Tag: Approval

  • ಸಂತೋಷ್ ಮಾಡಿದ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆಯೇ ಸಿಕ್ಕಿಲ್ಲ: ದರ್ಶನ್ ಹೆಚ್‌ವಿ ಸ್ಫೋಟಕ ಮಾಹಿತಿ

    ಸಂತೋಷ್ ಮಾಡಿದ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆಯೇ ಸಿಕ್ಕಿಲ್ಲ: ದರ್ಶನ್ ಹೆಚ್‌ವಿ ಸ್ಫೋಟಕ ಮಾಹಿತಿ

    ಬೆಳಗಾವಿ: ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಾಡಿರುವ ಕಾಮಗಾರಿಗಳಿಗೆ ಸರ್ಕಾರದಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆಯೇ ಸಿಕ್ಕಿಲ್ಲ ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಹೆಚ್‌ವಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಸಂತೋಷ್ ಪಾಟಿಲ್‌ರ ಕಾಮಗಾರಿಗಳ ಕುರಿತಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ಐಹೊಳೆಯವರ ಸಹಿಯನ್ನು ಫೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅನುಮೋದನೆ ಪತ್ರದಲ್ಲಿರುವ ಸಹಿ ನನ್ನದಲ್ಲ ಎಂದು ಆಶಾ ಐಹೊಳೆ ಹೇಳಿದ್ದಾರೆ. ಈ ಕುರಿತಂತೆ ತನಿಖೆಯಿಂದಷ್ಟೇ ಎಲ್ಲಾ ಮಾಹಿತಿ ಹೊರಬೀಳಬೇಕಿದೆ ಎಂದು ಸಿಇಒ ದರ್ಶನ್ ಹೇಳಿದ್ದಾರೆ.

    ಸಾಮಾನ್ಯವಾಗಿ ಜಿಪಂ ಅಧ್ಯಕ್ಷರಿಗೆ ಯಾರಾದರೂ ಮನವಿ ನೀಡಿದರೆ, ಅವರು ಆ ಮನವಿಯನ್ನು ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಹಿಂದಿನ ಜಿ.ಪಂ. ಅಧ್ಯಕ್ಷರು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ 2021ರ ಫೆಬ್ರವರಿ 15 ರಂದು ಪತ್ರ ಬರೆದಿದ್ದಾರೆ. ಅದರ ಕೆಳಗಡೆ 108 ಕಾಮಗಾರಿಗಳ ಬಗ್ಗೆ ಉಲ್ಲೇಖಿಸಿ ಪಟ್ಟಿ ಮಾಡಿ ಅದರ ಕೆಳಗಡೆ ಸಹಿ ಮಾಡಿದ್ದಾರೆ. ಮೊದಲ ಹಾಗೂ ಕೊನೆಯ ಪುಟದಲ್ಲಿ ಹಸಿರು ಶಾಯಿಯಿಂದ ಬರೆದಿರುವ ಸಹಿ ನನ್ನ ಹಸ್ತಾಕ್ಷರ ಅಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಮಸೀದಿಯ ಮೇಲೆ ನಾವೇನು ಬಾಂಬ್ ಹಾಕಿದ್ದೇವಾ?: ಮುತಾಲಿಕ್ ಗರಂ

    ಸಾಮಾನ್ಯವಾಗಿ ಕಾಮಗಾರಿಗೆ ಅನುಮೋದನೆ ಕೊಡಬೇಕಾದರೆ ಪಟ್ಟಿ ಮಾಡುವುದಿಲ್ಲ. ಅದಕ್ಕೆ ಅದರದ್ದೇ ಆದಂತಹ ಸರ್ಕಾರದ ನಿಯಮಗಳಿವೆ. ಫೈಲ್ ನೋಟಿಂಗ್ ಆಗಬೇಕು, ಇಲಾಖೆ ಮುಖ್ಯಸ್ಥರು, ಸಂಬಂಧಿಸಿದವರು ಅನುಮೋದನೆ ಕೊಡಬೇಕು. ಆಮೇಲೆ ಅದಕ್ಕೆ ಪ್ರತ್ಯೇಕವಾಗಿ ಸರ್ಕಾರಿ ಆದೇಶ ಬರುತ್ತದೆ. ಸರ್ಕಾರ ಮಟ್ಟದಲ್ಲಿ ಇಲಾಖೆ ಕಾರ್ಯಾದರ್ಶಿಗಳು, ಜಿಲ್ಲಾಮಟ್ಟದಲ್ಲಿ ನನ್ನ ಅನುಮೋದನೆ ಆಗಬೇಕು. ಆದರೆ ಈ ಕಾಮಗಾರಿಗಳಲ್ಲಿ ನನ್ನ ಮಟ್ಟದಲ್ಲೂ ಅನುಮೋದನೆ ಆಗಿಲ್ಲ ಎಂದು ಹಿಂಡಲಗಾದಲ್ಲಿ ನಡೆದ ಕಾಮಗಾರಿಗಳಿಗೆ ಸರ್ಕಾರ ಅಥವಾ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅನುಮೋದನೆ ಸಿಕ್ಕಿಲ್ಲ ಎಂದು ಈ ವೇಳೆ ಸ್ಪಷ್ಟಪಡಿಸಿದರು.

    ಹಿಂಡಲಗಾ ಗ್ರಾಮದಲ್ಲಿ 108 ಕಾಮಗಾರಿ ನಡೆದಿರುವ ವಿಚಾರ ನನಗೂ ಆಶ್ಚರ್ಯವಾಗಿದೆ. ಈ ರೀತಿ 108 ಕಾಮಗಾರಿ ಮಾಡಿರುವುದು ಅಚ್ಚರಿ ತಂದಿದೆ. ಇಷ್ಟೊಂದು ಸಮಸ್ಯೆಯಾದಾಗ ಅವರು ನಮ್ಮನ್ನು ಭೇಟಿ ಮಾಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈವರೆಗೂ ಯಾವೊಬ್ಬ ಗುತ್ತಿಗೆದಾರರೂ ನನ್ನನ್ನು ಭೇಟಿಯಾಗಿಲ್ಲ ಎಂದರು. ಇದನ್ನೂ ಓದಿ: ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರಿಗೆ, ಸದಸ್ಯರಿಗೆ ಲೆಟರ್ ಕೊಟ್ಟಿದ್ದು ನಿಜ: ಆಶಾ ಐಹೊಳೆ

    15ನೇ ಹಣಕಾಸಿನ ಆಯೋಗದಲ್ಲಿ ಗರಿಷ್ಠ ಎಂದರೂ 50 ರಿಂದ 60 ಲಕ್ಷ ರೂ. ಹಣ ಬರುತ್ತದೆ. ಆದರೆ 4 ಕೋಟಿ ರೂ. ಅನುದಾನ ಪಂಚಾಯಿತಿಗೆ ಬರುವುದಿಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ. ನಮ್ಮ ಕಡೆಯಿಂದ ಏನು ಮಾಹಿತಿ ಬೇಕು ಅದನ್ನು ಕೊಡುತ್ತಿದ್ದೇವೆ. ಈ ಕುರಿತು ಪತ್ರ ಬರೆದಿರುವುದು ನಿಜ. ಅನುಮೋದನೆ ಎಂದು ಬರೆದಿರುವುದು ನಿಜವಲ್ಲ. ಈ ಬಗ್ಗೆ ತನಿಖೆ ಆಗಬೇಕು, ಆಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಈ ಪತ್ರ ನೋಡಿದಾಗ ಫೋರ್ಜರಿ ಮಾಡಿದ್ದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದರು.

  • ಪುನೀತ್ ರಾಜ್ ಕುಮಾರ್ ರಸ್ತೆಗೆ ಬಿಬಿಎಂಪಿ ಅನುಮೋದನೆ : ಮತ್ತೊಂದು ದಾಖಲೆ ಬರೆದ ಡಾ.ರಾಜ್ ಕುಟುಂಬ

    ಪುನೀತ್ ರಾಜ್ ಕುಮಾರ್ ರಸ್ತೆಗೆ ಬಿಬಿಎಂಪಿ ಅನುಮೋದನೆ : ಮತ್ತೊಂದು ದಾಖಲೆ ಬರೆದ ಡಾ.ರಾಜ್ ಕುಟುಂಬ

    ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಬೆಂಗಳೂರಿನ ರಸ್ತೆಯೊಂದಕ್ಕೆ ಇಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮೋದಿಸಿದೆ. ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‌ ವರೆಗಿನ ವರ್ತುಲ ರಸ್ತೆಗೆ “ಪುನೀತ್ ರಾಜ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡುವ ಕುರಿತು ಬಿಬಿಎಂಪಿ ಸಭೆಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ತಗೆದುಕೊಳ್ಳಲಾಗಿದೆ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು


    ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ವರ್ತುಲ ರಸ್ತೆಗೆ ನಾಮಕರಣ ಮಾಡಬೇಕೆಂದು ಬಿಬಿಎಂಪಿಗೆ 700ಕ್ಕೂ ಹೆಚ್ಚು ಪುನೀತ್ ಅಭಿಮಾನಿಗಳು ಸಹಿ ಮಾಡಿದ ಮನವಿ ಪತ್ರ ನೀಡಿದ್ದರು. ಹಲವಾರು ಸಂಘ ಸಂಸ್ಥೆಗಳು ಕೂಡ ಪಾಲಿಕೆಗೆ ಪತ್ರಗಳನ್ನು ಬರೆಯುವ ಮೂಲಕ ಒತ್ತಾಯಿಸಿದ್ದವು. ಅಲ್ಲದೇ ಇದೇ ರಸ್ತೆಗೆ ಡಾ. ಅಂಬರೀಶ್ ಅವರ ಹೆಸರನ್ನು ಇಡಬೇಕು ಎಂದು ಅಂಬರೀಶ್ ಅಭಿಮಾನಿಗಳು ಕೂಡ ಮನವಿ ಪತ್ರ ಕೊಟ್ಟಿದ್ದರು. ಕೊನೆಗೂ ಬಿಬಿಎಂಪಿ ‘ಪುನೀತ್ ರಾಜ್ ಕುಮಾರ್ ರಸ್ತೆ’ಗೆ ಒಪ್ಪಿಗೆ ಕೊಟ್ಟಿದೆ. ಇದನ್ನೂ ಓದಿ : ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್


    ಈವರೆಗೂ ಒಂದೇ ಕುಟುಂಬದ ಮೂವರು ಕಲಾವಿದರ ಹೆಸರನ್ನು ಕರ್ನಾಟಕದ ಯಾವ ರಸ್ತೆಗೂ ನಾಮಕರಣ ಮಾಡಿಲ್ಲ. ಹಾಗಾಗಿ ಇದೊಂದು ದಾಖಲೆಯ ನಡೆ ಕೂಡ ಆಗಿದೆ. ಬೆಂಗಳೂರಿನ ಹಲವು ರಸ್ತೆಗಳಿಗೆ ಮತ್ತು ಮೇಲ್ಸೇತುವೆಗಳಿಗೆ ಡಾ.ರಾಜ್ ಕುಮಾರ್ ಹೆಸರು ಇಡಲಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರನ್ನು ಬೆಂಗಳೂರಿನ ಹಲವು ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ. ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’


    ಪುನೀತ್ ನಿಧನದ ನಂತರ ರಾಜ್ಯದ ಅನೇಕ ಕಡೆ ಪುನೀತ್ ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಹಲವು ರಸ್ತೆಗಳಿಗೆ ಹೆಸರನ್ನು ಇಡಲಾಗಿದೆ. ಈ ಮೂಲಕ ನಿರಂತರವಾಗಿ ಪುನೀತ್ ಅವರಿಗೆ ಅಭಿಮಾನಿಗಳು ಅಭಿಮಾನ ತೋರಿಸುತ್ತಿದ್ದಾರೆ.

  • ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶಗಳ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಸೌರವ್ ಗಂಗೂಲಿ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಇಂದು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶದ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ತಿಳಿಸಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ದ್ವಿಪಕ್ಷೀಯ ಸರಣಿ ನಡೆಯಬೇಕು ಎಂಬುದನ್ನು ನೀವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನ್ನು ಕೇಳಬೇಕು. ಇದು ದೇಶ ತೆಗೆದುಕೊಂಡಿರುವ ನಿರ್ಧಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಆಟವಾಡಬೇಕು ಎಂದರೆ ದೇಶದ ಅನುಮತಿ ಇರಬೇಕು. ಅದ್ದರಿಂದ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ ಎಂದು ಹೇಳಿದ್ದಾರೆ.

    ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಭಾರತದ ಪಾಕಿಸ್ತಾನಕ್ಕೆ 2004 ರಲ್ಲಿ ಪ್ರವಾಸ ಹೋಗಿತ್ತು. ಈ ಪ್ರವಾಸ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರವಾಸವಾಗಿತ್ತು. 1989ರ ನಂತರ ಮೊದಲ ಬಾರಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಹೋಗಿ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿತ್ತು.

    ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು 2012ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಭಾರತದಲ್ಲಿ ಆಡಿತ್ತು. ಈ ಸರಣಿಯಲ್ಲಿ ಭಾರತ ಎರಡು ಟಿ-20 ಪಂದ್ಯಗಳು ಮತ್ತು ಮೂರ ಏಕದಿನ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಯಲ್ಲಿ ಬಿಟ್ಟರೆ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

    ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಸಂಬಂಧ ಮಾತುಕತೆ ನಡೆದಿತ್ತು. ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ, ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿ ಹುದ್ದೆಗೆ ಸ್ಪರ್ಧಿಸಿದ್ದು ಅ.23ಕ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.