Tag: Appeals

  • ಕೆಎಟಿ ತೀರ್ಪು, ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಸಂಘದ ಆಗ್ರಹ

    ಕೆಎಟಿ ತೀರ್ಪು, ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಸಂಘದ ಆಗ್ರಹ

    ಮಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಮುಂಬಡ್ತಿ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಮುಂಬಡ್ತಿ ಪಡೆದಿರುವ ಗ್ರೇಡ್ 2 ಪ್ರೌಢ ಶಾಲಾ ಶಿಕ್ಷಕರ ಹಿತವನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಅಭಿಯಾನ ಆರಂಭಿಸಿದೆ.

    ಶಿಕ್ಷಕರ ಹಿಂಬಡ್ತಿ ಆದೇಶವನ್ನು ಮರು ಪರಿಶೀಲಿಸಲು ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರಲು ಸಂಘ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ, ಈ ಬಗ್ಗೆ ಸಂತ್ರಸ್ತ ಶಿಕ್ಷಕರ ಅಹವಾಲವನ್ನು ಮಂಡಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಯಿತು.

    ಸಂಘದ ಜಿಲ್ಲಾಧ್ಯಕ್ಷೆ ಶೆರ್ಲಿ ಸುಮಾಲಿನಿ ನೇತೃತ್ವದಲ್ಲಿ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಪ್ರತಿಭಾ, ಜಿಲ್ಲಾ ಕಾರ್ಯದರ್ಶಿ ಪ್ರತೀಪ್, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ಪ್ರೇಮನಾಥ ಮರ್ಣೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇದೇ ವೇಳೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರಿಗೂ ಸುಳ್ಯದಲ್ಲಿ ಮನವಿ ಸಲ್ಲಿಸಲಾಯಿತು. ಸುಳ್ಯ ತಾಲೂಕು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಬಡ್ತಿ ಎದುರಿಸುತ್ತಿರುವ ಶಿಕ್ಷಕರು ಸಚಿವ ಅಂಗಾರ ಅವರಿಗೆ ಮನವಿ ಸಲ್ಲಿಸಿದರು. ಪುತ್ತೂರು ತಾಲೂಕು ಬಡ್ತಿ ಶಿಕ್ಷಕರ ಸಂಘದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಯಿತು.

    ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಕಳೆದ ಮೇ 12ರಂದು ಮಹತ್ವದ ತೀರ್ಪು ನೀಡಿದ್ದು, 6ರಿಂದ 8ನೇ ತರಗತಿವರೆಗೆ ಬೋಧಿಸಲು ನೇಮಕಗೊಂಡ ಶಿಕ್ಷಕರು ಮಾತ್ರ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್ 2 ಹುದ್ದೆಯನ್ನು ಹೊಂದಲು ಅರ್ಹರು ಮತ್ತು ಈ ಹಿಂದೆ ನೀಡಿರುವ ಎಲ್ಲ ಬಡ್ತಿಗಳನ್ನು ಹಿಂಪಡೆಯಬೇಕು ಎಂದು ಕೆಎಟಿ ತೀರ್ಪಿನಲ್ಲಿ ಹೇಳಿತ್ತು. ಈ ಬಗ್ಗೆ ಬಡ್ತಿ ಶಿಕ್ಷಕರ ಸಂಘ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ಈ ಮನವಿ ಸಲ್ಲಿಸಲಾಗುತ್ತಿದೆ.

  • ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಬೆಂಗಳೂರು: ಕೊರೊನಾ ವಿರುದ್ಧ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಪಾಲಿಸಿ ಎಂದು ನಟ ಶಿವರಾಜ್ ಕುಮಾರ್ ಅವರು ಜನರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.

    ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಅನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿವೆ. ಆದರೆ ಇದನ್ನು ನಮ್ಮ ಜನರು ಸರಿಯಾಗಿ ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಶಿವಣ್ಣ ಸರ್ಕಾರ ನಿಯಮ ಪಾಲಿಸಿ, ಈ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿವಣ್ಣ, ಸರ್ಕಾರ ರೂಪಿಸಿರುವ ನಿಯಮವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸೋಣ. ಈ ಕೊರೊನಾ ಬಂದು ಎಲ್ಲರಿಗೂ ತೊಂದರೆ ಕೊಟ್ಟಿದೆ. ಅದನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ನಮಗೂ ಗೊತ್ತು ಈಗ ಹಬ್ಬ ಬಂದಿದೆ. ಎಲ್ಲರಿಗೂ ಕಷ್ಟವಾಗುತ್ತದೆ. ಆದರೆ ನಾವೆಲ್ಲರೂ ಈ ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ನಾನು ಕೂಡ ನಿಮ್ಮ ಜೊತೆಯಲ್ಲಿ ಹಬ್ಬವನ್ನು ಸರಳವಾಗಿಯೇ ಆಚರಣೆ ಮಾಡುತ್ತೇನೆ. ಹಬ್ಬವನ್ನು ಅದ್ಧೂರಿಯಾಗಿ ಜಾಮ್‍ಜೂಮ್ ಎಂದು ಆಚರಣೆ ಮಾಡುವುದು ಬೇಡ. ತೊಂದರೆ ಎಲ್ಲರಿಗೂ ಆಗಿದೆ. ಆ ತೊಂದರೆ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದ್ದಾರೆ.

    ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲೇ ಇರಿ. ನಾನು ಟಿವಿಯಲ್ಲಿ ನೋಡಿದ್ದೇನೆ ಸಾಕಷ್ಟು ಜನ ಹೊರಗೆ ಬಂದು ಪೊಲೀಸರ ಕೈಯಲ್ಲಿ ಏಟು ತಿನ್ನುತ್ತಿದ್ದಾರೆ. ನಮ್ಮಿಂದ ಪೊಲೀಸರಿಗೂ ತೊಂದರೆ. ಅವರಿಗೂ ಕೂಡ ಯಾವುದೇ ರೀತಿಯಲ್ಲಿ ಆದರೂ ಸೋಂಕು ತಗಲುಬಹುದು. ಆದರೂ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅದಷ್ಟು ಮನೆಯಲ್ಲೇ ಇರಿ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ಯಾವಗಲೂ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ. ಅದಷ್ಟು ಬೇಗ ಕೊರೊನಾ ವೈರಸ್ ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಶಿವಣ್ಣ ವಿಡಿಯೋ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.