Tag: Aradhana Mahotsav

  • ರಾಯರ 354ನೇ ಆರಾಧನಾ ಮಹೋತ್ಸವ ಆಗಸ್ಟ್ 8ರಿಂದ ಆರಂಭ: ಮಂತ್ರಾಲಯ ಶ್ರೀ

    ರಾಯರ 354ನೇ ಆರಾಧನಾ ಮಹೋತ್ಸವ ಆಗಸ್ಟ್ 8ರಿಂದ ಆರಂಭ: ಮಂತ್ರಾಲಯ ಶ್ರೀ

    ರಾಯಚೂರು: ಮಂತ್ರಾಲಯದಲ್ಲಿ (Mantralaya) ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ (Aradhan Mahotsav) ಆಗಸ್ಟ್ 8ರಿಂದ 14ರವರೆಗೆ 7 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.

    ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು, 8ರಂದು ಧ್ವಜಾರೋಹಣ ಕಾರ್ಯಕ್ರಮ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಆಗಸ್ಟ್ 10ಕ್ಕೆ ಪೂರ್ವಾರಾಧನೆ, 11ಕ್ಕೆ ಮಧ್ಯಾರಾಧನೆ, 12ಕ್ಕೆ ಉತ್ತರಾಧನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: KRS ಡ್ಯಾಂ ಮೈಸೂರು ರಾಜಮನೆತನದ ತ್ಯಾಗದಿಂದ ನಿರ್ಮಾಣವಾಗಿದೆ – ಮಂತ್ರಾಲಯ ಶ್ರೀ

    ಆಗಸ್ಟ್ 8ರಂದು ಪ್ರತಿವರ್ಷದಂತೆ ತಿರುಮಲ ತಿರುಪತಿ ದೇವಸ್ಥಾನದಿಂದ ಬರುವ ಶ್ರೀನಿವಾಸ ದೇವರ ಶೇಷವಸ್ತ್ರವನ್ನ ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಆಗಸ್ಟ್ 10ರಂದು ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್‌ ಸೂಚನೆ

    ಆಗಸ್ಟ್ 12ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಇದೇ ವೇಳೆ ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ ಮಾಡಲಾಗುವುದು. ಮಹಾ ರಥೋತ್ಸವ ವೇಳೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪ ವೃಷ್ಠಿ ನಡೆಸಲಾಗುವುದು. ವಿವಿಧ ಕ್ಷೇತ್ರದ ಗಣ್ಯವ್ಯಕ್ತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

  • ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಇಂದು‌ ಚಾಲನೆ

    ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಇಂದು‌ ಚಾಲನೆ

    – ಮಂತ್ರಾಲಯದಲ್ಲಿ ಇಂದಿನಿಂದ ಏಳು ದಿನ ಸಪ್ತರಾತ್ರೋತ್ಸವ

    ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ (Guru Raghavendra) ಸನ್ನಿಧಿ ಮಂತ್ರಾಲಯದಲ್ಲಿ ಈಗ ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ.‌ ಇಂದಿನಿಂದ ಏಳು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ವೈಭವವೇ ಮಂತ್ರಾಲಯದಲ್ಲಿ ತೆರೆದುಕೊಳ್ಳಲಿದೆ. ಶಿಲಾ‌ಮಂಟಪಕ್ಕೆ ಭಕ್ತರು ನಿರ್ಮಿಸುತ್ತಿರುವ ಸ್ವರ್ಣಲೇಪಿತ ಕವಚ ಈ ಬಾರಿಯ ಆಕರ್ಷಣೆಯಾಗಿದ್ದು, ಮದುವಣಗಿತ್ತಿಯಂತೆ ಮಂತ್ರಾಲಯ (Mantralaya) ಸಿಂಗಾರಗೊಳ್ಳುತ್ತಿದೆ.

    ಕಲಿಯುಗ ಕಾಮಧೇನು, ಮಂತ್ರಾಕ್ಷತೆ ಮಹಿಮೆಯ ಮಹಾಪುರುಷ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ‌ ಸಂಭ್ರಮ ಮಂತ್ರಾಲಯದಲ್ಲಿ ಕಳೆಕಟ್ಟಿದೆ. ಇಂದು ಸಂಜೆ ಧ್ವಜಾರೋಹಣ ಮೂಲಕ ರಾಯರ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಚಾಲನೆ ನೀಡಲಿದ್ದಾರೆ. ರಾಯರು ಸಶರೀರವಾಗಿ ವೃಂದಾವನಸ್ಥರಾಗಿ 353 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭವನ್ನು ರಾಯರ ಆರಾಧನಾ ಮಹೋತ್ಸವವಾಗಿ ಆ.18 ರಿಂದ 24 ರವರೆಗೆ ಏಳು ದಿನಗಳ ಕಾಲ ಮಂತ್ರಾಲಯ ಮಠ ಹಾಗೂ ದೇಶ-ವಿದೇಶಗಳಲ್ಲಿರುವ ರಾಯರ ಶಾಖಾ ಮಠಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದನ್ನೂ ಓದಿ: ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಏಳು ದಿನಗಳ ಕಾಲ ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆ ರಾಯರ ಮಠ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಮುಖ್ಯವಾಗಿ ಆ.20 ಕ್ಕೆ ಪೂರ್ವಾರಾಧನೆ, 21 ಕ್ಕೆ ಮಧ್ಯಾರಾಧನೆ, 22 ಕ್ಕೆ ಉತ್ತರಾರಾಧನೆ ನಡೆಯಲಿದ್ದು, ರಥೋತ್ಸವಗಳು, ಮಹಾಪಂಚಾಮೃತ ಅಭಿಷೇಕ, ಮೂಲ ರಾಮದೇವರ ಉತ್ಸವ ಸೇರಿ ಹಲವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಆ.20 ರಂದು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ಬಹುಕೋಟಿ ಮೌಲ್ಯದ ಸುವರ್ಣ ಶಿಲಾಮಂಟಪ ಮೆಗಾ ಪ್ರಾಜೆಕ್ಟ್‌ ಈ ಬಾರಿಯ ಆರಾಧನಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಭಕ್ತರ ದೇಣಿಗೆಯಿಂದ ರಾಯರ ವೃಂದಾವನದ ಶಿಲಾಮಂಟಪಕ್ಕೆ ಚಿನ್ನದ ಕವಚ ತೊಡಿಸುವ ಕಾರ್ಯನಡೆದಿದ್ದು, ಪೂರ್ಣಗೊಂಡಿರುವ ಒಂದು ಭಾಗ ಈ ಬಾರಿ ಲೋಕಾರ್ಪಣೆಯಾಗಲಿದೆ. ಈಗಾಗಲೇ ಶಿಲಾಮಂಟಪದ ಗೋಪುರಕ್ಕೆ ಚಿನ್ನದ ಕವಚ ತೊಡಿಸಲಾಗಿದ್ದು, ಈಗ ಬಹುಕೋಟಿ ವೆಚ್ಚದಲ್ಲಿ ಶಿಲಾಮಂಟಪಕ್ಕೆ ಚಿನ್ನದ ಕವಚ ನಿರ್ಮಿಸಲಾಗುತ್ತಿದೆ. ಇದನ್ನೂ ಓದಿ: TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

    ತುಂಗಭದ್ರಾ ನದಿಯಲ್ಲಿ ಈ ಬಾರಿ ನೀರು ಇರುವುದರಿಂದ ಪುಣ್ಯ ಸ್ನಾನಕ್ಕೆ ಭಕ್ತರಿಗೆ ಅನುವುಮಾಡಿಕೊಡಲಾಗುತ್ತಿದೆ. ಸ್ನಾನ ಘಟ್ಟದಲ್ಲಿ ಶವರ್ ವ್ಯವಸ್ಥೆ ಸೇರಿ ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಮಠದ ಆಡಳಿತ ಮಂಡಳಿ ಮುಂದಾಗಿದೆ. ಹೀಗಾಗಿ ಮಠಕ್ಕೆ ಆಗಮಿಸುತ್ತಿರುವ ಭಕ್ತರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ರಾಯರ ಮಠದ ಆವರಣದಲ್ಲಿ ಪ್ರವಾಸಿ ಮಂದಿರ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿದ್ದು, ಆ.19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಏಳು ದಿನ ಕಾಲ ವಿವಿಧ ಕ್ಷೇತ್ರಗಳ ಗಣ್ಯರು, ದೇಶದ ಮೂಲೆ ಮೂಲೆಯಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.