Tag: appolo hospital

  • ಸಚಿವ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ- ಇಂದು ಸಂಜೆ ಡಿಸ್ಚಾರ್ಜ್?

    ಸಚಿವ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ- ಇಂದು ಸಂಜೆ ಡಿಸ್ಚಾರ್ಜ್?

    ಬೆಂಗಳೂರು: ಫುಡ್ ಪಾಯ್ಸನ್ ನಿಂದ ಬಳಲುತ್ತಿದ್ದ ಸಚಿವ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

    ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಡಿಕೆಶಿಯವರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಬೆಳಗ್ಗೆ ಅಥವಾ ಸಂಜೆ ವೇಳೆ ಡಿಸ್ಚಾರ್ಜ್ ಆಗೋ ಸಾಧ್ಯತೆ ಇದೆ. ಮೂರು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕಾಗಿ ವೈದ್ಯರು ಸೂಚನೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಏನಾಗಿತ್ತು?:
    ಕಲಬುರಗಿಯಲ್ಲಿ ಪ್ರವಾಸ ಮುಗಿಸಿದ ಬಳಿಕ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿಗೆ ಬಂದ ಬಳಿಕ ತೀವ್ರವಾಗಿ ವಾಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಂದು ನಡೆದಿದ್ದ ಕನಕಪುರ ಕಾರ್ಯಕ್ರಮ ರದ್ದುಗೊಳಿಸಿ, ಕಗ್ಗಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ಬಳಿಕ ಸಚಿವರಿಗೆ ಕನಕಪುರದ ಸ್ವಗೃಹದಲ್ಲಿ ಐವರು ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗಿತ್ತು.

    ಹೈದರಾಬಾದ್ ನಿಂದ ಹೊರಟಿದ್ದ ವಿಮಾನದಲ್ಲಿ ಸ್ಯಾಂಡ್ ವಿಚ್ ತಿಂದ ಪರಿಣಾಮ ಸಚಿವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿತ್ತು. ಪರಿಣಾಮ ನಿತ್ರಾಣಗೊಂಡಿರುವ ಶಿವಕುಮಾರ್ ಅವರಿಗೆ ವೈದ್ಯರು ಗ್ಲುಕೋಸ್ ಹಾಕಿ, ಚಿಕಿತ್ಸೆ ನೀಡಿದ್ದರು. ಸದ್ಯ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಿ, ಗಲ್ಲಿಗೂ ಏರಲು ಸಿದ್ಧ: ಡಿಕೆಶಿ ಗುಡುಗು

    ಡಿಕೆಶಿಗೆ ಬಂಧನದ ಭೀತಿ:
    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ವಿರುದ್ಧ ಕೇಸ್ ದಾಖಲಿಸಿಕೊಂಡಿದೆ. ಸದ್ಯ ಡಿಕೆಶಿಗೆ ಬಂಧನದ ಭೀತಿ ಎದುರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್‍ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿದೆ.  ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ

    ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.

    ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿತ್ತು. ಈ ಕುರಿತು ಇಂದು ಡಿ.ಕೆ.ಶಿವಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ಸಂಬಂಧ ಘಟಾನುಘಟಿ ವಕೀಲರೊಂದಿಗೆ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟ 5 ಲಕ್ಷ ರೂ.ವನ್ನು ವಾಪಸ್ ಕೇಳಿದ್ದಕ್ಕೆ ಗೆಳತಿಯ ಮೇಲೆಯೇ 12 ಬಾರಿ ಚೂರಿಯಿಂದ ಇರಿದ!

    ಕೊಟ್ಟ 5 ಲಕ್ಷ ರೂ.ವನ್ನು ವಾಪಸ್ ಕೇಳಿದ್ದಕ್ಕೆ ಗೆಳತಿಯ ಮೇಲೆಯೇ 12 ಬಾರಿ ಚೂರಿಯಿಂದ ಇರಿದ!

    ನವದೆಹಲಿ: 32 ವರ್ಷದ ಮಹಿಳೆಯನ್ನು 12 ಬಾರಿ ಚೂರಿಯಿಂದ ಇರಿದ ಘಟನೆ ದಕ್ಷಿಣ ದೆಹಲಿಯಲ್ಲಿ ಬುಧವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಚೂರಿ ಇರಿತಕ್ಕೊಳಗಾದ ಮಹಿಳೆಯನ್ನು ನೀತು ಶರ್ಮಾ ಎಂದು ಗುರುತಿಸಲಾಗಿದೆ. ಸದ್ಯ ಈಕೆ ಜಸೋಲಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭಿರವಾಗಿದೆ.

    ಏನಿದು ಘಟನೆ?: ನೀತು ಶರ್ಮಾ ಅವರು ತನ್ನ ಗೆಳೆಯ ಅನ್ವರ್ ಎಂಬಾತನಿಗೆ 5 ಲಕ್ಷ ರೂ. ಕೊಟ್ಟಿದ್ದರು. ಹೀಗಾಗಿ ತಾನು ಕೊಟ್ಟ ಹಣವನ್ನು ವಾಪಸ್ ಕೇಳಲೆಂದು ಅನ್ವರ್ ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಮಹಿಳೆಗೆ ಅನ್ವರ್ 12 ಬಾರಿ ಇರಿದಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ತಮ್ಮ ಗೆಳೆಯನೊಂದಿಗೆ ಬೈಕ್ ನಲ್ಲಿ ಕುಳಿತಿರುವುದನ್ನು ನೋಡಿದ್ದೆವು. ಅಂತೆಯೇ ನಾವು ಮತ್ತೆ ಅದೇ ಜಾಗಕ್ಕೆ ಬಂದಾಗ ಸಾರ್ವಜನಿಕರು ಸೇರಿದ್ದರು. ಹೀಗಾಗಿ ಏನಾಯಿತೆಂದು ನೋಡಲು ತೆರಳಿದಾಗ ಅದೇ ಮಹಿಳೆ ಚೂರಿ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಖಾಸಗಿ ವಾಹನವೊಂದರಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ಪೊಲೀಸ್ ಅಧಿಕಾರಿ ಲಖನ್ ಸಿಂಗ್ ಹಾಗೂ ರಾಹುಲ್ ಹೇಳಿದ್ದಾರೆ.

    ಈ ವೇಳೆ ಮಹಿಳೆ, ತನ್ನ ಹೆಸರು ನೀತು ಶರ್ಮಾ, ಗ್ರೇಟರ್ ನೊಯ್ಡಾದ ನಿವಾಸಿಯಾಗಿದ್ದೇನೆ. ನನ್ನ ಮೇಲೆ ಗೆಳೆಯ ಅನ್ವರ್ ಎಂಬಾತ ದಾಳಿ ಮಾಡಿದ್ದಾನೆ ಅಂತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ನೀತು ಅವರು ತಮ್ಮ ಗೆಳಯನಿಗೆ ಸುಮಾರು 5 ಲಕ್ಷ ರೂ. ನೀಡಿದ್ದರು. ಹೀಗಾಗಿ ತಮ್ಮ ಹಣವನ್ನು ಆತನ ಬಳಿ ಕೇಳಲು ಹೋದಾಗ ಈ ಕೃತ್ಯ ಎಸಗಿದ್ದಾನೆ ಎಂದು ನೀತು ಕುಟುಂಬದವರು ಹೇಳಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನ್ವರ್ ನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ರಿಲೀಸ್

    ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ರಿಲೀಸ್

    ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ, ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾಗಿರೋ ವಿಡಿಯೋವನ್ನ ಬಿಡುಗಡೆ ಮಾಡಲಾಗಿದೆ.

    ಶಶಿಕಲಾ ನಟರಾಜನ್ ಬಣ ಈ ವಿಡಿಯೋವನ್ನ ರಿಲೀಸ್ ಮಾಡಿದ್ದು, ಆಸ್ಪತ್ರೆಯ ಬೆಡ್ ಮೇಲೆ ಜಯಲಲಿತಾ ಆಹಾರ ಸೇವನೆ ಮಾಡುತ್ತಿರೋ 20 ಸೆಕೆಂಡ್‍ಗಳ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಜಯಲಲಿತಾ ಜ್ಯೂಸ್ ಕುಡಿಯುತ್ತಾ ಟಿವಿ ನೋಡುತ್ತಿರೋದನ್ನ ಕಾಣಬಹುದು. ಗುರುವಾರ ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲೇ ಶಶಿಕಲಾ ಬಣ ಆಸ್ಪತ್ರೆ ವಿಡಿಯೋವನ್ನ ಬಿಡುಗಡೆ ಮಾಡಿದೆ. ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಫೋಟೋ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಫೋಟೋ ರಿಲೀಸ್ ಆಗಿರಲಿಲ್ಲ.

    ಜಯಲಲಿತಾ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮಲ್ಲಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಶಿಕಲಾ ಸೋದರ ಸಂಬಂಧಿ ಜಯನಾಥ್ ದಿವಾಕರನ್ ಈ ಹಿಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಪನ್ನಿರ್ ಸೆಲ್ವಂ ಅವರ ಗುಂಪಿನ ಟೀಕೆಗಳಿಗೆ ಉತ್ತರ ಎಂಬಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

    ಜಯಲಲಿತಾ ಸಾವು ನಿಗೂಢವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪನ್ನೀರ್ ಸೆಲ್ವಂ ಬಣ ಒತ್ತಾಯಿಸಿತ್ತು. ಅಲ್ಲದೆ ಜಯಲಲಿತಾ ಅವರನ್ನ ಕೊಲೆ ಮಾಡಲಾಗಿದೆ ಎಂದು ಕೂಡ ಆರೋಪಿಸಲಾಗಿತ್ತು. ಇದನ್ನು ತಮ್ಮ ಫೇಸ್ ಬುಕ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ದಿವಾಕರನ್, ”ಜಯಲಲಿತಾ ಹಾಗೂ ಶಶಿಕಲಾ ನಡುವಿನ ಅನ್ಯೋನ್ಯತೆ ಎಷ್ಟಿತ್ತು ಎಂಬುದು ನನಗೆ ಗೊತ್ತು. ಅದಕ್ಕೆ ಸಾಕ್ಷಿಯಾಗಿ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಅವರ ಹಾಗೂ ಶಶಿಕಲಾ ನಡುವಿನ ಬಾಂಧವ್ಯವನ್ನು ಬಿಂಬಿಸುವ ವೀಡಿಯೋಗಳು ನನ್ನಲ್ಲಿವೆ. ಜಯಲಲಿತಾ ತಮ್ಮ ಕೊನೆಯ ದಿನಗಳನ್ನು ಕಳೆದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವುಗಳನ್ನು ಚಿತ್ರೀಕರಿಸಲಾಗಿದೆ. ನಾನು ಆ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಹೇಗಿರುತ್ತೆ? ಜಯಲಲಿತಾ ಅವರದ್ದು ಸಹಜ ಸಾವಲ್ಲ ಎಂದು ದನಿಯೆತ್ತಿದ್ದ ಪನ್ನೀರ್ ಸೆಲ್ವಂ ಬಣದ ಪಿಎಚ್ ಪಾಂಡಿಯನ್ ಹಾಗೂ ಮನೋಜ್ ಕೆ. ಪಾಂಡಿಯನ್ ಅವರ ಪರಿಸ್ಥಿತಿ ಹೇಗಿರುತ್ತೆ?” ಎಂದು ದಿವಾಕರನ್ ಹೇಳಿಕೊಂಡಿದ್ದರು.

    https://www.youtube.com/watch?v=gZTeqiaWTh4&feature=youtu.be