅಗತ್ಯವಿಲ್ಲ, ಅವರೇ ಬರ್ತೀನಿ ಅಂದ್ರೆ ಬಿಡೋದಕ್ಕೆ ಆಗಲ್ಲ- ಅರವಿಂದ ಲಿಂಬಾವಳಿ

    ನಮ್ಗೆ ಶಾಸಕರ ಅಗತ್ಯವಿಲ್ಲ, ಅವರೇ ಬರ್ತೀನಿ ಅಂದ್ರೆ ಬಿಡೋದಕ್ಕೆ ಆಗಲ್ಲ- ಅರವಿಂದ ಲಿಂಬಾವಳಿ

    ಬೆಂಗಳೂರು: ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ 9ರಂದು ಯಾರು ಬರ್ತಾರೆ ಅನ್ನೋದನ್ನ ಹೇಳುತ್ತೇವೆ. ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮಗೆ ಶಾಸಕರ ಅಗತ್ಯ ಇಲ್ಲ. ಆದರೆ ಅವರೇ ಬರುತ್ತೇನೆ ಎಂದು ಹೇಳಿದರೆ ಬಿಡೋದಕ್ಕೆ ಆಗಲ್ಲ. ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ ಆಗುತ್ತದೆ ಎಂದು ಉಪಚುನಾವಣೆ ಬಿಜೆಪಿ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಪಚುನಾವಣೆ ಬಳಿಕ ನಮ್ಮ ಸರ್ಕಾರ ಸುಭದ್ರವಾಗಲಿದೆ. ಮಹಾರಾಷ್ಟ್ರದ ಬೆಳವಣಿಗೆ ಬಳಿಕ ನಾನೂ ಸಿಎಂ ಆಗಬಹುದು ಅಂತ ಕಾಂಗ್ರೆಸ್ ನಾಯಕರಲ್ಲಿ ಆಸೆ ಹುಟ್ಟಿಕೊಂಡಿದೆ. ಜೆಡಿಎಸ್ ಕೂಡ ಸೋನಿಯಾ ಸೂಚನೆಗೆ ಕಾಯುತ್ತೇವೆ ಎಂದು ಹೇಳಿ ಈಗ ಮತ್ತೆ ಬಿಜೆಪಿ ಸರ್ಕಾರ ಸುಭದ್ರ ಅಂತಿದ್ದಾರೆ. ಇದೆಲ್ಲವೂ ಜನರನ್ನ ಗೊಂದಲದಲ್ಲಿ ಸಿಲುಕಿಸಲು ಸೃಷ್ಟಿಸಿ ಅವರೇ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದ ಬಿಜೆಪಿಗೆ ಸಹಾಯ ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು.

    ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್, ಜೆಡಿಎಸ್ ಗೆ ಇದ್ದಿದ್ರೆ ರಾಜ್ಯಸಭೆಗೆ ಅಭ್ಯರ್ಥಿ ಹಾಕಬಹುದಿತ್ತು. ಅವರಿಗೆ ವಿಶ್ವಾಸ ಇಲ್ಲದೇ ರಾಜ್ಯಸಭೆಗೆ ಸ್ಪರ್ಧಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಸಿ ರಾಮಮೂರ್ತಿ ಅವರು ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿದರು.

    ಇದೇ ವೇಳೆ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಹೈಕಮಾಂಡ್ ಚರ್ಚೆ ಮಾಡಿ ಅಂತಿಮಗೊಳಿಸುತ್ತಾರೆ. ಯಾರನ್ನು ಸೇರಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.