Tag: aranya bhavana

  • ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ: ಸಿದ್ದರಾಮಯ್ಯ

    ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ: ಸಿದ್ದರಾಮಯ್ಯ

    ಬೆಂಗಳೂರು: ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ರಾಷ್ಟ್ರೀಯ ಅರಣ್ಯ ಹುತಾತ್ಮ‌ರ ದಿ‌ನದ ಅಂಗವಾಗಿ ಅರಣ್ಯ ಭವನದಲ್ಲಿನ‌ (Aranya Bhavana) ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ. ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು. ಕಾಡು ಮತ್ತು ವನ್ಯ ಪ್ರಾಣಿ ಸಂಪತ್ತಿನ‌ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ಎಂದರೆ ನಾವು ನಮ್ಮ‌ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ ಎಂದರು.

    ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷ ರೂ. ಹೆಚ್ಚಿಸಲಾಗಿದೆ. ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

    ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹುತಾತ್ಮ‌ರ ಕುಟುಂಬದ ಸದಸ್ಯರು ಮತ್ತು ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಗಜಪಯಣ ಮುಗಿಸಿ ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

    ಮೈಸೂರು: ದಸರಾ ಮಹೋತ್ಸವ 2019ರ ಗಜಪಯಣಕ್ಕೆ ಗುರುವಾರ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗಿದ್ದು, ಈಗ ಗಜಪಯಣ ಮುಗಿಸಿ ಗಜಪಡೆ ಅರಮನೆ ನಗರಿಗೆ ಎಂಟ್ರಿ ಕೊಟ್ಟಿದೆ.

    ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಅರ್ಜುನ ಪಡೆ, ಜಿಲ್ಲೆಯ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದೆ. ಮೈಸೂರಿಗೆ ಲಾರಿಗಳಲ್ಲಿ ಅರ್ಜುನ, ಅಭಿಮನ್ಯು, ಧನಂಜಯ, ಈಶ್ವರ, ವಿಜಯ ಹಾಗೂ ವರಲಕ್ಷ್ಮಿ ಆನೆಗಳನ್ನು ಕರೆತರೆಲಾಯಿತು. ಒಟ್ಟು 6 ಆನೆಗಳು ಗಜಪಯಣ ಮುಗಿಸಿ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

    ಆಗಸ್ಟ್ 26ರಂದು ಅರಮನೆ ಗಜಪಡೆ ಪ್ರವೇಶಿಸಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈಶ್ವರ ಆನೆ ಭಾಗವಹಿಸುತ್ತಿದೆ. ದುಬಾರೆ ಕ್ಯಾಂಪ್‍ನಿಂದ ಈಶ್ವರ ಆನೆಯನ್ನು ಕರೆತರಲಾಗಿದೆ. ವಿಶೇಷವೆಂದರೆ ಈ ಬಾರಿ ಕೂಡ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಎಲ್ಲರ ಗಮನ ಸೆಳೆಯಲಿದ್ದು, ಸತತ 8ನೇ ಬಾರಿಗೆ ಅಂಬಾರಿಯನ್ನ ಹೊತ್ತ ಕೀರ್ತಿಗೆ ಅರ್ಜುನ ಪಾತ್ರವಾಗಲಿದ್ದಾನೆ.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು.